ಶಿವಮೊಗ್ಗ : ವಿಕ್ರಮ ವಾರಪತ್ರಿಕೆ ಆಯೋಜಿಸಿದ್ದ ‘ಸುಂದರ ಮಲೆನಾಡಿನ ಧೀಮಂತ ಅರಸರು’ ಕಾಫಿ ಟೇಬಲ್ ಕೃತಿಯ ಲೋಕಾರ್ಪಣ ಕಾರ್ಯಕ್ರಮ ಹಾಗೂ ಮಲೆನಾಡಿನ ಅರಸುಮನೆತನಗಳ ಕುರಿತು ವಿಚಾರ ಸಂಕಿರಣ ಶಿವಮೊಗ್ಗದ ಕರ್ನಾಟಕ ಸಂಘದ ಸಭಾಭವನದಲ್ಲಿ ದಿನಾಂಕ 19 ಫೆಬ್ರವರಿ 2023ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಂಶೋಧಕ ಡಾ. ಕೆಳದಿ ಗುಂಡಾ ಜೋಯಿಸ್ ಮಾತನಾಡಿ, ಕೆಳದಿ ಇತಿಹಾಸವನ್ನು ವಿದೇಶಿ ವಿದ್ವಾಂಸರು ಹೆಚ್ಚಿನ ಸಂಖ್ಯೆಯಲ್ಲಿ ಅಧ್ಯಯನ ಮಾಡಿದ್ದಾರೆ. ಜಪಾನ್, ಹಾಲೆಂಡ್, ಜರ್ಮನಿ, ಅಮೆರಿಕಾ, ಇಂಗ್ಲೆಂಡ್ನ ಹಲವು ಖ್ಯಾತನಾಮ ವಿದ್ವಾಂಸರು ಕೆಳದಿಯ ಕುರಿತು ಅನೇಕ ಸಂಗತಿಗಳನ್ನು ದಾಖಲಿಸಿದ್ದಾರೆ. ಆದರೆ ನಮ್ಮವರಿಂದಲೇ ಸಾಕಷ್ಟು ಅಧ್ಯಯನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಚಾರ ಸಂಕಿರಣದ ಸರ್ವಾಧ್ಯಕ್ಷತೆ ವಹಿಸಿದ್ದ ಹಂಪಿ ಕನ್ನಡ ವಿವಿಯ ಶಾಸನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅಮರೇಶ್ ಯತಗಲ್ ಮಾತನಾಡಿ, ಮಲೆನಾಡು ಭೌತಿಕ, ಸಾಂಸ್ಕೃತಿಕ, ಚಾರಿತ್ರಿಕವಾಗಿ ಅತ್ಯಂತ ಸುಂದರವಾಗಿದೆ. ಇದು ಸಾಂಸ್ಕೃತಿಕ ವೀರರ ನಾಡು. ದೊಡ್ಡ ರಾಜರು ದೀಪವಾದರೆ, ದೀಪಕ್ಕೆ ಎಣ್ಣೆ – ಬತ್ತಿ ಸಾಮಂತರಸರು. ವಿಜಯನಗರದ ಆಳ್ವಿಕೆಯ ಪೂರ್ವ ಮತ್ತು ನಂತರದಲ್ಲಿ ಸಾಮಂತ ಅರಸರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರಲ್ಲಿ ಕೆಳದಿ ಅರಸರು ಪ್ರಮುಖರು ಎಂದರು. ಹಿರಿಯ ಸಾಹಿತಿ ನಾ. ಡಿಸೋಜಾ, ಇತಿಹಾಸಕಾರ ಲಕ್ಷ್ಮೀಶ್ ಹೆಗಡೆ ಸೋಂದಾ ಉಪಸ್ಥಿತರಿದ್ದರು. ವಿಕ್ರಮದ ವ್ಯವಸ್ಥಾಪಕ ಸಂಪಾದಕ ಸು. ನಾಗರಾಜ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ದಿವ್ಯಾ ಲಕ್ಷ್ಮೀಶ್ ಹೆಗಡೆ ಪ್ರಾರ್ಥಿಸಿದರು.
