ಸಂಘ ಕಾರ್ಯ ಹಾಗೂ ಗಾಂಧೀಜಿಯವರ ನಡುವಿನ ಸಂಬಂಧ ಸಮಗ್ರವಾಗಿ ಅರಿತಿಲ್ಲವಾದರೆ ಟೀಕಿಸುವುದು ಏಕೆ?

– ಆರೆಸ್ಸೆಸ್‍ನ ಮಾನ್ಯ ಸಹಸರಕಾರ್ಯವಾಹರಾದ ಡಾ. ಮನಮೋಹನ್ ವೈದ್ಯರ ಲೇಖನ

ಚುನಾವಣಾ ರಣ ಕಹಳೆ ಮೂಡಿದೆ. ರಾಜಕೀಯ ನಾಯಕರು ತಂತಮ್ಮ ಪಕ್ಷಗಳ ಸಂಸ್ಕೃತಿ, ಪರಂಪರೆಗನುಗುಣವಾಗಿ ಪ್ರಚಾರ ಭಾಷಣಗಳಲ್ಲಿ ತೊಡಗಿದ್ದಾರೆ. ಇಂತಹ ಪ್ರಚಾರ ಭಾಷಣವೊಂದರಲ್ಲಿ ಇತ್ತೀಚೆಗೆ ನಾಯಕರೊಬ್ಬರು ಈ ಚುನಾವಣೆಯ ಮತ ಚಲಾವಣೆ ಗಾಂಧೀ ಹಾಗೂ ಗೋಡ್ಸೆ ನಡುವಿನ ಆಯ್ಕೆಯೆಂದು ಬಣ್ಣಿಸಿದ್ದಾರೆ. ಗಾಂಧೀಜಿಯ ನೈಜ ಅನುಯಾಯಿಗಳು ಅವರ ಆಚರಣೆಯ ಬಗ್ಗೆ ಗಮನ ಹರಿಸುತ್ತಾರಷ್ಟೇ ಅಲ್ಲದೇ, ಗೋಡ್ಸೆಯ ಹೆಸರನ್ನೂ ಪ್ರಸ್ತಾಪಿಸುವುದಿಲ್ಲ. ಸಂಘದಲ್ಲಿಯೂ ಈವರೆಗೆ ಗಾಂಧೀಜಿಯ ಕುರಿತಾದ ಚರ್ಚೆಗಳು ಸಾಕಷ್ಟು ನಡೆದಿವೆ, ಅವುಗಳಲ್ಲಿ ಪಾಲ್ಗೊಂಡಿದ್ದೇನೆ ಕೂಡ. ಆದರೆ ಅಲ್ಲೆಲ್ಲೂ ಗೋಡ್ಸೆಯ ಚರ್ಚೆ ನಡೆಯುವುದಿಲ್ಲ. ಮಾಹಾತ್ಮ ಗಾಂಧೀಯವರ ಜೀವನ, ಆದರ್ಶ, ಆಚಾರ-ವಿಚಾರಗಳಿಂದ ದೂರ ಉಳಿದುಕೊಂಡು, ಸಣ್ಣತನದಿಂದ ಕೂಡಿದ ತಮ್ಮ ರಾಜಕೀಯ ಲಾಭಕ್ಕಾಗಿ ಅವಿಧೇಯರಾಗಿ ಗಾಂಧೀಜಿಯವರ ಹೆಸರನ್ನು ಬಳಸಿಕೊಳ್ಳುವುದು ವಿಪರ್ಯಾಸ. ಸಂಘದ ಬಗ್ಗೆ ಸತ್ಯವನ್ನರಿಯದೇ ಮಾತನಾಡುವಂತೆ, ಗಾಂಧೀಜಿ ಜೊತೆಗಿನ ಆರೆಸ್ಸೆಸ್‍ನ ಸಂಬಂಧದ ಬಗ್ಗೆ ಕಿಂಚಿತ್ತೂ ತಿಳಿದುಕೊಳ್ಳದೆ, ಉಪಲಬ್ಧ ಮಾಹಿತಿಯನ್ನು ಪರಿಗಣೆಸದೇ ತರ್ಕ ಮಂಡಿಸುವುದು ತಪ್ಪು. ತಥಾಕಥಿತ ವಿದ್ವಾಂಸರೂ ಈ ಬಗ್ಗೆ ಹೆಚ್ಚು ಶೋಧನೆ ನಡೆಸದೆ ತಮ್ಮ ಲೇಖನಗಳನ್ನು ಸಿದ್ಧಪಡಿಸುತ್ತಾರೆ. ಯಾವುದೋ ಒಂದು ಸಿದ್ಧಾಂತದ ದೃಷ್ಟಿಕೋನದಿಂದ ಬರೆದ ಲೇಖನಗಳೇ ಇವರುಗಳ ಬರವಣಿಗೆಗೆ ಆಕರ. ಆದರೆ ಇಂತಹ ಹಲವು ಮೂಲಗಳಿಂದ ಆಯ್ದು ಬರೆದ/ಮಾತನಡಿದ ವಿಷಯಗಳು ಸತ್ಯಕ್ಕೆ ದೂರವಾಗಿವೆ.

