ನಾರಾಯಣ ಶೇವಿರೆ, ಚಿಂತಕರು, ಖ್ಯಾತ ಲೇಖಕರು

ಉನ್ನತ ಉದ್ದೇಶವೊಂದು ಸಾಕಾರಗೊಳ್ಳಲು ಮಾಡುವ ಯತ್ನವಿಶೇಷವನ್ನು ಬಗೆಬಗೆಯಾಗಿ ವರ್ಣಿಸಲಾಗುತ್ತದೆ. ಪರಿಶ್ರಮ, ತಪಸ್ಸು, ಸಾಧನೆ, ತ್ಯಾಗ ಇತ್ಯಾದಿಗಳು ಈ ಸಂದರ್ಭದಲ್ಲಿ ಬಳಕೆಯಾಗುವ ಪದಗಳು.

ಇವು ಪದಗಳೇನೋ ಹೌದು. ಆದರೆ ಪದಗಳಷ್ಟೇ ಅಲ್ಲ. ಅವುಗಳ ಹಿಂದೆ ಭಾವವಿಶೇಷವುಳ್ಳ ಧ್ವನಿಯಿದೆ. ಇವುಗಳನ್ನು ಎಲ್ಲ ಸಂದರ್ಭಗಳಲ್ಲೂ ಒಂದೇ ರೀತಿ ಬಳಸಲಾಗದು. ದರೋಡೆ, ಕೊಲೆಯಂಥ ಕೆಲಸವನ್ನು ಮಾಡಲೂ ಅಪಾರ ಶ್ರಮವೇ ಬೇಕಾದೀತು. ಅಂಥ ಶ್ರಮವನ್ನು ಪರಿಶ್ರಮ ಎನ್ನಲಾಗದು. ಅಲ್ಲಿ ಅಸಾಧ್ಯವೆನಿಸಿದ್ದನ್ನು ಆಗುಮಾಡುವ ಕೆಲಸವೇ ಘಟಿಸೀತು. ಆದರದನ್ನು ಸಾಧನೆ ಎನ್ನುವುದಕ್ಕುಂಟೇ? ಕೆಲವೊಮ್ಮೆ ಅಂಥ ಕೆಲಸವನ್ನು ಮಾಡುವಲ್ಲಿ ಜೀವವನ್ನೇ ಒತ್ತೆಯಿಡಬೇಕಾಗಿ ಬಂದೀತು. ಹಾಗೆಂದು ಅದನ್ನು ಬಲಿದಾನ ಎಂದು ಬಣ್ಣಿಸುವುದಿಲ್ಲವಲ್ಲ!

ಕ್ರಿಯೆಯೊಂದರ ಉದ್ದೇಶ, ಪರಿಣಾಮ, ಔನ್ನತ್ಯ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡೇ ಅದನ್ನು ಸೂಕ್ತ ಪದಗಳಿಂದ ವಿವರಿಸುವುದಾಗುತ್ತದೆ.

ವ್ಯಾಪ್ತಿಗೆ ತಕ್ಕಂತೆ ಮಹತ್ತ್ವ

ವ್ಯಾಪ್ತಿಯ ಕಾರಣಕ್ಕಾಗಿ ಒಂದೇ ಕಾರ್ಯವು ಮಹತ್ತ್ವದಲ್ಲಿ ಏರುಪೇರನ್ನು ಕಾಣಬಹುದು. ತನ್ನ ಕುಟುಂಬದ ಏಳ್ಗೆಗಾಗಿ ಒಬ್ಬಾತ ಗೈವ ಸಾಧನೆಯೋ ತ್ಯಾಗವೋ ಆ ಕುಟುಂಬದ ಮಟ್ಟಿಗೆ ಒಂದು ದೊಡ್ಡ ಸಾಧನೆಯಾಗಿ ಇಲ್ಲವೇ ತ್ಯಾಗವಾಗಿ ಪರಿಗಣಿತವಾದರೂ ಸಮಾಜದಲ್ಲಿ ಹಾಗೆ ಪರಿಗಣಿತವಾಗಬೇಕೆಂದೇನೂ ಇಲ್ಲ. ತನ್ನ ಕುಟುಂಬಕ್ಕಾಗಿ ಆತ ಮಾಡಿದ್ದಾನೆ, ಅದು ಆತನ ಕರ್ತವ್ಯ, ಅದರಲ್ಲಿ ಅಂಥ ದೊಡ್ಡದೇನಿದೆ ಎಂದೇ ಸಾರ್ವಜನಿಕವಾಗಿ ಅಭಿಪ್ರಾಯ ಬಂದೀತು.

