ಸೆಮಿಟಿಕ್ ಮತಗಳಲ್ಲಿ ಒಂದಾದ ಇಸ್ಲಾಂನಲ್ಲಿ ಮತೀಯ ಆಚರಣೆಗಳನ್ನು ತ್ಯಜಿಸಿದ ಮುಸ್ಲಿಮರನ್ನು ಮತಭ್ರಷ್ಟ (ಅಪೋಸ್ಟೇಟ್) ಎಂದೂ, ಇಸ್ಲಾಂ ಮತೀಯ ವಿಚಾರಗಳನ್ನು ದೂಷಿಸುವವರನ್ನು ಮತದೂಷಕ (ಬ್ಲಾಸ್ ಫೆಮೆರ್) ಎಂದೂ ಗುರುತಿಸಲಾಗುತ್ತದೆ. ಮತಭ್ರಷ್ಟತೆಯನ್ನು ಮತದೂಷಣೆ ಎಂದೂ, ಇಸ್ಲಾಮಿನಲ್ಲಿ ಅರ್ಥೈಸಬಹುದಾಗಿದೆ. ಪ್ರಪಂಚದ ಇತರ ಮತಗಳಲ್ಲಿ (ಪೂರ್ವದೇಶಗಳ ಮತಗಳನ್ನೂ ಸೇರಿಸಿಕೊಂಡು) ಸಹ ಈ ರೀತಿಯ ವಿಂಗಡನೆಗಳನ್ನು ಮಾಡಬಹುದಾದರೂ, ಸೆಮೆಟಿಕ್ ಮತಗಳಲ್ಲಿ ಮತದೂಷಣೆ ಮತ್ತು ಮತಭ್ರಷ್ಟತೆಗಳನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಈ ಅಪರಾಧಕ್ಕೆ ವಿವಿಧ ಶಿಕ್ಷೆಗಳು ಇವೆಯಾದರೂ, ಇಸ್ಲಾಂ ಮತಪರಿಣಿತರನೇಕರು ಮರಣದಂಡನೆಯೊಂದೇ ಶಿಕ್ಷೆ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಮತದೂಷಣೆಯನ್ನು ಮುಸ್ಲಿಮೇತರರೂ ಸಹ ಮಾಡಬಹುದಾಗಿದ್ದು, ಮತಭ್ರಷ್ಟತೆಯು ಮುಸ್ಲಿಮರಿಂದ ಮಾತ್ರ ಸಾಧ್ಯವಾಗುತ್ತದೆ. ಹಾಗಾಗಿ, ಭಾರತದಂಥಾ ಬಹುಮತೀಯ ಸಮಾಜದಲ್ಲಿ ಮತದೂಷಣೆಯ ವಿಶ್ಲೇಷಣೆ ಅಗತ್ಯವಾಗಿದೆ.

ಸೆಮಿಟಿಕ್ ಮತವಾದ ಇಸ್ಲಾಮಿನಲ್ಲಿ ಮತದೂಷಣೆಯ ಸ್ವರೂಪ
ಸಾಮಾನ್ಯವಾಗಿ, ಪ್ರವಾದಿ ಮೊಹಮ್ಮದರನ್ನಾಗಲೀ ಅಥವಾ ಮುಸ್ಲಿಂಮರ ಕುರಾನ್ ಗ್ರಂಥವನ್ನಾಗಲೀ ನಿಂದಿಸಿದಾಗ ಮತದೂಷಣೆ ಆಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಆದರೆ, ನಿಂದನಾ ಪದಗಳು ಇರಲೇ ಬೇಕಾಗಿಲ್ಲ. ಮಹಮ್ಮದರ ಬಗ್ಗೆ ಹಗುರವಾಗಿ ಅಥವಾ ಗೌರವಸೂಚಕ ಪದಗಳಿಲ್ಲದೇ ಆಡುವ ಮಾತುಗಳನ್ನೂ ಕೂಡ ಮತದೂಷಣೆ ಎಂದು ಹೇಳಲಾಗುತ್ತದೆ. ಮತದೂಷಣೆಯ ಈ ಪಟ್ಟಿ ಇನ್ನೂ ಉದ್ದವಾಗಿದೆ. ಮೊಹಮ್ಮದರಲ್ಲದೇ ಅವರ ಕುಟುಂಬದ ಸದಸ್ಯರ ಬಗ್ಗೆ ಮಾಡಲಾಗುವ ಟೀಕೆಗಳು, ಮೊಹಮ್ಮದರನ್ನು ಚಿತ್ರಿಸುವುದು, ಕುರಾನ್ ಪುಸ್ತಕವನ್ನು ವಿಕೃತಗೊಳಿಸುವುದು, ಇಸ್ಲಾಂ ಹೇಳುವ ವಿಚಾರವನ್ನು ವಿರೋಧಿಸುವುದು, ಒಪ್ಪದಿರುವುದು, ವಿರೂಪಗೊಳಿಸಿ ಮಂಡಿಸುವುದು – ಈ ರೀತಿ ಹತ್ತು ಹಲವು ಸಂಗತಿಗಳನ್ನು ಮತದೂಷಣೆ ಎನ್ನಬಹುದಾಗಿದೆ.

