ವಿಜಯಭಾರತಿ ನೂಟನ ಕಟ್ಟಡ ಲೋಕಾರ್ಪಣೆ | ಸರಸಂಘಚಾಲಕ ಡಾ. ಮೋಹನ ಭಾಗವತ ಉದ್ಭೋದನ

ಬಳ್ಳಾರಿ: ಇಡೀ ಸಮಾಜ ರಾಷ್ಟ್ರದ ಒಳಿತನ್ನು ಬಯಸುವಂತಾಗಬೇಕು. ಅದಕ್ಕಾಗಿ ಅನುಶಾಸನ ಸ್ವೀಕಾರವಾಗಬೇಕು ಮತ್ತು ಈ ಕಾರ್ಯ ನಿರಂತರವಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ.ಮೋಹನ ಭಾಗವತ ಹೇಳಿದರು.

ಭಾನುವಾರ ಬಳ್ಳಾರಿಯ ಸೊಂತಲಿಂಗಣ್ಣ ಕಾಲೋನಿಯಲ್ಲಿರುವ ವಿಜಯಭಾರತಿ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಶುದ್ಧ ಸಾತ್ವಿಕ ಪ್ರೇಮವೇ ಸಮಾಜ ಸಂಘಟನೆಗೆ ಸ್ವಾಭಾವಿಕ ಆಧಾರವಾಗಿದೆ. ಪರಸ್ಪರ ಪ್ರೇಮ, ಸಹಬಾಳ್ವೆ ಪ್ರಾಚೀನದಿಂದಲೂ ಭಾರತೀಯರಲ್ಲಿ ಅಡಕವಾಗಿದೆ. ಭಾರತದ ಪ್ರಗತಿ ಕೇವಲ ಒಬ್ಬರ ಕೆಲಸವಲ್ಲ. ಆದರೆ, ಪ್ರತಿಯೊಬ್ಬರ ಕೊಡುಗೆಯೂ ಅವಶ್ಯ. ಪೂರ್ತಿ ಸಮಾಜ ತೊಡಗಿಕೊಂಡಾಗ ಭಾರತದ ಸಮುನ್ನತಿ ಸಾಧ್ಯ. ಕಳೆದ ೯೮ ವರ್ಷಗಳಿಂದ ಸಂಘ ಕಾರ್ಯ, ಶಾಖೆ ಬೆಳೆದುಬಂದಿದೆ. ಆರೆಸ್ಸೆಸ್ ಒಂದು ಅನುಶಾಸನಬದ್ಧ ಸಂಘಟನೆ. ಇದರ ಪ್ರಮುಖ ಉದ್ದೇಶವೇ ಸಮಾಜದ ಸಂಘಟನೆ ಹಾಗೂ ಭಾರತದ ಪರಮ ವೈಭವ ಎಂದು ಹೇಳಿದರು.

ಯಾವುದೇ ಸತ್ಕಾರ್ಯಕ್ಕೆ ಸಾಧನಗಳು ಅವಶ್ಯ. ಅದೇ ರೀತಿ ಸಂಘ ಕಾರ್ಯಕ್ಕೆ ಕಾರ್ಯಾಲಯಗಳು ಸಾಧನವಾಗಿವೆ. ಇಲ್ಲಿ ಸ್ವಯಂಸೇವಕರು ಸಾತ್ವಿಕ ಪ್ರೇಮ, ಆತ್ಮೀಯತೆ, ಅನ್ಯೋನ್ಯತೆ, ಪ್ರಾಮಾಣಿಕ ಹಾಗೂ ನಿಸ್ವಾರ್ಥ ಗುಣಗಳಿಂದ ಎಲ್ಲರೊಂದಿಗೆ ವ್ಯವಹರಿಸುತ್ತಾರೆ. ಅನ್ಯ ಸಂಘಟನೆಗಳು ದೇಶ ಹಾಗೂ ಸಮಾಜದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತವೆ ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸ್ವಯಂಸೇವಕರು ಸಮಸ್ಯೆ ಜೊತೆ ಪರಿಹಾರ ಹುಡುಕುತ್ತಾರೆ. ಮಾತಿಗಿಂತ ಕೃತಿ ಲೇಸು ಎಂಬ ಮಾತಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಕೊರೋನಾ ಸಂದರ್ಭದಲ್ಲಿ ಎಲ್ಲರೂ ಪರಿಸ್ಥಿತಿ ಅವಲೋಕಿಸುವ ಹಂತದಲ್ಲಿದ್ದರೆ, ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು ಆದರೆ ಬೇರೆ ದೇಶಗಳಲ್ಲಿ ಈ ರೀತಿ ಕಾರ್ಯ ಕಾಣಲಿಲ್ಲ ಎಂದು ಹೇಳಿದರು.

