– ವಿನಾಯಕ್ ಗಾಂವ್ಕರ್, ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರರು

ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಭಾರತದಾದ್ಯಂತ ಹಬ್ಬದ ಸಂಭ್ರಮ. ಸತತ ಎರಡು ವರ್ಷಗಳ ಕಾಲ ಕಾಡಿದ ಕೋವಿಡ್ ನ ಕರಿ ನೆರಳಿನಿಂದ ಹೊರಬಂದ ಭಾರತೀಯರು ಸಂಭ್ರಮದಲ್ಲಿ ತೇಲುತ್ತಿದ್ದರು. ಹಬ್ಬದ ಕಾರಣಕ್ಕೆ ಖರೀದಿಯ ಭರಾಟೆ ಜೋರಾಗಿದ್ದರಿಂದ ಸಹಜವಾಗಿಯೇ ಆರ್ಥಿಕ ಚಟುವಟಿಕೆಗಳು ಗರಿಗೆದರಿದ್ದವು.

13.5% ಆಗಿರುವ ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಜಿ.ಡಿ.ಪಿ. ಬೆಳವಣಿಗೆಯ ದರ ಚೇತೋಹಾರಿಯಾಗಿದ್ದರೆ, ಸತತ ಏಳು ತಿಂಗಳಿಂದ ಪ್ರತಿ ತಿಂಗಳೂ ಸಂಗ್ರಹವಾಗುತ್ತಿರುವ 1.4 ಲಕ್ಷ ಕೋಟಿಗೂ ಅಧಿಕ ಮೊತ್ತದ ಜಿ. ಎಸ್.ಟಿ. ಕೂಡ ಆರ್ಥಿಕತೆ ಸರಿಯಾದ ದಾರಿಯಲ್ಲಿ ಇರುವುದನ್ನು ಪ್ರತಿಬಿಂಬಿಸುತ್ತದೆ.


ಆದರೆ ಇದೇ ಮಾತನ್ನು ಜಗತ್ತಿನ ಎಲ್ಲಾ ದೇಶಗಳ ಆರ್ಥಿಕತೆಯ ಬಗ್ಗೆಯೂ ಹೇಳಲಾಗದು. ಎರಡು ವರ್ಷಗಳ ಕಾಲ ಬಿಡದೆ ಕಾಡಿದ ಕೋವಿಡ್ ಮಹಾಮಾರಿ ಹಾಗೂ ಈಗ ನಡೆಯುತ್ತಿರುವ ಯುಕ್ರೇನ್ ಯುದ್ಧ , ಇವೆರಡೂ ಸೇರಿ ಅನೇಕ ರಾಷ್ಟ್ರಗಳ ಆರ್ಥಿಕತೆಯನ್ನು ಹಾಳುಗೆಡವಿವೆ. ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾ, ದಿವಾಳಿಯ ಅಂಚಿನಲ್ಲಿರುವ ಪಾಕಿಸ್ತಾನದಂತಹ ದೇಶಗಳಿರಲಿ, ಮುಂದುವರಿದ ದೇಶಗಳಾದ ಅಮೆರಿಕ, ಬ್ರಿಟನ್ ಗಳೂ ಸಹ ಏರುತ್ತಿರುವ ಹಣದುಬ್ಬರದಿಂದ ತತ್ತರಿಸುತ್ತಿವೆ. ಹೀಗೆ ಜಗತ್ತಿನ ಅನೇಕ ರಾಷ್ಟ್ರಗಳು ಹಣದುಬ್ಬರದಿಂದ ತತ್ತರಿಸುತ್ತಿರುವಾಗ ಭಾರತವನ್ನೂ ಸಹ ಹಣದುಬ್ಬರ ಸ್ವಲ್ಪಮಟ್ಟಿಗೆ ಕಾಡುತ್ತಿರುವುದು ಸುಳ್ಳೇನೂ ಅಲ್ಲ .


