ಬೆಂಗಳೂರು, ೧೨ ಜನವರಿ ೨೦೧೯: ಫೌಂಡೇಶನ್ ಫೋರ್ ಇಂಡಿಕ್ ರಿಸರ್ಚ್ ಸ್ಟಡೀಸ್ (FIRST) ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಗಳ ಆಶ್ರಯದಲ್ಲಿ ಸಂಘದ ಹಿರಿಯ ಪ್ರಚಾರಕರು, ಚಿಂತಕರು ಮತ್ತು ಸಾಹಿತಿಗಳಾದ ಶ್ರೀ ಚಂದ್ರಶೇಖರ ಭಂಡಾರಿಯವರ ಸಾಹಿತ್ಯ ಕೃತಿಗಳ ವಿಮರ್ಶಾ ಕಾರ್ಯಕ್ರಮ “ಸಂಘಜೀವಿಯ ಸಾಹಿತ್ಯಯಾನ” 12 ಜನವರಿ 2019 ರಂದು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ತು (ಕೇಶವಶಿಲ್ಪ)ದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಧ್ವನಿ ಪ್ರತಿಧ್ವನಿ : ಅನುವಾದ ಸಾಹಿತ್ಯದ ಕುರಿತು ಚಿಂತನೆ, ಇತಿಹಾಸದ ಮೇಲೊಂದು ಚಂದ್ರ ಬಿಂಬ : ಚಾರಿತ್ರಿಕ ಕೃತಿಗಳ ವಿಮರ್ಶೆ, ದೃಷ್ಟಿ ಮತ್ತು ಸಾಕ್ಷಿ: ವ್ಯಕ್ತಿ ಚರಿತ್ರೆಗಳ ಅವಲೋಕನ, ಹೊತ್ತಿಗೆ ತಕ್ಕ ಹೊತ್ತಿಗೆ: ಪ್ರಚಾರ ಸಾಹಿತ್ಯದ ಮೇಲೆ ಹಿಂಬೆಳಕು ಎಂಬ ವಿಷಯಗಳಲ್ಲಿ ಚಂದ್ರುಜೀ ಅವರ ಸಾಹಿತ್ಯಯಾನದ ಹಿನ್ನೆಲೆಯಲ್ಲಿ ಕೃತಿಗಳ ವಿಮರ್ಶೆಯನ್ನು ಆಯೋಜಿಸಿತ್ತು.
ಚಂದ್ರುಜೀ ಯವರ ಸಾಹಿತ್ಯದ ವಿಸ್ತಾರ-ವಿಶೇಷದ ಕುರಿತಾಗಿ ವಿಯೆಟ್ನಾಮ್ ನ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಕೆಂದ್ರದ ನಿರ್ದೇಶಕರಾದ ಡಾ. ಜಿ ಬಿ ಹರೀಶ್ ವಿಷಯ ಮಂಡಿಸಿದರು.

ಮೊದಲ ಅವಧಿಯಲ್ಲಿ ಶ್ರೀಮತಿ ಛಾಯಾ ಭಗವತಿ ಮತ್ತು  ಶ್ರೀ ಹರ್ಷವರ್ಧನ ಶೀಲವಂತರು  ಚಂದ್ರುಜೀ ಯವರ ಅನುವಾದಗಳ ಕುರಿತಾಗಿ ಮಾತನಾಡುತ್ತ ಚಂದ್ರುಜೀಯವರ ಅನುವಾದದ ಶಕ್ತಿ ಅದರ ಸಹಜತೆ, ಸರಳತೆ ಮತ್ತು ಆಪ್ತತೆಯಲ್ಲಿದೆ. ಮೂಲ ಕೃತಿಯ ನೈಜತೆಯನ್ನು ಉಳಿಸಿಕೊಳ್ಳುತ್ತ ಅನುವಾದಿತ ಭಾಷೆಯ ಪ್ರಾದೇಶಿಕತೆಗೂ ಸಾಗಿಬರುವ ವಿಚಾರಗಳು ಓದುಗನಿಗೆ ಪರಕೀಯವೆನ್ನಿಸದೆ ತನ್ನ ಆಡುಭಾಷೆಯ ಭಾವವನ್ನೇ ಹುಟ್ಟಿಸುವುದು ಅವರ ಅನುವಾದಗಳ ಶಕ್ತಿ ಎಂದು ವಿಶ್ಲೇಷಿಸಿದರು. ಭಾಷೆಯ ಮತ್ತು ವಿಚಾರಗಳ ಕ್ಲಿಷ್ಟತೆ ಸಂಕೀರ್ಣತೆಗಳು ಚಂದ್ರುಜಿಯವರ ಅನುವಾದದ ಪರಿಣಾಮದಿಂದಾಗಿ ಸುಗಮವಾಗಿ, ಸುಲಭವಾಗಿ ಓದುಗನ ಮನವನ್ನು ಪ್ರವೇಶಿಸುತ್ತವೆ ಎಂಬ ಅಭಿಪ್ರಾಯವ್ಯಕ್ತಗೊಂಡಿತು.

