ಕಳೆದ ದಶಕದಲ್ಲಿ ಹಲವಾರು ಸಾಮಾಜಿಕ ಜಾಲತಾಣದ ಮಾಧ್ಯಮಗಳು ಬಂದು ಸಾಮಾನ್ಯ ಜನರ ಜೀವನ ಶೈಲಿಯನ್ನೇ ಬದಲಾಯಿಸಿದೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಗಳಂತಹ ಆ್ಯಪ್ ಗಳು ಕೇವಲ ಪರಸ್ಪರ ವಿಚಾರ ವಿನಿಮಯದ ಮಾಧ್ಯಮವಾಗಲ್ಲದೆ, ಸಾಮಾಜಿಕ ಜೀವನದ ಎಲ್ಲ ಹಂದರಗಳನ್ನೂ ತಲುಪಿವೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಬಹು ಪ್ರಚಲಿತವಾದ ಸಾಮಾಜಿಕ ಮಾಧ್ಯಮದ ಆ್ಯಪ್ ಎಂದರೆ ಕ್ಲಬ್ ಹೌಸ್.  ಇದು ಶ್ರವಣ (Audio) ಮಾಧ್ಯಮವನ್ನು ಉಪಯೋಗಿಸುತ್ತಾ ಜನರ ಮಧ್ಯೆ ಸಂವಹನದ ಕೊಂಡಿಯಾಗಿ ಬಹು ಜನಪ್ರಿಯ ಹೊಂದಿದೆ. ಈ ಕ್ಲಬ್ ಹೌಸಿನಲ್ಲಿ ಕೊಠಡಿಯನ್ನು ಪ್ರಾರಂಭಿಸಿ ಯಾರು ಬೇಕಾದರೂ ಯಾವುದೇ ವಿಷಯದ ಬಗ್ಗೆ ಚರ್ಚೆಮಾಡಲು ಇತರರನ್ನು ಆಹ್ವಾನಿಸಬಹುದು.

ವಿಪರ್ಯಾಸವೆಂದರೆ ಇತರ ಸಾಮಾಜಿಕ ಜಾಲತಾಣ ಮಾಧ್ಯಮಗಳಲ್ಲಿ ಕಂಡಂತೆ ಈ ಕ್ಲಬ್ ಹೌಸ್ ನಲ್ಲೂ ಕೂಡ ಜಾತಿ, ಧರ್ಮ, ಭಾಷೆ, ಪ್ರಾಂತ್ಯ, ರಾಜಕೀಯ ಮುಂತಾದ ವಿಷಯಗಳೇ ಹೆಚ್ಚಾಗಿ ಚರ್ಚೆಗೆ ಬಂದು, ಆರೋಗ್ಯಕರ ಸಂವಹನಕ್ಕೆ ತೊಡಕಾಗಿ ಪರಿಣಮಿಸಿದೆ. (ಈ ರೀತಿಯ ಸಾಧನಗಳು ಸಮಾಜದ ಒಳಿತಿಗಾಗಿ, ಅರಿವಿಗಾಗಿ, ಉಪಯೋಗವಾಗಬೇಕೆಂಬುದು ಸಮಾಜದ ಅಪೇಕ್ಷೆ)

