೧೯೪೭ರ ಆಗಸ್ಟ್ ೧ ರಿಂದ ೧೫ರವರೆಗಿನ ಘಟನಾವಳಿಗಳು ಇಂದಿನ ಕಾಶ್ಮೀರದ ಸಮಸ್ಯೆಯನ್ನು ಅರ್ಥೈಸಿಕೊಳ್ಳಲು ಸಹಕಾರಿ. ಪ್ರತಿದಿನವೂ ನಡೆದ ಘಟನೆಗಳನ್ನು ವಿಶ್ಲೇಷಿಸುವ ಮೂಲಕ ಲೇಖಕರಾದ ಪ್ರಶಾಂತ್ ಪೋಲ್ ಕಾಶ್ಮೀರ ಸಮಸ್ಯೆಯ ಮೂಲವನ್ನು ಈ ಲೇಖನ ಸರಣಿಯ ಮೂಲಕ ಹುಡುಕಹೊರಟಿದ್ದಾರೆ.

ಆ ಹದಿನೈದು ದಿನಗಳು ಹೆಸರಿನ ಸರಣಿ ಲೇಖನವನ್ನು ಸಂವಾದದಲ್ಲಿ ಬ್ಲಾಗ್ ವಿಭಾಗದಲ್ಲಿ ಓದಬಹುದು.

[subscribe2]

ಶುಕ್ರವಾರ. ಆಗಸ್ಟ್ ೧, ೧೯೪೭. ಆ ದಿನ ಇದ್ದಕ್ಕಿದ್ದಂತೆ ಪ್ರಾಮುಖ್ಯತೆ ಪಡೆಯಿತು. ಆ ದಿನ ಕಾಶ್ಮೀರದ ಬಗ್ಗೆ ಭವಿಷ್ಯದಲ್ಲಿ ಮಹತ್ವದ್ದಾಗಬಹುದಾದ ಎರಡು ವಿಷಯಗಳು ಸಂಭವಿಸಿವೆ.

ಆಗಸ್ಟ್ ೧, ೧೯೪೭ ರಂದು ಶ್ರೀನಗರಕ್ಕೆ ಆಗಮಿಸಿದ ಇಬ್ಬರಲ್ಲಿ ಗಾಂಧೀಜಿಯವರು ಮೊದಲಿಗರು. ಇದು ಕಾಶ್ಮೀರಕ್ಕೆ ಗಾಂಧೀಜಿಯ ಮೊದಲ ಭೇಟಿಯಾಗಿತ್ತು. ಇದೆಲ್ಲದಕ್ಕೂ ಮೊದಲು, ಮೊದಲನೆ ಮಹಾಯುದ್ಧದ ಸಮಯದಲ್ಲಿ ಕಾಶ್ಮೀರದ ಮಹಾರಾಜ ಹರಿ ಸಿಂಗರವರು ಆಗ ತಾನೆ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದುರಿಗಿದ್ದ ಗಾಂಧೀಜಿಯವರಿಗೆ ಕಾಶ್ಮೀರಕ್ಕೆ ಭೇಟಿ ನೀಡಲು ವೈಯಕ್ತಿಕ ಆಮಂತ್ರಣವೊಂದನ್ನು ನೀಡಿದ್ದರು. ಆಗ ಮಹಾರಾಜನಿಗೆ ಕೇವಲ ೨೦ ವರ್ಷ ವಯಸ್ಸು. ಆದರೆ ೧೯೪೭ ರ ವೇಳೆಗೆ ನಾಟಕೀಯವಾಗಿ ಎಲ್ಲವೂ ಬದಲಾಗಿಹೋಗಿತ್ತು, ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಮತ್ತು ಆಡಳಿತ ವರ್ಗಕ್ಕೆ ಈ ಸಮಯದಲ್ಲಿ ಗಾಂಧೀಜಿಯ ಕಾಶ್ಮೀರ ಬೇಟಿಗೆ ಇಷ್ಟವಿರಲಿಲ್ಲ. ಮಹಾರಾಜ ಹರಿ ಸಿಂಗ್ ಸ್ವತಃ ಈ ವಿಷಯದಲ್ಲಿ ವೈಸರಾಯರಾದ ಲಾರ್ಡ್ ಮೌಂಟ್ ಬ್ಯಾಟನ್ ಗೆ ಪತ್ರವೊಂದನ್ನು ಬರೆದರು. ಅದರಲ್ಲಿ ಸಮಗ್ರ ಚಿಂತನೆಯ ನಂತರ, ಮಹಾತ್ಮ ಗಾಂಧಿಯವರು ಈ ಬಾರಿ ಕಾಶ್ಮೀರಕ್ಕೆ ತಮ್ಮ ನಿಯೋಜಿತ ಪ್ರವಾಸವನ್ನು ರದ್ದುಪಡಿಸಬೇಕೆಂದು ನಾವು ಬಯಸುತ್ತೇವೆ ಮತ್ತು ಅವರು ನಿಜವಾಗಿಯೂ ಬರಬೇಕೆಂದು ಬಯಸಿದರೆ, ಶರತ್ಕಾಲದ ನಂತರ ಬರಬೇಕು. ಕಾಶ್ಮೀರದ ಪರಿಸ್ಥಿತಿ ಸುಧಾರಣೆಗೊಳ್ಳುವ ಮೊದಲು ಗಾಂಧಿ ಅಥವಾ ಇತರ ಯಾವುದೇ ರಾಜಕೀಯ ಮುಖಂಡರೂ ಇಲ್ಲಿಗೆ ಬರಬಾರದು ಎಂದು ನಾವು ನಿಮಗೆ ತಿಳಿಸಲು ಇಚ್ಛಿಸುತ್ತೇವೆ ಎಂದು ಬರೆದಿದ್ದರು.