ಅಂತಾರಾಷ್ಟ್ರೀಯ ಇಲ್ಲವೇ ವಿಶ್ವಸ್ತರದ ಕ್ರೀಡೆಯೊಂದರಲ್ಲಿ ಕ್ರೀಡಾಪಟುವೊಬ್ಬ ವಿಶೇಷ ಸಾಧನೆ ಮಾಡಿ ಅದನ್ನು ತನ್ನ ಪತ್ನಿಗೆ ಅರ್ಪಿಸಿಬಿಟ್ಟರೆ ಮತ್ತೊಬ್ಬ ತನ್ನ ಅಂಥದ್ದೇ ಸಾಧನೆಯನ್ನು ಗುರುವಿಗೆ ಅರ್ಪಿಸಬಹುದು. ಇನ್ನೊಬ್ಬ ಅದನ್ನು ತನ್ನ ಕುಟುಂಬಕ್ಕೆ ಅರ್ಪಿಸಿದರೆ ಮಗದೊಬ್ಬ ಅದನ್ನು ‘ರಾಷ್ಟ್ರಕ್ಕಾಗಿ ಆಡಿದ್ದೇನೆ, ರಾಷ್ಟ್ರಕ್ಕೇ ಅರ್ಪಿಸುತ್ತೇನೆ’ ಎನ್ನಬಹುದು. ಎಲ್ಲರೂ ಆಡಿದ್ದು ರಾಷ್ಟದ ಪ್ರತಿನಿಧಿಗಳಾಗಿಯೇ. ಯಾರೂ ವೈಯಕ್ತಿಕ ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಹೋಗಲಾಗುವುದಿಲ್ಲವಷ್ಟೆ. ಆದರೆ ಆಟದಲ್ಲಿಯ ತಮ್ಮ ಸಾಧನೆಯನ್ನು ಯಾರಿಗೆ ಅರ್ಪಿಸುತ್ತಾರೆ ಎನ್ನುವುದರ ಮೇಲೆ ಅವರು ಈ ಸಾಧನೆಗೆ ಎಂಥ ಮಹತ್ತ್ವ ಕಲ್ಪಿಸಿದ್ದಾರೆ ಎನ್ನುವುದು ನಿಂತಿರುತ್ತದೆ.

ವಿಶ್ವವ್ಯವಸ್ಥೆಯಲ್ಲಿ ವ್ಯಷ್ಟಿ, ಸಮಷ್ಟಿ, ಸೃಷ್ಟಿ ಮತ್ತು ಪರಮೇಷ್ಠಿ ಎಂದು ನಾಲ್ಕು ವಿಭಾಗಗಳಿವೆ. ಪರಮೇಷ್ಠಿಯು ಯಾವುದೇ ವ್ಯಾಪ್ತಿಯನ್ನು ಮೀರಿ ಎಲ್ಲದರೊಳಗೂ ಇದೆಯಾಗಿ ಕಾರ್ಯದ ಲಕ್ಷ್ಯವನ್ನು ಹೊಂದಲು ಮೊದಲ ಮೂರನ್ನು ಮಾತ್ರ ಸ್ವೀಕರಿಸಲು ಸಾಧ್ಯ. ಈ ಮೂರು ಅನುಕ್ರಮವಾಗಿ ದೊಡ್ಡವು. ದೊಡ್ಡದಕ್ಕಾಗಿ ಮಾಡುವ ಯಾವುದೇ ಕಾರ್ಯವು ಸಾಪೇಕ್ಷವಾಗಿ ದೊಡ್ಡದೇ. ಇದನ್ನು ಪರಮೇಷ್ಠಿಯನ್ನುದ್ದೇಶಿಸಿ ಮಾಡಿದಾಗ ಅದು ನಿಜಕ್ಕೂ ದೊಡ್ಡದಾಗುತ್ತದೆ. ಅಂದರೆ ಕಾರ್ಯದ ಪ್ರೇಯಸ್ಸನ್ನು ಸಮಾಜ ಇಲ್ಲವೇ ರಾಷ್ಟ್ರಕ್ಕೆ ಅರ್ಪಿಸಿ ಶ್ರೇಯಸ್ಸನ್ನು ಪರಮೇಷ್ಠಿಗೆ ಅರ್ಪಿಸಿದಾಗ ಅದು ದೊಡ್ಡದಾದೀತು.

