ಮನೆಮನೆಯ ಬೀಸುವ ಕಲ್ಲುಗಳಿಂದ, ತೂಗುವ ತೊಟ್ಟಿಲುಗಳಿಂದ, ಮರಮರದ ಮರ್ಮರ ಸ್ವರದಿಂದ ‘ವಂದೇ ಮಾತರಂ’ ಹೊಮ್ಮಿಬರಲಿ. ಹಿಮಾಲಯದ ಶಿಖರಗಳಿಂದ, ಶಿವಾಲಯದ ಗಂಟೆ ಜಾಗಟೆಗಳಿಂದ, ಮಠ ಮಂದಿರಗಳ ಭೇರಿ ನಗಾರಿಗಳಿಂದ, ಕಡಲ ತೀರದ ಹೆದ್ದೆರೆಗಳ ಗರ್ಜನೆಯಿಂದ ಅದು ಮೊರೆದು ಬರಲಿ. ನದಿನಾಲೆಗಳ ಕಲಕಲರವದಿಂದ, ಝರಿ ಜಲಪಾತಗಳ ಭೋರ್ಗರೆತದಿಂದ ಆ ನಾದನವನೀತ ತೇಲಿ ಬರಲಿ. ಕೆಸರುಗದ್ದೆಗಳಿಂದ, ಗಿರಣಿ ಯಂತ್ರಗಳಿಂದ, ತೆಂಗುಕಂಗಿನ ಚಾಮರಗಳಿಂದ, ತೆನೆಯೊಡೆದ ಪೈರು ಪಚ್ಚೆಯ ಮೈಪುಳಕದಿಂದ ಆ ಸಂಗೀತದ ಶ್ರುತಿ ಸ್ಪುರಿಸಿ ಬರಲಿ. ನೆಲದಾಯಿಯ ಮಕ್ಕಳ ಕುಣಿತ ಕೋಲಾಟಗಳಿಂದ, ಹರೆಯದ ಹುಡುಗರ ಹೃದಯಗಹ್ವರದಿಂದ, ನೆಲ ಗೋಡೆ ಚಾವಣಿಗಳಿಂದ, ಛಾತ್ರವೃಂದದ ಕ್ಷಾತ್ರಕಂಠಗಳಿಂದ ಮಾತೃವಂದನೆಯ ಸಂಕೀರ್ತನೆಯಾಗಲಿ, ಸೈನಿಕರ ಕೋವಿಯ ಬಾಯಲ್ಲಿ, ಶಿಕ್ಷಕರ ಬೋಧನೆಯಲ್ಲಿ, ವಿದ್ವಾಂಸರ ಸಂಶೋಧನೆಯಲ್ಲಿ, ತಾಯಿ ತಂಗಿಯರ ಹಾಡು ಹಸೆಗಳಲ್ಲಿ, ಹೆಣಿಗೆ ಹೊಲಿಗೆಗಳಲ್ಲಿ ‘ವಂದೇ ಮಾತರಂ’ ಸಾಕಾರಗೊಳ್ಳಲಿ.
ಈ ದೃಷ್ಟಿಯಿಂದ ಇಂದು ಪ್ರಯತ್ನ ಸಾಗಬೇಕಾಗಿದೆ. ಸಭೆ ಸಮಾರಂಭಗಳಲ್ಲಿ, ಪೂಜೆ ಉತ್ಸವಗಳಲ್ಲಿ, ಸಾರ್ವಜನಿಕ ಕಾರ್ಯಕಲಾಪಗಳೆಲ್ಲದರಲ್ಲೂ ಅದನ್ನು ಬಳಕೆಗೆ ತಂದು, ಇಂದಿನ ಮತ್ತು ಮುಂದಿನ ಜನಾಂಗಗಳ ಅಂತಃಕರಣಕ್ಕೆ ಅದರ ರಾಗಭಾವಗಳನ್ನು ಇಳಿಸುವ ಕಾರ್ಯ ನಡೆಯಬೇಕಾಗಿದೆ.

‘ವಂದೇ ಮಾತರಂ’ನ ಏರಿಳಿತಗಳೇ ನಮ್ಮ ರಾಷ್ಟ್ರಜೀವನದ ಏರಿಳಿತಗಳು. ಅದರ ನಲಿವು ರಾಷ್ಟ್ರದ ನಲಿವು; ಅದರ ಅಳಲು ರಾಷ್ಟ್ರದ ಅಳಲು. ಅದರ ಗೆಲುವು ರಾಷ್ಟ್ರದ ಗೆಲುವು; ಅದರ ಸೋಲು ರಾಷ್ಟ್ರದ ಸೋಲು. ಅದರ ಮರೆವು ರಾಷ್ಟ್ರದ ಮರೆವು; ಅದರ ವಿಭಜನೆ ರಾಷ್ಟ್ರದ ವಿಭಜನೆ. ಅದರ ಕಥೆ ರಾಷ್ಟ್ರದ ಕಥೆ; ಅದರ ವ್ಯಥೆ ರಾಷ್ಟ್ರದ ವ್ಯಥೆ – ದುರಂತ ಕಥೆ, ದಾರುಣ ವ್ಯಥೆ !
ಆದರೆ ಈ ಮೃತ್ಯುಂಜಯ ರಾಷ್ಟ್ರಕ್ಕೆ ಇಂಥ ಕಥೆಗಳು, ಇಂಥ ವ್ಯಥೆಗಳು ಹೊಸವಲ್ಲ. ಈ ವಿಜಿಗೀಷು ರಾಷ್ಟ್ರದ್ದು, ಇಷ್ಟಕ್ಕೆಲ್ಲ ಹತಾಶವಾಗಿ ಕುಸಿದು ಬೀಳುವ ಚೈತನ್ಯವಲ್ಲ. ಬಲು ಬೇಗ ಈ ದೃಶ್ಯ ಬದಲಾಗುತ್ತದೆ; ನೋಡನೋಡುತ್ತ ದುರಂತ ಸುಖಾಂತವಾಗುವ, ಇಂದಿನ ವ್ಯಥೆ ಹಳೆಯ ಕಥೆಯಾಗುವ ದಿನ ಬರುತ್ತದೆ. ಪುನಃ ‘ವಂದೇ ಮಾತರಂ’ ಘೋಷಣೆ ಸಂತಾನಕೋಟಿಯ ಅಂತಃಕರಣದ ಆಳದಿಂದ ಉಕ್ಕೇರುತ್ತದೆ; ದೇಶದ ಉದ್ದಗಲಕ್ಕೂ ಹರಿದಾಡತೊಡಗುತ್ತದೆ. ಜನ ಅದಕ್ಕೆ ಓಗೊಡುತ್ತಾರೆ. ಭಾವೋನ್ಮತ್ತರಾಗಿ ಅದನ್ನು ಹಾಡುತ್ತಾರೆ; ಪೂರ್ಣವಾಗಿ ಹಾಡುತ್ತಾರೆ. ಹಾಡಹಾಡುತ್ತಾ ಅದರ ಅಮರತೆಯನ್ನು, ತಾಯಿಯ ಶಾಶ್ವತ ಅಸ್ತಿತ್ವವನ್ನು, ಪುತ್ರತ್ವದ ಸಾರ್ಥಕತೆಯನ್ನು ಜಗತ್ತಿಗೆ ಸಾರುತ್ತಾರೆ. ಭಾರತಾಂಬೆಯ ಅಸಂಖ್ಯ ಸುಪುತ್ರರ ನಾಲಗೆಯಲ್ಲಿ ನಲಿದು, ನೆತ್ತರಲ್ಲಿ ನೆನೆದು, ಅಗಣಿತ ಅಮರ ಬಲಿದಾನಗಳಿಗೆ ಪ್ರೇರಣೆಯಾದ ಉಜ್ವಲ ದೇಶಭಕ್ತಿಯ ಈ ಮಂತ್ರವನ್ನು ನಾಡಿನ ಯುವಜನರು ತಮ್ಮ ಸ್ವರಕ್ಕೆ, ಮನಸ್ಸಿಗೆ ತಂದುಕೊಂಡು ದಿಗಂತವ್ಯಾಪಿಯಾಗಿ ಹಬ್ಬಿಸುತ್ತಾರೆ; ಪೀಳಿಗೆಯ ನಂತರ ಪೀಳಿಗೆ ಅದರ ಉತ್ತರಾಧಿಕಾರ ವಹಿಸಿಕೊಳ್ಳುತ್ತಾರೆ. ಆಗ, ಭಾರತಾಂಬೆ ಎಚ್ಚೆತ್ತು ಉಸಿರೆಳೆದು ನಿಲ್ಲುತ್ತಾಳೆ.