Sarhad Ko Pranam - 2012

Sarhad Ko Pranam - 2012

ಸುನೀಲ ಕುಲಕರ್ಣಿ, ಮಂಗಳೂರು

ದೇಶದ ಗಡಿಗಳ ಭದ್ರತೆ ಮತ್ತು ವಿಸ್ತಾರದ ಕುರಿತು ದೇಶದ ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ Forum For Integrated National Security (FINS) ಸಂಸ್ಥೆ “ಸರಹದ್ ಕೋ <

strong>ಪ್ರಣಾಮ್ ” ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ನವೆಂಬರ್ 19 ರಿಂದ 23 ರವರೆಗೆ ಆಯೋಜಿಸಿತ್ತು. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 11 ಸಾವಿರದಷ್ಟು ಯುವಕರು ಈ ದಿನಗಳಲ್ಲಿ ದೇಶದ ಗಡಿ ಸರಹದ್ದನ್ನು ತಲುಪಿ ಅಲ್ಲಿಯ ಜನಜೀವನ – ಭೌಗೋಳಿಕ ಸಂಗತಿಗಳನ್ನು ಅರಿತರು. ಬೆಂಗಳೂರು ಹಾಗೂ ಮಂಗಳೂರಿನಿಂದ ಒಂದಷ್ಟು ಯುವಕರು ‘ಸರಹದ್ ಕೋ ಪ್ರಣಾಮ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಮ್ಮ ಯುವಪೀಳಿಗೆ, ನಮ್ಮ ಭಾರತ ದೇಶದ ಭೂಭಾಗಗಳು ಮತ್ತು ಅದರ ಸೀಮೆಯನ್ನು ನೋಡಬೇಕು ಮತ್ತು ತಿಳಿದಿರಬೇಕು. ರಾಷ್ಟ್ರಗಡಿಗಳಲ್ಲಿ ವಾಸಿಸುತ್ತಿರುವ ಜನಗಳ ಬಗ್ಗೆಯೂ ತಿಳಿದಿರಬೇಕು. ಅಲ್ಲಿಯ ವಾತಾವರಣ ಮತ್ತು ಸುತ್ತಲಿನ ಪರಿಸರವನ್ನು ತಿಳಿಯಬೇಕು. ಸೀಮಾರಕ್ಷಕರ ಮರ್ಮಗಳಲ್ಲಿ ಒಂದಾಗಿ, ಈ ವಿಷಯದಲ್ಲಿ ಜ್ಞಾನ ಹೆಚ್ಚಿಸುವುದಕ್ಕೆ ಬೇಕಾಗಿ ಸೀಮೆಯೊಂದಿಗೆ ಸಂವಾದ ನಡೆಸಿ. ’ದೇಶ ರಕ್ಷಣೆಯ ಧರ್ಮ ನಮ್ಮದು, ದೇಶ ಸೇವೆಯ ಕರ್ಮ ನಮ್ಮದು’ (ದೇಶ ರಕ್ಷಣೆ ನಮ್ಮ ಧರ್ಮ, ದೇಶ ಸೇವೆ ನಮ್ಮ ಕರ್ಮ) ಈ ಜಯಘೋಷ ಜೀವನ ಮಂತ್ರವಾಗಿರಲಿ. ದೇಶದ ಉತ್ತಮ ನಾಗರಿಕನಾಗಿರುವ ಜವಾಬ್ದಾರಿಗಳನ್ನು ಸಫಲತೆಯೊಂದಿಗೆ ನಿರ್ವಹಣೆ ಮಾಡಬೇಕೆಂಬ ಉದ್ದೇಶದಿಂದ ’ಸರಹದ್ ಕೋ ಪ್ರಣಾಮ್’ (ರಾಷ್ಟ್ರಗಡಿಗೆ ನಮನ) ಕಾರ್ಯಕ್ರಮ ಫಿನ್ಸ್ Forum for Integrated National Security (FINS) ವತಿಯಿಂದ ನವೆಂಬರ್ 19 ರಿಂದ 23 ರವರೆಗೆ ನಡೆಯಿತು.

Sarhad Ko Pranam - 2012
Sarhad Ko Pranam – 2012

ಸೀಮೆಯೊಂದಿಗೆ ಸಂವಾದ

ಗಡಿ ಭಾಗಗಳನ್ನು ತಿಳಿದುಕೊಳ್ಳುವುದು. ಅಲ್ಲಿಯ ಭೌಗೋಳಿಕ ಪರಿಸ್ಥಿತಿಗಳನ್ನು, ನೀರು, ವನ, ಮರುಭೂಮಿ, ಹಿಮ, ನದಿ-ಪರ್ವತ, ಪಶು, ಪಕ್ಷಿ, ಜಲಚರಗಳು ಇತ್ಯಾದಿ ಆ ಪರಿಸರವನ್ನು ತಿಳಿಯುವುದು. ಗಡಿಪ್ರದೇಶದ ನಿವಾಸಿಗಳೊಂದಿಗೆ ಮಾತುಕತೆ ಮಾಡುವುದು. ಅಲ್ಲಿಯ ಜನಗಳಿಗೆ ದೊರೆಯುತ್ತಿರುವ ಸ್ವಾಸ್ಥ್ಯ, ಶಿಕ್ಷಣ ಮತ್ತು ಉದ್ಯೋಗಗಳಂತಹ ವಿಷಯಗಳನ್ನು ತಿಳಿದುಕೊಳ್ಳುವುದು. ರಸ್ತೆ, ವಿದ್ಯುತ್, ನೀರು ಮೊದಲಾದ ಮೂಲಭೂತ ಅವಶ್ಯಕತೆಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡುವುದು. ಸೀಮಾ ಸುರಕ್ಷೆಯಲ್ಲಿ ನಿರತರಾಗಿರುವ ಸೈನಿಕರನ್ನು ಗೌರವಿಸುತ್ತಾ ಅವರ ಅನುಭವಗಳನ್ನು ತಿಳಿದುಕೊಳ್ಳುವುದು. ಸುರಕ್ಷತೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಮನದಟ್ಟು ಮಾಡಿಕೊಳ್ಳುವುದು. ಅಲ್ಲಿರುವ ವ್ಯವಸ್ಥೆಯಲ್ಲಿರುವ ಒಳ್ಳೆಯದು ಮತ್ತು ನ್ಯೂನತೆಗಳನ್ನು ನೋಡುವುದು ಮತ್ತು ತಿಳಿಯುವುದು. ಈ ರೀತಿಯಾಗಿ ರಚನಾತ್ಮಕ ಕಾರ್ಯಗಳನ್ನು ಮಾಡುತ್ತಾ ಗಡಿಪ್ರದೇಶದ ಭೌಗೋಳಿಕ ಮತ್ತು ಸಾಮಾಜಿಕ ವಿಷಯಗಳನ್ನು ತಿಳಿದುಕೊಳ್ಳುವ ಕಾರ್ಯವೇ – ಸೀಮೆಯೊಂದಿಗೆ ಸಂವಾದ.