ಸುಳಿವ ವ್ಯವಹಾರ

ದಾನವನ್ನು ಉಳ್ಳವರಿಗಲ್ಲ, ಇಲ್ಲದವರಿಗೇ ಕೊಡಬೇಕು ಎಂದು ಅದರ ಉದ್ದೇಶದಲ್ಲಿರುವುದು. ಯಾರು ದಾನಮಾಡುತ್ತಾರೆ ಅನ್ನುವುದರ ಮೇಲೆ ಈ ಉದ್ದೇಶ ಎಷ್ಟರ ಮಟ್ಟಿಗೆ ಈಡೇರಿತು ಎನ್ನುವುದನ್ನೂ ನೋಡುವುದಾಗುತ್ತದೆ.

ಒಮ್ಮೆ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ತಮ್ಮ ವಾರ್ಷಿಕ ಸೇವಾಶಿಬಿರದ ನಿಮಿತ್ತ ಗ್ರಾಮವೊಂದಕ್ಕೆ ಬಂದು ಬೀಡುಬಿಟ್ಟರು. ಅಲ್ಲಿಯ ಶಾಲೆಗಾಗಿ ಒಂದು ಆಟದ ಮೈದಾನವನ್ನು ಸಿದ್ಧಪಡಿಸಿ ಕೊಡುವುದು ಆ ಸೇವಾಶಿಬಿರದ ಲಕ್ಷ್ಯವಾಗಿತ್ತು. ಊಟತಿಂಡಿ ವ್ಯವಸ್ಥೆಗಳೆಲ್ಲವನ್ನೂ ಶಿಬಿರವು ಸ್ವತಂತ್ರವಾಗಿಯೇ ಮಾಡಿಕೊಳ್ಳುತ್ತದಾದರೂ ಈ ನಿಟ್ಟಿನಲ್ಲಿ ಊರಮಂದಿ ತಮ್ಮದೇ ರೀತಿಯಲ್ಲಿ ಒಂದಷ್ಟು ಸಹಕರಿಸುವುದಿದೆ. ಹಳ್ಳಿಯ ಮಂದಿ ಆತಿಥ್ಯದ ಸಂಸ್ಕಾರವನ್ನು ಬಿಟ್ಟುಕೊಡುವುದಿದೆಯೇ! ಜಿಲ್ಲೆಯ ಪ್ರತಿಷ್ಠಿತ ಮಹಾವಿದ್ಯಾಲಯವದು. ಪ್ರತಿಷ್ಠಿತರ ವಿದ್ಯಾಸಂಸ್ಥೆಯೂ ಹೌದದು. ಆ ಹಳ್ಳಿಯ ಒಬ್ಬರು ಪ್ರತಿಷ್ಠಿತರು ದಾನದ ದೃಷ್ಟಿಯಿಂದ ದುರ್ದೂರವಿರುವವರು. ಎಷ್ಟೇ ಸಂಕಟದ ಸಂದರ್ಭದಲ್ಲಿಯೂ ಯಾರಿಗೂ ನೆರವಿಗೆ ಧಾವಿಸುವ ಜಾಯಮಾನದವರಲ್ಲ ಎಂದೇ ಅವರ ಬಗ್ಗೆ ಊರಲ್ಲಿ ಪ್ರತೀತಿಯಿರುವುದು. ಅಂಥವರು, ಶಿಬಿರದಲ್ಲಿ ಮಕ್ಕಳಿಗೆ ಊರಮಂದಿ ಕೈಯಡುಗೆಯಿಂದ ಉಣಬಡಿಸುವ ಸುದ್ದಿ ಕೇಳಿ ವಿಚಲಿತರಾಗಿ ಶಿಬಿರದ ಕೊನೆಯ ದಿನ ತಮ್ಮ ಖರ್ಚಿನಲ್ಲಿ ಹೋಳಿಗೆ ಊಟ ಹಾಕಿಸಿದರು. ಅಂದಿನ ಆ ಊಟದ ವ್ಯವಸ್ಥೆ ತಮ್ಮಿಂದಲೇ ಎಂದು ಘೋಷಿಸಿಕೊಂಡರು ಕೂಡ. ಹಾಗೆ ಘೋಷಿಸುವ ಹೊತ್ತಿಗೆ ಊರಮಂದಿಗೆ ಒಳಗೊಳಗೇ ನಗದಿರಲು ಸಾಧ್ಯವಾಗಲಿಲ್ಲ. ಆ ಪ್ರತಿಷ್ಠಿತರ ದಾನದ ಗುಟ್ಟು ಊರಮಂದಿಗೆ ಗೊತ್ತೇ ಇತ್ತಲ್ಲ.

