ಸರಸಂಘಚಾಲಕರ ವಿಜಯದಶಮಿ ಭಾಷಣ

‘ಸಂಘಟಿತ ಸಮಾಜದಿಂದಲೇ ರಾಷ್ಟ್ರೋನ್ನತಿ’

1925 ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಸ್ಥಾಪನೆಯಾಯಿತು. ವಿಜಯದಶಮಿಯ ದಿನದಂದು ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡುವ ಸರಸಂಘಚಾಲಕರು ವಿವಿಧ ರಾಷ್ಟ್ರೀಯ ವಿದ್ಯಮಾನಗಳ ಕುರಿತ ಸಂಘದ ಅಭಿಪ್ರಾಯಗಳನ್ನು ರಾಷ್ಟ್ರದ ಮುಂದಿಡುವುದು ಒಂದು ಪರಂಪರೆಯಾಗಿ ಬೆಳೆದು ಬಂದಿದೆ. 2011ರ ವಿಜಯದಶಮಿಯಂದು ನಾಗಪುರದಲ್ಲಿ ಸರಸಂಘಚಾಲಕರಾದ ಮೋಹನ್ ಜೀ ಭಾಗವತ್ ಮಾಡಿದ ಭಾಷಣದ ಸಾರಾಂಶವನ್ನು ಇಲ್ಲಿ ನೀಡಲಾಗಿದೆ.

86 ವರ್ಷಗಳ ಹಿಂದೆ, ವಿಜಯ ದಶಮಿಯ ದಿನದಂದು ರಾಷ್ಟ್ರೀಯ ಸ್ವಯಂಸೇವಕ ಸಂಘವು ಅಸ್ತಿತ್ವಕ್ಕೆ ಬಂತು. ಆರೆಸ್ಸೆಸ್‌ನ ಸ್ಥಾಪಕರಾದ ಡಾ|| ಕೇಶವ ಬಲಿರಾಂ ಹೆಗಡೇವಾರ್ ಅವರು ಓರ್ವ ಆಜನ್ಮ ದೇಶಭಕ್ತರಾಗಿದ್ದು, ದೇಶದ ಸ್ವಾತಂತ್ರ್ಯ ಮತ್ತು ಜನಜೀವನದ ಉನ್ನತಿಗಾಗಿ ಜನಜಾಗೃತಿ ಹಾಗೂ ಹೋರಾಟ ನಡೆಸಲು ಅವರು ಬದ್ಧರಾಗಿದ್ದರು. ಅಂದು ಅವರು ಸಮಾನವಯಸ್ಕರಾದ ಸಮಾಜದ ಪ್ರಮುಖ ವ್ಯಕ್ತಿಗಳೊಂದಿಗೆ ವಿಚಾರ ವಿನಿಮಯ ನಡೆಸಿ ಅಂದಿನ ಸಮಸ್ಯೆಗಳ ಪರಿಹಾರೋಪಾಯಕ್ಕೆ ಉದ್ಯುಕ್ತರಾಗಿದ್ದರು. ಇವತ್ತು ಕೂಡಾ ನಾವು ದೇಶದ ಮುಂದಿರುವ ಸಮಸ್ಯೆಗಳ ಕುರಿತು ಚರ್ಚಿಸಬೇಕಾಗಿದೆ. ಕಳೆದ ಒಂದು ವರ್ಷದ ವಿದ್ಯಮಾನಗಳು ನಮ್ಮ ಕಳವಳವನ್ನು ಹೆಚ್ಚಿಸುವಂತಿವೆ.

