-ಗೊರೂರು ಜಮುನಾ

ಹೆಗಲ ಮೇಲೆ ಹೊರೆಯನ್ಹೊತ್ತು ಗಿರಿಯನೇರುತ
ಮಂಜಿನಲ್ಲೆ ಮನೆಯ ಕಟ್ಟಿ ವಾಸ ಮಾಡುತ
ಚಳಿಗು ಮಳೆಗು ಬೆದರದಲೇ ದೇಹ ಒಡ್ಡುತ
ಅನ್ನನೀರು ಮರೆತ ಯೋಧ ದೇಶ ಕಾಯುತ/

ಗಿರಿಯ ತುದಿಯಲಿರುವ ಅಲ್ಪ ವಾಯು ಸೇವಿಸಿ
ಸುರಿವ ಹಿಮಕೆ ತನ್ನ ಮೈಯ ಜಡ್ಡುಗಟ್ಟಿಸಿ
ತೂರಿಬರುವ ಗುಂಡುಗಳಿಗೆ ಎದೆಯ ಒಡ್ಡುತ
ಸದೆಯ ಬಡಿಯಲ್ಹೊರಟನವ ರುದ್ರನಾಗುತ/

ಮಡದಿ ಮಾತೆ ಮಕ್ಕಳನ್ನು ಮನದಿ ನೆನೆಯುತ
ದೇಶಸೇವೆ ತನ್ನ ಧರ್ಮ ಎಂದು ದುಡಿಯುತ
ಗಡಿಗೆ ನುಸುಳೊ ಕ್ರೂರಿಗಳನು ಸದೆಯಬಡಿಯುತ
ಪ್ರಾಣದ್ಹಂಗು ತೊರೆಯುತಲಿ ಯುದ್ಧಮಾಡುವ/

ಸೈನ್ಯ ಸೇರಿ ಮಾಡೊ ಸೇವೆ ಜನ್ಮ ಸಾರ್ಥಕ
ಭೂಮಿ ಋಣವ ತೀರಿಸಲು ಇರುವ ಕಾಯಕ
ನಾಡುಕಂಡ ಶ್ರೇಷ್ಠ ವ್ಯಕ್ತಿ ನಮ್ಮ ಸೈನಿಕ
ಸ್ಮರಿಸಬೇಕು ಹಗಲು ಇರುಳು ಅವನ ಕಾಯಕ

Leave a Reply

Your email address will not be published.

This site uses Akismet to reduce spam. Learn how your comment data is processed.