ಇಂದು ಜಯಂತಿ

ಸ್ಯಾಮ್‌ ಬಹದ್ದೂರ್‌ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ಫೀಲ್ಡ್ ಮಾರ್ಷಲ್ ಸ್ಯಾಮ್‌ ಮಾಣೆಕ್‌ ಷಾ ಅವರು ಭಾರತೀಯ ಸೇನೆಯ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿರುವ ಹೆಸರು. ತಮ್ಮ ಬೆರಗುಗೊಳಿಸುವ ಕಾರ್ಯತಂತ್ರಗಳಿರುವ ನಾಯಕತ್ವದ ಗುಣಗಳಿಂದ ಜನಸಾಮಾನ್ಯರ ಮನಗೆದ್ದಿದ್ದರು.ಸ್ಯಾಮ್‌ ಮಾಣೆಕ್‌ ಷಾ ಅವರು ಭಾರತೀಯ ಸೇನೆಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಇಂದು ಅವರ ಜಯಂತಿ.


ಪರಿಚಯ
ಸ್ಯಾಮ್‌ ಮಾಣೆಕ್‌ ಷಾ ಅವರು ಏಪ್ರಿಲ್‌ 3, 1914 ರಂದು ಪಂಜಾಬಿನ ಅಮೃತಸರದಲ್ಲಿ ಜನಿಸಿದರು. ಇವರ ತಂದೆ ಹಾರ್ಮಿಜ್ಡ್ ಮಾಣೆಕ್ ಷಾ ಮತ್ತು ತಾಯಿ ಹಿಲ್ಲಾ ಮಾಣೆಕ್‌ ಷಾ. ಅವರ ತಂದೆ ವೈದ್ಯರಾಗಿ ಸೇವೆ ಸಲ್ಲಿಸಿದವರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಂಜಾಬ್‌ ನಲ್ಲಿ ಮುಗಿಸಿ, ನಂತರದ ವಿದ್ಯಾಭ್ಯಾಸಕ್ಕಾಗಿ ನೈನಿತಾಲ್‌ನ ಶೆರ್ವುಡ್‌ ಕಾಲೇಜಿಗೆ ಸೇರಿದರು. ಮಾಣೆಕ್ ಷಾ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ವಿಜ್ಞಾನ ಪದವಿ ಪಡೆದಿದ್ದು, ನಂತರ ಮಿಲಿಟರಿ ಅಕಾಡೆಮಿಗೆ ಸೇರಿದರು.


ಸಾಧನೆ
ಫೆಬ್ರವರಿ 4, 1935 ರಂದು ಸ್ಯಾಮ್ ಮಾಣೆಕ್ ಷಾ ಅವರು ಮಿಲಿಟರಿಗೆ ನೇಮಕಗೊಂಡರು. ಅವರನ್ನು ರಾಯಲ್ ಸ್ಕಾಟ್ಸ್ ನ 2 ನೇ ಬೆಟಾಲಿಯನ್ ಗೆ ನೇಮಿಸಲಾಯಿತು. ನಂತರ ಅವರನ್ನು ಬರ್ಮಾದಲ್ಲಿ ನೆಲೆಗೊಂಡಿದ್ದ 12 ನೇ ಫ್ರಾಂಟಿಯರ್ ಫೋರ್ಸ್ ರೆಜಿಮೆಂಟ್ ಗೆ ನೇಮಿಸಲಾಯಿತು. 1938ರಲ್ಲಿ ಅವರ ಕಂಪನಿಯ ಕ್ವಾರ್ಟರ್ ಮಾಸ್ಟರ್ ಆಗಿ ಅವರನ್ನು ನೇಮಿಸಲಾಯಿತು.