ವಸುಧೈವ ಕುಟುಂಬಕಮ್ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಎಲ್ಲರನ್ನೂ ನಾವು ಸ್ವೀಕರಿಸುತ್ತೇವೆ. ದೇಶ ಹಾಗೂ ಸಮಾಜದಲ್ಲಿ ಯಾವುದೇ ವಿಪತ್ತು, ತೊಂದರೆ ಇದ್ದಲ್ಲಿ ಸ್ವಯಂಸೇವಕರು ನಿಸ್ವಾರ್ಥ ಬುದ್ಧಿಯಿಂದ, ಶೀಲಯುಕ್ತ, ಸ್ವಚ್ಛ ವ್ಯವಹಾರದಿಂದ ಹಾಗೂ ತನು-ಮನ-ಧನಗಳನ್ನು ಸಮರ್ಪಣೆ ಮಾಡಿ ಕಾರ್ಯನಿರ್ವಹಿಸುತ್ತಾರೆ. ಇದು ಉಳಿದವರಿಗೆ ಅನುಕರಣೀಯವೂ ಹೌದು. ಇದುವೇ ಸಂಘದ ನೀತಿಯಾಗಿದೆ. ಸ್ವಯಂಸೇವಕನ ಈ ಎಲ್ಲ ಗುಣಗಳು ರಾಷ್ಟ್ರಕಾರ್ಯದ ಸಕ್ರಿಯತೆಯನ್ನು ಇಮ್ಮಡಿಗೊಳಿಸುತ್ತದೆ ಎಂದು ಹೇಳಿದರು.

ವಿಜಯಭಾರತಿ ಟ್ರಸ್ಟ್ ಸಮಾಜದ ಪ್ರತಿಷ್ಠಿತ ಸಂಸ್ಥೆಯಾಗಿ ಸದಾ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿದೆ. ಇದರ ನೂತನ ಕಾರ್ಯಾಲಯ ಮುಂಬರುವ ರಾಷ್ಟ್ರಹಿತ ಹಾಗೂ ಸಾಮಾಜಿಕ ಕಾರ್ಯಗಳಿಗೆ ಪೂರಕವಾಗಲಿದೆ. ಈ ನೂತನ ಕಟ್ಟಡಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ವಿಜಯಭಾರತಿ ನೂತನ ಕಟ್ಟಡದ ವಾಸ್ತುಶಾಂತಿ, ಗೃಹಪ್ರವೇಶದ ಧಾರ್ಮಿಕ ವಿಧಿಗಳು ನಡೆದವು. ಕಾರ್ಯಕ್ರಮದಲ್ಲಿ ವಿಜಯಭಾರತಿ ಟ್ರಸ್ಟ್ ಅಧ್ಯಕ್ಷ ಸಾಂಕಲಚಂದ ಬಾಗ್ರೇಚಾ, ರಾ.ಸ್ವ. ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಸಂಘಚಾಲಕ ವಿ. ನಾಗರಾಜ, ಕ್ಷೇತ್ರ ಪ್ರಚಾರಕ ಸುಧೀರ್, ಪ್ರಾಂತ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಸಹಪ್ರಾಂತ ಸಂಘಚಾಲಕ ಅರವಿಂದರಾವ್ ದೇಶಪಾಂಡೆ, ಬಳ್ಳಾರಿ ವಿಭಾಗ ಸಂಘಚಾಲಕ ಬಸವರಾಜ ಡಂಬಳ, ಸಂಘದ ಪ್ರಾಂತೀಯ ಅಧಿಕಾರಿಗಳು ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


Leave a Reply

Your email address will not be published.

This site uses Akismet to reduce spam. Learn how your comment data is processed.