ಬಡವನಿಗೆ ಕೊಡದ ಕೈ ಶ್ರೀಮಂತನಿಗೆ ಪ್ರತಿಷ್ಠಿತನಿಗೆ ಪ್ರಭಾವಿಗೆ ಹೆಮ್ಮೆಯಿಂದ ಕೊಡುತ್ತದೆ! ಇದನ್ನು ದಾನವೆನ್ನಲಾಗದು. ನಿರೀಕ್ಷೆ ಇಟ್ಟುಕೊಂಡೇ ಕೊಡುವ ಕ್ರಿಯೆಯಿದು. ನಿರೀಕ್ಷೆಯು ಹಣದ್ದೇ ಇರಬಹುದು, ಪದವಿಯದ್ದೇ ಇರಬಹುದು, ಮತ್ತಿನ್ನ್ಯಾವುದರದ್ದೇ ಇರಬಹುದು. ಇಂಥ ನಿರೀಕ್ಷೆಯು, ಕೊಡುವ ಕ್ರಿಯೆಯನ್ನು ವ್ಯವಹಾರದ ಮಟ್ಟಕ್ಕೆ ಇಳಿಸುವುದೇ ವಿನಾ ದಾನದೆತ್ತರಕ್ಕೆ ಏರಿಸದು. ಆದರೂ ಇದನ್ನು ದಾನವೆಂದು ಕೊಂಡಾಡುವವರ ಸಂಖ್ಯೆ ಕಡಮೆಯಿಲ್ಲ.

ಕೊಂಡಾಡುವವರ ಪ್ರಮಾಣಕ್ಕೆ ಅನುಗುಣವಾಗಿ ಅಲ್ಲವಲ್ಲ ಕೊಡುವ ಕ್ರಿಯೆಯೊಂದು ದಾನವೋ ವ್ಯವಹಾರವೋ ಎಂದು ತೀರ್ಮಾನಿಸಲ್ಪಡುವುದು!

ಆವಶ್ಯಕತೆ ಇರುವವರಿಗೆ ಕೊಡಬೇಕು ಎನ್ನುವುದು ದಾನದ ಒಂದು ಲಕ್ಷ್ಯ. ಆವಶ್ಯಕತೆ ಇದ್ದಾಗಲೇ ಅದನ್ನು ಕೊಡಬೇಕು. ಆಗ ಲಕ್ಷ್ಯದ ನಿಜಪೂರೈಕೆ ಸಾಧ್ಯವಾಗುತ್ತದೆ.

ದಾನದಲ್ಲಿ ಸಮಯಪ್ರಜ್ಞೆ

ಮೂಲ ಮಹಾಭಾರತದಲ್ಲಿ ಇಲ್ಲದ, ಆದರೆ ಕವಿಯೊಬ್ಬ ದಾನದ ಕುರಿತು ಧರ್ಮಜ ಮತ್ತು ಕರ್ಣರ ನಡುವೆ ಇರುವ ವ್ಯತ್ಯಾಸವನ್ನು ಕಲ್ಪಿಸಿದ ಪ್ರಸಂಗವೊಂದು ಕುತೂಹಲಕರವಾಗಿದೆ.