ಇತ್ತೀಚಿನ ಉದಾಹರಣೆಯೊಂದು ಇಲ್ಲಿ ಬೋಧಕವಾಗಿದೆ. ಇಸ್ಲಾಂನ (ಕೆಲ) ಮತಗ್ರಂಥಗಳ ಪ್ರಕಾರ, ಪ್ರವಾದಿ ಮಹಮ್ಮದರು ತಮ್ಮ 50ರ ಹರೆಯದಲ್ಲಿ ಸುಮಾರು 6 ವರ್ಷದ ಆಯೇಷಾ ಅವರನ್ನು ವಿವಾಹವಾದರು. ಮತ್ತು ಆಯೇಷಾ ಅವರು 9 ವರ್ಷದವರಾಗಿದ್ದಾಗ ಅವರೊಡನೆ ತಮ್ಮ ವಿವಾಹವನ್ನು ಪರಿಪೂರ್ಣಗೊಳಿಸಿಕೊಂಡರು (ಭಾರತೀಯ ಸನ್ನಿವೇಶದಲ್ಲಿ ಇದನ್ನು ನಿಷೇಕ ಎನ್ನಬಹುದು). ಇದನ್ನು ಮುಸ್ಲಿಮರು ಗೌರವಭಾವನೆಯಿಂದ ಹೇಳುತ್ತಾರೆ. ನೂಪುರ್ ಶರ್ಮ ಅವರು ಟಿವಿ ಚರ್ಚೆಯಲ್ಲಿ ಇದನ್ನು ಆಕ್ಷೇಪಿಸುವ ರೀತಿಯಲ್ಲಿ ಗಟ್ಟಿಯಾಗಿ ಹೇಳಿದಾಗ ಅದನ್ನು ಮತದೂಷಣೆ ಎಂದು ಪರಿಗಣಿಸಲಾಯಿತು. ಹಾಗೆಯೇ, ಉದಯಪುರದ ಕನ್ನಯ್ಯಲಾಲ್, ಮತ್ತು ಅಮರಾವತಿಯ ಉಮೇಶ್ ಅವರುಗಳು ನೂಪುರ್ ಶರ್ಮ ಅವರನ್ನು ಬೆಂಬಲಿಸಿ ಹೇಳಿದ ಸಂಗತಿಯನ್ನೂ ಸಹ ಮತದೂಷಣೆ ಎನ್ನಲಾಗುತ್ತಿದೆ (ಹತ್ಯೆಗೊಳಗಾದವರು ಹೇಳಿದ ವಿಷಯಗಳು ಮಾಧ್ಯಮಗಳಲ್ಲಿ ವರದಿಯಾಗಿಲ್ಲ).

ಮತದೂಷಣೆಗೆ ಪ್ರಸ್ತುತ ಸಂದರ್ಭದಲ್ಲಿ ಬರುವ ಪ್ರತಿಕ್ರಿಯೆಗಳು
ಇಸ್ಲಾಮ್ ಮತದ ದೂಷಣೆಯ ಆರೋಪಕ್ಕೆ ಮಹಮ್ಮದೀಯ ಸಮುದಾಯದಿಂದ ತೀವ್ರ ಪ್ರತಿಕ್ರಿಯೆ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಸಾಮಾನ್ಯವಾಗಿ, ಮತದೂಷಣೆಯ ಆರೋಪಕ್ಕೆ ಒಳಗಾದ ವ್ಯಕ್ತಿಗೆ ಶಿಕ್ಷೆನೀಡಬೇಕೆಂಬ ಬೇಡಿಕೆ ಸಮುದಾಯದಿಂದ ವ್ಯಕ್ತವಾಗುತ್ತದೆ. ಪೋಲೀಸರು ಮತದೂಷಣೆ ಮಾಡಿದ ವ್ಯಕ್ತಿಯನ್ನು ಬಂಧಿಸಬೇಕೆಂಬ ದೂರುಗಳು ದಾಖಲಾಗುತ್ತವೆ. ಮತ್ತು ರಸ್ತೆಯಲ್ಲಿ ಪ್ರತಿಭಟನೆಗಳಾಗಬಹುದು. ಪ್ರತಿಭಟನೆಗಳಲ್ಲಿ ಕಲ್ಲೆಸೆತ, ಹಿಂಸಾಚಾರಗಳು ಜರುಗುವುದು ಅಪರೂಪವೇನೂ ಅಲ್ಲ.