ಹೀಗಾಗಿ, ಈ ಮೇಲಿನ ವಿಚಾರವನ್ನು ಸ್ವಲ್ಪಮಟ್ಟಿಗೆ ತಿಳಿದಿದ್ದ ಗಾಂಧೀಜಿಗೆ ಮಹಾರಾಜರ ವಿರೋಧದ ನಡುವೆಯೂ ಅಥಿತಿಯ ಮನೆಗೆ ಹೋಗುವುದು ಮುಜುಗುರವೆನಿಸಿತ್ತು. ವಾಸ್ತವವಾಗಿ ಸ್ವಾತಂತ್ರ‍್ಯಕ್ಕೆ ಕೇವಲ ಎರಡು ವಾರಗಳಿರುವ ಸಮಯದಲ್ಲಿ ಕಾಶ್ಮೀರದ ವಿಚಾರ ಭಾರತ ಮತ್ತು ಪಾಕಿಸ್ತಾನಕ್ಕೆ ಪ್ರಮುಖ ಆಧ್ಯತೆಯ ವಿಷಯವಾಗಿತ್ತು. ಆದರೇ ಕಾಶ್ಮೀರ ಮಾತ್ರ ತನ್ನ ನಿರ್ಧಾರವನ್ನು ಇನ್ನೂ ಪ್ರಕಟಿಸಿರಲಿಲ್ಲ. ಹಾಗಾಗಿ, ಗಾಂಧೀಜಿಗೆ ಕಾಶ್ಮೀರ ಭೇಟಿಯು ಭಾರತ ಒಕ್ಕೂಟದೊಂದಿಗೆ ವಿಲೀನಗೊಳಿಸುವ ಪ್ರಚಾರದಂತೆ ತೋರ್ಪಡಿಸುವದು ಇಷ್ಟವಿರಲಿಲ್ಲ. ಇದು ಅವರ ವ್ಯಕ್ತಿತ್ವಕ್ಕೆ ಹಾನಿಕರವಾಗಬಹುದು ಎಂದು ಅವರಿಗನಿಸಿದ್ದಿರಬಹುದು. ಕಾಶ್ಮೀರ ಪ್ರವಾಸಕ್ಕೆ ತೆರಳುವ ಮೊದಲು, ಜುಲೈ ೨೯ ರಂದು ದೆಹಲಿಯ ಪ್ರಾರ್ಥನಾ ಸಭೆಯಲ್ಲಿ ಗಾಂಧೀಜಿಯವರು, “ನಾನು ಮಹಾರಾಜರಿಗೆ ಪಾಕಿಸ್ತಾನ ನಿರಾಕರಿಸಿ ಭಾರತಕ್ಕೆ ಸೇರಿ ಎಂದು ಹೇಳಲು ಹೋಗುತ್ತಿಲ್ಲ ಎಂದಿದ್ದರು. ಕಾಶ್ಮೀರದ ಜನರು ಕಾಶ್ಮೀರದ ನಿಜವಾದ ಮಾಲೀಕರು, ಎಲ್ಲಿಗೆ ಸೇರಬೇಕೆಂಬುದನ್ನು ಅವರು ನಿರ್ಧರಿಸಬೇಕು. ಆದ್ದರಿಂದ, ನಾನು ಕಾಶ್ಮೀರದಲ್ಲಿ ಯಾವುದೇ ಸಾರ್ವಜನಿಕ ಕೆಲಸವಾಗಲಿ, ಪ್ರಾರ್ಥನೆಯಾಗಲಿ ಮಾಡಲು ಹೋಗುತ್ತಿಲ್ಲ. ಇವುಗಳು ನನಗೆ ವೈಯಕ್ತಿಕವಾದವುಗಳು…! ”

