ಎಚ್ಎಸ್ಎಸ್ಎಫ್ ಏರ್ಪಡಿಸಿದ್ದ ‘ಪ್ರಕೃತಿ ವಂದನಾ’ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಉದ್ಬೋಧನ.
ಆಗಸ್ಟ್ 30 ರಂದು ಹಿಂದೂ ಆಧ್ಯಾತ್ಮಿಕ ಸೇವಾ ಪ್ರತಿಷ್ಠಾನವು (ಹಿಂದೂ ಸ್ಪಿರಿಚುವಲ್ ಸೇವಾ ಫೇರ್) ಹಮ್ಮಿಕೊಂಡಿರುವ ಪರಿಸರ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸುತ್ತಿದ್ದೇವೆ.
ಇತ್ತೀಚಿನ ದಿನಗಳಲ್ಲಿ ‘ಪರಿಸರ’ ಎಂಬ ಪದವನ್ನು ಅನೇಕ ಬಾರಿ ಕೇಳುತ್ತಿದ್ದೇವೆ. ಅದರ ಕುರಿತು ಅನೇಕರು ಮಾತನಾಡುತ್ತಾರೆ. ಇದಕ್ಕಾಗಿಯೇ ಒಂದು ದಿನವನ್ನು ವಿಶೇಷವಾಗಿ ಆಯ್ದುಕೊಂಡು ನಾವೆಲ್ಲರೂ ಅದನ್ನೊಂದು ಆಚರಣೆಯ ಕಾರ್ಯಕ್ರಮವನ್ನಾಗಿ ಮಾಡಿಕೊಂಡಿದ್ದೇವೆ. ನಮ್ಮ ಸಂಸ್ಕೃತಿಯಲ್ಲಿ ಇಂತಹ ಆಚರಣೆ ಪರಂಪರೆಗಳು ಪ್ರಾಚೀನ ಕಾಲದಿಂದಲೂ ನೆಡೆದುಕೊಂಡು ಬಂದಿವೆ. ನಾವಿದನ್ನು ಹೇಗೆಯೇ ವಿಶ್ಲೇಷಿಸಿದರೂ ಇಂದು ಪ್ರಪಂಚದಲ್ಲಿ ಪ್ರಚಲಿತ ನಮ್ಮ ಜೀವನ ಶೈಲಿಯು ಪರಿಸರ ಸ್ನೇಹಿಯಾಗಿಲ್ಲ. ಪ್ರಕೃತಿಯ ಮೇಲೆ ವಿಜಯ ಸಾಧಿಸಿ ನಾವು ಜೀವಿಸಬೇಕು, ಸಂಪೂರ್ಣ ಪ್ರಕೃತಿ ಇರುವುದು ನಮಗಾಗಿಯೇ, ಅದನ್ನುಳಿಸುವ ಜವಾಬ್ದಾರಿ ನಮಗಾರಿಗೂ ಇಲ್ಲ, ಈ ಪರಿಸರ ಪ್ರಕೃತಿಯ ಮೇಲೆ ನನಗೆ ಸಂಪೂರ್ಣ ಅಧಿಕಾರವಿದೆ, ಎಂದುಕೊಂಡು ಎಲ್ಲ ಮನುಷ್ಯರು ಭೋಗದ ಜೀವನ ನಡೆಸುತ್ತಿದ್ದಾರೆ. ಹೀಗೆ ನಾವು ಕಳೆದ 200-250 ವರ್ಷಗಳಿಂದ ನಿರಾತಂಕದ ಜೀವನ ನಡೆಸುತ್ತಿದ್ದೇವೆ.