ಆದ್ದರಿಂದ ಗಾಂಧೀಜಿ ಹಾಗು ಆರೆಸ್ಸೆಸ್ ನ ಸಂಬಂಧದ ಬಗ್ಗೆ ಇರುವ ಮಾಹಿತಿಯನ್ನು ಆಮೂಲಾಗ್ರವಾಗಿ ಪರಿಗಣಿಸುವುದು ಒಳಿತು. ಮೂಲಭೂತವಾದಿ ಹಾಗೂ ಜಿಹಾದಿ ಶಕ್ತಿಗಳ ಬಗ್ಗೆ ಗಾಂಧೀಜಿಯವರ ಮೃದು ಧೋರಣೆಯನ್ನು ಸಂಘ ಒಪ್ಪದಿದ್ದರೂ ಮಹಾತ್ಮ ಗಾಂಧೀಜಿಯವರ ಚರಕಾ, ಸತ್ಯಾಗ್ರಹದಂತಹ ಪುಟ್ಟ ಆದರೆ ಪರಿಣಾಮಕಾರಿ ಅಸ್ತ್ರಗಳನ್ನು, ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಜನರೆಲ್ಲರನ್ನೂ ಒಗ್ಗೂಡಿಸುವ ಮಹತ್ಕಾರ್ಯವನ್ನು ಆರೆಸ್ಸೆಸ್ ಸ್ಮರಿಸುತ್ತದಷ್ಟೇ ಅಲ್ಲದೇ ಬಹುವಾಗಿ ಆದರಿಸುತ್ತದೆ.

ಗ್ರಾಮ ಸ್ವರಾಜ್ಯ, ಸ್ವದೇಶಿ, ಗೋ ಸಂರಕ್ಷಣೆ, ಅಸ್ಪೃಷ್ಯತೆಯಂತಹ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಗಾಂಧೀಜಿ ತೋರಿದ ಆಸ್ಥೆ, ಶ್ರದ್ಧೆ, ಹಾಗೂ ಅವುಗಳನ್ನು ಮುನ್ನಡೆಸಬೇಕೆಂಬ ತಮ್ಮ ಆಗ್ರಹ ಸನಾತನ ಹಿಂದೂ ಚಿಂತನೆಯ ಬಗ್ಗೆ ನಡೆಸಿದ ದೃಢ ಹಾಗೂ ಅವಿರತ ಯತ್ನವನ್ನೂ ಯಾರೂ ಅಲ್ಲಗಳೆಯುವಂತಿಲ್ಲ. ಗಾಂಧೀಜಿಯವರ ಮೌಲ್ಯಾಧಾರಿತ ಜೀವನದಿಂದ ಪ್ರೇರಣೆ ಪಡೆದು ಅಂದಿನ ಯುವಜನರು ದೇಶ ಸೇವೆಗಾಗಿ ಜೀವನವನ್ನೇ ಮುಡಿಪಾಗಿಡಬೇಕೆಂದು ಮುಂದೆ ಬಂದರು. ಆರೆಸ್ಸೆಸ್ ನ ಸಂಸ್ಥಾಪಕರಾದ ಡಾ. ಹೆಡ್ಗೇವಾರ್ ೧೯೨೧ ರ ಅಸಹಕಾರ ಚಳುವಳಿ ಹಾಗೂ ೧೯೩೦ರ ಕಾನೂನು ಭಂಗ (ನಾಗರಿಕ ಅಸಹಕಾರ) ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೀಗೆ ಪಾಲ್ಗೊಂಡಿದ್ದಕ್ಕೆ ಎರಡು ಬಾರಿ ಜೈಲುವಾಸವನ್ನು ಅನುಭವಿಸಿದರು – ೧೯ ಆಗಸ್ಟ್ ನಿಂದ ೧೨ ಜುಲೈ ಹಾಗೂ ೨೧ ಜುಲೈ ೧೯೩೦ರಿಂದ ೧೪ ಫೆಬ್ರವರಿ ೧೯೩೧ರ ವರೆಗೆ.

