ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ಹೋಗುವ ಹೆದ್ದಾರಿಯಲ್ಲಿ ಚೆನ್ನಗಿರಿಗಿಂತ ಮುಂಚೆ ಬಲಕ್ಕೆ ತಿರುಗಿ ಹತ್ತು ಕಿ.ಮಿ. ಹೋದರೆ, ಹೊದಿಗೆರೆ ಎಂಬ ಕುಗ್ರಾಮವಿದೆ. ಇದೊಂದು ಪುಟ್ಟ ಹಳ್ಳಿ. ಸಣ್ಣ ಮಾರ್ಗ, ಒಂದು ಕಾರು ಹೋಗುವಷ್ಟು ಜಾಗ, ರೈತಾಪಿ ವರ್ಗವೇ ಅಧಿಕವಾಗಿರುವ ಇಲ್ಲಿ ಹೊಲ-ಗದ್ದೆಗಳು ಸಾಮಾನ್ಯ. ಆದರೆ ನಮ್ಮಲ್ಲಿ ಬಹುತೇಕ ಜನರಿಗೆ ತಿಳಿಯದ ವಿಷಯ – ಈ ಸ್ಥಳವು ಯಾವ ಪುಣ್ಯಕ್ಷೇತ್ರಕ್ಕೂ ಕಡಿಮೆ ಏನಲ್ಲ ಎಂದು. ಏಕೆಂದರೆ ಇಲ್ಲಿದೆ ಹೈಂದವೀ ಸ್ವರಾಜ್ಯದ ಹರಿಕಾರ ಶಹಜಿ ರಾಜೆ ಭೋಂಸ್ಲೆಯ ಸಮಾಧಿ. ಆ ಮಹಾತ್ಮನ ಒಂದು ಚಿಕ್ಕ ಪರಿಚಯ ಈ ಲೇಖನದ ಪ್ರಯತ್ನ.

ಮೊಘಲರು ಹಾಗು ದಕ್ಷಿಣದ ಸುಲ್ತಾನರು ಇವರುಗಳ ನಡುವೆ ಒಂದು ಹಿಂದೂ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಗುರಿಯಿಂದ ಶಿವಾಜಿ ತನ್ನ ಜೀವನವನ್ನು ಸವೆಸಿ ಅದನ್ನು ಸಾಧಿಸಿದನು. ನಾವು ಹಲವು ಕಡೆ ಓದಿದ್ದೇವೆ ತಿಳಿದಿದ್ದೇವೆ ಶಿವಾಜಿ ಮಹಾರಾಜರಿಗೆ ಮಹಾನ್ ಪ್ರೇರಕಶಕ್ತಿಯಾಗಿ ನಿಂತದ್ದು ಅವರ ತಾಯಿ ಜೀಜಾಮಾತೆ ಎಂದು. ಆದರೆ ಹಲವರಿಗೆ ತಿಳಿಯದ ವಿಷಯವೆಂದರೆ ಈ ಹೈಂದವಿ ಸ್ವರಾಜ್ಯದ ಕಲ್ಪನೆ ಮೈ ತಾಳಿದ್ದು ಜೀಜಾಮಾತೆ ಹಾಗೂ ಆಕೆಯ ಪತಿ ಶಹಜೀ ರಾಜೆ ಭೋಂಸ್ಲೆ ಇಬ್ಬರಿಂದಲೂ ಎಂದು.

