(ಸ್ವಾತಂತ್ರ್ಯ ದ ಸ್ವರ್ಣ ಮಹೋತ್ಸವದ ಹೊತ್ತಲ್ಲಿ ಶ್ರೀ ದತ್ತಾತ್ರೇಯ ಹೊಸಬಾಳೆ ಬರೆದ ಲೇಖನ)
ದೇಶ ರಕ್ಷಣೆ; ಶಿಥಿಲ ನಿರ್ವಹಣೆ

ಲೇಖನ : ಶ್ರೀ ದತ್ತಾತ್ರೇಯ ಹೊಸಬಾಳೆ,
ಕೃಪೆ: ಅಸೀಮಾ ಪತ್ರಿಕೆ

ವಿಶ್ವದ ವಿದ್ಯಮಾನಗಳನ್ನು ಯೋಚನೆ ಮಾಡಿದರೆ, ನೋವು, ಸಮಸ್ಯೆ, ಪರಿತಾಪ, ಸಂಕಷ್ಟಗಳೇ ಕಣ್ಣಿಗೆ ಕಾಣುತ್ತಿವೆ. ಪತ್ರಿಕೆಗಳಲ್ಲಿ ಅಂತಹವುಗಳೇ ಸುದ್ದಿಯಾಗಿವೆ. ಎಲ್ಲೋ ಬಾಂಬ್ ಬಿದ್ದರೆ ಮುಖಪುಟದಲ್ಲಿ ಸುದ್ದಿಯಾಗುವಷ್ಟು ಮಹತ್ವವನ್ನು ಆ ಸುದ್ದಿ ಉಳಿಸಿಕೊಂಡಿದೆ. ಎಲ್ಲೋ ಒಂದು ಕಡೆ ನೈನಾ ಸಾಹ್ನಿಯನ್ನು ಕೊಂದು ಹಾಕಿ ತಂದೂರಿಯಲ್ಲಿ ಬೇಯಿಸಿದರೆ ಅದಿನ್ನೂ ಸುದ್ದಿಯಾಗುವ ಸ್ಥಿತಿಯಿದೆ. ಪೂರ್ವಾಂಚಲದಲ್ಲಿ ಆತಂಕವಾದಿಗಳು ದೇಶವಿರೋಧಿ ಚಟುವಟಿಕೆ ನಡೆಸಿದರೆ ಅದಿನ್ನೂ ಸುದ್ದಿಯಾಗುವ ಸ್ಥಿತಿಯಿದೆ. ಇದು ನಮ್ಮ ಪುಣ್ಯ. ಆದರೆ ಇದೆಲ್ಲಾ ಮಾಮೂಲು. ಇದು ಸುದ್ದಿಯಾಗುವಂತಹುದೇನಲ್ಲ ಅಂತ ನಮ್ಮ ಪತ್ರಕರ್ತರು ಯೋಚನೆ ಮಾಡಿಬಿಟ್ಟರೆ?


ಇನ್ನೂ ಈ ದೇಶದಲ್ಲಿ ಜನ ತಮ್ಮ ತಮ್ಮ ಕೆಲಸಗಳನ್ನು ಮಾಡುತ್ತಿದ್ದಾರೆ. ಕಚೇರಿ, ಗದ್ದೆ ಕಾರ್ಖಾನೆ, ಕಾಲೇಜು, ನ್ಯಾಯಾಲಯ, ಆಸ್ಪತ್ರೆಗಳಿಗೆ ಓಡಾಡುತ್ತಿದ್ದಾರೆ ಅನ್ನುವಂತಹದು ಮಾಮೂಲು ಸುದ್ದಿಯಾಗಿದೆ. ಅದೇ ವಿಶೇಷ ಸುದ್ದಿಯಾಗಿ ಬಾಂಬ್ ಹಾಕುವಂತಹುದೇ ಮಾಮೂಲು ಅಗುವ ದಿನಗಳು ಬಹಳ ದೂರ ಇರಲಿಕ್ಕಿಲ್ಲ. ಅಂತಹ ದಿನಗಳು ದೇಶದ ಅನೇಕ ರಾಜ್ಯಗಳಲ್ಲಿ ಈಗಾಗಲೇ ಬಂದಿವೆ. ಯಾವುದು ಇಲ್ಲಿ ಸುದ್ದಿಯೋ ಅದು ಅನೇಕ ರಾಜ್ಯಗಳಲ್ಲಿ ಇರುವ ಮಾಮೂಲು ಪರಿಸ್ಥಿತಿ. ಯಾವುದು ದೇಶದ ಅನೇಕ ಜನರಿಗೆ ಮಾಮೂಲು ಸಂಗತಿಯೋ ಅದು ದೇಶದ ಅನೇಕ ಭಾಗಗಳಲ್ಲಿ ಸುದ್ದಿಯಾಗಿದೆ. ಅದು ಮಹತ್ವದ ಸಂಗತಿ; ಅದು ವಿಶೇಷ.


ಗಡಿ ರಕ್ಷಣೆ
ನಮ್ಮ ದೇಶದ ಇಂದಿನ ಗಡಿ ೧೯೪೭ರ ಆ.೧೫ರಂದು ತೀರ್ಮಾನವಾದದ್ದು. ಯಾವ ಭಾರತದ ಚಿತ್ರವನ್ನು ನಾವು ಈಗ ನೋಡುತ್ತಿದ್ದೇವೋ, ಅದರ ಉತ್ತರ ಹಾಗೂ ದಕ್ಷಿಣದಲ್ಲಿ ಗಡಿಗಳಿವೆ. ದಕ್ಷಿಣದ ಗಡಿಗಳ ಬಗ್ಗೆ ನಮ್ಮ ಗಮನ ಹರಿಯುವುದಿಲ್ಲ. ಏಕೆಂದರೆ ಮೂರೂ ಕಡೆ ನೀರು ಇರುವುದರಿಂದ ಏನೂ ತೊಂದರೆ ಇಲ್ಲವೆಂದುಕೊಂಡಿದ್ದೇವೆ. ಆದರೆ ಕಳೆದ ೧೦-೧೫ ವರ್ಷಗಳಲ್ಲಿ ದಕ್ಷಿಣದ ಗಡಿಗಳಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ.
ದೇಶ ಸ್ವತಂತ್ರವಾದ ನಂತರ ೧೯೪೭ರ ಸೆಪ್ಟೆಂಬರ್‌ನಲ್ಲೇ ಈ ದೇಶವನ್ನು ತುಂಡುಮಾಡಿ ಜನ್ಮ ತಳೆದಿದ್ದ ಪಾಕಿಸ್ಥಾನ ಕಾಶ್ಮೀರದ ಮೇಲೆ ಆಕ್ರಮಣ ಮಾಡಿತು. ಹೊಸ ಸೈನಿಕರಿಗೆ ಇನ್ನೂ ಸಮವಸ್ತ್ರ ಹೊಲಿಸಿ ಕೊಡುವ ಸಮಯವೂ ಆಗಿರಲಿಲ್ಲ. ಆಗಲೇ ಪಾಕ್ ಆಕ್ರಮಣ ಮಾಡಿತು. ಕಾರಣ ಕಾಶ್ಮೀರ ತನಗೆ ಸೇರಬೇಕು ಎಂದು. ಆಕ್ರಮಣವನ್ನು ಹಿಮ್ಮೆಟ್ಟಿಸುವ ಪ್ರಯತ್ನವಾಗುವ ಮೊದಲೇ ಈ ದೇಶದ ಸೇನಾಧಿಪತಿ, ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ಭೇಟಿಮಾಡಿ ೨೪ ಗಂಟೆಗಳ ಸಮಯ ಕೊಡಿ, ಅಂತಾರಾಷ್ಟ್ರೀಯ ವೇದಿಕೆಗಳಿಗೆ ಹೋಗಬೇಡಿ, ಯುದ್ಧ ಸ್ಥಂಭನದ ಕರೆ ಕೊಡಬೇಡಿ. ಪಾಕ್ ಬಲವನ್ನು ಹಿಮ್ಮೆಟ್ಟಿಸುವ ಶಕ್ತಿ ನಮಗಿದೆ ಎಂದು ಹೇಳಿದರೂ ದಿಲ್ಲಿಯಲ್ಲಿ ಕುಳಿತ ನಮ್ಮ ನೇತಾರರು ಅದಕ್ಕೆ ಕಿವಿಗೊಡಲಿಲ್ಲ. ಪರಿಣಾಮವೇನಾಯಿತು?
ಕಾಶ್ಮೀರದ ಯಾವ ಚಿತ್ರವನ್ನು ನಾವು ನಮ್ಮ ದೇಶದ ನಕಾಶೆಯಲ್ಲಿ ನೋಡುತ್ತಿದ್ದೇವೋ ಆ ಚಿತ್ರ ಪೂರ್ತಿ ನಮ್ಮ ದೇಶದ ಕೈಯಲ್ಲಿಲ್ಲ. ೧೯೪೭ ರಿಂದ ಇಂದಿನವರೆಗೂ ಯಾವುದು ನಮ್ಮ ಕೈಯಲ್ಲಿಲ್ಲವೊ, ಅದರೆ ಇರಬೇಕಾಗಿತ್ತೋ ಆ ಚಿತ್ರ ಎಂದಾದರೂ ನಮ್ಮ ಕೈ ಸೇರಿತು ಎನ್ನುವ ಆಸೆಯಿಂದ ನಕಾಶೆಯಲ್ಲಿ ಬರೆಯುತ್ತಿದ್ದೇವೆ. ಕಾಶ್ಮೀರದ ೧/೩ ಭಾಗದಷ್ಟು ಭೂಮಿ ೪೭ರ ಸೆಪ್ಟೆಂಬರ್‌ನಲ್ಲಿ ಪಾಕಿಸ್ಥಾನ ನಡೆಸಿದ ಆಕ್ರಮಣದ ಸಂದರ್ಭದಲ್ಲಿ ಅವರ ಕೈವಶವಾಯಿತು. ಆದ್ದರಿಂದ ಇಂದು ನಾವು ಯಾವ ಗಡಿಯನ್ನು ಹೇಳುತ್ತೇವೋ ಅದು ಅದಲ್ಲದೇ ವಾಸ್ತವಿಕ ನಿಯಂತ್ರಣ ರೇಖೆ ಎನ್ನುವುದೊಂದಿದೆ. ಭಾರತದ ಸೈನಿಕವಿರುವುದು ಈ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ. ಈ ರೇಖೆಯನ್ನೇ ನಮ್ಮ ಕೇಂದ್ರ ಸಚಿವರಾದ ಎನ್ ಪಿಕೆ ಸಾಳ್ವೆ ದಾಟಿದಾಗ ಪಾಕ್ ಸೈನಿಕರು ಇನ್ನೇನು ಹೊಡೆದು ಬೀಳಿಸುವುದರಲ್ಲಿದ್ದರು. ಅವರು ದಾಟಿದ್ದು ಕೇವಲ ನಿಯಂತ್ರಣ ರೇಖೆಯನ್ನೇ ಹೊರತು, ನಿಜವಾದ ಗಡಿಯನ್ನಲ್ಲ.
ಅಂದರೆ ೧/೩ ಭಾಗದಷ್ಟು ಭೂಭಾಗವನ್ನು ಪಾಕ್ ವಶಪಡಿಸಿಕೊಂಡಿತು. ನಾವು ಅದನ್ನು ಕಳೆದುಕೊಂಡೆವು. ಅದು ಪಾಕ್ ಆಕ್ರಮಿತ ಕಾಶ್ಮೀರ. ಪಾಕಿಸ್ಥಾನಿಯರು ಅದನ್ನು ಅಜಾದ್ ಕಾಶ್ಮೀರ ಎಂದು ಕರೆಯುತ್ತಾರೆ.


ಪಾಕ್‌ ಜೊತೆ ೧೯೪೭ರಲ್ಲಿ ನಡೆದ ಯುದ್ಧದ ನಂತರ ಪುನಃ ೧೯೬೫ರಲ್ಲಿ ಯುದ್ಧ ನಡೆಯಿತು. ಅದಾದನಂತರ ನಮ್ಮ ಪ್ರಧಾನಿ ಯುದ್ಧದ ಮಾತುಕತೆಗಾಗಿ ತಾಷ್ಕೆಂಡಿಗೆ ಹೋದರು. ಆದರೆ ವಾಪಾಸ್ ಬರಲಿಲ್ಲ. ಈ ದೇಶದ ಪ್ರಧಾನಿಯಾಗಿ, ೧೮ ತಿಂಗಳ ಕಾಲ ಜೈಜವಾನ್-ಜೈಕಿಸಾನ್ ಎನ್ನುತ್ತಾ, ಈ ದೇಶದ ಅಂತರ್ಯದ ಚೇತನ ಶಕ್ತಿಯನ್ನು ಮೇಲೆತ್ತಿ ಹಿಡಿದ ಒಬ್ಬ ಪ್ರಧಾನ ಮಂತ್ರಿ, ಭಾರತದ ವಿರುದ್ಧವಾಗಿ ದನಿಯೆತ್ತಿ, ಕೈ ಎತ್ತಿದ ಪಾಕ್ ಜೊತೆಗೆ ಮಾತುಕತೆಗೆ ಹೋಗಿ ತಿರುಗಿ ಬರಲೇ ಇಲ್ಲ. ಏನಾಯಿತು ಅನ್ನುವುದು ಇನ್ನೂ ತಿಳಿದಿಲ್ಲ. ಅನೇಕ ಊಹಾಪೋಹಗಳಿವೆ. ಆದರೆ ಕಥೆ ಅದಲ್ಲ.
೧೯೬೫ರಲ್ಲಿ ನಡೆದ ಯುದ್ಧದಲ್ಲಿ ನಾವು ಗೆದ್ದವೋ ಸೋತವೋ? ನಿಜವಾಗಿ ಹೇಳುವುದಾದರೆ ಅದೊಂದು ರೀತಿ ಡ್ರಾ. ಯಾರೂ ಗೆಲ್ಲಲಿಲ್ಲ, ಯಾರೂ ಸೋಲಲಿಲ್ಲ. ಹಾಗೆ ನೋಡಿದರೆ ನಾವು ಪ್ರಧಾನಮಂತ್ರಿ, ಸೈನಿಕರು, ಮದ್ದುಗುಂಡುಗಳನ್ನು ಕಳೆದುಕೊಂಡವು. ಪಾಕ್‌ನವರೂ ಒಂದಿಷ್ಟು ಕಳೆದುಕೊಂಡರು. ಆದ್ದರಿಂದ ಇದನ್ನು ಡ್ರಾ ಎನ್ನಬಹುದು. ಇದಕ್ಕೂ ಪೂರ್ವಭಾವಿಯಾಗಿ ೧೯೬೨ ರಲ್ಲಿ ಚೀನಾದ ವಿರುದ್ಧ ಯುದ್ಧವೊಂದು ನಡೆದಿತ್ತು. ಅಂದು ನಾವು ಅನೇಕ ಸೈನಿಕರನ್ನು ಕಳೆದುಕೊಂಡವು.


