ಇಂದು ಜಯಂತಿ

ಲೇಖನ: ಹರ್ಷ ಹೆಗಡೆ ಕೊಂಡದಕುಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಅಕ್ಷರಗಳನ್ನು ಪೋಣಿಸಿದವರು ಅನೇಕರು, ಆದರೆ ಕೆಲವರು ಮಾತ್ರ ಆ ಅಕ್ಷರಗಳಿಗೆ ಮಾಂತ್ರಿಕ ಶಕ್ತಿಯನ್ನು ತುಂಬಿದವರು. ಅಂತಹ ಮಹಾನ್ ಚೇತನಗಳಲ್ಲಿ ಒಬ್ಬರು, ಯದುಗಿರಿಯ ಮಣ್ಣಿನ ಮಗ, ಕನ್ನಡದ ಕಾವ್ಯಋಷಿ ಪುರೋಹಿತ ತಿರುನಾರಾಯಣ ನರಸಿಂಹಾಚಾರ್, ಅಥವಾ ಕನ್ನಡ ನಾಡು ಪ್ರೀತಿಯಿಂದ ಗುರುತಿಸುವ ‘ಪುತಿನ’. ಒಬ್ಬ ಬರಹಗಾರನಾಗಿ ಕನ್ನಡಿಗರನ್ನು ಪುತಿನ ಸದಾ ಕಾಡುವುದು ಅವರ ‘ಸರಳತೆ’ ಮತ್ತು ‘ದರ್ಶನ’ಗಳ ಸಮನ್ವಯದಿಂದ. ಮಿಲಿಟರಿ ಕಚೇರಿಯ ಶುಷ್ಕ ಕಡತಗಳ ನಡುವೆ ಕುಳಿತು, ಅಂಕಿ-ಅಂಶಗಳ ಲೆಕ್ಕ ಹಾಕುತ್ತಲೇ ಬ್ರಹ್ಮಾಂಡದ ಲಯವನ್ನು ಕಾವ್ಯದ ಮೂಲಕ ಹಿಡಿದಿಟ್ಟ ಆ ಜಾಣ್ಮೆ ಸಾಮಾನ್ಯರಿಗೆ ನಿಲುಕುವಂಥದ್ದಲ್ಲ.

ಸಂಪ್ರದಾಯಿಕ ಗರ್ಭದಲ್ಲಿ ಅರಳಿದ ಚೇತನ
1905 ಮಾರ್ಚ್ 17ರಂದು ಮೇಲುಕೋಟೆಯಲ್ಲಿ ಪುತಿನ ಜನಿಸಿದಾಗ, ಅವರ ಸುತ್ತಲೂ ಇದ್ದದ್ದು ವೇದಘೋಷಗಳ ವಾತಾವರಣ. ತಂದೆ ತಿರುನಾರಾಯಣ ಅಯ್ಯಂಗಾರ್ ವೇದ-ವೇದಾಂತಗಳ ಪಂಡಿತರು, ತಾಯಿ ಗೊರೂರಿನ ಶ್ರೀರಂಗಮ್ಮ. ಈ ದಂಪತಿಗಳ ಪುತ್ರನಾಗಿ ಜನಿಸಿದ ಪುತಿನ ಅವರಿಗೆ ಸಂಸ್ಕೃತ ಮತ್ತು ತಮಿಳು ರಕ್ತಗತವಾಗಿ ಬಂದಿತ್ತು. ಆದರೆ ವಿಚಿತ್ರವೆಂದರೆ, ಅವರ ಪ್ರಾಥಮಿಕ ಶಿಕ್ಷಣದಿಂದ ಕಾಲೇಜಿನವರೆಗೂ ಎಲ್ಲಿಯೂ ಕನ್ನಡ ಅವರ ಪಠ್ಯದ ಭಾಗವಾಗಿರಲೇ ಇಲ್ಲ! ಶಾಲೆಯಲ್ಲಿ ಸಂಸ್ಕೃತ, ಮನೆಯಲ್ಲಿ ತಮಿಳು, ಕಚೇರಿಯಲ್ಲಿ ಇಂಗ್ಲಿಷ್‌ – ಹೀಗಿದ್ದರೂ ಅವರು ಕನ್ನಡ ಸಾಹಿತ್ಯದ ಶಿಖರ ಏರಿದ್ದೇ ಒಂದು ಅದ್ಭುತ.