೧೮ ಮಾರ್ಚ್ ೧೯೨೨ರಲ್ಲಿ ಗಾಂಧೀಜಿಯವರನ್ನು ೬ ವರ್ಷಗಳ ಕಾಲ ಜೈಲಿನಲ್ಲಿ ಬಂಧಿಸಲಾಯಿತು. ಪ್ರತಿ ತಿಂಗಳ ೧೮ರಂದು ಗಾಂಧೀ ದಿವಸ ಎಂದು ಆಚರಿಸಲು ದೇಶವೇ ಮುಂದಾಯಿತು. ಗಾಂಧೀಜಿಯವರು ಸೆರೆವಾಸ ಅನುಭವಿಸುತ್ತಿದ್ದಾಗ ತಮ್ಮ ಅನುಯಾಯಿಗಳು ದೇಶಭಕ್ತಿಯ ಹೆಸರಿನಲ್ಲಿ ಸ್ವಹಿತಾಸಕ್ತಿಯನ್ನು ಮೆರೆಯುತ್ತಿದ್ದರು. ಇದರ ವಿರುದ್ಧ ನಿಂತ ಡಾಕ್ಟರ್ ಜೀ ೧೮ ಅಕ್ಟೋಬರ್ ೧೯೨೨ರಂದು ಹೀಗೆಂದು ನುಡಿದಿದ್ದರು- “ಮಂಗಳಕರ ದಿನವಾದ ಇಂದು, ಮಹಾತ್ಮ ಗಾಂಧಿಯಂತಹ ಉದಾತ್ತ ಚಿಂತನೆಯ ಮನುಷ್ಯನ ಮೌಲ್ಯ ಹಾಗೂ ಗುಣಗಳನ್ನು ನೆನಪಿಸಿಕೊಂಡು ಆಚರಿಸುವ ದಿನವಾಗಬೇಕು. ಅವರ ಅನುಯಾಯಿಗಳೆಂದು ಕರೆದುಕೊಳ್ಳುವವರಿಗೆ ಹೆಚ್ಚಿನ ಜವಾಬ್ದಾರಿ ಈ ನಿಟ್ಟಿನಲ್ಲಿದೆ”

೧೯೩೪ರಲ್ಲಿ ಗಾಂಧೀಜಿ ಜಮನ್‍ಲಾಲ್ ಬಜಾಜ್ ರ ಮನೆಯಲ್ಲಿ ತಂಗಿದ್ದರು. ಸಂಘದ ಶಿಬಿರ ಹತ್ತಿರದಲ್ಲೇ ಏರ್ಪಟ್ಟಿತ್ತು. ಅಲ್ಲಿಗೆ ಆಗಮಿಸಿ ಸ್ವಯಂಸೇವಕರ ಜೊತೆ ಸಂವಾದವನ್ನು ಗಾಂಧೀಜಿ ನಡೆಸಿದ್ದರು. ಸ್ವಯಂಸೇವಕರಲ್ಲಿ ಅನುಸೂಚಿತ ಜಾತಿಯವರು ಇರುವುದನ್ನು ಹಾಗೂ ಎಲ್ಲರೂ ಸೋದರಭಾವದಿಂದ ಬೆರೆಯುವುದನ್ನು ಕಂಡು ಗಾಂಧೀಜಿ ಸಂತಸ ವ್ಯಕ್ತಪಡಿಸಿದ್ದರು. ಸ್ವಾತಂತ್ರ್ಯಾನಂತರದಲ್ಲಿ ಗಾಂಧೀಜಿ ವಾಸಿಸುತ್ತಿದ್ದ ಭಂಗಿ ಕಾಲೋನಿಯ ತಮ್ಮ ನಿವಾಸದ ಎದುರು ಸಂಘದ ಶಾಖೆಯೊಂದು ನಡೆಯುತ್ತಿತ್ತು. ಗಾಂಧೀಜಿಯವರ ಅಪೇಕ್ಷೆಯಂತೆ ಮಂಡಲ ಸ್ಥರದ ಕಾರ್ಯಕರ್ತರನ್ನೊಳಗೊಂಡ ೫೦೦ಕ್ಕೂ ಹೆಚ್ಚು ಸ್ವಯಂಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ತಮ್ಮ ಭಾಷಣದಲ್ಲಿ “ಹಿಂದೊಮ್ಮೆ ವಾರ್ಧಾದಲ್ಲಿನ ಆರೆಸ್ಸೆಸ್ ನ ಶಿಬಿರವೊಂದಕ್ಕೆ ನಾನು ಭೇಟಿ ನೀಡಿದ್ದೆ. ಆಗ ಡಾ. ಹೆಡ್ಗೇವಾರರೂ ನಮ್ಮ ಜೊತೆಗಿದ್ದರು. ಶ್ರೀ ಜಮನ್‍ಲಾಲ್ ಬಜಾಜ್ ನನ್ನನ್ನು ಅಲ್ಲಿಗೆ ಕರೆದೊಯ್ದಿದ್ದರು. ಶಿಬಿರದಲ್ಲಿನ ಸರಳತೆ, ಶಿಸ್ತು, ಬಂಧುಗಳಲ್ಲಿ ಅಸ್ಪೃಷ್ಯತೆಯ ಭಾವನೆ ಇಲ್ಲದಿರುವುದನ್ನು ಕಂಡು ನನಗೆ ಸಂತಸವುಂಟಾಗಿತ್ತು. ಇಂದು ಸಂಘವು ಬಹುವಾಗಿ ಬೆಳೆದಿದೆ. ಯಾವುದೇ ಸಂಘಟನೆಯು ಸೇವಾ ಮನೋಭಾವ ಹಾಗೂ ತ್ಯಾಗದ ಆದರ್ಶಗಳನ್ನು ಮೈಗೂಡಿಸಿಕೊಂಡಿರುತ್ತವೆಯೋ ಅಂತಹ ಸಂಘಟನೆ ಶಕ್ತಿಯಲ್ಲೂ ಬೆಳೆದಿರುತ್ತದೆ” ಎಂದು ನುಡಿದಿದ್ದರು (ಕಂಪ್ಲೀಟ್ ವರ್ಕ್ಸ್ ಆಫ್ ಗಾಂಧೀ ಪುಸ್ತಕದಲ್ಲಿ ೧೯೩-೧೯೪ ಪುಟದಲ್ಲಿ ಪ್ರಕಟಿತ)