ನೂರಾರು ಸಾವಿರ ಸೈನಿಕರು ಮದ್ದು ಗುಂಡುಗಳಿಂದ ಮಾತ್ರವಲ್ಲ, ಚಳಿಯಿಂದಲೂ ಸತ್ತರು.
೧೯೭೧ರಲ್ಲಿ ಪಾಕ್ ಯುದ್ಧದ ನಂತರ ಮೂರುದಿನಗಳ ಮಾತುಕತೆ ನಡೆಯಿತು. ಈಗಿನ ಬೆನಜೀರ್ ಭುಟ್ಟೋ ಅವರ ತಂದೆ ಜುಲ್ಫಿಕರ್ ಆಲಿ ಭುಟ್ಟೋ ಆಗ ಪಾಕ್‌ನ ಅಧ್ಯಕ್ಷರು. ತಂದೆ ಮಗಳು ಜೊತೆಯಾಗಿ ಮಾತುಕತೆಗೆ ದಿಲ್ಲಿಗೆ ಮೂರು ದಿನಗಳ ಮಾತುಕತೆ ವಿಫಲಗೊಂಡು, ಭುಟ್ಟೋ ಮಗಳೊಂದಿಗೆ ಹೊರಡಲನುವಾಗಿದ್ದರು. ಆದರೆ ಮರುದಿನ ಬೆಳಿಗ್ಗೆ ಇಂದಿರಾಗಾಂಧಿ ಅವರು ಜುಲ್ಫಿಕರ್ ಆಲಿಯನ್ನು ಉಪಾಹಾರಕ್ಕೆ ಕರೆದರು. ಮಾತುಕತೆ ವಿಫಲವಾಗತಕ್ಕದ್ದಲ್ಲ. ಏಷ್ಯಾದಲ್ಲಿ ಶಾಂತಿಯ ಅಗತ್ಯವಿದೆ. ಜಗತ್ತಿನ ಒತ್ತಡವಿದೆ. ನಾವು ನಿಮಗೆ ಎಲ್ಲವನ್ನೂ ಬಿಟ್ಟು ಕೊಡುತ್ತೇವೆ ಎಂದರು. ಅಂತೆಯೇ ೯೨ ಸಾವಿರ ಸೈನಿಕರನ್ನು, ಪಂಜಾಬ್ ಪ್ರಾಂತ್ಯವನ್ನು ವಾಪಾಸ್ ಮಾಡಲಾಯಿತು. ನಮ್ಮ ಮತ್ತು ಪಾಕ್ ನಡುವಿನ ಯಾವುದೇ ಸಮಸ್ಯೆ ಇದ್ದರೂ ಅದು ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎನ್ನುವ ಒಪ್ಪಂದಕ್ಕೆ ನಾವು ಸಹಿಹಾಕಬೇಕಾಯಿತು. ನಾವು ಅಲ್ಲಿ ಸೋತೆವು.
ನಾವು ಆಗ ೯೨ ಸಾವಿರ ಪಾಕ್ ಸೈನಿಕರ ಹೊಟ್ಟೆ ಹೊರೆಯುವ ಅಗತ್ಯವೇನೂ ಇರಲಿಲ್ಲ. ಆದರೆ ಒಂದು ಕಾರ್ಯವನ್ನಾದರೂ ಮಾಡಬಹುದಿತ್ತು.
ನೀವು ೧೯೪೭, ೧೯೬೫ ಮತ್ತು ೧೯೭೧ರಲ್ಲಿ ಮೂರು ಬಾರಿ ಆಕ್ರಮಣ ಮಾಡಿದ್ದೀರಿ ತಾನೆ? ಮೂರಕ್ಕೆ ಮುಕ್ತಾಯ ಮಾಡೋಣ. ಈಗ ನೀವು “ಕಾಶ್ಮೀರ ಭಾರತದ ಅವಿಭಾಜ್ಯ ಅಂಗ” ಎನ್ನುವ ನಾಲ್ಕು ಶಬ್ಧಗಳಿಗೆ ಸಹಿ ಹಾಕಿ, ಹೋಗಿ. ಇಲ್ಲವಾದರೆ ೯೨ ಸಾವಿರ ಸೈನಿಕರು ಸಿಗುವುದಿಲ್ಲ ಎಂದು ಹೇಳಬಹುದಿತ್ತು. ಪಂಜಾಬ್ ಪ್ರಾಂತವೂ ಸಿಗುವುದಿಲ್ಲ ಎಂದು ಹೇಳಬಹುದಾಗಿತ್ತು. ನಮ್ಮವರು ಬಾಯಿ ತೆರೆಯಲಿಲ್ಲ. ಪರಿಣಾಮ ವಿಪರೀತ.
ಸಾವಿರ ವರ್ಷ ಕಾಶ್ಮೀರಕ್ಕಾಗಿ ಹೋರಾಟ ಮಾಡುತ್ತೇವೆ. “ಜಿಹಾದ್’ ಎಂದು ಹೇಳಿದ ಅಪ್ಪ ಮಗಳು ಇಬ್ಬರೂ ಪಾಕಿಸ್ಥಾನದಲ್ಲಿ ಆಡಳಿತ ನಡೆಸಿದರು. ಒಂದು ಸಾವಿರ ವರ್ಷ ಆ ದೇಶ ಬದುಕಿದ್ದರೆ ತಾನೆ ಹೋರಾಡುವುದು? ಅದು ಬೇರೆ ವಿಚಾರ, ಆದರೆ ಈ ರೀತಿ ಹೇಳುವಂತಹ ಹಿಮ್ಮತ್ತು ಹೇಗೆ ಬಂತು?
ಮಾತುಕತೆಯ ಮೇಜಿನ ಮೇಲೆ ತೋರಿದ ದುರ್ಬಲತನದಿಂದ, ಸೈನಿಕರು ಗಳಿಸಿ ಕೊಟ್ಟಿದನ್ನೂ ಲೇಖನಿ ಕಳೆದುಕೊಳ್ಳಬಹುದು ಎನ್ನುವುದನ್ನು ತೋರಿಕೊಟ್ಟುದರಿಂದ.


ಈ ದೇಶದ ವಿರೋಧ ಪಕ್ಷದ ನಾಯಕರು ದಿಲ್ಲಿಗೆ ಇದನ್ನೇ ಹೇಳಿದ್ದರು. ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ವಿದೇಶಾಂಗ ಸಚಿವರಾಗಿದ್ದ ಎ. ಪಿ ವೆಂಕಟೇಶ್ವರನ್ ಕೂಡಾ ಇದನ್ನೇ ಹೇಳಿದ್ದರು. ೧೯೭೧ ರಲ್ಲಿ ನಮಗೆ ಒಂದು ಅವಕಾಶವಿತ್ತು. ಕಾಶ್ಮೀರ ಸದಾ ಭಾರತದ ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಹೇಳಲು ಅಂದು ಸಾಧ್ಯವಿತ್ತು. ಸಂವಿಧಾನದ ೩೭೦ನೇ ವಿಧಿಯನ್ನು ತೆಗೆದುಹಾಕಲೂ ಸಾಧ್ಯವಿತ್ತು. ಅದನ್ನು ವಿರೋಧಿಸುವವರೇ ಇರಲಿಲ್ಲ. ನಮ್ಮವರು ಅದನ್ನು ಮಾಡಲಿಲ್ಲ. ಪರಿಣಾಮವಾಗಿ ಕಳೆದ ೨೫ ವರ್ಷಗಳಲ್ಲಿ ಕಾಶ್ಮೀರವನ್ನು ನುಂಗಿಹಾಕಲು ಪಾಕ್ ಏನೇನು ಪ್ರಯತ್ನ ಮಾಡುತ್ತಿದೆ ಎಂಬುದು ನಮಗೆ ತಿಳಿದಿದೆ. ಗಡಿರಕ್ಷಣೆಯ ಸಂದರ್ಭದಲ್ಲಿ ನಾವು ಅನೇಕ ಬಾರಿ ಎಡವಿದೆವು.


ನಮಗೆ ೧೯೬೨ ರವರೆಗೂ, ಸೇನೆಯ ಆವಶ್ಯಕತೆ ಬಿದ್ದೀತು. ಚೀನಾದಂತಹ ದೇಶ ಅಕ್ರಮಣ ಮಾಡಬಹುದು ಎಂದೇ ಅನಿಸಿರಲಿಲ್ಲ. ೧೯೬೨ರಲ್ಲಿ ದೇಶದ ರಕ್ಷಣಾ ಸಚಿವರಾಗಿದ್ದ ನೆಹರೂ ಅವರ ಆಪ್ತ ಮಿತ್ರ ವಿ.ಕೆ. ಕೃಷ್ಣಮೆನನ್ ಬಹಳ ಬದ್ಧಿವಂತರು, ಮೇಧಾವಿ ಕೂಡಾ. ಪಾಕಿಸ್ಥಾನದ ಆಕ್ರಮಣ ಕಾಲದಲ್ಲಿ ವಿಶ್ವಸಂಸ್ಥೆಯ ಸಭೆಯಲ್ಲಿ ಕಾಶ್ಮೀರದ ಪರವಾಗಿ ಅವರು ೪೨ ಗಂಟೆಗಳ ಕಾಲ ಭಾಷಣ ಮಾಡಿದ್ದರು. ಅಂತಹ ಕೃಷ್ಣಮೆನನ್, ಭಾರತ ಸೇನೆ ಇಟ್ಟುಕೊಳ್ಳುವುದು ಒಂದು ಅನೈತಿಕ ವಿಷಯ ಎಂದಿದ್ದರು. ಯಾಕೆ? ಭಾರತ ಒಂದು ಲೋಕತಂತ್ರ ದೇಶ, ಭಾರತವು ಏಷ್ಯಾದಲ್ಲಿ ಶಾಂತಿ ಸ್ಥಾಪನೆಗಾಗಿ ಕಟಿಬದ್ಧವಾಗಿರುವ ದೇಶ. ನಾವು ಪಂಚಶೀಲ ತತ್ತ್ವವನ್ನು ಜಗತ್ತಿಗೆ ಹೇಳುತ್ತಿದ್ದೇವೆ. ನಾವು ಸೇನೆಯನ್ನು ಇಟ್ಟುಕೊಂಡರೆ ಬೇರೆಯವರ ಮೇಲೆ ಆಕ್ರಮಣ ಮಾಡ್ತೀವಿ ಅಂತ ತೋರಿಸಿಕೊಂಡ ಹಾಗಲ್ಲವೆ. ಇದರಿಂದ ಸೇನೆ ಹೊಂದುವುದು ಅನೈತಿಕ ಎಂದು ಅವರು ಹೇಳಿದ್ದರು.


