ರಂಗಭೂಮಿ ಎಂಬ ಪ್ರಭಾವಿ ಮಾಧ್ಯಮ ಒಂದು ಕಲೆಪ್ರಕಾರವಾಗಿ ಸಾಹಿತ್ಯ, ಭಾಷೆ, ಸಂಸ್ಕೃತಿ, ಸಾಮಾಜಿಕ ಪರಿವರ್ತನೆಗೆ ತನ್ನದೇಯಾದ ರೀತಿಯಲ್ಲಿ ಕೊಡುಗೆಯನ್ನು ನೀಡುತ್ತಾ ಬಂದಿದೆ. ರಂಗಭೂಮಿ ಎಂಬ ಕಲೆಯನ್ನು ಮತ್ತು ಆ ಕಲೆಯ ರಾಯಭಾರಿಗಳಾದ ಕಲಾವಿದರನ್ನು ಸ್ಮರಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್‌ 27 ರಂದು ವಿಶ್ವ ರಂಗಭೂಮಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಈ ದಿನವು “ರಂಗಭೂಮಿ” ಎಂಬ ಕಲಾ ಪ್ರಕಾರದ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ತಿಳಿಸುವ ಉದ್ದೇಶವನ್ನು ಹೊಂದಿದೆ. ಈ ವರ್ಷದ ವಿಶ್ವ ರಂಗಭೂಮಿ ದಿನದ ಥೀಮ್‌ , ‘ರಂಗಭೂಮಿ ಮತ್ತು ಶಾಂತಿಯ ಸಂಸ್ಕೃತಿ’ ಎನ್ನುವುದಾಗಿದೆ.

ರಂಗಭೂಮಿ ಸೃಜನಶೀಲ ಸಂವಹನ ಮಾಧ್ಯಮ
ರಂಗಭೂಮಿ ಎನ್ನುವುದು ಸದಾ ಚಲನಶೀಲತೆಯನ್ನು ಅಳವಡಿಸಿಕೊಂಡಿರುವ ಸಮೂಹ ಮಾಧ್ಯಮ. ಇದು ವ್ಯಕ್ತಿತ್ವ ವಿಕಸನ, ಸಂವಹನ ಕಲೆ, ನಾಯಕತ್ವಗುಣ, ಸಾಮಾಜಿಕ ಕಳಕಳಿ, ಜೀವನಮೌಲ್ಯಗಳನ್ನು ಕಲಿಸುವ ಒಂದು ವಿಶಿಷ್ಟ ಕಲೆ. ರಂಗಭೂಮಿ ದೃಶ್ಯ ಹಾಗೂ ಶ್ರವಣ ಮಾಧ್ಯಮವಾಗಿದ್ದು ಅತ್ಯಂತ ಆಪ್ತವಾಗಿ ಪ್ರೇಕ್ಷಕರನ್ನು ಸೆಳೆಯುತ್ತದೆ. ರಂಗಭೂಮಿಯ ಮೂಲಕ ಒಂದು ವಿಷಯವನ್ನಾಗಲಿ ಅಥವಾ ಕಲಾವಿದರ ಕೌಶಲ್ಯವನ್ನಾಗಲಿ ಸೃಜನಾತ್ಮಕವಾಗಿ ಅಭಿವ್ಯಕ್ತಿಸುವುದಕ್ಕೆ ಸಾಧ್ಯವಾಗುತ್ತದೆ. ರಂಗಪ್ರಯೋಗಗಳ ಮೂಲಕ ಸದಾ ಹೊಸತನಕ್ಕೆ ತೆರೆದುಕೊಳ್ಳುವ ದಾರಿಯೂ ಇವುಗಳಿಗಿರುವುದರಿಂದ ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಮಾಡಿಕೊಳ್ಳಬಲ್ಲ ಕ್ಷೇತ್ರವಾಗಿ ಜನರ ಆಲೋಚನೆಯ ಜೊತೆಗೆ ಸಾಗುತ್ತಿರುತ್ತದೆ. ಹೊಸತನ್ನು ಅನ್ವೇಷಿಸುವ ಅಪಾರ ಅವಕಾಶವನ್ನು ರಂಗಭೂಮಿ ಒದಗಿಸುವುದರಿಂದ ಸೃಜನಾತ್ಮಕ ಮಾಧ್ಯಮವಾಗಿಯೂ ಮಹತ್ವವನ್ನು ಪಡೆದಿದೆ.