೩೦ ಜನವರಿ ೧೯೪೮ರಲ್ಲಿ ಗಾಂಧೀಜಿಯವರ ಹತ್ಯೆಯಾದಾಗ, ಅಂದಿನ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರು ಸಂತಾಪಸೂಚಕ ಪತ್ರವನ್ನು ಟೆಲಿಗ್ರಾಮ್ ಮುಖಾಂತರ ಶ್ರೀ ದೇವದಾಸ ಗಾಂಧೀ, ಪಂಡಿತ ಜವಹರಲಾಲ್ ನೆಹರು, ಶ್ರೀ ಸರ್ದಾರ್ ವಲ್ಲಭಭಾಯಿ ಪಟೇಲರಿಗೆ ಕಳುಹಿಸಿದ್ದರು. ಟೆಲಿಗ್ರಾಮ್ ನಲ್ಲಿ “ಕೄರ ದಾಳಿಯ ಸುದ್ದಿ ಹಾಗೂ ಮಹಾನ್ ವ್ಯಕ್ತಿಯ ದುರಂತದ ಸಾವಿನಿಂದ ದಿಗ್ಭ್ರಾಂತಗೊಂದಿದೆ. ದೇಶಕ್ಕಾದ ನಷ್ಟ ಅಪರಿಮಿತ. ಈ ಸಾವಿನಿಂದ ಉಂಟಾಗುವ ವ್ಯಾಕುಲತೆಯಿಂದ ಹೊರಬರಲು, ಹೆಚ್ಚಿನ ಜವಾಬ್ದಾರಿ ನಮ್ಮ ಮೇಲಿರುವಾಗ ಅದನ್ನು ನಮ್ಮ ಭುಜಗಳ ಮೇಲೆ ಹೊರಲು ಸಹಾಯವನ್ನು ಭಗವಂತ ನೀಡುವಂತಾಗಲಿ.” ಎಂದಿತ್ತು.
ಸ್ವಯಂಸೇವಕರಿಗೆ ೧೩ ದಿನಗಳ ಕಾಲ ಸಂಘದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಕರೆ ನೀಡಿ, ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ನಾಗಪುರಕ್ಕೆ ಶ್ರೀ ಗುರೂಜಿ ವಾಪಸ್ಸಾದರು. ೩೧ ಜನವರಿ ಯಂದು ಅಂದಿನ ಪ್ರಧಾನಿ ಹಾಗು ಗೃಹ ಮಂತ್ರಿಗಳಿಗೆ ಗುರೂಜಿ ಪತ್ರವೊಂದನ್ನು ಬರೆದರು. ಅವರು ಬರೆದದ್ದು – “ನಿನ್ನೆ ಮದ್ರಾಸಿನಲ್ಲಿದ್ದಾಗ ಭಾವಶೂನ್ಯ, ವಿಕೃತನೊಬ್ಬ ಭಯಂಕರ ರೀತಿಯಲ್ಲಿ ಪೂಜ್ಯ ಮಹಾತ್ಮಜೀಯವರ ಜೀವವನ್ನು ಕೊನೆಗೊಳಿಸಿ ದುಷ್ಟ ಕ್ರಿಯೆಯೊಂದನ್ನು ಎಸಗಿದ್ದಾನೆ. ಈ ಅಸಹನೀಯ ಕೃತ್ಯವು ನಮ್ಮ ಸಮಾಜವನ್ನು ನೋಡುವ ಜಾಗತಿಕ ಕಣ್ಣುಗಳಲ್ಲಿ ಒಂದು ಅಳಿಸಲಾಗದ ಕಲೆಯಾಗಿದೆ” ಈ ವಿಷಯದ ಸಂಪೂರ್ಣ ಪತ್ರವ್ಯವಹಾರವು ’ಶ್ರೀ ಗುರೂಜಿ ಸಮಗ್ರ” ಪುಸ್ತಕದಲ್ಲಿ ದಾಖಲಾಗಿದೆ.

