ತಾಲಿಬಾನ್: ಜಾಗತಿಕ ಭಯೋತ್ಪಾದನೆಯ ಒಂದು ಮುಖ ಮಾತ್ರ
ಮದನ್ ಗೋಪಾಲ್, ನಿವೃತ್ತ ಐ ಎ ಎಸ್ ಅಧಿಕಾರಿ

ಆಫ್ಘಾನಿಸ್ಥಾನ ಈಗ ಮತ್ತೆ ಸುದ್ದಿಯಲ್ಲಿದೆ. ಆದರೆ ಅದು ಅವರ ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ತಂಡದಿಂದಾಗಲೇ ಅಥವಾ ಉದಯೋನ್ಮುಖ ಫುಟ್ಬಾಲ್ ತಂಡದಿಂದಾಗಲೀ ಅಲ್ಲ, ಬದಲಿಗೆ ಕುಖ್ಯಾತ ತಾಲಿಬಾನ್ ನಿಂದಾಗಿ. ಅಮೇರಿಕದ ಸೈನ್ಯ ಆಫ್ಘಾನಿಸ್ಥಾನದಿಂದ ಹಿಂದಿರುಗಲು ಸಿದ್ಧವಾಗುತ್ತಿದ್ದಂತೆಯೇ, ತಾಲಿಬಾನಿಗಳು ಯಾವುದೇ ವಿರೋಧವಿಲ್ಲದೇ ದೇಶದ ಅಧಿಕಾರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದು ಇಡೀ ಪ್ರಪಂಚವನ್ನು ನಿಬ್ಬೆರಗಾಗಿಸಿದೆ. ಸೂಪರ್ ಪವರ್ ಎಂದೆನಿಸಿಕೊಂಡ ಅಮೇರಿಕ 2002 ರಿಂದ ಜೂನ್ 2021 ರವರೆಗೆ ಆಫ್ಘಾನಿಸ್ಥಾನದ ಭದ್ರತೆಗಾಗಿ 88.61 ಬಿಲಿಯನ್ ಡಾಲರ್, ಆಡಳಿತ ಮತ್ತು ಅಭಿವೃದ್ಧಿಗಾಗಿ ೩೬.೨೯ ಬಿಲಿಯನ್ ಡಾಲರ್, ಮಾನವೀಯ ನೆರವಿಗಾಗಿ 4.18 ಬಿಲಿಯನ್ ಡಾಲರ್, ಇತರೆ ಕಾರ್ಯಾಚರಣೆಗಾಗಿ 15.91 ಬಿಲಿಯನ್ ಡಾಲರ್ ಸೇರಿದಂತೆ ಒಟ್ಟು 144.98 ಬಿಲಿಯನ್ ಡಾಲರ್ ಹಣ ವ್ಯಯಿಸಿದೆ. ಆಫ್ಘಾನಿಸ್ಥಾನದ ಬಜೆಟ್ಟಿನ ಸುಮಾರು 80% ಖರ್ಚನ್ನು ಅಮೆರಿಕವೇ ಭರಿಸುತ್ತಿತ್ತು. ಅಮೆರಿಕದ ಹಣಕಾಸಿನ ನೆರವಿಲ್ಲದೆ ತಮ್ಮ ಸರ್ಕಾರವು ಆರು ತಿಂಗಳ ಕಾಲ ಕೂಡಾ ಸೈನ್ಯದ ನಿರ್ವಹಣೆ ಮಾಡಲು ಸಾಧ್ಯವಿಲ್ಲ ಎಂದು ಈ ಹಿಂದೆ ಸಾರ್ವಜನಿಕವಾಗಿಯೇ ಆಫ್ಘಾನಿಸ್ಥಾನದ ಅಧ್ಯಕ್ಷರಾಗಿದ್ದ ಅಶ್ರಫ್ ಘನಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆಧುನಿಕ ಶಸ್ತ್ರಾಸ್ತ್ರ ಮತ್ತು ಅವನ್ನು ಬಳಸುವ ತರಬೇತಿಯನ್ನು ಆಫ್ಘಾನ್ ಸೇನೆಗೆ ಕೊಡುವ ಮೂಲಕ ಇಂತಹ ಸಂಧಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಆಫ್ಘಾನಿಸ್ತಾನವನ್ನು ಅಮೇರಿಕ ಸಜ್ಜುಗೊಳಿಸಬೇಕಾಗಿತ್ತು ಎಂಬುದೇ ಎಲ್ಲರ ಅಭಿಪ್ರಾಯವಾಗಿದೆ.