ಕಳೆದ ಜುಲೈನಲ್ಲಿ ಭಾರತದಲ್ಲಿ 6.7% ರಷ್ಟಿದ ಹಣದುಬ್ಬರ ಆಗಸ್ಟ್ ನಲ್ಲಿ 7% ತಲುಪಿತ್ತು. ಆದರೆ ಬ್ರಿಟನ್ ಮತ್ತು ಅಮೆರಿಕಾ ಗಳಿಗೆ ಹೋಲಿಸಿದರೆ ಭಾರತದ ಪರಿಸ್ಥಿತಿ ಉತ್ತಮವಾಗಿಯೇ ಇದೆ.

ಏರುತ್ತಿರುವ ಹಣದುಬ್ಬರ(inflation) ವನ್ನು ನಿಯಂತ್ರಿಸಲು ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರ ನೇತೃತ್ವದ ಹಣಕಾಸು ನೀತಿ ಸಮಿತಿ(Monetary Policy Committee) ರೆಪೋ ದರವನ್ನು 5.4% ರಿಂದ 5.9% ಕ್ಕೆ ಏರಿಸಿತು.2020 ರ ಮೇ ತಿಂಗಳಿನಲ್ಲಿ ಕೋವಿಡ್ ನ ಕಾರಣದಿಂದ ಕುಸಿದಿದ್ದ ಆರ್ಥಿಕತೆಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ರೆಪೋ ದರವನ್ನು 4.0%ಕ್ಕೆ ಇಳಿಸಲಾಗಿತ್ತು.

ಅಲ್ಲಿಂದ ಕಳೆದ ಮೇ ತಿಂಗಳವರೆಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಆರ್.ಬಿ.ಐ. ಮಾಡಿರಲಿಲ್ಲ . ಕಳೆದ ಮೇ ತಿಂಗಳಲ್ಲಿ 4.0% ಇದ್ದ ರೆಪೋ ದರ ಈಗ 5.9% ನ್ನು ತಲುಪಿದೆ. ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ರೆಪೋ ದರವನ್ನು ಏರಿಸಲಾಗುತ್ತದೆ. ಏರುತ್ತಿರುವ ಹಣದುಬ್ಬರವನ್ನು ನಿಯಂತ್ರಿಸಲು ಅಮೆರಿಕ ಫೆಡರಲ್ ರಿಸರ್ವ್ (ಅಮೆರಿಕದ ಕೇಂದ್ರೀಯ ಬ್ಯಾಂಕ್) ಕೂಡ ರೆಪೋ ದರವನ್ನು ಹೆಚ್ಚಿಸಿದೆ.

ದೇಶದ ಸೆಂಟ್ರಲ್ ಬ್ಯಾಂಕ್(ಆರ್.ಬಿ.ಐ.) ಇತರ ಬ್ಯಾಂಕ್ ಗಳಿಗೆ ನೀಡುವ ಅಲ್ಪಾವಧಿ ಸಾಲಕ್ಕೆ ವಿಧಿಸುವ ಬಡ್ಡಿದರವನ್ನು ‘ ರೆಪೋ ದರ’ ಎಂದು ಕರೆಯಲಾಗುತ್ತದೆ. ದೇಶದ ಹಣಕಾಸು ವ್ಯವಸ್ಥೆಯ ಆರೋಗ್ಯವನ್ನು ನಿಯಂತ್ರಿಸುವಲ್ಲಿ ಈ ರೆಪೋ ದರ ಪ್ರಮುಖ ಪಾತ್ರವನ್ನು ವಹಿಸುತ್ತದೆ.