ಶಹಜಿ ಹುಟ್ಟಿದ್ದು 1600 ಆಸುಪಾಸಿನಲ್ಲಿ. ವಿಜಯನಗರ ಸಾಮ್ರಾಜ್ಯದ ಪತನದ ನೋವು ಜನಮಾನಸದಲ್ಲಿ ಹಸಿಹಸಿಯಾಗಿರುವಂತೆಯೇ, ದಕ್ಕನ್ನಿನಲ್ಲಿ ಐದು ಬಹಮನಿ ಸುಲ್ತಾನರ ಆಳ್ವಿಕೆ ಚಾಲ್ತಿಯಲ್ಲಿತ್ತು. ಶಹಜಿಯ ಬಾಲ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲವಾದರೂ ಅವರ ತಂದೆ ಮಾಲೋಜಿ ಹಾಗು ಸಹೋದರ ಶರೀಫಜಿ ಎಂದು ತಿಳಿದಿದೆ. ಮಾಲೋಜಿ ಅಹಮದ್ ನಗರದ ನಿಜಾಮ್ ಶಾಹ್ ಬಳಿ ಸೇನಾಧಿಕಾರಿಯಾಗಿದ್ದನು. ಬಿಜಾಪುರದ ವಿರುದ್ಧದ ಒಂದು ಯುದ್ಧದಲ್ಲಿ ಮಾಲೋಜಿ ಹಾಗೂ ಶರೀಫಜಿ ಮರಣಾನಂತರ ಅವನ ಸ್ಥಾನ ಹಾಗು ಪುಣೆಯ ಜಹಗಿರ್ದಾರಿ ಮಗನ ಪಾಲಾಯಿತು.

ಶಹಜಿಯು ಸೇನಾಧಿಪತಿ ಮಾಲಿಕ್ ಅಂಬರ್‌ನ ಆಶ್ರಯದಲ್ಲಿ ಹಾಗು ಗೆಳೆತನದಲ್ಲಿ ಬೆಳೆದನು. ಆಗಲೇ ಶಹಜಿ ತನ್ನ ಚಾಣಾಕ್ಷತೆ ಹಾಗು ಬುದ್ಧಿವಂತಿಕೆಯಿಂದ ಹೆಣೆದ ಸಮರ ಕಲೆ – ಗೆರಿಲ್ಲಾ ಯುದ್ಧ. ಎದುರಾಳಿ ಎಂತಹ ದೊಡ್ಡ ಸೇನೆ ಹೊಂದಿದ್ದರೂ ಅತಿ ಕಡಿಮೆ ಸೈನ್ಯದೊಡನೆ ಚಾಲಾಕಿ ನಡೆಯಿಂದ ಯುದ್ಧ ಗೆಲ್ಲುವ ಅಡಗು ಕಲೆಯೇ ಇದು. ಇದಕ್ಕೆ ಅವನು ‘ಗಣೀಮಿ ಕಾವ’ ಎಂದು ಹೆಸರಿಸಿದನು.
ಈ ಯುದ್ಧ ಶೈಲಿಗೆ ಒಂದು ಉತ್ತಮ ಉದಾಹರಣೆ: ಶಹಜಹಾನ್ ಇನ್ನೂ ಯುವರಾಜನಾಗಿದ್ದಾಗ ಅಹಮದ್ ನಗರದ ಮೇಲೆ ದಂಡೆತ್ತಿ ಬರುತ್ತಾನೆ. ಅವನ ಸೈನ್ಯದ ಬಲ 1 ಲಕ್ಷ. ಶಾಜಿಯ ಬಳಿ ಇದ್ದದ್ದು ಕೇವಲ 20000ದ ಸೈನ್ಯ. ಮುಖಾಮುಖಿ ಯುದ್ಧದಲ್ಲಿ ಶಹಜಾನ್‌ನನ್ನು ಎದುರಿಸಿದರೆ ನಿರ್ನಾಮ ಶತಃಸಿದ್ಧ. ಇದಕ್ಕಾಗಿ ಶಾಜಿ ಒಂದು ಉಪಾಯ ಹೆಣೆಯುತ್ತಾನೆ. ವೈರಿ ಪಡೆ ತನ್ನನ್ನು ಬೆನ್ನಟ್ಟಿ ಬರುವಂತೆ ಮಾಡಿ, ಬೆನ್ನಟ್ಟುತ್ತಾ ಬೆನ್ನಟ್ಟುತ್ತಾ ಅವರು ಸಂಜೆ ಒಂದು ನದಿತಟದಲ್ಲಿ ವಿಶ್ರಮಿಸುವಂತೆ ಮಾಡುತ್ತಾನೆ. ಇನ್ನೊಂದೆಡೆ ತನ್ನ ಸೈನ್ಯವನ್ನು ಒಂದು ಸುರಕ್ಷಿತ ಸ್ಥಳದಲ್ಲಿರಿಸಿ, ಆ ನದಿಗೆ ಕಟ್ಟಿದ್ದ ಅಣೆಕಟ್ಟನ್ನು ಒಡೆಸುತ್ತಾನೆ. ನೀರಿನ ಪ್ರವಾಹದಲ್ಲಿ ಶಹಜಹಾನನ ಪಡೆ ಕೊಚ್ಚಿ ಹೋಗುತ್ತದೆ. ಈ ವಿಜಯದಿಂದ ಎಂತಹ ವೈರಿಯನ್ನೂ ಸೋಲಿಸಬಲ್ಲೆ ಎಂಬ ಆತ್ಮವಿಶ್ವಾಸ ಶಾಜಿಗೆ ಬಂದಿತು. ಇಡೀ ಪ್ರದೇಶಕ್ಕೆ ಶಾಜಿಯ ಶೌರ್ಯದ ಪರಿಚಯವಾಯಿತು.

ಕಾಲಾನುಕ್ರಮೇಣ ಶಾಜಿಗೆ ಜಾದವ ಮನೆತನದ ಜೀಜಾಬಾಯಿಯೊಡನೆ ವಿವಾಹವಾಯಿತು. ಜಾದವರು ಮೂಲತಃ ಯಾದವ ರಾಜವಂಶಸ್ಥರು. ನಿಜಾಮ್‌ಶಾಹಿ ಸುಲ್ತಾನನಿಗೆ ಬಹಳ ನಿಯತ್ತಿನ ಸೇನಾಧಿಕಾರಿಗಳಾಗಿದ್ದರು. ಹೀಗೆ ಸೇನಾ ಮುಖ್ಯಸ್ಥರಾಗಿದ್ದ ಜೀಜಾಬಾಯಿಯ ತಂದೆ ಹಾಗು ಮೂವರು ಅಣ್ಣಂದಿರನ್ನು ಸುಲ್ತಾನ ರಾಜಸಭೆಯಲ್ಲೇ ಘೋರವಾಗಿ ಕೊಂದು ರಕ್ತದೋಕುಳಿ ಹರಿಸುತ್ತಾನೆ. ಇದು ಶಾಜಿ ಮತ್ತು ಜೀಜಾಬಾಯಿಗೆ ತೀವ್ರ ಆಘಾತ, ನೋವು ಮತ್ತು ರೋಷ ತರಿಸಿತು. ಅಲ್ಲಿಂದಲೇ ಹಿಂದವೀ ಸ್ವರಾಜ್ಯದ ಕನಸು ಇಬ್ಬರಲ್ಲೂ ಟಿಸಿಲೊಡೆಯಿತು.
ಇದರ ಪರಿಣಾಮ ಶಾಜಿ ತನ್ನ ಸುತ್ತಮುತ್ತಲಿನ ಎಲ್ಲಾ ಹಿಂದು ಸೇನಾ ಸರದಾರರ ಒಂದು ಪರಿಷತ್ ಕರೆದು ಅಲ್ಲಿ ಹಿಂದೂ ಪುನರುತ್ಥಾನದ ಬಗ್ಗೆ ರೋಮಾಂಚಕ ಮಾತುಗಳನ್ನಾಡಿ ಅವರೆಲ್ಲಾ ತಲೆದೂಗುವಂತೆ ಮಾಡುತ್ತಾನೆ. ಇದರ ಫಲವೇನೋ ಎಂಬಂತೆ ಅಹಮದ್ ನಗರದ ರಾಜವಂಶ ಪತನವಾಗುತ್ತದೆ. ಶಾಜಿ ಪುಣೆಯನ್ನು ಸ್ವರಾಜ್ಯ ಎಂದು ಘೋಷಿಸಿ ಬಿಜಾಪುರದ ಸುಲ್ತಾನನನ್ನು ಎದುರಿಸಿ ನಿಲ್ಲುತ್ತಾನೆ. ಮರ್ಸೆನರಿಗಳಾಗಿದ್ದ (ಬಾಡಿಗೆ ಸೈನಿಕರು) ಮರಾಠರಿಗೆ ಒಂದು ಹೊಸ ಆಶಾಕಿರಣ ಸಿಕ್ಕಿತು.