ಆಗಸ್ಟ್ ೧ ರಂದು ರಾವಲ್ಪಿಂಡಿ ಮೂಲಕ ಗಾಂಧೀಜಿ ಶ್ರೀನಗರಕ್ಕೆ ಆಗಮಿಸಿದರು. ಈ ಬಾರಿ ಅವರನ್ನು ಮಹಾರಾಜ ಆಹ್ವಾನಿಸದ ಕಾರಣ, ಅವರು ಕಿಶೋರಿ ಲಾಲ್ ಸೇಥಿ ಅವರ ಮನೆಯಲ್ಲಿದ್ದರು. ಅದು ಬಾಡಿಗೆ ಮನೆಯಾಗಿದ್ದರೂ ತುಂಬಾ ವಿಶಾಲವಾಗಿತ್ತು. ಆ ಮನೆ ಶ್ರೀನಗರದ ಬರ‍್ಜುಲಾದ ಎಲುಬು ಮತ್ತು ಕೀಲುಗಳ ಆಸ್ಪತ್ರೆಗೆ ಬಹಳ ಸಮೀಪದಲ್ಲಿತ್ತು. ಈ ಸೇಥಿರವರು ಅರಣ್ಯ ಸಂಬಂಧಿತ ಒಪ್ಪಂದಗಳ ಕೆಲಸಗಳನ್ನು ಮಾಡಿಸುತ್ತಿದ್ದರು, ಕಾಂಗ್ರೆಸ್ಸಿಗೆ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಗೆ ಹತ್ತಿರವಾಗಿದ್ದರು, ಆ ಸಮಯದಲ್ಲಿ ಮಹಾರಾಜನು ನ್ಯಾಶನಲ್ ಕಾನ್ಫರೆನ್ಸ್ ಮುಖಂಡರಾದ ಶೇಖ್ ಅಬ್ದುಲ್ಲಾ ರನ್ನು ಜೈಲಿನಲ್ಲಿರಿಸಿ, ಶೇಖ್ ಅಬ್ದುಲ್ಲಾ ನಾಯಕತ್ವದಲ್ಲಿ ಮಹಾರಾಜನ ವಿರುದ್ಧ ಪಿತೂರಿ ಮಾಡಿದ್ದ ಆರೋಪದಿಂದಾಗಿ ನ್ಯಾಶನಲ್ ಕಾನ್ಫರೆನ್ಸ್ ದ ಅನೇಕ ನಾಯಕರನ್ನು ಕಾಶ್ಮೀರದಿಂದ ಹೊರಹಾಕಿದ್ದನು. ಹಾಗಾಗಿ ಗಾಂಧೀಜಿಯವರು ರಾವಲ್ಪಿಂಡಿಯ ಮೂಲಕ ಶ್ರೀನಗರಕ್ಕೆ ಬರುವ ಮಾರ್ಗದಲ್ಲಿ ತಮ್ಮ ವೈಯಕ್ತಿಕ ಕಾರ್ಯದರ್ಶಿ ಪ್ಯಾರೆಲಾಲ್ ಮತ್ತು ಇಬ್ಬರು ಸೋದರಳಿಯರೊಂದಿಗೆ ಕೊಹ್ಲಾ ಸೇತುವೆ ಬಳಿ ತಂಗಿದ್ದ ವಿಚಾರ ತಿಳಿದ ನ್ಯಾಶನಲ್ ಕಾನ್ಫರೆನ್ಸ್ ಮುಖಂಡರಾದ ಬಕ್ಷಿ ಗುಲಾಂ ಮೊಹಮ್ಮದ್ ಮತ್ತು ಖ್ವಾಜ ಗುಲಾಂ ಮೊಹಮ್ಮದ್ ಸಾದಿಕ್ ರು ಲಾಹೋರಿಗೆ ತೆರಳಿದರು. ಶ್ರೀನಗರಕ್ಕೆ ಪ್ರವೇಶಿಸಿದ ನಂತರ, ಗಾಂಧೀಜಿ ನೇರವಾಗಿ ಕಿಶೋರಿ ಲಾಲ್ ಸೇಥಿ ಅವರ ಮನೆಗೆ ಹೋದರು. ಅಲ್ಲಿ ಸ್ವಲ್ಪ ವಿಶ್ರಾಂತಿ ಪಡೆದ ನಂತರ ಅವರನ್ನು ದಾಲ್ ಸರೋವರಕ್ಕೆ ಕರೆದೊಯ್ಯಲಾಯಿತು.

ಗಾಂಧೀಜಿಯ ಇಡೀ ಪ್ರವಾಸದುದ್ದಕ್ಕು ನ್ಯಾಶನಲ್ ಕಾನ್ಫರೆನ್ಸ್ ಮುಖಂಡರು ಅವರ ಜೊತೆಯಲ್ಲೆ ಇದ್ದರು.
ಆದರೆ ಏಕೆ?

ಕಾಶ್ಮೀರಕ್ಕೆ ಈ ಮೊದಲ ಭೇಟಿಯ ಮುಂಚೆ, ಕಾಶ್ಮೀರದ ಎಲ್ಲ ಮಾಹಿತಿಯನ್ನು ಗಾಂಧೀಜಿ ಅವರು ನೆಹರೂಗೆ ಕೇಳಿದ್ದರು. ಕಾಶ್ಮೀರ ಪ್ರವಾಸದ ಸಂದರ್ಭದಲ್ಲಿ ಗಾಂಧೀಜಿಯವರೇ ಇದನ್ನು ಬಹಿರಂಗಪಡಿಸಿದರು. ಮತ್ತು ಕಾಶ್ಮೀರದಲ್ಲಿ, ಪಂಡಿತ್ ನೆಹರೂ ಅವರ ಆತ್ಮೀಯ ಗೆಳೆಯ ಶೇಖ್ ಅಬ್ದುಲ್ಲಾ, ಜೈಲಿನಲ್ಲಿ ಸೆರೆಯಾಗಿದ್ದ. ಸಹಜವಾಗಿ, ಶೇಖ್ ರವರ ಅನುಪಸ್ಥಿತಿಯಲ್ಲಿ ಬೇಗಮ್ ಮತ್ತು ಅವರ ಇತರ ಹಿಂಬಾಲಕರು ಗಾಂಧೀಜಿಯವರ ಎಲ್ಲ ವ್ಯವಸ್ಥೆಗಳನ್ನು ನೋಡಿಕೊಂಡರು.

ಕಾಶ್ಮೀರ ಸರಕಾರದ ಮೊದಲ ಅಧಿಕೃತ ಪ್ರತಿನಿಧಿಯಾಗಿ ಗಾಂಧೀಜಿಯವರನ್ನು ಬೇಟಿ ಮಾಡಿದ್ದು ಕಾಶ್ಮೀರದ ಪ್ರಧಾನಿ ಮಹಾರಾಜ ಹರಿ ಸಿಂಗ್ ರವರ ಅತ್ಯಂತ ವಿಶ್ವಾಸಾರ್ಹ ಸಹಾಯಕನಾಗಿದ್ದ, ನೆಹರೂ ಅವರ ದ್ವೇಷ ಪಟ್ಟಿಗಳಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದ ರಾಮಚಂದ್ರ ಕಾಕ್. ಇದಕ್ಕೆ ಕಾರಣವೇನೆಂದರೆ, ಮೇ ೧೫, ೧೯೪೬ ರಂದು, ಕಾಶ್ಮೀರದ ವಿರೋಧಿ ಚಳುವಳಿಗಾಗಿ ಶೇಖ್ ಅಬ್ದುಲ್ಲಾನನ್ನು ಬಂಧಿಸಿ ಸೆರೆಹಿಡಿಯಲಾಯಿತು, ನೆಹರು ಅವರು ರೈತ ಪರ ವಕೀಲರಾಗಲು ಕಾಶ್ಮೀರಕ್ಕೆ ಹೋಗುತ್ತಾರೆ ಎಂದು ಘೋಷಿಸಿದರು. ಆದರೆ ರಾಮಚಂದ್ರ ಕಾಕ್ ರವರು ನೆಹರು ಕಾಶ್ಮೀರದೊಳಗೆ ಪ್ರವೇಶಿಸದಂತೆ ನಿಷೇಧಿಸಿ ಮುಝಫರಾಬಾದ್ ಬಳಿ ಅವರನ್ನು ಬಂಧಿಸಿದರು. ನೆಹರು, ನಿಸ್ಸಂಶಯವಾಗಿ, ಈ ಕಾರ್ಯದಿಂದಾಗಿ ಕುಪಿತರಾಗಿದ್ದರು…!

