Ananda Coomaraswamy

ಆನಂದ ಕುಮಾರಸ್ವಾಮಿ ಬರಹಗಳ ಪುಷ್ಕಳ ಯಾದಿ

ಇತ್ತೀಚೆಗಷ್ಟೇ, ಆಗಸ್ಟ್ ೨೨ ರಂದು ಆನಂದ ಕುಮಾರಸ್ವಾಮಿಯವರ ಜನ್ಮದಿನವಿತ್ತು. ಭಾರತೀಯ ಕಲಾತತ್ತ್ವವನ್ನು ಪಾಶ್ಚಾತ್ಯ ವಿದ್ವದ್ವಲಯಕ್ಕೆ ಪರಿಣಾಮಕಾರಿಯಾಗಿ ಪರಿಚಯಿಸಿದವರಲ್ಲಿ ಕುಮಾರಸ್ವಾಮಿ ಪ್ರಮುಖರು. ಹದಿನೇಳನೇ ವಯಸ್ಸಿನಿಂದಲೆ ಬರವಣಿಗೆಯಲ್ಲಿ ತೊಡಗಿದ್ದ ಕುಮಾರಸ್ವಾಮಿ, ತಮ್ಮ ಜೀವನದುದ್ದಕ್ಕೂ ನಿರಂತರವಾಗಿ ಲೇಖನ ಕೃಷಿ ಮಾಡಿದವರು.

Ananda Coomaraswamy

ಪುಸ್ತಕ, ಪ್ರಬಂಧ, ವಿಮರ್ಶೆ, ಅನುವಾದಗಳನ್ನೊಳಗೊಂಡಂತೆ ಸುಮಾರು ಸಾವಿರದೈನೂರಕ್ಕೂ ಹೆಚ್ಚು ಬರಹಗಳನ್ನು ಅವರು ಪ್ರಕಟಿಸಿದ್ದಾರೆ. ಸಾವಿರದೈನೂರು ಲೇಖನಗಳನ್ನು ಒಬ್ಬ ವ್ಯಕ್ತಿ ಬರೆಯುವುದೆಂದರೆ ತಮಾಷೆಯ ಮಾತಲ್ಲ. ಅಲ್ಲದೆ ಸ್ವಾಮಿಯವರು ಬರೆದಿರುವುದು ಸಾಮಾನ್ಯ/ಮಾಹಿತಿಯುಕ್ತ ಲೇಖನಗಳಂತಹ ಬರಹಗಳಲ್ಲ. ಅವೆಲ್ಲಾ ಪ್ರೌಢ ಪ್ರಬಂಧಗಳು (scholarly articles). ಅಂಥ ಒಂದೊಂದು ಪ್ರಬಂಧ ಬರೆಯುವುದಕ್ಕೂ ಹಲವು ಕಾಲದ ಓದು ಬೇಕಾಗುತ್ತದೆ. ಅಲ್ಲದೆ ಕೇವಲ ಓದಿನಿಂದ ಒಳನೋಟಗಳು ಬರುವುದಿಲ್ಲ, ನಿರಂತರ ಮನನ, ಆಲೋಚನೆಯ ಪಕ್ವತೆ ಬೇಕಾಗುತ್ತದೆ. ಹೀಗೆ ಗುಣ ಗಾತ್ರಗಳಲ್ಲಿ, ಆಳ ವಿಸ್ತಾರ ಹೊಂದಿರುವ ಬರಹಗಳು ಸ್ವಾಮಿಯವರದ್ದು.

ಅವರ ಬರಹಗಳನ್ನು ಓದುವುದು ಒಂದೆಡೆಯಾದರೆ, ಕಾಲಾನುಕಾಲಕ್ಕೆ ಬೇರೆ ಬೇರೆ ದೇಶದ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅವರ ಬರಹಗಳು ಎಷ್ಟಿವೆ, ಎಲ್ಲಿ ಸಿಗುತ್ತವೆ ಎಂದು ಹುಡುಕುವುದೇ ಕಷ್ಟಕರವಾಗಿತ್ತು. ಅವರ ಮಗ ರಾಮ ಕುಮಾರಸ್ವಾಮಿಯವರು, ದೊರೈ ರಾಜ ಅವರು ಮತ್ತು ಇನ್ನಿತರರು ಲಭ್ಯವಿರುವ ಅವರ ಬರಹಗಳ ಪಟ್ಟಿಯನ್ನು ಆಗಾಗ ಮಾಡಿದ್ದರಾದರೂ  ಅವೆಲ್ಲಾ  ಅಪೂರ್ಣವೆ ಆಗಿತ್ತು.

ಹೀಗಾಗಿ ಸ್ವಾಮಿಯವರ ಬರಹಗಳ ಅಷ್ಟೂ ವಿವರಗಳನ್ನು ಕಲೆ ಹಾಕಲು IGNCA (INDIRA GANDHI  NATIONAL CENTER FOR THE ARTS) ನಿರ್ಧರಿಸಿ ಆ ಕೆಲಸವನ್ನು ಜೇಮ್ಸ್ ಎಸ್ ಕ್ರೌಚ್ (JAMES S CROUCH) ರವರಿಗೆ ಒಪ್ಪಿಸಿತು. ಅದರ ಫಲವೇ ೨೦೦೨ರಲ್ಲಿ ಪ್ರಕಟವಾದ ‘A BIBLIOGRAPHY OF ANANDA KENTISH COOMARASWAMY’ ಪುಸ್ತಕ.