ಈ ಕಾರ್ಯಕ್ರಮದ ಅಂಗವಾಗಿ ದೇಶದ 640 ಜಿಲ್ಲೆಗಳಿಂದ 1೦,೦೦೦ ಕಾರ್ಯಕರ್ತರು ಬಾಂಗ್ಲಾದೇಶ, ಟಿಬೇಟ್, ಪಾಕಿಸ್ತಾನ, ಆಫ್ಘಾನಿಸ್ಥಾನ, ನೇಪಾಳ, ಮಾಯನ್ಮಾರ್ ಮತ್ತು ಭೂತಾನ್ ಹೀಗೆ 7 ದೇಶದ ಗಡಿಗಳಿಗೆ ಏಕಕಾಲದಲ್ಲಿ ತೆರಳಿ ಅಲ್ಲಿನ ಸ್ಥಿತಿಗಳನ್ನು ಅಧ್ಯಯನ ಮಾಡಿದರು. ಮಂಗಳೂರು ನಗರದಿಂದ ೮ ಕಾರ್ಯಕರ್ತರು ಭೂತಾನದ ಗಡಿಗೆ ಈ ಕಾರ್ಯಕ್ಕಾಗಿ ಹೋಗಿದ್ದೆವು. ಹೋಗುವುದಕ್ಕೆ ಮೊದಲು ೪-೫ ತಿಂಗಳಿನಿಂದ ದಿನಕ್ಕೆ ಸುಮಾರು 4-5 ಕಿ.ಮಿ. ನಡೆಯುವುದನ್ನು ಅಭ್ಯಾಸ ಮಾಡಿದ್ದೆವು. ನಾವು ಹೋದ ಜಾಗವು ಗುಡ್ಡಗಾಡು ಪ್ರದೇಶವಾಗಿದ್ದು ದಿನಕ್ಕೆ ೧೫ ರಿಂದ ೨೦ ಕಿ.ಮಿ. ನಡೆದುಕೊಂಡು ಅಲ್ಲಿ ವಾಸ ಮಾಡುವ ಜನರನ್ನು ಮಾತನಾಡಿಸಬೇಕಾಗಿತ್ತು. ಅಲ್ಲದೇ ಅಲ್ಲಿಯ ವಾತಾವರಣಕ್ಕೆ ನಮ್ಮನ್ನು ನಾವು ಸಿದ್ಧಗೊಳಿಸಿಕೊಂಡಿದ್ದೆವು.

ನವೆಂಬರ್ 16ರಂದು ನಾವು ಬೆಂಗಳೂರಿನಿಂದ ಹೊರಟು 19 ರಂದು ಅಲಿಪುರದ್ವಾರ – ಪಶ್ಚಿಮ ಬಂಗಾಳಕ್ಕೆ ತಲುಪಿದೆವು. ಮರುದಿನ ನಮಗೆಲ್ಲ ಗಡಿಯ ವಾತಾವರಣ, ಜನರ ಮಾನಸಿಕತೆ, ಗಡಿ ದೇಶದೊಂದಿಗೆ ಗಡಿಯಲ್ಲಿನ ಜನರ ಸಂಬಂಧ ಹೀಗೆ ಎಲ್ಲ ವಿಷಯಗಳನ್ನು ಮನವರಿಕೆ ಮಾಡಿಕೊಡಲಾಯಿತು. ಮರುದಿನ 20ನೇ ತಾರೀಕಿನಂದು ಗಡಿಯಲ್ಲಿ ಜನರೊಂದಿಗೆ ಸಂವಾದಕ್ಕಾಗಿ ಭಾರತ-ಭೂತಾನ ಗಡಿಯ ನಗರವಾದ ’ಜಯಗಾಂವ್’ನ ಪರಿಸರಕ್ಕೆ ಹೊರಟೆವು. ದಾರಿಯುದ್ದಕ್ಕೂ ವಿದ್ಯಾರ್ಥಿಗಳು, ವಸತಿ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಜನರ ಮಾತುಗಳನ್ನು ಕೇಳಿದಾಗ ವಾಸ್ತವತೆ ಏನೆಂದು ಅರಿವಿಗೆ ಬಂದಿತು.