ಈಗ ರೆಪೋ ದರದ ಏರಿಕೆಯಿಂದ ಆಗುವ ಪರಿಣಾಮಗಳು ಏನು ಎಂಬುದನ್ನು ಗಮನಿಸಿದರೆ,

ರೆಪೋ ದರ ಏರಿಕೆಯಿಂದ ಬ್ಯಾಂಕುಗಳು ತಮ್ಮ ಮೇಲಿನ ಹೆಚ್ಚಿದ ಭಾರವನ್ನು ಗ್ರಾಹಕರಿಗೆ ವರ್ಗಾಯಿಸಲು ಸಾಲದ ಮೇಲಿನ ಬಡ್ಡಿದರವನ್ನು ಏರಿಸುತ್ತವೆ. ಹೀಗೆ ಮಾಡುವುದರಿಂದ ಸಾಲವನ್ನು ಪಡೆಯುವ ಪ್ರಮಾಣ ಕಡಿಮೆಯಾಗಿ, ಹಣದ ಹರಿವು ಕಡಿಮೆಯಾಗುತ್ತದೆ. ಕಡಿಮೆಯಾದ ಹಣದ ಹರಿವು ಸರಕುಗಳ(goods) ಬೇಡಿಕೆಯ ಕುಸಿತಕ್ಕೆ ಕಾರಣವಾಗುತ್ತದೆ. ಸರಕುಗಳ ಬೇಡಿಕೆ(demand) ಕುಸಿದ ಪರಿಣಾಮವಾಗಿ ಸರಕುಗಳ ಬೆಲೆಗಳು ಇಳಿದು ಹಣದುಬ್ಬರವು ಇಳಿಮುಖವಾಗುತ್ತದೆ.

ಹೀಗಲ್ಲದೆ, ಮಂದಗತಿಯಲ್ಲಿರುವ ಆರ್ಥಿಕತೆಗೆ ವೇಗವನ್ನು ನೀಡಲು ರೆಪೋ ದರವನ್ನು ಇಳಿಸುವುದೂ ಇದೆ. ರೆಪೋ ದರವನ್ನು ಆರ್.ಬಿ.ಐ. ಇಳಿಸಿದಾಗ ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸುತ್ತವೆ. ಕಡಿಮೆ ಬಡ್ಡಿ ದರಕ್ಕೆ ಸಾಲ ದೊರೆಯುವ ಕಾರಣ ಜನರು ಹೆಚ್ಚಾಗಿ ಸಾಲವನ್ನು ಪಡೆಯುತ್ತಾರೆ. ಇದರಿಂದ ಹಣದ ಹರಿವು(liquidity) ಹೆಚ್ಚಿ, ಸರಕುಗಳ ಬೇಡಿಕೆ ಕೂಡ ಹೆಚ್ಚುತ್ತದೆ. ಹೆಚ್ಚುವ ಸರಕುಗಳ ಬೇಡಿಕೆ, ಹೆಚ್ಚಿನ ಸರಕುಗಳ ತಯಾರಿಕೆಗೆ ಕಾರಣವಾಗಿ, ಹೆಚ್ಚಿನ ಉದ್ಯೋಗ ಸೃಷ್ಟಿಗೆ ಕಾರಣವಾಗುತ್ತದೆ. ಹೀಗೆ ರೆಪೊ ದರದ ಇಳಿಕೆ ದೇಶದ ಆರ್ಥಿಕತೆಗೆ ಚುರುಕನ್ನು ನೀಡುತ್ತ ಜಿಡಿಪಿ ಬೆಳವಣಿಗೆಯ (GDP growth ) ವೃದ್ಧಿಗೂ ಕಾರಣವಾಗುತ್ತದೆ.
ಈಗ ನಾವು ಆರ್.ಬಿ.ಐ. ಹಾಗೂ ಭಾರತ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಹಣದುಬ್ಬರಕ್ಕೆ ಕಾರಣಗಳೇನೆಂಬುದನ್ನು ನೋಡೋಣ.

ಕಳೆದ ಏಳು ತಿಂಗಳಿಂದ ನಡೆಯುತ್ತಿರುವ ರಷ್ಯಾ-ಯುಕ್ರೇನ್ ಯುದ್ಧವು ಇದರ ಕಾರಣಗಳಲ್ಲೊಂದು. ಯುದ್ಧದ ಕಾರಣದಿಂದ ಉಂಟಾದ ಸರಕುಗಳ ಪೂರೈಕೆಯಲ್ಲಿನ ವ್ಯತ್ಯಯ, ಸರಕುಗಳ ಬೆಲೆ ಏರಿಕೆಗೆ ಕಾರಣವಾಯಿತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಕಚ್ಚಾ ತೈಲದ ದರ ಹೆಚ್ಚಳವೂ ಸಹ ಹಣದುಬ್ಬರಕ್ಕೆ ಕಾರಣವಾಗಿದೆ. ತೈಲ ಬೆಲೆ ಹೆಚ್ಚಾದೊಡನೆ ಸಹಜವಾಗಿಯೇ ಸಾಗಣೆ ವೆಚ್ಚ ಹೆಚ್ಚಿ , ವಸ್ತುಗಳ ಬೆಲೆ ಏರಿಕೆ ಉಂಟಾಗುತ್ತದೆ.