ಕಳೆದ ಕೆಲವು ದಿನಗಳಿಂದ, ಕಾಬೂಲ್ ವಿಮಾನ ನಿಲ್ದಾಣಡಾ ಮೂಲಕ ದೇಶಬಿಟ್ಟು ಹೋಗುತ್ತಿರುವವರನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ತಾಲಿಬಾನ್ ಬಂದೂಕುಧಾರಿಗಳು ಕಾಬೂಲ್ ನಗರದ ಬೀದಿ ಬೀದಿಗಳಲ್ಲಿ ತಮ್ಮ ಮಾರಣಾಂತಿಕ ಆಯುಧಗಳೊಂದಿಗೆ ಗಸ್ತು ತಿರುಗುತ್ತಿರುವ ವೀಡಿಯೋಗಳು ಮಾಧ್ಯಮದಲ್ಲಿ ಬಿತ್ತರವಾಗುತ್ತಿವೆ. ಜೊತೆಗೆ, ಮಾಧ್ಯಮಗಳಲ್ಲಿ ನಡೆಯುತ್ತಿರುವ ರಾಜಕೀಯ ವಿಶ್ಲೇಷಣೆಗಳು ಮತ್ತು ಚರ್ಚೆಗಳು ಆ ದೇಶದ ಅನಿಶ್ಚಿತ ಭವಿಷ್ಯವನ್ನು ಸೂಚಿಸುತ್ತಿವೆ. ಮತೀಯ ಮೂಲಭೂತವಾದ ಯಾವ ಮಟ್ಟಕ್ಕೆ ಒಂದು ದೇಶವನ್ನು ಕೊಂಡೊಯ್ಯಬಹುದು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.

1990 ರ ದಶಕದಲ್ಲಿ ಪೀಟರ್ ಹಾಪ್ಕ್ರಿಕ್ ಅವರು ಪ್ರಕಟಿಸಿದ್ದ ಗ್ರೇಟ್ ಗೇಮ್: ಆನ್ ಸೀಕ್ರೆಟ್ ಸರ್ವಿಸ್ ಇನ್ ಹೈ ಏಷ್ಯಾ ಎಂಬ ಪುಸ್ತಕವನ್ನು ಓದಿದ್ದವರು, ಆಗಿನ ಸಾಮ್ರಾಜ್ಯಶಾಹಿ ಶಕ್ತಿಗಳು, ರಷ್ಯಾದ ಸಾಮ್ರಾಜ್ಯ ಮತ್ತು ಬ್ರಿಟಿಷ್ ಸಾಮ್ರಾಜ್ಯಗಳು ಹೇಗೆ ಮಧ್ಯ ಏಷ್ಯಾದ ಮೇಲೆ ನಿಯಂತ್ರಣವನ್ನು ಹೊಂದುವ ಸಲುವಾಗಿ ಸಂಚನ್ನು ರೂಪಿಸಿದ್ದವು ಎಂಬುದನ್ನು ಅರ್ಥ ಮಾಡಿಕೊಂಡಿರುತ್ತಾರೆ. ಅದರಲ್ಲೂ ವಿಶೇಷವಾಗಿ ಆಫ್ಘಾನಿಸ್ಥಾನದ ಮೇಲೆ ಪ್ರಾಬಲ್ಯ ಸಾಧಿಸುವ ಮೂಲಕ, ಇಡೀ ಏಷ್ಯಾದಲ್ಲಿ ಅಧಿಕಾರ ವಿಸ್ತರಿಸಲು ಸಾಧ್ಯ ಎಂಬುದನ್ನು ಅರಿತಿದ್ದರು. ಅದೇ ರೀತಿ ಭಾರತದಲ್ಲಿ ಎಂಟನೇ ಶತಮಾನದಿಂದ ಮೊಘಲ್ ಸಾಮ್ರಾಜ್ಯ ಪತನವಾಗುವವರೆಗೆ ಕ್ರೂರ ಇಸ್ಲಾಮಿಕ್ ಆಕ್ರಮಣಕಾರರು ಆಫ್ಘಾನಿಸ್ಥಾನದೊಂದಿಗೆ ಪತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಂಬಂಧಗಳನ್ನು ಹೊಂದಿರುವುದು ನಮಗೆಲ್ಲ ತಿಳಿದ ವಿಚಾರವೇ. ವಿಕೃತಿ ಮತ್ತು ನಿರ್ದಯತೆಗೆ ಹೆಸರುವಾಸಿಯಾಗಿದ್ದ ಬಾಬರ್ 1504 ರಲ್ಲಿ, ಕಾಬೂಲನ್ನು ವಶಪಡಿಸಿಕೊಂಡಿದ್ದಲ್ಲದೇ, ಮುಂದಿನ ಶತಶತಮಾನಗಳ ಕಾಲದ ದಬ್ಬಾಳಿಕೆಗೆ ಅಡಿಪಾಯ ಹಾಕಿ ಹೋಗಿದ್ದನು. ಅವನ ಮರಣಾನಂತರ ಆತನ ಇಚ್ಛೆಯಂತೆ ಬಾಬರನ ದೇಹವನ್ನು ಕಾಬೂಲ್‌ಗೆ ಕೊಂಡೊಯ್ದು ಅಲ್ಲಿನ ಬೆಟ್ಟದ ಪಕ್ಕದಲ್ಲಿ ಹೂಳಲಾಯಿತು. ಹೀಗೆ ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಗಾಢವಾದ ಸಂಬಂಧ ಹೊಸೆದುಕೊಂಡಿದೆ.

1980ರಲ್ಲಿ ಸೋವಿಯತ್ ಪಡೆಗಳ ವಿರುದ್ಧ ಹೋರಾಡಲು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐ ಎಸ್ ಐ ಮತ್ತು ಅಮೇರಿಕದ ಗುಪ್ತಚರ ಸಂಸ್ಥೆ ಸಿ ಐ ಎ ಹುಟ್ಟುಹಾಕಿದ ಈ ತಾಲಿಬಾನಿಗಳು ಮುಂದೆ ಮತಾಧಾರಿತವಾಗಿ ತಮ್ಮದೇ ಆದ ಪ್ರತ್ಯೇಕ ಸೈನ್ಯವೊಂದನ್ನು ಕಟ್ಟಿಕೊಂಡು ಅದರ ಮೂಲಕ 1996ರಲ್ಲಿ ಕಾಬೂಲ್ ನಗರವನ್ನು ವಶಪಡಿಸಿಕೊಂಡಿದ್ದಲ್ಲದೇ, ಅಲ್ಲಿದ್ದ ಮಹಿಳೆಯರು, ಅಮಾಯಕರು, ಸಿಖ್ಖರು, ಹಿಂದೂಗಳು ಮತ್ತು ಇತರೇ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಅಮಾನವೀಯವಾಗಿ ಹೇರಿದ ನಿರ್ಬಂಧಗಳು ನಿಜಕ್ಕೂ ಅತ್ಯಂತ ಹೇಯಕರವಾಗಿದ್ದವು. ಬಾಮಿಯಾನ್‌ನಲ್ಲಿ ಬುದ್ಧನ ಅತಿ ಎತ್ತರದ ಮೂರ್ತಿಗಳನ್ನು ನಾಶಮಾಡುವ ಮೂಲಕ ಅಲ್ಲಿನ ಪುರಾತನ ಪರಂಪರೆಯನ್ನು ಅಳಿಸಿ ಹಾಕುವ ಪ್ರಯತ್ನ, ಅಂದು ಪ್ರಜ್ಞಾಶೂನ್ಯವಾಗಿ ನಡೆಸಿದ ವಿಧ್ವಂಸಕತೆ ಮತ್ತು ದುರಾಡಳಿತ ಇಂದಿಗೂ ಇತಿಹಾಸದಲ್ಲಿ ಅಚ್ಚಳಿಯದ ಸಂಗತಿಯಾಗಿದೆ.

