ಆಗಬೇಕಾಗಿದೆ ವನವಾಸಿ ಕಲ್ಯಾಣ!
ಭಾರತ ದೇಶದಲ್ಲಿ ಸುಮಾರು ಒಂಭತ್ತೂವರೆ ಕೋಟಿಗೂ ಮಿಕ್ಕ ಜನ ಗುಡ್ಡಗಾಡುಗಳಲ್ಲಿ ವಾಸಿಸುತ್ತಿದ್ದಾರೆ. ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿದ್ದಾರೆ. ರಾಷ್ಟ್ರ-ರಾಜ್ಯದ ಕಾನೂನುಗಳಿಂದ ಬೃಹತ್ ಯೋಜನೆ, ಕಾರ್ಖಾನೆಗಳಿಂದ ಸರಿಯಾದ ಪುನರ್ವಸತಿ ಇಲ್ಲದೇ ತಮ್ಮ ಮೂಲ ನಿವಾಸದಿಂದ, ಅರಣ್ಯದಿಂದಲೂ ಹೊರದೂಡಲ್ಪಟ್ಟಿದ್ದಾರೆ. ಬಡತನ, ಅಜ್ಞಾನ, ಮತಾಂತರ ಪಿಡುಗಿನ ವಿರುದ್ಧ ನಿಂತು ಹಲವು ಸೇವಾ ಕಾರ್ಯಕ್ರಮ ಮತ್ತು ವೈವಿಧ್ಯ ಚಟುವಟಿಕೆಗಳ ಮೂಲಕ ಸ್ವಾವಲಂಬಿಗಳನ್ನಾಗಿಸುವತ್ತ ನಿರಂತರವಾಗಿ ಮುನ್ನಡೆಯುತ್ತಿದೆ ವನವಾಸಿ ಕಲ್ಯಾಣ.
೧೯೫೨ರಲ್ಲಿ ಸ್ಥಾಪಿಸಿವಾದ `ವನವಾಸಿ ಕಲ್ಯಾಣ’ ಆಶ್ರಮ ಬಾಳಾಸಾಹೇಬ ದೇಶಪಾಂಡೆಯವರಿಂದ ಸ್ಥಾಪಿತವಾಯಿತು. ವನವಾಸಿ ಜನಾಂಗಗಳ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿರುವ ಈ ಸಂಸ್ಥೆ ಕರ್ನಾಟಕದಲ್ಲಿ ೧೯೮೮ರಲ್ಲಿ ಆರಂಭವಾಯಿತು. ಕರ್ನಾಟಕದಲ್ಲಿ ೫೦ ವಿವಿಧ ಬುಡಕಟ್ಟುಗಳಿಗೆ ಸೇರಿದ ಸುಮಾರು ೩೫ ಲಕ್ಷ ವನವಾಸಿಗಳು ವಾಸಮಾಡುತ್ತಿದ್ದಾರೆ. ಮೈಸೂರು, ಕೊಡಗು, ಕಾರವಾರ, ಧಾರವಾಡ, ಬೆಳಗಾವಿ ಹಾಗೂ ಗುಲ್ಬರ್ಗ ಜಿಲ್ಲೆಗಳಲ್ಲಿ ಗೊಂಡ, ಯರವ, ಸೋಲಿಗ, ಜೇನು, ಕುರುಬ, ಬೇಡ, ಹಾಲಕ್ಕಿ ಹೀಗೆ ಅನೇಕ ಜನಾಂಗಗಳ ಮಧ್ಯೆ ೧೩೫ ಸ್ಥಾನಗಳಲ್ಲಿ ೨೧೧ ಸೇವಾಪ್ರಕಲ್ಪಗಳ ಮೂಲಕ ಸೇವಾಚಟುವಟಿಕೆ ನಡೆಸುತ್ತಿದೆ