ಸಂತೋಷ ಮತ್ತು ನೆಮ್ಮದಿಯ ವಿಚಾರವೆಂದರೆ ಸಕಾರಾತ್ಮಕ ಬದಲಾವಣೆಯ ಗಾಳಿ ಇಲ್ಲಿಯೂ ಬೀಸತೊಡಗಿದೆ. ಕೆಲವು ಸಮಾನ ಮನಸ್ಕರು ಇಂತಹ ತಾಣಗಳಲ್ಲಿ ಧನಾತ್ಮಕ ಚಿಂತನೆಯನ್ನು ಬೆಳಸಬೇಕೆಂಬ ದೃಷ್ಟಿಯಿಂದ ಈ ಮಾಧ್ಯಮವನ್ನು ಬಳಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಇಂತಹ ಹಲವು ಪ್ರಯತ್ನಗಳಲ್ಲಿ ಒಂದು “ಫೇಸ್ಬುಕ್ ಫ್ರೆಂಡ್ಸ್” ಕ್ಲಬ್. ಇದರಲ್ಲಿ ಕೆಲವು ಸ್ನೇಹಿತರು (ಜಾನ್, ರಾಜೇಶ್, ಮತ್ತು ಸುದೀಶ್) ಸೇರಿ ಕಳೆದ ಎರಡು ಮೂರು ತಿಂಗಳುಗಳಿಂದ ಸಮಾಜದ ಕೆಲವು ಪ್ರಚಲಿತ ವಿದ್ಯಮಾನಗಳ ಬಗ್ಗೆ ಚರ್ಚೆಯನ್ನು ತಮ್ಮ ಕೊಠಡಿಯಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ತಮ್ಮ ಕ್ಲಬ್ ಹೌಸ್ ಕೊಠಡಿಯು ಇತರ ಕಡೆಯಂತೆ ಸಂಘರ್ಷದ ತಾಣವಾಗಬಾರದು, ಬದಲಾಗಿ ಪರಸ್ಪರ ಸಕಾರಾತ್ಮಕ ಮನೋಭಾವನೆಯಿಂದ ಚರ್ಚೆಯಾಗಿ ಆರೋಗ್ಯಕರ ವಾತಾವರಣ ನಿರ್ಮಾಣವಾಗುವ ಸಾಧನವಾಗಬೇಕು ಮತ್ತು ತನ್ಮೂಲಕ ಸಮಾಜದಲ್ಲಿ ಉತ್ತಮ ವಿಚಾರಗಳು ಹೆಚ್ಚಾಗಿ ಹರಡಬೇಕು ಎನ್ನುವ ದೃಷ್ಟಿಯಿಂದ ಕಳೆದ ಶನಿವಾರದಂದು (ಸೆಪ್ಟೆಂಬರ್ ೪, ೨೦೨೧) “ನಾನು ಬಯಸುವ ಸಮಾಜ…ನನ್ನ ಜವಾಬ್ದಾರಿ “ ಎನ್ನುವ ಶೀರ್ಷಿಕೆಯಡಿ ನಾನು ಬಯಸಿದಂತ ಸಮಾಜ ರೂಪುಗೊಳ್ಳಬೇಕಾದರೆ ನಾನು ನಿರ್ವಹಿಸಬಹುದಾದ ಒಂದು ಜವಾಬ್ದಾರಿಯ ಕುರಿತು ಚರ್ಚೆಯಾಯಿತು, ಮೂಡಿಬರುವ ನಾಗರಿಕ ಜವಾಬ್ದಾರಿಗಳು ಸಾಮೂಹಿಕವಾಗಿರಬೇಕು ಎನ್ನುವ ದೃಷ್ಟಿಯಿಂದ ಒಬ್ಬರಿಗೆ ಒಂದು ಜವಾಬ್ದಾರಿ ಹೇಳುವ ಅವಕಾಶ ಕೊಡುವುದರ ಮೂಲಕ ಹೆಚ್ಚು ಜನರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಯಿತು. ಭಾಗವಹಿಸಿದವರ ಅನುಭವಗಳು ನಮ್ಮ ಸಮಾಜದಲ್ಲಿ ಆಗಬೇಕಾಗಿರುವ ಬದಲಾವಣೆಯ ಕನ್ನಡಿಯೆಂದು ಹೇಳಿದರೆ ತಪ್ಪಾಗಲಾರದು. ಸಮಾಜದ ವಿವಿಧ ಸ್ತರಗಳಿಂದ, ಕ್ಷೇತ್ರಗಳಿಂದ ಬಂದಂತಹವರು ತಾವು ಈಗಾಗಲೇ ನಡೆಸುತ್ತಿರುವ ಕೆಲವು ಸಾಮಾಜಿಕ ಕಳಕಳಿಯ ಪ್ರಕಲ್ಪಗಳ ಅಥವಾ ನಿರ್ವಹಿಸುತ್ತಿರುವ ಜವಾಬ್ದಾರಿಗಳ ವಿವರಗಳನ್ನು ಹಂಚಿಕೊಂಡು, ಇತರರ ಸಹಯೋಗದೊಡನೆ ಇನ್ನೂ ಹೆಚ್ಚು ವಿಸ್ತರಣೆ ಮಾಡುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇನ್ನು ಕೆಲವರು ತಾವು ಇನ್ನು ಮುಂದೆ ಯಾವ ನಾಗರಿಕ ಮತ್ತು ಸಾಮಾಜಿಕ ಜವಾಬ್ದಾರಿ ನಿರ್ವಹಿಸುವರೆಂದು ತಿಳಿಸಿದರು.ಹೀಗೆ ನಾವು ಬಯಸಿದಂತ ಸಮಾಜ ರೂಪಿಸಲು ಒಟ್ಟಾರೆಯಾಗಿ ನಾಗರಿಕರಿಂದಲೇ ಪ್ರಸ್ತಾಪವಾದ, ನಾಗರಿಕರೇ ಕೈಗೊಳ್ಳಬಹುದಾದ ಕೆಲವು ಕ್ರೋಢೀಕೃತ ಜವಾಬ್ದಾರಿಗಳ ಪಟ್ಟಿ ಇಲ್ಲಿದೆ…