ರಾಮಚಂದ್ರ ಕಾಕ್, ಮಹಾರಾಜರಿಂದ ಬಂದ ಮೊಹರು ಪತ್ರವೊಂದನ್ನು ಗಾಂಧಿಜಿಗೆ ಹಸ್ತಾಂತರಿಸಿದರು. ಆ ಪತ್ರವು ಬೇಟಿಯ ಆಹ್ವಾನವಾಗಿತ್ತು ಮತ್ತು ಆಗಸ್ಟ್ ೩ ರಂದು ಮಹಾರಾಜ್ ರವರ ‘ಹರಿ ನಿವಾಸ್’ ದಲ್ಲಿ ಸಭೆಯನ್ನು ನಿಗದಿಪಡಿಸಲಾಯಿತು. ನೆಹರು ಅವರ ಹೇಳಿಕೆ ಪ್ರಕಾರ, ಕಾಶ್ಮೀರ ಪ್ರವಾಸದ ಸಮಯದಲ್ಲಿ ನ್ಯಾಶನಲ್ ಕಾನ್ಫರೆನ್ಸ್ ಕರ‍್ಯಕರ್ತರು ಗಾಂಧೀಜಿಯವರ ಸುತ್ತಲೂ ಇದ್ದರು. ಶೇಖ್ ರವರ ಅನುಪಸ್ಥಿತಿಯಲ್ಲಿ, ಬೇಗಂ ಅಕ್ಬರ್ ಜಹಾನ್ ಮತ್ತು ಮಗಳು ಖಲೀದಾ ಮೂರು ದಿನಗಳ ಕಾಲ ಗಾಂಧೀಜಿಯವರನ್ನು ಅನೇಕ ಬಾರಿ ಭೇಟಿಯಾದರು.

ಆಗಸ್ಟ್ ೧ ರಂದು ಶ್ರೀನಗರದಲ್ಲಿ ಹಿಂದು ರಾಷ್ಟ್ರೀಯವಾದಿ ಮುಖಂಡನನ್ನು ಕೂಡ ಗಾಂಧೀಜಿ ಭೇಟಿಯಾಗಲಿಲ್ಲ …!

ಇದೇ ಆಗಸ್ಟ್ ೧ ರಂದು ಅಲ್ಲಿ ಮತ್ತೊಂದು ಬೆಳವಣಿಗೆ ನಡೆಯುತ್ತಿತ್ತು, ಹಲವು ವರ್ಷಗಳ ಕಾಲ ಭಾರತೀಯ ಉಪಖಂಡದಲ್ಲಿ ಅತೃಪ್ತಿ ಉಂಟಾಗಿಸಿದ್ದ ಈ ಘಟನೆಯು ಕಾಶ್ಮೀರಕ್ಕೆ ಸಂಬಂಧಿಸಿತ್ತು. ಮಹಾರಾಜ ಹರಿ ಸಿಂಗ್ ನೇತೃತ್ವದಲ್ಲಿ ಕಾಶ್ಮೀರ ರಾಜ್ಯವು ದೊಡ್ಡದಾಗಿತ್ತು, ಬ್ರಿಟಿಷರು ವಿಭಜಿಸಿದ ಕಾಶ್ಮೀರದ ಗಿಲ್ಗಿಟ್ ಪ್ರಾಂತ್ಯ ೧೯೩೫ ರಲ್ಲಿ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೇರಿತು. ಮೂಲಭೂತವಾಗಿ, ಪರ‍್ಣ ಮತ್ತು ಅವಿಭಜಿತ ಕಾಶ್ಮೀರ ಅಕ್ಷರಶಃ ಭೂಮಿಯ ಮೇಲಿನ ಒಂದು ಸ್ರ‍್ಗವಾಗಿತ್ತು. ವಿಭಜನೆಯ ಹೊರತಾಗಿಯೂ ಕಾಶ್ಮೀರವು ಸೈನ್ಯದ ಮತ್ತು ಯುದ್ಧತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಹೊಂದಿದ ಒಂದು ಮಹತ್ವದ ಸ್ಥಳವಾಗಿತ್ತು. ಮೂರು ರಾಷ್ಟ್ರಗಳ ಗಡಿಯು ಈ ರಾಜ್ಯವನ್ನು ಮುಟ್ಟಿತು. ೧೯೩೫ ರಲ್ಲಿ, ಎರಡನೆಯ ಜಾಗತಿಕ ಸಮರವು ದೂರದಲ್ಲಿದ್ದರೂ ಸಹ, ಪ್ರಪಂಚದ ರಾಜಕೀಯದಲ್ಲಿ ಪ್ರಮುಖ ಬದಲಾವಣೆಗಳು ನಡೆಯಲಾರಂಭಿಸಿದವು. ರಷ್ಯಾದ ಸೈನ್ಯ ಬಲ ಹೆಚ್ಚಾಗುತ್ತಿದ್ದುದನ್ನು ಕಂಡ ಬ್ರಿಟಿಷರು ಮಹಾರಾಜಾ ಹರಿ ಸಿಂಗ್ ರಿಂದ ರಷ್ಯಾ – ಕಾಶ್ಮೀರದ ಗಡಿಭಾಗವಾದ ಗಿಲ್ಗಿಟ್ ಪ್ರಾಂತ್ಯವನ್ನು ತೆಗೆದುಕೊಂಡರು.