`ವನವಾಸಿ ಕಲ್ಯಾಣ’.
ವನವಾಸಿ ಜನಾಂಗಗಳ ಪಾಲಿಗೆ ಶಿಕ್ಷಣ ಕಗ್ಗಂಟಾಗಿಯೇ ಉಳಿದಿದೆ. ಈ ಸ್ಥಿತಿಯನ್ನು ಬದಲಾಯಿಸುವ ದೃಷ್ಟಿಯನ್ನಿಟ್ಟುಕೊಂಡು ಶಿಶುಮಂದಿರ, ರಾತ್ರಿಶಾಲೆ, ಬಾಲಸಂಸ್ಕಾರ ಕೇಂದ್ರ ಗಳೆಲ್ಲವನ್ನೂ ವನವಾಸಿ ಕಲ್ಯಾಣ ಮಾಡುತ್ತಿದೆ. ಬಾಲಿಕಾ ವಿದ್ಯಾರ್ಥಿ ನಿಲಯವನ್ನು ಒಳಗೊಂಡಂತೆ ಮಹಿಳಾ ಶಿಕ್ಷಣಕ್ಕೆ ಪ್ರಾಧಾನ್ಯತೆ ನೀಡುತ್ತಿದೆ.
ಆರೋಗ್ಯದ ಕಡೆಗೂ ವನವಾಸಿ ಕಲ್ಯಾಣವು ಕಾಳಜಿಯನ್ನಿಟ್ಟುಕೊಂಡಿದ್ದು, ಆರೋಗ್ಯ ಮಿತ್ರ ಯೋಜನೆಯಡಿಯಲ್ಲಿ  ವೈದ್ಯಕೀಯ ತಪಾಸಣಾ ಶಿಬಿರ, ಅಗತ್ಯ ಔಷಧಿ ಮತ್ತು ಪೌಷ್ಠಿಕ ಆಹಾರಗಳ ಪೂರೈಕೆ ಮುಂತಾದವು ವನವಾಸಿ ಜನಗಳ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡುತ್ತಿದೆ.
ವನವಾಸಿಗಳ ಕ್ರೀಡಾಸಕ್ತಿ ಮತ್ತು ಪ್ರತಿಭೆಯನ್ನು ಕೂಡ ದೃಷ್ಟಿಯಿಂದ ವನವಾಸಿ ಕಲ್ಯಾಣವು ಒಲಿಂಪಿಕ್ಸ್ ಮಾದರಿಯಲ್ಲಿ ೪ ವರ್ಷಗಳಿಗೊಮ್ಮೆ ರಾಷ್ಟ್ರಮಟ್ಟದ ಕ್ರೀಡಾ ಮಹೋತ್ಸವವನ್ನು ಮಾಡುತ್ತಾ ಬರುತ್ತಿದೆ. ಆರ್ಥಿಕ ಸ್ವಾವಲಂಬನೆ ಯಾವುದೇ ಪ್ರಕಲ್ಪಗಳು ಪೂರ್ಣ ಪರಿಣಾಮ ಬೀರಲು ಅತ್ಯಗತ್ಯ. ವನವಾಸಿಗಳು ತಮ್ಮದೇ ಆದ ಉದ್ಯೋಗದಲ್ಲಿ ಅಥವಾ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲು ಸ್ವಸಹಾಯ ಸಂಘಗಳನ್ನು ಮಾಡಿಕೊಂಡು ಅದರ ಮೂಲಕ ಕೃಷಿವಿಕಾಸ ಕೇಂದ್ರ, ಹೊಲಿಗೆ ತರಬೇತಿ ಕೇಂದ್ರಗಳನ್ನು ನಡೆಸುತ್ತಿದೆ. ಸಮುದಾಯ ಕಾರ್ಯ ಕ್ರಮಗಳನ್ನು ಕೂಡ ನಡೆಸುತ್ತಿದೆ. ಇದಲ್ಲದೆ, ವನವಾಸಿ ಕಲ್ಯಾಣವು ಸಾಮೂಹಿಕ ವಿವಾಹಗಳನ್ನು ಕೂಡ ಪ್ರೋತ್ಸಾಹಿಸುತ್ತಾ ಬಂದಿದೆ. ಆ ಮೂಲಕ ದಂಪತಿಗಳಾದ ಜೋಡಿಗಳಿಗೆ ಐದು ಸಾವಿರ ರೂ. ಧನಸಹಾಯ ನೀಡುತ್ತಿದೆ. ಹೀಗೆ ಹಂತಹಂತವಾಗಿ ಸಾಗುತ್ತಿರುವ ವನವಾಸಿ ಕಲ್ಯಾಣವು ನಾಡಿನ ಸಂಸ್ಕೃತಿ, ಪರಂಪರೆ ಯನ್ನು ಎತ್ತಿ ಹಿಡಿಯುವಲ್ಲಿ ಶ್ರಮಿಸುತ್ತಲೇ ಬರುತ್ತಿದ್ದು, ಆ ಮೂಲಕ ವನವಾಸಿ ಜನಾಂಗಗಳ ಪಾಲಿಗೆ ಆರದ ದೀಪವಾಗಿದೆ.

ವಿಳಾಸ :

ವನವಾಸಿ ಕರ್ನಾಟಕ, `ವನಶ್ರೀ’ ೧೪೩೫/೧೪೩೬/೧೮,
೨ನೇ ಕ್ರಾಸ್, ೫`ಎ’ ಮುಖ್ಯರಸ್ತೆ, `ಡಿ’ ಬ್ಲಾಕ್, ೨ನೇ ಹಂತ,
ರಾಜಾಜಿನಗರ, ಬೆಂಗಳೂರು – ೫೬೦ ೦೧೦
ದೂರವಾಣಿ : ೦೮೦-೨೩೪೨೦೮೪೪, ಮೊ. ೯೪೪೮೨ ೮೪೬೨೫

Leave a Reply

Your email address will not be published.

This site uses Akismet to reduce spam. Learn how your comment data is processed.