ಜಾಗತಿಕ ವಿದ್ಯಮಾನ

ಜಗತ್ತಿನ ಬಲಿಷ್ಠ ರಾಷ್ಟ್ರಗಳು ತಮ್ಮ ಯಾಜಮಾನ್ಯವನ್ನು ಸ್ಥಾಪಿಸುವ ಬಗ್ಗೆ ಎಲ್ಲ ತಂತ್ರಗಳನ್ನು ಅನುಸರಿಸುತ್ತವೆ. ಅಮೆರಿಕ ಮತ್ತು ಚೀನಾಗಳ ನಡುವೆ ಈಗ ಏರ್ಪಟ್ಟಿರುವ ಸ್ಪರ್ಧೆಯನ್ನು ಆ ಹಿನ್ನೆಲೆಯಲ್ಲಿ ಗಮನಿಸಬಹುದು. ಭಯೋತ್ಪಾದನೆಯ ವಿರುದ್ಧ ಸಮರ ಎನ್ನುವ ಹೆಸರಿನಲ್ಲಿ ಅಮೆರಿಕ ನಡೆಸುತ್ತಿರುವ ಕಾರ್ಯಾಚರಣೆ ನಮ್ಮ ನೆರೆರಾಷ್ಟ್ರ ಪಾಕಿಸ್ತಾನದವರೆಗೆ ಬಂದಿದೆ. ಮಧ್ಯಪರ್ವದ ಕೆಲವು ರಾಷ್ಟ್ರಗಳಲ್ಲಿ ಜನ ಆಳುವ ವರ್ಗದ ಭ್ರಷ್ಟಾಚಾರದ ವಿರುದ್ಧ ದಂಗೆ ಎದ್ದುದು ಅಮೆರಿಕ ಮತ್ತಿತರ ಪಾಶ್ಚಾತ್ಯ ರಾಷ್ಟ್ರಗಳ ಹಿತಾಸಕ್ತಿಗೆ ಪರಕವಾಗಿದೆ. ನಮ್ಮ ಉತ್ತರದ ನೆರೆರಾಷ್ಟ್ರ ಕಮ್ಯೂನಿಸ್ಟ್ ಚೀನಾ ಇನ್ನೊಂದೆಡೆ ತನ್ನ ಪ್ರಾಬಲ್ಯವನ್ನು ವಿಸ್ತರಿಸುತ್ತಿದೆ. ಇದರ ನಡುವೆ ನಾವು ನಿರ್ಲಿಪ್ತವಾಗಿ ಉಳಿಯುವುದು ಕಷ್ಟವಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಬಗ್ಗೆ ಸದಭಿಪ್ರಾಯ ವ್ಯಕ್ತವಾಗುತ್ತಿದ್ದು, ದೇಶದ ಸಾರ್ವಭೌಮತೆ, ಘನತೆ, ಭದ್ರತೆಗಳನ್ನು ದೃಢವಾಗಿ ಇರಿಸಿಕೊಂಡು ನಾವು ಜಗತ್ತಿನಲ್ಲಿ ಪರಸ್ಪರ ವಿಶ್ವಾಸ ಮತ್ತು ಸಹಕಾರದ ವಾತಾವರಣಕ್ಕೆ ಯತ್ನಿಸಬೇಕಾಗಿದೆ. ನಮ್ಮ ನೆರೆರಾಷ್ಟ್ರಗಳು ವಿಶೇಷವಾಗಿ ಆಗ್ನೇಯ, ಏಷ್ಯಾ ದೇಶಗಳು ನಮ್ಮೊಂದಿಗೆ ಆಳವಾದ ಸಾಂಸ್ಕೃತಿಕ ಸಂಬಂಧವನ್ನು ಹೊಂದಿವೆ. ಇವತ್ತಿಗೂ ಆ ದೇಶಗಳ ಜನ ಅದನ್ನು ಸ್ಮರಿಸುತ್ತಾರೆ. ಭಾರತ ಈ ಭಾಗದ ನೇತೃತ್ವ ವಹಿಸಬೇಕೆಂದು ಅವರು ಭಾವಿಸುತ್ತಾರೆ. ಅದಕ್ಕಾಗಿ ಭಾರತ ಅವುಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಬೇಕು. ನೇಪಾಳದಲ್ಲಿ ಸುಭದ್ರ ಸರ್ಕಾರ, ಇರಬೇಕು. ಶ್ರೀಲಂಕಾ ತಮಿಳರ ಕಷ್ಟಗಳು ದೂರವಾಗಿ ಅವರು ಆ ರಾಷ್ಟ್ರದ ಜನ ಜೀವನದಲ್ಲಿ ಸಮಾನರಾಗಿ ಬೆರೆಯುವಂತಾಗ ಬೇಕು. ಬಾಂಗ್ಲಾದೇಶದಿಂದ ಜನರ ಅಕ್ರಮ ಪ್ರವೇಶ, ಗಡಿಯಲ್ಲಿ ಆಕ್ರಮಗಳು ನಡೆಯಬಾರದು. ಟಿಬೆಟನ್ನು ಚೀನಾ ಈಗ ಕೂಡಾ ಅಕ್ರಮಿಸಿಕೊಂಡಿದ್ದರೂ ಕೂಡಾ ಅಲ್ಲಿರುವ ಹಾಗೂ ಭಾರತದಲ್ಲಿರುವ ಟಿಬೆಟಿಯನ್ನರಿಗೆ ನಮ್ಮ ಬೆಂಬಲ, ಸಹಾನುಭೂತಿ ಮುಂದುವರೆಯಬೇಕು.

ಚೀನಾದ ತಂತ್ರಗಳು

ಚೀನಾ ಬಹುತೇಕ ತನ್ನದೇ ಲಾಭಕ್ಕಾಗಿ ಭಾರತದ ಜತೆಗಿನ ಆರ್ಥಿಕ, ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಬೆಳೆಸುವಂತೆ ತೋರಿಸಿಕೊಳ್ಳುತ್ತಿದೆ. ಆದರೆ ಈಚೆಗೆ ಅದು ಏಷ್ಯಾದಲ್ಲಿ ತನ್ನ ಪ್ರಭಾವವನ್ನು ತೋರಿಸುವ ಮಧೆ ಭಾರತದ ವಿರುದ್ಧ ಕೆಲವು ಸೇನಾ ಅತಿಕ್ರಮಣಗಳನ್ನು ಕೂಡಾ ನಡೆಸುತ್ತಿದೆ. ಲೇಹ್-ಲಡಾಖ್‌ಗಳಿಗೆ ಚೀನೀ ಸೈನಿಕರ ಪ್ರವೇಶ, ಭಾರತದ ಬಂಕರ್‌ಗಳ ನಾಶ, ದಕ್ಷಿಣ ಚೀನಾ, ಸಮೀಪ ಸಮುದ್ರದಲ್ಲಿ ಭಾರತದ ಹಡಗುಗಳಿಗೆ ಬೆದರಿಕೆ ಹಾಗೂ ಅಂತರಾಷ್ಟ್ರೀಯ ಸಾಗರ ಪ್ರದೇಶದಲ್ಲಿ ಭಾರತದ ತೈಲ ಶೋಧಕ್ಕೆ ತಡೆ ಅದರ ಕೆಲವು ಉದಾಹರಣೆಗಳು. ಈಶಾನ್ಯ ಭಾರತದ ಉಗ್ರಗಾಮಿಗಳ ಜತೆ ಚೀನಾದ ಸಂಬಂಧವಿದೆ. ಏನಿದ್ದರೂ ನಾವು ೧೯೬೨ರ ಯುದ್ಧದಲ್ಲಿ ಚೀನಾದ ಎದುರು ಅನುಭವಿಸಿದ ಹೀನಾಯ ಸ್ಥಿತಿಗೆ ಇನ್ನೊಮ್ಮೆ ಗುರಿಯಾಗಬಾರದು. ಗಡಿಭಾಗದಲ್ಲಿ ಮೂಲಸವಲತ್ತುಗಳನ್ನು ಉತ್ತಮ ಪಡಿಸಬೇಕು. ಯಾವುದೇ ಸನ್ನಿವೇಶಗಳನ್ನು ಎದುರಿಸಲು ಸೇನೆ ಸದಾ ಬದ್ಧವಾಗಿರಬೇಕು. ಜಾಗತಿಕ ಬೆಂಬಲವೂ ನಮ್ಮ ಕಡೆಗಿರುವಂತೆ ರಾಜತಾಂತ್ರಿಕ ಪ್ರಯತ್ನಗಳು ನಡೆಯಬೇಕು.