ಪ್ರಸಂಗ ಹೀಗಿದೆ: ಬ್ರಾಹ್ಮಣನೊಬ್ಬ ಮಳೆಗಾಲದಲ್ಲಿ ತಾನು ಸಂಕಲ್ಪಿಸಿದ ಯಜ್ಞವೊಂದರ ನಿಮಿತ್ತ ಶ್ರೀಗಂಧದ ಸಮಿಧೆಗಳಿಗಾಗಿ ಧರ್ಮರಾಯನ ಬಳಿ ಬರುತ್ತಾನೆ. ಧರ್ಮರಾಯ ಕಳುಹಿದ ಚಾರರು ಕಾಡೆಲ್ಲ ಅಲೆದು ಬರಿಗೈಯಲ್ಲಿ ವಾಪಸ್ ಬಂದು ‘ಮಳೆಗಾಲವಾದುದರಿಂದ ಒಣ ಸಮಿಧೆಗಳು ಸಿಗಲಿಲ್ಲ ‘ ಎಂದು ಕಾರಣವನ್ನರುಹುತ್ತಾರೆ. ಮಳೆಗಾಲ ಕಳೆದ ಮೇಲೆ ಬಾ, ನಿನ್ನ ಅಪೇಕ್ಷೆಯನ್ನು ಪೂರೈಸುವೆ ಎಂದು ಧರ್ಮಜ ಬ್ರಾಹ್ಮಣನನ್ನು ವಾಪಸ್ ಕಳಿಸುತ್ತಾನೆ. ಅದೇ ಬ್ರಾಹ್ಮಣ ಕರ್ಣನ ಬಳಿ ಬಂದು ತನ್ನ ಅಪೇಕ್ಷೆಯನ್ನು ಮುಂದಿಟ್ಟಾಗ, ಕರ್ಣನು ತುಸುವೂ ತಡಮಾಡದೆ ಶ್ರೀಗಂಧದಿಂದಲೇ ನಿರ್ಮಿಸಿದ ತನ್ನ ಅರಮನೆಯ ಹೆಬ್ಬಾಗಿಲಿಗೇ ಬಾಣಹೊಡೆಯುತ್ತಾನೆ. ಪರ್ವತದಂತೆ ರಾಶಿಬಿದ್ದ ಶ್ರೀಗಂಧದ ಸಮಿಧೆಗಳನ್ನು ಗಾಡಿಗಳಲ್ಲಿ ಬ್ರಾಹ್ಮಣನ ಮನೆಗೆ ಒಯ್ದುಬರಲು ತನ್ನ ಚಾರರಿಗೆ ಸೂಚಿಸುತ್ತಾನೆ ಕರ್ಣ. ಇದರಲ್ಲಿ; ಮಳೆಗಾಲದಲ್ಲಿ ಸಮಿಧೆಗಳು ಹೊರಗೆಲ್ಲೂ ಸಿಗಲಾರವು ಎಂಬ ವಿವೇಕಪ್ರಜ್ಞೆ, ಒಂದೇ ಬಾಣದ ಹೊಡೆತಕ್ಕೆ ರಾಶಿಬೀಳುವಂತೆ ಮಾಡುವ ಧನುರ್ವಿದ್ಯಾ ತಜ್ಞತೆ ಮತ್ತು ಹಿಂದುಮುಂದು ನೋಡದೆ ಕೊಡುವ ದಾನಶೂರತೆ ಇವಿಷ್ಟನ್ನೂ ಕವಿ ತನ್ನ ಕಲ್ಪನೆಯ ಕರ್ಣನಲ್ಲಿ ತುಂಬುವಲ್ಲಿ ಯಶಸ್ವಿಯಾಗಿದ್ದಾನೆ.