Smt Chaya Bhagawati, Sri Harshavardhan Sheelavant

ಚಂದ್ರುಜಿಯವರ ಐತಿಹಾಸಿಕ ಕೃತಿಗಳ ವಿಚಾರವಾಗಿ ಮಾತನಾಡಲು ಶ್ರೀ ಮಂಜುನಾಥ ಅಜ್ಜಂಪುರ , ಶ್ರೀ ವಿ.ನಾಗರಾಜ್ ಮತ್ತು ವಾಸುದೇವ ಮೂರ್ತಿ ಯವರು  ಮಾತನಾಡುತ್ತ ಚಂದ್ರುಜೀ ಯವರ ಐತಿಹಾಸಿಕ ಕೃತಿಗಳು  ಇಸವಿಯನ್ನು ದಾಖಲಿಸುವ ಕ್ರಿಯೆಗಳಾಗದೆ ಸಮಾಜದ ಮನೋಗತವನ್ನು ಕಾಲಾತೀತ ತತ್ತ್ವಗಳನ್ನು ಗ್ರಹಿಸುವ ವಿಶಿಷ್ಟ ಪ್ರಕ್ರಿಯೆಗಳಾಗಿವೆ ಎಂದು ಅಭಿಪ್ರಾಯಪಟ್ಟರು.

ನಾನಾಜಿಯಿಂದ ನೇತಾಜಿವರೆಗೆ ಕೃತಿಯಲ್ಲಿನ ವ್ಯಕ್ತಿ ಚಿತ್ರಣಗಳು ಇಂದಿನ ಯುವಪೀಳಿಗೆಗೆ ಮಾರ್ಗದರ್ಶಕವಾಗಿವೆ. ವಸ್ತುನಿಷ್ಠ ಬರಹಗಳಿಗೆ ಉತ್ತಮ ಮಾದರಿಗಳಾಗಿವೆ. ‘ಕದಡಿದ ಪಂಜಾಬ್’ ಪುಸ್ತಕದ ಹಿಂದಿನ ಕಾಳಜಿ ದೇಶದ ಭಾಗವೊಂದು ದೇಶ ವಿಭಜಕ ಶಕ್ತಿಗಳ ಕೈಯ್ಯಲ್ಲಿ ಸಿಕ್ಕು ವಿಭಜನೆಯ ದಾರಿಯಲ್ಲಿ ಸಾಗಿದ್ದ ಪ್ರಸಂಗ ಮತ್ತು ಅದನ್ನು ಉಳಿಸಿಕೊಳ್ಳುವ ದೇಶಪ್ರೇಮಿ ತತ್ತ್ವಗಳ ಪ್ರಯತ್ನಗಳನ್ನು ಚಿತ್ರಿಸಿರುವ ಬಗೆ ಚಂದ್ರುಜೀಯವರ ಅನನ್ಯ  ಪ್ರತಿಭೆಯನ್ನು ತೋರಿಸುತ್ತವೆ.