ಭಾರತದ ವಿಭಜನೆಯ ನಂತರ 12 ನೇ ಫ್ರಾಂಟಿಯರ್ ಫೋರ್ಸ್ ರೆಜಿಮೆಂಟ್ ಪಾಕಿಸ್ತಾನ ಸೇನೆಯ ಭಾಗವಾಯಿತು. ಆದ್ದರಿಂದ ಸ್ಯಾಮ್ ಮಾಣೆಕ್ ಷಾ ಅವರನ್ನು 8ನೇ ಗೂರ್ಖಾ ರೈಫಲ್ಸ್ ಗೆ ಮರು ನಿಯೋಜಿಸಲಾಯಿತು.

ಪಾಕಿಸ್ತಾನಿ ಪಡೆಗಳು ಅಕ್ಟೋಬರ್ 22 ರಂದು ಕಾಶ್ಮೀರಕ್ಕೆ ನುಸುಳಿ ಡೊಮೆಲ್ ಮತ್ತು ಮುಜಫರಾಬಾದ್‌ ಗಳನ್ನು ವಶಪಡಿಸಿಕೊಂಡಿದ್ದರು. ಅಕ್ಟೋಬರ್ 26, 1947 ರಂದು ಕಾಶ್ಮೀರದ ಮಹಾರಾಜರು ಭಾರತದೊಂದಿಗೆ ವಿಲೀನ ಒಪ್ಪಂದಕ್ಕೆ ಸಹಿ ಹಾಕುವ ಸಮಯದಲ್ಲಿ ಸ್ಯಾಮ್ ಮಾಣೆಕ್ ಷಾ ಸಮೀಪಿಸುತ್ತಿರುವ ಪಾಕಿಸ್ತಾನ ಸೇನೆಯ ಮೇಲೆ ವೈಮಾನಿಕ ಕಣ್ಗಾವಲು ಇಟ್ಟಿದ್ದರು. ಕಾಶ್ಮೀರವನ್ನು ಮುತ್ತಿಗೆ ಹಾಕುವುದನ್ನು ತಡೆಯಲು ಭಾರತೀಯ ಸೇನೆಯನ್ನು ವಿಮಾನದಲ್ಲಿ ಕಾಶ್ಮೀರಕ್ಕೆ ಸಾಗಿಸಬೇಕೆಂದು ಅವರು ಸಲಹೆ ನೀಡಿದ್ದರು.

1948ರಲ್ಲಿ ಅವರನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿಗೊಳಿಸಲಾಯಿತು.1957 ರಂದು ಅವರನ್ನು ಲಂಡನ್ ನ ಇಂಪೀರಿಯಲ್ ಡಿಫೆನ್ಸ್ ಕಾಲೇಜಿಗೆ ಒಂದು ವರ್ಷದ ಉನ್ನತ ಕಮಾಂಡ್ ಕೋರ್ಸ್‌ ಗೆ ಕಳುಹಿಸಲಾಯಿತು. ಅಲ್ಲಿಂದ ಅವರು ಹಿಂದಿರುಗಿದ ನಂತರ ಡಿಸೆಂಬರ್‌ 20, 1957 ರಂದು ಜನರಲ್‌ ಆಫೀಸರ್‌ ಕಮಾಂಡಿಂಗ್ (ಜಿಒಸಿ) 26ನೇ ಇನ್ಫೆಂಟ್ರಿ ವಿಭಾಗಕ್ಕೆ ಹಂಗಾಮಿ ಮೇಜರ್ ಜನರಲ್  ಆಗಿ ನೇಮಿಸಲಾಯಿತು. ಮಾರ್ಚ್ 1, 1959 ರಂದು ಮಾಣೆಕ್ ಷಾ ಅವರು ಮೇಜರ್ ಜನರಲ್ ಆಗಿ ಬಡ್ತಿ ಪಡೆದರು.

