ವಿಶ್ವ ಕಲ್ಯಾಣಕ್ಕಾಗಿ ಭಾರತದ ‘ಸ್ವ’- ತ್ವದ ಕಡೆಗಿನ ಪಯಣ ಎಂದಿಗೂ ಸ್ಪೂರ್ತಿದಾಯಕ ಎನ್ನುವುದು ಅಖಿಲ ಭಾರತೀಯ ಪ್ರತಿನಿಧಿ ಸಭಾದ ಅಭಿಪ್ರಾಯವಾಗಿದೆ. ವಿದೇಶಿ ಆಕ್ರಮಣ ಮತ್ತು ಹೋರಾಟದ ಸಂದರ್ಭದಲ್ಲಿ ಭಾರತದ ಸಾಮಾಜಿಕ ಜೀವನಕ್ಕೆ ಹಾನಿಯುಂಟಾಗಿದ್ದು, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವ್ಯವಸ್ಥೆಗಳೂ ಬಹಳ ಆಳವಾಗಿ ವಿರೂಪಗೊಂಡಿತ್ತು. ಇಂತಹ ಕಾಲಘಟ್ಟದಲ್ಲಿ ಅನೇಕ ಸಂತರು,ಮಹಾನ್ ವ್ಯಕ್ತಿತ್ವಗಳ ನೇತೃತ್ವದಲ್ಲಿ, ನಿರಂತರ ಸಂಘರ್ಷದ ನಡುವೆಯೂ ಇಡಿಯ ಸಮಾಜ ತನ್ನ ‘ಸ್ವ’ತ್ವವನ್ನು ಕಾಪಾಡಿಕೊಂಡು ಬಂದಿದೆ. ಇದಕ್ಕೆ ಮೂಲ ಪ್ರೇರಣಾ ಸ್ರೋತ ಸ್ವಧರ್ಮ, ಸ್ವದೇಶೀ ಮತ್ತು ಸ್ವರಾಜ್ಯ ಎಂಬ ‘ಸ್ವ’- ತ್ರಯಗಳು, ಇದರ ಪ್ರಾಪ್ತಿಗೆ ಇಡಿಯ ಸಮಾಜ ಭಾಗಿಯಾಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ದೇಶವು ಇದಕ್ಕಾಗಿ ದುಡಿದ ಸ್ವಾತಂತ್ರ್ಯ ಹೋರಾಟಗಾರರನ್ನು, ಸಂತ ಮಹಂತರನ್ನು, ನಾಯಕರನ್ನು ಗುರುತಿಸಿ ಅವರ ಕೊಡುಗೆಯನ್ನು ಸ್ಮರಿಸಿದೆ.
ಸ್ವಾತಂತ್ರ್ಯಾನಂತರ ಅನೇಕ ಕ್ಷೇತ್ರಗಳಲ್ಲಿ ಭಾರತವು ಬಹಳ ಮಹತ್ತರವಾದ ಸಾಧನೆಯನ್ನು ಮಾಡಿದೆ. ಇಂದು ಭಾರತದ ಆರ್ಥಿಕತೆಯು ಜಗತ್ತಿನ ಮುಂದುವರೆಯುತ್ತಿರುವ ಆರ್ಥಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಜಗತ್ತು ಭಾರತದ ಸನಾತನ ಮೌಲ್ಯಗಳನ್ನು ಒಪ್ಪಿಕೊಂಡಿರುವುದೇ ಈ ಪುನರುತ್ಥಾನಕ್ಕೆ ಕಾರಣ. ‘ವಸುಧೈವ ಕುಟುಂಬಕಂ’ನ ಆಧಾರದ ಮೇಲೆ ಭಾರತವು ಜಗತ್ತಿನಲ್ಲಿ ಶಾಂತಿ ಸ್ಥಾಪನೆ, ವೈಶ್ವಿಕ ಸಹೋದರತ್ವ ಮತ್ತು ಮಾನವ ಕಲ್ಯಾಣದ ನಿಟ್ಟಿನಲ್ಲಿ ತನ್ನ ಬಹು ಮುಖ್ಯಭೂಮಿಕೆಯ ಕಡೆಗೆ ಮುಂದುವರೆಯುತ್ತಿದ್ದು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಸುಸಂಘಟಿತ, ವೈಭವಶಾಲಿ ಮತ್ತು ಸಮೃದ್ಧ ಭಾರತದ ನಿರ್ಮಾಣದ ಪ್ರಕ್ರಿಯೆಗಾಗಿ ನಾವು ಸಮಾಜದ ಎಲ್ಲಾ ವರ್ಗಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ, ಸರ್ವಾಂಗೀಣ ವಿಕಾಸಕ್ಕೆ ಅವಕಾಶ ನೀಡುವ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ತಂತ್ರಜ್ಞಾನಗಳು ಮಿಳಿತಗೊಂಡಂತಹ ಭಾರತೀಯ ಮೌಲ್ಯಾಧಾರಿತ ಹೊಸ ಮಾದರಿಗಳನ್ನು ನಿರ್ಮಿಸುವ ಅಗತ್ಯವಿದೆಯೆಂದು ಅಖಿಲ ಭಾರತೀಯ ಪ್ರತಿನಿಧಿ ಸಭಾ ಅಭಿಪ್ರಾಯ ಪಡುತ್ತದೆ.
ರಾಷ್ಟ್ರದ ಪುನರುತ್ಥಾನಕ್ಕಾಗಿ ಕುಟುಂಬ ವ್ಯವಸ್ಥೆಯ ದೃಢೀಕರಣ,ಬಂಧುತ್ವದ ಮೂಲಕ ಸಾಮಾಜಿಕ ಸಾಮರಸ್ಯ ಮತ್ತು ಸ್ವದೇಶೀ ಭಾವದಲ್ಲಿ ಉದ್ಯಮತೆಯ ಪೋಷಣೆ ಇತ್ಯಾದಿ ಉದ್ದೇಶಗಳನ್ನು ನೆರವೇರಿಸಲು ವಿಶೇಷ ಪ್ರಯತ್ನವನ್ನು ನಡೆಸಬೇಕಿದೆ. ಈ ದೃಷ್ಟಿಯಿಂದ ಸಮಾಜದ ಎಲ್ಲ ಘಟಕಗಳೂ ಸೇರಿ, ಅದರಲ್ಲಿಯೂ ವಿಶೇಷವಾಗಿ ಯುವ ಜನತೆ ಒಗ್ಗಟ್ಟಿನ ಪ್ರಯತ್ನ ನಡೆಸುವ ಅವಶ್ಯಕತೆ ಇದೆ. ಸ್ವಾತಂತ್ರ್ಯ ಸಂಘರ್ಷದ ಕಾಲದಲ್ಲಿ ವಿದೇಶಿಯರ ಶಾಸನದಿಂದ ಮುಕ್ತವಾಗುವುದಕ್ಕಾಗಿ ಯಾವ ರೀತಿಯ ತ್ಯಾಗ ಬಲಿದಾನದ ಅವಶ್ಯಕತೆ ಇತ್ತೋ ಅದೇ ರೀತಿಯಲ್ಲಿ ಇಂದು ದೇಶದ ಪುನರ್ನಿರ್ಮಾಣದಂತಹ ಮಹತ್ತರ ಉದ್ದೇಶವನ್ನು ನೆರವೇರಿಸಲು ಪ್ರತಿಬದ್ಧರಾಗುವ ಮತ್ತು ವಸಾಹತುಶಾಹಿ ಮಾನಸಿಕತೆಯಿಂದ ಮುಕ್ತವಾದ ಸಮಾಜ ಜೀವನವನ್ನು ಕಟ್ಟುವಾಗಲೂ ತ್ಯಾಗ ಬಲಿದಾನಗಳ ಅಗತ್ಯವಿದೆ. ಇದರ ಪರಿಪೇಕ್ಷದಲ್ಲಿ ಪ್ರಧಾನಮಂತ್ರಿಯವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ನೀಡಿದ ಐದು ವಿಚಾರಗಳ ಅನುಷ್ಠಾನವೂ ಅತ್ಯಂತ ಮಹತ್ವಪೂರ್ಣ.
