ಸುದರ್ಶನ್ ಬೆಂಗಳೂರು
ಮಾಘ ಬಹುಳ ಏಕಾದಶಿ (ಫೆಬ್ರವರಿ 16, ಗುರುವಾರ) ಸಂಘದ ಎರಡನೇ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿಯವರ ಜನ್ಮದಿನ.
ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟಗಳು ಬರುತ್ತವೆ. ನಮ್ಮ ಜೀವನದ ಕಷ್ಟಗಳ ಮಧ್ಯೆಯೂ ನಮ್ಮ ಧ್ಯೇಯದಿಂದ ದೂರವಾಗದೆ ಸಂಕಟಗಳನ್ನು ಎದುರಿಸುತ್ತಾ ನಾವು ನಮ್ಮ ಜೀವನವನ್ನು ಸಮಾಜ ಜೀವನಕ್ಕೆ ಹೇಗೆ ಅರ್ಪಿಸುವುದು ಎಂಬುದನ್ನು ಶ್ರೀ ಗುರೂಜಿಯವರು ತಮ್ಮ ಮಾತುಗಳಲ್ಲಿ ತಿಳಿಸಿದ್ದಾರೆ.
ಮನುಷ್ಯ ಒಬ್ಬನೇ ಇರಲಾರ. ಅವನನ್ನು ಸಾಮಾಜಿಕ ಪ್ರಾಣಿ ಎನ್ನುತ್ತಾರೆ. ಆದರೆ ಅವನು ಜೀವಿಸಿರುವ ಸಮಾಜದಲ್ಲಿ ಉಳಿದವರೆಲ್ಲರು ಚಡಪಡಿಸುತ್ತಿದ್ದರೆ ಒಬ್ಬನೇ ವ್ಯಕ್ತಿಯ ಸುಖಕ್ಕೆ ಯಾವ ಮಹತ್ವವೂ ಇಲ್ಲ. ಇಡೀ ಸಮಾಜವನ್ನು ನಾವು ಉನ್ನತಿಗೊಳಿಸಬೇಕು ಎಂಬುದೇ ನಮ್ಮ ಜೀವನದ ಆದರ್ಶವಾಗಬೇಕು.
ಆದ್ದರಿಂದ ನಾವು “ಸಂಪೂರ್ಣ ಸಮಾಜಕ್ಕೆ ಒಳಿತಾಗುವ, ಅದರಿಂದ ವೈಯಕ್ತಿಕ ಸುಖಕ್ಕೆ ಹಾನಿಯಾದರೂ ಪರವಾಗಿಲ್ಲ” ಎನ್ನುವಂಥ ಗುಣಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಬೇಕು. ನಮ್ಮ ಪ್ರಾಚೀನ ಇತಿಹಾಸ ಇಂತಹ ಉದಾಹರಣೆಗಳಿಂದ ತುಂಬಿದೆ. ಶ್ರೀ ರಾಮಚಂದ್ರ ತಂದೆಯ ಆಜ್ಞೆಯ ಉಲ್ಲಂಘನೆ ಮಾಡುವ ಶಕ್ತಿ ಇದ್ದರೂ ದುಷ್ಟ ಶಿಕ್ಷಣ ಮತ್ತು ಸಜ್ಜನರ ಪಾಲನೆಗಾಗಿ ಸುಖವನ್ನು ಕಡೆಗಣಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಸ್ವೀಕರಿಸಿದ. ಜೀವನಪೂರ್ತಿ ಆತ ಸ್ವಂತಕ್ಕೆ ಕಷ್ಟವನ್ನೇ ಸ್ವೀಕರಿಸಿ ಜನರಿಗೆ ಸುಖ ಕೊಟ್ಟ. ಸಜ್ಜನರನ್ನು ಸಂರಕ್ಷಿಸಿ ಜನರ ಮುಂದೆ ತನ್ನ ಜೀವನದ ಆದರ್ಶ ಇರಿಸಿದ.