ವಿಚಾರ ಸಂಕಿರಣದ ಮೊದಲ ಗೋಷ್ಠಿಯಲ್ಲಿ ಹಿರಿಯ ಇತಿಹಾಸ ಸಂಶೋಧಕ ಡಾ. ಎಸ್. ಜಿ. ಸಾಮಕ್ ಅಧ್ಯಕ್ಷತೆ ವಹಿಸಿ ಕೆಳದಿ ಸಂಸ್ಥಾನದ ವಿಶೇಷತೆಗಳನ್ನು ಹಂಚಿಕೊಂಡರು. ನೇಪಾಳದಲ್ಲಿ ಇಂದಿಗೂ ಇರುವ ಪಶುಪತಿ ದೇವಸ್ಥಾನದಲ್ಲಿ ಕನ್ನಡಿಗರೇ ಪೂಜೆ ಮಾಡುತ್ತಿದ್ದಾರೆ. ಇದು ಕೆಳದಿ ಸಂಸ್ಥಾನದ ಕೊಡುಗೆ ಎಂದರು. ಇತಿಹಾಸಕಾರ ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ, ಬ್ರಿಟಿಷರ ವಿರುದ್ಧ ಮೊದಲು ಹೋರಾಟ ಮಾಡಿ ಜಯಗಳಿಸಿದ್ದು ಸೋದೆಯ ಅರಸ ಇಮ್ಮಡಿ ಸದಾಶಿವರಾಯ. ಆದರೆ ಇತಿಹಾಸದಲ್ಲಿ ಮೊದಲು ಬ್ರಿಟಿಷರ ವಿರುದ್ಧ ಹೋರಾಡಿ ಜಯಗಳಿಸಿದ್ದು ಹೈದರಾಲಿ ಎಂದು ತಪ್ಪಾಗಿ ಬಿಂಬಿಸಲಾಗಿದೆ. 1680ರಲ್ಲಿ ಬ್ರಿಟಿಷರು ಕಾರವಾರವನ್ನು ಆಕ್ರಮಿಸಿದ್ದರು. ಅವರನ್ನು ಸಂಪೂರ್ಣವಾಗಿ ಸೋಲಿಸಿ ಓಡಿಸಿದ್ದು ಸದಾಶಿವರಾಯ. ಇದು ಗೆಜೆಟಿಯರ್ನಲ್ಲಿಯೂ ದಾಖಲಾಗಿದೆ. ಆದರೆ ಇದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಮನಃಸ್ಥಿತಿ ನಮ್ಮದಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಂಶೋಧಕ ಡಾ. ಕೆಳದಿ ವೆಂಕಟೇಶ ಜೋಯಿಸ್ ಮಾತನಾಡಿ, ಕೆಳದಿ ಅರಸರು ಸುಮಾರು 13 ಜಿಲ್ಲೆಗಳಲ್ಲಿ ಆಡಳಿತ ನಡೆಸಿದ್ದಾರೆ. ಕ್ರಿ.ಶ. 1500ರಿಂದ 1763ರವರೆಗೆ 17 ರಾಜರು ಕೆಳದಿ ಸಂಸ್ಥಾನದಲ್ಲಿ ಆಳ್ವಿಕೆ ನಡೆಸಿದ್ದಾರೆ. ಇದು 200 ವರ್ಷ ಆಡಳಿತ ನಡೆಸಿದ ಸಂಸ್ಥಾನ ಎಂದು ವಿವರಿಸಿದರು.
ಎರಡನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಆರ್. ಶೆಜೇಶ್ವರ್ ಮಾತನಾಡಿ, ಮಲೆನಾಡಿನ ಅರಸುಮನೆತನಗಳಲ್ಲಿ ವಿಶೇಷವಾದ ಮನೆತನ ಗೇರುಸೊಪ್ಪೆಯ ಸಾಳ್ವರದ್ದು. ಅನೇಕ ನದಿಗಳ ಸಂಗಮವಾದ ಗೇರುಸೊಪ್ಪೆ ಐತಿಹಾಸಿಕವಾಗಿ ಅತ್ಯಂತ ಮಹತ್ತ್ವದ ಪ್ರದೇಶ ಎಂದು ತಿಳಿಸಿದರು. ಹಿರಿಯ ಸಾಹಿತಿ ಡಾ. ನಾ. ಡಿಸೋಜಾ ಮಾತನಾಡಿ, ಗೇರುಸೊಪ್ಪ ಸಾಳ್ವ ರಾಜಮನೆತನದ ರಾಜಧಾನಿಯಾಗಿತ್ತು. 1908ರ ಸಂದರ್ಭದಲ್ಲಿ ಬ್ರಿಟಿಷರು ಸಾಳ್ವರ ಕುರಿತು ಬೆಳಕಿಗೆ ತಂದರು. ಸಾಳ್ವರು ಸುಮಾರು 250 ವರ್ಷಗಳ ಕಾಲ ವೈಭವದಿಂದ ಆಳ್ವಿಕೆ ನಡೆಸಿದ್ದರು. 16ನೇ ಶತಮಾನದಲ್ಲಿ ರಾಜ್ಯಭಾರ ನಡೆಸಿದ್ದ ಸಾಳ್ವರ ರಾಣಿ ಚೆನ್ನಭೈರಾದೇವಿ ಕಾಳುಮೆಣಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದಳು. ಆಕೆಯ ರಾಜ್ಯ ಕಾಳುಮೆಣಸು, ಏಲಕ್ಕಿಗಳ ಬೀಡಾಗಿತ್ತು ಎಂದು ವಿವರಿಸಿದರು. ಬಿಳಗಿ ಅರಸರ ಕುರಿತಾಗಿ ಮಾತನಾಡಿದ ಸಂಶೋಧಕಿ ವಿನೋದಾ ಭಟ್ ಬೆಟ್ಟಳ್ಳಿ, ಬಿಳಗಿಯನ್ನು ವಿಜಯನಗರದ ಸಾಮಂತರಸರು ಆಳುತ್ತಿದ್ದರು. ಜೈನರು, ವೀರಶೈವರು ಈ ಪ್ರದೇಶವನ್ನು ಆಳಿದ್ದರು. ಇವರ ಆಡಳಿತ ಶೌರ್ಯ, ಸಾಹಸಗಳಿಂದ ಕೂಡಿತ್ತು. ಇವರ ಕಾಲದಲ್ಲಿ ಹಲವಾರು ಜೈನಬಸದಿಗಳು, ದೇವಾಲಯಗಳು ನಿರ್ಮಾಣಗೊಂಡವು ಎಂದು ತಿಳಿಸಿದರು.