ಅಂತಹ ಹತೋಟಿರಹಿತ ಜೀವನದ ದುಷ್ಪರಿಣಾಮಗಳು ಇಂದು ಬೆಳಕಿಗೆ ಬರುತ್ತಿವೆ. ದಿನಗಳು ಉರುಳಿದಂತೆ ಅದರ ಭಯಾನಕತೆಯ ಅನುಭವ ನಮಗಿಂದು ಆಗತೊಡಗಿದೆ . ಇದೇ ಜೀವನ ಶೈಲಿಯನ್ನು ನಾವು ಮುಂದುವರೆಸಿದರೆ ಈ ಜಗತ್ತಿನಲ್ಲಿ ಜೀವನ ನಡೆಸಲು ನಾವೇ ಇರುವುದಿಲ್ಲ, ಅಥವಾ ಈ ಜಗತ್ತೇ ನಾಶವಾಗಬಹುದು. ಹಾಗಾಗಿ ಈಗ ಮನುಷ್ಯ ಪರಿಸರದ ಸಂರಕ್ಷಣೆ ಆಗಬೇಕೆಂದು ಯೋಚಿಸತೊಡಗಿದ್ದಾನೆ. ಇದರ ಪರಿಣಾಮವೇ ನಾವಿಂದು ಆಚರಿಸುತ್ತಿರುವ ಪರಿಸರ ದಿನಾಚರಣೆ. ಇದೆಲ್ಲ ಒಂದು ಕಡೆ ಇರಲಿ. ಇಂದಿಗೆ 2000 ವರ್ಷಗಳಿಗೂ ಹಿಂದಿನಿಂದ ಪ್ರಚಲಿತವಿದ್ದ ನಮ್ಮ ಪರಿಸರ ಪ್ರೇಮ, ಅದರಲ್ಲೂ ವಿಶೇಷವಾಗಿ ಕಳೆದ 300 ವರ್ಷಗಳಿಂದ ದಾರಿತಪ್ಪಿ ನಾವು ಅಳವಡಿಸಿಕೊಂಡಿರುವ ಪ್ರಕೃತಿ ಬಗೆಗಿನ ನಮ್ಮ ನಡವಳಿಕೆ ಕುರಿತು ಸ್ವಲ್ಪ ವಿಶೇಷವಾಗಿ ಯೋಚಿಸಬೇಕು. ಆದರೆ ಪ್ರಕೃತಿಯೊಂದಿಗಿನ ಭಾರತದ ಜೀವನ ಶೈಲಿ ವಿಭಿನ್ನವಾದುದು.
ನಮ್ಮ ಪೂರ್ವಜರು ನಮ್ಮ ಅಸ್ತಿತ್ವದ ಸತ್ಯವನ್ನು ಪರಿಪೂರ್ಣವಾಗಿ ಅರಿತುಕೊಂಡಿದ್ದರು. ಅಂದೇ ಅವರು ನಾವೆಲ್ಲರೂ ಈ ಪರಿಸರದ ಒಂದು ಭಾಗವೆಂದು ತಿಳಿದುಕೊಂಡಿದ್ದರು. ನಮ್ಮ ಶರೀರದಲ್ಲಿ ಪ್ರಾಣವಾಯು ಇರುವವರೆಗೆ ನಮ್ಮ ಅಂಗಗಳೆಲ್ಲವೂ ಕಾರ್ಯ ನಿರ್ವಹಿಸುತ್ತವೆ. ಪ್ರಾಣ ಹೊರಟುಹೋದ ಮೇಲೆ ಹೃದಯ ಸ್ತಬ್ಧವಾಗುತ್ತದೆ, ಸ್ವಲ್ಪ ಸಮಯದ ನಂತರ ಮೆದುಳು ನಿಂತುಹೋಗುತ್ತದೆ, ಅಂತಿಮವಾಗಿ ದೇಹದ ಸರ್ವಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ, ಸತ್ತು ಹೋಗುತ್ತವೆ. ನಮ್ಮ ದೇಹವು ಅದರ ಅಂಗಗಳ ಕಾರ್ಯವನ್ನು ಅವಲಂಬಿಸಿರುತ್ತದೆ, ದೇಹದ ಪ್ರತಿಯೊಂದು ಅಂಗವು ಪ್ರಾಣವಾಯುವಿನ ಶಕ್ತಿಯನ್ನು ಅವಲಂಬಿಸಿರುತ್ತದೆ.