ಜಗತ್ತಿನ ಅನೇಕ ರಾಷ್ಟ್ರಗಳಿಗೆ ಭಾರತದ ಮೇಲೆ ಗೌರವ ಮತ್ತು ಸದ್ಭಾವವಿದೆ,ಆದರೆ, ಭಾರತದ ‘ಸ್ವ’ ಆಧಾರಿತ ಪುನರುತ್ಥಾನವನ್ನು ಜಗತ್ತಿನ ಅನೇಕ ಶಕ್ತಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹಿಂದುತ್ವದ ವಿಚಾರವನ್ನು ವಿರೋಧಿಸುವ ದೇಶದ ಒಳಗಿನ ಮತ್ತು ಹೊರಗಿರುವ ಶಕ್ತಿಗಳು ಸ್ವಾರ್ಥ ಮತ್ತು ಭೇದವನ್ನು ಬಿತ್ತುತ್ತಾ ಸಮಾಜದೊಳಗೆ ಪರಸ್ಪರ ಅವಿಶ್ವಾಸ, ವ್ಯವಸ್ಥೆಯ ಮೇಲೆ ಆಕ್ರೋಶ ಮತ್ತು ಅರಾಜಕತೆಯನ್ನು ಸೃಷ್ಟಿಸುವ ಹೊಸ ಷಡ್ಯಂತ್ರಗಳನ್ನು ರೂಪಿಸುತ್ತಿದೆ. ನಾವು ಈ ಕುರಿತಾಗಿ ಬಹಳ ಜಾಗರೂಕತೆಯಿಂದಿದ್ದು ಆ ಎಲ್ಲಾ ಸಮಾಜಘಾತುಕ ವಿಷಯಗಳನ್ನು ವಿಫಲಗೊಳಿಸಬೇಕಿದೆ ಎಂದು ಅಖಿಲ ಭಾರತೀಯ ಪ್ರತಿನಿಧಿ ಸಭಾ ಅಭಿಪ್ರಾಯ ಪಡುತ್ತದೆ.
ಈ ಅಮೃತಕಾಲದಲ್ಲಿ ಭಾರತಕ್ಕೆ ವೈಶ್ವಿಕ ನೇತೃತ್ವವನ್ನು ಪಡೆಯಲು ಸಂಘಟಿತ ಪ್ರಯತ್ನ ಮಾಡಬೇಕಾಗಿದೆ. ಭಾರತೀಯ ಚಿಂತನೆಯ ಬೆಳಕಿನಲ್ಲಿ ಸಾಮಾಜಿಕ,ಶೈಕ್ಷಣಿಕ, ಆರ್ಥಿಕ, ಪ್ರಜಾತಾಂತ್ರಿಕ ನ್ಯಾಯಾಂಗ ಸಂಸ್ಥೆಗಳ ಸಹಿತ ಸಮಾಜಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಯುಗಾನುಕೂಲ ಮಾದರಿಗಳನ್ನು ವಿಕಸಿತಗೊಳಿಸುವ ಕಾರ್ಯದಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ಪ್ರಕಟಗೊಳಿಸುತ್ತಾ ಸಹಭಾಗಿಗಳಾಗುವಂತೆ, ಇದರಿಂದ ಭಾರತವು ವೈಶ್ವಿಕವಾಗಿ ಸಮರ್ಥ, ವೈಭವಶಾಲಿ ಮತ್ತು ವಿಶ್ವ ಕಲ್ಯಾಣಕಾರಿ ರಾಷ್ಟ್ರದ ರೂಪದಲ್ಲಿ ಮುಖ್ಯವಾದ ಸ್ಥಾನವನ್ನು ಪಡೆಯುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ಸಮುದಾಯ ಸೇರಿದಂತೆ ಸಂಪೂರ್ಣ ಸಮಾಜವು ಕಟಿಬದ್ಧರಾಗಲು ಅಖಿಲ ಭಾರತೀಯ ಪ್ರತಿನಿಧಿ ಸಭಾ ಕರೆ ನೀಡುತ್ತದೆ.