ಕಾಶ್ಮೀರದ ಪರಿಸ್ಥಿತಿ  

ಪಾಕಿಸ್ತಾನದೊಂದಿಗೆ ಕೈ ಜೋಡಿಸಿರುವ ಚೀನಾ ಜಮ್ಮು-ಕಾಶ್ಮೀರದ ಉತ್ತರ ಭಾಗದಲ್ಲಿರುವ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಪ್ರವೇಶಿಸಿದೆ. ಅಲ್ಲಿ ಆರು ದೇಶಗಳ ಗಡಿಗಳು ಸೇರುತ್ತಿದ್ದು, ಆ ಪ್ರದೇಶದ ಭೌಗೋಳಿಕ ಮಹತ್ವವನ್ನು ನಾವು ಮರೆಯಬಾರದು. ಪಾಕಿಸ್ತಾನದ ಕುಮ್ಮಕ್ಕಿನಿಂದ ಭಯೋತ್ಪಾದಕರು ಜಮ್ಮು-ಕಾಶ್ಮೀರಕ್ಕೆ ನುಗ್ಗುತ್ತಲೇ ಇದ್ದಾರೆ. ಪಾಕಿಸ್ತಾನದ ಸಂವಿಧಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ (Pಔಏ) ಉನ್ನತ ನ್ಯಾಯಾಲಯಗಳೇ ಕಾಶ್ಮೀರವು ಪಾಕಿಸ್ತಾನದ ಭಾಗವೆಂದು ಪರಿಗಣಿಸಿಲ್ಲ. ಆದರೂ ನಮ್ಮ ಕೇಂದ್ರ ಸರ್ಕಾರ ಮತ್ತು ಅದು ನೇಮಿಸಿದ ಸಮಿತಿಗಳು ಕಾಶ್ಮೀರವು ಒಂದು ರಾಜಕೀಯ ಸಮಸ್ಯೆ ಎಂದು ಹೇಳುತ್ತಲೇ ಇವೆ. ಇದು ನಮ್ಮ ದೌರ್ಬಲ್ಯದ ಪರಿಣಾಮ ಎನ್ನಬಹುದು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಲ್ಲಿನ ದೇಶಪ್ರೇಮಿ ಶಕ್ತಿಗಳಿಗೆ ಬಲ ತುಂಬಬೇಕು. ನಿರ್ವಸಿತರಾದ ಕಾಶ್ಮೀರಿ ಹಿಂದುಗಳು ಅಲ್ಲೇ ನೆಲೆಸುವಂತಾಗಬೇಕು. ರಾಜ್ಯದಲ್ಲಿ ವಿವಿಧ ಜಾತಿ-ವಗಗಳು ಮತ್ತು ಜಮ್ಮು ಹಾಗೂ ಲಡಾಖ್ ಪ್ರದೇಶಗಳ ವಿರುದ್ಧ ತಾರತಮ್ಯ ನಿಲ್ಲಬೇಕು. ಜಮ್ಮು-ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗುವಲ್ಲಿ ತಡೆಯಾಗಿ ಪರಿಣಮಿಸಿರುವ ಸಂವಿಧಾನದ ೩೭೦ ನೇ ವಿಧಿಯನ್ನು ರದ್ದು ಪಡಿಸಬೇಕು. Pಔಏ ಮರಳಿ ಭಾರತಕ್ಕೆ ಸೇರಬೇಕೆನ್ನುವ ೧೯೯೪ರ ಸಂಸತ್‌ನ ಅವಿರೋಧ ನಿರ್ಣಯವು ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ತಳಹದಿಯಾಗಬೇಕು.

ಆರ್ಥಿಕ ನೀತಿ

ಸ್ಪಷ್ಟವಾದ ದೃಷ್ಟಿಕೋನದ ಅಭಾವವು ದೇಶದ ಆರ್ಥಿಕ ನೀತಿ ಮತ್ತು  ಚಟುವಟಿಕೆಗಳಲ್ಲಿ ಕೂಡಾ ಎದ್ದು ಕಾಣುತ್ತದೆ. ಪಾಶ್ಚಾತ್ಯ ಆರ್ಥಿಕ ಮಾದರಿಯು ನಮ್ಮಲ್ಲಿ ವಿಫಲವಾದದ್ದು ಜಗತ್ತಿಗೇ ಗೊತ್ತು. ಈ ನಷ್ಟದ ಹೊರೆ ಹೊರಬೇಕಾದವರು ಸಾಮಾನ್ಯ ಜನ. ಒಂದೆಡೆ ಬೆಲೆಗಳು ಆಕಾಶಕ್ಕೇರಿದಾಗ ಇನ್ನೊಂದೆಡೆ ಸಂಸದರು, ಶಾಸಕರು ತಮ್ಮ ವೇತನಗಳನ್ನು ಆಗಾಗ ಏರಿಸಿಕೊಳ್ಳುತ್ತಿದ್ದಾರೆ. ಬಡವರು ಮತ್ತಷ್ಟು ಬಡವರಾಗುತ್ತಿರುವಾಗ ನಾವು ಬಡತನದ ರೇಖೆಯನ್ನು ಸ್ಥಳಾಂತರಿಸುತ್ತಿದ್ದೇವೆ. ಕೃಷಿ ಭೂಮಿ, ಗೋಮಾಳ, ಅರಣ್ಯ ಭೂಮಿಗಳನ್ನು ರಕ್ಷಿಸುವ ಬದಲು ವಿಶೇಷ ಆರ್ಥಿಕ ವಲಯ (ಎಸ್.ಇ.ಝೆಡ್) ಗಳನ್ನು ನಿರ್ಮಿಸಿ ರೈತರನ್ನು ಅಲ್ಲಿಂದ ಹೊರಹಾಕುತ್ತಿದ್ದೇವೆ. ಇಂಧನದ ವಿಷಯದಲ್ಲಿ ನಮ್ಮ ಭೂಗರ್ಭ, ಜೈವಿಕ, ಥೋರಿಯಂ, ಮೂಲದ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬದಲು ಪಾಶ್ಚಾತ್ಯ ದೇಶಗಳು ಕೈ ಬಿಡುತ್ತಿರುವ ಅಣುಶಕ್ತಿಗೆ ಸಂಬಂಧಿಸಿ ದುಬಾರಿಯಾದ ವಿದೇಶಿ ಷರತ್ತುಗಳಿಗೆ ತಲೆಬಾಗುತ್ತಿದ್ದೇವೆ. ನಮ್ಮ ಚಿಲ್ಲರೆ ವ್ಯಾಪಾರಿಗಳನ್ನು ಸಶಕ್ತಗೊಳಿಸಿ ಸ್ಪರ್ಧೆಯನ್ನು ಎದುರಿಸುವಂತೆ ಮಾಡುವ ಬದಲು ಚಿಲ್ಲರೆ ವ್ಯಾಪಾರದ ಕ್ಷೇತ್ರಕ್ಕೆ ವಿದೇಶಿ ಬಂಡವಾಳ ಹೂಡಿಕೆಯನ್ನು ಆಹ್ವಾನಿಸುತ್ತಿದ್ದೇವೆ, ಶಿಕ್ಷಣ ದುಬಾರಿಯಾಗುತ್ತಿದೆ. ಈ ಸ್ಥಿತಿಯಲ್ಲಿ ಬಡವರು ಜೀವಿಸುವುದೆಂತು ?  ವಿದೇಶಿ ಬ್ಯಾಂಕುಗಳ ರಹಸ್ಯಖಾತೆಗಳಲ್ಲಿರುವ ನಮ್ಮವರ ಕಪ್ಪುಹಣವನ್ನು ವಾಪಸು ತಂದರೆ ತಮ್ಮ ಕಷ್ಟ ದೂರವಾದಿತೇನೋ ಎಂದು ಸಾಮಾನ್ಯ ಜನ ಬಯಸುತ್ತಿದ್ದರೆ ಸರ್ಕಾರ ಅದಕ್ಕೆ ಅಡ್ಡಗಾಲಿಡುತ್ತಿದೆ.