ಈ ರೀತಿಯ ಮನುಷ್ಯ ಸಂಬಂಧವೇ ಸೃಷ್ಟಿಯೊಂದಿಗಿರುವುದು, ನಾವೂ ಕೂಡ ಈ ಪ್ರಕೃತಿಯ ಒಂದು ಭಾಗವಾಗಿದ್ದೇವೆ, ಈ ಜಗತ್ತನ್ನು ಪೋಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ಬದುಕಲು ಸೃಷ್ಟಿಯಿಂದ ಎಲ್ಲವನ್ನು ಪಡೆದುಕೊಂಡಿದ್ದೇವೆ. ಆದರೆ ನಾವು ಪ್ರಕೃತಿಯ ಶೋಷಣೆ ಮಾಡಬಾರದು. ಪ್ರಕೃತಿಯಿಂದ ನಮಗೆ ಬೇಕಾಗಿದ್ದೆಲ್ಲವನ್ನೂ ಹಿಂಡಿಕೊಂಡಿದ್ದೇವೆ. ಪ್ರಕೃತಿಯೊಡನೆ ನಮ್ಮದು ಒಂದು ದಿನದ ಸಂಬಂಧವಲ್ಲ ಎಂಬುದನ್ನು ನಮ್ಮ ಪೂರ್ವಜರು ಚೆನ್ನಾಗಿ ಅರಿತುಕೊಂಡಿದ್ದರು. ಪ್ರಕೃತಿಯೊಂದಿಗೆ ನಮ್ಮದು ಕೇವಲ ದೈಹಿಕ ಸಂಬಂಧವಲ್ಲ, ಅವರು ಸಂಪೂರ್ಣ ಪ್ರಕೃತಿಯೇ ತಮ್ಮ ಜೀವನವೆಂದು ತಿಳಿದುಕೊಂಡಿದ್ದರು. ಸಾಧಾರಣವಾಗಿ ನಮ್ಮಲ್ಲಿ ಸಂಜೆ ಹೊತ್ತು ಗಿಡಮರಗಳಿಗೆ ತೊಂದರೆ ಕೊಡಬಾರದೆಂದು ಹೇಳುತ್ತಾರೆ. ಅವುಗಳೂ ಕೂಡ ವಿಶ್ರಮಿಸುತ್ತವೆ, ನಿದ್ರಿಸುತ್ತವೆ. ಮರಗಿಡಗಳಿಗೂ ಜೀವವಿದೆ. ಇವುಗಳೆಲ್ಲವೂ ನಮ್ಮ ಸೃಷ್ಟಿಯ ಒಂದು ಭಾಗ.
ಹೇಗೆ ಈ ಜಗತ್ತಿನಲ್ಲಿ ಪ್ರಾಣಿಲೋಕವಿದೆಯೋ ಹಾಗೆಯೇ ಸಸ್ಯಲೋಕವಿದೆ. ಈ ಆಧುನಿಕ ಜ್ಞಾನ-ವಿಜ್ಞಾನಗಳು ನಮಗೆ ಪರಿಚಯವಾಗುವ ಸಾವಿರಾರು ವರ್ಷಗಳ ಮೊದಲೇ ನಮ್ಮ ದೇಶದಲ್ಲಿ ಓದು ಬರಹ ಬಾರದ ಒಬ್ಬ ಸಾಮಾನ್ಯ ವ್ಯಕ್ತಿಯೂ ಕೂಡ ಸಾಯಂಕಾಲದ ಸಮಯದಲ್ಲಿ ಗಿಡಮರಗಳಿಗೆ ತೊಂದರೆ ಕೊಡಬಾರದೆಂದು ತಿಳಿದುಕೊಂಡಿದ್ದ.