ಪ್ರತಿಭಟನೆಮಾಡುವ ಗುಂಪು ಮತದೂಷಣೆಗೆ ಒಳಗಾದ ವ್ಯಕ್ತಿಯನ್ನು ತನಗೆ ಒಪ್ಪಿಸಬೇಕೆಂದು ಪೋಲೀಸರಲ್ಲಿ ಬೇಡಿಕೆ ಇಡುವುದು ಹಲವಾರು ಬಾರಿ ಕಾಣುತ್ತದೆ. ಪೋಲೀಸ್ ಠಾಣೆಯನ್ನು ಮುತ್ತುವ, ಕಾನೂನು ಪಾಲಕರಾದ ತನಿಖಾಧಿಕಾರಿಗಳು, ನ್ಯಾಯಾಂಗ ಮತ್ತು ಶಾಸಕಾಂಗಗಳ ಮೇಲೆ ಒತ್ತಡ ಹೇರುವ ಪ್ರವೃತ್ತಿ ಕಾಣುತ್ತದೆ. ಕಾನೂನು ವ್ಯವಸ್ಥೆಯ ಮೇಲೆ ಬೀಳುವ ಒತ್ತಡವು ಕಾನೂನು ಪಾಲಕರ ಕಾರ್ಯನಿರ್ವಹಣೆಯ ಮೇಲೂ ಪ್ರಭಾವ ಬೀರುತ್ತದೆ. ಕಾನೂನಿನಲ್ಲಿ ಸಿಗುವ ಕಠಿಣ ಕಲಂಗಳ ಅಡಿಯಲ್ಲಿ ಮೊಕದ್ದಮೆಯನ್ನು ಅಧಿಕಾರಿಗಳು ದಾಖಲಿಸುತ್ತಾರೆ.

ಇದರ ಜೊತೆಗೆ, ಮತದೂಷಣೆಗೆ ಒಳಗಾದ ವ್ಯಕ್ತಿಗೆ ಮರಣದಂಡನೆಯ ಶಿಕ್ಷೆನೀಡಬೇಕೆಂಬ, ಅಥವಾ ಕಾನೂನು ಬಾಹಿರ ದೈಹಿಕ ಶಿಕ್ಷೆ (ಕೈಕಾಲು ಕತ್ತರಿಸುವ ಇತ್ಯಾದಿ) ನೀಡಬೇಕೆಂಬ ಫಾತ್ವಾವನ್ನೂ, ಬೆದರಿಕೆಯನ್ನೋ ಯಾವುದೋ ಮಹಮದೀಯ ಮತೀಯನೋ, ಸಂಘಟನೆಯೋ ನೀಡುತ್ತದೆ. ಇದಕ್ಕೆ ವ್ಯಾಪಕವಾದ ಪ್ರಚಾರವನ್ನು ಮಾಧ್ಯಮಗಳು ನೀಡುತ್ತವೆ. ಇದರ ಫಲಶ್ರುತಿಯಾಗಿ, ಮತದೂಷಣೆಗೆ ಒಳಗಾದ ವ್ಯಕ್ತಿಗೆ ಸುರಕ್ಷತಾ ಬೆದರಿಕೆ ಒದಗುತ್ತದೆ. ಮತ್ತು ಹಲವಾರು ಬಾರಿ, ಆ ವ್ಯಕ್ತಿಯನ್ನು ಶ್ರದ್ಧಾವಂತ ಮತೀಯರೋ ಅಥವಾ ಅಪರಾಧ ಹಿನ್ನೆಲೆ ಇರುವ ವ್ಯಕ್ತಿಗಳೋ ಹತ್ಯೆ ಮಾಡುತ್ತಾರೆ. ಮತದೂಷಣೆಗೆ ಮಹಮ್ಮದೀಯ ಮತದಲ್ಲಿ ಹೇಳಿರುವ ಮರಣದಂಡನೆ ಶಿಕ್ಷೆಯನ್ನು ಯಾವುದೇ ಶ್ರದ್ಧಾವಂತ ಮುಸ್ಲಿಮನೂ/ಳೂ ನೀಡಬಹುದು ಎಂಬ ಪ್ರತಿಪಾದನೆಯೂ ಇಲ್ಲಿ ಕೆಲಸಮಾಡುತ್ತದೆ.