ಗಾಂಧೀಜಿಯವರ ಜನ್ಮ ಶತಾಬ್ಧಿಯ ಅಂಗವಾಗಿ ಸಾಂಗ್ಲಿಯಲ್ಲಿ ಅವರ ಪ್ರತಿಮೆಯ ಅನಾವರಣವನ್ನು ಶ್ರೀ ಗುರೂಜಿಯವರೇ ನೆರವೇರಿಸಿದರು. ತಮ್ಮ ಭಾಷಣದಲ್ಲಿ, “ಗಾಂಧೀಜಿಯವರ ೧೦೦ ವರ್ಷದ ಜನ್ಮ ದಿನವನ್ನು ಆಚರಿಸಲು ನಾವೆಲ್ಲರೂ ಸೇರಿದ್ದೇವೆ. ನೂರು ವರ್ಷಗಳ ಕೆಳಗೆ ಸೌರಾಷ್ಟ್ರದಲ್ಲಿ ಒಬ್ಬ ಬಾಲಕ ಜನಿಸಿದ. ಅದೇ ದಿನವೇ ನೂರಾರು ಮಕ್ಕಳು ಹುಟ್ಟಿರಲಿಕ್ಕು ಸಾಕು. ಮಹಾತ್ಮ ಗಾಂಧೀ ಎಲ್ಲರಂತೆ ಸಾಮಾನ್ಯ ಮನುಷ್ಯನಾಗಿ ಜನಿಸಿದವರು. ತಾವು ನಡೆದ ದಾರಿ, ನಿಂತ ಆದರ್ಶಗಳಿಂದಾಗಿ ಮಹಾತ್ಮರಾಗಿ ಜನರ ಪ್ರೀತಿಗೆ ಪಾತ್ರರಾದರು. ನಮ್ಮ ಜೀವನವನ್ನು ಅವರು ನಡೆಸಿದಂತೆಯೇ ನಡೆಸಬೇಕು ಹಾಗೂ ಸಾಧ್ಯವಾದಷ್ಟು ರೀತಿಯಲ್ಲಿ ಅವರನ್ನು ಅನುಕರಿಸುವುದನ್ನು ಪ್ರಯತ್ನಿಸಬೇಕು. ಮಹಾತ್ಮ ಗಾಂಧಿ ಧೂಳಿನಿಂದ ಚಿನ್ನವನ್ನು ತೆಗೆದವರು. ಸಾಮಾನ್ಯ ಮನುಷ್ಯರನ್ನು ಅಸಾಮಾನ್ಯರನ್ನಾಗಿ ಪರಿವರ್ತಿಸಿದವರು. ಇದೇ ಕಾರಣದಿಂದಾಗಿ ಬ್ರಿಟಿಷರು ದೇಶವನ್ನು ಬಿಟ್ಟು ಓಡಿದ್ದು.” ಎಂದರು. ಮುಂದೆ ಮಹಾತ್ಮ ಜೀ ಯವರ ಮಾತುಗಳನ್ನು ಆಡುತ್ತಾ “ನಾನೊಬ್ಬ ನಿಷ್ಠಾವಂತ ಹಿಂದೂ. ಆದ್ದರಿಂದ ನಾನು ಜೀವನದ ಅಭಿವ್ಯಕ್ತಿಯನ್ನೂ ಮನುಷ್ಯರನ್ನಲ್ಲದೇ ಎಲ್ಲವನ್ನೂ ಪ್ರೀತಿಸುತ್ತೇನೆ” ಎಂದರು. ಗುರೂಜಿ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದಲ್ಲಿ, ರಾಜಕೀಯದಲ್ಲಿ ಸತ್ಯ, ಅಹಿಂಸೆಗೆ ಪ್ರಾಮುಖ್ಯತೆ ದೊರಕಿಸಿಕೊಂಡಿದ್ದು ಹಿಂದುತ್ವದಿಂದಲೇ ಎಂದು ಹೇಳಿದ್ದರು.