ನಾವು ಹೇಗೆ ಜೀವಿಸಬೇಕು, ಏನು ಮಾಡಬೇಕು, ಯಾವುದು ಸರಿಯಾದ ದಾರಿ ಎಂಬುದನ್ನೆಲ್ಲ ನಮ್ಮ ಹಿರಿಯರು ಆಚರಣೆ ಮಾಡಿ ತೋರಿಸಿಕೊಟ್ಟಿದ್ದಾರೆ. ಪ್ರತಿದಿನ ನಾವು ಇರುವೆಗಳಿಗೆ ಹಿಟ್ಟನ್ನು ಹಾಕುತ್ತೇವೆ, ಹಸುವಿಗೆ ಹುಲ್ಲನ್ನು ಇಡುತ್ತೇವೆ, ನಾಯಿಗಳಿಗೆ ಶ್ವಾನಬಲಿ, ಪಕ್ಷಿಗಳಿಗೆ ಕಾಕಬಲಿ, ಕ್ರಿಮಿಕೀಟಗಳಿಗೂ ಬಲಿ ನೀಡುತ್ತೇವೆ, ಗ್ರಾಮದ ಅತಿಥಿಗಳು ಹಸಿದಿದ್ದರೆ ಅವರಿಗೆ ಆಹಾರ ನೀಡುತ್ತೇವೆ, ಹೀಗೆ ನಮ್ಮ ಪರಂಪರೆಯಲ್ಲಿ ಈ ಐದು ಬಲಿಗಳನ್ನು ಕೊಟ್ಟ ಮೇಲೆಯೇ ಗೃಹಸ್ಥರು ಆಹಾರ ಸೇವಿಸುತ್ತಿದ್ದರು. ಈ ಪ್ರಕಾರದ ಬಲಿ ಎಂಬ ಶಬ್ದ ಪ್ರಾಣಿ ಹಿಂಸೆ ಆಗಿರಲಿಲ್ಲ. ಈ ಸಂದರ್ಭದಲ್ಲಿ ಬರುವ ಬಲಿ ಎಂದರೆ ನಮ್ಮ ಮನೆಯಲ್ಲಿ ತಯಾರಾದ ಆಹಾರವನ್ನು ಎಲ್ಲರಿಗೂ ಹಂಚುವುದಾಗಿತ್ತು. ಪ್ರಕೃತಿಯ ಸಕಲ ಜೀವಗಳನ್ನು ಸಂರಕ್ಷಿಸಿ ಪೋಷಿಸುವುದು ನಮ್ಮೆಲ್ಲ ಮನುಷ್ಯರ ಕರ್ತವ್ಯವಾಗಿತ್ತು. ಏಕೆಂದರೆ ಇವೆಲ್ಲವೂ ಸೇರಿ ಮನುಷ್ಯನನ್ನು ಪೋಷಿಸುತ್ತವೆ.
ಈ ವಿಚಾರವನ್ನು ಅರಿತುಕೊಂಡು ಅಂದು ನಾವೆಲ್ಲರೂ ಜೀವಿಸುತ್ತಿದ್ದೆವು. ಹೀಗಾಗಿಯೇ ನಾವು ಭಕ್ತಿಯಿಂದ ನದಿಗಳನ್ನು ಪೂಜಿಸುತ್ತೇವೆ, ಗಿಡಮರಗಳನ್ನು ಪೂಜಿಸುತ್ತೇವೆ, ತುಳಸಿಪೂಜೆ ಮಾಡುತ್ತೇವೆ, ಪುಣ್ಯ ಪರ್ವತಗಳ ಪೂಜೆ ಪ್ರದಕ್ಷಿಣೆಗಳನ್ನು ಮಾಡುತ್ತೇವೆ, ನಮ್ಮಲ್ಲಿ ಹಸುಗಳನ್ನೂ ಪೂಜಿಸುತ್ತೇವೆ, ಹಾವುಗಳನ್ನು ಪೂಜಿಸುತ್ತೇವೆ.
ಸಂಪೂರ್ಣ ವಿಶ್ವವು ಒಂದು ವಿಶೇಷವಾದ ಚರಾಚರ ಚೈತನ್ಯವನ್ನು ಹೊಂದಿದೆ. ಸೃಷ್ಟಿಯ ಪ್ರತಿಯೊಂದು ರಚನೆಯಲ್ಲಿ ಆ ಚೈತನ್ಯವನ್ನು ನಾವು ನೋಡಬೇಕು, ಅದರ ಕುರಿತು ಶ್ರದ್ಧೆ ವಹಿಸಬೇಕು, ಆತ್ಮೀಯತೆಯಿಂದ ಅವುಗಳನ್ನು ನೋಡಿಕೊಳ್ಳಬೇಕು, ಅವುಗಳೊಂದಿಗೆ ಗೆಳೆತನ ಬೆಳೆಸಿಕೊಳ್ಳಬೇಕು ಮತ್ತು ಪರಸ್ಪರ ಸಹಕಾರದೊಂದಿಗೆ ಎಲ್ಲರೊಂದಿಗೆ ಜೀವನ ಶೈಲಿ ನಡಸಬೇಕೆಂಬುದು ಪ್ರಕೃತಿ ನಿಯಮವಾಗಿದೆ.