ಪ್ರತಿಕ್ರಿಯೆಗಳ ಫಲಶ್ರುತಿ
ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಮತದೂಷಣೆಯ ಆರೋಪ ಹೊತ್ತ ವ್ಯಕ್ತಿಯನ್ನು ಭಾರತದ ಸೆಕ್ಯುಲರ್ ಸಂವಿಧಾನದ ಚೌಕಟ್ಟಿನ ಕಾನೂನು ವ್ಯವಸ್ಥೆಯ ಮೂಲಕ ಶಿಕ್ಷಿಸುವ ಮೊದಲೇ, ಇಸ್ಲಾಂ ರೀತಿ-ನೀತಿಗಳ ಪ್ರಕಾರ ಶಿಕ್ಷಿಸಲಾಗುತ್ತದೆ. ಸಂವಿಧಾನವು ಮತೀಯ ನೆಲೆಯಲ್ಲಿ ಅರ್ಥೈಸುವ ಪ್ರಕ್ರಿಯೆಗೆ ಇದು ಎಡೆಮಾಡಿಕೊಡುತ್ತದೆ. ಅರ್ಥಾತ್, ಭಾರತೀಯ ಸೆಕ್ಯುಲರ್ ಪ್ರಜಾಪ್ರಭುತ್ವವು ಶರಿಯಾದ ಚೌಕಟ್ಟಿನಲ್ಲಿ ನೆಲೆಗೊಳ್ಳುತ್ತದೆ. ಈ ಪ್ರಕ್ರಿಯೆಯಲ್ಲಿ ಅನೇಕ ಕಾನೂನು ಬಾಹಿರ ಕೃತ್ಯಗಳು ಅನಿವಾರ್ಯವಾಗಿ ನಡೆಯುತ್ತದೆ ಮತ್ತು ಈ ಕೃತ್ಯಗಳಲ್ಲಿ ಹಲವರು ಪರೋಕ್ಷವಾಗಿಯೂ, ಪ್ರತ್ಯಕ್ಷವಾಗಿಯೂ ಭಾಗಿಗಳಾಗುತ್ತಾರೆ ಮತ್ತು ಬೆಂಬಲಿಸುತ್ತಾರೆ.

ಮತದೂಷಣೆಗೆ ಬರುವ ಪ್ರತಿಕ್ರಿಯೆಗಳಲ್ಲಿ ಕಾನೂನು ಉಲ್ಲಂಘನೆಗಳು
ಉದಾಹರಣೆಗೆ, ಮತದೂಷಣೆ ಆದಾಗ ಮುಸ್ಲಿಂ ಸಮುದಾಯದಿಂದ ನಡೆಯುವ ಮೌಖಿಕ ವಿರೋಧ ಮತ್ತು ಸಾರ್ವಜನಿಕ ಪ್ರತಿಭಟನೆಗಳು ಕಾನೂನು ಬದ್ದವಾಗಿದ್ದರೂ, ಕಲ್ಲೆಸೆತವಾದಾಗ, ವಾಹನಗಳನ್ನು ಸುಟ್ಟಾಗ ಮತ್ತಿತರ ಅನುಚಿತ ಘಟನೆಗಳಾದಾಗ, ಕಾನೂನಿನ ಉಲ್ಲಂಘನೆ ಆಗಿರುತ್ತದೆ. ಹಾಗೆಯೇ, ಸಂವಿಧಾನದ ಚೌಕಟ್ಟನ್ನು ಬಿಟ್ಟು ಇನ್ನಿತರ ರೀತಿಗಳಲ್ಲಿ ವಿಚಾರಣೆ, ಶಿಕ್ಷಾ ಘೋಷಣೆ ಮಾಡುವ ಮತ್ತು ಶಿಕ್ಷಾಪ್ರದಾನಗಳ ಬೇಡಿಕೆ ಇಡುವುದೂ ಕೂಡ ಕಾನೂನುಬಾಹಿರ ನಡವಳಿಕೆಯೇ ಆಗಿದೆ. ಫಾತ್ವಾ ನೀಡುವುದು, ಅಥವಾ ಮಹಮ್ಮದೀಯ ರೀತಿಯಲ್ಲಿ ಶಿಕ್ಷೆಯನ್ನು ಜಾರಿಗೊಳಿಸುವ ವ್ಯಕ್ತಿಗಳಿಗೆ ಬಹುಮಾನ ಘೋಷಿಸುವುದು, ಬೆದರಿಕೆ ಹಾಕುವುದು – ಇವೂ ಸಹ ಕಾನೂನು ಬಾಹಿರ ಕೃತ್ಯಗಳೇ ಆಗಿರುತ್ತವೆ.