ಇಲ್ಲಿ ಕವಿಗೆ ಧರ್ಮರಾಯನ ಬಗೆಗೆ ಸಿಟ್ಟೇನೂ ಇರಲಾರದು! ಕರ್ಣನ ದಾನಶೂರತ್ವದ ಬಗೆಗೆ ಹೇಳುವಾಗ ಧರ್ಮರಾಯ ಅಷ್ಟೇ ಮಟ್ಟಿನ ದಾನಿಯೇ ಆಗಿದ್ದನಲ್ಲ ಎಂಬ ಮಾತು ಸಹಜವಾಗಿಯೇ ಬರುತ್ತದೆ. ಯಾಕೆಂದರೆ ಆತ ನಿಜಾರ್ಥದ ಧರ್ಮರಾಯ. ದಾನವನ್ನು ಬಿಟ್ಟು ಧರ್ಮವು ಇಲ್ಲವಷ್ಟೆ. ದಯೆ, ಪ್ರಾಮಾಣಿಕತೆ, ಶೀಲ ಇತ್ಯಾದಿ ಪ್ರಪಂಚದ ಯಾವುದೇ ಉತ್ತಮ ಗುಣಗಳು ಧರ್ಮದೊಳಗೆ ಬಂದೇಬರುತ್ತವೆ. ಅವುಗಳಲ್ಲಿ ದಾನವೂ ಒಂದು. ಅಲ್ಲದೆ ದಾನವನ್ನು ಧರ್ಮದೊಂದಿಗೆ ಸಮೀಕರಿಸಿ ನೋಡುವ ಕ್ರಮವೂ ಇದೆ. ‘ಧರ್ಮ ಮಾಡಿ ಸ್ವಾಮಿ’ ಎಂದು ಭಿಕ್ಷುಕರು ಕೂಡ ಹೇಳುವುದಿಲ್ಲವೇ! ಅಂತಿರುವಾಗ ಧರ್ಮಜನಿಗಿಂತ ದೊಡ್ಡ ದಾನಿ ಇರಲು ಸಾಧ್ಯವೇ, ಅದೂ ಕರ್ಣನಿರಲು ಸಾಧ್ಯವೇ ಎಂಬ ಪ್ರಶ್ನೆ ಮೂಡುವುದು ಸಹಜ. ನಮ್ಮ ಕವಿಗಳು ಧರ್ಮಜನಲ್ಲಿ ಧರ್ಮಾತ್ಮನನ್ನು ಕಂಡರಿಸಿದರೆ ಕರ್ಣನಲ್ಲಿ ದಾನಶೂರತ್ವವನ್ನು ನೋಡಿದ್ದಾರೆ. ತುಸು ಅಧಿಕವಾಗಿ ಆ ದಾನಶೂರತ್ವವನ್ನು ಕೊಂಡಾಡಿದ್ದಾರೆ.

ಒಟ್ಟಿನಲ್ಲಿ; ದಾನವು ನೀಡಲ್ಪಡಬೇಕಾದುದು ಅಗತ್ಯವಿರುವ ಸಮಯದಲ್ಲಿ ಎನ್ನುವುದೂ ಮಹತ್ತ್ವದ ಸಂಗತಿಯೇ ಆಗುತ್ತದೆ.

ದಾನಶ್ರೇಷ್ಠ

ಕರ್ಣ ದಾನಿಯಾಗಿದ್ದ ಎನ್ನುವುದೇನೋ ಹೌದು, ಆದರೆ ಆತನ ಉಳಿದ ಗುಣಗಳು ಸ್ವೀಕಾರಯೋಗ್ಯವಲ್ಲ. ಕೌರವನ ಅನ್ಯಾಯದ ಕೃತ್ಯಗಳಿಗೆ ಸಲಹೆ ಕೊಡುತ್ತಿದ್ದ ದುಷ್ಟಚತುಷ್ಟಯರಲ್ಲಿ ಆತ ಒಬ್ಬನಾಗಿದ್ದ. ಹೆಚ್ಚೇಕೆ, ದ್ರೌಪದಿಯ ವಸ್ತ್ರಾಪಹರಣ ಮಾಡಲು ದುಃಶಾಸನನಿಗೆ ಸೂಚಿಸಿದವನೇ ಈ ಕರ್ಣ.

ಯಾವುದೋ ಒಂದು ಉತ್ತಮ ಗುಣದಿಂದ ಉಳಿದೆಲ್ಲ ಆಧಮ ಗುಣಗಳನ್ನು ಮುಚ್ಚಿಹಾಕಲಾಗದು. ಮಾತ್ರವಲ್ಲ, ಒಂದು ಅಧಮ ಗುಣವು ಉಳಿದೆಲ್ಲ ಉತ್ತಮ ಗುಣಗಳನ್ನು ಮುಚ್ಚಿಹಾಕೀತು.