ಇನ್ನೊಂದೆಡೆ ಡಾಲರ್ ನ ಎದುರು ಕುಸಿಯುತ್ತಿರುವ ರೂಪಾಯಿ ಮೌಲ್ಯವು ಕೂಡ ಹಣದುಬ್ಬರಕ್ಕೆ ಕಾರಣವಾಗುತ್ತಿದೆ. ನಾವು ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್ ಸಲಕರಣೆಗಳು ಹಾಗೂ ನಮ್ಮ ಕೈಗಾರಿಕೆಗಳಿಗೆ ಬೇಕಾದ ಅನೇಕ ಕಚ್ಚಾವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇಂತಹ ಆಮದುಗಳಿಗೆ ನಾವು ಡಾಲರಿನಲ್ಲೇ ಹಣ ಪಾವತಿಸಬೇಕಾಗುತ್ತದೆ. ರೂಪಾಯಿಯ ಎದುರು ಏರುತ್ತಿರುವ ಡಾಲರ್ ನ ಮೌಲ್ಯದಿಂದ ಕಚ್ಚಾವಸ್ತುಗಳು ಹಾಗೂ ಇತರ ಸರಕುಗಳು ದುಬಾರಿಯಾಗಿ, ಈ ಮೂಲಕ ಉತ್ಪಾದನೆಯ ವೆಚ್ಚ ಏರುತ್ತದೆ. ಇದು ಹಣದುಬ್ಬರಕ್ಕೆ ಕಾರಣವಾಗುತ್ತದೆ.

ಆದರೆ ರೂಪಾಯಿಯ ಅಪಮೌಲ್ಯವನ್ನು ತಡೆಯಲು ಆರ್.ಬಿ.ಐ. ಮಧ್ಯಪ್ರವೇಶಿಸಿದೆ. ಇದಕ್ಕೆ ಸುಮಾರು 110 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ವಿನಿಮಯ ಸಂಗ್ರಹವನ್ನು ಆರ್.ಬಿ.ಐ. ವಿನಿಯೋಗಿಸಿದೆ, ಹಾಗಾಗಿ ಒಂದು ವರ್ಷದ ಹಿಂದೆ 642 ಬಿಲಿಯನ್ ಡಾಲರ್ ಇದ್ದ ವಿದೇಶಿ ವಿನಿಮಯ ಸಂಗ್ರಹ ಇಂದು 533 ಬಿಲಿಯನ್ ಡಾಲರ್ ಗೆ ಕುಸಿದಿದೆ.

ದೇಶದ ಆರ್ಥಿಕತೆಯ ಆರೋಗ್ಯವನ್ನು ಸರಿಯಾಗಿಡಲು 2% ರಿಂದ 6% ಮಿತಿಯೊಳಗೆ ಹಣದುಬ್ಬರವನ್ನು ನಿಯಂತ್ರಿಸುವುದು ಹಾಗೂ ಸಾಧ್ಯವಾದಷ್ಟು ಹೆಚ್ಚಿನ ಜಿ.ಡಿ.ಪಿ ಅಭಿವೃದ್ಧಿ ದರವನ್ನು ಹೊಂದುವುದು ಇಂದು ತೀರಾ ಮುಖ್ಯವಾಗಿದೆ. ಹಾಗಾಗಿ ಇವುಗಳನ್ನು ಸಾಧಿಸಲು ಆರ್.ಬಿ.ಐ. ಹಾಗೂ ಸರ್ಕಾರಗಳು ಕೈಗೊಂಡಿರುವ ಕ್ರಮಗಳು ಯಶಸ್ವಿಯಾಗಿ, ಭಾರತವು ಶೀಘ್ರದಲ್ಲಿ 5 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯುಳ್ಳ ರಾಷ್ಟ್ರವಾಗಲಿ ಎಂದು ಹಾರೈಸೋಣ.

Leave a Reply

Your email address will not be published.

This site uses Akismet to reduce spam. Learn how your comment data is processed.