ಭಯೋತ್ಪಾದನೆ :

ಅಧ್ಯಯನದ ಕೊರತೆ ಮತ್ತು ಅಜಾಗ್ರತೆಯಿಂದ ಕೇಂದ್ರ ಗೃಹ ಸಚಿವರು ಈಚೆಗೆ, ದೇಶದ ವಿವಿಧ ಉಗ್ರಗಾಮಿಗಳ ನಡುವೆ ಮಾವೋವಾದಿಗಳು ಅಥವಾ ನಕ್ಸಲೀಯರು ಅತ್ಯಂತ ಅಪಾಯಕಾರಿಗಳೆಂದು ಹೇಳಿದರು. ಅದು ನಿಜವಾದರೆ ಈ ಅತ್ಯಂತ ಅಪಾಯಕಾರಿಗಳ ಜತೆ ಸಂಬಂಧ  ಹೊಂದಿರುವರೆಂದು ರಾಜ್ಯ ಸರ್ಕಾರ ಸಂದೇಹಪಟ್ಟ ಒಬ್ಬ ವ್ಯಕ್ತಿಯನ್ನು ಯೋಜನಾ ಆಯೋಗದ ಸಮಿತಿಯೊಂದಕ್ಕೆ ನೇಮಿಸಿ ರುವುದೇಕೆ ? ಇದೆಲ್ಲದರ ನಡುವೆ ತಪ್ಪು ಮಾಹಿತಿಯನ್ನು ಹಬ್ಬಿಸಿ ಜನರ ನಡುವೆ ಗೊಂದಲವನ್ನು ಬಿತ್ತುವ ಪ್ರವೃತ್ತಿ ಕೂಡಾ ಬೆಳೆಯುತ್ತದೆ. ಮಾಜಿ ಪ್ರಧಾನಿಯ ಹಂತಕರಿಗೆ ವಿಧಿಸಿದ ಮರಣ ದಂಡನೆಯನ್ನು ರದ್ದುಪಡಿಸಬೇಕೆಂಬ ಬೇಡಿಕೆಗೆ ರಾಜಕೀಯ ಬೆಂಬಲ ವ್ಯಕ್ತವಾಗುತ್ತಿರುವುದಕ್ಕೆ ಇಂತಹ ಚಿಂತನೆಯೇ ಕಾರಣ. ಸಂಸತ್ ದಾಳಿಯ ಸೂತ್ರಧಾರಿ ಅಫ್ಜಲ್ ಗುರುವಿನ ಮರಣ ದಂಡನೆಯನ್ನು ರದ್ದುಪಡಿಸಬೇಕೆನ್ನುವ ನಿರ್ಣಯವನ್ನು ಜಮ್ಮು -ಕಾಶ್ಮೀರ ವಿಧಾನಸಭೆಯಲ್ಲಿ ಮಂಡಿಸಲು ಅವಕಾಶ ನೀಡಲಾಯಿತು. ೧೯೯೪ರಲ್ಲಿ ಸಂಸತ್ ಅವಿರೋಧವಾಗಿ ಅಂಗೀಕರಿಸಿದ ನಿರ್ಣಯದ  ಚರ್ಚೆಗೆ ಈ ವಿಧಾನಸಭೆ ಅವಕಾಶ ನೀಡಿಲ್ಲ. ಅಂದರೆ ನಮ್ಮ ದೇಶದ ರಾಜಕೀಯ ಚಟುವಟಿಕೆಗಳ ಹಿಂದೆ ಸ್ಪಷ್ಟವಾದ ರಾಷ್ಟ್ರೀಯ ದೃಷ್ಟಿಕೋನ ಇಲ್ಲವೆಂಬುದು ಇದರಿಂದ ಸಾಬೀತಾಗುತ್ತದೆ.

ಭ್ರಷ್ಟಾಚಾರ ವಿರೋಧಿ ಆಂದೋಲನ

ಹೀಗೆ ಜನರ ಸಿಟ್ಟಿನ ಕಟ್ಟೆ ಒಡೆಯುತ್ತಿರುವಾಗ ಈ ಭ್ರಷ್ಟಾಚಾರ ವಿರೋಧಿ ಆಂದೋಲನವು ಆರಂಭವಾಯಿತು. ಜನ ಅದನ್ನು ಬೆಂಬಲಿಸಿದರು. ವಿದೇಶಿ ಬ್ಯಾಂಕ್‌ಗಳಿಂದ ಕಪ್ಪುಹಣದ ಮರಳಿಕೆ, ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿ ಶಾಸನವನ್ನು ರೂಪಿಸಿ ಜಾರಿಗೊಳಿಸುವುದು. ಪ್ರಧಾನಿ ಮತ್ತಿತರ ಉನ್ನತಸ್ಥಾನದಲ್ಲಿರುವವರನ್ನು ಆ ಶಾಸನದ ವ್ಯಾಪ್ತಿಗೆ ತರುವುದು ಇವುಗಳಲ್ಲಿ ಜನರ ಆಶೋತ್ತರ ವ್ಯಕ್ತವಾಗಿದೆ. ಜನರ ಒತ್ತಡಕ್ಕೆ ಸರ್ಕಾರ ಮಣಿಯಿತಾದರೂ ಪೂರ್ಣ ಯಶಸ್ಸು ದೂರದಲ್ಲೇ ಇದೆ. ಭ್ರಷ್ಟಾಚಾರದ ಪ್ರಕರಣಗಳಲ್ಲಿ  ಕೆಲವರು ಬಲಿಪಶುಗಳಾದರೆ ಬೆಳಕಿಗೆ ಬಾರದ ಬಲಿಷ್ಠರು ಹೊರಗೆ ಉಳಿದಿದ್ದಾರೆ. ಈಗ ಎಲ್ಲ ಸಂಘಟನೆಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಮರೆತು ಸಂಘಟಿತ ಹೋರಾಟವನ್ನು ನಡೆಸಬೇಕಾಗಿದೆ. ಕೆಲವು ವಿದೇಶಿ ರಹಸ ಸಂಸ್ಥೆಗಳು ಅಥವಾ ಕ್ರಿಮಿನಲ್ ಗುಂಪುಗಳು ದೊಡ್ಡ ಪ್ರಕರಣಗಳ ಹಿಂದಿರುವುದು ಸಾಬೀತಾಗಿದೆ. ಅಂದರೆ ಇದು ದೇಶದ ಸಾರ್ವಭೌಮತೆ, ಭದ್ರತೆಗಳಿಗೇನೇ ಸವಾಲೆಸೆದಿದೆ. ಆದ್ದರಿಂದ ನಾವು ಬಂಡವಾಳಕ್ಕೆ ಹಪಹಪಿಸಿ ಸಂಶಯಗ್ರಸ್ತ ಸಂಸ್ಥೆಗಳಿಗೆ ಆಹ್ವಾನ ನೀಡಬಾರದು. ದೇಶಪ್ರೇಮದ ಸಂಕೇತಗಳಾದ   ವಂದೇ ಮಾತರಂ ಮತ್ತು ಭಾರತಮಾತೆ ಯನ್ನು ಆಕ್ಷೇಪಿಸುವ ಪ್ರಕರಣಗಳನ್ನು ಇನ್ನೂ ಸಹಿಸಲಾಗದು. ಅಲ್ಪಸಂಖ್ಯಾತರ ಹೆಸರಿನಲ್ಲಿ ಸಂಕುಚಿತ, ಮೂಲಭೂತವಾದಿ, ಪ್ರತ್ಯೇಕತಾವಾದಿ ಪ್ರವೃತ್ತಿಗಳಿಗೆ ಅವಕಾಶ ಸಲ್ಲದು.

ಭ್ರಷ್ಟಾಚಾರದ ವಿರುದ್ಧ ಎಲ್ಲಾ ಹೋರಾಟಗಳಲ್ಲಿ ಆರೆಸ್ಸೆಸ್ ಸ್ವಯಂಸೇವಕರು ತಮ್ಮ ಗುರುತನ್ನು ಹೇಳಿಕೊಳ್ಳದೆ ಭಾಗವಹಿಸುತ್ತಿದ್ದಾರೆ. ಆದರೆ ಕೇವಲ ಕಾನೂನಿನಿಂದ ಭ್ರಷ್ಟಾಚಾರ ತೊಲಗುತ್ತದೆಂದೂ ಯಾರೂ ತಿಳಿಯಬಾರದು. ಭ್ರಷ್ಟಾಚಾರಕ್ಕೆ ನೀರೆರೆಯುವ ವ್ಯವಸ್ಥೆಯಲ್ಲಿ ನಾವು ಮೂಲಭೂತ ಬದಲಾವಣೆಗಳನ್ನು ತರಬೇಕಾಗಿದೆ. ಅದಕ್ಕಾಗಿ ಆಡಳಿತವು ಪಾರದರ್ಶಕವಾಗಬೇಕು. ಸಾಂಸ್ಕೃತಿಕ ಮೌಲ್ಯಗಳು ಬೆಳಗಬೇಕ. ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತಂದು ಅಲ್ಲಿ ಹಣ ಮತ್ತು ಕ್ರಿಮಿನಲ್‌ಗಳ ಆಟ ನಿಲ್ಲಬೇಕು. ತೆರಿಗೆ ವ್ಯವಸ್ಥೆಯಲ್ಲಿ ಸುಧಾರಣೆ ಬರಬೇಕು. ಶಿಕ್ಷಣದ ವಾಣಿಜ್ಯೀಕರಣ ನಿಲ್ಲಬೇಕು. ಇದರೊಂದಿಗೆ ಸಮಾಜದಲ್ಲಿ ಸಾಮಾಜಿಕ ಜವಾಬ್ದಾರಿ, ಸದಾಚಾರ, ಸಮಾಜ ಸೇವೆಯಂತಹ ಮೌಲ್ಯಗಳನ್ನು ಬೆಳೆಸಬೇಕು. ಜನ ಜೀವನದಲ್ಲಿ ನೈತಿಕತೆ ಬಂದರೆ ಭ್ರಷ್ಟಾಚಾರ ದೂರವಾಗಲು ಸಾಧ್ಯ. ಆರೆಸ್ಸೆಸ್ ಈ ಅಂಶದತ್ತ ಗಮನ ಕೊಡುತ್ತಿದೆ. ಆದರೆ ಈಚಿನ ಆಂದೋಲನದ ವೇಳೆ ಸರ್ಕಾರದ ಕೆಲವು ಉನ್ನತ ನಾಯಕರ ವರ್ತನೆಯ ಅಚ್ಚರಿ ಮತ್ತು ಕಳವಳ ಮೂಡಿಸುವಂತಿತ್ತು. ನಮ್ಮದೇ ಸರ್ಕಾರ ಜನರ ವಿರುದ್ಧ ನಡೆಸಿದ ಬಲಪ್ರಯೋಗ, ಉದ್ಧಟತನ ಮತ್ತು ವಂಚನೆಯ ತಂತ್ರಗಳು ಆಕ್ಷೇಪಾರ್ಹವಾಗಿದ್ದವು. ಇದರಲ್ಲಿ ರಾಷ್ಟ್ರದ ಹಿತಾಸಕ್ತಿಗಳು ಹಿನ್ನೆಲೆಗೆ ಸರಿದು ರಾಜಕೀಯದ ಅಧಿಕಾರವೇ ಮುಖ್ಯವಾದಂತಿತ್ತು. ಇಂತಹ ರಾಜಕೀಯ ಶಕ್ತಿಗಳ ಕೈಯಲ್ಲಿ ದೇಶದ ಭವಿಷ್ಯ ಸುರಕ್ಷಿತವೇ? ಅಲ್ಲವೇ? ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಂತಾಗಿದೆ.

ಈಶಾನ್ಯ ಭಾರತದ ಸಮಸ್ಯೆ :

ಈಶಾನ್ಯ ಭಾರತದ ಜನರ ನೋವು ಏನೆಂಬುದನ್ನು ನಮ್ಮ ರಾಜಕೀಯ ಧಣಿಗಳು ಇನ್ನಾದರೂ ಅರ್ಥವಿಸಿಕೊಳ್ಳಬೇಕು. ಅಲ್ಲಿನ ಬಹಳಷ್ಟು ಉಗ್ರಗಾಮಿ ಸಂಘಟನೆಗಳು ಶಿಥಿಲಗೊಂಡಿದ್ದರೂ ಕೂಡಾ ಅವುಗಳನ್ನು ಮಾತುಕತೆಗೆ ಕರೆಯುವ ಮೂಲಕ ಕೇಂದ್ರ ರಾಜ್ಯ ಸರ್ಕಾರಗಳು ಅವುಗಳಿಗೆ ಜೀವ ತುಂಬುತ್ತಿವೆ. ಉಗ್ರಗಾಮಿ ಚಟುವಟಿಕೆಗಳು ಅಲ್ಲಿ ಅನಿರ್ಬಂಧಿತವಾಗಿ ನಡೆಯುತ್ತಿದ್ದು, ಸರ್ಕಾರಗಳು ಕ್ರಮ ಕೈಗೊಳ್ಳುತ್ತಿಲ್ಲ. ದೌರ್ಜನ್ಯದ ಕಾರಣ ರಿಯಾಂಗ್ ಬುಡಕಟ್ಟಿನ ಜನ ಮಿಜೋರಾಂನಿಂದ ತ್ರಿಪುರಕ್ಕೆ ವಲಸೆ ಹೋಗಿದ್ದು, ಅಳಿವಿನ ಅಂಚಿನಲ್ಲಿದ್ದಾರೆ. ಬಾಂಗ್ಲಾದೇಶಿಗರ ಅಕ್ರಮ ಪ್ರವೇಶವು ಅಸ್ಸಾಂನಲ್ಲಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿರುವಾಗ ಕೇಂದ್ರ ಸರ್ಕಾರ ಬಾಂಗ್ಲಾಕ್ಕೆ ಕೆಲವು ಭೂಪ್ರದೇಶವನ್ನು ಬಿಟ್ಟುಕೊಡುವ ತರಾತುರಿಯಲ್ಲಿದೆ. ಸಮಸ್ಯೆಯನ್ನು ಸರಿಯಾಗಿ ತಿಳಿದುಕೊಳ್ಳದಿರುವುದು ಅದರ ಪರಿಹಾರಕ್ಕೆ ಅಲಕ್ಷ್ಯ, ಸ್ಪಷ್ಟವಾದ ರಾಷ್ಟ್ರೀಯ ದೃಷ್ಟಿಕೋನ ಇಲ್ಲದಿರುವುದು ಮತ್ತು ಎಲ್ಲವನ್ನು ರಾಜಕೀಯ ಲಾಭದ ನೆಲೆಯಿಂದ ನೋಡುವುದು ಸಮಸ್ಯೆಗಳನ್ನು ಉಲ್ಬಣಗೊಳ್ಳುವಂತೆ ಮಾಡಿವೆ.

ಕೋಮುವಾದ ಮತ್ತು ಹಿಂಸಾಚಾರ ತಡೆ ಮಸೂದೆ.