ಸೆಕ್ಯುಲರ್ ಭಾರತದಲ್ಲಿ ಮುಸ್ಲಿಂ ರಾಜಕಾರಣವನ್ನು ಪರಿಚಯಿಸುವ   ಹಮೀದ್ ದಳವಾಯಿ ಯವರ ಕೃತಿಯನ್ನು ಕನ್ನಡಕ್ಕೆ ತಂದಿರುವ ಚಂದ್ರುಜಿಯವರ ಪ್ರಯತ್ನ ಸಾಮಯಿಕ ಭಾರತದ ವಸ್ತುಸ್ಥಿತಿ ಯನ್ನು ತೋರಿಸುವದರ ಜೊತೆಗೆ ಅದರಿಂದಾದ ದುಷ್ಫಲ ಗಳ ಕುರಿತು ಜಾಗರೂಕತೆ ಮೂಡಿಸುವ ಕೃತಿ. ಸಂಘದ ಪ್ರಚಾರಕರಾಗಿ ಜನರ ಮಧ್ಯೆ ಒಡನಾಡುತ್ತಲೇ ಲೇಖಕ ನಾಗಿ ತಮ್ಮ ಸಂವೇದನೆ ಯನ್ನು ಉಳಿಸಿಕೊಂಡು ಓದುಗನಿಗೆ ಹತ್ತಿರವಾಗುವ ಅವರ ಪ್ರಚೋದನಾತ್ಮಕ ಗ್ರಂಥಗಳು ವಿಶಿಷ್ಟ ಪ್ರತಿಭೆಯ ಪ್ರತಿಫಲನಗಳು ಎಂದು ತಿಳಿಸಿದರು.

‘ನಿರ್ಮಾಲ್ಯ’ ಮತ್ತು ‘ಸ್ಮೃತಿ ಮಂದಾರ’ ಕೃತಿಗಳ  ಕುರಿತು ಮಾತನಾಡುತ್ತ ಶ್ರೀ ದಿವಾಕರ ಹೆಗಡೆ ಯವರು, ದೇಶವನ್ನು ನೋಡುವ ಡಾ. ಹೆಡಗೇವಾರರ  ದೃಷ್ಟಿ ಮತ್ತು ಆ ದೃಷ್ಟಿಯಂತೆ ಬದುಕಿದ  ನ.ಕೃಷ್ಣಪ್ಪನವರಂಥ ವ್ಯಕ್ತಿತ್ವ ಗಳ ಚಿತ್ರಣ ಇವೆರಡೂ ವ್ಯಕ್ತಿ ಪ್ರಾಮುಖ್ಯತೆಯನ್ನು ಹೇಳದೇ ಸಮಾಜಕ್ಕೆ ಮಾರ್ಗದರ್ಶಕ ತತ್ವಗಳಾಗಿ ನಿರೂಪಿಸುವ ಸಂಗತಿಗಳನ್ನು ತಿಳಿಯಪಡಿಸುವುದು ಚಂದ್ರುಜೀ ಯವರ ಸಾಹಿತ್ಯದ ಅಗ್ಗಳಿಕೆ. ಸಂಘವೆಂದರೆ ಕೇವಲ ಸಂಘಟನೆಯಲ್ಲ ಅದು ಸ್ನೇಹವೂ ಹೌದು. ಲೋಕಸಂಗ್ರಹದ ವ್ಯವಸ್ಥೆಯೂ ಹೌದು, ನಿಮಿತ್ತ ಮಾತ್ರಂ ಭವ ಎಂಬ ಮೌಲ್ಯದ ಬದುಕನ್ನು  ಬಾಳಿದವರ ಚಿತ್ರಣಗಳನ್ನು ಕಟ್ಟಿಕೊಟ್ಟ ಚಂದ್ರುಜೀ ಯವರ ಕೃತಿಗಳು ನಿಜಕ್ಕೂ ವಿಶಿಷ್ಟ  ಎಂದು ತಿಳಿಯಪಡಿಸಿದರು.