ನಂತರ, ಹೆಚ್ಚಿನ ನೀರು ಝೀಲಂ ನದಿಯ ಮೂಲಕ ಹರಿದುಹೋಯಿತು. ಎರಡನೇ ಜಾಗತೀಕ ಮಹಾಯುದ್ದ ಕೊನೆಗೊಂಡಿತು. ಆ ಯುದ್ಧದಲ್ಲಿ ಪಾಲ್ಗೊಂಡ ಎಲ್ಲಾ ದೇಶಗಳು ಛಿದ್ರಗೊಂಡಿದ್ದವು. ಬ್ರಿಟಿಷರು ಭಾರತವನ್ನು ಬಿಡಲು ನಿರ್ಧರಿಸಿದರು. ಈ ಪರಿಸ್ಥಿತಿಯಲ್ಲಿ ಬ್ರಿಟಿಷ್ ವಶದಲ್ಲಿದ್ದ ಗಿಲ್ಗಿಟ್ ಏಜೆನ್ಸಿ (ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶ) ನಂತಹ ದೂರಸ್ಥ ಪ್ರದೇಶವನ್ನು ನಿಯಂತ್ರಿಸುವಲ್ಲಿ ಬ್ರಿಟಿಷ ಆಸಕ್ತಿ ಹೊಂದಿರಲಿಲ್ಲ. ಹಾಗಾಗಿ, ಭಾರತಕ್ಕೆ ಅಧಿಕೃತವಾಗಿ ಸ್ವಾತಂತ್ರ‍್ಯ ಕೊಡುವ ಮೊದಲೇ ಬ್ರಿಟೀಷರು ಗಿಲ್ಗಿಟ್ ಪ್ರಾಂತ್ಯವನ್ನು ಮಹಾರಾಜರಿಗೆ ಹಸ್ತಾಂತರಿಸಿದರು. ಆಗಸ್ಟ್ ೧, ೧೯೪೭ ರ ಸೂರ್ಯೋದಯದ ಸಮಯದಲ್ಲಿ ಯೂನಿಯನ್ ಜ್ಯಾಕ್ ಜಾಗದಲ್ಲಿ ಕಾಶ್ಮೀರ ರಾಜ್ಯದ ಧ್ವಜವು ಗಿಲ್ಗಿಟ್-ಬಾಲ್ಟಿಸ್ತಾನದ ಎಲ್ಲಾ ಜಿಲ್ಲಾ ಪ್ರಧಾನ ಕಚೇರಿಗಳಲ್ಲಿ ಹೆಮ್ಮೆಯಿಂದ ಹಾರುತ್ತಿತ್ತು. ಹೇಗಾದರಾಗಲಿ ಈ ವರ್ಗಾವಣೆಗೆ ಮಹಾರಾಜರಿಗೆ ಎಷ್ಟರ ಮಟ್ಟಿಗೆ ಒಪ್ಪಿಗೆಯಾಗಿತ್ತು? ಅಷ್ಟೇನೂ ಇಲ್ಲ…!

ಈ ಪ್ರದೇಶದ ರಕ್ಷಣೆಗಾಗಿ ಬ್ರಿಟೀಷರು ಗಿಲ್ಗಿಟ್ ಸ್ಕೌಟ್ಸ್ ಬೆಟಾಲಿಯನ್ ಅನ್ನು ನಿಯೋಜಿಸಿದ್ದರು. ಕೆಲವು ಬ್ರಿಟಿಷ್ ಅಧಿಕಾರಿಗಳನ್ನು ಹೊರತುಪಡಿಸಿ ಇಡೀ ಸೈನ್ಯವನ್ನು ಮುಸ್ಲಿಮರು ಆಕ್ರಮಿಸಿಕೊಂಡಿದ್ದರು. ಆಗಸ್ಟ್ ೧ ರ ಪ್ರಾಂತ್ಯ ವರ್ಗಾವಣೆಯೊಂದಿಗೆ, ಈ ಮುಸ್ಲಿಂ ಸೇನೆಯು ಮಹಾರಾಜರ ಆಡಳಿತಕ್ಕೆ ಒಳಪಟ್ಟಿತು. ಮಹಾರಾಜರು ಬ್ರಿಗೇಡಿಯರ್ ಘನ್ಸರಾ ಸಿಂಗ್ ರನ್ನು ಈ ಪ್ರದೇಶದ ಗವರ್ನರ್ ಎಂದು ನೇಮಿಸಿದರು. ಇದಲ್ಲದೇ, ಮಹಾರಾಜರು ಗಿಲ್ಗಿಟ್ ಸ್ಕೌಟ್ ನ ಮೇಜರ್ ಡಬ್ಲ್ಯೂ.ಎ.ಬ್ರೌನ್ ಮತ್ತು ಕ್ಯಾಪ್ಟನ್ ಎಸ್.ಮಿಥಿಸನ್ ಅವರನ್ನು ಸೇವೆಗೆ ನಿಯೋಜಿಸಿದರು. ಗಿಲ್ಗಿಟ್ ಸ್ಕೌಟ್ ನ ಸುಬೇದಾರ್ ಮೇಜರ್ ಬಾಬರ್ ಖಾನ್ ಅವರು ಈ ಅಧಿಕಾರಿಗಳೊಂದಿಗೆ ನಿಯೋಜನೆಗೊಂಡಿದ್ದರು.
ಮಹಾರಾಜ ಬಿಡುವಿಲ್ಲದೆ ಈ ಕೆಲಸದಲ್ಲಿ ನಿರತನಾಗಿರುವಾಗ, ಗಿಲ್ಗಿಟ್ ಸ್ಕೌಟ್ ತಂಡ ಕೇವಲ ಎರಡು ತಿಂಗಳು ಮತ್ತು ಮೂರು ದಿನಗಳೊಳಗೆ ವಿಶ್ವಾಸಘಾತುಕರಾಗುತ್ತಾರೆ ಮತ್ತು ಗವರ್ನರ್ ಬ್ರಿಗೇಡಿಯರ್ ಘನ್ಸರಾ ಸಿಂಗ್ ರನ್ನು ಬಂಧಿಸಬಹುದೆಂದು ಕಲ್ಪಿಸಿಕೊಂಡಿರಲಿಲ್ಲ. ಆಗಸ್ಟ್ ೧ ರ ಈ ವರ್ಗಾವಣೆ ಭವಿಷ್ಯದಲ್ಲಿ ಪ್ರಮುಖ ಘಟನೆಗಳಿಗೆ ದಾರಿಮಾಡಿಕೊಟ್ಟಿದೆ …!

