
ಗ್ರಾಮೀಣ ಅಭಿವೃದ್ಧಿಯಲ್ಲಿ ಗೋವಿನ ಮಹತ್ವವನ್ನು ಸಾರಲು ಹೊಸ ಬಗೆಯ ಚಿಂತನೆಯನ್ನು ಅಳವಡಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಲಾಗಿ ವಿಶಿಷ್ಟವಾಗಿ ನಡೆದದ್ದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಘಟಿಕೋತ್ಸವ.
ವೇದಿಕೆಯು ಅತ್ಯಂತ ಸುಂದರವಾಗಿ,ಸೃಜನಾತ್ಮಕವಾಗಿ ಗೋಮಯದಿಂದ ರೂಪಗೊಂಡಿತ್ತು, ಘಟಿಕೋತ್ಸವದಲ್ಲಿ ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ವಸಾಹತುಶಾಹಿ ವಸ್ತ್ರ ನೀತಿಯಾದ ಕೋಟು,ಗೌನು,ತಲೆ ಮೇಲಿನ ಕಪ್ಪು ಟೊಪ್ಪಿಗೆಯನ್ನು ಬಹಿಷ್ಕರಿಸಿ ಭಾರತದ ಮೂಲ ನೆಲೆಯ ಸ್ವಾತಂತ್ರ್ಯ ಹೋರಾಟವನ್ನು ನೆನಪಿಸುವ ಖಾದಿ ಜಾಕೆಟ್ ಮತ್ತು ಗಾಂಧಿ ಟೋಪಿ, ರುಮಾಲು ಧರಿಸಲಾಗಿತ್ತು.
ವಿದ್ಯಾರ್ಥಿಗಳೂ ಮಾತ್ರವೇ ಅಲ್ಲದೆ ಅತಿಥಿ ಗಣ್ಯರು ಕೂಡ ಹೊಸ ಚಿಂತನೆಗೆ ಒಪ್ಪಿ ಅದೇ ಧಿರಿಸಿನಲ್ಲಿ ಬಂದು ಅತ್ಯಂತ ಅಪರೂಪದ ಘಟಿಕೋತ್ಸವಕ್ಕೆ ರಾಜ್ಯದಲ್ಲಿ ನಾಂದಿ ಹಾಡಿದರು.
ವೇದಿಕೆಯ ಒಂದು ಭಾಗದಲ್ಲಿ ಗಾಂಧೀಜಿಯವರ ಭಾವಚಿತ್ರವಿದ್ದು,ಇಡೀ ವೇದಿಕೆ ಹುಲ್ಲು,ಗೋಮಯ, ಅಕ್ಕಿಹಿಟ್ಟಿನ ಹಸೆಗಳಿಂದ ಅಲಂಕರಿಸಿದ್ದು ವಿಶೇಷವಾಗಿತ್ತು.