ಬರಹಗಾರರು, ಸಂಶೋಧಕರದ ಶ್ರೀ ಎಂ. ಎಸ್. ಚೈತ್ರ ಮಾತನಾಡುತ್ತ, ಭಾರತದಲ್ಲಿ ಸಂಘದ ಉಪಸ್ಥಿತಿ, ಮತ್ತು  ಸಂಘದ ಕಾರ್ಯಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ವ್ಯಕ್ತಿಗಳ ಜೀವನದ ವಿವಿಧ ಮಗ್ಗಲುಗಳನ್ನು ಪರಿಚಯಿಸುವ ಚಂದ್ರುಜಿಯವರ ಕೃತಿಗಳು ಸಾಮಾನ್ಯ ಜನರಿಗೆ ಮತ್ತು ಸ್ವಯಂ ಸೇವಕರಿಗೆ ಮಹತ್ವದ ಮಾರ್ಗದರ್ಶಕಗಳಾಗಿವೆ.ವಿವಿಧ ಕಾಲಘಟ್ಟದಲ್ಲಿ ವಿವಿಧ ಮನೋಭಾವಗಳ  ಮಾಹಿತಿ ಮತ್ತು ವೈವಿಧ್ಯದ ಹಿನ್ನೆಲೆಯುಳ್ಳ ಜನರೊಡನೆ ಸಂಘದ ಹಿರಿಯರು ನಡೆದುಕೊಂಡ ಘಟನೆಗಳ  ಚಿತ್ರಣಗಳು ಲೋಕಸಂಗ್ರದ ಅಗತ್ಯತೆಯನ್ನು ಅದನ್ನು ಸಾಧಿಸುವ ಬಗೆಯನ್ನು ತೋರಿಸುತ್ತವೆ ಎಂದು ತಿಳಿಸಿದರು. ಇದು ಆಳವಾದದ ಅಧ್ಯಯನ ದ ವಿಷಯವೂ ಹೌದು ಎಂದರು.