ಮೊದಲನೆಯದಾಗಿ ಅಲ್ಲಿ ಕುಡಿಯುವ ನೀರು, ಭೂತಾನ ದೇಶದ ಗಡಿಯಲ್ಲಿ ವಾಸ ಮಾಡುವ ಭಾರತೀಯರಿಗೆ ತಿಂಗಳಿಗೆ 4೦೦.೦೦ ರೂಪಾಯಿಗಳಂತೆ ತೆಗೆದುಕೊಂಡು ದಿನಕ್ಕೆ 3೦ ನಿಮಿಷ ನೀರನ್ನು ಪೂರೈಕೆ ಮಾಡುತ್ತಾರೆ. ಇಲ್ಲಿನ ಸರಕಾರ ಈ ಬಗ್ಗೆ ಕಾಳಜಿಯನ್ನೇ ವಹಿಸದಿರುವುದು ಗಮನಕ್ಕೆ ಬರುತ್ತಿತ್ತು. ದುಡಿಯಲು ಕೆಲಸವಿಲ್ಲದೇ ಭೂತಾನ ದೇಶದ ಗಡಿಯಲ್ಲಿ ಇರುವ ಕಾರ್ಖಾನೆಗಳಿಗೆ ನಮ್ಮ ದೇಶದ ಯುವಕರು ದಿನಗೂಲಿ ಕೆಲಸಕ್ಕೆ ಹೋಗುವುದು ಸಾಮಾನ್ಯವಾಗಿತ್ತು. ಅತ್ಯಂತ ಕಡಿಮೆ ಸಂಬಳಕ್ಕೆ ನಮ್ಮ ಜನರನ್ನು ದುಡಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದಿತು.

ಶಿಕ್ಷಣವಂತೂ 12ನೇ ತರಗತಿಯವರಗೆ ಮಾತ್ರ ಓದಲು ಅನುಕೂಲವಾಗಿದೆ. ಯಾರು ಹಣವಂತರೋ ಅಂತಹವರ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಉಳಿದವರು ಓದು ನಿಲ್ಲಿಸಿ ಮುಂಬಯಿ, ಕಲ್ಕತ್ತಾ, ಬೆಂಗಳೂರು ಹೀಗೆ ಕೆಲಸವನ್ನು ಹುಡುಕಿಕೊಂಡು ಹೊಟೇಲ್ ಅಥವಾ ಕಾರ್ಖಾನೆಗಳಿಗೆ ತೆರಳುತ್ತಾರೆ. ಇದರಿಂದಾಗಿ ಗಡಿಯ ಹಳ್ಳಿಗಳಲ್ಲಿ ಯುವ ಪೀಳಿಗೆ ಕ್ಷೀಣಿಸುತ್ತಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು.

ವಿದ್ಯುತ್ ಕೆಲವು ಜನರ ಮನೆಗಳಿಗೆ ಇದೆ ಕೆಲವರ ಮನೆಗಳಲ್ಲಿ ಇಲ್ಲ. ಈ ದೃಷ್ಟಿಯಿಂದ ಹೋರಾಟ ಮಾಡಿದರೂ ಜನರ ಗೋಳು ಕೇಳುವವರೇ ಇಲ್ಲವಾಗಿದೆ.

Sarhad Ko Pranam-Team at Bhutan Border

ಪ್ರಾಥಮಿಕ ಆರೋಗ್ಯ ಕೇಂದ್ರಗಳಾಗಲೀ ಆಗಾಗಲಾದರೂ ಬಂದು ಹೋಗುವ ವೈದ್ಯರಾಗಲೀ ಯಾರೂ ಈ ದಿಕ್ಕಿನ ಕಡೆಗೆ ಬರಲೇ ಇಲ್ಲ. ಸಣ್ಣ ಜ್ವರ ಬಂದರೂ 45 ರಿಂದ 50 ಕಿ.ಮೀ. ದೂರಕ್ಕೆ ಹೋಗಬೇಕಾಗುತ್ತದೆ. ಚುನಾಯಿತ ಪ್ರತಿನಿಧಿಗಳ ಪರಿಚಯ ಕೆಲವೇ ಜನರಿಗೆ ಇತ್ತು. ಸರಕಾರದ ಯೋಜನೆಗಳು ಇದ್ದರೂ ಈ ಭಾಗಕ್ಕೆ ಬರುವುದೇ ಇಲ್ಲ. ಅಲ್ಪ ಸ್ವಲ್ಪ ಜನ ಭತ್ತದ ಕೃಷಿ ಮಾಡುತ್ತಾರೆ. ಹೀಗೆ ಪ್ರಾಥಮಿಕ ಸೌಲಭ್ಯಗಳಿಂದ ಜನರು ವಂಚಿತರಾಗಿರುವುದಂತೂ ಸ್ಪಷ್ಟವಾಗಿ ಗಮನಕ್ಕೆ ಬರುತ್ತಿತ್ತು. ಇಷ್ಟೆಲ್ಲ ಸಮಸ್ಯೆಗಳ ನಡುವೆಯೂ ಮಾತನಾಡಿಸಿದ ವಿದ್ಯಾರ್ಥಿಗಳಲ್ಲಿ ಅನೇಕರು ಹೇಳಿದ್ದು ನಾನು ಮುಂದೆ ಸೈನ್ಯಕ್ಕೆ ಸೇರುತ್ತೇನೆ ದೇಶದ ಗಡಿ ಕಾಯುತ್ತೇನೆ ಎಂದು, ವಿದ್ಯಾರ್ಥಿನಿಯರು ಹೇಳಿದ್ದು ನರ್ಸ್ ಆಗುತ್ತೇನೆ ಎಂದು.