“ದೇಶಕ್ಕೆ ರಾಜಕೀಯ ಹಾಗೂ ಆರ್ಥಿಕ ಸ್ವಾತಂತ್ರ್ಯದ ಅಗತ್ಯವಿದೆ. ಧಾರ್ಮಿಕ ಸ್ವಾತಂತ್ರ್ಯದ ಅಗತ್ಯವೂ ಇದೆ. ಎಲ್ಲಾ ಧರ್ಮ, ಜಾತಿ, ಉಪಜಾತಿಯ ಜನರೂ ಸಾಮರಸ್ಯದಿಂದ ಬಾಳುವಂತಾಗಬೇಕು. ನಮಗೆ ಸ್ವಾತಂತ್ರ್ಯ ದೊರೆಯಬೇಕಿರುವುದು ಪಾಶ್ಚಾತ್ಯ ಚಿಂತನೆಗಳಿಂದ ಎಂದು ಪ್ರಬಲವಾಗಿ ಗಾಂಧೀಜಿ ನಂಬಿದ್ದರು ಹಾಗೂ ಅದನ್ನೇ ಪ್ರತಿಪಾದಿಸುತ್ತಿದ್ದರು. ನಾನು ಗಾಂಧೀಜಿಯವರೊಂದಿಗೆ ಹಲವಾರು ಬಾರಿ ಒಡನಾಡಿದ್ದೇನೆ. ಚರ್ಚಿಸಿದ್ದೇನೆ. ನಾನೀಗ ಮಾತನಾಡುತ್ತಿರುವುದು ಗಾಂಧೀಜಿಯವರನ್ನು ಸಮಗ್ರವಾಗಿ ಅರ್ಥೈಸಿಕೊಂಡ ಬಳಿಕವೇ. ಆದಕಾರಣವೇ ನನಗೆ ಅವರ ಬಗ್ಗೆ ಅಪಾರ ಶ್ರದ್ಧೆ, ಗೌರವಾದರಗಳು ಇವೆ” ಎಂದು ಗುರೂಜಿ ಹೇಳಿದ್ದರು. “ಹಿಂದುತ್ವದ ಭವಿಷ್ಯದ ಕುರಿತಾಗಿ ಗಾಂಧೀಜಿ ಹೇಳಿದ್ದಿಷ್ಟು- “ಹಿಂದುತ್ವವೆಂದರೆ, ಸ್ಥಗಿತಗೊಳ್ಳುವಂಥದ್ದಲ್ಲ, ಬದಲಾಗಿ ನಿರಂತರವಾಗಿ ಬೆಳೆಯುವಂಥದ್ದು. ಸತ್ಯದ ಮಾರ್ಗವನ್ನು ತೋರಿಸುವಂಥದ್ದು. ಇಂದು ಹಿಂದೂ ಧರ್ಮ ಆಯಾಸಗೊಂಡಂತಾಗಿದೆ. ಮುಂದೆ ಹೋಗುವುದು ಕಷ್ಟವೆಂಬಂತೆ ತೋರುತ್ತಿದೆ. ಆದರೆ ಒಂದು ದಿನ ಈ ಆಯಾಸ ಮುಗಿದ ಬಳಿಕ ಹಿಂದುತ್ವ ಹಿಂದೆಂದೂ ಕಂಡದ್ದಕ್ಕಿಂತ ಉಜ್ವಲವಾಗಿ ಪ್ರಕಾಶಿಸತೊಡಗುತ್ತದೆ. ಇಡಿಯ ವಿಶ್ವವಕ್ಕೆ ಬೆಳಕು ನೀಡುವಂತಹ ಧರ್ಮ – ಹಿಂದುತ್ವವಾಗುತ್ತದೆ. ಮಹಾತ್ಮ ಗಾಂಧಿಯವರ ಈ ಭವಿಷ್ಯವಾಣಿಯನ್ನು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ.” ಎಂದು ಗುರೂಜಿ ತಮ್ಮ ಭಾಷಣದಲ್ಲಿ ತಿಳಿಸಿದ್ದರು

ನಮ್ಮಿಬ್ಬರ ಕೊನೆಯ ಬೇಟಿ ೧೯೪೭ರಲ್ಲಿ ನಡೆದದ್ದು. ದೆಹಲಿಯಲ್ಲಿ ಸ್ವಾತಂತ್ರ್ಯದ ನಂತರ ದಂಗೆಗಳು ಆರಂಭಗೊಂಡವು. ಜೀವನದುದ್ದಕ್ಕೂ ಅಹಿಂಸೆಯ ಮಾರ್ಗವನ್ನನುಸರಿಸಿದವರೂ ಕೄರ, ನಿರ್ದಯಿ, ರಾಕ್ಷಸೀ ಪ್ರವೃತ್ತಿಯವರಾದರು. ಶಾಂತಿಯ ಮರುಸ್ಥಾಪನೆಗಾಗಿ ನಾನೂ ನನ್ನ ಕೆಲಸ ಮಾಡುತ್ತಿದ್ದೆ. ಆ ಸಂದರ್ಭದಲ್ಲಿ ಮಹಾತ್ಮ ಗಾಂಧಿಯವರನ್ನು ಭೇಟಿಯಾದಾಗ, ಅವರು ಹೇಳಿದ್ದರು – “ಏನು ನಡೆಯುತ್ತಿದೆಯೆಂದು ನೋಡಿದಿರಾ?” ಅದಕ್ಕೆ ಉತ್ತರವಾಗಿ, ನಾನು, “ಇದು ದುರ್ವಿಧಿಯ ಸಂಗತಿ. ಬ್ರಿಟಿಷರು ತಾವು ಭಾರತ ಬಿಟ್ಟು ಹೊರಡುವಾಗ ನೀವೆಲ್ಲರೂ ಒಬ್ಬರನ್ನೊಬ್ಬರು ಕೊಲ್ಲುತ್ತೀರಿ ಎಂದು ಹೇಳಿದ್ದರು. ಅಂತೆಯೇ ನಡೆಯುತ್ತಿದೆ. ಈ ಘಟನೆಗಳಿಂದಾಗಿ ವಿಶ್ವದ ಕಣ್ಣುಗಳಲ್ಲಿ ನಮ್ಮ ದೇಶಕ್ಕೆ ಅವಮಾನವಾಗುತ್ತಿದೆ.” ಎಂದು ಹೇಳಿದ್ದೆ. ಅಂದಿನ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿ ಮಾತನಾಡುತ್ತ ನನ್ನ ಹೆಸರನ್ನು ಉಲ್ಲೇಖಿಸಿ ಗರ್ವದಿಂದ ಮಾತನಾಡಿದ್ದರು.

