ಬೆಂಗಳೂರು,ಅ.9: ದೇಶದಲ್ಲಿರುವಂತಹ ಎಲ್ಲ ಹಿಂದೂಗಳನ್ನು ಸಂಘಟನೆ ಮಾಡಲು ಇರುವ ಮಾರ್ಗವೆಂದರೆ ಆರ್ ಎಸ್ಎಸ್ ಶಾಖೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ವ್ಯವಸ್ಥಾ ಪ್ರಮುಖ್ ಕಾ.ಶಂ.ಶ್ರೀಧರ್ ಹೇಳಿದರು.
ಆರ್ ಎಸ್ಎಸ್ ಬೆಂಗಳೂರು ಉತ್ತರ ವಿಭಾಗದ ವತಿಯಿಂದ ಬಸವೇಶ್ವರ ನಗರದ ಕುವೆಂಪು ಆಟದ ಮೈದಾನದಲ್ಲಿ ಭಾನುವಾರ ನಡೆದ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಖೆಯಿಂದ ಮಾತ್ರ ಹಿಂದೂ ಸಂಘಟನೆ ಮಾಡಲು ಸಾಧ್ಯ. ಪತ್ರಿನಿತ್ಯ ಒಂದು ಗಂಟೆ ಶಾಖೆಯಲ್ಲಿ ಸೇರುವ ಮೂಲಕ ಶಾರೀರಿಕ, ಬೌದ್ಧಿಕ, ಚಟುವಟಿಕೆ ಮೂಲಕ ಹಿಂದೂಗಳ ಸಂಘಟನೆಯಾಗಬೇಕು. ಇದು ಕೇವಲ ಸಿದ್ಧಾಂತವಲ್ಲ, ಇದು ಸಾಬೀತಾದ ವಿಧಾನ. 97 ವರ್ಷಗಳ ಸಂಘದ ಸುದೀರ್ಘ ಪಯಣದಲ್ಲಿ ಸಂಘದ ಅಪೇಕ್ಷೆಯಂತೆಯೇ ಸಮಾಜದಲ್ಲಿ ಇಂತಹ ಬದಲಾವಣೆ ಕಾಣಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಹಲವು ಸ್ವಯಂ ಸೇವಕರು ಸಮಾಜದ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುತ್ತ ತಮ್ಮ ಛಾಪು ಮೂಡಿಸುವ ಮೂಲಕ ಸಮಾಜದಲ್ಲಿ ಪರಿವರ್ತನೆ ತಂದಿದ್ದಾರೆ. ಸ್ವಯಂ ಸೇವಕರಾಗಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಾ ಹಿಂದೂ ಸಂಘಟನೆ ಮಾಡಲಾಗುತ್ತದೆ. ಇಂತಹ ಕೆಲಸ ಮಾಡಲು ಸಂಘ ಹೊರಟಿದೆ ಎಂದರು.
ಶಾರೀರಿಕ, ಬೌದ್ಧಿಕ ಶಿಕ್ಷಣ ಹಾಗೂ ಅತ್ಯಂತ ಪ್ರಮುಖವಾಗಿ ನಡುವಳಿಕೆ ಶಿಕ್ಷಣ ಪ್ರಾಥಮಿಕ ಶಿಕ್ಷಾ ವರ್ಗದಲ್ಲಿ ಸಿಕ್ಕಿದೆ. ಸಮಾಜದಲ್ಲಿ ಉತ್ತಮವಾಗಿ ಬದುಕಲು ಈ ರೀತಿಯಾದ ಶಿಕ್ಷಣ ಅಗತ್ಯ. ನಾವೆಲ್ಲಾ ಸಮಾಜದಲ್ಲಿ ಉತ್ತಮ ಬದುಕನ್ನ ಕಟ್ಟಿಕೊಳ್ಳಲು ಈ ರೀತಿಯಾದ ಚಟುವಟಿಕೆ ಅತಿ ಮುಖ್ಯವಾಗಿದೆ. ವರ್ಗದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿಕ್ಷಾರ್ಥಿಯು ದೇಶದ ಆಸ್ತಿಯಾಗಬೇಕು. ಅದಕ್ಕೆ ಪೂರಕವಾದ ಶಿಕ್ಷಣ ಆರ್ಎಸ್ಎಸ್ ವರ್ಗದಲ್ಲಿ ದೊರೆತಿದೆ. ಸಂಘ ಪ್ರಾರಂಭವಾದಾಗಿನಿಂದ ಇಂತಹ ಶಿಕ್ಷಣವನ್ನು ನೀಡುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಸಂಘ ತನ್ನ ಕಾರ್ಯಶೈಲಿಯನ್ನ ಬದಲಾಯಿಸಿಕೊಂಡಿದೆ ಎಂದು ವಿವರಿಸಿದರು.
ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು ಮುಖ್ಯಸ್ಥರೂ ಆದ ಪ್ರಾಧ್ಯಾಪಕ ಡಾ.ಎ.ಆರ್.ಸೋಮಶೇಖರ್ ಮಾತನಾಡಿ,ಕಾರ್ಪೋರೇಟ್ ಕಂಪನಿಗಳು ಡಾಲರ್ ಲೆಕ್ಕದಲ್ಲಿ ಹಣ ವೆಚ್ಚಮಾಡಿ ಕಾರ್ಯಗಾರ ಮಾಡುತ್ತಾರೆ. ಆರ್ಎಸ್ಎಸ್ನಲ್ಲಿ ಮಕ್ಕಳಿಗಾಗಿ ಮೌಲ್ಯಯುತ ಶಿಕ್ಷಣವನ್ನು ನೀಡಲಾಗುತ್ತಿದ್ದು, ಇದರಲ್ಲಿ ದೈಹಿಕ ಕ್ಷಮತೆ, ಸಂವಹನ ಕೌಶಲ್ಯ ಅಭಿವೃದ್ಧಿ ಪ್ರಮುಖವಾಗಿದೆ. ಆರ್ಎಸ್ಎಸ್ನಲ್ಲಿ ಮಕ್ಕಳಿಗೆ ನೀಡುವ ಪ್ರಾಥಮಿಕ ಶಿಕ್ಷಾವರ್ಗ ಶಾಲಾ ಮಕ್ಕಳಿಗೆ ಅಗತ್ಯ ಇದೆ ಎಂದರು.
ಕೋವಿಡ್ ಬಂದ ಬಳಿಕ ಮಾನಸಿಕ ಕಾಯಿಲೆಗಳು ಹೆಚ್ಚಾಗಿವೆ. ಇಂತಹ ಕಾಯಿಲೆಗಳಿಗೆ ಶಾರೀರವರ್ಗದಲ್ಲಿ ಶಾರೀರಿಕ ಚಟುವಟಿಕೆಯ ಜೊತೆಗೆ ಆತ್ಮವಿಶ್ವಾಸ ಹೆಚ್ಚಾಗುವಂತಹ ಕಾರ್ಯ ಚಟುವಟಿಕೆಗಳು ನಡೆದಿದ್ದು, ಇದರಿಂದಾಗಿ ಆತ್ಮಸ್ಥೈರ್ಯ ಹಾಗೂ ದೃಢನಿರ್ಧಾರ ತೆಗೆದುಕೊಳ್ಳುವಂತಹ ಸಾಮಥ್ರ್ಯ ಹೆಚ್ಚಾಗಲಿದೆ ಎಂದು ಹೇಳಿದರು.