ತಾಲಿಬಾನ್ ನಿಯಂತ್ರಣದಲ್ಲಿರುವ ಆಫ್ಘಾನಿಸ್ಥಾನದ ರಹಸ್ಯ ಸ್ಥಳದಿಂದಲೇ ಅಲ್ ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ ನೇತೃತ್ವದ ತಂಡ 2001ರಲ್ಲಿ ಅಮೇರಿಕಾದ ವಿಶ್ವ ವಾಣಿಜ್ಯ ಕೇಂದ್ರದ ಗೋಪುರಗಳ ಮೇಲೆ ದಾಳಿ ಮಾಡಿದ ನಂತರ ತಾಲಿಬಾನ್ ಮತ್ತು ಅಮೇರಿಕ ಸರ್ಕಾರದ ನಡುವಿನ ಮೈತ್ರಿ ಇದ್ದಕ್ಕಿದ್ದಂತೆ ಕೊನೆಗೊಂಡಿತು. ಅಲ್ಲಿಂದ ಸುಮಾರು ಎರಡು ದಶಕಗಳ ಕಾಲ ಆಫ್ಘಾನಿಸ್ಥಾನ ಸಂಪೂರ್ಣವಾಗಿ ಅಮೇರಿಕದ ತೆಕ್ಕೆಯಲ್ಲಿತ್ತು. ಅಮೇರಿಕದ ಸೈನಿಕರು ಬೇಟೆಗಾರರಂತೆ ಅಲ್ ಖೈದಾ ಸದಸ್ಯರನ್ನು ಬೇಟೆಯಾಡಿದ್ದವು.

1990 ರ ತಾಲಿಬಾನ್ ಮತ್ತು ಈಗಿರುವ ತಾಲಿಬಾನ್ ಗಳು ಅನೇಕ ವಿಷಯಗಳಲ್ಲಿ ಬಹಳ ವ್ಯತ್ಯಾಸಗಳಿವೆ. ಅವರು ಈಗ ಮತ್ತಷ್ಟು ಬಲಶಾಲಿಗಳಾಗಿದ್ದಾರೆ. ದೊಡ್ಡ ಮಟ್ಟದ ಆರ್ಥಿಕ ಸಂಪನ್ಮೂಲಗಳಿವೆ, ಹಿಂಸಾಕೃತ್ಯಗಳಲ್ಲಿ ಎರಡು ದಶಕಗಳ ಕಾಲದ ಅನುಭವವಿದೆ. ಹಾಗಾಗಿ ಪ್ರಪಂಚದ ಉಳಿದ ಪ್ರಜಾಪ್ರಭುತ್ವ ರಾಷ್ಟ್ರಗಳು ಇದು ನಮ್ಮ ಸಮಸ್ಯೆಯಲ್ಲ ಎಂದು ಸುಮ್ಮನೇ ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಈ ಭಯೋತ್ಪಾದಕ ಸಂಘಟನೆ ಪ್ರಪಂಚದ ಮಗ್ಗುಲ ಮುಳ್ಳಾಗಿ ಕಾಡುವುದಂತೂ ಸತ್ಯ. ಆಫ್ಘಾನಿಸ್ಥಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನಿನ ವಕ್ತಾರ ಜಬಿಹುಲ್ಲಾ ಮುಜಾಹಿದ್‌ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ತಾವು ಮೊದಲಿನಂತೆ ಇರದೇ ಬಹಳಷ್ಟು ಬದಲಾಗಿದ್ದೇವೆ, ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ, ಹಿಂದಿನ ಸರ್ಕಾರದ ಪರವಾಗಿ ಕೆಲಸ ಮಾಡಿದವರನ್ನು ಕ್ಷಮಿಸುತ್ತೇವೆ, ಮಾಧ್ಯಮಗಳಿಗೆ ಸ್ವಾತಂತ್ರ್ಯವನ್ನುಕೊಡುತ್ತೇವೆ, ನಮ್ಮ ದೇಶ ಭಯೋತ್ಪಾದನಾ ಚಟುವಟಿಕೆಗಳಿಗೆ ತಾಣವಾಗಲು ಬಿಡುವುದಿಲ್ಲ ಎಂಬೆಲ್ಲಾ ಆಶ್ವಾಸನೆಗಳನ್ನು ಕೊಟ್ಟಿದ್ದಾನೆ. ಅದು ತಮ್ಮ ಮೇಲಿನ ಜಗತ್ತಿನ ದೃಷ್ಟಿಕೋನ ಬದಲಾಗಲಿ ಎಂಬ ಬುದ್ಧಿವಂತ ನಡೆಯಾಗಿತ್ತೇ ಹೊರತು ಅವರಲ್ಲಿ ಯಾವುದೇ ಬದಲಾವಣೆಯನ್ನು ನಿರೀಕ್ಷಿಸಲಾಗದು. ಇದನ್ನು ಪುಷ್ಟೀಕರಿಸುವಂತೆ, ಸುದ್ದಿಗೋಷ್ಠಿಯ ನಂತರದ ಘಟನೆಗಳು, ಅಲ್ಲಿನ ಬೀದಿಗಳಲ್ಲಿ ಜನರನ್ನು ಅನವಶ್ಯಕವಾಗಿ ಹಿಂಸಿಸುತ್ತಿರುವುದು, ಮನೆಗಳ ಮೇಲೆ ಏಕಾಏಕಿ ದಾಳಿ ನಡೆಸುತ್ತಿರುವುದು, ಹಿಂದಿನ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಮಹಿಳಾ ಪತ್ರಕರ್ತರನ್ನು ಕೆಲಸದಿಂದ ತೆಗೆದಿರುವುದಲ್ಲದೇ ಅಂತಹವರನ್ನು ಹುಡುಕಿ ಹುಡುಕಿ ಶಿಕ್ಷೆ ಕೊಡುತ್ತಿರುವುದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಕ್ಕೂ ಅಲ್ಲಿ ನಡೆಯುತ್ತಿರುವುದಕ್ಕೂ ಅಜಗಜಾಂತರವಾದ ವ್ಯತ್ಯಾಸವಿದೆ ಎನ್ನುವುದನ್ನು ಸಾರಿ ಹೇಳುತ್ತಿವೆ. ಇದಲ್ಲದೇ, ಅವರು ಜಾರಿಗೆ ಮಾಡಲು ಹೊರಟಿರುವ ಶರಿಯಾ ಇಸ್ಲಾಮಿಕ್ ಕಾನೂನುಗಳು ಜನಸಾಮಾನ್ಯರ ಮೇಲೆ ಹೇರುವ ನಿಯಂತ್ರಣ, ಅದರಲ್ಲೂ ನಿರ್ದಿಷ್ಟವಾಗಿ ಮಹಿಳೆಯರನ್ನು ಮತ್ತು ಸ್ಥಳೀಯ ಸಂಸ್ಕೃತಿ, ಆಚರಣೆಗಳು, ಸಂಪ್ರದಾಯಗಳ ಮೇಲೆ ನಿಷ್ಠುರವಾದ ಇಸ್ಲಾಮಿಕ್ ಕಾನೂನನ್ನೂ ತಾಲಿಬಾನ್ ಸರ್ಕಾರ ಅಳವಡಿಸಿಕೊಳ್ಳಲಿದೆ ಎಂದಿರುವುದು ಎಲ್ಲರಲ್ಲೂ ಭಯ ಸೃಷ್ಟಿಸಿದೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಮಹತ್ತ್ವದ ಅಂಶವೆಂದರೆ ತಾಲಿಬಾನ್ ಎಂಬುದು ಜಾಗತಿಕ ಜಿಹಾದಿ ಚಳುವಳಿಯ ಭಾಗವೇ ಆಗಿದೆ. ತಾಲಿಬಾನ್, ಅಲ್ ಖೈದಾ, ಐಸಿಸ್, ಬೊಕೊ ಹರಾಮ್, ಹಕ್ಕಾನಿ ನೆಟ್ವರ್ಕ್, ಜೈಶ್-ಇ-ಮೊಹಮ್ಮದ್, ಲಷ್ಕರ್-ಇ-ತೈಬಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಹೆಸರಿಗೆ ಬೇರೆಬೇರೆಯಾಗಿದ್ದರೂ, ಅವರ ಮಹತ್ತ್ವಾಕಾಂಕ್ಷೆಗಳು ಒಂದೇ ಆಗಿದೆ. ಅಲ್ ಖೈದಾ ಈಗಾಗಲೇ ತಾನು ತಾಲಿಬಾನ್ ಗೆ ಅಧೀನ ಎಂದು ಘೋಷಿಸಿಕೊಂಡಿರುವುದಲ್ಲದೇ, ಮುಲ್ಲಾ ಒಮರ್ ಅವರನ್ನು ತಮ್ಮ ನಾಯಕನೆಂದು ಒಪ್ಪಿಕೊಂಡಿರುವುದೆ. ಅಂತೆಯೇ, ಅಲ್ ಖೈದಾದ ಪ್ರಮುಖ ಧರ್ಮಗುರುಗಳಲ್ಲಿ ಒಬ್ಬನಾದ ಮಾಮೌನ್ ಹಟೆಮ್ ಐಸಿಸ್‌ಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಿಸಿದ್ದರೂ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಈ ಎಲ್ಲಾ ಗುಂಪುಗಳ ನಡುವೆ ಪರಸ್ಪರ ಒಳಒಪ್ಪಂದವಾಗಿದೆ ಎಂಬುದು ಈಗ ಎಲ್ಲರಿಗೂ ತಿಳಿದ ಬಹಿರಂಗ ರಹಸ್ಯವಾಗಿದೆ. ಈ ಎಲ್ಲಾ ಧಾರ್ಮಿಕ ಸಂಘಟನೆಗಳು, ರಾಜಕೀಯ ಸಂಘಟನೆಗಳು, ಪ್ರಪಂಚದಾದ್ಯಂತ ನಾಯಿಕೊಂಡೆಯಂತೆ ಹರಡಿಕೊಂಡಿರುವುದಲ್ಲದೇ ಅಲ್ಲಿ ತಮ್ಮ ಜಿಹಾದಿ ಸಿದ್ಧಾಂತದದ ಮೂಲಕ ಇಸ್ಲಾಮಿಕ್ ಸಾಮ್ರಾಜ್ಯವನ್ನು ಸ್ಥಾಪಿಸುವ ಅಲ್ಪಾವಧಿಯ ಮತ್ತು ದೀರ್ಘಾವಧಿಯ ಗುರಿಯನ್ನು ಹೊಂದಿವೆ. ಅಮೇರಿಕಕ್ಕೆ ನೀಡಿದ್ದ ಭರವಸೆಯನ್ನು ಮೀರಿ, ತಾಲಿಬಾನ್ ಈಗಾಗಲೇ ತನ್ನದು ಇಸ್ಲಾಮಿಕ್ ದೇಶ ಎಂದು ಘೋಷಿಸಿಕೊಂಡಿದೆ. ಶತ್ರುವಿನ ಶತ್ರು ತಮ್ಮ ಮಿತ್ರ ಎಂಬ ಮಾತಿನಂತೆ, ಭಾರತದಲ್ಲಿನ ಎಡಪಂಥೀಯ ಉದಾರವಾದಿಗಳು ಎಂದು ಕರೆದುಕೊಳ್ಳುವ, ಸ್ವಘೋಷಿತ ಬುದ್ಧಿಜೀವಿಗಳು, ನಗರ ನಕ್ಸಲರು ಮತ್ತು ಕೆಲವು ಪೂರ್ವಾಗ್ರಹಪೀಡಿತ ಮಾಧ್ಯಮ ಸಂಸ್ಥೆಗಳು ಹಾಗೂ ಕೆಲವು ನಿರುದ್ಯೋಗಿ ರಾಜಕಾರಣಿಗಳು ಈ ನಡೆಯನ್ನು ಸ್ವಾಗತಿಸಿರುವುದು ರಾಷ್ಟ್ರೀಯ ಭದ್ರತೆ ಮತ್ತು ಸಮಗ್ರತೆಯ ದೃಷ್ಟಿಯಿಂದ ಆತಂಕಕಾರಿಯಾಗಿದೆ.