ಜೊತೆಗೆ, ಈ ಕಾನೂನು ಬಾಹಿರ ಸಂಗತಿಗಳನ್ನು ವಿರೋಧಿಸದ, ಅವುಗಳ ಬಗ್ಗೆ ಹೆದರಿಕೆಯಿಂದಲೋ, ರಾಜಕೀಯ ಕಾರಣಗಳಿಗಾಗಿಯೋ ಅಥವಾ ಬೆಂಬಲಿಸಿಯೋ ಮೌನ ವಹಿಸುವ, ಪ್ರವೃತ್ತಿಯೂ ಕೂಡ ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವುದರಲ್ಲಿ ಕೊನೆಗೊಳ್ಳುವುದರಿಂದ, ತಟಸ್ಥ ಅಥವಾ ಪ್ರತಿಕ್ರಿಯಾ ರಹಿತ ನಿಲುವುಗಳೂ ಸಹ ಸೂಕ್ಷ್ಮ ನೆಲೆಯಲ್ಲಿ ಕಾನೂನು/ಸಮಾಜ ವಿರೋಧೀ ನಡವಳಿಕೆಯೇ ಆಗಿದೆ ಎನ್ನಬಹುದು.

ಸೆಕ್ಯುಲರ್ ಆಡಳಿತದ ಸಮಸ್ಯೆಗಳು
ಸೆಕ್ಯುಲರ್ ಆಡಳಿತದಲ್ಲಿ ಮತೀಯ ಸಾಮರಸ್ಯ ಸ್ಥಾಪಿಸಲು ಕಾನೂನುಗಳು ಈ ಎಲ್ಲಾ ಮತೀಯ ಮುಖಗಳನ್ನೂ ನಿಯಂತ್ರಿಸಬೇಕಾಗುತ್ತದೆ. ಆದರೆ ಪ್ರಸ್ತುತ ಸನ್ನಿವೇಶದಲ್ಲಿ ಆಡಳಿತದ ಕೆಲ ಮೂಲಭೂತ ನಿಲುವುಗಳು ಇದಕ್ಕೆ ತೊಡಕಾಗಿವೆ. ಕಾನೂನು ಸುವ್ಯವಸ್ಥೆಗೆ ಆಯಾ ಪ್ರದೇಶದ ಪೋಲೀಸ್, ನ್ಯಾಯಾಂಗದ, ಕಾರ್ಯಾಂಗದ ಅಧಿಕಾರಿಗಳೇ ಜವಾಬ್ದಾರರು ಎಂಬುದು ಆಡಳಿತದ ಗ್ರಹಿಕೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿಸಿದಾಗ ಕಾನೂನು ಸುವ್ಯವಸ್ಥಿತವಾಗಿರುತ್ತದೆ. ಮತ್ತು ಕಾನೂನು ವ್ಯವಸ್ಥೆ ವ್ಯತ್ಯಯವಾದರೆ, ಅದು ಅಧಿಕಾರಿಗಳ ಅದಕ್ಷತೆಯ ಪ್ರಭಾವ ಎನ್ನುವುದು ಇದರ ಅರ್ಥ. ಮತೀಯ ಚಿತಾವಣೆಯಿಂದ ಉಂಟಾಗುವ ಕೋಮುಗಲಭೆಯಿಂದ ಕುಸಿಯುವ ಕಾನೂನು ವ್ಯವಸ್ಥೆಯು ಅಧಿಕಾರಿಗಳ ಮೇಲಿನ ಕ್ರಮದಲ್ಲಿ ಕೊನೆಗೊಳ್ಳುತ್ತದೆ. ಇದರ ಪರಿಣಾಮವಾಗಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗಗಳು ಕಾನೂನು ಕುಸಿತದ ತುರ್ತು ಜವಾಬ್ದಾರಿಯನ್ನು ತಮ್ಮ ನೆಲೆಯಲ್ಲಿ ಮಾತ್ರ ನಿರ್ವಹಿಸಲು ಗಮನ ನೀಡುವುದರಿಂದ ಸೆಕ್ಯುಲರ್ ಆಡಳಿತವು ಮತೀಯ ಪ್ರಭಾವವನ್ನು ಮೀರುವುದರಲ್ಲಿ ಸೋಲುತ್ತಿದೆ. ಜೊತೆಗೆ, ಪ್ರಸ್ತುತ ಆಡಳಿತವು ಹತ್ಯೆ – ಹಲ್ಲೆ ಗಳು ನಡೆದ ನಂತರದಲ್ಲಿ, ನೇರವಾಗಿ ಭಾಗಿಯಾದವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸುವುದರಲ್ಲಿ ಮಾತ್ರ ನಿರತವಾಗಿದೆ. ಮತೀಯ ಸಮರ್ಥಕರನ್ನೂ, ಆರ್ಥಿಕ – ಮಾನವ ಸಂಪನ್ಮೂಲಗಳನ್ನು ಹಂತಕರಿಗೆ ಒದಗಿಸುವವರನ್ನೂ ಮುಟ್ಟುವುದರಲ್ಲಿ ಆಡಳಿತವು ವಿಫಲವಾಗುತ್ತಿದೆ.