ಈ ಮುರುಕು ಸ್ವಾತಂತ್ರ‍್ಯವು ಸಂಯುಕ್ತ ಭಾರತದ ಮಿತಿಗೊಳಗಾಗಿದ್ದರೂ ಸಹ, ದೇಶದ ಪೂರ್ವ ಮತ್ತು ಪಶ್ಚಿಮ ಗಡಿಯಲ್ಲಿ ಬೃಹತ್ ಸಾಮೂಹಿಕ ಹತ್ಯಾಕಾಂಡಗಳು ನಡೆಯುತ್ತಿದ್ದವು. ಬ್ರಿಟಿಷ್ ಅಧಿಕಾರಿಗಳು ಈ ಹತ್ಯಾಕಾಂಡವು ಸ್ವಾತಂತ್ರ‍್ಯ ದಿನದ ಆಗಮನದೊಂದಿಗೆ ಮತ್ತು ವಿಭಜನೆಯ ದಿನದಲ್ಲಿ ಹೆಚ್ಚಾಗುವುದೆಂದು ನಿರೀಕ್ಷಿಸಿತ್ತು. ಆದ್ದರಿಂದ, ಈ ಗಲಭೆಗಳ ತೀವ್ರತೆಯನ್ನು ಕಡಿಮೆಗೊಳಿಸಲು ಅವರು ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರ ಮಿಶ್ರ ಸೇನೆಯ ಪರಿಕಲ್ಪನೆಯನ್ನು ಮಂಡಿಸಿದರು. ಅಂತೆಯೇ, ‘ಪಂಜಾಬ್ ಬೌಂಡರಿ ಫೋರ್ಸ್ ಎಂಬ ಹೆಸರಿನ ಬಲವನ್ನು ರಚಿಸಲಾಯಿತು. ಇದು ಹನ್ನೊಂದು ಮಿಶ್ರ ಪದಾತಿ ದಳಗಳನ್ನು ಹೊಂದಿತ್ತು. ಒಟ್ಟು ೫೦ ಸಾವಿರ ಮಿಲಿಟರಿ ಸೈನಿಕರು ಮತ್ತು ಮೊಹಮ್ಮದ್ ಅಯುಬ್ ಖಾನ್, ನಾಸಿರ್ ಅಹ್ಮದ್, ದಿಗಂಬರ್ ಬ್ರಾರ್ ಮತ್ತು ಜನರಲ್ ತಿಮ್ಮಯ್ಯ ಅವರುಗಳು ಬ್ರಿಗೇಡಿಯರ್ ಗಳಾಗಿ ನೇಮಕಗೊಂಡು ಆಗಸ್ಟ್ ೧ ರಂದು ತಮ್ಮ ತಾತ್ಕಾಲಿಕ ಪ್ರಧಾನ ಕಚೇರಿ ಲಾಹೋರ್ ನಲ್ಲಿ ಈ ನಾಲ್ಕು ಬ್ರಿಗೇಡಿಯರ್ ಗಳು ಪಂಜಾಬ್ ಬೌಂಡರಿ ಫೋರ್ಸ್ ಕೆಲಸವನ್ನು ಪ್ರಾರಂಭಿಸಿದರು.
ಇದೆಲ್ಲದರ ಹೊರತಾಗಿಯೂ ಕೇವಲ ೧೫ ದಿನಗಳಲ್ಲಿ ಈ ಮಿಶ್ರ ಸೇನೆಯು ಲಾಹೋರ್ ನ ತಮ್ಮ ಪ್ರಧಾನ ಕಚೇರಿಯ ದಹನಕ್ಕೆ ಪ್ರತ್ಯಕ್ಷ ಸಾಕ್ಷಿಯಾಯಿತು …!