ಈ ಹಿನ್ನೆಲೆಯಲ್ಲಿ ನಮ್ಮ ವಾಙ್ಮಯ ದಾನಶೂರನೆಂದು ಕೊಂಡಾಡುವುದು ಶಿಬಿ ಚಕ್ರವರ್ತಿಯನ್ನೇ. ದಾನದ ಎತ್ತರದಲ್ಲೂ ಆತನ ಸಮಕ್ಕೆ ಮತ್ತೊಬ್ಬ ನಿಲ್ಲಲಾರ. ಹುಟ್ಟಿನಿಂದಲೇ ಬಂದ ಎದೆಗವಚ ಇತ್ಯಾದಿ ತನ್ನ ದೇಹದ ಕೆಲವು ಅಂಗಗಳನ್ನು ಕರ್ಣನು ದಾನಮಾಡಿದ್ದಿದ್ದರೆ ಶಿಬಿಯು ತನ್ನ ದೇಹದ ಒಂದೊಂದೇ ಅಂಗವನ್ನು ತುಂಡರಿಸುತ್ತ ಕೊನೆಗೆ ಇಡಿಯ ದೇಹವನ್ನೇ ದಾನಮಾಡಿಬಿಡುತ್ತಾನೆ. ಶಿಬಿ ಮಹಾದಾನಿಯೂ ಹೌದು, ಯಾವುದೇ ದುರ್ಗುಣವನ್ನು ಹೊಂದದ ಧರ್ಮಿಷ್ಠ ರಾಜನೂ ಹೌದು. ಹಾಗಾಗಿ ಆತನನ್ನು ದಾನಶೂರನೆಂದು ಕೊಂಡಾಡಲು ನಮ್ಮ ವಾಙ್ಮಯಕ್ಕೆ ಒಂದು ಹೆಮ್ಮೆ ಇದೆ.

ತಾನು ಉತ್ತಮ ಕಾರ್ಯ ಮಾಡಿದೆ ಎಂಬ ಭಾವ ಸಹಜವಾಗಿ ಎಲ್ಲರಲ್ಲಿಯೂ ಇರುತ್ತದೆ. ಅದೇ ಅಧಮ ಕಾರ್ಯದ ಬಗ್ಗೆ ಈ ಭಾವವಿಲ್ಲ! ಬದಲಾಗಿ ಅದನ್ನು ಮಾಡಿದ್ದು ತಾನಲ್ಲ ಎಂಬುದೇ ಪ್ರತಿಪಾದನೆಯಾಗಿರುತ್ತದೆ. ಇದು ಅಪರಾಧಿ ನೆಲೆಯ ಪ್ರತಿಪಾದನೆ. ನಿಜಕ್ಕಾದರೆ ಈ ಪ್ರತಿಪಾದನೆ ಸಾತ್ತ್ವಿಕ ನೆಲೆಯಲ್ಲಿ ಉತ್ತಮ ಕಾರ್ಯದ ಬಗ್ಗೆ ನಡೆಯಬೇಕು.

ಈ ನೆಲೆಯಲ್ಲಿ; ಒಂದು ಕೈಯಲ್ಲಿ ದಾನ ಕೊಟ್ಟದ್ದು ಮತ್ತೊಂದು ಕೈಗೆ ಗೊತ್ತಾಗಕೂಡದು ಎಂಬ ಮಾತು ಪ್ರಸಿದ್ಧವೇ ಇದೆಯಷ್ಟೆ.

ಸ್ವನಿರಾಕರಣೆ

ಅದು ಸಾಧನೆಯಿರಲಿ, ದಾನವಿರಲಿ, ತ್ಯಾಗವಿರಲಿ; ಉತ್ತಮ ಕಾರ್ಯದ ಶ್ರೇಯಸ್ಸು ಸಿಗಬೇಕು ಎಂಬ ಹಂಬಲ ಇರುತ್ತದೆ. ಇರಕೂಡದ ಹಂಬಲವಿದು. ಕಾರ್ಯದ ಉತ್ತಮಿಕೆಯನ್ನು ಕೆಡಿಸುವ ಹಂಬಲವಿದು. ಆದರೆ ಎಲ್ಲರಲ್ಲಿಯೂ ಸಹಜವಾಗಿ ಇರಬಹುದಾದ ಹಂಬಲವಿದು. ಈ ಹಂಬಲದಿಂದ ಹೊರತಾಗಲು ಭಾರೀ ಪ್ರಯತ್ನವೇ ಬೇಕಾದೀತು. ಹಂಬಲಪಡುವ ಸ್ವಭಾವತೀವ್ರತೆಯೆಷ್ಟೋ ಅದಕ್ಕೆ ತಕ್ಕಂತೆ ಪ್ರಯತ್ನತೀವ್ರತೆಯೂ ಬೇಕಾದೀತು.