ಕಳೆದ ಸೆಪ್ಟೆಂಬರ್ ೧೦ರಂದು ಜರುಗಿದ ಸಭೆಯಲ್ಲಿ ರಾಷ್ಟ್ರೀಯ ಭಾವೈಕ್ಯ ಮಂಡಳಿಯು (ಎನ್‌ಐಸಿ) ಪ್ರಸ್ತಾವಿತ ಕೋಮುವಾದ ಮತ್ತು ಹಿಂಸಾಚಾರ ತಡೆ ಮಸೂದೆಯ ಕುರಿತು ಚರ್ಚಿಸಿತು. ಹೆಚ್ಚಿನ ಸದಸ್ಯರು ಅದನ್ನು ಸ್ಪಷ್ಟವಾಗಿ ವಿರೋಧಿಸಿದರು. ಪರಿಷ್ಕೃತ ಕರಡು ಪ್ರತಿಯನ್ನು ಸಿದ್ಧಪಡಿಸಿ ಚರ್ಚೆಗೆ ಮಂಡಿಸುವುದಾಗಿ ಪ್ರಧಾನಿ ಭರವಸೆ ನೀಡಿದರು. ಆದರೆ ಮಂಡಿಸಿದ ಮಸೂದೆಯತ್ತ ಒಮ್ಮೆ ಕಣ್ಣು ಹಾಯಿಸಿದರೆ ಇದು ಎಂತಹ ವಿನಾಶಕಾರಿ ಮನಸ್ಸು ಮತ್ತು ವಿಕೃತ ಸಿದ್ದಾಂತದ ಫಲ, ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಮೂಲಕ ಇದು ಯಾವ  ರೀತಿಯಲ್ಲಿ ನಮ್ಮ ಸಂವಿಧಾನಕ್ಕೇನೇ ಅಪಚಾರ ಎಸಗಬಲ್ಲದು ಎಂದು ಕಳವಳ ಮೂಡಿಸುತ್ತದೆ. ಈ ನಡುವೆ ಮಸೂದೆಯನ್ನು ಸಿದ್ಧಪಡಿಸಿದ ರಾಷ್ಟ್ರೀಯ ಸಲಹಾ ಮಂಡಳಿ (ಎನ್‌ಎಸಿ)ಯ ಸಾಂವಿಧಾನಿಕ ಸ್ಥಾನಮಾನ ಏನು ಎಂಬುದು ಯಾರಿಗೂ ಗೊತ್ತಿರುವಂತಿಲ್ಲ. ಕುತೂಹಲದ ಸಂಗತಿ ಎಂದರೆ ಆಳುವ ಯುಪಿಎ ಮೈತ್ರಿಕೂಟದ ಪ್ರಮುಖ ಪಕ್ಷದ ಅಧ್ಯಕ್ಷೆಯೇ ಎನ್‌ಎಸಿ ಅಧ್ಯಕ್ಷೆ ಕೂಡ ಆಗಿದ್ದಾರೆ. ದೇಶದಲ್ಲಿ ಶಾಶ್ವತ ಅಶಾಂತಿಯನ್ನು ಹುಟ್ಟುಹಾಕಬಹುದಾದ ಇಂತಹ ಮಸೂದೆ ಆಕೆಯ ನೇತೃತ್ವದಲ್ಲಿ ಹೇಗೆ ಬದ್ಧಗೊಂಡಿತೆಂದು ಯಾರಾದರೂ ಕೇಳದೆ ಇರಲಾರರು. ಎನ್‌ಎಸಿಯ ಕೆಲವು ಸದಸ್ಯರು ಸಂಶಯಾಗ್ರಸ್ತರು. ಮತ್ತವರ ಸಾಚಾತನವನ್ನು ರಾಷ್ಟ್ರದ ಅತ್ಯುನ್ನತ ನ್ಯಾಯಾಲಯ ಪ್ರಶ್ನಿಸಿದೇ ಎಂಬುದು ನಿಜವೇ ? ನಮ್ಮ ದೇಶವನ್ನು ಸಚಿವ ಸಂಪುಟ ಆಳುತ್ತದೆಯೇ ಅಥವಾ ಇಂತಹ ರಾಷ್ಟ್ರ ವಿರೋಧಿ ಮತ್ತು ವಿಕೃತ ಮನಸ್ಸುಗಳು ಆಳುತ್ತಿವೆಯೇ ಎನಿಸದಿರದು. ದೇಶವಿನ್ನೂ ಸ್ವತಂತ್ರವಾಗಿಲ್ಲವೇ ? ಆ ಮಸೂದೆ ದೇಶದ ಒಕ್ಕೂಟ ವ್ಯವಸ್ಥೆಯನ್ನೇ ಮುರಿಯುವಂತಿದ್ದು. ರಾಜ್ಯ ಸರ್ಕಾರವೊಂದರ ವಿರುದ್ಧ ಅಂತಹ ಆರೋಪ ಬಂದರೆ ಸಾಕು, ಕೇಂದ್ರ ಸರ್ಕಾರ ಅದನ್ನು ವಜಾ ಗೊಳಿಸಬಹುದು. ಮಸೂದೆಯ ಅಪ್ಪಟ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ರಾಜ್ಯದ ಮುಖ್ಯಮಂತ್ರಿಯನ್ನು ಓರ್ವ ಸಾಮಾನ್ಯ ಸರ್ಕಾರಿ ನೌಕರನ ಮಟ್ಟಕ್ಕೆ ಇಳಿಸಿದೆ. ವಜಾದ ಭಯದಲ್ಲಿ ಮುಖ್ಯಮಂತ್ರಿಗಳು ಕೈಗೊಂಬೆಗಳಾಗುವಂತಿದೆ. ಇದು ದೇಶದ ಜನರ ಮೇಲೆ ಹಿಂಬಾಗಿಲಿನಿಂದ ಶಾಶತ ತುರ್ತು ಪರಿಸ್ಥಿತಿಯನ್ನು ಹೇರುವ ಹುನ್ನಾರವಲ್ಲವೇ ? ಒಬ್ಬ ವ್ಯಕ್ತಿ, ಸಂಘಟನೆ, ಪಕ್ಷ ಅಥವಾ

ಸರ್ಕಾರದ ವಿರುದ್ಧ ಯಾರಾದರೂ ಒಂದು ಆರೋಪ ಹೇರಿಸಿದ್ದರೆ ಸಾಕು, ಅದು ಅವರ ಕುತ್ತಿಗೆಗೆ ಸುತ್ತಿದಂತೆಯೇ ಇದು ನ್ಯಾಯದ ಪರಿಕಲ್ಪನೆಗೆ ಬಗೆಯುವ ದ್ರೋಹವಲ್ಲವೇ ? ಮಾನಸಿಕ ಹಿಂಸೆ (ಒeಟಿಣeಟ ಖಿuಡಿಛಿhuಡಿe) ಎಂಬಂತಹ ಕಾಲ್ಪನಿಕ ಅಪರಾಧ ಕೂಡ ಅಲ್ಲಿದೆ. ವಿಕೃತ ಮನಸ್ಸುಗಳ ಸೃಷ್ಟಿಯಾದ ಇಂತಹ ನ್ಯಾಯ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ ವಿರೋಧಿಯಾದ ಶಾಸನವು ಎಂದಾದರೂ ಪರಿಶೀಲನೆಗೆ ಅರ್ಹವೆನಿಸಬಹುದೆ ? ಇದು ರಾಷ್ಟ್ರೀಯ ಏಕತೆಯ ಭಾವನೆಯನ್ನು ಧ್ವಂಸಗೊಳಿಸಿ ದೇಶದ ನಾಗರೀಕರನ್ನು ವಿಭಜಿಸುತ್ತದೆ. ಒಟ್ಟಿನಲ್ಲಿ ರಾಷ್ಟ್ರದ ಹಿತಾಸಕ್ತಿU ಪೂರ್ತಿ ವಿರುದ್ಧವಾಗಿದೆ. ಸಂಸತ್ ಮತ್ತು ಸರ್ಕಾರಗಳು ತಮಗೆ ರಕ್ಷಣೆ ನೀಡುತ್ತವೆ, ಜನರ ನಡುವೆ ಪ್ರೀತಿ ಮತ್ತು ನ್ಯಾಯಗಳನ್ನು ಪೋಷಿಸುತ್ತವೆ ಎಂದು ನಿರೀಕ್ಷಿಸುವ ಜನತೆ ಈ ಕರಡು ಮಸೂದೆಯ ಚರ್ಚೆಗೇನೇ ಬಿಡಬಾರದು, ಅದನ್ನು ಪೂರ್ತಿಯಾಗಿ ತಿರಸ್ಕರಿಸಬೇಕು. ಅಲ್ಪಸಂಖ್ಯಾತರೆನ್ನುವವರಿಗೆ ಭದ್ರತೆ ಮತ್ತು ನ್ಯಾಯಗಳನ್ನು ಒದಗಿಸಬೇಕೆಂದರೆ ಅದು ಕಾನೂನು ಹಾಗೂ ಸಮಾಜದಲ್ಲಿನ ಸದಭಿಪ್ರಾಯಗಳಿಂದ ಮಾತ್ರ ಸಾಧ್ಯ. ಬದಲಾಗಿ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತರುವಂತಹ ಮೇಲಿನ ಮಸೂದೆಯನ್ನು ಯಾವುದೇ ರೂಪದಲ್ಲಿ ತಂದಲ್ಲಿ ಜನತೆಯ ತೀವ್ರ ವಿರೋಧವನ್ನು ಎದುರಿಸಬೇಕಾದೀತು. ಏಕೆಂದರೆ ಇದರ ರೂಪದಲ್ಲಿ ಬದಲಾವಣೆ ಆದರೂ ಕೂಡಾ ಈ ಪ್ರಯತ್ನದ ಹಿಂದೆ  ರಾಷ್ಟ್ರ ವಿರೋಧಿ ಮನೋಭಾವದ ಪಿತೂರಿ ಇದೆ. ಎನ್ನುವುದಕ್ಕೆ ಮಸೂದೆಯ ಕರಡು ಪ್ರತಿ ದೊಡ್ಡ ಪುರಾವೆಯಾಗಿದೆ.