ಅದೇ ಸಮಯದಲ್ಲಿ, ಕಲ್ಕತ್ತಾದಲ್ಲಿ ನಾಟಕವೊಂದು ಸೃಷ್ಠಿಯಾಯಿತು. ಇದೇ ಆಗಸ್ಟ್ ೧ ರಂದು ಕಾಂಗ್ರೇಸ್ಸಿನ ಹಿರಿಯ ಮುಖಂಡ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹಿರಿಯ ಸಹೋದರ ಶರದ್ ಚಂದ್ರ ಬೋಸ್ ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದರು. ಶರದ್ ಬಾಬು ಅವರದು ಒಂದು ತೀವ್ರಗಾಮಿ ವ್ಯಕ್ತಿತ್ವ. ಇದು ನಲವತ್ತು ರ‍್ಷಗಳಿಂದ ಕಾಂಗ್ರೆಸ್ನಲ್ಲಿ ಉಳಿದು ಪೂರ್ಣ ಆತ್ಮ ಮತ್ತು ಮನೋಭಾವದೊಂದಿಗೆ ಹೋರಾಡಿದ ಒಬ್ಬ ವ್ಯಕ್ತಿ. “ತಮ್ಮ ಸಂಪೂರ್ಣ ತನು-ಮನ-ಧನಗಳ ಮೂಲಕ ಕ್ರಾಂತಿಕಾರಕ ಚಳವಳಿಗೆ ಸಹಾಯ ಮಾಡಿದ ಮನುಷ್ಯ, ಮತ್ತು ಸರ್ಕಾರಕ್ಕೆ ಅತ್ಯಂತ ಅಪಾಯಕಾರಿ ಎದುರಾಳಿಯಾಗಿದ್ದನು” ಎಂದು ೧೯೩೦ ರಲ್ಲಿ ಪ್ರಕಟವಾದ ಬ್ರಿಟಿಷ್ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶರದ್ ಚಂದ್ರ ಬೋಸ್ ಮತ್ತು ಪಂಡಿತ್ ಜವಾಹರಲಾಲ್ ನೆಹರೂ ತುಂಬಾ ಹೋಲಿಕೆಗಳನ್ನು ಹೊಂದಿದ್ದರು. ಇವರಿಬ್ಬರೂ ೧೮೮೯ ರಲ್ಲಿ ಜನಿಸಿದರು. ಇಬ್ಬರೂ ಇಂಗ್ಲೆಂಡ್ನಲ್ಲಿ ಶಿಕ್ಷಣ ಪಡೆದರು. ಇಬ್ಬರೂ ತಮ್ಮ ಕಾನೂನು ಪದವಿಯನ್ನು ಇಂಗ್ಲೆಂಡ್ನಿಂದ ಪಡೆದುಕೊಂಡರು. ಇಬ್ಬರೂ ತಮ್ಮ ಕಿರಿಯ ದಿನಗಳಲ್ಲಿ ಚಿಂತನೆ ನಡೆಸುತ್ತಿದ್ದರು. ನಂತರ, ಇಬ್ಬರೂ ಕಾಂಗ್ರೆಸ್ನಲ್ಲಿ ಸಕ್ರಿಯರಾದರು. ಇಬ್ಬರೂ ಒಳ್ಳೆಯ ಸ್ನೇಹ ಸಂಬಂಧವನ್ನು ಹಂಚಿಕೊಂಡಿದ್ದಾರೆ.

ಆದರೆ, ೧೯೩೭ ರಲ್ಲಿ ನಡೆದ ಪ್ರಾಂತೀಯ ಚುನಾವಣೆಗಳಲ್ಲಿ ೫೪ ಸ್ಥಾನಗಳೊಂದಿಗೆ ಕಾಂಗ್ರೆಸ್ ನ ಬಹುಮತ ಗೆದ್ದುಕೊಂಡಿತು, ನಂತರ ಕೃಷಕ್ ಪ್ರಜಾ ಪಕ್ಷ ಮತ್ತು ಮುಸ್ಲಿಮ್ ಲೀಗ್ ಗೆ ತಲಾ ೩೭ ಸ್ಥಾನಗಳು ದೊರೆತವು. ಬಂಗಾಳ ಕಾಂಗ್ರೆಸ್ ನ ಮುಖಂಡರಾದ ಶರದ್ ಚಂದ್ರ ಬೋಸ್ ರವರು, ಕಾಂಗ್ರೆಸ್ ಮತ್ತು ವಿಶೇಷವಾಗಿ ಗಾಂಧಿ-ನೆಹರೂ ಅವರನ್ನು ಕೃಷಕ್ ಪ್ರಜಾ ಪಕ್ಷದೊಂದಿಗೆ ಜಂಟಿ ಸರಕಾರ ರಚಿಸುವಂತೆ ಪ್ರೇರೆಪಿಸಿದರು. ಆದರೆ, ಕಾಂಗ್ರೆಸ್ ಇವರ ಮಾತಿಗೆ ಬೆಲೆ ನೀಡಲಿಲ್ಲ. ಮುಸ್ಲಿಮ್ ಲೀಗ್ ಕೃಷಕ್ ಪ್ರಜಾ ಪಕ್ಷದ ಸಹಾಯದಿಂದ ಜಂಟಿ ಸರ್ಕಾರವನ್ನು ರಚಿಸಿತು, ಕಾಂಗ್ರೆಸ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆದ್ದ ನಂತರವೂ ವಿರೋಧ ಪಕ್ಷದ ಬೆಂಚುಗಳ ಮೇಲೆ ಕುಳಿತಿತ್ತು. ಶೇರ್-ಇ-ಬೆಂಗಾಲ್ ಎ. ಎ. ಫಾಜ್ಲುಲ್ ಹಕ್ ಬಂಗಾಳದ ಪ್ರಧಾನಮಂತ್ರಿಯಾದರು. ಅಲ್ಲಿಂದೀಚೆಗೆ, ಬಂಗಾಳದಲ್ಲಿ ಕಾಂಗ್ರೆಸ್ ನ ಅಡಿಪಾಯ ದುರ್ಬಲವಾಯಿತು. ಕ್ರಮೇಣವಾಗಿ ಮುಸ್ಲಿಮ್ ಲೀಗ್ ನ ಸುರ್ಹವರ್ದಿಯಂತಹ ನಾಯಕ ಒಂಬತ್ತು ವರ್ಷಗಳ ವರೆಗೆ ಪ್ರಧಾನಿಯಾಗಿ ನಂತರ ಅವರ ನಾಯಕತ್ವದಲ್ಲಿ ಐದು ಸಾವಿರ ಹಿಂದುಗಳು ಕರುಣಾಜನಕವಾಗಿ ೧೯೪೬ ರಲ್ಲಿ ‘ನೇರ ಆಚರಣೆಯ ದಿನ’ ದಲ್ಲಿ ಹತ್ಯೆಗೀಡಾದರು …!