ನಮ್ಮ ದೇಶಕ್ಕೆ ಭೇಟಿ ನೀಡಿದ್ದ ಚೀನಾದ ಪ್ರಧಾನಿ ಚೌ ಎನ್ ಲಾಯ್ ಹಿಂದೀ ಚೀನಿ ಭಾಯಿಭಾಯಿ ಎಂದು ಹೇಳಿ ವಾಪಾಸು ಹೋದವರು ತದ್ವಿರುದ್ಧವಾಗಿ ನಡೆದುಕೊಂಡರು. ೧೯೬೨ರಲ್ಲಿ ಚೀನಾ ನಮ್ಮ ಮೇಲೆ ಆಕ್ರಮಣ ನಡೆಸಿತು. ಸೇನೆ ಇಡುವುದು ಅನೈತಿಕ ಎಂದಿದ್ದ ರಕ್ಷಣಾ ಸಚಿವ ಕೃಷ್ಣ ಮೆನನ್ ಜನರ ಒತ್ತಡದಿಂದ ರಾಜೀನಾಮೆ ನೀಡಬೇಕಾಯಿತು. ಹಿಮಾಲಯದ ಮಧ್ಯೆ ಇದ್ದರೂ ಚೀನಾ ಆಕ್ರಮಣ ಮಾಡಬಹುದು ಎಂಬುದು ಆಗ ಅರ್ಥವಾಯಿತು.
೧೯೭೧ರಲ್ಲಿ ನಡೆದ ಯುದ್ಧದಲ್ಲಿ ನಾವು ಗೆದ್ದೆವು. ಹೇಗೆ? ಎನ್.ಸಿ.ಸಿ. ಆದಾಗಲೇ ಪ್ರಾರಂಭವಾಗಿತ್ತು. ಸೇನೆ ಸೇರಿಸುವುದು, ಮದ್ದುಗುಂಡುಗಳನ್ನು ಸಂಗ್ರಹಿಸುವ ಸಲುವಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವುದು “ನೈತಿಕ” ಎಂದು ಒಪ್ಪಿಕೊಳ್ಳಲಾಯಿತು. ಜನರು, ಸರ್ಕಾರ ಮತ್ತು ಪತ್ರಿಕೆಗಳೂ ಕೂಡಾ ಸೇನೆಯ ಅಗತ್ಯವನ್ನು ಸಾರಿ ಹೇಳಿದವು. ೨೧ರಲ್ಲಿ ಪೂರ್ವ ಪಾಕಿಸ್ಥಾನವು ಬಾಂಗ್ಲಾದೇಶವಾಗಬೇಕು ಎಂದು ಹೋರಾಡುತ್ತಿದ್ದ ಮುಕ್ತಿ ವಾಹಿನಿ ಸೇನೆಯ ಜೊತೆ ಸೇರಿ ಅವರಿಗೆ ಸ್ವಾತಂತ್ರ ದೊರಕಿಸಿಕೊಡುವ ಕೆಲಸವನ್ನು ನಾವು ಮಾಡಿದವು. ಪಶ್ಚಿಮದ ಗಡಿಯ ಮೇಲೆ ಪಾಕ್ ಆಕ್ರಮಣ ಮಾಡಿದಾಗ ನಾವು ಪ್ರತ್ಯಾಕ್ರಮಣ ಮಾಡಿದವು. ಪರಿಣಾಮ ನಾವು ಗೆದ್ದವು. ಪಶ್ಚಿಮ ಪಂಜಾಬ್‌ನ ಅನೇಕ ಭಾಗಗಳನ್ನು ನಾವು ಗೆದ್ದವು, ಲಾಹೋರ್‌ವರೆಗೂ ನಮ್ಮ ಸೈನಿಕರು ಗೆದ್ದಿದ್ದರು. ೯೨ ಸಾವಿರ ಪಾಕ್ ಸೈನಿಕರು ನಮ್ಮಲ್ಲಿ ಬಂಧಿಗಳಾಗಿ ಬಿದ್ದಿದ್ದರು. ನಾವು ಆಗ ಏನೂ ಮಾಡಬಹುದಾಗಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ಯುದ್ಧಭೂಮಿಯಲ್ಲಿ ನಾವು ಗದ್ದೆವು. ಮಾತುಕತೆಯ ಮೇಜಿನ ಮೇಲೆ ಸೋತವು, ರಕ್ತ ಸುರಿಸಿ ಸೈನಿಕರು ಯುದ್ಧಭೂಮಿಯಲ್ಲಿ ಗಳಿಸಿಕೊಟ್ಟ ವಿಜಯವನ್ನು ಸಿಮ್ಲಾದ ಮಾತುಕತೆಯ ಮೇಜಿನಲ್ಲಿ, ಲೇಖನಿಯ ಮೂಲಕ ನಾವು ಕಳೆದುಕೊಂಡವು.
ಚೀನಾ ಏನು ಮಾಡಿತು? ೧೯೬೨ರಲ್ಲಿ ಯುದ್ಧ ನಡೆಯಿತು. ಆದರೆ ೮ ವರ್ಷದ ಹಿಂದೆಯೇ ಅರುಣಾಚಲದಲ್ಲಿ ೯೦ ಕಿ.ಮೀ. ಉದ್ದದ ಹೆಲಿಪ್ಯಾಡ್‌ನ್ನು ಚೀನಾ ನಿರ್ಮಿಸಿತು. ಈ ಹೆಲಿಪ್ಯಾಡ್ ನಿರ್ಮಿಸಿದ ಬಗ್ಗೆ ಸದಸ್ಯರು ಲೋಕಸಭೆಯಲ್ಲಿ ಪ್ರಶ್ನಿಸಿ ಚೀನಾ ನಮ್ಮ ದೇಶದೊಳಗೆ ಬಂದುಬಿಟ್ಟಿದೆ. ಇದು ಹೇಗೆ ಸಾಧ್ಯ ಎಂದು ಕೇಳಿದ್ದರು. ದೇಶದ ಹಾಗೂ ಗೃಹ ಸಚಿವರು ಅದು ನಡೆದೇ ಇಲ್ಲ, ಅದೆಲ್ಲಾ ಸುಳ್ಳು ಎಂದಿದ್ದರು. ೪ ದಿನಗಳಲ್ಲಿ ಸತ್ಯವನ್ನು ಅವರು ಹೇಳಬೇಕಾಯಿತು. ನಂತರ ಮಾತುಕತೆ, ಅಂತಾರಾಷ್ಟ್ರೀಯ ಒತ್ತಡ ಇತ್ಯಾದಿ ಕಾರಣಳಿಂದಾಗಿ ಚೀನಾ ಅಲ್ಲಿಂದ ಜಾಗ ಖಾಲಿ ಮಾಡಬೇಕಾಯಿತು.
ನಮಗೆ ಗೊತ್ತಿಲ್ಲದಂತೆಯೇ ನಮ್ಮ ದೇಶದೊಳಕ್ಕೆ ಬಂದು ಹಲಿಪ್ಯಾಡ್ ನಿರ್ಮಿಸುವವರೆಗೆ ನಾವು ನಿದ್ದೆ ಮಾಡಿದ್ದೇವೆಯೆ? ನಮ್ಮ ದೇಶದ ಸೇನಾ ಗೂಢಚಾರ ವಿಭಾಗ ಏನು ಮಾಡುತ್ತಿತ್ತು? ಮತ್ತು ರಕ್ಷಣಾ ಸಚಿವರು ಏನು ಮಾಡುತ್ತಿದ್ದರು? ಇಂದು ಕೇಳಿದಂತೆ ಅಂದು ಕೇಳಲು ಪ್ರಾಯಶಃ ಯಾರೂ ಇರಲಿಲ್ಲ. ಈ ರೀತಿಯ ಅನೇಕ ಸಂಗತಿಗಳು ನಡೆಯುತ್ತಲೇ ಇವೆ.


ಉತ್ತರದ ಗಡಿಗಳ, ದಕ್ಷಿಣದ ಗಡಿಗಳ ಪ್ರಶ್ನೆ ಮಾತ್ರವೇ ಅಲ್ಲ. ದಕ್ಷಿಣದಲ್ಲಿ ಎಲ್‌ಟಿಟಿಇ ಏನು ನಡೆಸುತ್ತಿದೆ ಎಂಬುದು ತಿಳಿದೇ ಇದೆ. ಶ್ರೀಲಂಕಾದಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡುವುದು ಅಂತಾರಾಷ್ಟ್ರೀಯ ಶಕ್ತಿಗಳಿಗೆ ಅವಶ್ಯಕ. ಶ್ರೀಲಂಕಾದಲ್ಲಿ ತಮಿಳರ ಪ್ರಶ್ನೆ ಮಾತ್ರವೇ ಅಲ್ಲ. ತಮಿಳರು ಮಾತ್ರ ಎತ್ತಿದ ಪ್ರಶ್ನೆಯೂ ಇದಲ್ಲ. ನೌಕಾ ಗೂಢಚಾರ ವಿಭಾಗದಲ್ಲಿ ಕೆಲಸ ಮಾಡಿದ ಸ್ನೇಹಿತರೊಬ್ಬರು ಹೇಳುವ ಪ್ರಕಾರ, ಶ್ರೀಲಂಕಾದ ಸುತ್ತ ಏಳು ರಾಷ್ಟ್ರಗಳ ಹಡಗುಗಳು ಗಂಟೆಗಳ ಕಾಲವೂ ಗಸ್ತು ತಿರುಗುತ್ತಿವೆಯಂತೆ, ಯಾವುದೇ ಹೊತ್ತಿನಲ್ಲೂ ದಕ್ಷಿಣದಲ್ಲಿ ಹಿಂದೂ ಮಹಾ ಸಾಗರದ ಮೇಲೆ ಆಕ್ರಮಣ ಮಾಡಲು ಬಲಿಷ್ಠ ರಾಷ್ಟ್ರಗಳು ತಯಾರಾಗಿ ನಿಂತಿವೆ.


ಹಾಗಾದರೆ ದೇಶ ರಕ್ಷಣೆ ಹೇಗೆ?


ದೇಶದಲ್ಲಿ ಕೆಲವು ಗಡಿಗಳಿವೆ. ಇವು ಹಲವು ಬಾರಿ ಬದಲಾಗಿರುವುದು ಇತಿಹಾಸ ಓದಿದಾಗ ಅರಿವಿಗೆ ಬರುತ್ತದೆ. ಆ ಗಡಿಗಳ ರಕ್ಷಣೆಗೆ ಸೈನಿಕರಿದ್ದಾರೆ. ಆದರೂ ದೇಶದ ಮೇಲೆ ಆಕ್ರಮಣ ನಡೆದೇ ಇದೆ. ನಮ್ಮ ಸೈನಿಕರು ಇದನ್ನು ತಡೆಯುತ್ತಿದ್ದಾರೆ. ಇದು ದೇಶದ ರಕ್ಷಣೆಯ ಒಂದು ಮುಖ.
ಇನ್ನೊಂದು ಮುಖ ಈ ದೇಶದ ಏಕತೆಯದು. ನಾವು ಕೇವಲ ಬೇಲಿಯನ್ನು ರಕ್ಷಿಸಿದರೆ ಸಾಲದು. ಅದರ ಒಳಗಿರುವ ಪೈರು, ಫಸಲನ್ನು ಕತ್ತರಿಸಿ ಹಾಕುವ ಅನೇಕ ರೀತಿಯ ಪಶುಪಕ್ಷಿಗಳಿಂದ ರಕ್ಷಿಸಿದರೂ ಸಾಲದು.


ಅದಕ್ಕೂ ಮಿಗಿಲಾಗಿ ಸಾರ್ಯವೆಸಗಬೇಕಾದುದಿದೆ. ಅದು ಈ ಜನಕ್ಕೆ, ಈ ಮಣ್ಣಿಗೆ ಜನರಿಗೆ ಸಂಬಂಧಿಸಿದ್ದು. ಅದು ಈ ದೇಶದ ಜೀವನದ ಪ್ರಶ್ನೆ. ಜನರ ಜೀವನ ಶೈಲಿಯ ರಕ್ಷಣೆಯ ಪ್ರಶ್ನೆ. ಈ ದೇಶದ ಜನ ಯಾವುದರ ಆಧಾರದ ಮೇಲೆ, ಯಾವುದಕ್ಕಾಗಿ ಬದುಕುತ್ತಿದ್ದಾರೆ ಅನ್ನುವಂತಹ ಜೀವನದ ಸಂಸ್ಕೃತಿಯ ರಕ್ಷಣೆಯದು. ಈ ಮೂರು ಸಂಗತಿಗಳ ರಕ್ಷಣೆ ಎಲ್ಲಿ ಸಾಧ್ಯವಾಗುವುದಿಲ್ಲವೋ ಆ ದೇಶ ರಕ್ಷಣೆಯ ದೃಷ್ಟಿಯಿಂದ ದುರ್ಬಲವಾಗಿದೆ ಎಂದು ನಾವು ನಿರ್ಧರಿಸಬಹುದು.


ಜಗತ್ತಿನ ಆಧಿಪತ್ಯದ ದೃಷ್ಟಿಯಿಂದ ಮೂರು ಭೂಭಾಗಗಳು ಮುಖ್ಯವಾದವು. ಅಂತಹ ಭೂಭಾಗಗಳ ಮೇಲೆ ಜಗತ್ತಿನ ಅನೇಕ ದೇಶಗಳು ಕಣ್ಣಿಟ್ಟಿವೆ. ಒಂದು ದಕ್ಷಿಣ ಆಫ್ರಿಕಾ, ಇನ್ನೊಂದು ಹಿಮಾಲಯ, ಮತ್ತೊಂದು ಹಿಂದೂ ಮಹಾಸಾಗರ.