ಇನ್ನು ದೇಶದ ಗಡಿಯ ರಕ್ಷಣೆಯ ವಿಚಾರಕ್ಕೆ ಬಂದರೆ ಆ ಭಾಗದಲ್ಲಿ ಎಸ್.ಎಸ್.ಬಿ. ಸಶಸ್ತ್ರ ಸೀಮಾ ಬಲದ ಸೈನಿಕರು ದೇಶದ ಗಡಿಯನ್ನು ಕಾಯುತ್ತಾರೆ. ಗಡಿಯುದ್ದಕ್ಕೂ ಹೋಗುವಾಗ 34th BN ಸಶಸ್ತ್ರ ಸೀಮಾಬಲ ತುಕಡಿಯ ಆಧಾರ ಶಿಬಿರ ಸಿಕ್ಕಿತು. ಅಲ್ಲಿದ್ದ ಸೈನಿಕನನ್ನು ಮಾತನಾಡಿಸಿದಾಗ ತುಂಬಾ ಸಂತೋಷದಿಂದ ಬರಮಾಡಿಕೊಂಡನು. ಅಲ್ಲಿನ ಉಪಸ್ಥಿತ ಸೇನಾಧಿಕಾರಿಯ ಅಪ್ಪಣೆಯೊಂದಿಗೆ ನಮಗೆ ಒಳಗಡೆ ಹೋಗಲು ಅನುಮತಿ ದೊರೆಯಿತು. ನಮ್ಮ ಆಗಮನ ಅನೇಕ ಸೈನಿಕರಲ್ಲಿ ಸಂತೋಷ ತಂದಿದ್ದು ಮುಖಗಳಲ್ಲಿ ವ್ಯಕ್ತವಾಗುತ್ತಿತ್ತು. ನಮ್ಮ ಗುಂಪಿನಲ್ಲಿದ್ದ ೧೬ ಜನರಲ್ಲಿ ೬ ಜನರಿಗೆ ಅಧಿಕಾರಿಗಳೊಂದಿಗೆ ಮಾತನಾಡಲು ಅವಕಾಶ ಕಲ್ಪಿಸಲಾಯಿತು. ಅಲ್ಲಿನ ಅಧಿಕಾರಿಗೆ ನಮ್ಮ ಉದ್ದೇಶವನ್ನು ವಿಸ್ತಾರವಾಗಿ ವಿವರಿಸಲಾಯಿತು. ಅದಕ್ಕೆ ಅವರಿಂದ ಮೆಚ್ಚುಗೆಯ ಪ್ರತಿಕ್ರಿಯೆಯೂ ಸಿಕ್ಕಿತು. ಅವರೊಂದಿಗೆ ಮಾತನಾಡಿದಾಗ, ಅಧಿಕಾರಿ ಹೇಳಿದ್ದು ನಿಯಮದ ಪ್ರಕಾರ ಭಾರತ – ಭೂತಾನ ದೇಶಗಳು ಮಿತ್ರ ರಾಷ್ಟ್ರಗಳು. ಭಾರತೀಯರು 4 ಕಿ.ಮೀ. ಭೂತಾನದಲ್ಲೂ 4 ಕಿ. ಮೀ. ಭೂತಾನದವರು ಭಾರತದಲ್ಲೂ ಪ್ರವೇಶ ಮಾಡಬಹುದು. ಈ ಒಪ್ಪಂದದ ಕಾರಣದಿಂದ ಗಡಿಯಲ್ಲಿ ಇರುವ ಅನೇಕ ಕಾರ್ಖಾನೆಗಳಿಗೆ ’ಇಂಜೀನಿಯರ್’ ರೂಪದಲ್ಲಿ ಚೀನಾದ ಜನರು ಭಾರತದ ಒಳಪ್ರವೇಶ ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ ಮತ್ತು ಇವರು ಭೂತಾನ್ ಪ್ರಜೆಗಳಂತೆ ನೋಡಲು ಇರುವುದರಿಂದ ಇವರನ್ನು ಗುರುತಿಸುವುದು ಬಹಳ ಕಷ್ಟದ ಕೆಲಸವಾಗುತ್ತಿದೆ. ಹಾಗೂ ಗಡಿಯಲ್ಲಿ ಇರುವ ನದಿಯಲ್ಲಿ ಆ ಭಾಗದಲ್ಲಿ ವಾಸ ಮಾಡುವ ಅನ್ಯ ಕೋಮಿನ ಯುವಕರು ಗೋಮಾಂಸವನ್ನು ಭೂತಾನ್ ದೇಶಕ್ಕೆ ಸಾಗಾಣಿಕೆ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಈ ರೀತಿ ಅಧಿಕಾರಿಗಳು ಅನೇಕ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡರು.

ಆದರೆ ವಾಸ್ತವವಾಗಿ ಗಡಿಭಾಗದ ಜನರು ಹೇಳುವುದೇ ಬೇರೆ. SSB ಸೈನಿಕರು ತಮ್ಮ ಕೆಲಸವನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಭೂತಾನ್ ದೇಶದ ಜನರನ್ನು ಮಾತ್ರ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದು. ಭೂತಾನ್ ದೇಶದಲ್ಲಿ ೪ ಕಿ.ಮೀ. ಮುಂದೆ ಹೋಗಲು ಕಾನೂನಿನ ಪ್ರಕಾರ ಮಾನ್ಯತೆ ಪಡೆ ಪತ್ರವನ್ನು ಪಡೆಯಲೇಬೇಕಾದ ಕಟ್ಟುನಿಟ್ಟಾದ ನಿಯಮವನ್ನು ಪಾಲಿಸಲಾಗುತ್ತಿದೆ. ಅದೇ ಭಾರತದಲ್ಲಿ ಈ ನಿಯಮಗಳಿಗೆ ಯಾವುದೇ ರೀತಿಯ ವ್ಯವಸ್ಥೆಗಳೇ ಇಲ್ಲ. ನಮ್ಮ ದೇಶದ ಗಡಿ ಸೈನಿಕರು ಆ ದೇಶದ ವಾಹನಗಳಿಗೆ – ಜನರಿಗೆ ಪ್ರಶ್ನಿಸುವ ಪ್ರಯತ್ನವನ್ನು ಮಾಡದೇ ಮೂಕ ಪ್ರೇಕ್ಷಕರಂತೆ ಇರುವುದು ನೋಡುವಾಗಲೇ ಗೊತ್ತಾಗುತ್ತಿತ್ತು. ಇದರ ಪರಿಣಾಮವಾಗಿ ಭೂತಾನಿ ಪ್ರಜೆಗಳು ಭಾರತದ ಒಳಗೆ ಎಷ್ಟು ಬೇಕಾದರೂ ದೂರಕ್ಕೆ ಕಾಣಸಿಗುತ್ತಿದ್ದರು. ಹಾಗೆ ಭೂತಾನ ಅನುಮತಿ ಪಡೆದ ವಾಹನಗಳೂ ಕೂಡಾ ನೋಡಲು ರಸ್ತೆಗಳಲ್ಲಿ ಸಿಗುತ್ತಿದ್ದವು. ಇದು ವಾಸ್ತವ ಎಂದು ಅಲ್ಲಿನ ನಾಗರಿಕರು ತಮ್ಮ ನೋವನ್ನು ವ್ಯಕ್ತಪಡಿಸಿದರು.