ತಂದೆತಾಯಿಯರ ಸೆರೆಮನೆ ವಾಸ, ನಿರಂತರವಾಗಿ ಬಂದಿದ್ದ ವಿಪತ್ತುಗಳ ಕಾರಣದಿಂದಾಗಿ ಶ್ರೀ ಕೃಷ್ಣನ ಬಾಲ್ಯ ಜೀವನವೂ ಎಷ್ಟು ಕಷ್ಟಮಯವಾಗಿತ್ತು? ಆದರೆ ಅವನು ಎಲ್ಲ ರೀತಿಯ ವಿಘ್ನಗಳನ್ನು ಎದುರಿಸುತ್ತಲೇ ಬಾಲ್ಯವನ್ನು ಕಳೆದನು. ಜರಾಸಂಧನು ಮತ್ತೆ ಮತ್ತೆ ನಡೆಸಿದ ಆಕ್ರಮಣದ ಕಾರಣದಿಂದಾಗಿ ಅವನು ಮಥುರೆಯನ್ನೇ ಬಿಡಬೇಕಾಯಿತು. ದ್ವಾರಕೆಗೆ ಹೋದನಂತರವೂ ಸಂಕಟಗಳು ಅವನನ್ನು ಬಿಡಲಿಲ್ಲ. ದೇವರ ಅವತಾರವೇ ಅಗಿದ್ದರೂ ಅವನು ಸಮಾಜದ ಸುಖಕ್ಕಾಗಿ ಎಲ್ಲ ಕಷ್ಟಗಳನ್ನು ಸಹಿಸಿದ.
ಈಗಿನ ಇತಿಹಾಸದಲ್ಲಿ ಮಹಾರಾಣಾ ಪ್ರತಾಪರ ಉದಾಹರಣೆ ಇದೆ. ಅವರು ತಮ್ಮ ಅಲ್ಪ ಶಕ್ತಿಯಿಂದಲೇ ವಿಶಾಲವಾದ ಮೊಘಲ ಸಾಮ್ರಾಜ್ಯದ ಸಾಮ್ರಾಟ ಅಕ್ಬರನೊಡನೆ ಹೋರಾಡಿದರು. ಅದೇ ರೀತಿ ಛತ್ರಪತಿ ಶಿವಾಜಿ ಮಹಾರಾಜರು ಅನೇಕ ಕಷ್ಟಗಳನ್ನು ಎದುರಿಸಿ ಮೊಘಲ ಸಾಮ್ರಾಜ್ಯವನ್ನು ಕೊನೆಗಾಣಿಸುವ ಸವಾಲನ್ನು ಸ್ವೀಕರಿಸಿದರು.
ನೀವು ನಿಮ್ಮ ವ್ಯಕ್ತಿತ್ವವನ್ನು ರಾಷ್ಟ್ರದಲ್ಲಿ ವಿಲೀನಗೊಳಿಸಿದರೆ ಆಗ ನೀವು ವ್ಯಕ್ತಿಯಾಗಿ ಉಳಿಯದೇ ರಾಷ್ಟ್ರವಾಗುತ್ತೀರಿ. ನಮ್ಮ ಆನಂದದಲ್ಲಿ ಮಿತ್ರರನ್ನು ಸೇರಿಸಿಕೊಂಡಾಗ ಆನಂದ ದ್ವಿಗುಣಗೊಳ್ಳುತ್ತದೆ. ಯೋಚಿಸಿ, ಇಡೀ ರಾಷ್ಟ್ರದ ಸುಖದಲ್ಲಿ ನಿಮ್ಮ ಸುಖ ಕಂಡರೆ, ಅದರ ದುಃಖದಲ್ಲಿ ನೀವೂ ದುಃಖಿಗಳಾದರೆ ನಿಮ್ಮ ವ್ಯಕ್ತಿತ್ವ ಎಷ್ಟು ವಿಸ್ತಾರಗೊಂಡಿರುತ್ತದೆ. ಸಮಾಜಹಿತಕ್ಕಾಗಿ ತಮ್ಮ ಸ್ವಂತಿಕೆಯನ್ನು ಹೇಗೆ ಬಿಟ್ಟುಕೊಡುವುದು ಎಂಬುದನ್ನು ಅರಿಯಲು ಡಾಕ್ಟರಜಿಯವರ ಜೀವನವನ್ನು ನೋಡಿ.
