‘ನಗುವಂಗೆ ಬಿಡಿಸಿದ ರಂಗೋಲಿ’ 

ಸಮಚಿತ್ತದ ಸಮದರ್ಶಿ: ಅಶೋಕಪುರಂನಲ್ಲಿ ಆರೆಸ್ಸೆಸ್ ಬೆಳೆದ ಕಥನ  | ಪುಸ್ತಕ ಪರಿಚಯ 

 ಲೇಖನ: ವಾದಿರಾಜ

ಮೈಸೂರಿನ ಅಶೋಕಪುರಂ ಮಹಾಭಾರತದ ಹಸ್ತಿನಾಪುರವಿದ್ದಂತೆ . ಸುಮಾರು ಎರಡು ಕಿ ಮೀ ವ್ಯಾಪ್ತಿಯಲ್ಲಿ ಹದಿಮೂರು ಬೀದಿಗಳ ನಡವೆ ಹರಡಿಕೊಂಡಿರುವ ಅಶೋಕಪುರಂಗೆ ಹಿಂದೆ ದೊಡ್ಡಹೊಲಗೇರಿ ಎಂದು ಕರೆಯಲಾಗುತ್ತಿತ್ತು . ಹಲವು ಚರ್ಚೆ , ಸಂವಾದ , ಪ್ರತಿಭಟನೆ , ಸಂಘರ್ಷ , ತಿಕ್ಕಾಟ , ಬೀದಿರಂಪಗಳ ನಡುವೆ ಇಲ್ಲಿಯ ಜನರ ವ್ಯಕ್ತಿತ್ವಗಳು ರೂಪುಗೊಂಡಿವೆ .

ಅಶೋಕಪುರಂನ ಬೆಳಗು ಹೇಗಿರುತ್ತದೆ ಎಂದರೆ ‘ ಈಗ ಎದ್ದಿಯವ್ವ ಕೂಸೆ , ಏ ಮಾವ ಯಾಕಡೆ , ಲೇ ಮೊಗಾ ಬೀದಿಗೆ ವಸಿ ಮೆಲ್ಗೆ ಸಗಣಿ ಹಾಕಪ್ಪ ….. ಧೂಳು ಎದ್ದುಬಿದ್ದು ಕುಣಿದಾಡ್ತಾದೆ , ನೀರ್ ಹಾಕ್ಬಿಟ್ಟು ಗುಡುಸಪ್ಪ , ರಂಗೋಲಿ ನಗುವಂಗೆ ಬಿಡಿಸವ್ವಾ … ದೀಪ ಉರ್ದಂಗೆ ಇರಬೇಕು ನಕ್ಷತ್ರ ಮಿಂಚ್ದಂಗೆ … ‘ ಇಂತಹ ವರ್ಣರಂಜಿತ ಅಶೋಕಪುರಂನಲ್ಲಿ ಹುಟ್ಟಿ ೮೦ ವರ್ಷಗಳ ತುಂಬು ಜೀವನ ನೆಡಸಿದ ರಾಮಕೃಷ್ಣ ಕಳೆದವರ್ಷ ಅಕ್ಟೋಬರ್ ೩ರಂದು ತೀರಿಕೊಂಡರು . ಅಶೋಕಪುರಂಗೆ ಅರೆಸ್ಸೆಸ್ ನ್ನು ೧೯೬೫ ರಲ್ಲಿ ಪರಿಚಯಿಸಿ ನೂರಾರು ಜನರ ಬದುಕನ್ನು ರೂಪಿಸಿದವರು ರಾಮಕೃಷ್ಣ . ಆ ಕಾಲದಿಂದ ಜೊತೆಗೆದ್ದ ಗೆಳೆಯರು ಅಗಲಿದ ರಾಮಕೃಷ್ಣರವರ ನಿಸ್ಪೃಹ ಬದುಕಿಗೆ ಅಕ್ಷರ ರೂಪಕೊಡಲು ನಿರ್ಧರಿಸಿದರು .