Border to Bhutuan

ನಾವು ಗಡಿಯ ಅಂತಿಮ ಭಾಗಕ್ಕೆ ತಲುಪಿದಾಗ ನಮ್ಮಲ್ಲಿದ್ದ ತಿರಂಗಾ ರಾಷ್ಟ್ರಧ್ವಜವನ್ನು ಎತ್ತಿ ಹಿಡಿದೆವು. ರಾಷ್ಟ್ರನಮನ ಸಲ್ಲಿಸಿದೆವು. ಸುಮಾರು ೫ ಕಿ.ಮೀ. ವರೆಗೆ ನಮ್ಮ ಸೈನಿಕರು ಗಡಿಯಲ್ಲಿ ಕಾಣಲು ಸಿಗಲೇ ಇಲ್ಲ. ಆದರೆ ನಾವು ಗಡಿಗೆ ತಲುಪುತ್ತಿದ್ದಂತೆ ಭೂತಾನ ಗಡಿ ಕಾವಲು ಪೊಲೀಸರು ನಮ್ಮತ್ತ ಧಾವಿಸಿ ಬಂದರು. ’ಹಿಂದಿ’ ಭಾಷೆಯಲ್ಲಿ ಅವರೊಂದಿಗೆ ಮಾತುಕತೆ ಆಯಿತು. ಅವರ ಕೈಗೆ ’ರಕ್ಷೆ’ ಕಟ್ಟಿದೆವು. ನಂತರ ಅಲ್ಲಿಂದ ಪ್ರಯಾಣವನ್ನು ಮುಂದುವರಿಸಿದೆವು. ಸುಮಾರು 13 ಕಿ.ಮೀ. ಕ್ರಮಿಸಿದ ನಂತರ ಕಾಡಿನಲ್ಲಿ ಗೂರ್ಖಾ ನೇಪಾಳಿ ಬಂಧುಗಳು ನಮಗೆ ಊಟದ ವ್ಯವಸ್ಥೆಯನ್ನು ಅವರದೇ ಆದ ಶೈಲಿಯಲ್ಲಿ ಮಾಡಿದ್ದರು. ಅಲ್ಲಿ ಹಬ್ಬದ ವಾತಾವರಣ ನೋಡಲು ಸಿಕ್ಕಿತು. ಇರುವ 12-14ಮನೆಗಳಿಂದ ಎಲ್ಲರೂ ಬಂದಿದ್ದರು. ಆತ್ಮೀಯತೆಯಿಂದ ಉಣಬಡಿಸಿದರು. ಇವರಲ್ಲಿ ಒಬ್ಬ ವಯಸ್ಸಾದ ವ್ಯಕ್ತಿ ’ನಿಮಗೆ ಶುಭಾಶಯಗಳು’ ಎಂದು ಹೇಳಿದರು. ಯಾಕೆ ಶುಭಾಶಯ ಎಂದು ಕೇಳಿದಾಗ 2004 ರಲ್ಲಿ ಮೋದಿಜೀ ಪ್ರಧಾನಮಂತ್ರಿ ಆಗುತ್ತಾರೆ. ಆಗ ದೇಶದ ಮತ್ತು ನಮ್ಮೆಲ್ಲರ ಒಳಿತಾಗುತ್ತದೆ’ ಎಂದು ವಿಶ್ವಾಸದಲ್ಲಿ ಉತ್ತರಿಸಿದರು. ಆ ಕಾಡಿನ ಮಧ್ಯೆ ಇರುವ ಸಣ್ಣ ಕುಗ್ರಾಮದ ವ್ಯಕ್ತಿಗೂ ದೇಶದ ಬಗ್ಗೆ ಆಗುಹೋಗುಗಳ ಬಗ್ಗೆ ಗಮನವಿರುವುದು ತಿಳಿಯಿತು. ಅನೇಕರು ನಮ್ಮ ಮಕ್ಕಳನ್ನು ಶಿಕ್ಷಣ ಕೊಡಿಸಲು ಕರೆದುಕೊಂಡು ಹೋಗಿ ಎಂದರು. ಇನ್ನು ಕೆಲವರು ನೀವು ಮತ್ತೆ ಮತ್ತೆ ಬನ್ನಿ ಎಂದರು. ಅಲ್ಲಿಯ ನೆನಪು ಅತ್ಯಂತ ಹಸಿರಾಗಿ ಉಳಿಯುವಂತಾಯಿತು.