ಸಂಘಟಿತ ಸಜ್ಜನರು, ಸಮಾಜವೇ ಪರಿಹಾರ :

ಈ ಹಂತದಲ್ಲಿ ನಮ್ಮ ಸಮಾಜ ದಮನಕಾರಿ ಮತ್ತು ಅಪಾಯಕಾರಿ ಪ್ರವೃತ್ತಿಗಳನ್ನು ದಿಟ್ಟವಾಗಿ ಎದುರಿಸಿ ಮುನ್ನಡೆಯಬೇಕಾಗಿದೆ ದೇವತೆಗಳ  ಸಾಮೂಹಿಕ ಶಕ್ತಿಯ ನಡುವೆ ಅವತಾರವೆತ್ತಿದ ದುರ್ಗಾದೇವಿ ನಮಗೆ ಸ್ಪೂರ್ತಿಯಾಗಬೇಕು ಅದೇ ಬಗೆಯ ಸಾಮೂಹಿಕ ಪ್ರಯತ್ನ ಹಿಂದೂ ಸಮಾಜದಿಂದ ಇಂದು ನಡೆಯಬೇಕಾಗಿದೆ. ಎಲ್ಲರ ಕಲ್ಯಾಣಕ್ಕೆ ಬದ್ಧರಾದ ದೈವಭೀರು ಸಜ್ಜನರು ಸಂಘಟಿತರಾಗಬೇಕೆಂದು ಸಂತ ಜ್ಞಾನೇಶ್ವರರು ನೀಡಿದ ಕರೆಯಂತೆ ಸ್ವತಂತ್ರ ಶಕ್ತಿಶಾಲಿ ಮತ್ತು ವಿಶ್ವ ಗುರುವಾದ ಭಾರತವನ್ನು ಕಟ್ಟಬೇಕಾಗಿದೆ. ಪ್ರತಿ ಹಳ್ಳಿ ಪಟ್ಟಣಗಳಿಂದಲೂ ಅಂತಹ ಜನ ಎದ್ದು ಬರಬೇಕಾಗಿದೆ. ಹಿಂದೂಗಳನ್ನು ಸಂಘಟಿಸುವ ಮೂಲಕ ಸಮಾಜಮುಖಿ ಚಿಂತನೆ ಮತ್ತು ನಡತೆಗಳನ್ನು ಬೆಳೆಸುವುದ ಆರೆಸ್ಸೆಸ್‌ನ ಧ್ಯೇಯವಾಗಿದೆ. ವಿವೇಕಿಗಳಾದ ಸಹೃದಯರ ಸಂಘಟನೆಯ ಉದ್ದೇಶದಿಂದ ನಾವು ನಿಮ್ಮ ಮುಂದೆ ನಿಂತಿದ್ದೇವೆ. ನಾವು ಅದರಲ್ಲಿ ಭಾಗಿಗಳಾಗಿ ನಿರ್ಭೀತ, ದೇಶಪ್ರೇಮಿ ಗಳ ಸಮಾಜವನ್ನು ನಿರ್ಮಿಸೋಣ. ಸಂಘದ ಪ್ರತಿಯೊಬ್ಬ ಸ್ವಯಂಸೇವಕ ತನ್ನ ಈ ಜವಾಬ್ದಾರಿಯನ್ನು ಅರಿತುಕೊಳ್ಳಲಿ. ನಮ್ಮ ಹೃದಯಗಳು ರಾಷ್ಟ್ರಭಕ್ತಿಯಿಂದ ತುಂಬಿರಲಿ. ಎಲ್ಲ್ಲ ಸಮಸ್ಯೆಗಳನ್ನು ಮೆಟ್ಟಿ ದೇಶ ಒಂದಾಗಿ ನಿಂತರೆ ರಾಷ್ಟ್ರಕ್ಕೆ ಲಭಿಸಲಿದೆ ವಿಜಯ.

 

1 thought on “ಸರಸಂಘಚಾಲಕರ ವಿಜಯದಶಮಿ ಭಾಷಣ : ‘ಸಂಘಟಿತ ಸಮಾಜದಿಂದಲೇ ರಾಷ್ಟ್ರೋನ್ನತಿ’

  1. alarming call to the nation and its citizens.
    Thanks to samvada website for publishing jist of RSS Chief’s annual speech.

Leave a Reply

Your email address will not be published.

This site uses Akismet to reduce spam. Learn how your comment data is processed.