ಬೆಂಗಳೂರು, ಮಾರ್ಚ್‌ 16, 2024: ರಾಷ್ಟ್ರದಲ್ಲಿ ಸಿರಿಧಾನ್ಯಗಳ ಪುನರುತ್ಥಾನದ ಯಶಸ್ಸಿನ ಹಿನ್ನೆಲೆಯಲ್ಲಿ ಲಘು ಉದ್ಯೋಗ ಭಾರತಿ ಮತ್ತು ಐಎಂಎಸ್ ಫೌಂಡೇಶನ್ ಸಹಯೋಗದೊಂದಿಗೆ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎರಡು ದಿನಗಳ ಆಹಾರ ಮೇಳ ಉದ್ಘಾಟನೆಗೊಂಡಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲೀಡ್ಸ್ ಕನೆಕ್ಟ್ ಮತ್ತು ಲೀಡ್ಸ್ ನೆಕ್ಸ್ ಟೆಕ್ ಸಂಸ್ಥೆಯ ಸಂಸ್ಥಾಪಕ ನವನೀತ್‌ ರವಿಕರ್‌,  ಸಿರಿಧಾನ್ಯಗಳು ಪೌಷ್ಠಿಕಾಂಶವುಳ್ಳ ಆಹಾರ. ಈ ಹಿನ್ನೆಲೆಯಲ್ಲಿ ಸರ್ಕಾರ 2023 ರಲ್ಲಿ ಉತ್ತಮ ಕ್ರಮವನ್ನು ಕೈಗೊಂಡು ಜಾಗತಿಕ‌ ಮಟ್ಟದಲ್ಲಿ ಸಿರಿಧಾನ್ಯಗಳ ಮಹತ್ವವನ್ನು ತಿಳಿಸುವ ಶ್ಲಾಘನೀಯ ಕೆಲಸವನ್ನು ಮಾಡಿತ್ತು ಎಂದರು.


ಭಾರತ ಜಗತ್ತಿನಲ್ಲಿ ರಾಗಿಯನ್ನು ಹೆಚ್ಚು ಉತ್ಪಾದಿಸುವ ರಾಷ್ಟ್ರ. ಈಗ ಮಿಲೆಟ್ಸ್‌ ಜಾಗತಿಕ ಮನ್ನಣೆ ಪಡೆದು ಸೂಪರ್‌ ಫುಡ್‌ ಆಗಿರುವುದರಿಂದ ಸಮಾಜಕ್ಕೆ ಮತ್ತು ಆರ್ಥಿಕತೆಗೆ ಬಹಳ ಸಹಾಯಕಾರಿಯಾಗಿದೆ. ಅಷ್ಟೇ ಅಲ್ಲದೆ ರೈತರಿಗೂ ಕೂಡ ಇದರಿಂದ ಅನುಕೂಲವಾಗಿದ್ದು ಅವರನ್ನು ಸ್ವಾವಲಂಬಿಗಳನ್ನಾಗಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ‌ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಐಎಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಮಲ್‌ ವರ್ಧನರಾವ್‌ ಮಾತನಾಡಿ, ಭಾರತದಲ್ಲಿ ಉತ್ಪಾದನೆಯಾಗುವ ಸಿರಿಧಾನ್ಯಗಳು ಪೌಷ್ಟಿಕಾಂಶದ ಗುಣಮಟ್ಟದಲ್ಲಿ ಯಾವುದೇ ರೀತಿ ಸಂಧಾನ ಆಗಬಾರದು. ಗುಣಮಟ್ಟದ ಆಹಾರ ಉತ್ಪಾದನೆಯೂ ಕೂಡ ಸುಸ್ಥಿರ ಅಭಿವೃದ್ಧಿ ಯೋಜನೆಗಳಲ್ಲಿ ಒಂದಾಗಿದೆ. ಸಿರಿಧಾನ್ಯಗಳಿಂದ ನಾವು ನೈಸರ್ಗಿಕವಾಗಿಯೇ ಹೆಚ್ಚು ಪೌಷ್ಟಿಕಾಂಶದ ಆಹಾರವನ್ನು ಪಡೆಯಬಹುದು. ಜೊತೆಗೆ ಜೀವನದ ಗುಣಮಟ್ಟವನ್ನೂ ಹೆಚ್ಚಿಸಿಕೊಳ್ಳಬಹುದು ಎಂದು ನುಡಿದರು.