ದಕ್ಷಿಣ ಆಫ್ರಿಕಾದಲ್ಲಿ ನೆಲ್ಸನ್ ಮಂಡೇಲಾರನ್ನು ಬಿಡುಗಡೆ ಮಾಡಲು ಬ್ರಿಟನ್ ಮೇಲೆ ಅಮೆರಿಕಾ ಒತ್ತಡ ಹೇರಿತು. ಮಂಡೇಲಾರನ್ನು ಅಮೆರಿಕಾ ಆಹ್ವಾನಿಸಿತು. ನಾನು ಸಮಾಜ ವಾದಿಯೂ ಅಲ್ಲ. ಕಮ್ಯುನಿಸ್ಟ್ ಕೂಡಾ ಅಲ್ಲ ಎಂದು ಮಂಡೇಲಾ ಅಮೆರಿಕಾಕ್ಕೆ ಹೇಳಬೇಕಾಯಿತು. ದಕ್ಷಿಣ ಆಫ್ರಿಕಾದಲ್ಲಿ ತನಗೆ ಕೈಗೊಂಬೆಯಂತೆ ಇರುವ ಸರ್ಕಾರ ಇರಬೇಕು ಎನ್ನುವ ಪ್ರಯತ್ನವನ್ನು ಅಮೆರಿಕಾ ನಡೆಸಿದೆ. ದಕ್ಷಿಣ ಆಫ್ರಿಕಾದ ಮೇಲೆ ಯಾರು ಅಧಿಪತ್ಯವನ್ನು ಸಾಧಿಸುತ್ತಾರೋ, ಅವರು ಪೃಥ್ವಿಯ ಸೇನಾ ನೀತಿಯ ದೃಷ್ಟಿಯಿಂದ ಅವಶ್ಯಕ ಭೂಭಾಗದ ಮೇಲೆ ನಿಯಂತ್ರಣ ಸಾಧಿಸಿದಂತೆ.


ಕಾಶ್ಮೀರದಲ್ಲಿ ಅಸ್ಥಿರತೆಯುಂಟುಮಾಡುವ ಮೂಲಕ ಗಾಂಧಾರದಿಂದ, ಅಫಘಾನಿಸ್ಥಾನದಿಂದ ಮಣಿಪುರದವರೆಗೆ ಯಾವುದೇ ತರದ ರಾಜಕೀಯ ಕೈವಾಡವನ್ನು ನಡೆಸುವಲ್ಲಿ ವಿಶ್ವದ ಅನೇಕ ಶಕ್ತಿಗಳಿಗೆ ಸ್ವಹಿತಾಸಕ್ತಿ ಇದೆ. ದಲೈಲಾಮಾ ಟಿಬೆಟಿಗೆ ಹಿಂತಿರುಗಬೇಕು ಎಂದು ಅಮೆರಿಕಾ ಚೀನಾದ ಮೇಲೆ ಒತ್ತಡ ತರುತ್ತಿರುವುದು ಕೇವಲ ಮಾನವೀಯ ದೃಷ್ಟಿಯಿಂದ ಅಲ್ಲ. ಲೋಕತಂತ್ರ ಮಾನವಾಧಿಕಾರದ ಪ್ರಶ್ನೆಯಿಂದಲೂ ಅಲ್ಲ, ಅಮೇರಿಕಾಕ್ಕೆ ಅದರದೇ ಆದ ಸ್ವಾರ್ಥ ಇದೆ.


ಸಿಯಾಚಿನ್‌ ಪ್ರದೇಶ ನಮ್ಮ ದೇಶದ ಅತ್ಯಂತ ಆಯಕಟ್ಟಿನ ಪ್ರದೇಶ. ಭಾರತ-ಪಾಕ್ ನಡುವಿನ ಕಾರಾಕೋರಂ ಹೆದ್ದಾರಿ ಪಕ್ಕದಲ್ಲಿರುವ ಸಿಯಾಚಿನ್ -20ರಿಂದ -೩೦ ಡಿಗ್ರಿ ಸೆಲ್ಸಿಯಸ್ ಉಷ್ಟತೆ ಹೊಂದಿರುವ, ಸದಾ ಮಂಜು ಸುರಿಯುವ ಪ್ರದೇಶ. ಈ ಪ್ರದೇಶವನ್ನು ನಮಗೆ ನೀಡಿ ಎಂದು ಬೆನಜೀರ್ ಭುಟ್ಟೋ ಕೇಳಿದ್ದರು. ೩ ಬಾರಿ ಅವರು ಇಲ್ಲಿಗೆ ಬಂದು ಸಿಯಾಚಿನ್ ಗ್ಲೇಜಿಯರ್ ವೀಕ್ಷಿಸಿ ಹೋದರು. ನಮ್ಮ ದೇಶದಲ್ಲಿನ ಸಿಯಾಚಿನ್ ವೀಕ್ಷಣೆಯನ್ನು ಆಕೆ ಮಾಡುವ ಅಗತ್ಯವಾದರೂ ಏನು?


ಕಾರಾಕೋರಂ ಹೆದ್ದಾರಿಯ ಮೇಲೆ ನಡೆಯುವ ಎಲ್ಲಾ ಸಂಚಾರವನ್ನು ಈ ಸಿಯಾಚಿನ್ ಪ್ರದೇಶದ ಮೇಲೆ ನಿಂತು ನೋಡಲು ಸಾಧ್ಯ. ಚೀನಾ, ಭಾರತ ಮತ್ತು ಪಾಕ್ ಮೂರು ಪ್ರಮುಖ ರಾಷ್ಟ್ರಗಳನ್ನು ಒಂದೇ ಸ್ಥಳದಲ್ಲಿ ನಿಂತು ನೋಡಲು ಸಾಧ್ಯವಿರುವ ಆಯಕಟ್ಟಿನ ಜಾಗವದು. ನಮ್ಮ ಸೈನಿಕರು ೨೪ ಗಂಟೆಗಳೂ ಚಳಿಯಲ್ಲಿ ನಿಂತು ಈ ಪ್ರದೇಶವನ್ನು ಕಾಯುತ್ತಿದ್ದಾರೆ. ಸಿಯಾಚಿನ್‌ನಲ್ಲಿ ಪ್ರತೀ ವರ್ಷ ನೂರಾರು ಸೈನಿಕರು ಚಳಿಯಿಂದ ಪ್ರಾಣಬಿಡುತ್ತಿದ್ದಾರೆ. ಅಂತಹ ಸಿಯಾಚಿನ್ ಗ್ಲೇಜಿಯರ್ ಪಾಕ್‌ಗೆ ಅಗತ್ಯ ಬೇಕಾಗಿದೆ.


ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗ ಈ ಪ್ರದೇಶವನ್ನು ಪಾಕಿಗೆ ಕೊಡಲು ರಹಸ್ಯ ಮಾತುಕತೆಯಾಗಿತ್ತು ಎಂದು ಪತ್ರಿಕೆಗಳು ವರದಿ ಮಾಡಿದ್ದವು. ವಿಶೇಷವಾಗಿ “ಆರ್ಗನೈಸ‌ರ್’’ ಪತ್ರಿಕೆಯಲ್ಲಿ ನಿವೃತ್ತ ಸೇನಾಧಿಕಾರಿಯೊಬ್ಬರು ಎರಡು ಲೇಖನಗಳ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದರು. ದೇಶದ ಗಡಿಗಳ ರಕ್ಷಣೆ ಬಗ್ಗೆ ನಮ್ಮ ನೇತಾರರು ಏನು ಮಾಡುತ್ತಿದ್ದಾರೆ ಎಂಬುದು ಇಲ್ಲೇ ಅರಿವಿಗೆ ಬರುತ್ತದೆ. ಬೇರೆ ದೇಶಗಳು ನೇರವಾಗಿ, ಪರೋಕ್ಷವಾಗಿ ಮತ್ತು ಗುಪ್ತವಾಗಿ ನಮ್ಮ ಮೇಲೆ ಆಕ್ರಮಣ ಮಾಡುತ್ತಿರುವುದನ್ನು ನಾವು ಮರೆಯಬಾರದು.


ಹಿಂದೂ ಮಹಾಸಾಗರ ಮೂರನೆಯದು. ಎಲ್ಲಿಯವರೆಗೆ ಅಲ್ಲಿ ಶಾಂತಿ ಇರುವುದಿಲ್ಲವೋ ಅಲ್ಲಿಯವರೆಗೆ ಏಷ್ಯಾದಲ್ಲಿ ಶಾಂತಿ ಇರಲು ಸಾಧ್ಯವಿಲ್ಲ. ಆದ್ದರಿಂದಲೇ ಏಳು ದೇಶಗಳ ಹಡಗುಗಳು ಈ ಪ್ರದೇಶದಲ್ಲಿ ಪ್ರದಕ್ಷಿಣೆ ನಡೆಸುತ್ತಿವೆ. ಎಲ್‌ಟಿಟಿಇಯವರಿಗೆ ಕೆನಡಾದಲ್ಲಿ ತರಬೇತಿ ನೀಡುತ್ತಿರುವುದು ನಮಗೆ ತಿಳಿದ ವಿಚಾರ. ಶ್ರೀಲಂಕಾದಲ್ಲಿ ನಡೆಯುತ್ತಿರುವುದು ತಮಿಳರ ಹೋರಾಟ, ನಡೆಯಲಿ ಎಂದು ಅನಿಸಬಹುದು. ಆದರೆ ಅಷ್ಟೇ ಅಲ್ಲ. ಎಲ್ ಟಿಟಿಇನವರು ಏನು ಮಾಡಿದರು? ಭಾರತಕ್ಕೆ ಬಂದರು, ಇಲ್ಲಿನ ಕಾಡುಗಳಲ್ಲಿ ಅವರಿಗೆ ಪ್ರಶಿಕ್ಷಣ ಕೊಡಬೇಕೆಂದು ಅಂದಿನ ಸರ್ಕಾರ ಯೋಚನೆ ಮಾಡಿತು. ತಮಿಳುನಾಡಿನ ಎಐಎಡಿಎಂಕೆ-ಡಿಎಂಕೆಯೊಂದಿಗೆ ಒಮ್ಮೆ ಪರ, ಒಮ್ಮೆ ವಿರೋಧಗಳ ನಡುವೆ, ಒಮ್ಮೆ ದಿಲ್ಲಿ ಸರ್ಕಾರದ ಜೊತೆಗೆ, ಇನ್ನೊಮ್ಮೆ ಅದಕ್ಕೆ ಬೆನ್ನು ಹಾಕಿ ಅದು ನಡೆಸಿದ ಷಡ್ಯಂತರವನ್ನು ನಾವು ಅರ್ಥಮಾಡಿಕೊಳ್ಳದ ಕಾರಣ: ಮಾಜಿ ಪ್ರಧಾನ ಮಂತ್ರಿ ರಾಜೀವ ಗಾಂಧಿ ಪ್ರಾಣ ನೀಡ ಬೇಕಾಯಿತು. ಇಷ್ಟಕ್ಕೇ ಮುಗಿಯಿತೇನು? ರಾಜೀವ ಗಾಂಧಿ ಕೊಲೆ ಮಾಡಿದವರು ಬೆಂಗಳೂರಿಗೆ ಬಂದು ಹಾಯಾಗಿದ್ದರು. ಇಲ್ಲಿಯೂ ಪೊಲೀಸರಿಗೆ ಸಿಗದೇ ಸಯನೈಡ್ ನುಂಗಿ ಸತ್ತರು.


ಆದ್ದರಿಂದ ದೇಶದ ರಕ್ಷಣೆ ಸಿಯಾಚಿನ್ ಗ್ಲೇಜಿಯರ್‌ನಲ್ಲಿ, ತಮಿಳುನಾಡಿನಲ್ಲಿ ಮಾತ್ರವಲ್ಲ, ಬೆಂಗಳೂರಿನಲ್ಲೂ ಆಗಬೇಕಾಗಿದೆ.
ಈ ರೀತಿ ದೇಶದ ಆಯಕಟ್ಟಿನ ಪ್ರದೇಶಗಳ ಮೇಲೆ ಅಮೆರಿಕಾ ಒಳಗೊಂಡಂತೆ ಅನೇಕ ರಾಷ್ಟ್ರಗಳು ಕಣ್ಣಿಟ್ಟಿವೆ. ತಮ್ಮ ಆಧಿಪತ್ಯವನ್ನು ಸ್ಥಾಪಿಸುವ ಮೂಲಕ ಜಗತ್ತನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಲುವಾಗಿ ರಾಕ್ಷಸೀ ಕೃತ್ಯಗಳನ್ನು ನಡೆಸುತ್ತಿವೆ.