 1. ನಾನು ಬಯಸಿದಂತ ಸಮಾಜ ರೂಪಿಸುವಲ್ಲಿ ಸಹಕಾರಿಯಾಗುವ ಯಾವುದಾದರೊಂದು ಸಾಮಾಜಿಕ ಕಾರ್ಯಕ್ಕೆ ನನ್ನ ಅನುಕೂಲಕ್ಕೆ ಅನುಗುಣವಾಗಿ ವಾರಕ್ಕೆ/ತಿಂಗಳಿಗೆ ನಿರ್ದಿಷ್ಟ ಸಮಯವನ್ನು ಕೊಡುತ್ತೇನೆ.
 2. ನಾನು ಸಾರ್ವಜನಿಕ ಸ್ಥಳಗಳಲ್ಲಿ ಅನ್ವಯವಾಗುವ ಎಲ್ಲಾ ಸಾರ್ವಜನಿಕ ನಿಯಮಗಳನ್ನು ಪಾಲಿಸುತ್ತೇನೆ.
 3. ಯಾವುದೇ ಸನ್ನಿವೇಶದಲ್ಲಿ ಯಾವುದೇ ಕಾರಣಕ್ಕೂ ಯಾವುದೇ ಸಾರ್ವಜನಿಕ ಆಸ್ತಿಗೆ ನಾನು ಹಾನಿಯನ್ನುಂಟುಮಾಡುವುದಿಲ್ಲ.
 4. ಸರ್ಕಾರದ ಹಲವು ಯೋಜನೆಗಳ ಐದು ನ್ಯಾಯಯುತ ಲಾಭಾರ್ಥಿಗಳನ್ನು ಗುರುತಿಸಿ ಅವರಿಗೆ ಅನ್ವಯವಾಗುವ ಯೋಜನೆಗಳ ಬಗ್ಗೆ ಅರಿವು ಮೂಡಿಸಿ, ನಂತರ ನೋಂದಾಯಿಸಿಕೊಂಡು ಲಾಭ ಪಡೆಯುವಂತಾಗಲು ಸಹಾಯ ಮಾಡುತ್ತೇನೆ.
 5. ಸಕಾಲದಲ್ಲಿ ಸಂತ್ರಸ್ತರಿಗೆ ನೆರವಾಗಲು ಶಕ್ತಿಗೆ ಅನುಗುಣವಾಗಿ ರಕ್ತ, ಕಣ್ಣು, ಮತ್ತು ಇತರ ಅಂಗಾಂಗಗಳ ದಾನಕ್ಕಾಗಿ ನಿಗದಿತ ಮತ್ತು ಅಧಿಕೃತ ಸಂಸ್ಥೆಗಳಲ್ಲಿ ನನ್ನ ಹೆಸರನ್ನು ನೋಂದಾಯಿಸಿಕೊಳ್ಳುತ್ತೇನೆ.
 6. ನನಗೆ ಪರಿಚಯವಿರುವ ಮತ್ತು ನನ್ನ ಸಂಪರ್ಕಕ್ಕೆ ಬರುವ ಹಿರಿಯ ನಾಗರಿಕರೊಂದಿಗೆ ಗೌರವಯುತವಾಗಿ ವರ್ತಿಸುತ್ತೇನೆ ಮತ್ತು ಸಾಧ್ಯವಾದಷ್ಟು ಸಮಯ ಕೊಡುತ್ತೇನೆ.
 7. ಸಾರ್ವಜನಿಕವಾಗಿ ದಿವ್ಯಾಂಗ ವ್ಯಕ್ತಿಗಳಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತೇನೆ ಮತ್ತು ವೈಯಕ್ತಿಕವಾಗಿ ಸಾಧ್ಯವಾದ ರೀತಿಯಲ್ಲಿ ಸಹಾಯ ಮಾಡುತ್ತೇನೆ.
 8. ನೀರನ್ನು ಮಿತವಾಗಿ ಮತ್ತು ಸಮಾಜಕ್ಕಾಗಿ ಜಲಸಂರಕ್ಷಣೆಯ ಪ್ರತಿ ನನ್ನ ಜವಾಬ್ದಾರಿಯ ಅರಿವಿನೊಂದಿಗೆ ಬಳಸುತ್ತೇನೆ.
 9. ನಿಗದಿತವಲ್ಲದ ಸಾರ್ವಜನಿಕ ಸ್ಥಳದಲ್ಲಿ ಕಸವನ್ನು ಎಸೆಯುವುದಿಲ್ಲ ಮತ್ತು ನನ್ನ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇನೆ. ಹಾಗೆಯೇ ಮನೆಯಲ್ಲಿನ ಹಸಿ ಕಸವನ್ನು ಗೊಬ್ಬರವಾಗಿ ಪರಿವರ್ತಿಸಿ ಮನೆತೋಟಕ್ಕೆ ಬಳಸುತ್ತೇನೆ.