ಬಹುತೇಕ ಮುಸ್ಲಿಮರು ಹತ್ಯೆಗಳನ್ನು ಒಪ್ಪಲಾರರು ಎಂದು ಹೇಳಲಾಗುತ್ತದೆ. ಇಸ್ಲಾಂ ಹಿಂಸೆಯನ್ನು ಬೋಧಿಸುವುದಿಲ್ಲ ಎಂದೂ ಹಲವು ಮುಸ್ಲಿಮರು ಪ್ರತಿಪಾದಿಸುತ್ತಾರೆ. ಇದು ನಿಜವಾದಲ್ಲಿ, ಬಹುಸಂಖ್ಯಾತ ಮುಸ್ಲಿಮರು ಜಿಹಾದೀ ಹಿಂಸೆಯನ್ನು ಕೊನೆಗಾಣಿಸುವಲ್ಲಿ ವಹಿಸಬೇಕಾದ ಪಾತ್ರ ಪ್ರಮುಖವಾಗಿಯೇ ಇದೆ. ಮಹಮ್ಮದೀಯರಿಂದ ಹಲ್ಲೆ-ಹತ್ಯೆಗಳು ನಡೆದಾಗ, ಅದನ್ನು ಖಂಡಿಸುವ ನಿಲುವನ್ನು ಅವರು ನಿರಂತರ ಬದ್ಧತೆಯಿಂದ ತೆಗೆದುಕೊಳ್ಳಬಹುದು. ತಮ್ಮೊಳಗಿನ ಮತಾಂಧರು ಮತೀಯ ವಿಚಾರಗಳಲ್ಲಿ ಪ್ರಮುಖಪಾತ್ರ ವಹಿಸದಂತೆ ಎಚ್ಚರವಹಿಸುವ ಜವಾಬ್ದಾರಿ ಇವರ ಮೇಲಿದೆ. ಅಪರಾಧಿಯು ಮುಸ್ಲಿಂ ಮತೀಯನಾಗಿದ್ದಾಗ ನಾಗರೀಕ ಮುಸ್ಲಿಮ್ ಸಮಾಜವು ತನ್ನ ನಿಲುವನ್ನು ಪ್ರಕಟಗೊಳಿಸಬೇಕೆಂಬುದೇ ಒಂದು ದೋಷಪೂರಿತ ಚಿಂತನೆ ಎಂಬ ವಾದವಿದೆ. ಆದರೆ, ಜಿಹಾದೀ ಭಯೋತ್ಪಾದನೆಯ ಅಪರಾಧಗಳು ನಡೆದಾಗ, ಮುಸ್ಲಿಮ್ ಸಮಾಜವು ಮೌನ ವಹಿಸಿದರೆ, ಸಮಸ್ಯೆಯು ಸಂಕೀರ್ಣಗೊಳ್ಳುತ್ತದೆ. ಅಲ್ಪಸಂಖ್ಯಾತ ಜಿಹಾದೀ ಮಹಮ್ಮದೀಯರು ಶಾಂತಿಬಯಸುವ ಬಹುಸಂಖ್ಯಾತ ಮುಸ್ಲಿಮರನ್ನು ತಮ್ಮ ಕಪಿಮುಷ್ಟಿಯಲ್ಲಿ ಇರಿಸಿಕೊಂಡಿದ್ದಾರೆ ಎಂಬ ಒಂದು ಅಭಿಪ್ರಾಯವಿದೆ. ಹಾಗಿದ್ದಲ್ಲಿ, ಮುಸ್ಲಿಮರನ್ನು ಕಾನೂನು ಉಲ್ಲಂಘಿಸುವ ಅಥವಾ ಉಲ್ಲಂಘಿಸಲು ಪ್ರಚೋದಿಸುವ ದುಷ್ಕರ್ಮಿಗಳಿಂದ ರಕ್ಷಿಸುವ ಅಗತ್ಯವಿದೆ. ಅವರಿಗೆ ತಮ್ಮ ನಿಲುವನ್ನು ವ್ಯಕ್ತಪಡಿಸಲು ಮತ್ತು ಸಂವಿಧಾನವನ್ನು ಬೆಂಬಲಿಸಲು ಬೇಕಾದ ಸಾಮಾಜಿಕ ವಾತಾವರಣ ಸಿದ್ಧವಾಗಬೇಕಾಗಿದೆ. ಮತೀಯ ಅಸಹಿಷ್ಣುಗಳನ್ನು ಶ್ರದ್ಧಾವಂತ ಮತಾನುಯಾಯಿಗಳಿಂದ ಪ್ರತ್ಯೇಕಿಸುವುದು ಸೆಕ್ಯುಲರ್ ಆಡಳಿತದ ಅಗತ್ಯವೂ ಆಗಿದೆ ಎಂಬುದನ್ನು ಇಲ್ಲಿ ಗಮನಿಸಬಹುದು.

