ಮೇ 31, 2024 ರಿಂದ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ 300ನೇ ಜಯಂತಿ ವರ್ಷ ಪ್ರಾರಂಭವಾಗಲಿದೆ. ಅವರ ಜೀವನ ಭಾರತೀಯ ಇತಿಹಾಸದ ಒಂದು ಸ್ವರ್ಣಿಮ ಪರ್ವವೇ ಸರಿ. ಗ್ರಾಮೀಣ ಭಾಗದ ಸಾಮಾನ್ಯ ಕುಟುಂಬದ ಬಾಲಕಿಯಿಂದ ಹಿಡಿದು ಅಸಾಧಾರಣ ಆಡಳಿತಗಾರ್ತಿಯವರೆಗಿನ ಅವರ ಜೀವನಯಾತ್ರೆ ಇಂದಿಗೂ ಪ್ರೇರಣೆಯ ಮಹಾನ್ ಸ್ರೋತ. ಅವರು ಕರ್ತೃತ್ವ, ಸರಳತೆ, ಧರ್ಮಕ್ಕಾಗಿ ಸಮರ್ಪಣೆ, ಆಡಳಿತ ಕುಶಲತೆ, ದೂರದೃಷ್ಟಿ ಮತ್ತು ಉಜ್ವಲ ಚಾರಿತ್ರ್ಯದ ಅದ್ವಿತೀಯ ಆದರ್ಶ.

‘ಶ್ರೀ ಶಂಕರ ಆಜ್ಞೇವರುನ್’ (ಶ್ರೀ ಶಂಕರರ ಆಜ್ಞೆಯನುಸಾರ) ಎಂಬ ರಾಜಮುದ್ರೆಯನ್ನೊಳಗೊಂಡಿದ್ದ ಅವರ ಶಾಸನ ಸಾಕ್ಷಾತ್ ಭಗವಾನ್ ಶಂಕರನ ಪ್ರತಿನಿಧಿಯ ರೂಪದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಅವರ ಲೋಕ ಕಲ್ಯಾಣಕಾರಿ ಶಾಸನಗಳು ಭೂಮಿರಹಿತ ರೈತರ, ಭೀಲ್ ಗಳಂತಹ ಬುಡಕಟ್ಟು ಸಮೂಹಗಳ, ವಿಧವೆಯರ ಹಿತವನ್ನು ರಕ್ಷಿಸುವಂತಹ ಒಂದು ಆದರ್ಶ ಶಾಸನವಾಗಿತ್ತು. ಸಮಾಜ ಸುಧಾರಣೆ, ಕೃಷಿ ಸುಧಾರಣೆ, ಜಲ ಸಂರಕ್ಷಣೆ, ಪರಿಸರ ರಕ್ಷಣೆ, ಜನಕಲ್ಯಾಣ ಮತ್ತು ಶಿಕ್ಷಣಕ್ಕಾಗಿ ಸಮರ್ಪಿತವಾಗಿದ್ದರ ಜೊತೆಜೊತೆಗೆ ಅವರ ಶಾಸನ ನ್ಯಾಯಪ್ರಿಯವೂ ಆಗಿತ್ತು. ಸಮಾಜದ ಎಲ್ಲಾ ವರ್ಗಗಳ ಸಮ್ಮಾನ, ಸುರಕ್ಷೆ, ಪ್ರಗತಿಗಾಗಿ ಪ್ರಾಮುಖ್ಯತೆ ನೀಡುವ ಸಮರಸತೆಯ ದೃಷ್ಟಿ ಅವರ ಪ್ರಶಾಸನದ ಆಧಾರವಾಗಿತ್ತು.

ಕೇವಲ ಅವರ ರಾಜ್ಯದಲ್ಲಿ ಮಾತ್ರವಲ್ಲದೇ ಸಂಪೂರ್ಣ ದೇಶದ ಮಂದಿರಗಳಲ್ಲಿ ಪೂಜೆಯ ವ್ಯವಸ್ಥೆ ಮತ್ತು ಆರ್ಥಿಕ ನಿರ್ವಹಣೆಯ ಕುರಿತೂ ವಿಶೇಷ ಗಮನವನ್ನು ಹರಿಸಿದ್ದರು. ಬದ್ರಿನಾಥ್ ನಿಂದ ರಾಮೇಶ್ವರದವರೆಗೂ ಮತ್ತು ದ್ವಾರಕೆಯಿಂದ ಪುರಿಯವರೆಗೂ ಆಕ್ರಮಣಕಾರರಿಂದ ಧ್ವಂಸಗೊಳಿಸಲಾದ ದೇವಾಲಯಗಳನ್ನು ಅವರು ಪುನರುಜ್ಜೀವಗೊಳಿಸಿದರು. ಪ್ರಾಚೀನ ಕಾಲದಿಂದ ನಡೆದುಬಂದ ಮತ್ತು ಆಕ್ರಮಣ ಕಾಲದಲ್ಲಿ ನಿಷೇಧಿಸಲಾಗಿದ್ದ ತೀರ್ಥಯಾತ್ರೆಗಳಿಗೆ ಅವರ ಕೆಲಸಗಳಿಂದಾಗಿ ನವೀನ ಚೈತನ್ಯ ಲಭಿಸಿತು. ಈ ಬೃಹತ್ ಕಾರ್ಯಗಳ ಕಾರಣ ಅವರಿಗೆ ‘ಪುಣ್ಯಶ್ಲೋಕ’ ಎಂಬ ಬಿರುದು ದೊರೆತಿದೆ. ಸಂಪೂರ್ಣ ಭರತವರ್ಷದಲ್ಲಿ ಹಬ್ಬಿದ ಪವಿತ್ರ ಸ್ಥಳಗಳ ವಿಕಾಸ ವಾಸ್ತವದಲ್ಲಿ ಅವರ ರಾಷ್ಟ್ರೀಯ ದೃಷ್ಟಿಯನ್ನು ಪರಿಚಯಿಸಿದೆ.

ಪುಣ್ಯಶ್ಲೋಕ ದೇವಿ ಅಹಲ್ಯಾಬಾಯಿ ಹೋಳ್ಕರ್ ಅವರ ಜಯಂತಿಯ 300ನೇ ವರ್ಷದ ಪಾವನ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುವ ಸಮಸ್ತ ಸ್ವಯಂಸೇವಕರು ಮತ್ತು ಸಮಾಜದ ಬಂಧು-ಭಗಿನಿಯರು ಈ ಹಬ್ಬದಲ್ಲಿ ಆಯೋಜನೆಗೊಳ್ಳಲಿರುವ ಕಾರ್ಯಕ್ರಮಗಳಲ್ಲಿ ಮನಸ್ಪೂರ್ವಕವಾಗಿ ಸಹಭಾಗಿತ್ವವನ್ನು ವಹಿಸಬೇಕು. ಅವರು ತೋರಿಸಿಕೊಟ್ಟಿರುವ ಸರಳತೆ, ಚಾರಿತ್ರ್ಯ, ಧರ್ಮನಿಷ್ಠೆ ಮತ್ತು ರಾಷ್ಟ್ರೀಯ ಆತ್ಮಗೌರವದ ಮಾರ್ಗದಲ್ಲಿ ನಾವು ಅಗ್ರೇಸರರಾದರೆ ಅದು ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.