ಈ ಭಾಗದ ಜನರನ್ನು ನೋಡಿದಾಗ ಭಾರತೀಯ ಸಂಸ್ಕೃತಿ ಅತ್ಯಂತ ಗಟ್ಟಿಯಾಗಿ ಇರುವುದು ಕಂಡುಬರುತ್ತಿತ್ತು. ಅವರು ಧರಿಸುವ ಬಟ್ಟೆ, ಹಣೆಯ ಮೇಲೆ ಸಿಂಧೂರ – ತಿಲಕ ಮುಖದಲ್ಲಿ ಲಕ್ಷಣವಾಗಿ ಎದ್ದು ಕಾಣುತ್ತಿತ್ತು. ಅದೇ ರೀತಿ ಅವರುಗಳ ಹೆಸರುಗಳು ಪೌರಾಣಿಕ ಹೆಸರುಗಳು – ಸೀತಾ, ದಿವಾಕರ, ಸರಸ್ವತಿ, ದಶರಥ ಈ ರೀತಿಯಾಗಿ. ಜೊತೆಗೆ ಅಷ್ಟೇ ವಿನಯಪೂರ್ವಕವಾಗಿ ಮಾತನಾಡಿಸುತ್ತಿದ್ದರು. ಇದು ನಮ್ಮ ಮೇಲೆ ಬಹಳಷ್ಟು ಪರಿಣಾಮ ಬೀರಿತು. ಅಲ್ಲಿ ಸರಾಸರಿ ಆಯುಷ್ಯ 85 ವರ್ಷ ಎಂದು ಅಲ್ಲಿಯ ಪ್ರಮುಖರೊಬ್ಬರು ಹೇಳಿದರು.

ಆ ಭಾಗದಲ್ಲಿ ೨ ಪ್ರಾಥಮಿಕ ಶಾಲೆಗಳು ಸಿಕ್ಕವು. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಸುವ ಶಾಲೆಗಳು. ಇರುವ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು ಶಾಲೆಯನ್ನು ಖಾಸಗಿಯಾಗಿ ಒಬ್ಬರು ನಡೆಸುತ್ತಿರುವರು. ಅಲ್ಲಿನ ಮಕ್ಕಳನ್ನು ಮಾತನಾಡಿಸಿದಾಗ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು ಎಂದು ಹಂಬಲಿಸುತ್ತಿರುವುದು ಗಮನಕ್ಕೆ ಬಂತು. ಈ ಭಾಗದಲ್ಲಿ ಸರಕಾರದ ಯೋಜನೆಗಳು ತಲುಪಲೇ ಇಲ್ಲ. ಇಲ್ಲಿ ಅನೇಕರು ಭಾರತದಲ್ಲಿ ಮನೆ ಇದ್ದು ಭೂತಾನ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಎರಡೂ ದೇಶದ ಮತದಾರರ ಹಕ್ಕನ್ನು ಪಡೆದಿದ್ದಾರೆ. ಇನ್ನು ಕೆಲವರು ಅಲ್ಲಿ ಕೆಲಸ ಸಿಗದೇ ಕಷ್ಟದಲ್ಲಿ ಜೀವನವನ್ನು ನಿಭಾಯಿಸುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿಯನ್ನು ಗಡಿಯುದ್ದಕ್ಕೂ ನಮಗೆ ನೋಡಲು ಸಿಕ್ಕಿತು. ಸುಮಾರು 20-24 ಕಿ.ಮೀ. ಕ್ರಮಿಸಿ ಮರಳಿ ’ಜಯಗಾಂವ್’ ನಗರದ ವಾಸ್ತವ್ಯಕ್ಕೆ ಮರಳಿದೆವು.

ಈ ನಗರ ಎರಡೂ ದೇಶದ ಗಡಿಯ ಗೋಡೆಯನ್ನು ಮತ್ತು ಊರನ್ನು ಹೊಂದಿದೆ. ಭೂತಾನ್‌ಗೆ ಮುಖ್ಯ ಪ್ರವೇಶ ದ್ವಾರವೂ ಇಲ್ಲೇ ಇರುವುದು. ಈ ಮಾರ್ಗದಿಂದಲೇ ಸರಕು ಸಾಗಾಣಿಕೆ ಈ ದೇಶಕ್ಕೆ ಆಗುವುದು. ಇಲ್ಲಿ ಗಮನಕ್ಕೆ ಬಂದ ಅಂಶವೇನೆಂದರೆ ಗೋಡೆಯ ಆ ಬದಿ ಭೂತಾನ ನೆಲದಲ್ಲಿ ಅತ್ಯಂತ ಸ್ವಚ್ಛವಾಗಿ ಕೂಡಿರುವ ವಾತಾವರಣ, ಕಾಲುದಾರಿಗಳು-ಅಂಗಡಿಗಳು – ಕಚೇರಿಗಳು ಒಂದು ಒಳ್ಳೆಯ ಶಿಸ್ತಿನ ವಾತಾವರಣ. ಅದೇ ರೀತಿ ಕಾನೂನಿನ ನಿಯಮಗಳೂ ಸಹ. ಕಸಕಡ್ಡಿ ಹಾಕಿದರೆ 20/- ದಂಡ, ಧೂಮಪಾನ ಮಾಡಿದರೆ 100/- ದಂಡ ವಿಧಿಸಲಾಗುತ್ತದೆ. ಈ ನಿಯಮಗಳಿಂದಾಗಿ ಜನರು ಕಾನೂನನ್ನು ಪಾಲಿಸುತ್ತಾರೆ. ಅದೇ ರೀತಿ ವಾತಾವರಣವು ಶುಭ್ರವಾಗಿದೆ, ಸ್ವಚ್ಛವಾಗಿದೆ. ಹಾಗಾಗಿ ಅಲ್ಲಿಯ ವ್ಯಕ್ತಿ ಧೂಮಪಾನ ಮಾಡಬೇಕೆಂದರೆ ಆಚೆಯಿಂದ ಭಾರತದ ಭಾಗಕ್ಕೆ ಬಂದು ಧೂಮಪಾನ ಮಾಡಿ ಮರಳಿ ಆ ಭಾಗಕ್ಕೆ ಹೋಗುತ್ತಿದ್ದ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಇದನ್ನು ಪ್ರಶ್ನೆ ಮಾಡಲು ನಮ್ಮ ಸೇನಾ ಜವಾನರು ಮುಂದಾಗುತ್ತಿರಲಿಲ್ಲ. ಇದರಿಂದ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕ ರೀತಿಯಲ್ಲಿ ವರ್ತಿಸುತ್ತಿದ್ದರು. ಮಾರ್ಗದ ಬದಿಯಲ್ಲಿ ಕೊಳಚೆ – ಭಿಕ್ಷುಕರು ಈ ರೀತಿಯ ದೃಶ್ಯಗಳು ಕಾಣುತ್ತಿದ್ದವು. ಇದು ನಮ್ಮಲ್ಲಿನ ಕಾನೂನು ಸುವ್ಯವಸ್ಥೆಯನ್ನು ತೋರಿಸುತ್ತಿತ್ತು.