ಮೂರನೇ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಇತಿಹಾಸ ಸಂಶೋಧಕ ಖಂಡೋಬರಾವ್ ಮಾತನಾಡಿ ಇತಿಹಾಸವನ್ನು ತಿಳಿಯಲು ಮೂಲಾಧಾರ ಶಾಸನಗಳು. ವಿಷ್ಣುವರ್ಧನನ ಪತ್ನಿ ಶಾಂತಲೆಗೂ ಮಲೆನಾಡಿಗೂ ಅವಿನಾಭಾವ ಸಂಬಂಧವಿತ್ತು ಎಂದು ಹೇಳಿದರು. ಇತಿಹಾಸ ಸಂಶೋಧಕ ಹಿರೇನಲ್ಲೂರು ಪಾಂಡುರಂಗ ಮಾತನಾಡಿ ಹೊಯ್ಸಳ ಸಾಮ್ರಾಜ್ಯದ ಉಗಮಸ್ಥಾನವೇ ಚಿಕ್ಕಮಗಳೂರು ಜಿಲ್ಲೆ. ಹೊಯ್ಸಳರ ಕಾಲದಲ್ಲಿ ದೇಗುಲ, ಬಸದಿ, ಕೆರೆ, ಕೃಷಿ ಅಭಿವೃದ್ಧಿಗೊಂಡಿತು. ಹರೇನಲ್ಲೂರು ಕೆರೆ, ಬಸವನಹಳ್ಳಿ ಕೆರೆ, ವಿಷ್ಣುಸಮುದ್ರದ ತೂಬು ಮುಂತಾದವನ್ನು ಅವರು ನಿರ್ಮಿಸಿದರು ಎಂದು ಹೇಳಿದರು. ಹೊಂಬುಜ ಸಾಂತರಸರ ಕುರಿತು ಮಾತನಾಡಿದ ಹಿರಿಯ ವಿದ್ವಾಂಸ ಹಾದಿಗಲ್ಲು ಲಕ್ಷ್ಮೀನಾರಾಯಣ ಭಟ್ ಅವರು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ದಕ್ಷಿಣ ಕನ್ನಡದ ಕೆಲ ಪ್ರದೇಶಗಳಲ್ಲಿ ಸಾಂತರಸರು ಆಳ್ವಿಕೆ ನಡೆಸಿದರು. ಸಾಂತರಸರ ಕುರಿತು 38 ಶಾಸನಗಳಲ್ಲಿ ಉಲ್ಲೇಖವಿದೆ. ಶಾಂತ ಸ್ವಭಾವದವರಾಗಿದ್ದರಿಂದ ಅವರನ್ನು ಸಾಂತರು ಎಂದು ಕರೆಯಲಾಗಿದೆ. ಇವರು ಶಿಲ್ಪಕಲೆ, ನಾಟಕ, ಯಕ್ಷಗಾನ, ನೃತ್ಯ, ಕೃಷಿಗೆ ಹೆಚ್ಚು ಪ್ರಾಧಾನ್ಯವನ್ನು ಕೊಟ್ಟಿದ್ದರು ಎಂದು ತಿಳಿಸಿದರು.
