ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು ||
ಸರಿಸುಮಾರು ಹದಿನೈದನೇ ಶತಮಾನದಲ್ಲೇ ದಾಸಶ್ರೇಷ್ಠರಲ್ಲಿ ಒಬ್ಬರಾದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಒರೆಕೋರೆಗಳನ್ನು ತಿದ್ದುವ ಪ್ರಯತ್ನಮಾಡಿ ಮಹಾನ್ ಹರಿಭಕ್ತರೆನಿಸಿಕೊಂಡವರು, ಅವರ ಕೀರ್ತನೆಯ ಈ ಸಾಲುಗಳಲ್ಲಿ ಮಾನವಜನ್ಮ ಎಷ್ಟು ಶ್ರೇಷ್ಠವಾದದ್ದು ಎಂಬತ್ನಾಲ್ಕುಲಕ್ಷ ಜೀವ ರಾಶಿಗಳನ್ನು ದಾಟಿ ಇಂದಿನ ನಮ್ಮ ಈ ಶರೀರ ಅಂದರೆ ಈ ಮಾನವಜನ್ಮ ಪಡೆದು ಕೊಂಡಿರುವುದು ಅಂತಹ ಜನ್ಮವನ್ನು ಕ್ಷಣಿಕ ಆಸೆಗಳಿಂದ ಹಾಳುಮಾಡಿಕೊಳ್ಳದೆ ಶ್ರೀಹರಿಯ ಪಾದಗಳಿಗೆ ಶರಣಾಗಿ ಭವದ ಆಸೆಗಳ ಪಾಶದಿಂದ ಮುಕ್ತನಾಗಿ ಸಾರ್ಥಕ್ಯಪಡೆಯೋಣ ಎಂದು ಹೇಳುತ್ತಾ ಜೀವನದ ಮಹತ್ವ ತಿಳಿಸಿದ್ದಾರೆ.
ಆದರೆ ಇಂದಿನ ಪರಿಸ್ಥಿಯೇ ಬೇರೆಯಾಗಿದೆ ಎಂಬತ್ನಾಲ್ಕು ಲಕ್ಷ ಜೀವ ರಾಶಿಗಳಲ್ಲಿ ಪ್ರಕೃತಿಯನ್ನ ಕ್ರಮೇಣ ನಾಶಮಾಡುತ್ತಿರುವುದು ಅತೀ ಬುದ್ದಿವಂತಪ್ರಾಣಿ ಎಂದುಕೊಂಡಿರುವ ಮನುಷ್ಯರಾದ ನಾವುಮಾತ್ರ ಇನ್ನ್ಯಾವುದೇ ಜೀವಿ ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿಲ್ಲ ಎನ್ನುವುದು ಒಪ್ಪಿಕೊಳ್ಳಲೇ ಬೇಕಾದಸತ್ಯ.
ನೆಲ,ಜಲ,ಆಕಾಶ,ಹಸಿರು, ಗಾಳಿ ಹೀಗೆ ಪ್ರಕೃತಿದತ್ತವಾಗಿ ಬಂದಂತಹ ಎಲ್ಲಾ ಸಂಪತ್ತು ಇರುವುದು ನಾನು ಭೋಗಿಸುವುದಕ್ಕಾಗಿ ಎನ್ನುವ ದುರಾಸೆ ಅಥವಾ ಅಹಂಕಾರದ ವರ್ತನೆಯಿಂದ ನಾವು ನಮ್ಮ ಸುತ್ತಲೂ ವಿಶವರ್ತುಲವನ್ನೇ ಸೃಷ್ಟಿಸಿಕೊಂಡು ಆರೋಗ್ಯ ನೆಮ್ಮದಿಗಾಗಿ ಇಲ್ಲದ ಸರ್ಕಸ್ಸ್ ಮಾಡುತಿದ್ದೇವೆ.