ಕಡೆಂಗೋಡ್ಲು ಶಂಕರಭಟ್ ಕಾವ್ಯ ಪುರಸ್ಕಾರಕ್ಕೆ ಪಾತ್ರರಾಗಿರುವ ಕವಿ , ಲೇಖಕ ಅಶೋಕಪುರಂ ಗೋವಿಂದರಾಜುರವರ ಪರಿಶ್ರಮದಿಂದ ಈ ‘ ಸಮಚಿತ್ತದ ಸಮದರ್ಶಿ’ ಯ ನೆನಪಿನ ಯಾತ್ರೆ ಹೊರಬಂದಿದೆ .

ಇದು ರಾಮಕೃಷ್ಣರೊಬ್ಬರ ನೆನಪಿನ ಯಾತ್ರೆಯಾಗುವುದು ಸಾಧ್ಯವಿರಲಿಲ್ಲ . ಏಕೆಂದರೆ ರಾಮಕೃಷ್ಣ , ವೆಂಕಟರಾಮು , ಶ್ರೀನಿವಾಸಪ್ರಸಾದ್ ( ಈಗ ಲೋಕಸಭಾ ಸದಸ್ಯರು ) – ಸದಾ ಜೊತೆಗೇ ಇರುತ್ತಿದ್ದ ಜೀವದ ಗೆಳೆಯರು – ‘ ಚಡ್ಡಿ ‘ ದೋಸ್ತರು ! ಪುಸ್ತಕ ಈ ಮೂವರ ಕಥೆಯನ್ನೂ ಹೇಳುತ್ತದೆ . ಅಷ್ಟಕ್ಕೆ ನಿಲ್ಲದೆ – ಇವರೆಲ್ಲ ಆ ಕಾಲದಲ್ಲಿ ಅಶೋಕಪುರಂನ ಆರೆಸ್ಸೆಸನ ಹನುಮಾನ್ ಶಾಖೆಯ ರೂವಾರಿಗಳಾದ್ದರಿಂದ ಇವರೊಂದಿಗೆ ದೊಡ್ಡ ಪಟಾಲಮ್ಮು ಇತ್ತು . ಪಟಾಲಮ್ಮಿನ ಭಾಗವಾಗಿದ್ದ ಜವರಯ್ಯ , ಮುದ್ದು ಚಲುವಯ್ಯ , ವುರ್ಗಿ ಜವರ , ರಘುನಾಥ , ಮಹದೇವ , ವೆಂಕಟರಾಜು , ರಾಮಸ್ವಾಮಿ , ಚಿಕ್ಕವೀರಯ್ಯ , ಚಾಮುಂಡಿ , ಮಹಾಲಿಂಗು , ನಾರಾಯಣಸ್ವಾಮಿ , ಶ್ರೀಕಂಠ , ಸಿದ್ದಪ್ಪಾಜಿ , ಧರ್ಮಗುರು , ನರಸಿಂಹ , ಚನ್ನರಸು , ರಾಚಯ್ಯ , ಗೋವಿಂದರಾಜು , ಗಂಗಾಧರ , ಶಾಂತರಾಜು , ಬಸವರಾಜು , ಕುಮಾರಸ್ವಾಮಿ , ಅನಂದಮೂರ್ತಿ ಮುಂತಾದವರೆಲ್ಲರೂ ರಾಮಕೃಷ್ಣರ ಕಥೆಯೊಂದಿಗೆ ಹೆಜ್ಜೆ ಹಾಕುತ್ತಾರೆ .
ರಾಮಕೃಷ್ಣರವರು ಅರೆಸ್ಸೆಸ್ ನಲ್ಲಿ ಕಲಿತ ‘ ಸಂಕಟದಲ್ಲಿದ್ದವರ ನೆರವಿಗೆ ಧಾವಿಸುವ ‘ ಗುಣದಿಂದಾಗಿ ಕಥೆ ಎಲ್ಲ ಬೀದಿ – ಮನೆಗಳನ್ನು ಪ್ರವೇಶಿಸುತ್ತದೆ , ಓದಿ ಮುಗಿಸುವಾಗ ಇಡೀ ಅಶೋಕ ಪುರಂ ತನ್ನ ಕಥೆ ಬಿಚ್ಚಿ ಹೇಳಿಕೊಂಡಂತೆ ಅನಿಸುತ್ತದೆ .