ಇತಿಹಾಸ
1962 ರಲ್ಲಿ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ಐಟಿಐ) ವಿಶ್ವ ರಂಗಭೂಮಿ ದಿನವನ್ನು ಆಚರಿಸಲು ನಿರ್ಧರಿಸಿತು. ಈ ದಿನವು ರಂಗಭೂಮಿ ಕಲೆಗಳ ಸಾರ, ಸೌಂದರ್ಯ ಮತ್ತು ಪ್ರಾಮುಖ್ಯತೆ, ಮನರಂಜನೆಯಲ್ಲಿ ಅವರ ಮಹತ್ವದ ಪಾತ್ರ ಮತ್ತು ರಂಗಭೂಮಿಯ ಸಾಂಕೇತಿಕ ಪ್ರಭಾವವನ್ನು ತಿಳಿಸುತ್ತದೆ. ಫಿನ್‌ಲ್ಯಾಂಡ್‌ನ ಹೆಲ್ಸಿಂಕಿಯಲ್ಲಿ ನಡೆದ ಒಂಬತ್ತನೇ ವಿಶ್ವ ಕಾಂಗ್ರೆಸ್‌ನಲ್ಲಿ ITI ಸಂಸ್ಥಾಪಕ ಅರ್ವಿ ಕಿವಿಮಾ ಅವರು ವಿಶ್ವ ರಂಗಭೂಮಿ ದಿನದ ಕಲ್ಪನೆಯನ್ನು ಪ್ರಸ್ತಾಪಿಸಿದರು. ನಂತರ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ್ದು, ಮೊದಲ ವಿಶ್ವ ರಂಗಭೂಮಿ ದಿನವನ್ನು ಮಾರ್ಚ್ 27, 1962 ರಂದು ಆಚರಿಸಲಾಯಿತು. ಅಂದಿನಿಂದ ರಂಗಭೂಮಿ ಕಲೆಗಳನ್ನು ಉತ್ತೇಜಿಸಲು ಮತ್ತು ನಮ್ಮ ಜೀವನದಲ್ಲಿ ಅದರ ಪ್ರಾಮುಖ್ಯತೆಯನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಪ್ರತಿ ವರ್ಷ ಮಾರ್ಚ್ 27 ರಂದು ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತದೆ.

ಮಹತ್ವ
ರಂಗಭೂಮಿ ಒಂದು ಕಲಾ ಪ್ರಕಾರವಾಗಿದ್ದು ಅದು ಮನೋರಂಜನೆ ಮಾತ್ರವಲ್ಲದೆ ಸಹೃದಯರ ಮನೋವಿಕಾಸಕ್ಕಾಗಿಯೂ ಸಹಕಾರಿಯಾಗಬಲ್ಲ ಮಾಧ್ಯಮ. ಕಥೆ, ಸಂಭಾಷಣೆ, ಪಾತ್ರಗಳು, ಸಾಮಾಜಿಕ ಜಾಗೃತಿಯ ಸಂದೇಶಗಳು, ಸಂಸ್ಕೃತಿಯ ಪಸರಿಸುವಿಕೆ ಮುಂತಾದ ವಿಷಯಗಳ ಮೂಲಕ ವೀಕ್ಷಕರ ಮನೋವಿಕಾಸಕ್ಕೂ ಸಹಾಯಕ.


ಸಾಮಾಜಿಕ ಜಾಗೃತಿ: ಇಂದಿನ ದಿನಗಳಲ್ಲಿ ಸಮಾಜದಲ್ಲಿ ಆಗುತ್ತಿರುವ ಶೋಷಣೆ, ಮಹಿಳೆಯರ ಮೇಲೆ ದೌರ್ಜನ್ಯ, ತಾರತಮ್ಯ, ಭ್ರಷ್ಟಾಚಾರ, ಅಸ್ಪೃಶ್ಯತೆ ಸೇರಿದಂತೆ ಅನೇಕ ಸಾಮಾಜಿಕ ಸಮಸ್ಯೆಗಳನ್ನು ನಾಟಕಗಳ ಮೂಲಕ ರಂಗಭೂಮಿಯು ಪರಿಣಾಮಕಾರಿಯಾಗಿ ಜಾಗೃತಿಯನ್ನು ಮೂಡಿಸುತ್ತದೆ. ಅವುಗಳ ಕುರಿತು ಸಂವಾದ ಮತ್ತು ಚರ್ಚೆಗೆ ಅವಕಾಶ ಒದಗಿಸುವ ಮೂಲಕ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.