ಇದರ ನಂತರದ ವರ್ಷಗಳಲ್ಲಿ ಹಲವಾರು ಪ್ರಸಂಗಗಳ ನಡೆದು ಆದಿಲ್ ಶಾಹನ ಬಳಿಯೇ ಶಾಜಿ ಸೇನಾಧಿಕಾರಿಯಾಗಬೇಕಾಗುತ್ತದೆ. ಆದಿಲ್ ಶಾ ಇಡೀ ಕರ್ನಾಟಕದ ಸಣ್ಣ ಸಣ್ಣ ರಾಜರನ್ನು ಮಟ್ಟಹಾಕಿ, ಅವರನ್ನು ಇಲ್ಲವಾಗಿಸಿ, ಅವರ ರಾಜ್ಯವನ್ನು ಬಿಜಾಪುರದ ಆಡಳಿತಕ್ಕೆ ತರಬೇಕೆಂದು ಶಾಜಿಗೆ ಆಜ್ಞಾಪಿಸುತ್ತಾನೆ. ಈ ದಂಡಯಾತ್ರೆಗೆ ರಣದುಲ್ಲಾಖಾನನನ್ನು ಶಾಜಿಯೊಡನೆ ಕಳಿಸುತ್ತಾನೆ. ಎಂದೂ ಸೋಲರಿಯದ ಶಾಜಿಗೆ ಈ ಗೆಲುವುಗಳು ಕಷ್ಟವಾಗಿರಲಿಲ್ಲ. ಆದರೆ ಕಾಟಾಚಾರಕ್ಕೆ ಯುದ್ಧ ಮಾಡುವಂತೆ ಮಾಡಿ ಎಲ್ಲಾ ಹಿಂದೂ ರಾಜರಿಗೂ ತಪ್ಪಿಸಿಕೊಳ್ಳಲು ಶಾಜಿ ಅವಕಾಶ ಮಾಡಿಕೊಟ್ಟನು. ಹೀಗೆ ಬೆಂಗಳೂರಿನ ಮುಮ್ಮುಡಿ ಕೆಂಪೇಗೌಡನನ್ನೂ ಆದಿಲ್ ಶಾಹನ ಸೈನ್ಯದಿಂದ ಮುಕ್ತಗೊಳಿಸಿ ಸುರಕ್ಷಿತವಾಗಿ ತೆರಳಲು ಅನುವು ಮಾಡಿಕೊಟ್ಟನು. ಈ ಎಲ್ಲಾ ಸತ್ಯಗಳು ತಿಳಿದೂ ಸಹ ಆದಿಲ್ ಶಾ ಶಾಜಿಯ ಶಕ್ತಿಯ ಅರಿವಿದ್ದದ್ದರಿಂದ ಇಡೀ ಬೆಂಗಳೂರಿನ ಜಹಗೀರನ್ನು ಅವನಿಗೆ ಬಿಟ್ಟುಕೊಡುತ್ತಾನೆ. ಹೀಗೆ ಶುರುವಾದ ಬೆಂಗಳೂರಿನ ನಂಟು, ಕೊನೇ ಘಳಿಗೆಯವರೆಗೆಯವರೆಗೂ ಮುಂದುವರಿಯಿತು. ಸುಲ್ತಾನನು ಶಾಜಿಯ ಭಯದಿಂದ ಬೆಂಗಳೂರು ಹಾಗೂ ಇದರಿಂದ ದಕ್ಷಿಣದ ಪ್ರದೇಶಗಳಿಗೆ ತಲೆ ಹಾಕಲೇ ಇಲ್ಲ. ಬೆಂಗಳೂರಿನಲ್ಲಿ ಹಲವು ದೇವಾಲಯಗಳನ್ನು ಕಟ್ಟಿಸಿದ ಶಾಜಿ, ಹಲವನ್ನು ಜೀರ್ಣೋದ್ಧಾರ ಕೂಡ ಮಾಡಿಸಿದ.