ಮತೀಯ ಸ್ವಾತಂತ್ರ್ಯವನ್ನು ಭಾರತೀಯ ಸಂವಿಧಾನ ಎಲ್ಲರಿಗೂ ನೀಡಿದೆ. ಅನ್ಯಮತವನ್ನು ದೂಷಿಸುವ ಅನಿವಾರ್ಯತೆ (ಅಥವಾ ಅಗತ್ಯತೆ) ಯಾವ ಮತದವರಿಗೂ ಇಲ್ಲ. ಮತ್ತೊಂದು ಮತದೊಡನೆ ಇರಬಹುದಾದ ಭಿನ್ನಾಭಿಪ್ರಾಯಗಳಾಗಲೀ, ಅಥವಾ ಅಸಮ್ಮತಿಯಾಗಲೀ – ಅವು ಪ್ರಾಸಂಗಿಕವಾಗಿಯೂ, ವಸ್ತುನಿಷ್ಠವಾಗಿಯೂ ಇರಬೇಕು. ದುರುದ್ದೇಶದಿಂದ ಕೂಡಿರಬಾರದು ಮತ್ತು ಇತಿ-ಮಿತಿಯೊಳಗಿರಬೇಕು. ಈ ಪ್ರಾಸಂಗಿಕ ನಿಲುವುಗಳನ್ನು ಸಂವಿಧಾನೇತರ ನೆಲೆಗಳಲ್ಲಿ ಅಪರಾಧ ಎಂದು ಶಿಕ್ಷಿಸುವ ಅಥವಾ ದಮನ ಮಾಡುವ ಪ್ರವೃತ್ತಿಯನ್ನು ಕೊನೆಗೊಳಿಸಬೇಕಾದ ಜವಾಬ್ದಾರಿ ಇರುವುದು ಸೆಕ್ಯುಲರ್ ಆಡಳಿತಕ್ಕೆ. ಮತದೂಷಣೆಗೆ ಹಿಂದೂ ರೀತಿ-ನೀತಿಗಳಲ್ಲಿ ಶಿಕ್ಷೆ ಇಲ್ಲದಿರುವುದರಿಂದ ಅಥವಾ ಹಿಂದೂ ಸಮುದಾಯವು ಶಿಕ್ಷೆಗೆ ಒತ್ತಾಯಿಸುವುದಿಲ್ಲವಾದ್ದರಿಂದ ಹಿಂದೂ ಶ್ರದ್ಧಾ ಕೇಂದ್ರಗಳ ಬಗ್ಗೆ ಟೀಕೆಗಳು ಮಿತಿಮೀರಿವೆ. ಅವುಗಳನ್ನು ನಿಯಂತ್ರಿಸುವ ಅಗತ್ಯ ಇದೆ. ಹಾಗೆಯೇ, ಇಸ್ಲಾಮ್ ಮತದ ಬಗ್ಗೆ ಸಹಜವಾಗಿ ಮಾತನಾಡುವ ಪರಿಸ್ಥಿತಿ ಇಲ್ಲವಾಗಿದ್ದು, ವಾಕ್ ಸ್ವಾತಂತ್ರ್ಯದ ಮಿತಿಯಲ್ಲಿ ಮತವಿಮರ್ಶೆಗಳಿಗೆ ಸೀಮಿತ ಅವಕಾಶ ನೀಡುವ ಅಗತ್ಯವೂ ಇದೆ. ಇವೆರಡೂ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಕಾನೂನುಗಳ ಅನುಷ್ಠಾನ ಆಗಬೇಕಾಗಿದೆ. ದುರುದ್ದೇಶಪೂರಿತ ದೂಷಣೆಗಳನ್ನು ತಡೆಯಲು ಮತ್ತು ದುರುದ್ದೇಶರಹಿತ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಬೇಕಾದ ಕಾನೂನುಗಳು ನಮ್ಮಲ್ಲಿ ಈಗಾಗಲೇ ಇದೆ. ಆದರೆ, ಅವುಗಳನ್ನು ಸೂಕ್ತವಾಗಿ ಬಳಸಲು ಪೂರಕವಾದ ಸಾಮಾಜಿಕ ವಾತಾವರಣ ಬೇಕಾಗಿದೆ.