ಸಂಸ್ಕೃತಿ ಸಂವಾಹಕ : ರಂಗಭೂಮಿಯು ರಂಗಸಜ್ಜಿಕೆಗೆ ಬಳಸಲಾಗುವ ವಸ್ತುಗಳು, ಸಂಭಾಷಣೆ, ಪೌರಾಣಿಕ ಮತ್ತು ಐತಿಹಾಸಿಕ ಘಟನಾವಳಿಗಳಾಧಾರಿತ ಕಥಾವಸ್ತುಗಳು, ಅವುಗಳಲ್ಲಿನ ಪಾತ್ರಗಳು ಸಾರುವ ಜೀವನ ಮೌಲ್ಯಗಳ ಮೂಲಕ ನಮ್ಮ ನಾಡಿನ ಸಂಸ್ಕೃತಿಯನ್ನು ಪರಿಚಯಿಸುವ ಜೊತೆಗೆ, ಸಮಾಜದ ಮೇಲೆ ಅವುಗಳು ಬೃಹತ್ ಪ್ರಮಾಣದಲ್ಲಿ ಪ್ರಭಾವ ಬೀರುವಂತೆ ಮಾಡುತ್ತದೆ.


ಶಿಕ್ಷಣ: ಪ್ರತಿ ವ್ಯಕ್ತಿಗೂ ಶಿಕ್ಷಣ ಅತ್ಯಂತ ಅವಶ್ಯಕ. ಅದು ಧಾರ್ಮಿಕ ಶಿಕ್ಷಣ, ಶಾಲಾ ಶಿಕ್ಷಣ, ಕೌಶಲ್ಯಾಧಾರಿತ ಶಿಕ್ಷಣ, ಸಮಾಜಮುಖಿ ಶಿಕ್ಷಣ ಎಲ್ಲದರ ಪ್ರಾಮುಖ್ಯತೆಯನ್ನು ಸಾರಲು ರಂಗಭೂಮಿ ಉತ್ತಮ ವೇದಿಕೆ. ಸ್ವತಃ ರಂಗಭೂಮಿಯ ಭಾಗವಾಗಿರುವ ನಿರ್ದೇಶಕರು, ಕಲಾವಿದರು, ತಂತ್ರಜ್ಞರುಗಳೇ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಅವುಗಳ ಮೂಲಕವೇ ತಮ್ಮ ಜೀವನವನ್ನು ಕಟ್ಟಿಕೊಂಡವರಾಗಿರುತ್ತಾರೆ.

ಇತಿಹಾಸ: ರಂಗಭೂಮಿ ಮತ್ತು ಅವುಗಳಲ್ಲಿ ಮೂಡಿಬರುವ ರಂಗಪ್ರಯೋಗಗಳು ಇತಿಹಾಸವನ್ನು ಸತ್ಯಾಸತ್ಯತೆಯೊಂದಿಗೆ ತಿಳಿಸಿಕೊಡಲು, ವರ್ತಮಾನದ ಸವಾಲುಗಳನ್ನು ಎದುರಿಸುವ ಪರಿಯನ್ನು ಪರಿಚಯಿಸುವ ಜೊತೆಗೆ ಭವಿಷ್ಯದ ಜನಾಂಗಕ್ಕೆ ಈ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳನ್ನು ದಾಖಲಿತ ಇತಿಹಾಸವಾಗಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ರಂಗಭೂಮಿಯೆಂಬ ಕಲೆ ಇತಿಹಾಸವನ್ನು ದಾಖಲಿಸುವ ವ್ಯವಸ್ಥೆಯಾಗಿಯೂ ಮೂಡಿಬರುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.