ಸೆಕ್ಯುಲರ್ ವಾದ ಪ್ರಮುಖವಾಗಿ ರಿಲಿಜನ್ ಆಧಾರಿತ ರಾಷ್ಟ್ರದ ಮೂಲವಾಗಿದೆ. ರಿಲಿಜನ್ ಆಧಾರಿತ ರಾಷ್ಟ್ರವಲ್ಲದ ಭಾರತಕ್ಕೆ ಇದು ಸೂಕ್ತವಲ್ಲ. ಆದರೂ ಭಾರತದ ನೆಲಕ್ಕೆ ಅನುಗುಣವಾಗಿ ಅಳವಡಿಸುವ ಪ್ರಯತ್ನದಿಂದಾಗಿ ಇಂದು ಗೊಂದಲಗಳಾಗುತ್ತಿವೆ ಎಂದು ಲೇಖಕ ಪ್ರೊ.ಎ. ಷಣ್ಮುಖ ಹೇಳಿದರು.

ಬೆಂಗಳೂರಿನ ರಾಷ್ಟ್ರೋತ್ಥಾನ ಸಾಹಿತ್ಯ, ‘ಭಾರತದಲ್ಲಿ ಸೆಕ್ಯುಲರ್ ವಾದ ಮತ್ತು ಅದರ ವಿಮರ್ಶೆ’ ಎಂಬ ಪ್ರೊ.ಎ.ಷಣ್ಮುಖ ಅವರ ಪುಸ್ತಕದ ಕುರಿತು ಕೆಂಪೇಗೌಡನಗರದ ಕೇಶವಶಿಲ್ಪದಲ್ಲಿ ಆಯೋಜಿಸಿದ ‘ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೆಕ್ಯುಲರ್ ವಾದ ರಿಲಿಜನ್ನಿನ ತಟಸ್ಥತೆ, ರಿಲಿಜನ್ನಿನ ಸ್ವಾತಂತ್ರ್ಯ, ರಿಲಿಜನ್ನಿನ ಸಮಾನತೆ ಮತ್ತು ರಿಲಿಜನ್ನಿನ ಸಹಿಷ್ಣುತೆ ಎಂಬ ನಾಲ್ಕು ಪ್ರಮುಖ ತತ್ತ್ವಾಧಾರಿತವಾಗಿದೆ. ರಿಲಿಜನ್ ನ ಚೌಕಟ್ಟುಗಳು ಈ ತತ್ತ್ವಗಳಿಗೆ ಒಗ್ಗಿಕೊಳ್ಳುತ್ತವೆ. ಆದರೆ ರಿಲಿಜನ್ ಅಲ್ಲದ ಹಿಂದೂ ಧರ್ಮದ ಪಾಲನೆ ಮಾಡುವ ಬಹುಸಂಖ್ಯಾತರ ಬದುಕಿಕೆ ಸಂಬಂಧಪಡದ ತತ್ತ್ವವನ್ನು ಭಾರತದಲ್ಲಿ ಅಳವಡಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಭಾರತದಲ್ಲಿ ಭರದಿಂದ ಸೆಕ್ಯುಲರ್ ವಾದವನ್ನು ತರಲು ಮಾಡಿದ ಪ್ರಯತ್ನಗಳ ಫಲವಾಗಿ ಹಲವು ತೊಂದರೆಗಳು ಎದುರಾಗಿವೆ. ಅದರ ಪರಿಣಾಮವಾಗಿ ಸಹಬಾಳ್ವೆ, ಶಾಂತಿ ಮತ್ತು ಸಂಘರ್ಷಮುಕ್ತ ಸಮಾಜವನ್ನು ಕಟ್ಟಬೇಕು ಎಂಬ ಆಶ್ವಾಸನೆಯುಳ್ಳ ಸೆಕ್ಯುಲರ್ ವಾದ ಭಾರತದಲ್ಲಿ ತನ್ನ ಆಶ್ವಾಸನೆಯ ವಿರುದ್ಧ ಕಾರ್ಯನಿರ್ವಹಿಸುತ್ತಿದೆ‌ ಎಂದು ತಿಳಿಸಿದರು.

ರೂಪಾಂತರಗೊಂಡ ಸೆಕ್ಯುಲರ್ ವಾದದ ಪರಿಣಾಮದಿಂದಾಗಿ ಮೂಲಭೂತವಾದದ ಪ್ರತಿಪಾದಕರು ಸೆಕ್ಯುಲರ್ ವಾದಿಗಳಾಗುತ್ತಾರೆ. ಮೂಲಭೂತವಾದವನ್ನು ವಿರೋಧಿಸುವವರು ಕೋಮುವಾದಿ ಆಗುತ್ತಾರೆ ಎಂದು ನುಡಿದರು.

ಸೆಕ್ಯುಲರ್ ನೀತಿಯ ಪ್ರಕಾರ ಧಾರ್ಮಿಕ ಆಚರಣೆಗಳಲ್ಲಿ ಪ್ರಜಾಪ್ರಭುತ್ವದ ಹಸ್ತಕ್ಷೇಪ ಇರಬಾರದು. ಆದರೆ ಭಾರತದಲ್ಲಿನ ಸೆಕ್ಯುಲರ್ ನೀತಿಯು ಹಿಂದೂ ಆಚಾರಣೆಗಳ ವಿರುದ್ಧವಾಗಿ ಮತ್ತು ಮುಸ್ಲಿಂ ಆಚರಣೆಗಳ ಪರವಾಗಿ ಹಸ್ತಕ್ಷೇಪ ಮಾಡುತ್ತಿದೆ‌ ಎಂದು ಹೇಳಿದರು.

ಹಲವು ದಶಕಗಳಿಂದ ಸೆಕ್ಯುಲರಿಸಂ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ವಿಷಯವಾದರೂ ಶಾಲಾ, ಕಾಲೇಜು, ವಿಶ್ವವಿದ್ಯಾನಿಲಯಗಳಲ್ಲಿ ಇದರ ಕುರಿತಾದ ಪರಿಚಯಾತ್ಮಕ ವಿವರ, ವಿಮರ್ಶೆಯನ್ನು ಪಠ್ಯವನ್ನಾಗಿ ನೀಡಿದ್ದು ಬಹಳ ಕಡಿಮೆ ಎನ್ನುವುದು ವಿಪರ್ಯಾಸವೇ ಸರಿ. ಸೆಕ್ಯುಲರ್ ಪರ ಎಂದು ಸುಮ್ಮನ್ನಿರುವವರು ನೈತಿಕವಾಗಿ ಸರಿ, ಅದರ ಕುರಿತು ವಿಮರ್ಶೆ, ಪ್ರಶ್ನೆ ಮಾಡುವವರು ನೈತಿಕ ವಿರೋಧಿಗಳು ಎಂಬ ನಿಲುವು ಇದಕ್ಕೆ ಪ್ರಮುಖ ಕಾರಣ ಎಂದರು.

ಕಾರ್ಯಕ್ರಮದಲ್ಲಿ ಚಿಂತಕರು, ಸಂಶೋಧಕರು, ಸಂಶೋಧನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.