ಈ ಎಲ್ಲ ಘಟನೆಗಳು ಶರದ್ ಬಾಬುಗೆ ತುಂಬಾ ಬೇಸರ ತರಿಸಿದ್ದವು. ಅವರು ಕಾಲಕಾಲಕ್ಕೆ ಈ ವಿಷಯದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಮತ್ತು ವಿಶೇಷವಾಗಿ ನೆಹರೂಗೆ ಬರೆಯುತ್ತಿದ್ದರು, ಆದರೆ ನೆಹರುವಿನಿಂದ ಯಾವುದೇ ಪ್ರತ್ಯುತ್ತರವಿರುತ್ತಿರಲಿಲ್ಲ. ೧೯೩೯ ರಲ್ಲಿ ನಡೆದ ತ್ರಿಪುರಿ (ಜಬಲ್ಪುರ) ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ನೆಹರು ಅವರು ಸುಭಾಷ್ ಬಾಬು ವಿರುದ್ಧ ನಡೆಸಿದ ಪ್ರಚಾರವು ಶರದ್ ಬಾಬು ಅವರನ್ನು ಕೆರಳಿಸಿ ಕೋಪೋದ್ರಿಕ್ತರನ್ನಾಗಿಸಿತ್ತು.
ಮತ್ತು ನೆಹರೂ-ಗಾಂಧಿಯವರ ಈ ನಿರ್ಲಕ್ಷ ಬಂಗಾಳದ ವಿಭಜನೆಗೂ ಎಡೆಮಾಡಿಕೊಟ್ಟಿತು. ಶರದ್ ಬಾಬು ಅವರಿಗೆ ಈ ವಿಚಾರಗಳನ್ನು ಜೀರ್ಣಿಸಿಸಿಕೊಳ್ಳಲು ಸಾಧ್ಯವಾಗಲಿಲ್ಲ ಮತ್ತು ಹೀಗಾಗಿ ಆಗಸ್ಟ್ ೧ ರಂದು ಅವರು ತಮ್ಮ ಸುದೀರ್ಘ ವರ್ಷದ ಕಾಂಗ್ರೆಸ್ ಪಕ್ಷದ ಸೇವೆಗೆ ರಾಜೀನಾಮೆ ನೀಡಿದರು …!
ಆಗಸ್ಟ್ ೧ ರಂದು ಶರದ್ ಬಾಬು ಅವರು “ಸಮಾಜವಾದಿ ರಿಪಬ್ಲಿಕನ್ ಆರ್ಮಿ” ಪಕ್ಷವನ್ನು ರಚಿಸಿದರು. ಅವರು “ದೇಶದ ವಿಭಜನೆ ಮತ್ತು ದೇಶದ ಅರಾಜಕತೆ ಪರಿಸ್ಥಿತಿ ನೆಹರುರ ನಾಯಕತ್ವದ ವೈಫಲ್ಯ” ಎಂದು ಒತ್ತಿ ಹೇಳಿದರು.

ಆಗಸ್ಟ್ ೧. ದಿನವು ದೊಡ್ಡ ಪ್ರಮಾಣದ ಮತ್ತು ಕ್ಷಿಪ್ರ ಬೆಳವಣಿಗೆಗಳತ್ತ ಮುಖ ಮಾಡಿದೆ.
ಪಂಜಾಬ್ ಇನ್ನೂ ದಹಿಸುತ್ತಿದೆ. ಪಂಜಾಬ್, ಸಿಂಧ್, ಬಲೂಚಿಸ್ತಾನದ ಮನೆಗಳನ್ನು ಸುಟ್ಟುಹೋದ ಭೀಕರ ಜ್ವಾಲೆಯು ರಾತ್ರಿಯ ಭಯಂಕರವಾದ ಕತ್ತಲೆಯಲ್ಲಿ ದೂರದಿಂದ ಕಾಣುತ್ತದೆ. ಆರ್.ಎಸ್.ಎಸ್. ನ ೫೦ ಸಾವಿರ ಸ್ವಯಂ ಸೇವಾರ‍್ತರು ಹಿಂದೂಗಳು ಮತ್ತು ಸಿಖ್ಖರನ್ನು ಪಂಜಾಬ್ನಲ್ಲಿ ಹತ್ಯೆ ಮಾಡದಂತೆ ರಕ್ಷಿಸಲು ದಿನದ ೨೪ ಗಂಟೆ ಕೆಲಸ ಮಾಡುತ್ತಿದ್ದಾರೆ.
ಬಂಗಾಳದ ಪರಿಸ್ಥಿತಿಯು ಅರಾಜಕತೆಯ ಕಡೆಗೆ ಸಾಗುತ್ತಿದೆ.

ಅದರೊಂದಿಗೆ ಸ್ವಾತಂತ್ರ‍್ಯ ಮತ್ತು ವಿಭಜನೆ ಕೇವಲ ಹದಿನಾಲ್ಕು ದಿನಗಳು ದೂರವಾಗಿದ್ದವು …!

ಮೂಲ ಲೇಖನ : ಪ್ರಶಾಂತ್ ಪೋಳೆ (ಹಿಂದಿ)
ಅನುವಾದ : ಪರಪ್ಪ ಶಾನವಾಡ (ಕನ್ನಡ)

Leave a Reply

Your email address will not be published.

This site uses Akismet to reduce spam. Learn how your comment data is processed.