ನಾವು ಕೆಲಸ ಮಾಡುವಾಗ ಧ್ಯೇಯಸಿದ್ಧಿಯ ಬಗ್ಗೆ ನಿತಾಂತ ಶ್ರದ್ಧೆ ಇರಬೇಕು. ಯಾವನೇ ವ್ಯಕ್ತಿಯಾಗಲಿ ಏಕಕಾಲದಲ್ಲಿ ಸಹಸ್ರಾರು ಉದ್ದೇಶಗಳನ್ನು ಈಡೇರಿಸಿಕೊಳ್ಳಲಾರ. ಒಂದೇ ಗುರಿಯನ್ನು ಇಟ್ಟುಕೊಂಡು ಅದರ ಸಾಧನೆಗಾಗಿ ಉಳಿದೆಲ್ಲ ಶಕ್ತಿಯನ್ನು ಅರ್ಪಿಸಬೇಕಾಗುತ್ತದೆ. ನಮ್ಮ ಮುಂದೆ ಇರಿಸಿಕೊಂಡಿರುವ ಗುರಿಯನ್ನು ಸಾಧಿಸುವುದಕ್ಕಾಗಿ ಶ್ರದ್ಧೆ ಮತ್ತು ವಿಶ್ವಾಸಗಳಿಂದ ನಿರಂತರ ಪ್ರಯತ್ನಶೀಲರಾಗುವುದೇ ಸಫಲತೆಯ ರಹಸ್ಯ. ಧ್ಯೇಯನಿಷ್ಠ ಸ್ವಯಂಸೇವಕನ ವೈಯಕ್ತಿಕ ಚಾರಿತ್ರ್ಯವೂ ಧ್ಯೇಯಕ್ಕೆ ಅನುಗುಣವಾಗಿಯೇ ಇರಬೇಕು. ಅದು ವಿಶುದ್ಧವಾಗಿಯೂ ಇರಬೇಕು. ಏಕೆಂದರೆ ವಿಶುದ್ಧ ಚಾರಿತ್ರ್ಯವೇ ಸಾಮಾಜಿಕ ಕಾರ್ಯಕರ್ತನಿಗೆ ಶಕ್ತಿಯ ಸ್ರೋತ.
ಒಬ್ಬ ಸಜ್ಜನರು ನನಗೆ ’ನಾವು ಸಮಾಜದ ಚಿಂತೆ ಯಾಕೆ ಮಾಡಬೇಕು? ಸಮಾಜ ನಮಗೆ ಏನು ಮಾಡಿದೆ’ ಎಂದು ಕೇಳಿದರು. ಇದನ್ನು ಕೇಳಿ ನನಗೆ ತುಂಬಾ ದುಃಖವಾಯಿತು. ಇದಂತೂ ತುಂಬಾ ಹೀನ ಪ್ರವೃತ್ತಿ. ಈ ಪ್ರವೃತ್ತಿಯನ್ನು ತೊಲಗಿಸಬೇಕು. ಈ ಸಂದರ್ಭದಲ್ಲಿ ನನಗೆ ಮಹಾಭಾರತದ ಒಂದು ಪ್ರಸಂಗ ನೆನಪಿಗೆ ಬರುತ್ತದೆ. ಯುಧಿಷ್ಠಿರ ವನವಾಸಕಾಲದಲ್ಲಿದ್ದ. ಎಲ್ಲ ರೀತಿಯ ಕಷ್ಟಗಳ ನಡುವೆಯೂ ಭಗವಂತನಲ್ಲಿ ಭಕ್ತಿ ಆತನಿಗಿತ್ತು. ಒಮ್ಮೆ ದ್ರೌಪದಿ ಕೋಪದಿಂದ ’ಹಗಲೂ ರಾತ್ರಿ ದೇವರ ನಾಮ ಜಪಿಸುತ್ತಲೇ ಇರುತ್ತೀಯೆ. ದೇವರು ನಿನಗೆ ಏನು ಮಾಡಿದ್ದಾನೆ?’ ಎಂದು ಕೇಳುತ್ತಾಳೆ. ಯುಧಿಷ್ಠಿರ ಶಾಂತವಾಗಿ ಹೇಳುತ್ತಾನೆ – “ದೇವರಿಗೆ ಹೂವು ಅಥವಾ ಕಾಣಿಕೆ ಕೊಟ್ಟು ಮಕ್ಕಳನ್ನು ಅಥವಾ ಸಂಪತ್ತನ್ನು ಬೇಡುವುದು ಭಕ್ತಿಯಲ್ಲ, ವ್ಯಾಪಾರ. ಮೋಸದಿಂದ ವ್ಯಾಪಾರ ಮಾಡುವುದು ಮತ್ತು ಏನಾದರೂ ಪಡೆದುಕೊಳ್ಳಬೇಕೆಂಬ ದೃಷ್ಟಿಯಿಂದ ಉಪಕಾರ ಮಾಡುವುದು ತಪ್ಪು. ದೇವರು ಸುಖ ಕೊಡಲಿ ಅಥವಾ ದುಃಖವನ್ನೇ ಕೊಡಲಿ, ಕಾಪಾಡಲಿ ಅಥವಾ ಬಿಡಲಿ, ನಾನು ನನ್ನದೆಂಬ ಭಾವನೆಯಿಂದ ಎಲ್ಲ ಸಂದರ್ಭಗಳಲ್ಲಿ ಅವನ ಸೇವೆ ಮಾಡುತ್ತೇನೆ.”
ನಮ್ಮೊಳಗಿರುವ ಅನೇಕ ಗುಣಾವಗುಣಗಳನ್ನೂ ವಿಕಾರಗಳನ್ನೂ ಸರಿಯಾಗಿ ನಿಯಂತ್ರಿಸಿಕೊಂಡು ಮಾನಸಿಕ ಸುವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವುದು ಧರ್ಮದ ಒಂದು ಮಹತ್ವಪೂರ್ಣ ಅಂಗವಾಗಿದೆ. ಈ ಧರ್ಮವನ್ನು ನಮ್ಮ ಜೀವನದ ಆಧಾರವೆಂದು ಪರಿಗಣಿಸಿ ಅದಕ್ಕನುಕೂಲವಾಗುವಂತೆ ಕಾಮ ಅರ್ಥಗಳನ್ನು ನಿಯೋಜಿಸಿಕೊಂಡು, ಧರ್ಮದಿಂದ ಕೂಡಿದ ಸದ್ಗುಣ ಸಂಪನ್ನ ಜೀವನವನ್ನು ನಮ್ಮೊಳಗೆಯೇ ಬೆಳೆಸಿಕೊಳ್ಳುತ್ತಾ, ಅಂತಿಮ ಗುರಿಯ ನಿರಂತರ ಧ್ಯಾನಮಾಡುತ್ತ, ಅಂತಿಮ ಪುರುಷಾರ್ಥವಾದ ಮೋಕ್ಷದೆಡೆಗೆ ಪ್ರಯತ್ನಿಸುವುದೇ ಮಾನವ ಜೀವನದ ಸಂಪೂರ್ಣ ಸ್ವರೂಪವಾಗಿದೆ. ಇದೇ ಪರಿಪೂರ್ಣ ಜೀವನದ ಕಲ್ಪನೆಯಾಗಿದೆ.