ದೇಶದ ಒಳಗಿನ ಸ್ಥಿತಿಯ ಬಗ್ಗೆ

ಇಂದು ಕಾಶ್ಮೀರದ ಸ್ಥಿತಿ ಹೇಗಿದೆ? ೨.೫ ಲಕ್ಷ ಜನರು ತಮ್ಮ ಬಂಧುಗಳನ್ನು ಕಳೆದುಕೊಂಡು ಓಡಿ ಬರಬೇಕಾಯಿತಲ್ಲ? ಅಂತಹವರಿಗಾಗಿ ನಾವು ಏನು ಮಾಡಿದವು? ಜಮ್ಮುವಿನಲ್ಲಿ ೧೪ ಕಡೆ ನಿರಾಶ್ರಿತರ ಶಿಬಿರಗಳು ನಡೆಯುತ್ತಿವೆ. ಇಲ್ಲಿ ೨೪ ಗಂಟೆಗಳ ಕಾಲ ಮಳೆಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಇದೆ. ಇವರು ಮಾಡಿದ ತಪ್ಪಾದರೂ ಏನು? ಭಾರತ ನನ್ನ ಮಾತೃಭೂಮಿ ಎಂದು ಹೇಳಿದ್ದೇ? ತ್ರಿವರ್ಣ ಧ್ವಜವನ್ನು ಗೌರವಿಸಿದ, ಪಾಕ್‌ಪರವಾಗಿ ನಡೆದುಕೊಳ್ಳದ ಈ ಮಂದಿಯನ್ನು ಆತಂಕವಾದಿಗಳು ಹಾಡುಹಗಲಲ್ಲಿ ಚಿತ್ರ ಹಿಂಸೆ ಕೊಟ್ಟು ಕೊಂದರಲ್ಲವೆ?
ಅಲ್ಲಾ ಟೈಗರ್, ಅಲ್ಲಾ ಕಮಾಂಡೊ, ಹಿಜ್‌ಬುಲ್ ಮುಜಾಹಿದ್ದೀನ್‌, ಜೆಕೆಎಲ್‌ಎಫ್‌, ಎಲ್‌ಎಫ್ ಮುಂತಾದ ೩೮ ಸಂಘಟನೆಗಳು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿವೆ. ಇವುಗಳಿಗೆ ಸೌದಿ ಅರೇಬಿಯಾ, ಇರಾನ್, ಪಾಕ್, ಅಮೆರಿಕಾ, ಕೆನಡಾ ಮುಂತಾದ ರಾಷ್ಟ್ರಗಳು ಬೆಂಬಲ ನೀಡುತ್ತಿವೆ. ಹಜರತ್‌ಬಾಲ್‌ನಲ್ಲಿ ಸೆರೆಸಿಕ್ಕವರು ಈ ದೇಶಗಳ ಏಜೆಂಟರು. ಇವರ ಮೇಲೆ ಆಕ್ರಮಣ ಮಾಡದೇ ನಮ್ಮ ಸೈನಿಕರು ೪೨ ದಿನಗಳ ಕಾಲ ಕಾದು ಕುಳಿತಿದ್ದರು. ನಮ್ಮ ಸೈನಿಕರಿಗೆ ತಣ್ಣನೆ ಚಹಾ ಕೂಡಾ ಸಿಗಲಿಲ್ಲ. ಕೇವಲ ಹಳಸಿದ ಬಿಸ್ಕತ್ತುಗಳು ಸಿಕ್ಕವು. ಹಜರತ್‌ಬಾಲ್ ಮಸೀದಿಯೊಳಗೆ ಇದ್ದವರಿಗೆ ಬಿರ್ಯಾನಿ ಸರಬರಾಜಾಯಿತು. ಹಜರತ್ ಬಾಲ್‌ನಲ್ಲಿದ್ದವರನ್ನು ಕೊನೆಗೂ ಬಂಧಿಸಲಿಲ್ಲ. ಅವರು ಬೇರೆ ದೇಶಗಳಿಗೆ ಓಡಿಹೋದರು.
ಚರಾರೆ ಷರೀಫ್ ಸುಟ್ಟವರಾರು? ಮುಸ್ತಗಲ್ ಹೇಗೆ ಓಡಿಹೋದ? ಈ ರೀತಿಯ ಪ್ರಶ್ನೆಗಳನ್ನು ದೇಶದ ಜನರು ಕೇಳಬೇಕಾದ ಪರಿಸ್ಥಿತಿ ಹೇಗೆ ಬಂತು? ನಮ್ಮ ನಂದನವನ, ಭೂಲೋಕದ ಸ್ವರ್ಗ, ಮುಕುಟಮಣಿ ಕಾಶ್ಮೀರದ ಗತಿ ಹೀಗಾಯಿತಲ್ಲ!


ಕಾಶ್ಮೀರದ ಕಣ್ಣೀರಿನ ಕಥೆ ಇಲ್ಲಿಗೇ ಮುಕ್ತಾಯಗೊಳ್ಳುವುದಿಲ್ಲ. ಕಾಶ್ಮೀರದ ಕಣಿವೆಗೆ ವ್ಯಾಪಿಸಿದ ಉಗ್ರವಾದ ಈಗ ದೋಡಾ, ಜಮ್ಮುವಿಗೂ ಬಂದಿದೆ. ೧೯೯೪ ರ ಜುಲೈ ತಿಂಗಳಲ್ಲಿ ಹಾಡುಹಗಲಲ್ಲೇ ಜಮ್ಮುವಿನಲ್ಲಿ ಎರಡು ಬಾರಿ ಬಾಂಬ್ ಸ್ಫೋಟಿಸಿತು. ನಂತರ ದಿಲ್ಲಿ, ಪಠಾಣ್‌ಕೋಟ್ ಗಳಲ್ಲಿ ಬಾಂಬ್ ಸ್ಫೋಟವಾಯಿತು. ಇದನ್ನು ತಾವು ಮಾಡಿದ್ದೆಂದು ಉಗ್ರಗಾಮಿಗಳು ಪತ್ರಿಕೆಗಳಿಗೆ ಹೇಳಿಕೆ ಕೂಡಾ ನೀಡಿದ್ದಾರೆ. ಕಾಶ್ಮೀರ ಕಣಿವೆಯಿಂದ ದೋಡಾ, ಜಮ್ಮು, ದಿಲ್ಲಿಗೆ ಬಂದವರು ಇತರೆಡೆಗೂ ಬರಬಹುದಲ್ಲವೇ? ಆದ್ದರಿಂದ ಕಾಶ್ಮೀರದಲ್ಲಿ ಉಗ್ರವಾದ ದೇಶವ್ಯಾಪಿಯಾಗಲು ಇನ್ನೂ ನೂರು ವರ್ಷ ಬೇಕಾಗಬಹುದೆಂದು ಭಾವಿಸುವ ಅಗತ್ಯವಿಲ್ಲ, ಯಾಕೆಂದರೆ ಇವೆಲ್ಲದರ ಹಿಂದೆ ಪಾಕ್ ಗೂಢಚಾರ ಸಂಸ್ಥೆ ಐ ಎಸ್ ಐ ಕೈವಾಡವಿದೆ.


೧೯೯೪ ರ ಅ. ೧೪ರಂದು ರಾವಲ್ಪಿಂಡಿಯಲ್ಲಿ ನಡೆದ ಸಭೆಯೊಂದರಲ್ಲಿ ಪಾಕ್‌ನ ಮುಖ್ಯ ಅಧಿಕಾರಿ, ಐಎಸ್‌ಐನ ಮಾಜಿ ನಿರ್ದೇಶಕ ಹಮೀದ್‌ಗುಲ್ ಹೀಗೆ ಹೇಳಿದ್ದ: “ಪಾಕ್‌ನ ಎರಡು ಕಡೆ ಹಡಗುಗಳಿವೆ. ನಾನು ಒಂದು ಹಡಗನ್ನು ನಾಶಮಾಡಿರುವೆ. ಹಾಗೂ ನಮ್ಮ ಜನ ಶೀಘ್ರದಲ್ಲೇ ಇನ್ನೊಂದು ಹಡಗನ್ನು ನಾಶಪಡಿಸಲಿದ್ದಾರೆ. ಮೊದಲನೆ ಹಡಗು ಅಫಘನ್. ಅಫಘಾನಿಸ್ಥಾನದಲ್ಲಿ ಅನೇಕ ಬಾರಿ ಹೋರಾಟ ಮಾಡಿ ೧೫ ವರ್ಷಗಳ ಕಾಲ ಅಲ್ಲಿನ ಜನರ ಜೀವನವನ್ನು ಉಧ್ವಸ್ಥಗೊಳಿಸಿದವರು ಐಎಸ್‌ಐನವರು. ಇನ್ನೊಂದು ಹಡಗು ಭಾರತ.”


ಈ ಸುದ್ದಿ ಪತ್ರಿಕೆಗಳಲ್ಲಿ ವರದಿಯಾದಾಗ ಬೆನಜೀರ್ ಭುಟ್ಟೋ, ಹಮೀದ್‌ಗುಲ್‌ನನ್ನು ಕರೆದು ಹೇಳಿದರು. “ನೀವು ಈ ರೀತಿ ಬಹಿರಂಗವಾಗಿ ಅನ್ನಬಾರದಾಗಿತ್ತು. ಮಾಡಬೇಕಾದ ಕಾರ್ಯವನ್ನು ಮೌನವಾಗಿ ಮಾಡಬೇಕು. ಪತ್ರಿಕೆಗಳಲ್ಲಿ ಬಂದುದು ತಪ್ಪು” ಅಂದರು ಅಷ್ಟೆ. ಮಾಡುವುದು ತಪ್ಪು ಎಂದು ಆಕೆ ಹೇಳಲಿಲ್ಲ. ಆಕೆಗೆ ಶಾಂತಿ ಪಾಲನೆಯ, ವಿಶ್ವ ಬಂಧುತ್ವವನ್ನು ಹೇಳುವ ಯಾವ ಅವಶ್ಯಕತೆಯೂ ಇಲ್ಲ. ಇದ್ದರೆ ನಮ್ಮವರಿಗೆ ಮಾತ್ರ.
ಜಿಯಾ ಉಲ್ ಹಖ್ ಆಪರೇಷನ್‌ಟೊಪ್ಯಾಕ್  ಯೋಜನೆ ರೂಪಿದ್ದರು. ಆ ಯೋಜನೆಯಲ್ಲಿ ಮೂರು ಹಂತದಲ್ಲಿ ಭಾರತದ ಮೇಲೆ ಹೇಗೆ ಆಕ್ರಮಣ ಮಾಡಬೇಕು ಎಂಬುದನ್ನು ಯೋಜಿಸಲಾಗಿತ್ತು. ಪ್ರಶಾಶನ, ಸೈನ್ಯದಲ್ಲಿ ಅಸ್ಥಿರತೆ, ಕಾಲೇಜಿನಲ್ಲಿ ಗಲಭೆ ಉಂಟುಮಾಡುವುದು, ಅನೇಕ ಭಾಗಗಳಲ್ಲಿ ಹಿಂಸಾತ್ಮಕ ಕಾರ್ಯ ನಡೆಸುವುದು, ಅದಕ್ಕೆ ಬೇಕಾದಂತೆ ಸ್ಥಳೀಯರಿಗೆ ಪ್ರಶಿಕ್ಷಣ, ಹೊರಗಿನಿಂದ ಶಸ್ತ್ರಾಸ್ತ್ರ ಹಾಗು ಹಣ ಸರಬರಾಜು ಮಾಡುವುದು, ಇದರ ಮೂಲಕ ಹಿಂಸೆಯ ವಾತಾವರಣ ನಿರ್ಮಿಸಿ ಅದೇ ಸಂದರ್ಭದಲ್ಲಿ ಆಕ್ರಮಣ ಮಾಡುವುದು, ಇದಕ್ಕೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಬೆಂಬಲ ಪಡೆಯುವುದು ಇತ್ಯಾದಿ ಆ ಯೋಜನೆಗಳು. ಆಪರೇಶನ್ ಟೊಪ್ಯಾಕ್ ನಂತರ ಆಪರೇಷನ್‌ಟೂ-ಕೆ, ಕಾಶ್ಮೀರ ಮತ್ತು ಖಲಿಸ್ಥಾನ ಮತ್ತು ಕುಕೀಸ್-ಆಪರೇಷನ್ ತ್ರೀ- ಕೆ. ಅಂದರೆ ಪೂರ್ವಾಂಚಲದಲ್ಲಿ ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಕುಕೀ ಉಗ್ರಗಾಮಿಗಳ ಜೊತೆ ಕೈ ಜೋಡಿಸುವುದು. ಈ ಮೂಲಕ ಇಡೀ ದೇಶದಲ್ಲಿ ಹಿಂಸಾತ್ಮಕ ವಾತಾವರಣ ಮೂಡಿಸಿ, ಅಲ್ಲೊಲ ಕಲ್ಲೋಲ ಉಂಟುಮಾಡುವುದು.


ಅದರಂತೇ ೯೩ರ ಮಾರ್ಚ್ ೧೨ರಂದು ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ, ಮಾರ್ಚ್ ೧೬ರಂದು ಕಲ್ಕತ್ತದಲ್ಲಿ ಸ್ಫೋಟ, ಆ. ೮ರಂದು ಮದ್ರಾಸ್ ಸಂಘ ಕಾರ್ಯಾಲಯದಲ್ಲಿ ಬಾಂಬ್ ಸ್ಫೋಟ ನಡೆಯಿತು. ನಂತರ ಹಿಂದು ಮುನ್ನಣಿ ಕಾರ್ಯಕರ್ತರೊಬ್ಬರಿಗೆ ಪತ್ರದ ಮೂಲಕ ಬಾಂಬ್ ಕಳಿಸಲಾಯಿತು. ದಿಲ್ಲಿಯಲ್ಲಿ ಬಾಂಬ್ ಸ್ಫೋಟಗೊಂಡಿತು. ಬಿಯಾಂತ್‌ ಸಿಂಗರನ್ನು ಕೊಲ್ಲಲಾಯಿತು.


