ಸಂಘ ಕಾರ್ಯಾಲಯ ‘ಉತ್ಕರ್ಷ’

ಬೆಂಗಳೂರು: ಸಂಘ ಕಾರ್ಯಕ್ಕೊಂದು ಸ್ಥಾಯಿರೂಪ, ಕಾರ್ಯದ ವಿಸ್ತಾರ ಮತ್ತು ಕಾರ್ಯಕರ್ತರ ವಿಕಾಸಕ್ಕಿರುವ ರಾಷ್ಟ್ರ ಕಾರ್ಯದ ಮಂದಿರ ಕಾರ್ಯಾಲಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಪ್ರಾಂತ ಕಾರ್ಯವಾಹ ಜಯಪ್ರಕಾಶ್ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಯಲಹಂಕ ಭಾಗದ ಸಂಘ ಕಾರ್ಯಾಲಯ ‘ಉತ್ಕರ್ಷ’ ಇದರ ಉದ್ಘಾಟನೆಯ ಸಭಾ ಕಾರ್ಯಕ್ರಮದಲ್ಲಿ ಅವರು ಗುರುವಾರ ಮಾತನಾಡಿದರು.

ಸಂಘದಲ್ಲಿ ಸ್ವಾರ್ಥವಿಲ್ಲ ಹಾಗಾಗಿ ಸಂಘಟನೆಯಲ್ಲಿ ಬಲವಿದೆ. ಧ್ಯೇಯಕ್ಕಾಗಿ ತಪಸ್ವಿಗಳಂತೆ ಕಾರ್ಯ ನಿರ್ವಹಿಸುವ ಕಾರ್ಯಕರ್ತರಿದ್ದಾರೆ‌. ಅಂತಹ ಕಾರ್ಯಕರ್ತರಿಗೆ ಕಾರ್ಯಾಲಯ ಸಂಘ ಕಾರ್ಯದ ಧ್ಯೇಯದ ದರ್ಶನವನ್ನು ಮಾಡಿಸುತ್ತದೆ. ಕಾರ್ಯಾಲಯಕ್ಕೆ ಬಂದಂತಹ ಪ್ರತಿ ವ್ಯಕ್ತಿಗೂ ಸ್ವಯಂಸ್ಫೂರ್ತಿಯಿಂದ ರಾಷ್ಟ್ರಕಾರ್ಯದ ಸಂಕಲ್ಪ ಕೈಗೊಳ್ಳಲು ಪ್ರೇರಣೆ ತುಂಬುವ ಶ್ರದ್ಧಾಕೇಂದ್ರವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಘ ತನ್ನ ಕಾರ್ಯದ ಮೂಲಕ ಸರ್ವವ್ಯಾಪಿಯಾಗುವ ಜೊತೆಗೆ, ಬಂಧುತ್ವದ ಮೂಲಕ ಸರ್ವಸ್ಪರ್ಶಿಯೂ ಆಗುತ್ತಿದೆ. ಹಿಂದುಗಳು ಬಂಧುಗಳಾಗಿ ಒಂದಾದಾಗ ಮಾತ್ರ ಸಮಾಜದಲ್ಲಿರುವ ವಿವಿಧ ಬೇಧಭಾವಗಳು ತೊಲಗಿ ಅಸ್ಪೃಶ್ಯತೆಯಂತಹ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಸಂಘದ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿ ಕಾರ್ಯಕ್ಕೆ ಕಾರ್ಯಾಲಯಗಳು ಸಹಕಾರಿ ಎಂದು ನುಡಿದರು.

ಆಧುನಿಕತೆ ಸಭ್ಯತೆಯ ಭಾಗ. ಆದರೆ ಪಾಶ್ಚಾತ್ಯೀಕರಣವೇ ಆಧುನಿಕತೆಯಲ್ಲ. ರಾಷ್ಟ್ರೀಯತೆ ಮತ್ತು ಸಮಾಜ ಪರಿವರ್ತನೆಯ ಕುರಿತಾದ ಅನೇಕ ಮಹನೀಯರ ಉಕ್ತಿಗಳು ಭಾಷಣಕ್ಕೆ ಸೀಮಿತವಾಗದೆ ನಮ್ಮ ಆಚರಣೆಯಾಗಬೇಕು. ಸಂಘದ ಕಾರ್ಯಾಲಯದ ಸಂಪರ್ಕಕ್ಕೆ ಬಂದಂತಹ ಪ್ರತಿ ವ್ಯಕ್ತಿಗೂ ಈ ನಿಟ್ಟಿನಲ್ಲಿ ಪ್ರೇರಣೆಯನ್ನೊದಗಿಸುವ ಕೇಂದ್ರವಾಗಬೇಕು ಎಂದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕ್ಷೇತ್ರ ಪ್ರಚಾರಕ್ ಸುಧೀರ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಗಣಪತಿ ಹೆಗಡೆ, ಹುಣಸಮಾರನಹಳ್ಳಿ ನಗರ ಸಂಘಚಾಲಕ ಕರ್ನಲ್ ರಾಮದಾಸ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಧಾರ್ಮಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.