ಗಾಳಿಯಲ್ಲೆಲ್ಲಾ ಇಂಗಾಲವನ್ನೇ ತುಂಬಿ ಪ್ರಣಾಯಾಮ ಮಾಡಿದರೇನುಫಲ? ವಿಷಯುಕ್ತ ಆಹಾರವನ್ನೇ ಸೇವಿಸಿ ಯೋಗಮಾಡಿದರೇನುಫಲ? ನಮ್ಮ ಸುತ್ತಲಿರುವ ಹಸಿರನ್ನು ನದಿ-ತೊರೆ, ಬೆಟ್ಟ-ಗುಡ್ಡಗಳನ್ನು ಪ್ರಾಣಿ- ಪಕ್ಷಿಗಳನ್ನು ಆಪೋಶನಮಾಡಿ ನೆಮ್ಮದಿಯ ನಾಳೆಗಳನ್ನು ಹುಡುಕುತ್ತಾ ನಾವು ಹೊರಟಿರುವುದಾದರೂ ಎಲ್ಲಿಗೆ ಆ ಗಮ್ಯವಾದರೂ ಯಾವುದು….?
ಹೀಗೆ ವಾಸ್ತವವನ್ನು ಯೋಚಿಸಿ ಈ ವಿಪರೀತದ ವೈಪರಿತ್ಯ ಓಟವನ್ನು ನಿಲ್ಲಿಸಿ ಮೇಲಿನ ಪ್ರಶ್ನೆಗಳನ್ನು ನಮಗೆ ನಾವೇ ಕೇಳಿಕೊಳ್ಳಲೇಬೇಕಾದ ಸಮಯವಿದು.
ಮೊದಲು “ಈ ಸೃಷ್ಟಿ ಒಂದು ಜಡವಸ್ತುವಲ್ಲ ಮಾತೃ ರೂಪಿಯಾಗಿ ನಮ್ಮನ್ನು ಕೊನೆಯವರೆಗೂ ಸಾಕಿ ಸಲಹುವದೈವ” ಎನ್ನುವ ಸತ್ಯವನ್ನ ನಮ್ಮ ಮುಂದಿನ ತಲೆಮಾರಿಗೆ ಅರ್ಥಮಾಡಿಸಲೇಬೇಕಾದ ಅನಿವಾರ್ಯವಿದೆ ಆಗ ಅವರ ಆಂತರ್ಯದಲ್ಲಿ ಈ ಸೃಷ್ಟಿಯಬಗ್ಗೆ ಗೌರವಾದರಗಳು ಏರ್ಪಡುತ್ತವೆ ಭವಿಷ್ಯದಲ್ಲಿ ಅವನು ಸೃಷ್ಟಿವೈವಿದ್ಯತೆಯ ನಡುವೆ ಆನಂದವಾಗಿ ಬದುಕುವ ಮಾರ್ಗಹುಡುಕುತ್ತಾನೆ ಮತ್ತು ಮಾರ್ಗದರ್ಶಕನೂ ಆಗುತ್ತಾನೆ ಈ ಹಿಂದೆ ನಮ್ಮ ಪೂರ್ವಜರು ಹಾಗೇ ಬದುಕಿದ್ದವರು ಪಾಶ್ಚಾತ್ಯದ ವಸ್ತುವಾದದ ಮೋಹ ನಮ್ಮದೆಲ್ಲವನ್ನೂ ನಮ್ಮಿಂದ ದೂರಗೊಳಿಸಿತು ಹಾಗಾಗಿ
ಇಂದು ನಮ್ಮ ಶಿಕ್ಷಣವ್ಯವಸ್ಥೆಯಲ್ಲಿ ಸಸ್ಯಶ್ಯಾಮಲೆಯಾಗಿ ಗಿರಿಶಿಖರಗಳನ್ನೊತ್ತು ನದಿಸಾಗರಗಳಿಂದ ಸರ್ವಾಲಂಕಾರ ಭೂಷಿತಳಾದ ತಾಯಿಭಾರತಿಯನ್ನು ಜೀವಂತ ಶಕ್ತಿಎಂದು ಪರಿಚಯಿಸಬೇಕಿದೆ.
ಹಾಗಾದರೆ ನಮಗೆ ಹಾಲೋಹರ ಉಣಿಸಿ ಬೆಳೆಸಿ ಸುಖದಿಂದ ಕೊನೆಯವರೆಗೂ ಸಲಹುತ್ತಿರುವ ಈ ವಸುಂಧರೆಯ ಋಣವನ್ನು ನಾವು ಸ್ವಲ್ಪವಾದರೂ ತೀರಿಸದಷ್ಟು ಅಲ್ಪರಾಗಿ ಜೀವಿಸುವುದು ತಪ್ಪಲ್ಲವೇ…?
ಒಮ್ಮೆ ಯೋಚಿಸೋಣ ನನ್ನ ಕೊನೆಯುಸಿರಿರುವ ವರೆಗೂ ನಮ್ಮನ್ನು ಹೊತ್ತು ತಿರುಗುವ ಈ ತಾಯಿಗಾಗಿ ನಾನೇನು ಮಾಡಬಹುದು….️
ವ್ಯಕ್ತಿಗತವಾಗಿ ನಾವೆಲ್ಲಾ ಈ ಮೂರೇ ಮೂರು ಉಪಕ್ರಮಗಳನ್ನ ಪಾಲಿಸಿದರೆ ಸಾಕು.
ಮೊದಲನೆಯದು ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಮತ್ತು ಮರುಬಳಕೆ. ಅನವಶ್ಯಕವಾಗಿ ಪ್ಲಾಸ್ಟಿಕ್ ಬಾಟೆಲ್ ಕವರ್ ಗಳನ್ನು ಖರೀದಿಸದೆ ಬಳಸಿ ಬಿಸುಡುವ( Use & Through), ಸಂಸ್ಕೃತಿ ಬಿಟ್ಟುಬಿಡೋಣ ಅಗತ್ಯವಿದ್ದಲ್ಲಿ ಬಟ್ಟೆಯ ಚೀಲವನ್ನು ಬಳಸೋಣ ನಮ್ಮ ನೀರು ನಾವೇ ತೆಗೆದು ಕೊಂಡು ಹೋಗುವ ಸಣ್ಣ ವಿಚಾರಗಳಿಗೆ ಗಮನ ಕೊಟ್ಟರೆ ಅದೆಷ್ಟೋ ಪ್ಲಾಸ್ಟಿಕ್ ಬಾಟೆಲ್ ಕವರ್ ಗಳನ್ನು ಭೂಮಿಯ ಅಥವಾ ಗೋಮಾತೆಯ ಗರ್ಭಕ್ಕೆ ಸೇರಿಸುವ ಪಾಪ ಕೃತ್ಯದಿಂದ ನಾವು ದೂರಉಳಿಯಬಹುದು. ಇನ್ನೂ ರೈತರೂ ಕಳೆನಿಯಂತ್ರಣಕ್ಕಾಗಿ ಬಳಸುವ ಪ್ಲಾಸ್ಟಿಕ್ ಶೀಟ್ ಬಿಸಿಲು ಗಾಳಿಗೆ ಒಣಗಿ ತುಂಡಾಗಿ ಭೂಮಿಸೇರುತ್ತದೆ ಇದರ ಬದಲು ಜೀವಂತ ಮುಚ್ಚುಗೆ ಬಳಸುವ ಕಡೆ ಗಮನ ಕೊಟ್ಟರೆ ಭೂಮಿಯ ಫಲವತ್ತತೆ ಹೆಚ್ಚುತ್ತದೆ.