ಈ ಕಾರ್ಯಕ್ರವನ್ನು ಉದ್ದೇಶಿಸಿ NIFTEM ನಿರ್ದೇಶಕ ಪ್ರೊ. ಪಳನಿಮುತ್ತೂರು ಮಾತನಾಡಿ ಪ್ರಸ್ತುತ ಆರೋಗ್ಯದ ಕುರಿತಾದ ಕಾಳಜಿ ಅನೇಕರಲ್ಲಿ ಹೆಚ್ಚಾಗಿದೆ. ಆದರೆ ಅರಿವಿಗೆ ಬಾರದಂತೆ ಬಳಕೆಯಾಗುವ ರಸಾಯನಿಕಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇದೀಗ ಬೇರೆ ಬೇರೆ ಬಗೆಯ ಕೀಟನಾಶಕಗಳು ಮಾರುಕಟ್ಟೆಗಳಲ್ಲಿದ್ದು ಅವುಗಳು ಆರೋಗ್ಯಕ್ಕೆ ಹಾನಿಕಾರಕ. ಹಾಗಾಗಿ ಸಾವಯವ ಕೃಷಿ ತುಂಬಾ ಮಹತ್ವ ಪಡೆದುಕೊಳ್ಳುತ್ತಿದ್ದು ರೈತರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನುಡಿದರು.


ಉತ್ಪದಾನೆಯಾಗುವ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣವನ್ನು ಸೂಕ್ತ ರೀತಿಯಲ್ಲಿ ಬಳಸುವ ವ್ಯವಸ್ಥೆ ಕಲ್ಪಿಸಬೇಕು. ಸಾವಯವ ಕೃಷಿ ಉತ್ಪನ್ನಗಳ ಮೇಲೆ ಹಣವನ್ನು ಖರ್ಚು ಮಾಡಲು ಜನರು ಸಿದ್ಧರಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನಗಳ ಉತ್ಪಾದನೆ ಜಾಸ್ತಿಯಾದಾಗ ಬೆಲೆ ಕಡಿಮೆಯಾಗಲಿದೆ. ರಸಾಯನಿಕಗಳು ಮತ್ತು ಕೀಟನಾಶಕಗಳ ಮೇಲೆ ನಮ್ಮ ಅವಲಂಬನೆ ಕಡಿಮೆ ಮಾಡಿಕೊಂಡರೆ ಆರೋಗ್ಯಪೂರ್ಣ ಜೀವನಶೈಲಿ ನಮ್ಮದಾಗುತ್ತದೆ ಎಂದು ಅಭಿಪ್ರಾಯಪಟ್ಟರು.


ಇದೇ ಸಂದರ್ಭದಲ್ಲಿ ಮಾತನಾಡಿದ ನಬಾರ್ಡ್‌ ನ ಪ್ರಧಾನ ವ್ಯವಸ್ಥಾಪಕಿ  ಬೃಂದಾ ಇಂದಿನ ದಿನಗಳಲ್ಲಿ ಮಿಲೆಟ್ಸ್‌ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕರ್ನಾಟಕ ಕೂಡ ಮಿಲೆಟ್ಸ್‌ ಉತ್ಪಾದನೆಯಲ್ಲಿ ಮೂರನೇ ಸ್ಥಾನವನ್ನು ಹೊಂದಿದೆ. ಇವುಗಳಿಂದ ತಯಾರಾದ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯ ಸೃಷ್ಟಿಯಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ IIMR ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಯಾಕರ್‌ ರಾವ್‌ ಮತ್ತು ಬಿಗ್‌ ಫೌಂಡೇಷನ್‌ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹೆಚ್.‌ ಎನ್‌ ಸುಮಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಆಹಾರಮೇಳ ಮತ್ತು ವಸ್ತು ಪ್ರದರ್ಶನ

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನವಿದ್ದು 100ಕ್ಕೂ ಹೆಚ್ಚು ಸ್ಟಾಲ್ ಗಳು ಸಿರಿಧಾನ್ಯಗಳಾಧಾರಿತ ವಸ್ತುಗಳನ್ನು ಪ್ರಸ್ತುತಪಡಿಸಲಿವೆ. ಸಿರಿಧಾನ್ಯಗಳ ಆವಿಷ್ಕಾರ, ಮಾರುಕಟ್ಟೆ ಪ್ರವೃತ್ತಿಗಳು ಮತ್ತು ಬೇಡಿಕೆ ವಿಶ್ಲೇಷಣೆ, ಪೂರೈಕೆ, ಲಾಜಿಸ್ಟಿಕ್ಸ್ ಮತ್ತು ಗುಣಮಟ್ಟ ಹಣಕಾಸು ಮತ್ತು ವ್ಯವಹಾರ ಬೆಂಬಲ, ನೆಟ್ ವರ್ಕಿಂಗ್ ಸೇರಿದಂತೆ ವಿವಿಧ ವಿಷಯಗಳನ್ನು ಒಳಗೊಂಡ “ಗಮ್ಯಸ್ಥಾನ ಸಿರಿಧಾನ್ಯಗಳು” ಎಂಬ ವಿಷಯದ ಮೇಲೆ ಎರಡು ದಿನಗಳ ಕಾಲ ಸಮ್ಮೇಳನವನ್ನು ಕೂಡ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ 500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ‌ 

Leave a Reply

Your email address will not be published.

This site uses Akismet to reduce spam. Learn how your comment data is processed.