ರಾಮಕೃಷ್ಣ ಹನುಮಾನ್ ಶಾಖೆಯಲ್ಲಿ ಕಬ್ಬಡ್ಡಿ , ದೊಣ್ಣೆವರಸೆ , ಕವಾಯಿತು ಕಲಿಸಿದ್ದಷ್ಟೆ ಅಲ್ಲ , ಊರ ಮಕ್ಕಳಿಗೆ ಮನೆಪಾಠ ಮಾಡಿದರು , ಶಾಖೆಗೆ ಬಂದವರು ಯಾರೂ ಫೇಲಾಗದಂತೆ ನೋಡಿಕೊಂಡರು . ಆರೆಸ್ಸೆಸ್ ನ ಪ್ರಭಾವ ಬಳಸಿ ಮೈಸೂರಿನ ಪ್ರಸಿದ್ಧ ವೈದ್ಯರನೆಸಿದ್ದ ಡಾ ಬಾಪಟ್ , ಡಾ ಸಮೀರ ರವರನ್ನು ವಾರಕ್ಕೆರಡು ಸಲ ಕರೆಸಿ ವೈದ್ಯಕೀಯ ಶಿಬಿರ ನೆಡಸಿದರು . ಸಾವು – ನೋವುಗಳಿಗೆ ಹೆಗಲು ಕೊಟ್ಟರು .

೧೯೬೮ – ೬೯ ರಲ್ಲಿ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅಶೋಕಪುರಂಗೆ ಭೇಟಿಕೊಟ್ಟು ಸಿದ್ದಪ್ಪಾಜಿ ಗುಡಿಯಲ್ಲಿ ಸಭೆ ನೆಡಸಿದ್ದರು . ಆ ಸಭೆಯಲ್ಲಿ ರಾಮಕೃಷ್ಣ ಎದ್ದು ನಿಂತು ‘ ನೀವು ಬರುತ್ತೀರಿ , ಸುಳ್ಳು ಭರವಸೆಯ ಭಾಷಣ ಮಾಡಿ ಹೋಗುತ್ತೀರಿ ಸಮಸ್ಯೆಗಳು ಹಾಗೆಯೇ ಉಳಿಯುತ್ತವೆ . ಇಂತಹ ಕಾರ್ಯಕ್ರಮಗಳಿಂದ ಏನು ಪ್ರಯೋಜನ ? ‘ ಎಂದು ಮುಖ್ಯಮಂತ್ರಿಗಳನ್ನೇ ಪ್ರಶ್ನಿಸಿದ್ದರು . ಸಭೆಯ ನಂತರ ನಿಜಲಿಂಗಪ್ಪ ಪ್ರಶ್ನೆ ಕೇಳಿದ ಆ ಹುಡುಗನನ್ನು ಕರೆತನ್ನಿ , ಅವನಿಗೊಂದು ಸರ್ಕಾರಿ ನೌಕರಿ ಕೊಡಿಸೋಣ ‘ ಎಂದರು . ಆ ಕಾಲದಲ್ಲೇ ಎಲೆಕ್ಟ್ರಿಕಲ್ ಡಿಪ್ಲೋಮಾ ಮಾಡಿದ್ದ ರಾಮಕೃಷ್ಣ ಸರ್ಕಾರಿ ನೌಕರಿಯನ್ನು ಒಪ್ಪಲಿಲ್ಲ .