ಶಾಜಿ-ಜೀಜಾಬಾಯಿಗೆ ಇಬ್ಬರು ಪರಾಕ್ರಮಿ ಮಕ್ಕಳು, ಸಂಭಾಜಿ ಹಾಗು ಶಿವಾಜಿ. ಶಾಜಿಯ ಮೇಲೆ ಸೇಡು ತೀರಿಸಿಕೊಳ್ಳಲು ಸಂಭಾಜಿಯನ್ನು 25ನೇ ವರ್ಷದವನಿದ್ದಾಗ ಅಫಜಲ್ ಖಾನ್ ಮೋಸದಿಂದ ಕೊಲ್ಲಿಸಿ ಆಕಸ್ಮಿಕ ಎಂಬಂತೆ ಬಿಂಬಿಸಿದ. ಇದು ಶಾಜಿ ತೀವ್ರವಾಗಿ ಘಾಸಿಗೊಳಿಸಿತು. ಆದರೆ ಕಾಲಾನುಕ್ರಮೇಣ ಶಿವಾಜಿ ಇದಕ್ಕೆ ಪ್ರತೀಕಾರವನ್ನು ತೆಗೆದುಕೊಂಡಾಗ ಗತಿಸಿದ ಹಿರಿ ಮಗನ ಆತ್ಮಕ್ಕೆ ಶಾಂತಿ ಸಿಕ್ಕಂತಾಯಿತು. ಶಿವಾಜಿಗೆ ತನ್ನ ಸರ್ವ ಯುದ್ಧಕಲೆಗಳನ್ನು ಕಲಿಸಿದ ಶಾಜಿ, ಹೈಂದವಿ ಸ್ವರಾಜ್ಯದ ಪರಿಕಲ್ಪನೆ ಹಾಗೂ ಗಣೀಮಿ ಕಾವ ಕಲೆಯನ್ನು ಧಾರೆ ಎರೆದನು. ಇದರ ಫಲವೆಂಬಂತೆ ಶಿವಾಜಿಗೆ ಸರ್ವ ಯಶ ಪ್ರಾಪ್ತವಾಯಿತು. ಶಾಜಿಯ ಅಂತ್ಯ 1664ರಲ್ಲಿ ಕುದುರೆ ಸವಾರಿ ವೇಳೆ ಆದ ಆಕಸ್ಮಿಕದಿಂದ ಆಯಿತು. ಅವರ ಚಿತಾಭಸ್ಮವನ್ನು ಈಗ ಹೊದಿಗೆರೆಯಲ್ಲಿ ಸ್ಮಾರಕವಾಗಿಸಿದ್ದಾರೆ. ಭಾರತದ ಜನಮಾನಸದಲ್ಲಿ ಮೆರೆಯಲೇ ಬೇಕಾದ ಯುಗಪುರಷರಲ್ಲಿ ಶಹಜಿ ರಾಜೇ ಭೋಂಸ್ಲೆ ಕೂಡ ನಿಸ್ಸಂಶಯವಾಗಿ ಒಬ್ಬರು.

Leave a Reply

Your email address will not be published.

This site uses Akismet to reduce spam. Learn how your comment data is processed.