ಎರಡನೆಯದು ನೀರನ್ನು ಉಳಿಸುವುದು. ಹರಿಯುವ ನೀರನ್ನು ನಿಲ್ಲುವಂತೆ ನಿಂತ ನೀರನ್ನು ಹಿಂಗುವಂತೆ ಮಾಡುವ ಕೆಲಸ ಪ್ರತಿಯೊಬ್ಬರಿಂದ ಆಗಲೇ ಬೇಕಿದೆ,ಭೂಮಿಗೆ ರಂದ್ರಕೊರೆದು ಎಲ್ಲರೂ ನೀರು ಮೇಲೆತ್ತುತ್ತಿದ್ದೇವೆ ಆದರೆ ಅದನ್ನ ಅಷ್ಟೇ ಶುದ್ಧವಾಗಿ ಅದೇ ಪ್ರಮಾಣದಲ್ಲಿ ವಾಪಸ್ ತುಂಬಿಸುವ ಕೆಲಸ ಆಗುತ್ತಿದೆಯೇ…? ಹಾಗಾಗಿ ನಗರದವರು ಅತೀ ಕಡಿಮೆ ನೀರಿನ ಬಳಕೆ ಮಾಡುವುದು ಅನವಶ್ಯಕ ನೀರನ್ನು ಪೋಲುಮಾಡದಂತೆ ಎಚ್ಚರಿಕೆ ವಹಿಸಿ ಮಳೆನೀರಿನ ಸಂಗ್ರಹಕ್ಕೆ ಆದ್ಯತೆಕೊಡಬೇಕು ಕೃಷಿಕರು ಕೃಷಿಹೊಂಡ,ಕೆರೆ-ಕಟ್ಟೆ ಕಾಲುವೆ-ಬಾವಿ, ಹಳ್ಳ ಕೊಳ್ಳಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡರೆ ಸಾಕು ಸಕಲ ಜೀವರಾಶಿಗಳ ದಾಹವನ್ನು ತನಿಸುವ ಶಕ್ತಿ ಆ ಜಲಮೂಲಗಳಿಗಿವೆ.
ಮೂರನೆಯದು ಅತಿಮುಖ್ಯವಾದ ಅಂಶ ಮರಗಿಡಗಳನ್ನು ಬೆಳೆಸುವುದು ಇದಂತೂ ನಮಗೆ ಮೇ ಜೂನ್ ಜುಲೈಗಳಲ್ಲಿ ಹವ್ಯಾಸವಾಗಿಬಿಡಬೇಕು ಕಾಲಿ ಬಿಟ್ಟ ಸ್ಥಳವನ್ನು ಗಿಡ ಮರಗಳಿಂದ ತುಂಬಬೇಕು. ಈ ಮುಂಗಾರಿನ ಸಮಯದಲ್ಲಿ ನಾಟಿ ಮಾಡುವ ಸಸಿಗಳಿಗೆ ವಿಶೇಷ ಆರೈಕೆಯೇ ಇಲ್ಲದೇ ಬೆಳೆಯುತ್ತವೆ ರಸ್ತೆಗಳ ಪಕ್ಕ ಉದ್ಯಾನವನಗಳಲ್ಲಿ ಮನೆಯ ಮುಂದೆ ನಮಗೆ ಇಷ್ಟವಾದ ಪ್ರಾಣಿ ಪಕ್ಷಿಗಳಿಗೂ ಆಹಾರ ಕೊಡಬಲ್ಲ ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಬೇಕು ಮೊದಲೆರೆಡು ವರ್ಷ ಸ್ವಲ್ಪ ಕಾಳಜಿವಹಿಸಿದರೆ ಅವು ತಮ್ಮ ಜೀವಿತ ಕಾಲದ ಅಂತ್ಯದವರೆಗೆ ನಮ್ಮ ಶುದ್ಧ ಉಸಿರಿನ ಕಾಳಜಿ ವಹಿಸುತ್ತವೆ. ಕೃಷಿಕರು ಜಮೀನಿನ ಬದುವಿನಲ್ಲಿ, ಕೃಷಿ ಹೊಂಡದಮೇಲೆ, ಬೀಳು ಬಿಟ್ಟ ಜಮೀನಲ್ಲಿ, ಗೋಮಾಳ ದೇವಸ್ಥಾನದ ಆವರಣಗಳಲ್ಲಿ ದುಂಬಿ ಪಕ್ಷಿಗಳಿಗೆ ಆಹಾರವಾಗಬಲ್ಲ ಹೂ ಹಣ್ಣು ಬಿಡುವ ಮರಗಳನ್ನು ಬೆಳೆಸಿದರೆ ಬೆಳೆಗಳಿಗೆ ತಗುಲುವ ಎಷ್ಟೋ ರೋಗಗಳಿಂದ ಮುಕ್ತಿಪಡೆಯಬಹುದು, ಮರಗಳಿದ್ದಲ್ಲಿ ಅಂತರ್ಜಲ ಮಟ್ಟವು ವೃದ್ಧಿಸುವುದು ಮತ್ತು ಹಣ್ಣು,ಹಂಪಲು, ಸೌದೆ,ಮೇವು,ಹಸಿರಿಲೆ ಗೊಬ್ಬರ ಈ ರೀತಿಯ ಅನೇಕ ಉಪಯೋಗಗಳು ಮರಗಳಿಂದಾಗುತ್ತವೆ ನಾವು ಬೆಳೆಸುವ ಮರಗಿಡಗಳು ಭವಿಷ್ಯದ ಪೀಳಿಗೆಯ ನಿಜವಾದ ಜೀವವಿಮೆ ಇದ್ದಂತೆ.