ಕಡುಬಡತನದಿಂದಾಗಿ ೭ ನೇ ತರಗತಿಗೆ ಓದು ನಿಲ್ಲಿಸಿದ್ದ ಶಾಖೆಯ ಹುಡುಗ ಜವರಯ್ಯನಿಗೆ ಪಾಠಮಾಡಿ ಖಾಸಗಿಯಾಗಿ ಹತ್ತನೇ ತರಗತಿ ಪರೀಕ್ಷೆ ಕಟ್ಟಿಸಿದ್ದರು ರಾಮಕೃಷ್ಣ . ಕೊನೆಗೆ ಜವರಯ್ಯ ಡಾ. ಮ ನ ಜ ಆದರು . ಮಾನಸ ಗಂಗೋತ್ರಿಯಲ್ಲಿ ಪ್ರಾಧ್ಯಪಕರಾದರು . ವಿಧ್ಯಾರ್ಥಿಯಾಗಿದ್ದಾಗಲೇ ಮ ನ ಜ ‘ ಡಾ ಅಂಬೇಡ್ಕರ್ – ವಿಧ್ಯಾರ್ಥಿಜೀವನ ‘ ಎಂಬ ೨೦೦ ಪುಟಗಳ ಪುಸ್ತಕ ಬರೆದರು . ರಾಮಕೃಷ್ಣ ಹಣ ಹೊಂದಿಸಿ ಪುಸ್ತಕ ಮುದ್ರಿಸಿ ತಂದರು , ಮಾತ್ರವಲ್ಲ ಆಗಲೇ ಧರ್ಮಶ್ರೀ , ವಂಶವೃಕ್ಷ ಕಾದಂಬರಿಗಳ ಮೂಲಕ ಪ್ರಸಿದ್ಧರಾಗಿದ್ದ ಎಸ್ ಎಲ್ ಭೈರಪ್ಪರವರನ್ನು ಅಶೋಕಪುರಂಗೆ ಕರೆಸಿ ಬಿಡುಗಡೆ ಕಾರ್ಯಕ್ರಮ ಮಾಡಿದರು .

ದೊಗಳೆ ಚಡ್ಡಿ , ದೊಣ್ಣೆ ಹಿಡಿದು ಊರತುಂಬ ಠಳಾಯಿಸುವ ಈ ಹುಡುಗರ ಬಗ್ಗೆ ಊರ ಹಿರಿಯರಿಗೆ ಏನೋ ಅನುಮಾನ . ಕಿವಿ ಊದುವವರದ್ದು ಕಾರುಬಾರು ಬೇರೆ . ಅದೊಂದು ಭಾನುವಾರ ಆರೆಸ್ಸೆಸ್ ನಡೆಸುತ್ತಿದ್ದ ರಾಮಕೃಷ್ಣ , ವೆಂಕಟರಾಮುರವರನ್ನು ಪಂಚಾಯ್ತಿ ಎದುರು ವಿಚಾರಣೆಗೆ ನಿಲ್ಲಿಸಲಾಯ್ತು . ಊರ ಯಜಮಾನರಾಗಿದ್ದ ಕೂಸಯ್ಯ , ದೊಡ್ಡವೆಂಕಟಯ್ಯ , ಪುಟ್ಟಸ್ವಾಮಣ್ಣ ಮತ್ತಿತರರು ವಿಚಾರಣೆ ನೆಡಸಿದರು . ತಾಸಿಗೂ ಮೀರಿ ವಿಚಾರಣೆ ನೆಡಯಿತು . ‘ ನಾವು ಒಳ್ಳೆಯದನ್ನು ಕಲಿಯುತ್ತಿದ್ದೇವೆ , ಕಲಿಸುತ್ತಿದ್ದೇವೆ ‘ ಎಂಬ ವೆಂಕಟರಾಮುರವರ ಮಾತು ಅಲ್ಲಿದ್ದವರಿಗೆ ಅರ್ಥವಾಗಲಿಲ್ಲ . ಆರೆಸ್ಸೆಸ್ ಶಾಖೆ ಮಾಡುವುದನ್ನು ನಿಲ್ಲಿಸುವಂತೆ ಪಂಚಾಯ್ತಿ ಆದೇಶಿಸಿತು . ಹುಡುಗರು ಒಪ್ಪಲಿಲ್ಲ . ‘ ನಾವು ಈ ಒಳ್ಳೆ ಕೆಲಸ ಮಾಡುವವರೆ ‘ ಎಂದು ಎದ್ದು ನಿಂತರು . ಕೊನೆಗೆ ಪಂಚಾಯ್ತಿ ವೆಂಕಟರಾಮು , ರಾಮಕೃಷ್ಣ ರವರ ಕುಟುಂಬಕ್ಕೆ ಬಹಿಷ್ಕಾರ ಸಾರಿದರು . ಆದರೂ ಆರೆಸ್ಸೆಸ್ ಚಟುವಟಿಕೆ ನಿಲ್ಲಲಿಲ್ಲ . ಕಾಲ ಸರಿದಿದೆ . ಈಗ ವೆಂಕಟರಾಮು ಆರೆಸ್ಸೆಸನ ರಾಜ್ಯ ಅಧ್ಯಕ್ಷರು . ಕೆಲ ವರ್ಷಗಳ ಹಿಂದೆ ವೆಂಕಟರಾಮು , ಮೋಹನ ಭಾಗವಾತರೊಂದಿಗೆ ವೇದಿಕೆಯಲ್ಲಿ ಕುಳಿತ ವಿಶಾಲ ಸಭೆಯ ಫೋಟೊವನ್ನು ಪ್ರಜಾವಾಣಿಯ ಮುಖಪುಟದಲ್ಲಿ ನೋಡಿ ಇಡೀ ಅಶೋಕಪುರಂ ಸಂಭ್ರಮಿಸಿತ್ತು . ಮಾತ್ರವಲ್ಲ ಈಗ ಊರಜನ ವೆಂಕಟರಾಮುವನ್ನೆ ಪಂಚಾಯ್ತಿಗೆ ಯಜಮಾನನನ್ನಾಗಿ ನೇಮಿಸಿಕೊಂಡಿದ್ದಾರೆ .