ಬರೋಬ್ಬರಿ ಐನೂರು ಪುಟಗಳ ಈ ಪುಸ್ತಕದಲ್ಲಿ ಸ್ವಾಮಿಯವರ ಬರಹಗಳ ಪಟ್ಟಿಯಲ್ಲದೆ ಇನ್ನೇನೂ ಇಲ್ಲ. ಆದರೆ ಒಬ್ಬ ಸಂಶೋಧನಾ ವಿದ್ಯಾರ್ಥಿಗೆ ಸುಮ್ಮನೆ ಈ ಪುಸ್ತಕವನ್ನು ಅವಲೋಕಿಸುವುದೂ ಒಂದು ಶಿಕ್ಷಣವೇ. ಮಾಹಿತಿ ಸಂಗ್ರಹ, ಆಕರ ಪರಿಶೀಲನೆ, ಕಾರ್ಯಸಮಗ್ರತೆಗಳಿಗೆ ಈ ಪುಸ್ತಕ ಕೈಗನ್ನಡಿಯಾಗಿದೆ. ಇಪ್ಪತು ವರ್ಷಗಳ ಶ್ರಮ ಈ ಪುಸ್ತಕದ ಹಿಂದಿದೆ. ಹಲವು ದೇಶಗಳ ಗ್ರಂಥಾಲಯ, ಪತ್ರಿಕಾ ಕಛೇರಿಗಳಿಗೆ ತಾವೇ ಭೇಟಿ ಕೊಟ್ಟು, ಸ್ವಾಮಿಯವರ ಲಭ್ಯವಿರುವ ಎಲ್ಲಾ ಬರಹಗಳನ್ನೂ ಗುಡ್ಡೆ ಹಾಕಿದ್ದಾರೆ ಜೇಮ್ಸ್. ನಂತರ ಐದು ವಿಭಾಗಗಳನ್ನು ಮಾಡಿದ್ದಾರೆ.

  • ಸ್ವಾಮಿಯವರ ಒಟ್ಟು ೯೫ ಪುಸ್ತಕಗಳು. ಪುಸ್ತಕದ ಪ್ರಕಟಣಾ ವಿವರಗಳು, ವಿಷಯ ಸೂಚಿ ಮತ್ತು ಆ ಕೃತಿಗೆ ಬಂದ ವಿಮರ್ಶೆಗಳು.
  • ಬೇರೆ ಬೇರೆ ಪುಸ್ತಕಗಳಿಗೆ ಸ್ವಾಮಿ ಬರೆದಿರುವ ೯೬ ಲೇಖನಗಳು, ಲೇಖನದ ವಿಷಯ ಮತ್ತು ಸಂದರ್ಭ ಸೂಚಿ.
  • ಪತ್ರಿಕೆ, ನಿಯತಕಾಲಿಕೆ ಇತ್ಯಾದಿಗಳಲ್ಲಿ  ಪ್ರಕಟಗೊಂಡ ಸ್ವಾಮಿಯವರ ೯೦೯ ಲೇಖನಗಳು. ಲೇಖನದ ವಿಷಯ ಮತ್ತು ಸಂದರ್ಭ ಸೂಚಿ.
  • ಇತರ ಪ್ರಕಟಣೆಗಳು ೩
  • ಸ್ವಾಮಿಯವರ ಬಗ್ಗೆ ಇತರರು ಉಲ್ಲೇಖಿಸಿರುವ, ವಿಮರ್ಶಿಸಿರುವ ೨೧೬ ಬರಹಗಳು ಮತ್ತು ಅದರ ಸಂದರ್ಭ ಸೂಚಿ.

ಮೇಲ್ನೋಟಕ್ಕೆ ಈ ಪುಸ್ತಕ ಸಪ್ಪೆ ಎನಿಸಬಹುದಾದರೂ, ಗಂಭೀರ ವಿದ್ವಾಂಸನೊಬ್ಬನ ಬರಹದ ಹರಹು (ಸನಾತನ ಧರ್ಮ, ಕಲಾತತ್ವ, ತತ್ವಶಾಸ್ತ್ರ, ಅಧ್ಯಾತ್ಮ, ವಿಜ್ಞಾನ, mythology ಇತ್ಯಾದಿ) ಮತ್ತು ಅದರ ಮಹತ್ವವನ್ನು ಅರಿತ ವಿದ್ವಾಂಸನೊಬ್ಬ, ಅವನ್ನೆಲ್ಲಾ ಕಲೆ ಹಾಕಲು ಪಟ್ಟಿರುವ ಶ್ರಮದ ಬಗ್ಗೆ ಮೆಚ್ಚುಗೆ ಮೂಡದಿರದು.

ಕುಮಾರಸ್ವಾಮಿಯವರ  ಬರಹಗಳನ್ನೇ ನೇರವಾಗಿ ಓದಬಯಸುವವರಿಗೆ ಅವರ ಹಲವಾರು ಪುಸ್ತಕಗಳು ಅಂತರ್ಜಾಲದಲ್ಲಿ ಉಚಿತವಾಗಿ ಲಭ್ಯವಿದೆ. Archive.org ಯಲ್ಲಿ ಅವರ ಪ್ರಮುಖ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಳ್ಳಹುದು.

ಇನ್ನು ಕುಮಾರಸ್ವಾಮಿಯವರ ಬರಹಗಳನ್ನು ಏಕೆ ಓದಬೇಕು? ಅದನ್ನು ಕ್ರಮವಾಗಿ ನೋಡೋಣ.

(ಸಶೇಷ)

1 thought on “ಆನಂದ ಕುಮಾರಸ್ವಾಮಿ ಬರಹಗಳ ಪುಷ್ಕಳ ಯಾದಿ

  1. ಇದನ್ನು ಓದಿದ ಮೇಲೆ ಇವರ ಲೇಖನಗಳ ಬಗ್ಗೆ, ಮತ್ತು ವಿಷಯಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಬೇಕೆನಿಸುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.