ಆಪರೇಷನ್ ಟೊಪ್ಯಾಕ್, ತ್ರೀ-ಕೆ ಯಾವುದೂ ಇನ್ನೂ ನಿಷೇಧಿಸಲ್ಪಟ್ಟಿಲ್ಲ. ಅವು ಈಗಲೂ ಕಾರ್ಯಾಚರಿಸುತ್ತವೆ. ಈ ವಿಷಯಗಳು ಗೃಹ ಇಲಾಖೆಯ ಗುಪ್ತಚಾರ ವಿಭಾಗದವರು ಅಧಿಕೃತರಿಗೆ ತಿಳಿಸಿರುವಂತಹದ್ದು. ಅನೇಕ ಪತ್ರಿಕೆಗಳಲ್ಲಿ ಕೂಡಾ ಬಂದಿರುವಂಥದ್ದು.
ಕಾಶ್ಮೀರದ ಸ್ಥಿತಿ ಇಷ್ಟೊಂದು ಗಂಭೀರವಿದೆ. ಉಗ್ರವಾದಿಗಳ ತಂಡ ಸಾಲಾಗಿ ಬೆಳೆಯುತ್ತಿದೆ. ೪೨ ಕಡೆ ಕಾಶ್ಮೀರದ ಉಗ್ರಗಾಮಿಗಳಿಗೆ ತರಬೇತಿ ನಡೆಯುತ್ತಾ ಇದೆ. ಮಾಜಿ ಗೃಹ ಸಚಿವ ಎಸ್.ಬಿ. ಚವ್ಹಾಣ ಅವರೇ ೧೮ ಕಡೆಗಳಲ್ಲಿ ಉಗ್ರಗಾಮಿಗಳಿಗೆ ತರಬೇತಿ ಸಿಗುತ್ತಿದೆ ಎನ್ನುವುದನ್ನು ಒಪ್ಪಿದ್ದರು. ಸರಕಾರ ಏಕೆ ನಿಷೇಧಿಸಿಲ್ಲ?


ಕಾಶ್ಮೀರದ ಮೇಲೆ ಕಣ್ಣಿರುವುದು ಪಾಕ್‌ಗೆ ಮಾತ್ರವಲ್ಲ. ಅಮೆರಿಕಾದ ರಾಬಿನ್ ರಾಫೆಲ್ ಇಲ್ಲಿಗೆ ಬಂದು ‘ನೀವು ಕಾಶ್ಮೀರದ ಸಮಸ್ಯೆಯನ್ನು ೧೯೪೮ರಲ್ಲಿ ವಿಶ್ವಸಂಸ್ಥೆ ಮಾಡಿದ ನಿರ್ಣಯದ ಮೇಲೆ ಬಗೆಹರಿಸಿಕೊಳ್ಳಬೇಕು’ ಎನ್ನುತ್ತಿದ್ದಾರೆ. ಜನಮತಗಣನೆ ಮಾಡಬೇಕು ಎನ್ನುತ್ತಾರೆ ಯಾಕೆ? ಕಾಶ್ಮೀರ ಭಾರತಕ್ಕೆ ಸೇರಬೇಕೋ ಬೇಡವೋ ಎಂದು ನಿರ್ಧರಿಸಲು ಜನರ ಒಪ್ಪಿಗೆ ಏಕೆ ಪಡೆಯಬೇಕು? ಅವರ ದೇಶದಲ್ಲಿ ಯಾವುದಾದರೂ ಪ್ರಾಂತ್ಯಕ್ಕೆ ಈ ರೀತಿ ಮಾಡುತ್ತಾರೆಯೇ?


ನಮ್ಮ ದೇಶ ಒಂದು ಸಾರ್ವಭೌಮ ಸ್ವತಂತ್ರದೇಶ. ೫೬೦ ಸಂಸ್ಥಾನಗಳನ್ನು ದೇಶಕ್ಕೆ ಸೇರಿಸಿದ್ದಾಗಿ ರಾಜಾ ಹರಿಸಿಂಗ್ ಹಸ್ತಾಕ್ಷರ ಹಾಕಿದಾಗ ಕಾಶ್ಮೀರವೂ ಭಾರತಕ್ಕೆ ಸೇರಿತ್ತು. ಆದರೆ ನಾವು ಕಾಶ್ಮೀರಕ್ಕೆ ವಿಶೇಷಸ್ಥಾನ ನೀಡಿದವು. ಅದರ ಫಲವನ್ನು ಇಂದು ಅನುಭವಿಸುತ್ತಿದ್ದೇವೆ.
ಬ್ರಿಟನ್ನಿನ ವಿದೇಶಾಂಗ ಸಚಿವ ಡೆಕ್ಲಾಸ್ ಹರ್ಡ್ ನೀವು ಕಾಶ್ಮೀರದಲ್ಲಿ ಚುನಾವಣೆ ನಡೆಸುವಾಗ ನಾವು ವೀಕ್ಷಿಸಬೇಕು ಅಂದರು. ನಮ್ಮ ದೇಶದಲ್ಲಿ ಚುನಾವಣೆ ಮಾಡಲು ಇತರರು ಮೇಲ್ವಿಚಾರಣೆಯ ಅಗತ್ಯವಾದರೂ ಏನು? ಅವರ ದೇಶದ ಐರ್ಲೆಂಡಿನಲ್ಲಿ ಚುನಾವಣೆ ಮಾಡಿದರೆ ನಮ್ಮನ್ನು ಮೇಲ್ವಿಚಾರಣೆಗೆ ಕರೆಯುತ್ತಾರೆಯೆ? ಐರ್ಲೆಂಡಿನಲ್ಲಿ ಉಗ್ರವಾದ ಇಲ್ಲವೇ? ನಮ್ಮಲ್ಲಿನ ಚುನಾವಣೆಗ ಅವರ ಸರ್ಟಿಫಿಕೇಟ್ ಬೇಕೇ? ಡೆಕ್ಲಾಸ್ ಹರ್ಡ್ ದೇಶದ ಹಲವೆಡೆ ಮೂರು ಕಡೆ ಪತ್ರಿಕಾಗೋಷ್ಠಿ ನಡೆಸಿದರು. ಹೋದರು. ವಿರೋಧಿಸಿದವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನವರು ಮಾತ್ರ್. ನಮ್ಮ ದೇಶದಲ್ಲಿ ಜನರು ಹೇಗೆ ನಡೆಯಬೇಕು ಎಂಬುದನ್ನು ನಿರ್ಧರಿಸುತ್ತಿರುವವರು ಅಮೇರಿಕಾದಂತಹ ರಾಷ್ಟ್ರಗಳು. ಪಾಕ್ ತಲೆಯೆತ್ತಲು ಇವುಗಳೇ ಕಾರಣ.


ಪಾಕ್‌ಗೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಗಳನ್ನು ಅಮೆರಿಕಾ ನೀಡಬಾರದು ಅಂದ ಪ್ರೆಸ್ಲರ್ ತೀರ್ಪು ಏನಾಗಿದೆ? ಪ್ರೆಸ್ಲರ್ ತೀರ್ಪನ್ನು ಅಮೆರಿಕಾ ಬದಿಗೆ ಸರಿಸಿ ೩೩೦ ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವುದಾಗಿ ಹೇಳಿದೆ. ನಾವು ಇಂದು ಅಮೇರಿಕಾಕ್ಕೆ ಧಿಕ್ಕಾರ ಹಾಕಬೇಕಾಗಿದೆ.

ರಾಜಾ ಹರಿಸಿಂಗ್


ಪಾಕ್‌ಗೆ ಯಾರಿಂದ ಆಪತ್ತು ಇದೆ? ಯಾವ ದೇಶದ ಆಕ್ರಮಣವಿದೆ? ಮೂರು ಬಾರಿ ಆಕ್ರಮಣ ಮಾಡಿದವರು ಅವರು. ಪಾಕ್‌ನ್ನು ಉಗ್ರಗಾಮಿ ದೇಶವೆಂದು ಘೋಷಿಸಲು ಅಮೆರಿಕಾ ಸಿದ್ಧವಿಲ್ಲ. ಬೀಜಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ನಡೆದಾಗ, ಬೆನೆಜಿರ್ ಭುಟ್ಟೋ ಅಲ್ಲಿಯೂ ಕಾಶ್ಮೀರದ ಪ್ರಶ್ನೆ ಎತ್ತಿದರು. ಯಾವುದೇ ಅಂತಾರಾಷ್ಟ್ರೀಯ ವೇದಿಕೆ ಸಿಕ್ಕಿದರೂ ಕೂಡಾ ಬೆನಜಿರ್‌ಗೆ ಕಾಶ್ಮೀರದ ಪ್ರಶ್ನೆ ಎತ್ತುವುದೇ ಏಕಮಾತ್ರ ಕೆಲಸ.
ಇದಕ್ಕೆಲ್ಲಾ ನಮ್ಮ ಪ್ರತಿಕ್ರಿಯೆ ಹೇಗಿದೆ? ಹಜರತ್ ಬಾಲ್‌ನಲ್ಲಿ ಸಿಕ್ಕ ಇಲಿಗಳನ್ನು ಹುಲಿಗಳನ್ನಾಗಿ ಮಾಡಿಕಳಿಸಿಕೊಡುತ್ತೇವೆ. ಚರಾರೆ ಷರೀಫ್ ಭಸ್ಮವಾಗಲು ಅವಕಾಶ ಕೊಟ್ಟೆವು. ದೇಶಭಕ್ತ ಸಂಘಟನೆಗಳು ಲಾಲ್ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಅಂದರೆ ಅದಕ್ಕೆ ಒಪ್ಪಿಗೆ ಇಲ್ಲ. ೨ ಲಕ್ಷ ಜನರು ನಿರ್ವಸತಿಗರಾಗಿ ಮಳೆಗಾಲದಲ್ಲಿ ಮೊಳಕಾಲುದ್ದುದ ನೀರಿನಲ್ಲಿ ನಿಲ್ಲಬೇಕಾಗಿದೆ. ಸರ್ಕಾರ ಇದನ್ನು ಯೋಚಿಸಿದೆಯೇ? ನಾವು ದುರ್ಬಲರಾಗಿದ್ದೇವೆ. ನಮ್ಮ ಸರ್ಕಾರ ದೌರ್ಬಲ್ಯವನ್ನು ತೋರಿಸುತ್ತಿದೆ.


ಅಂದಿನ ಪ್ರಧಾನಿ ನರಸಿಂಹರಾಯರು ೧೯೯೪ರ ಆ. ೧೫ ರಂದು ಕೆಂಪುಕೋಟೆಯ ಮೇಲೆ ಭಾಷಣ ಮಾಡುವಾಗ ಪಾಕ್ ಆಕ್ರಮಿತ ಕಾಶ್ಮೀರ ಸೇರದೇ ಭಾರತ ಪೂರ್ಣವಾಗದು ಎಂದು ಹೇಳಿದ್ದರು. ದೇಶದ ಜನರು ಅಂದು ಚಪ್ಪಾಳೆ ಹೊಡೆದು ಕುಣಿದಾಡಿದ್ದರು. ನಂತರ ಸುದ್ದಿಯೇ ಇಲ್ಲ. ನಂತರವೇ ಚರಾರೆ ಪರೀಫ್, ಹಜರತ್ ಬಾಲ್ ಪ್ರಕರಣಗಳು ನಡೆದದ್ದು.


ಪಾಕ್‌ಗೆ ೩೭೦ ಮಿಲಿಯನ್ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ನೀಡುವುದಾಗಿ ಅಮೆರಿಕಾ ಹೇಳಿದ ಕೂಡಲೆ ನಮ್ಮ ಸರ್ಕಾರ ಅಮೆರಿಕಾದ ರಾಯಭಾರಿಯನ್ನು ದೇಶ ಬಿಟ್ಟು ಹೋಗಲು ಹೇಳಬೇಕಾಗಿತ್ತು. ಆದರೆ ಹಾಗೆ ಹೇಳಲಿಲ್ಲ. ಪಾಕ್‌ನಲ್ಲಿರುವ ನಮ್ಮ ದೂತಾವಾಸದಿಂದ ನಮ್ಮ ಅಧಿಕಾರಿಗಳನ್ನು ಓಡಿಸಲಾಗುತ್ತಿದೆ. ನಾವು ಅದನ್ನು ಸ್ವೀಕಾರ ಮಾಡಿದ್ದೇವೆ.


ಬಾಂಗ್ಲಾದೇಶವನ್ನು ನಾವು ವಿಮೋಚನೆ ಮಾಡಿಕೊಟ್ಟೆವು. ಆದರೆ ಕಳೆದ ೨೦ ವರ್ಷಗಳಲ್ಲಿ ೧.೪ ಕೋಟಿ ಬಾಂಗ್ಲಾ ದೇಶಿಯರು ಅಕ್ರಮವಾಗಿ, ಸಂವಿಧಾನ ವಿರೋಧಿಯಾಗಿ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ವಿರೋಧವಾಗಿ ದೇಶದೊಳಗೆ ನುಸುಳಿದ್ದಾರೆ. ಹೊಟ್ಟೆಪಾಡಿಗೆ ಬಂದರು ಅಂತಾದರೆ ಪರವಾಗಿರಲಿಲ್ಲ. ಬಂದವರು ಅಸ್ಸಾಂನ ಫಲವತ್ತಾದ ಭೂಮಿಯನ್ನು ಆಕ್ರಮಿಸಿದರು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಿಕೊಂಡರು. ಮುಖ್ಯ ಚುನಾವಣಾ ಆಯುಕ್ತ ಟಿ.ಎನ್.ಶೇಷನ್ ಈ ರೀತಿ ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿರುವ ಹೆಸರನ್ನು ತೆಗೆಯುವಂತೆ ಅಸ್ಸಾಂ ಸರ್ಕಾರಕ್ಕೆ ಆಜ್ಞಾಪಿಸಿದ್ದರೂ ಅದು ಕಾರ್ಯಗತಗೊಂಡಿಲ್ಲ.