೧೯೬೭ – ೬೮ – ೬೯ ರಲ್ಲಿ ಶ್ರೀನಿವಾಸಪ್ರಸಾದ್ , ವೆಂಕಟರಾಮು ಬೇಸಿಗೆ ರಜೆಯಲ್ಲಿ ಒಂದು ತಿಂಗಳ ಆರೆಸ್ಸೆಸ್ ತರೆಬೇತಿಗಳನ್ನು ಪಡೆದರು . ಹೀಗೆ ತರಬೇತಿ ಪಡೆದವರು ಅರೆಸ್ಸೆಸ್ ಚಟುವಟಿಕೆ ಬೆಳೆಸಲು ‘ ವಿಸ್ತಾರಕ ‘ ರಾಗಿ ಹೋಗುವುದು ವಾಡಿಕೆ . ಹಾಗೇ ೧೯೬೯ರಲ್ಲಿ ಶ್ರೀನಿವಾಸ ಪ್ರಸಾದ್ , ವೆಂಕಟರಾಮು ಪಿರಿಯಾಪಟ್ಟಣ ತಾಲೂಕಿನ ಕಂಪಾಲಪುರ , ಕಂದೇಗಾಲ , ಚಿಲ್ಕುಂದ ಗ್ರಾಮಗಳಲ್ಲಿ ವಿಸ್ತಾರಕರಾಗಿ ಹದಿನೈದು ದಿನ ತಂಗಿದ್ದರು . ದಲಿತರು , ಒಕ್ಕಲಿಗರು ದೊಡ್ಡ ಸಂಖ್ಯೆಯಲ್ಲೇ ಶಾಖೆಗೆ ಬರುತ್ತಿದ್ದರು . ಹಾರಣ್ಣ – ತೂರಣ್ಣ , ಕಬ್ಬಡ್ಡಿ ಇತ್ಯಾದಿ ಆಟಗಳ ಮೂಲಕವೇ ಜಾತಿಭಾವವನ್ನು ಕರಗಿಸಿ ಸೋದರತ್ವವನ್ನು ಕಂಡರಿಯದ ಊರಿನಲ್ಲಿ ಬೆಳೆಸಿದ್ದು ವಿಸ್ತಾರಕರಿಗೆ ಅವಿಸ್ಮರಣೀಯ ಅನುಭವ , ಜೀವನದ ಬುತ್ತಿ .