ಹೀಗೆ ಪ್ರಯತ್ನಿಸಿ ಪ್ರಯತ್ನಿಸಿ ಎಲ್ಲಿಯವರೆಗೆ ತಲುಪಬಹುದು?

ಯಜ್ಞದಲ್ಲಿ ದೇವತೆಗಳಿಗೆ ಆಹುತಿ ನೀಡುವಾಗ ಆ ದೇವತೆಯನ್ನುದ್ದೇಶಿಸಿ ಒಂದು ಮಾತನ್ನು ಹೇಳಲಾಗುತ್ತದೆ. ಅದೇನೆಂದರೆ; ‘ಈ ಆಹುತಿಯು ನಿನಗೆ. ಇದು ನಿನ್ನದು. ಇದು ನನ್ನದಲ್ಲ’. ಅಂದರೆ ದೇವತೆಗೆ ಕೊಡುವ ಪ್ರತಿಯೊಂದು ಸುವಸ್ತುವೂ ಆ ದೇವತೆಯದೇ ಎಂಬ ಭಾವದಲ್ಲಿ ಯಜ್ಞಕುಂಡದಲ್ಲಿ ಅರ್ಪಿಸುತ್ತೇವೆ. ಅರ್ಪಿಸುವುದು ತನ್ನದನ್ನೇ, ತಾನು ಸಂಪಾದಿಸಿದ್ದನ್ನೇ. ಆದರೆ ಅದು ತನ್ನದಲ್ಲ ಎಂಬ ಭಾವದಲ್ಲಿ ಅರ್ಪಿಸುವುದು. ಅದು ತನ್ನದೆಂಬ ಭಾವವಿದ್ದರೆ ಕೊಟ್ಟದ್ದು ಅರ್ಪಣೆಯಾಗುವುದಿಲ್ಲ. ಕೊಡುವುದು ತಾನೆಂಬ ಭಾವವಷ್ಟೆ ಅಲ್ಲ, ತನ್ನದೆಂಬ ಭಾವದಿಂದಲೂ ಹೊರತಾಗುವಲ್ಲಿಯವರೆಗೆ ಈ ಪ್ರಯತ್ನವಿಶೇಷ ಸಾಗಬಹುದು.

ದಾನ ಕೊಡುವುದಾಗಲೀ ತ್ಯಾಗ ಮಾಡುವುದಾಗಲೀ ಒಂದು ಉತ್ತಮ ಉದ್ದೇಶಕ್ಕಾಗಿ, ಉನ್ನತ ಧ್ಯೇಯಕ್ಕಾಗಿ ನಿಃಸ್ವಾರ್ಥ ನೆಲೆಯಲ್ಲಿ ನಡೆಯುವುದಾಗುತ್ತದೆ.

ಕೊಟ್ಟದ್ದು ತಾನಲ್ಲ ಎಂಬ ಭಾವವಿದ್ದಾಗ ದಾನ. ತನ್ನದಲ್ಲ ಎಂಬ ಭಾವವಿದ್ದಾಗ ಅರ್ಪಣೆ. ಎಲ್ಲ ರೀತಿಯಲ್ಲೂ ಸ್ವನಿರಾಕರಣೆಯಾದಾಗ ತ್ಯಾಗ. ತ್ಯಾಗದಿಂದಷ್ಟೆ ಅಮೃತತ್ವವನ್ನು ಪಡೆಯಬಹುದೆಂದಲ್ಲವೆ ನಮ್ಮ ವಾಙ್ಮಯ ಉದ್ಘೋಷಿಸುವುದು!

Leave a Reply

Your email address will not be published.

This site uses Akismet to reduce spam. Learn how your comment data is processed.