22 ರಂದು ಬೆಳಿಗ್ಗೆ 9.30ಕ್ಕೆ ’ಜಯಗಾಂವ್’ ನಗರದಲ್ಲಿ ಅಲ್ಲಿನ ವ್ಯಾಪಾರಸ್ಥರು ಮತ್ತು ಅಲ್ಲಿನ ಜನರನ್ನು ಮಾತನಾಡಿಸುವುದಕ್ಕೆ ಹೊರಟೆವು. ನಗರದಿಂದ 1.5 ಕಿ.ಮೀ. ದೂರದಲ್ಲಿ ಹೊರ ವಲಯದಲ್ಲಿ ನದಿಯೊಂದು ಹರಿಯುತ್ತದೆ. ಈ ತೋರ್ಸಾ ನದಿಯು ಭೂತಾನ್ – ಭಾರತ ಗಡಿಗೆ ತಾಗಿಕೊಂಡು ಸ್ಮಶಾನವಿದೆ. ಇಲ್ಲಿ ಸದ್ಗತಿಯ ಕಾರ್ಯಗಳು ಆಗುತ್ತವೆ. ಇಲ್ಲಿ ಕಾಳಿಮಾತೆಯ ಮಂದಿರವಿದೆ. ಊರಿನ ಜನರು ಸದ್ಗತಿಯ ಕಾರ್ಯಕ್ಕಾಗಿ ಇಲ್ಲಿ ಬಂದು ಕಾರ್ಯ ಮಾಡಿಸುತ್ತಾರೆ. ಇಲ್ಲಿ ಒಬ್ಬ ಸುರೇಶ ಚೌಧರಿ ಎಂಬ ಹೆಸರಿನ ಸಾಧು ಈ ಕೆಲಸಗಳನ್ನು ಅನೇಕ ವರ್ಷಗಳಿಂದ ಮಾಡುತ್ತಾ ಬಂದಿರುವರು. ಇವರನ್ನು ’ಸ್ಮಶಾನ್ ಬಾಬಾ’ ಎಂದೂ ಕರೆಯಲಾಗುತ್ತದೆ.40 ವರ್ಷಗಳಿಂದ ಇಲ್ಲಿಯೇ ಈ ಕೆಲಸಗಳನ್ನು ಮಾಡುತ್ತಿರುವನು. ಕಳೆದ 5-6 ತಿಂಗಳ ಹಿಂದೆ ಭೂತಾನಿನ ಸೀಮಾ ಗೋಡೆಯನ್ನು ೧೦೦ ಮೀಟರಿನಷ್ಟು ಮುಂದಕ್ಕೆ ತಂದು ಕಟ್ಟಿರುವುರಿಂದ ಇವರು ಪೂಜೆಗೈಯುತ್ತಿದ್ದ ಮಂದಿರ ಭೂತಾನ್‌ನ ಒಳಗೆ ಹೋಗಿರುತ್ತದೆ. ಮಂದಿರವನ್ನು ಭೂತಾನಿನ ಸರಕಾರ ಸಂಪೂರ್ಣ ವಶಕ್ಕೆ ತೆಗೆದುಕೊಂಡು ಈತನನ್ನೂ ಅಲ್ಲಿಂದ ಹೊರದಬ್ಬಿದೆ. ಮತ್ತು ತನಗೆ ಅನುಕೂಲವಾಗುವಂತೆ ನಕ್ಷೆಯನ್ನು ತಯಾರಿಸಿ ಭಾರತದ ಗಡಿಭಾಗದ ಪಂಚಾಯಿತಿಯ ಅಧ್ಯಕ್ಷನಿಗೆ ಕೊಟ್ಟು ಅನುಮತಿಯ ಮೇರೆಗೆ ಈ ಸ್ಥಳವನ್ನು ಆಕ್ರಮಿಸಿಕೊಂಡಿದೆ. ಇದಕ್ಕೆ ಹೋರಾಟ ಮಾಡಲು ಪ್ರತಿರೋಧ ವ್ಯಕ್ತಪಡಿಸಿದ ಸಾಧುಗೆ ಹೆದರಿಸಿ ಪಕ್ಕದಲ್ಲಿ ಸಣ್ಣ ಸ್ಥಳವನ್ನು ನೀಡಿ 45,000 ರೂಪಾಯಿಗಳನ್ನು ನೀಡಲಾಗಿದೆ ಎಂದು ನೊಂದುಕೊಂಡು, ನನಗೆ ಅನ್ಯಾಯವಾಗಿದೆ. ನನ್ನ ದೇವಿ ಅಲ್ಲಿ ಇರುವಳು. ಈಗ ತಾತ್ಕಾಲಿಕ ಮಂದಿರದಲ್ಲಿ ಪೂಜೆ ಮಾಡುತ್ತಿದ್ದೇನೆ. ನನ್ನ ಮನಸ್ಸೆಲ್ಲ ಅಲ್ಲಿದೆ ಎಂದು ಗೋಳಿಟ್ಟರು. ಸಾಧು ಹೇಳಿದ ಇನ್ನೊಂದು ಮಾತೆಂದರೆ ಇಲ್ಲಿನ ಆಡಳಿತ ಹಾಗೂ ಸಶಸ್ತ್ರ ಸೀಮಾ ಬಲ ಎಲ್ಲರೂ ತಮ್ಮನ್ನು ಭೂತಾನ್ ದೇಶಕ್ಕೆ ಮಾರಿಕೊಂಡಿದ್ದಾರೆ. ಹಣ ತಿನ್ನುತ್ತಿದ್ದಾರೆ. ಹಾಗಾಗಿ ಇದಕ್ಕೆ ಯಾರೂ ನ್ಯಾಯ ಕೊಡುವ ಪ್ರಯತ್ನ ಮಾಡುತ್ತಿಲ್ಲ ಎಂದು ನಮ್ಮಲ್ಲಿ ಆಶಾಭಾವನೆಯಿಂದ ನೀವಾದರೂ ನನಗೆ ಸಹಾಯ ಮಾಡಿ, ನನ್ನ ’ಅಮ್ಮ’ನ ಪೂಜೆ ಇದೇ ಮಂದಿರದಲ್ಲಿ ನಡೆಯುವಂತೆ ಮಾಡಿ ಎಂದು ಪರಿತಪಿಸಿದನು.