ಭಗವದ್ಗೀತೆಯಲ್ಲಿ ಹೇಳಿರುವಂತೆ, “ಪರಸ್ಪರಂ ಭಾವಯಂತಮ್” ಅಂದರೆ, ದೇವತೆಗಳೊಂದಿಗೆ ನಾವು ಸದ್‌ವ್ಯವಹಾರಗಳನ್ನು ಇಟ್ಟುಕೊಳ್ಳತ್ತಿದ್ದೆವು, ದೇವತೆಗಳೂ ಕೂಡ ನಮ್ಮೊಂದಿಗೆ ಒಳ್ಳೆಯ ವ್ಯವಹಾರಗಳನ್ನು ಮಾಡುತ್ತಿದ್ದರು. ಆ ದಿನಗಳಲ್ಲಿ ಪರಸ್ಪರ ಸದ್ ವ್ಯವಹಾರಗಳೊಂದಿಗೆ ಜಗತ್ತು ನೆಡೆಯುತ್ತಿತ್ತು. ಆ ಕಾಲದಲ್ಲಿ ನಮ್ಮ ಜೀವನ ಹೀಗೆ ನೆಡೆಯುತ್ತಿತ್ತು. ಆದರೆ ದಾರಿ ತಪ್ಪಿದ ನಮ್ಮ ಜೀವನ ಶೈಲಿಯ ಪ್ರಭಾವದಿಂದಾಗಿ ನಾವೆಲ್ಲರೂ ಇದನ್ನು ಮರೆತೆವು. ಹೀಗಾಗಿಯೇ ಪರಿಸರ ದಿನಾಚರಣೆಯ ರೂಪದಲ್ಲಿ ನಾವು ಆ ತತ್ವಗಳನ್ನೆಲ್ಲ ನೆನಪಿಸಿಕೊಳ್ಳಬೇಕಿದೆ. ನಾವು ಹೀಗೆಯೇ ಆಚರಣೆ ಮಾಡಿಕೊಳ್ಳಬೇಕು, ಪ್ರತಿ ಮನೆಯಲ್ಲಿ ಇಂತಹ ವಿಚಾರಗಳ ಸ್ಮರಣೆ ಮಾಡಿಕೊಳ್ಳಬೇಕು.
ಮುಂಬರುವ ಆಗಸ್ಟ್ 30 ರ ದಿನಾಂಕವು ನಮ್ಮ ಪೂರ್ವಜರ ಪ್ರಕೃತಿ ಪೂಜೆಯ ಸ್ಮರಣೆಯ ದಿನವಾಗಬೇಕು. ನಾವು ನಾಗರ ಪಂಚಮಿಯನ್ನು ಆಚರಿಸುತ್ತೇವೆ, ನಮ್ಮಲ್ಲಿ ಗೋವರ್ಧನ ಪೂಜೆಯಿದೆ, ನಾವು ತುಳಸಿ ವಿವಾಹ ಮಾಡುತ್ತೇವೆ. ಈ ಎಲ್ಲಾ ವಿಶೇಷ ದಿನಗಳನ್ನು ಒಪ್ಪಿಕೊಂಡು ನಾವಿಂದು, ಇಂತಹ ಸಮಯೋಚಿತ ಆಚರಣೆಗಳನ್ನು ಸಂಸ್ಕಾರ ಸಹಿತ ಮುಂಬರುವ ಸಂಪೂರ್ಣ ಸುಖಿ ಪುನರ್ ಜೀವನಕ್ಕಾಗಿ ಅಳವಡಿಸಿಕೊಳ್ಳಬೇಕಿದೆ. ಹೊಸ ಪೀಳಿಗೆಯು ಈ ರೀತಿಯ ಆಚರಣೆಗಳ ಅರ್ಥಗಳನ್ನು ಅರಿತು ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುಬೇಕಿದೆ. ನಾವೂ ಕೂಡ ಈ ಪ್ರಕೃತಿಯ ಭಾಗವಾಗಿದ್ದೇವೆ, ಪ್ರಕೃತಿಯಿಂದ ಪಡೆಯುವುದಷ್ಟೇ ಅಲ್ಲ, ಅದರ ಮೇಲೆ ವಿಜಯ ಸಾಧಿಸುವುದಷ್ಟೇ ಅಲ್ಲ, ನಾವೂ ಕೂಡ ಸ್ವಯಂ ಪ್ರೇರಣೆಯಿಂದ ಪ್ರಕೃತಿಯನ್ನು ಪೋಷಿಸಿ ಅದನ್ನು ಜೀವಂತವಾಗಿಡಬೇಕು. ಇಂತಹ ನಮ್ಮ ಕಾರ್ಯಕ್ರಮಗಳನ್ನು ನೋಡಿ ಅರಿತುಕೊಂಡು ಮುಂದಿನ ಪೀಳಿಗೆಯು ನೆಡೆದುಕೊಳ್ಳಬೇಕು. ಆಗ ಮಾತ್ರ ಕಳೆದ 300-350 ವರ್ಷಗಳಿಂದ ವಿಶೇಷವಾಗಿ ಹಾನಿಗೊಂಡ ನಮ್ಮ ಪರಿಸರ ಪ್ರಕೃತಿಯನ್ನು ಮುಂಬರುವ 100-200 ವರ್ಷಗಳಲ್ಲಿ ಪೋಷಿಸಿ ಸುರಕ್ಷಿತವಾಗಿಡಬಹುದು. ಆಗ ಮಾತ್ರ ಮಾನವ ಕುಲ ಸುರಕ್ಷಿತವಾಗುತ್ತದೆ, ಜೀವನ ಸುಂದರವಾಗುತ್ತದೆ.
ಮನೋರಂಜನೆಗಾಗಿ ನಾವು ಈ ದಿನವನ್ನು ಆಚರಿಸುತ್ತಿದ್ದೇವೆ ಎಂದು ತಿಳಿಯದೇ, ಸಂಪೂರ್ಣ ಪ್ರಕೃತಿಯ ಪೋಷಣೆಗಾಗಿ, ನಮ್ಮ ಜೀವನವನ್ನು ಸುಂದರವಾಗಿಸಲು, ಎಲ್ಲರ ಉನ್ನತಿಗಾಗಿ ನಾವು ಈ ಕಾರ್ಯಕ್ರಮವನ್ನು ಮಾಡಬೇಕಾಗಿದೆ, ಎಂಬ ಸದ್ಭಾವನೆಯನ್ನು ನಾವಿಟ್ಟುಕೊಳ್ಳಬೇಕು. ನಾವು ಪ್ರಕೃತಿಯೆಡೆಗೆ ಕಣ್ಣು ತೆರೆದು ಈ ದಿನದ ಸಂದೇಶವನ್ನು ವರ್ಷಪೂರ್ತಿ ನಮ್ಮ ದೈನಂದಿನ ಸಣ್ಣ-ಪುಟ್ಟ ಕೆಲಸ ಕಾರ್ಯಗಳಲ್ಲಿ ಅಳವಡಿಸಿಕೊಂಡು ಆಚರಣೆಗೆ ತರುವ ಕುರಿತು ನಾನು ನನ್ನ ವಿಚಾರ ಚಿಂತನೆಗಳನ್ನು ನಿಮ್ಮೆದುರು ಮಂಡಿಸಿದ್ದೇನೆ. ನಿಮ್ಮಲ್ಲರಿಗೂ ಈ ದಿನದ ಶುಭಾಶಯಗಳನ್ನು ತಿಳಿಸುತ್ತೇನೆ. ಇದರೊಂದಿಗೆ ನನ್ನ ಮಾತುಗಳಿಗೆ ವಿರಾಮ ನೀಡುತ್ತೇನೆ.