ಅಸ್ಸಾಂನಲ್ಲಿ ಮಾತ್ರವಲ್ಲ, ಬಿಹಾರದ ಪೂರ್ಣಿಯಾ, ಕತಿಹಾರ್, ಕಿಶನ್ ಗಂಜ್ ಪ್ರದೇಶಗಳಲ್ಲೂ ಬಾಂಗ್ಲಾದೇಶಿಯರಿದ್ದಾರೆ.  ಬಂಗಾಳ, ಮುಂಬೈ, ದಿಲ್ಲಿ, ಹೈದರಾಬಾದ್ ಗಳಲ್ಲೂ ಇದ್ದಾರೆ. ದೇಶಾದ್ಯಂತ ೧.೫೦ ಕೋಟಿ ವಿದೇಶೀಯರು ದೇಶದೊಳಗೆ ಅಕ್ರಮವಾಗಿ ನುಸುಳಿದ್ದಾರೆ. ಈಚೆಗೆ ಹೈದರಾಬಾದಿನಲ್ಲಿ ಬಂಧಿತರಾದ ಮೂವರು ಯುವಕರು ತಮಗೆ ಐಎಸ್ ಐ ನಿಂದ ಸಹಾಯ ಸಿಗುತ್ತಿತ್ತೆನ್ನುವುದನ್ನು ತಿಳಿಸಿದ್ದಾರೆ. ಐಎಸ್‌ಐ ಯಾರ್ಯಾರನ್ನು ಅಕ್ರಮವಾಗಿ ಸಂಪರ್ಕಿಸಬಹುದು ಎನ್ನಲು ಇದು ಸಾಕ್ಷಿ.


ಬಾಂಗ್ಲಾದ ಮಾಜಿ ಪ್ರಧಾನಿ ಬೇಗಂ ಖಲೀದಾ ದಿಲ್ಲಿಯಿಂದ ವಾಪಾಸಾಗುವಾಗ ಕಲ್ಕತ್ತೆಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ “ನಮ್ಮ ದೇಶದಿಂದ ಒಬ್ಬನೂ ಕೂಡಾ ಅಕ್ರಮವಾಗಿ ಭಾರತಕ್ಕೆ ಬಂದಿಲ್ಲ” ಎಂದರು. ಭಾರತ ಸರ್ಕಾರ ಈ ಹೇಳಿಕೆಯ ಪ್ರತಿಭಟಿಸಿತೇ? ಆಕೆ ಢಾಕಾದಲ್ಲಿ ಹೇಳಿದ್ದರೆ ಆ ಪ್ರಶ್ನೆ ಬೇರೆ. ಕಲ್ಕತ್ತಾದಲ್ಲಿ ಹೇಳಿದರೂ ನಾವು ಅದನ್ನೇ ಕೇಳಿಕೊಂಡು ‘ಸರಿ’ ಎಂದು ಸುಮ್ಮನಾದವು, ಇದೆಂತಹ ದುರಂತ?


ಬಾಂಗ್ಲಾದೇಶೀಯರನ್ನು, ಕಾಶ್ಮೀರದ ಉಗ್ರಗಾಮಿಗಳನ್ನು ಓಡಿಸಿದರೆ ಮುಸಲ್ಮಾನರ ವೋಟ್ ಸಿಗುವುದಿಲ್ಲ. ಈ ರೀತಿಯ ದೌರ್ಬಲ್ಯ, ವೋಟ್ ಬ್ಯಾಂಕ್ ರಾಜಕೀಯ. ಬಾಂಬೆ ಸಿನಿಮಾ ನಡೆದರೆ ಅದರಿಂದಲೂ ಮುಸಲ್ಮಾನರ ವೋಟು ಹೋಗುತ್ತದೆ ಎಂದಾಲೋಚಿಸಿ ಸಿನೆಮಾದ ಮೇಲೂ ನಿಷೇಧ ಹಾಕಿದರಲ್ಲ ? ಬಾಂಬೆ ಸಿನಿಮಾ ತೆಗೆದ ಮಣಿರತ್ನಂ ಅವರ ನಿವಾಸದ ಮೇಲೆ ಬಾಂಬ್ ಎಸೆಯಲಿಲ್ಲವೇ? ಇದೆಲ್ಲವೂ ಈ ದೇಶದ ಕರ್ಮಕಥೆ.
ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ: ಅಶ್ವಂ ನೈವ ಗಜಂ ನೈವ, ವ್ಯಾಘ್ರಂ ನೈವಚ, ನೈವಚ ಅಜಾಪುತ್ರಂ ಬಲಿಂದದ್ಯಾತ್ ದೇವೋದುರ್ಬಲ ಘಾತಘಃ
ಯಾವಾಗಲೂ ಬಲಿಕೊಡುವುದು ಕುರಿಮರಿಯನ್ನೇ. ಯಾರೂ ಸಿಂಹ, ಹುಲಿ ಅಥವಾ ಅನೆಯನ್ನು ಬಲಿಕೊಡುವುದಿಲ್ಲ. ಕುರಿಯೇ ಯಾಕೆ? ಯಾಕೆಂದರೆ ಅದು ತಲೆತಗ್ಗಿಸಿಕೊಂಡು ಹೋಗುತ್ತದೆ ಎನ್ನುವ ಕಾರಣಕ್ಕೆ, ದೇವರೂ ಕೂಡಾ ದುರ್ಬಲ ಘಾತಕರು.


ಯಾವುದು ಅಶ್ವವಾಗಿ, ಗಜವಾಗಿ, ಸಿಂಹವಾಗಿ ತಲೆ ಎತ್ತಿ ನಿಲ್ಲಬೇಕಾದಂತಹ ದೇಶವೋ ಅಂತಹ ದೇಶದ ನಾವು ಮೌನವಾಗಿ, ದುರ್ಬಲವಾಗಿ, ಜಗತ್ತು ಹೀಗೇ ಇರೋದು, ಜಗತ್ತಿನಲ್ಲಿ ಹೀಗೇ ನಡೆಯೋದು ಎನ್ನುವುದೇ? ಜನರೂ ಕೂಡಾ ಸರ್ಕಾರ ಏನೋ ಮಾಡುತ್ತೆ, ವಿದೇಶಾಂಗ ಇಲಾಖೆಯಿದೆ, ಗೃಹ ಇಲಾಖೆಯಿದೆ. ಸೈನಿಕರಿದ್ದಾರೆ, ಅವರು ಮಾಡಬೇಕಾದ ಕೆಲಸ ಎಂದು ಭಾವಿಸುವುದು ಸರಿಯೇ? ನಾವು ನಮ್ಮ ಮನೆಯಲ್ಲಿ ಚಹಾ ಕುಡಿಯುತ್ತಾ ಪತ್ರಿಕೆ ಓದಿ ಅಯ್ಯಯ್ಯೋ ದೇಶದಲ್ಲಿ ಹೀಗಾಗಿದೆ ಎಂದು ಕುಳಿತರೆ ದಿಲ್ಲಿಗೆ ಬಂದಿರುವ ಬಾಂಬ್ ಸ್ಫೋಟ, ಮಣಿರತ್ನಂ ಮನೆಯ ಮೇಲೆ ಆದ ಬಾಂಬ್ ಸ್ಫೋಟ ನಮ್ಮ ಮನೆಯ ಮೇಲೂ ಆಗಲು ಬಹಳ ದಿನವಿಲ್ಲ.


ದೇಶದ ಗಡಿಗಳ ಮೇಲೆ ಮಾತ್ರವಲ್ಲ ಆಕ್ರಮಣ ನಡೆಯುತ್ತಿರುವುದು. ವೈರಿ ದೇಶಗಳ ಸೈನಿಕರ ಮೇಲೆ ಮಾತ್ರ ಯಾರೂ ಮದ್ದು ಎಸೆಯುತ್ತಿಲ್ಲ. ಇಂದು ಯುದ್ಧ ನಡೆಯುತ್ತಿವುದು ಬೇರೆ ಮುಖಗಳಲ್ಲಿ, ಬೇರೆ ರೀತಿಯಲ್ಲಿ. ಅಮಾಯಕರ ಮೇಲೆ, ನಿರಪರಾಧಿಗಳ ಮೇಲೆ ಬಾಂಬ್ ಎಸೆದು ದೇಶದಲ್ಲಿ ಕೋಲಾಹಲ ಉಂಟುಮಾಡಬೇಕು ಎನ್ನುವಂತಹ ಷಡ್ಕಂತ್ರಗಳು ಜಗತ್ತಿನಲ್ಲಿ ಅನೇಕ ಕಡೆ ನಡೆಯುತ್ತಿವೆ. ಅದರ ಒಂದು ಬಲಿಪಶು ನಾವಾಗಿದ್ದೇವೆ.
ಒಂದೂವರೆ ಕೋಟಿ ಬಾಂಗ್ಲಾದೇಶೀಯರನ್ನು ವಾಪಾಸ್ ಕಳಿಸಲು ನಮಗೇಕೆ ಆಗುವುದಿಲ್ಲ? ಅವರ ಹೆಸರನ್ನಾದರೂ ಮತದಾರಪಟ್ಟಿಯಿಂದ ತೆಗೆದುಹಾಕಬೇಕಲ್ಲ? ನಾವು ಏಕೆ ಅದನ್ನು ಮಾಡಲು ಸಾಧ್ಯವಿಲ್ಲ?


ಲಕ್ನೋದ ನಡ್ವಾ ಕಾಲೇಜಿನಲ್ಲಿ ಕೆಲವರು ಐಎಸ್‌ಐ ಏಜೆಂಟರು ಇರುವುದರ ಸುಳಿವು ದೊರೆತು ಪೋಲೀಸರು ಅಲ್ಲಿಗೆ ಧಾಳಿ ಮಾಡಿದರು. ನಂತರ ತಪ್ಪಾಯಿತು ಎಂದು ನಮ್ಮ ಅಂದಿನ ಗೃಹಸಚಿವರು ಹೇಳಿದರು. ಜಾಫರ್ ಷರೀಫ್ ಚುನಾವಣ ಪ್ರಚಾರವನ್ನು ಬಿಟ್ಟು ಕ್ಷಮೆ ಕೇಳಲು ಅಲ್ಲಿಗೆ ಓಡಿಹೋದರು. ಕಾಲೇಜಿನಲ್ಲಿ ಐಎಸ್‌ಐ ಏಜೆಂಟರಿದ್ದರೆ ಅಲ್ಲಿ ಧಾಳಿ ನಡೆಸಿದ್ದು ತಪ್ಪೇ? ಅಂದರೆ ನಮ್ಮ ಪೊಲೀಸರು ತಪ್ಪೆಸಗಲಿಲ್ಲ. ಉತ್ತರ ಪ್ರದೇಶದ ಅಂದಿನ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಕೂಡಾ ಕಾಲೇಜಿನ ಮೇಲೆ ಧಾಳಿ ಮಾಡಿದ್ದು ತಪ್ಪು ಅಂದರು. ಯಾಕೆ ತಪ್ಪು? ಏನು ತಪ್ಪು? ಕಾಲೇಜು, ಹಾಸ್ಟೆಲ್‌ಗಳಲ್ಲಿ, ಊರೂರಲ್ಲಿ ಪಾಕ್ ಏಜೆಂಟರ ಧಾಮಗಳು ಬೆಳೆಯುವುದು ಸರಿಯೆ?


ಭಾರತದ ಪೂರ್ವಗಡಿ ಮಣಿಪುರದಲ್ಲಿ ಭಾರೀ ಪ್ರಮಾಣದ ಮಾದಕ ವಸ್ತುಗಳು ದೊರೆಯುತ್ತವೆ. ನೂರಾರು ಟನ್ ನಮ್ಮ ದೇಶದ ಮೂಲಕವೇ ಸಾಗಿಸಿ ಪಾಕ್‌ಗೆ ನೀಡಲಾಗುತ್ತಿದೆ. ಇದಕ್ಕೆ ಕಾರಣರಾರು? ದೇಶದಲ್ಲಿ ಗುಪ್ತಚರ ವಿಭಾಗ ಇಲ್ಲವೆ? ಪೋಲೀಸರು ಇಲ್ಲವೆ? ಎಲ್ಲವೂ ಇದ್ದರೂ ಎಲ್ಲರ ಬೆಂಬಲದೊಂದಿಗೇ ಇದು ನಡೆಯುತ್ತಿದೆ? ಈ ರೀತಿ ಪಾಕಿಸ್ಥಾನ ಜಗತ್ತಿನಾದ್ಯಂತ ಮಾದಕವಸ್ತುಗಳನ್ನು ಮಾರಿ ಅದೇ ಹಣದ ಮೂಲಕವೇ ನಮ್ಮ ದೇಶದ ವಿರುದ್ಧ ಬಳಸಲು ಶಸ್ತ್ರಾಸ್ತ್ರಗಳನ್ನು ಖರೀದಿ ಮಾಡುತ್ತಿದೆ.