ಮತೀಯ ಸಾಮರಸ್ಯದತ್ತ ಸಾಂವಿಧಾನಿಕ ಹೆಜ್ಜೆಗಳು
ಮಾಧ್ಯಮ ಸಹಿತವಾಗಿ ಸಂವಿಧಾನದ ಮೂರೂ ಅಂಗಗಳಿಗೆ ಇಂಥಹಾ ಸಾಮಾಜಿಕ ವಾತಾವರಣವನ್ನು ಸಿದ್ಧಗೊಳಿಸುವ ಹೊಣೆ ಇದೆ. ಇದರಲ್ಲಿ ಎಲ್ಲಾ ಮತೀಯರ, ಮತ್ತು ಸಾಮಾನ್ಯ ಜನರ ಪಾತ್ರವೂ ಇದೆ. ಸಂವಿಧಾನದ ಆಶಯಗಳನ್ನು ಜಾರಿಗೆ ತರುವ ಪೂರಕ ವಾತಾವರಣವು ಪ್ರದೇಶ-ಪಕ್ಷಾತೀತವಾಗಿ, ಜನಸಂಖ್ಯಾ ಅನುಪಾತಗಳ ಮೇಲೆ ಅವಲಂಬಿತವಾಗದಂತೆ ಇಂದು ತುರ್ತಾಗಿ ಬೇಕಾಗಿದೆ. ಮುಂದೆಯೂ ಅಂಥಹಾ ವಾತಾವರಣ ಉಳಿಯುವುದು ಅವಶ್ಯಕವಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸುವುದು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲವಾದರೆ, ಅದು ಶಾಸಕರ, ನ್ಯಾಯಾಲಯಗಳ ಮತ್ತು ಅಧಿಕಾರಿಗಳ ವಿಫಲತೆ ಎಂದೇ ಹೇಳಬೇಕಾಗುತ್ತದೆ. ಮತೀಯ ಅಸಹನೆಯಿಂದ ನಡೆಯುವ ಕಾನೂನು ಬಾಹಿರ ಕೃತ್ಯಗಳ ವಿರುದ್ಧದ ದನಿಯನ್ನು ಆಡಳಿತವು ಮುಸ್ಲಿಮರಲ್ಲೂ, ಮುಸ್ಲಿಮೇತರರಲ್ಲೂ ಗಟ್ಟಿಯೂ ವ್ಯಾಪಕವೂ ಆಗುವಂತೆ ಮಾಡುವುದಾದಲ್ಲಿ, ಸಾಮಾಜಿಕ ಸುರಕ್ಷತೆ – ಸಾಮರಸ್ಯ ನಿಜವಾದ ಅರ್ಥದಲ್ಲಿ ಸಾಧ್ಯವಾಗುತ್ತದೆ.

MK ಶ್ರೀಧರನ್,ನಿರ್ವಾಹಕ ವಿಶ್ವಸ್ಥರು, ವಿಶ್ವ ಸಂವಾದ ಕೇಂದ್ರ

Leave a Reply

Your email address will not be published.

This site uses Akismet to reduce spam. Learn how your comment data is processed.