ಮಹಾತ್ಮ ಗಾಂಧಿಯವರ ಚಿಂತನೆಗಳನ್ನು ರೂಢಿಸಿಕೊಂಡರೆ ಹಿಂದೂ ಧರ್ಮದ ಪುನರ್ಜಾಗೃತಿ ಸಾಧ್ಯ. ಧರ್ಮದ ವಿನಾ ಮಾನವ ಸಮಾಜವು ಪ್ರಾಣಿಗಳನ್ನೊಳಗೊಂಡ, ಒಬ್ಬರ ವಿನಾಶಕ್ಕೆ ಇನ್ನೊಬ್ಬ ಹೊಂಚು ಹಾಕುವಂತಿರುತ್ತದೆ. ಹಿಂದೂ ಧರ್ಮದ ಜಾಗೃತಿಯಿಂದಾಗಿ ಪ್ರತಿಯೊಬ್ಬನೂ ಸದ್ಗುಣಗಳನ್ನು ಆಚರಿಸಬಲ್ಲ. ವಿಶ್ವವು ನಮ್ಮನ್ನು ಗಮನಿಸುತ್ತಿರುವಾಗ, ನಾವು ಒಂದು ಆದರ್ಶ ಸಮಾಜವಾಗಿ, ಎಲ್ಲರನ್ನೂ ಪ್ರೀತಿಸುವ, ಸಾಮರಸ್ಯದಿಂದ ಕೂಡಿದ ದೇಶವಾಗಿ ಹೊರಹೊಮ್ಮಬೇಕು. ಆದ್ದರಿಂದಲೇ ಗಾಂಧೀಜಿಯವರನ್ನು ಪೂಜ್ಯ ಭಾವದಿಂದ ನೋಡಬೇಕು ಹಾಗೂ ಅನುಸರಿಸಬೇಕು.

ಈ ಭಾಷಣದ ಪೂರ್ಣ ಪಾಠ ’ಗುರೂಜಿ ಸಮಗ್ರ’ ಪುಸ್ತಕದಲ್ಲಿ ದಾಖಲಾಗಿದೆ. (ಸಂಪುಟ ೧, ಪುಟ – ೨೦೮-೨೨೧)