ಇದೆಲ್ಲಾ ನಮಗೆ ಅರ್ಥವಾಗುವುದೆಂದು? ದೇಶದ ಒಳಗಡೆ ಅಶಾಂತಿ, ಕೋಲಾಹಲ ಎಬ್ಬಿಸಬೇಕು ಎನ್ನುವ ಪ್ರಯತ್ನ ನಡೆಯುತ್ತಲೇ ಇದೆ. ದೇಶದ ಗಡಿಗಳು ಸುರಕ್ಷಿತವಾಗಿಲ್ಲ. ದೇಶದ ಜನರ ಭಾವನೆಗಳನ್ನು ಸರ್ಕಾರ ಅರ್ಥಮಾಡಿ ಕೊಳ್ಳುತ್ತಿಲ್ಲ.
ಕೇವಲ ರಾಜಕೀಯ ಅಥವಾ ಗಡಿಗಳ ಆಕ್ರಮಣ ಮಾತ್ರವಲ್ಲ, ಆರ್ಥಿಕ ಆಕ್ರಮಣವೂ ಆಗುತ್ತಿದೆ. ಗ್ಯಾಟ್ ಒಪ್ಪಂದದ ಮೂಲಕ ಬಹು ರಾಷ್ಟ್ರೀಯ ಕಂಪೆನಿಗಳು ನೂರಾರು ಸಂಖ್ಯೆಯಲ್ಲಿ ಅತ್ಯಂತ ಸಣ್ಣ ಉದ್ಯೋಗಗಳ ಮೇಲೂ  ಅಕ್ರಮಣ ಮಾಡುತ್ತಿವೆ. ನಮ್ಮ ಎರಡೂವರೆ ಲಕ್ಷ ಸಣ್ಣ ಕೈಗಾರಿಕೆಗಳು ಕಳೆದ ಆರು ವರ್ಷದಲ್ಲಿ ಮುಚ್ಚಲ್ಪಟ್ಟಿವೆ, ಸೀಮೆಸುಣ್ಣ, ಬ್ಲೇಡುಗಳನ್ನು ತಯಾರಿಸಲು ಬಹುರಾಷ್ಟ್ರೀಯ ಕಂಪೆನಿಗಳು ಬರುತ್ತವೆ. ಆ ವಸ್ತುಗಳು ಚೆನ್ನಾಗಿರುತ್ತವೆ ಎಂದು ಖರೀದಿಸುವ ನಾವು ಕೋಟ್ಯಂತರ ರೂಪಾಯಿ ಲಾಭವನ್ನು ಬಹುರಾಷ್ಟ್ರೀಯರಿಗೆ ನೀಡುತ್ತಿಲ್ಲವೆ? ನಾವು ಕಾಶ್ಮೀರದ ಬಗ್ಗೆ ಮಾತ್ರವಲ್ಲ, ಇದರ ಬಗ್ಗೆಯೂ ಯೋಚನೆ ಮಾಡಬೇಕು.


ಈ ದೇಶದಲ್ಲಿ ಜವುಳಿ, ಔಷಧಿ ಉದ್ಯಮಗಳು ಇಂದು ಸಂಕಟದಲ್ಲಿವೆ. ಗ್ಯಾಟ್ ಕಾರಣಕ್ಕಾಗಿ ಈ ದೇಶದ ಆರ್ಥಿಕ ಚೈತನ್ಯವನ್ನು ಉಡುಗಿಸಿ ಇಲ್ಲಿನ ಜನರನ್ನು ಸಂಪೂರ್ಣವಾಗಿ ಆರ್ಥಿಕ ಗುಲಾಮರನ್ನಾಗಿ ಮಾಡಬೇಕು ಎನ್ನುವ ದ್ರಷ್ಟಿಯಿಂದಲೇ ಜಿ-೭ ರಾಷ್ಟ್ರಗಳ ಬಹುದೊಡ್ಡ ತಂತ್ರ ನಡೆದಿದೆ. ಗ್ರಾಹಕವಸ್ತುಗಳನ್ನು ಬಳಸುವ ದೇಶ. ಅಲ್ಲಿ ಕಂಪನಿಗಳನ್ನು ಸ್ಥಾಪಿಸಿದರೆ ಕೊಟ್ಯಂತರ ಡಾಲರುಗಳನ್ನು ಗಳಿಸಲು ಸಾಧ್ಯ.
ನಮ್ಮ ದೇಶದಲ್ಲಿ ವಿದ್ಯುತ್ ಉತ್ಪಾದಿಸುವ ಕಂಪನಿಗಳು ಇಲ್ಲವೆ? ಅದಕ್ಕೆ ಎನ್ರಾನ್, ಕೊಜೆಂಟ್ರಿಕ್ಸ್ ಏಕೆ ಬೇಕು? ಬಿಎಚ್‌ಇಎಲ್ ಅದನ್ನು ಮಾಡಬಲ್ಲದು. ಗುಣಮಟ್ಟ ಕಡಿಮೆ ಇದ್ದರೆ ನಾಳೆ ಅದನ್ನು ಸುಧಾರಿಸೋಣ. ಆದರೆ ಬಿಎಚ್‌ಇಎಲ್ ಗುಣಮಟ್ಟದಲ್ಲೇನೂ ಕಡಿಮೆ ಇಲ್ಲ. ಪ್ರತಿಯೊಂದಕ್ಕೂ ವಿದೇಶಿ ಕಂಪೆನಿಗಳ ಅಗತ್ಯವೇನು?


೨೦ ವರ್ಷಗಳ ಹಿಂದೆ ಜಪಾನ್ ಉತ್ಪಾದನೆಗಳು ಯಾರಿಗೂ ಬೇಕಾಗಿರಲಿಲ್ಲ. ನಾವು ಕೂಡಾ ಬೇರೆದೇಶಗಳ ವಸ್ತುಗಳನ್ನು ಕೊಳ್ಳುವುದಿಲ್ಲ ಎಂದರು ಜಪಾನೀಯರು. ಇಂದು ಜಪಾನಿನ ವಸ್ತುಗಳನ್ನು ಮುಗಿಬಿದ್ದು ತೆಗೆದುಕೊಳ್ಳುತ್ತಾರಲ್ಲ? ಜಪಾನ್ ೨೦ ವರ್ಷಗಳ ಕಾಲ ಆ ಪ್ರಯತ್ನ ಮಾಡಿತು. ದೇಶಭಕ್ತಿ, ಸ್ವತಂತ್ರ ಆರ್ಥಿಕ ನೀತಿಯ ಆಧಾರದ ಮೇಲೆ, ಜಗತ್ತಿನ ಜೊತೆ ಸಂಬಂಧ ಕಡಿದುಕೊಳ್ಳದೇ, ದೇಶದ ಯುವಕರ ಪ್ರತಿಭಾಶೀಲತೆ ಆಧಾರದ ಮೇಲೆ, ಎರಡನೆ ಮಹಾಯುದ್ಧದಲ್ಲಿ ಉಧ್ವಸ್ಥಗೊಂಡಿದ್ದ ಜಪಾನ್ ಇಂದು ಅಮೆರಿಕಾ, ಜರ್ಮನಿಗೆ ಪೈಪೋಟಿ ನೀಡುತ್ತಿದೆ. ನಮಗೆ ಸಾಧ್ಯವಿಲ್ಲವೆ?
ಆರ್ಥಿಕ ಆಕ್ರಮಣ ನಡೆಯುತ್ತಿರುವಂತೆಯೇ ಸಾಂಸ್ಕೃತಿಕ ಆಕ್ರಮಣವೂ ನಡೆಯುತ್ತಿದೆ. ಟಿವಿಗಳ ಮೂಲಕ, ವಿದೇಶಿ ಮಾಧ್ಯಮಗಳ ಮೂಲಕ, ಕ್ಯಾಸೆಟ್‌ಗಳು ಅದೆಷ್ಟು ಈ ದೇಶದಲ್ಲಿ ಸುತ್ತುತ್ತಿವೆಯೋ ತಿಳಿದಿಲ್ಲ. ನಮಗೆ ನಮ್ಮ ದೇಶದ ಸಂಸ್ಕೃತಿ ಅಂದರೆ, ೮ನೇ ಶತಮಾನಕ್ಕೆ ಹೋಗಿ ಎಂದು ಯಾರೂ ಹೇಳುತ್ತಿಲ್ಲ. ಜಗತ್ತಿನ ಜೊತೆಗೆ ಕಾಲುಹಾಕಬೇಕು, ಸ್ಪರ್ಧೆ ಮಾಡಬೇಕು. ಜಗತ್ತಿನ ಒಳ್ಳೆಯದನ್ನು ನಾವು ತೆಗೆದು ಕೊಳ್ಳಬೇಕು. ‘ಅನೋ ಭದ್ರಾಃ ಕೃತವೊ ಯಂತು ವಿಶ್ವತಃ ‘ ಎಂದು ಹೇಳಿದವರು ನಾವು. ಜಗತ್ತಿನಲ್ಲಿರುವ ಪ್ರತಿಯೊಂದು ಒಳ್ಳೆಯದೆಲ್ಲವೂ ನಮ್ಮ ದೇಶಕ್ಕೆ ಬರಲಿ. ನಾವು ಅದನ್ನು ವಿರೋಧಿಸುತ್ತಿಲ್ಲ. ಆದರೆ ಅಲ್ಲಿನ ಸಂಸ್ಕೃತಿಯನ್ನೇ ನೆಚ್ಚಿಕೊಂಡು ಇಲ್ಲಿ ಪಬ್‌ಗಳನ್ನು,  ಕೆಂಟಕಿ ಫ್ರೈಡ್ ಚಿಕನ್ ಗಳನ್ನು ಆರಂಭಿಸುವ ಅಗತ್ಯವಿಲ್ಲ. ಮೈಕಲ್ ಜಾಕ್ಸನ್ ಈ ದೇಶಕ್ಕೆ ಬರಬೇಕೆಂದು ಬೊಬ್ಬಡಿಯುವ ಅಗತ್ಯವಿಲ್ಲ. ಪೀಟರ್ ಗೆಬ್ರಿಯಲ್ ಇಲ್ಲಿ ಬಂದು ಕುಣಿದರೆ ನಮಗೆ ಸಂತೋಷವಾಗುತ್ತದೆಂದು ನಂಬಿದ್ದೇವೆ. ಇದು ನಮ್ಮ ಸಂಸ್ಕೃತಿಯ ಮೇಲಾಗುತ್ತಿರುವ ಆಘಾತ.


ಹಣವಿದ್ದರೆ ಎಲ್ಲವನ್ನೂ ಕೊಂಡುಕೊಳ್ಳಬಹುದು. ಶಿಕ್ಷಣ ಇರಲಿ, ಡಿಗ್ರಿ ಇರಲಿ, ಎಂಎಲ್‌ಎ, ಎಂಪಿ ಯಾವುದೇ ಆಗಲಿ ಹಣಕ್ಕೆ ಕೊಂಡುಕೊಳ್ಳಬಹುದು. ಹಣವೇ ಸರ್ವಸ್ವ. ದುಡ್ಡೇ  ದೊಡ್ಡಪ್ಪ, ದುಡ್ಡಿಲ್ಲದವನು ನಿಷ್ಟ್ರಯೋಜಕ. ಈ ತರಹದ ಸಂಸ್ಕೃತಿಯನ್ನು ವಿದೇಶ ನಮಗೆ ರಫ್ತು ಮಾಡುತ್ತಿದೆ. ಭೌತಿಕ ಸುಖವೇ ಸುಖ. ಇದು ಈ ದೇಶದ ಸಂಸ್ಕೃತಿ ಮೇಲೆ ಆಗುತ್ತಿರುವ ಆಕ್ರಮಣ, ರಾಜಕೀಯವಾಗಿ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಯಾವ ಆಕ್ರಮಣವಾಗುತ್ತಿದೆಯೋ ಅದೇ ರೀತಿ ಈ ದೇಶದ ಜನರ ಮೇಲೆ, ಜನರ ಬುದ್ಧಿಯ ಮೇಲೆ ಆಕ್ರಮಣ ನಡೆಯುತ್ತಿದೆ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು.


ನಾವು ಒಬ್ಬ ವೀರಪ್ಪನ್ ನನ್ನು ಹಿಡಿಯಲಾಗದ ಸರ್ಕಾರವನ್ನು ಹೊಂದಿದ್ದೇವೆ. ವೀರಪ್ಪನ್‌ನನ್ನು ಹಿಡಿಯಲಾರದವರು, ಪಾಕ್ ಆಕ್ರಮಿತ ಕಾಶ್ಮೀರವನ್ನೇ ತೆಗೆದುಕೊಳ್ಳಲಾರದವರು ಜಗತ್ತಿನ ಬಲಿಷ್ಠ ರಾಷ್ಟ್ರ ಅಮೆರಿಕಾ ಮೊಂದಿಗೆ ಹೇಗೆ ಸೆಣಸಾಡಬಲ್ಲೆವು? ನಾವು ಇಷ್ಟು ದುರ್ಬಲರಾದದ್ದು ಹೇಗೆ?
ಇಂತಹ ದಯನೀಯ ಸ್ಥಿತಿಯಲ್ಲಿ ಏನಾದರೂ ಆಸೆ ಇಡುವುದಾದರೆ, ಈ ದೇಶದ ಜನರ ಮೇಲೆ, ಅವರ ನಂಬಿಕೆ, ಶ್ರದ್ಧೆ, ಆದರ್ಶಗಳ ಮೇಲೆ ಅವರ ಪ್ರಾಮಾಣಿಕತೆ, ಪರಿಶ್ರಮಗಳ ಮೇಲೆ, ಯುವಕರ ದೇಶಭಕ್ತಿ, ಪ್ರತಿಭೆ, ಪರಿಶ್ರಮಗಳ ಮೇಲೆ ಈ ದೇಶದ ಸಾವಿರಾರು ವರ್ಷಗಳ ಸಂಸ್ಕೃತಿ, ಪರಂಪರೆಗಳ ಮೇಲೆ.

Leave a Reply

Your email address will not be published.

This site uses Akismet to reduce spam. Learn how your comment data is processed.