ಅಸ್ಪೃಶ್ಯರೆ ವಾಸ ಮಾಡುತ್ತಿದ್ದ ಅಶೋಕಪುರಂನಲ್ಲಿ ಒಂದೆರಡು ಸವರ್ಣೀಯರ ಮನೆಗಳೂ ಇದ್ದವು . ಆರನೇ ಬೀದಿಯ ಬಳ್ಳಮ್ಮನ ಮನೆಯ ಪಕ್ಕದಲ್ಲಿದ್ದ ಲಿಂಗಾಯತರೊಬ್ಬರು ನೆಡೆಸುತ್ತಿದ್ದ ಮನೆ ಹೊಟೇಲ್ಲಿನ ಬಗೆ , ಬಗೆ ದೋಸೆಗಳು ಹೇಗೆ ಬೆಳಗಿನ ತಿಂಡಿಯ ಅಭ್ಯಾಸವಿಲ್ಲದ ಅಶೋಕಪುರಂನವರನ್ನು ಬದಾಲಾಯಿಸಿತೆಂಬ ರಸಮಯ ವಿವರಗಳು ಬಂದು ಹೋಗುತ್ತದೆ .

ಆ ದಿನಗಳಲ್ಲಿ ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿದ್ದರೂ ಸಂಘದ ವಲಯದಲ್ಲಿ ವೆಂಕಣ್ಣ ಎಂದೇ ಜನಪ್ರಿಯರಾಗಿದ್ದ ಪ್ರೊ ವೆಂಕೋಬರಾವ್ ಹನುಮಾನ್ ಶಾಖೆಗೆ ನಿರಂತರ ಭೇಟಿಕೊಟ್ಟು ಹುಡುಗರಲ್ಲಿ ಭೌದ್ದಿಕ ಆಸಕ್ತಿ ರೂಪಿಸಿದವರು . ಈ ಪುಸ್ತಕಕ್ಕಾಗಿ ಬರೆದ ಲೇಖನದಲ್ಲಿ ವೆಂಕಣ್ಣ ‘ ನಾನು ವೇದ , ಉಪನಿಷತ್ತು ಓದಿದವನಾದರೂ , ದಲಿತಕೇರಿಯಲ್ಲಿ ಹುಟ್ಟಿ ಬೆಳೆದ ಹೃದಯ ಶ್ರೀಮಂತಿಕೆಯ ನಿನ್ನ ವ್ಯಕ್ತಿತ್ವವೇ ಪರಿಪೂರ್ಣವಾದದ್ದು , ನನ್ನದಲ್ಲ ‘ ಎಂದು ರಾಮಕೃಷ್ಣರವರ ಬಗ್ಗೆ ಹೇಳಿದ್ದಾರೆ .

ದಲಿತ ಚಳವಳಿಯ ಕೇಂದ್ರವಾಗಿ ರೂಪಗೊಂಡ ಅಶೋಕಪುರಂನಲ್ಲಿ ಆರೆಸ್ಸೆಸ್ ನ ಬೆಳವಣಿಗೆಯ ಕಥೆಯನ್ನು ೩೦೦ ಪುಟಗಳಲ್ಲಿ ಈ ಪುಸ್ತಕ ಚೊಕ್ಕವಾಗಿ ಹೇಳುತ್ತದೆ . ಸಾಮಾಜಿಕ ಅಧ್ಯಯನದ ಆಸಕ್ತರಿಗೆ ಒಳ್ಳೆಯ ಓದು , ಆಕಾರ .

ಪುಸ್ತಕದ ಲೇಖಕ : ಅಶೋಕಪುರಂ ಗೋವಿಂದರಾಜು ದೂ : 07411099510

Leave a Reply

Your email address will not be published.

This site uses Akismet to reduce spam. Learn how your comment data is processed.