ಇದನ್ನು ಗಮನಿಸಿದರೆ, ಇವರೆಲ್ಲರ ರಾಜಕೀಯ ಚಟುವಟಿಕೆ ಮತ್ತು ಹೋರಾಟಗಳನ್ನು ಇನ್ನು ಮುಂದೆ ಕೇವಲ ಸಾಮಾನ್ಯ ರೀತಿಯ ಹೋರಾಟ ಎಂದು ಭಾವಿಸದೇ, ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳ ಬೆಂಬಲಿತ ಹೋರಾಟ ಎಂದೇ ಪರಿಗಣಿಸಬೇಕಾಗುತ್ತದೆ. ಇವರೆಲ್ಲರ ಆಟಾಟೋಪಗಳು ಜಾಗತಿಕ ಜಿಹಾದಿ ಚಳವಳಿಯ ಅಂಗವಾಗಿದ್ದು ಪ್ರಪಂಚದಾದ್ಯಂತ ಹರಡಿಕೊಂಡಿರುವ ಭಯೋತ್ಪಾದನೆಯ ಸಂಘಟಿತ ಕೃತ್ಯಗಳ ಭಾಗವಾಗಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಯಾಗಿದೆ. ಈ ಎಲ್ಲಾ ಭಯೋತ್ಪಾದಕ ಗುಂಪುಗಳು ಒಂದಕ್ಕೊಂದು ಸಂಬಂಧ ಹೊಂದಿದ್ದು ಭಯೋತ್ಪಾದನಾ ಚಟುವಟಿಕೆಗಳಿಗೆ ಮತ್ತು ಕೋಮುಸಂಘರ್ಷ ಸೃಷ್ಟಿಸಲು ಪರಸ್ಪರ ಬೆಂಬಲಿಸುತ್ತಿವೆ. ಈ ಉಗ್ರಸಂಘಟನೆಗಳ ನಿಜಸ್ವರೂಪವನ್ನು ಇಡೀ ಜಗತ್ತು ಬೇಗ ತಿಳಿದಷ್ಟು ಒಳ್ಳೆಯದು. ಎಲ್ಲಾ ರಾಷ್ಟ್ರಗಳು ಒಂದಾಗಿ ಈ ಸಂಘಟನೆಗಳ ವಿರುದ್ಧ ಒಂದು ನಿರ್ದಿಷ್ಟ ಕಾಲಮಿತಿಯಲ್ಲಿ ಸ್ಪಷ್ಟವಾದ ಕಾರ್ಯತಂತ್ರದೊಂದಿಗೆ ಹೋರಾಡಿದರೆ ಮಾತ್ರ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡು ವಿಶ್ವ ಶಾಂತಿಯನ್ನು ಕಾಪಾಡಲು ಸಾಧ್ಯವಾದೀತು.

Leave a Reply

Your email address will not be published.

This site uses Akismet to reduce spam. Learn how your comment data is processed.