ಯುದ್ಧಗಳು – ಕಾರ್ಯತಂತ್ರಗಳು
1947-48ರಂದು ಭಾರತ ಪಾಕ್ ಯುದ್ಧದಲ್ಲಿ ಭಾಗವಹಿಸಿದ ಮಾಣೆಕ್ ಷಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಬಟಾಲಿಯನ್ ನೇತೃತ್ವ ವಹಿಸಿದ್ದರು. 1962ರ ಭಾರತ-ಚೀನಾ ಯುದ್ಧದಲ್ಲಿ ಮಾಣಿಕ್ ಶಾ ಅವರ ಮಿಲಿಟರಿ ಕಾರ್ಯತಂತ್ರದ ಪರಿಚಯವಾಯಿತು. ಅವರು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ರಕ್ಷಣಾ ಸಚಿವ ಕೃಷ್ಣ ಮೆನನ್ ಅವರಿಗೆ ಭಾರತದ ಯುದ್ಧ ಸಿದ್ಧತೆಯ ಕೊರತೆಯ ಕುರಿತು ಎಚ್ಚರಿಕೆ ನೀಡಿದ್ದರಾದರೂ ಸಹ ಅವರು ಕಡೆಗಣಿಸಿದ್ದರು. ಈ ಯುದ್ಧದಲ್ಲಿ ಭಾರತ ಚೀನಾದ ಮುಂದೆ ಸೋಲು ಅನುಭವಿಸಿತ್ತು.

ನಂತರದ ದಿನಗಳಲ್ಲಿ ಮಾಣೆಕ್‌ ಷಾ ಅವರನ್ನು ಮೇಜರ್‌ ಜನರಲ್‌ ಆಗಿ, ಪೂರ್ವ ಕಮಾಂಡಿನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ನೇಮಿಸಲಾಯಿತು. 1965ರ ಭಾರತ-ಪಾಕಿಸ್ತಾನ ಯುದ್ಧ ಮಾಣಿಕ್ ಶಾ ಅವರ ನಾಯಕತ್ವದ ಸಾಮರ್ಥ್ಯವನ್ನು ತೆರೆದಿಟ್ಟಿತು. ನಂತರ ಅವರನ್ನು 1969ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿ ನೇಮಿಸಲಾಯಿತು. 1971ರಲ್ಲಿ ಅವರ ಮುಂದಾಳತ್ವ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತಕ್ಕೆ ನಿರ್ಣಾಯಕ ಗೆಲುವು ತಂದಿತ್ತು. ಈ ಯುದ್ಧದಲ್ಲಿ ಪಾಕಿಸ್ತಾನದ ಸೋಲು ಬಾಂಗ್ಲಾದೇಶದ ನಿರ್ಮಾಣಕ್ಕೆ ಸುಗಮ ಹಾದಿ ಮಾಡಿಕೊಟ್ಟಿತು.


ಪ್ರಶಸ್ತಿ ಮತ್ತು ಗೌರವ
1968ರಲ್ಲಿ ಮಾಣೆಕ್ ಷಾ ಅವರಿಗೆ ಪದ್ಮಭೂಷಣ ಪ್ರಶಸ್ತಿ, 1972ರಲ್ಲಿ ಪದ್ಮವಿಭೂಷಣ ನೀಡಿ ಗೌರವಿಸಲಾಯಿತು.

2023ರಲ್ಲಿ ಮಾಣೆಕ್ ಷಾ ಅವರ ಕುರಿತಾಗಿ ಮೇಘನಾ ಗುಲ್ಜಾರ್ ನಿರ್ದೇಶನದಲ್ಲಿ, ವಿಕ್ಕಿ ಕೌಶಲ್ ಸ್ಯಾಮ್ ಮಾಣೆಕ್ ಷಾ ಪಾತ್ರದಲ್ಲಿ ನಟಿಸಿರುವ  ‘ಸ್ಯಾಮ್ ಬಹದ್ದೂರ್’ ಎಂಬ ಚಲನಚಿತ್ರ ಬಿಡುಗಡೆಯಾಗಿದೆ‌.

ಮಾಣೆಕ್‌ ಷಾ ಅವರು ಜೂನ್ 27, 2008ರಂದು ತಮ್ಮ 94ನೇ ವಯಸ್ಸಿನಲ್ಲಿ ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.