೧೯೮೭-೯೦ರಲ್ಲಿ ವಡೋದ್ರಾದಲ್ಲಿ ನಾನು ಪ್ರಚಾರಕನಾಗಿದ್ದಾಗ ಶ್ರೀ ಯಾದವರಾವ್ ಜೋಶಿಯವರ ಭಾಷಣವನ್ನು ಕೇಳಿದ ನೆನಪಿದೆ. ಗಾಂಧೀಜಿಯವರ ಬಗ್ಗೆ ಭಾವುಕವಾಗಿ ಹಾಗೂ ಅವರ ಕಾರ್ಯದ ಬಗ್ಗೆ ಹಿರಿದಾಗಿ ಮಾತನಾಡುತ್ತಿದ್ದ ಜೋಶಿಯವರನ್ನು ಕಾರ್ಯಕರ್ತನೊಬ್ಬನು ಹೃದಯದಿಂದ ಮಾತನಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಯಾದವರಾವ್ ಜೋಶಿಯವರು, “ನಾನೊಬ್ಬ ರಾಜಕೀಯ ನೇತಾರನಲ್ಲ. ಆದ್ದರಿಂದ ನಾನು ಹೃದಯ ನಂಬದ ಮಾತುಗಳನ್ನು ಆಡುವುದಿಲ್ಲ. ಯಾರನ್ನಾದರೂ ಆದರಿಸುತ್ತೇವೆಂದರೆ ಅವರ ಎಲ್ಲಾ ಚಿಂತನೆಗಳನ್ನು ಒಪ್ಪಿಕೊಳ್ಳುತ್ತೇವೆಂದೇನಲ್ಲ. ಆದರೆ ಅವರ ಆದರ್ಶ, ಪ್ರೇರಣಾದಾಯಿ ಗುಣಗಳನ್ನು ಸ್ಮರಿಸುತ್ತೇವೆ” ಎಂದು ನುಡಿದರು. ಮಾತನಾಡುತ್ತ ಮಹಾಭಾರತದ ಭೀಷ್ಮನನ್ನು ಕುರಿತು, “ಭೀಷ್ಮರನ್ನು ತಾವು ತೆಗೆದುಕೊಂಡ ಪ್ರತಿಜ್ಞೆಗಾಗಿ, ಹಾಗೂ ಅದನ್ನು ಉಳಿಸಿಕೊಳ್ಳಲು ತೋರಿದ ಬದ್ಧತೆಗಾಗಿ ಸ್ಮರಿಸಿಕೊಳ್ಳುತೇವೆಯೇ ಆಗಲಿ ದೌಪದಿಯನ್ನು ಕೌರವರು ಅವಮಾನಿಸಿದಾಗ ಮೌನ ತಳೆದದ್ದಕ್ಕಲ್ಲ. ಅದೇ ತರದಲ್ಲಿ ಗಾಂಧೀಜಿಯವರ ಜಿಹಾದಿ ಮುಸ್ಲಿಮ್ ನಾಯಕತ್ವದೊಂದಿಗಿದ್ದ ಮೃದು ಧೋರಣೆ, ಅವರೊಂದಿಗಿನ ಕಾರ್ಯವಿಧಾನದ ವಿಷಯವಾಗಿ ಸಾಕಷ್ಟು ಭಿನಾಭಿಪ್ರಾಯವಿದ್ದಾಗಿಯೂ, ಸತ್ಯಾಗ್ರಹ ಸೇರಿದಂತೆ ಭಾರತೀಯ ಚಿಂತನೆಯನ್ನಾಧರಿಸಿದ ಹಲವು ವಿಷಯಗಳಲ್ಲಿನ ನಿಲುವುಗಳು ಶ್ಲಾಘನೀಯ ಹಾಗೂ ಪ್ರೇರಣಾದಾಯಿ.” ಎಂದು ಯಾದವರಾವ್ ಜೋಶಿ ಅಂದು ಮಾತನಾಡಿದ್ದರು

ಇಂತಹ ಸಂಗತಿಗಳನ್ನು ಪರಿಗಣಿಸದೆ ಗಾಂಧೀಜಿ ವಿಷಯವಾಗಿ ಸಂಘದ ಬಗ್ಗೆ ಹಗುರವಾಗಿ ಮಾತನಾಡುವುದು ಸತ್ಯಕ್ಕೆ ಮಾಡುವ ಅಪಚಾರ. ಗಾಂಧೀಜಿಯವರ ಆದರ್ಶಗಳನ್ನು ಸಂಘವು ಉಳಿಸಿಕೊಂಡು ಬಂದಿದೆಯಲ್ಲದೇ, ಅವರದೇ ಚಿಂತನೆಗಳಾದ ಗ್ರಾಮ ವಿಕಾಸ, ಸಾವಯವ ಕೃಷಿ, ಗೋ ಸಂರಕ್ಷಣೆ, ಸಾಮಾಜಿಕ ಸಾಮರಸ್ಯ, ಮಾತೃಭಾಷೆಯಲ್ಲಿಯೇ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಬೇಕೆಂಬ ನಿಲುವು, ಸ್ವದೇಶಿ ಆಚಾರ, ಪ್ರಚಾರ ತನ್ಮೂಲಕ ಸ್ವದೇಶಿ ಆರ್ಥಿಕ ಸಬಲೀಕರಣ ಸೇರಿದಂತೆ ಹಲವು ಕೆಲಸಗಳಲ್ಲಿ ಸಂಘ ತೊಡಗಿಸಿಕೊಂಡಿದೆ. ಚುನಾವಣಾ ಸಮಯದಲ್ಲಿ ಮಾತ್ರವೇ ನೆನಪಾಗುವ ಗಾಂಧಿಗಿಂತಲೂ ಇದು ಮಹತ್ತರವಾದ ಕೆಲಸವೇ ಆಗಿದೆ.

ಗಾಂಧೀಜಿಯವರ ೧೫೦ನೇ ಜನ್ಮ ವಾರ್ಷಿಕೋತ್ಸವದ ವರ್ಷ. ಶ್ರೇಷ್ಠ ಸಂತನಿಗೆ ಈ ಮೂಲಕ ನಮ್ಮ ನಮನಗಳನ್ನು ಸಲ್ಲಿಸೋಣ.

ಡಾ. ಮನಮೋಹನ್ ವೈದ್ಯ,

ಆರೆಸ್ಸೆಸ್‍ನ ಮಾನ್ಯ ಸಹಸರಕಾರ್ಯವಾಹರು

Dr Manmohan Vaidya

Leave a Reply

Your email address will not be published.

This site uses Akismet to reduce spam. Learn how your comment data is processed.