ಒಣಭೂಮಿಯಲ್ಲಿಯೂ ಸಂತುಷ್ಟವಾಗಿ ಬೆಳೆಯಬಲ್ಲ ಈ ಇಪ್ಪತ್ತೇಳು ಗಿಡಗಳನ್ನು ಒಬ್ಬ ಮನುಷ್ಯ ತನ್ನ ಜೀವಿತಾವದಿಯಲ್ಲಿ ನೆಟ್ಟು ಬೆಳೆಸಿದರೆ ಮನುಷ್ಯ ನರಕಕ್ಕೇ ಹೋಗುವುದಿಲ್ಲ ಎನ್ನುವುದನ್ನ ಈ ಕೆಳಗಿನ ಶ್ಲೋಕ ಹೇಳುತ್ತದೆ.
ಅಶ್ವತ್ಥಮೇಕಂ ಪಿಚುಮಂದಮೇಕಂ
ನ್ಯಗ್ರೋಧಮೇಕಂ ದಶ ತಿಂತ್ರಿಣೀಕಮ್ |
ಕಪಿತ್ಥ ಬಿಲ್ವಾಮಲಕೀ ತ್ರಯಂ ಚ
ಪಂಚಾಮ್ರರೋಪೀ ನರಕಂ ನ ಪಶ್ಯೇತ್ ||
ಅರ್ಥ-
ಒಂದು ಅಶ್ವತ್ಥವೃಕ್ಷ, ಒಂದು ಬೇವಿನಮರ, ಒಂದು ಆಲದಮರ, ಹತ್ತು ಹುಣಿಸೆಮರ, ಮೂರು ಮೂರು ಬೇಲ, ಬಿಲ್ವ, ನೆಲ್ಲಿ ಮರಗಳು ಮತ್ತು ಐದು ಮಾವಿನ ಮರಗಳು – ಇವಿಷ್ಟು ಗಿಡಗಳನ್ನು ನೆಟ್ಟು ಮರವಾಗಿ ಮಾಡಿದವ ನರಕವನ್ನು ನೋಡುವುದಿಲ್ಲ!
ಎಂಬ ಉಲ್ಲೇಖವಿದೆ.
ಇದು ಮುಂಗಾರಿನ ಸಮಯವಾಗಿದ್ದು ಇದೇ ಸೂಕ್ತ ಸಮಯ ಇಂದೇ ಹತ್ತಿರದ ಅರಣ್ಯಇಲಾಖೆಗೆ ಬೇಟಿನೀಡಿ ಇಲ್ಲ ಹತ್ತಿರದ ನರ್ಸರಿಯಿಂದ ಸಸಿಗಳನ್ನುತಂದು ಸೂಕ್ತ ರೀತಿಯಲ್ಲಿ ನಾಟಿ ಮಾಡಿ ಪೋಶಿಸೋಣ ಮತೊಮ್ಮೆ ತಾಯಿ ಭಾರತಿ ಸೌಭಾಗ್ಯವತಿಯಾಗಿ ಗತವೈಭವವನ್ನ ಪಡೆದು ಫಲಪುಷ್ಪಗಳಿಂದ ಶೋಭಿಸುವಂತೆ ನೋಡಿಕೊಳ್ಳೋಣ.
ಅಭಿಲಾಷ್ ಪಂಡ್ರಳ್ಳಿ,