 10. ಸರಕಾರಿ ಶಾಲೆಗಳಿಗೆ ಹೆಚ್ಚು ಮಕ್ಕಳು ಬರುವಂತಾಗಲು ಶಾಲೆಗಳನ್ನು ಇನ್ನೂ ಸಶಕ್ತಗೊಳಿಸಲು ಶಾಲೆಗಳೊಂದಿಗೆ ಸಕಾರಾತ್ಮಕವಾಗಿ ಕೆಲಸ ಮಾಡುತ್ತೇನೆ.
 11. ದೇಶದ ರಾಜಕೀಯದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಯುವಕರನ್ನು ರಾಜಕೀಯವನ್ನು ಒಂದು ಸೇವಾವೃತ್ತಿಯನ್ನಾಗಿ ಪರಿಗಣಿಸಲು ಪ್ರೋತ್ಸಾಹಿಸುತ್ತೇನೆ.
 12. ಶಾಲಾ ಮಕ್ಕಳಲ್ಲಿ ರಾಷ್ಟ್ರೀಯತೆ ಮತ್ತು ಸೇವಾ ಭಾವನೆ ಮೂಡಿಸಲು ಅವರಲ್ಲಿ NCC, NSS, Scouts & Guides, ಸೇರಿಕೊಳ್ಳಲು ಒಲವು ಮೂಡಿಸುತ್ತೇನೆ.
 13. ಮಕ್ಕಳಲ್ಲಿ ಬ್ಯಾಂಕಿಂಗ್ ವ್ಯವಹಾರಗಳ ಬಗ್ಗೆ ಅರಿವು ಮೂಡಿಸಿ ಪ್ರೋತ್ಸಾಹಿಸುವ ಮೂಲಕ ಮುಂದಿನ ತಲೆಮಾರನ್ನು ದೇಶದ ಪಾರದರ್ಶಕ ಅರ್ಥವ್ಯವಸ್ಥೆಯ ಅಪೇಕ್ಷೆಗೆ ಸಜ್ಜುಗೊಳಿಸುವ ಪ್ರಯತ್ನ ಮಾಡುತ್ತೇನೆ.
 14. ಉದ್ಯೋಗಾಕಾಂಕ್ಷಿ ಯುವಕರಿಗೆ ಅನುಕೂಲವಾಗುವಂತೆ ಉದ್ಯೋಗಾವಕಾಶಗಳ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ ಮತ್ತು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೌಶಲ್ಯ ತರಬೇತಿ ಕಾರ್ಯಾಗಾರವನ್ನು ನಡೆಸುತ್ತೇನೆ. (ಫೇಸ್‌ಬುಕ್‌ ಫ್ರೆಂಡ್ಸ್ ಕ್ಲಬ್ ಈ ನಿಟ್ಟಿನಲ್ಲಿ ತಕ್ಷಣವೇ ಕಾರ್ಯ ಪ್ರವೃತ್ತವಾಗಿ ಪ್ರತಿ ಎರಡು ವಾರಕ್ಕೊಮ್ಮೆ ಎರಡು ಗಂಟೆಗಳ ಕಾಲ ಉದ್ಯೋಗ ಮಾಹಿತಿ ಹಂಚಿಕೊಳ್ಳಲು ಆಸಕ್ತರಿರುವವರಿಗೆ ಮುಕ್ತ ವೇದಿಕೆ ಕಲ್ಪಿಸಿಕೊಡಲು ತೀರ್ಮಾನಿಸಿದೆ. ಈ ಮೂಲಕ ಚರ್ಚೆಯ ವಿಷಯಗಳ ಅನುಷ್ಠಾನಕ್ಕೂ ಫೇಸ್‌ಬುಕ್‌ ಫ್ರೆಂಡ್ಸ್ ಕ್ಲಬ್ ಒತ್ತು ನೀಡುವ ಕೆಲಸ ಮಾಡಿತು)
 15. ಆಹಾರ ಮತ್ತು ಆರೋಗ್ಯದ ಸಂಸಾಧನಗಳನ್ನು ಸಂರಕ್ಷಿಸುತ್ತೇನೆ.