ಶ್ರೀರಂಜಿನಿ ದತ್ತಾತ್ರಿ ಕಾರ್ಯಕ್ರಮ ನಿರ್ವಹಣೆ ಮಾಡಿದರು. ವಿಚಾರಗೋಷ್ಠಿಗಳ ನಂತರ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸಭಿಕರ ಪ್ರಶ್ನೆಗಳಿಗೆ ಸಂಶೋಧಕರು ಸೂಕ್ತ ಉತ್ತರಗಳನ್ನು ನೀಡುವ ಮೂಲಕ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಅಪರಾಹ್ನ ‘ಸುಂದರ ಮಲೆನಾಡಿನ ಧೀಮಂತ ಅರಸರು’ ಕಾಫಿ ಟೇಬಲ್ ಪುಸ್ತಕದ ಲೋಕಾರ್ಪಣೆ ಹಾಗೂ ಮಲೆನಾಡಿನ ಅರಸುಮನೆತನಗಳ ಕುರಿತ ವಿಚಾರಗೋಷ್ಠಿಯ ಸಮಾರೋಪ ಸಮಾರಂಭ ನಡೆಯಿತು. ರಾ.ಸ್ವ.ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಮಾತನಾಡಿ, ಲಕ್ಷಾಂತರ ಜನರಿಗೆ ವಿಕ್ರಮ ವಾರಪತ್ರಿಕೆ ಗೊತ್ತಿಲ್ಲದಿರಬಹುದು. ಆದರೆ ವಿಕ್ರಮ ಗೊತ್ತಿರುವವರಿಗೆ ಅದು ಜೀವನದ ಅವಿಭಾಜ್ಯ ಅಂಗ. ವಿಕ್ರಮಕ್ಕೆ ಬದ್ಧರಾಗಿರುವ ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಕೆಲವರಿಗೆ ಇದು ದಿನಚರಿಯ ಅಂಗ. ಹಿಂದೆ ಪತ್ರಿಕೆಯೆಂಬುದು ವ್ಯಾಪಾರ, ಉದ್ಯಮ ಆಗಿರಲಿಲ್ಲ. ಹಾಗಾಗಿ ಪತ್ರಿಕೋದ್ಯಮ ಎಂಬ ಪದಬಳಕೆ ಸರಿಯಲ್ಲ. ಮಹಾಭಾರತ ಬರೆದ ವ್ಯಾಸ, ರಾಮಾಯಣ ಬರೆದ ವಾಲ್ಮೀಕಿ ಅದನ್ನು ಉದ್ಯಮಕ್ಕಾಗಿ ರಚಿಸಲಿಲ್ಲ. ಇಂಡಿಯನ್ ಎಕ್ಸ್ಪ್ರೆಸ್ ಕಟ್ಟಿದ ರಾಮನಾಥ ಗೋಯಂಕಾ ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲೂ ಅಂಜದೆ ಗಟ್ಟಿಯಾಗಿ ನಿಂತಿದ್ದರು. ವಿಕ್ರಮ ಕೂಡ ತನ್ನ 75 ವರ್ಷಗಳನ್ನು ಹಾಗೆಯೇ ಕಳೆದಿದೆ ಎಂದು ವಿಕ್ರಮದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ಡಿ. ಎಚ್. ಶಂಕರಮೂರ್ತಿ ಕೃತಿ ಲೋಕಾರ್ಪಣೆಗೊಳಿಸಿ, ನಾವ್ಯಾರು ಎಂಬುದರ ಮರೆವು ನಮ್ಮನ್ನು ಕಾಡುತ್ತಿದೆ. ನಾವು ನಮ್ಮತನವನ್ನು ಮರೆತಿದ್ದೇವೆ. ಕೀಳರಿಮೆ ನಮ್ಮನ್ನು ಬಾಧಿಸುತ್ತಿದೆ. ಅದರಿಂದ ಹೊರಬರಬೇಕು ಎಂದು ಹೇಳಿದರು.
ಸಂಸದ ಬಿ. ವೈ. ವಿಜಯೇಂದ್ರ ಹೊಸದಿಗಂತ ಡಿಜಿಟಲ್ನ ವಿಡಿಯೋ ಟೀಸರ್ ಬಿಡುಗಡೆಗೊಳಿಸಿದರು. ರಾ.ಸ್ವ.ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ, ವಿಧಾನ ಪರಿಷತ್ ಸದಸ್ಯ ಡಿ. ಎಸ್. ಅರುಣ್, ಇತಿಹಾಸ ಸಂಶೋಧಕ ಡಾ. ಅಮರೇಶ ಯತಗಲ್ ಉಪಸ್ಥಿತರಿದ್ದರು. ಡಾ. ಲಕ್ಷ್ಮೀಶ್ ಹೆಗಡೆ ಸೋಂದಾ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚೈತನ್ಯ ಹೆಗಡೆ ನಿರೂಪಿಸಿದರು. ದಿವ್ಯಾ ಲಕ್ಷ್ಮೀಶ್ ಹೆಗಡೆ ಪ್ರಾರ್ಥನಗೀತೆಯನ್ನು ಹಾಡಿದರು. ಸು. ನಾಗರಾಜ್ ವಂದಿಸಿದರು.