10 ಜನವರಿ 2020, ಬೆಂಗಳೂರು: ಆದಿಕವಿ ವಾಲ್ಮೀಕಿ  ವಿರಚಿತ ರಾಮಾಯಣದ ಅಖಂಡ ಪಾರಾಯಣ ಸಂಸ್ಕೃತ ಭಾರತಿಯ ಕಾರ್ಯಾಲಯ ಅಕ್ಷರಂನಲ್ಲಿ ಇಂದು ಆರಂಭವಾಯಿತು. ಶತಾವಧಾನಿ ಡಾ. ಆರ್ ಗಣೇಶರವರು, ರಾಮಾಯಣದ ಮೊದಲ ಶ್ಲೋಕವಾದ “ತಪಃಸ್ವಾಧ್ಯಾಯ ನಿರತಂ” ಪಠಿಸಿ ಪಾರಾಯಣವನ್ನು ಉದ್ಘಾಟಿಸಿದರು.

ಬೆಂಗಳೂರಿನ ಇತಿಹಾಸದಲ್ಲಿ ಈ ರೀತಿಯ ಅಖಂಡ ಪಾರಾಯಣ ಕಾರ್ಯಕ್ರಮ ಪ್ರಾಯಃ ಪ್ರಥಮ ಬಾರಿ ನಡೆಯುತ್ತಿದೆ. ಹಗಲು-ರಾತ್ರಿ ಭೇದವಿಲ್ಲದೆ ನಿರಂತರವಾಗಿ 56 ಗಂಟೆಗಳ ಕಾಲ ಪಾರಾಯಣ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ಜಾತಿ-ಮತಭೇದವಿಲ್ಲದೆ ಆಗಮಿಸಿ ಪಾರಾಯಣ ಮಾಡಲಿದ್ದಾರೆ. ನೆರೆಯ ರಾಜ್ಯಗಳಿಂದಲೂ ರಾಮಾಯಣ ಆಸಕ್ತರು ಭಾಗವಹಿಸಿದ್ದಾರೆ. ಇದರಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ, ಜಯತೀರ್ಥ ವಿದ್ಯಾಪೀಠ, ಜನಸೇವಾ ವಿದ್ಯಾಕೇಂದ್ರ, ಪೂರ್ಣಪ್ರಮತಿ ಸಂಸ್ಥೆ ಮೊದಲಾದ ಹತ್ತಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕೈಜೋಡಿಸಿವೆ.
ವಾಲ್ಮೀಕಿ ರಾಮಾಯಣದ ಪಾರಾಯಣ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಕೆಲವರು ಸುಂದರಕಾಂಡವನ್ನು ಮಾತ್ರ ಓದಿದರೆ, ಇನ್ನೂ ಕೆಲವರು ಪಟ್ಟಾಭಿಷೇಕದವರೆಗೆ ಮಾತ್ರ ಒಂಬತ್ತು ದಿನಗಳಲ್ಲಿ ಪಾರಾಯಣ ಮಾಡುತ್ತಾರೆ.

ಈ ಕಾರ್ಯಕ್ರಮದ ವಿಶೇಷತೆಯೆಂದರೆ ಉತ್ತರ ಕಾಂಡವನ್ನು ಒಳಗೊಂಡಂತೆ ಅಖಂಡ ರಾಮಾಯಣದ 24000 ಶ್ಲೋಕಗಳನ್ನು ಮೂರು ದಿನಗಳಲ್ಲಿ ಪಠಿಸಲಿದ್ದಾರೆ. ತಲಾ 20 ಜನರ ಒಂದು ತಂಡ, ಎರಡು ಗಂಟೆಗಳಕಾಲ ಪಾರಾಯಣ ಮಾಡಲಿದೆ. ಆನಂತರ ಮತ್ತೊಂದು ತಂಡ ಮುಂದಿನ ಕಾಂಡಗಳನ್ನು ಪಡಿಸಲಿದೆ. ಇದರಲ್ಲಿ ಸಾರ್ವಜನಿಕರು ಯಾರೇ ಆದರೂ ಕೂಡ ಉಪಸ್ಥಿತರಿದ್ದರು, ಪಾರಾಯಣದಲ್ಲಿ ಭಾಗವಹಿಸಬಹುದು. ಈ ಕಾರ್ಯಕ್ರಮದಲ್ಲಿ 40 ತಂಡಗಳು ಮತ್ತು ಲಿಂಗ-ಜಾತಿ- ವಯ ಭೇದವಿಲ್ಲದೆ ಸಾವಿರಕ್ಕೂ ಅಧಿಕ ಜನ ಭಾಗವಹಿಸಲು ಹೆಸರು ನೋಂದಾಯಿಸಿದ್ದಾರೆ.

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಪ್ರಾರಂಭವಾದ ಪಾರಾಯಣದ ಮಹಾಮಂಗಲ
ಭಾನುವಾರ 6:00 ಗಂಟೆಗೆ ನಡೆಯಲಿದೆ.
ಪ್ರಥಮ ದಿನದ ಕಾರ್ಯಕ್ರಮದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ ಮತ್ತು ಖ್ಯಾತ ಸಾಹಿತಿ ಡಾ. ಜನಾರ್ಧನ್ ಹೆಗಡೆ, ಸಂಸ್ಕೃತ ಭಾರತೀಯ ಅಖಿಲಭಾರತ ಸಂಘಟನೆ ಮಂತ್ರಿ ಶ್ರೀ ದಿನೇಶ್ ಕಾಮತ್, ಸಂಸ್ಕೃತ ಭಾರತಿ ಅಖಿಲ ಭಾರತ ಕಾರ್ಯದರ್ಶಿ ಶ್ರೀ ಸತ್ಯನಾರಾಯಣ, ಸಂಭಾಷಣ ಸಂದೇಶ ಸಂಸ್ಕೃತ ಮಾಸಪತ್ರಿಕೆ ಸಹಸಂಪಾದಕ ಡಾ. ಸಚಿನ್ ಕಠಾಳೆ ಮೊದಲಾದ ಗಣ್ಯರು ಭಾಗವಹಿಸಿದ್ದರು.

ಸಂಸ್ಕೃತ ಸಂಭಾಷಣ ಸಂದೇಶದ ಸಂಪಾದಕರಾದ ಡಾ. ಜನಾರ್ದನ ಹೆಗಡೆ, ಸಹ ಸಂಪಾದಕರಾದ ಸಚಿನ್ ಕಠಾಳೆ ಮೊದಲ ಸಾಲಿನಲ್ಲಿ ಪಠಿಸುತ್ತಿರುವುದು

Leave a Reply

Your email address will not be published.

This site uses Akismet to reduce spam. Learn how your comment data is processed.