ಕಾರ್ಯಕ್ರಮದ ಕೊನೆಯ ದಿನ ಜಯಗಾಂವ್ ನಗರದಲ್ಲಿ ’ಭೂತಾನ್ ಗೇಟ್’ ಎದುರು ಊರಿನ ನಾಗರಿಕನ್ನೂ ಸೇರಿಸಿಕೊಂಡು ’ಮಾನವ ಸರಪಳಿ’ಯನ್ನು ನಿರ್ಮಾಣ ಮಾಡಿ, ’ದೇಶ್ ಕೀ ರಕ್ಷಾ ಧರ್ಮ ಹಮಾರಾ, ದೇಶ್ ಕೀ ಸೇವಾ ಕರ್ಮ ಹಮಾರಾ’ ಎಂಬ ಘೋಷಣೆಯೊಂದಿಗೆ ’ಜಯಗಾಂವ್’ ನಗರದುದ್ದಕ್ಕೂ ಸಂಚರಿಸಿ ಕಾರ್ಯಕ್ರಮವನ್ನು ಸಮಾರೋಪಗೊಳಿಸಿದೆವು.

’ಸರಹದ್ ಕೋ ಪ್ರಣಾಮ್’ ಕಾರ್ಯಕ್ರಮ ನಮಗೊಂದು ಹೊಸ ಅನುಭವ ತಂದಿತು. ಅನುಭವವು ನಮ್ಮನ್ನು ಹೊಸ ಯೋಚನೆಗೆ ದಾರಿ ಮಾಡಿಕೊಟ್ಟಿತು. ನಾವು ನಿಜವಾಗಿ ಅತ್ಯಂತ ಸುಖಿಗಳೆನಿಸಿತು. ಗಡಿಭಾಗದ ಜನರ ಕಷ್ಟಗಳು ಅವರ ನೋವಿನ ಕಥೆಗಳನ್ನು ಕೇಳುವಾಗ, ಹೊರಡುವಾಗ ಯೋಚನೆ ಮಾಡಿದ ರೀತಿಯಲ್ಲಿ ಗಡಿ ಇರಲಿಲ್ಲ. ಗಡಿದೇಶದ ಸಮಸ್ಯೆಗಳಿಗಿಂತ ಗಡಿಭಾಗದಲ್ಲಿ ವಾಸ ಮಾಡುವ ಭಾರತೀಯರ ಕಷ್ಟಗಳು ಅದಕ್ಕಿಂತ ದೊಡ್ಡದಾಗಿ ಕಂಡುಬಂದವು. ಭಾರತ ದೇಶದ ಗಡಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಲಿ. ದೇಶದ ಯುವಕರು ಈ ಭಾಗಗಳಲ್ಲಿ ಒಂದು ಬಾರಿಯಾದರೂ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿ ಅವರ ಸಮಸ್ಯೆಗಳನ್ನು ಸರಕಾರಕ್ಕೆ ಮತ್ತು ದೇಶದ ಜನರ ಮುಂದಿಡಬೇಕಾಗಿದೆ. ಜಗತ್ತಿನಲ್ಲಿ ಎಲ್ಲೂ ಮಾಡದಂತಹ ಇಂತಹ ಒಂದು ಕೆಲಸವನ್ನು ಫಿನ್ಸ್ FINS ಸಂಸ್ಥೆ ಮಾಡಿದೆ. ಈ ರೀತಿ ಸಂಪೂರ್ಣ ಭಾರತದ ಗಡಿಗಳ ಸಮಸ್ಯೆಗಳ ವರದಿಯನ್ನು ಸರಕಾರ ಮತ್ತು ಭಾರತೀಯರ ಮುಂದೆ ತರುವಂತಹ ಪ್ರಯತ್ನವನ್ನು ಮಾಡಿದೆ. ಮುಂಬರುವ ದಿನಗಳಲ್ಲಿ ಈ ಭಾಗದ ಜನರಿಗೆ ಒಳಿತಾಗುವುದೆಂಬ ಆಶಯ ನಮ್ಮೆಲ್ಲರದು.

**************

FINS Bangalore Team at Kashmir Border

Rajasthan team at Indian borders at North East

1 thought on “ಸರಹದ್ ಕೋ ಪ್ರಣಾಮ್ : ಒಂದು ಅನುಭವ ಕಥನ

  1. hi. suni. your experience of sarahad ko pranaam is excellent…
    i missed this occasion…
    any how you are lucky… to have the opportunity to visit our boarder…
    any how congrats..

Leave a Reply

Your email address will not be published.

This site uses Akismet to reduce spam. Learn how your comment data is processed.