ಹೀಗೆ ಒಟ್ಟಾರೆಯಾಗಿ ನಾವು ನಿರ್ವಹಿಸುವ ಪ್ರತಿಯೊಂದು ಕಾರ್ಯದಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿಯನ್ನು ಮೆರೆಯಬೇಕೆಂಬ ಅಭಿಪ್ರಾಯ ಒಮ್ಮತತವಾಗಿತ್ತು.

ಆರೋಗ್ಯಕರ ವಾತಾವರಣದಲ್ಲಿ ಅರ್ಥಪೂರ್ಣವಾಗಿ ನಡೆದ ಈ ಚರ್ಚೆ ಒಂದು ಹೊಸ ತಿರುವು ಪಡೆದುಕೊಂಡು ನಾಗರಿಕ ಜವಾಬ್ದಾರಿಗಳ ಮನನದ ಜೊತೆಗೆ ಸರಕಾರದ/ಸರಕಾರಗಳ ಜವಾಬ್ದಾರಿ ನಿರ್ವಹಣೆಯಲ್ಲ್ಲಿ ನಮ್ಮ ಸಕಾರಾತ್ಮಕ ಪಾತ್ರವೂ ಇರಬೇಕೆಂದು ಅಭಿಪ್ರಾಯ ವ್ಯಕ್ತವಾಯಿತು. ಈ ನಿಟ್ಟಿನಲ್ಲಿ ಎಲ್ಲರಿಗೂ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂದರೆ ನಮ್ಮ ಸರಕಾರಿ ಶಾಲೆಗಳು/ವಿದ್ಯಾಸಂಸ್ಥೆಗಳು ಸಸಶಕ್ತವಾಗಬೇಕು ಹೀಗಾಗಲು ಸರಕಾರಗಳು ಸರಕಾರಿ ಶಿಕ್ಷಣದ ಗುಣಮಟ್ಟವನ್ನು ಅಳೆಯುವ ಅತ್ಯುತ್ತಮ ಮಾನದಂಡಗಳನ್ನು ಶಿಕ್ಷಣ ತಜ್ಞರು, ಪಾಲಕರು, ಮತ್ತು ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ಮಾಡಿ ರೂಪಿಸಬೇಕು. ನಂತರ “ಎಲ್ಲಾ ಸ್ತರದ ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಕ್ಷಮತೆಯನ್ನು (Student Intake Capacity) ಹೆಚ್ಚಿಸಬೇಕು ಮತ್ತು ಎಲ್ಲಾ ಸ್ತರದ ಸರಕಾರಿ ವಿದ್ಯಾಸಂಸ್ಥೆಗಳನ್ನು ಕನಿಷ್ಠ ಅಂಗೀಕಾರವಾಗುವ ಗುಣಮಟ್ಟಕ್ಕೆ (Standardize to Minimum Acceptable Quality) ಹೆಚ್ಚಿಸಬೇಕು” ಎಂದು ಸರಕಾರಕ್ಕೆ ಸದಿಚ್ಚೆಯ ಸಲಹೆ/ಮನವಿಯೊಂದಿಗೆ ಮುಕ್ತಾಯವಾಯಿತು.

ಲೇಖನ: ಹರೀಶ್ ಕುಲಕರ್ಣಿ, ಬೆಂಗಳೂರು.

Leave a Reply

Your email address will not be published.

This site uses Akismet to reduce spam. Learn how your comment data is processed.