Sri Diwakar Hegde, Dr. M S Chaitra

ವಿದ್ವಾಂಸ ಶ್ರೀ ಜಿ.ಬಿ.ಹರೀಶ್ ಈ ಸಂದರ್ಭದಲ್ಲಿ ತಮ್ಮ ಪೂರ್ವ ಮುದ್ರಿತ  ವಿಡಿಯೋ ಭಾಷಣದ ಮೂಲಕ , ರಾಷ್ಟ್ರೀಯ ವಿಚಾರಗಳನ್ನು ಪ್ರಚುರಪಡಿಸುವಲ್ಲಿ ರಾಷ್ಟ್ರವಾದಿ ಸಾಹಿತಿಗಳ ಸಾಲಿನಲ್ಲಿ ನಿಲ್ಲುವ  ಕರ್ನಾಟಕದ ಪ್ರತಿನಿಧಿಗಳಲ್ಲಿ ಚಂದ್ರಶೇಖರ್ ಭಂಡಾರಿ ಯವರೂ ಒಬ್ಬರು. ರಾಷ್ಟ್ರೀಯತೆಯ ಚಿಂತನೆಯ  ಧಾತು ಸಾಹಿತ್ಯದ ಒಂದು ಪಂಥವೂ ಹೌದು. ಹರಿಹರನ ಕಾವ್ಯಗಳಲ್ಲಿ ಕಂಡುಬರುವ ಸ್ಥಳೀಯತೆಯ ವರ್ಣನೆಗಳು ಈ ಪಂಥದ ಆದಿಗ್ರಂಥಗಳು. ಇದೇ ಸರಣಿಯಲ್ಲಿ ನಿಲ್ಲುವ, 20ನೇ ಶತಮಾನದ ಅಂತ್ಯ ಮತ್ತು 21ನೇ ಶತಮಾನದ ಆದಿಭಾಗದ ಸಾಹಿತ್ಯದ ಅವಲೋಕನದಲ್ಲಿ ಭಂಡಾರಿಯವರ ಬರವಣಿಗೆಗೆ ತನ್ನದೇ ವಿಶಿಷ್ಟವಾದ ಸ್ಥಾನವಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತರು ಹಾಗೂ ಅಂಕಣಕಾರರಾದ ಶ್ರೀ ದು.ಗು. ಲಕ್ಷ್ಮಣರು ಈ ಸಂದರ್ಭದಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಂಡರು. ಸಂಘದ ವಿಚಾರಗಳು ಮತ್ತು ಕಾರ್ಯವಿಧಾನದ ಕುರಿತಾದ ಹಾಗೆಯೇ ಸಾಮಾಯಿಕ ಮಹತ್ವದ  ವಿಚಾರಗಳನ್ನು  ಸರಳವಾದ ಶಬ್ದಗಳಲ್ಲಿ ಎಲ್ಲರಿಗೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವಂತಹ ಸಾಹಿತ್ಯ ನಿರ್ಮಾಣದ ಅಗತ್ಯತೆಯನ್ನು ಅದೊಮ್ಮೆ ಶ್ರೀಗುರೂಜಿ ಯವರು ಎಚ್ಚರಿಸಿದ್ದರು. ಚಂದ್ರಶೇಖರ್ ಭಂಡಾರಿಯವರ ಸಾಹಿತ್ಯ ಈ ಅಗತ್ಯತೆಯನ್ನು ಪೂರ್ತಿಗೊಳಿಸುವಲ್ಲಿನ ಸಾರ್ಥಕ ಪ್ರಯತ್ನ . ರಾಷ್ಟ್ರೀಯ ಮಹತ್ವದ ಸುದ್ದಿಗಳನ್ನು ಗ್ರಾಮೀಣ ಭಾಗದ ಜನರಿಗೆ ಆಪ್ತಸಂವಾದ ಪತ್ರಿಕೆಯ ಮೂಲಕ ತಲುಪಿಸಿದ ಸಾಧನೆಯನ್ನು ಮಾಡಿದ ಕೀರ್ತಿಯೂ ಚಂದ್ರುಜೀ ಯವರದ್ದು ಎಂದರು. ಪ್ರಚಲಿತ ವಿಷಯಗಳ ಕುರಿತು ಶಾಖೆಗಳಲ್ಲಿ ನಡೆಯುವ ಸಮಾಚಾರ ಸಮೀಕ್ಷೆಗಳನ್ನು ಬರೆಯುವ ಪದ್ಧತಿ ಹಾಕಿದವರೂ ಅವರೇ. ಲೇಖಕ, ಅನುವಾದಕರಾಗಿಯೇ ಪರಿಚಿತರಾಗಿದ್ದ ಚಂದ್ರುಜೀ ಕವಿಗಳೂ ಹೌದು. ಧರೆಗವತರಿಸಿದೆ ಸ್ವರ್ಗದ ಸ್ಪರ್ಧಿಯು .. ಎಂಬ ಜನಪ್ರಿಯಗೀತೆಯ ಕವಿಯೂ ಹೌದು. ತಮ್ಮ ಎಲ್ಲ ಪ್ರತಿಭೆಯನ್ನು ದೇಶಕ್ಕಾಗಿ, ಸಂಘಕ್ಕಾಗಿ ಮುಡಿಪಾಗಿಟ್ಟು ಸಮಾಜದ ಒಳಿತಿಗಾಗಿಯೇ ಬಳಸಿದ ಅನುಕರಣೀಯ ಗುಣ ಅವರದು ಎಂದು ತಿಳಿಸಿದರು.

Sri Du Gu Laxman, Senior Journalist, columnist

ಫೌಂಡೇಶನ್ ಫಾರ್ ಇಂಡಿಕ್ ರಿಸರ್ಚ್ ಸ್ಟಡೀಸ್ ನ  ಸಂತೋಷ್ ಜಿ ಆರ್ ಕಾರ್ಯಕ್ರಮ ನಿರೂಪಿಸಿದರು.

ವರದಿ : ಶ್ರೀ ಶೈಲೇಶ್ ಕುಲಕರ್ಣಿ

 

Sahsarkaryavah Sri Dattatreya Hosabale, Sri Du Gu Laxman and Sri ChandraShekhar Bhandari

Writer Sri Babu Krishnamurthy felicitating Sri Chandrashekhar Bhandari

Leave a Reply

Your email address will not be published.

This site uses Akismet to reduce spam. Learn how your comment data is processed.