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆಯುವಾಗ ಅವರಿಗೆ ಎಂ. ಹಿರಿಯಣ್ಣ ಅವರಂತಹ ದಾರ್ಶನಿಕರ ಮಾರ್ಗದರ್ಶನ ದೊರೆಯಿತು. ಬಳಿಕ ತೀ.ನಂ.ಶ್ರೀ ಮತ್ತು ಶಿವರಾಮ ಶಾಸ್ತ್ರಿಗಳಂತಹ ಸ್ನೇಹಿತರ ಒಡನಾಟ ಅವರ ಕಾವ್ಯ ರಚನೆಗೆ ಪ್ರೇರಕವಾಯಿತು. ನಂತರದ ದಿನಗಳಲ್ಲಿ ಕಾಳಿದಾಸನ ಉಪಮೆಗಳು ಮತ್ತು ವರ್ಡ್ಸ್‌ವರ್ತ್‌ನ ಪ್ರಕೃತಿ ಪ್ರೇಮ ಇವರ ಮನೋಧರ್ಮವನ್ನು ಸೂಕ್ಷ್ಮವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

ಅಕೌಂಟ್ ಬುಕ್ಕಿನ ನಡುವೆ ನಲಿದ ಅಕ್ಷರ ನೃತ್ಯ
ಪುತಿನ ಅವರ ವೃತ್ತಿಜೀವನ ಅವರ ವ್ಯಕ್ತಿತ್ವದಷ್ಟೇ ಕುತೂಹಲಕಾರಿ. ಬಿ.ಎ. ಮುಗಿದ ಮೇಲೆ ಅವರು ಸೇರಿದ ಮೊದಲ ಕೆಲಸ ಮೈಸೂರಿನ ಸೈನ್ಯಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತನಾಗಿ. ನಂತರ ಅದೇ ಕಚೇರಿಯಲ್ಲಿ ಮ್ಯಾನೇಜರ್ ಆಗಿ, ಶಾಸನಸಭಾ ಕಚೇರಿಯಲ್ಲಿ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಎಲ್ಲಿಯ ಕವಿ ಹೃದಯ ಎಲ್ಲಿಯ ಅಂಕಿಸಂಖ್ಯೆಗಳ ಮೇಲಾಟ. ಕವಿ ಹೃದಯದ ವ್ಯಕ್ತಿಗೆ ಮಿಲಿಟರಿ ಇಲಾಖೆಯ ಕೆಲಸ ಅತಿ ಎನಿಸಬಹುದು, ಆದರೆ ಪುತಿನ ಅವರು ಎರಡನ್ನೂ ಅಷ್ಟೇ ಸಮತೋಲನದಿಂದ ನಿಭಾಯಿಸಿದರು. “ಹುಲ್ಲುಗಾವಲಿನ ಹೂತಮರಗಳ ಎಲೆಗಳು ಬಡಿಸುವ ಬಾನ ಬಿಂದುಗಳ ಲೆಕ್ಕದೊಳಾಯ್ತು ನನ್ನಾಸಕ್ತಿ” ಎಂದು ಸ್ವತಃ ಹೇಳುತ್ತಿದ್ದ ಈ ಕವಿ, ಜೀವನದ ಜವಾಬ್ದಾರಿಗಳನ್ನೂ ಅಷ್ಟೇ ಶ್ರದ್ಧೆಯಿಂದ ನಿಭಾಯಿಸಿದರು. ನಿವೃತ್ತಿಯ ನಂತರ ಅವರು ಕನ್ನಡ ವಿಶ್ವಕೋಶ ಮತ್ತು ಇಂಗ್ಲಿಷ್-ಕನ್ನಡ ನಿಘಂಟಿನ ಸಂಪಾದಕರಾಗಿ ಎಂಟು ವರ್ಷಗಳ ಕಾಲ ಕೆಲಸ ಮಾಡಿದ್ದು ಅವರ ವಿದ್ವತ್ತಿಗೆ ಮತ್ತು ಅದರೆಡೆಗಿನ ಬದ್ಧತೆಗೆ ಸಾಕ್ಷಿ.

ಗೀತರೂಪಕಗಳ ಮಾಂತ್ರಿಕ
ಪುತಿನ ಅವರ ಸಾಹಿತ್ಯ ಸೃಷ್ಟಿಯು ಕೇವಲ ಕಾವ್ಯಕ್ಕೆ ಸೀಮಿತವಾಗಲಿಲ್ಲ. ಅವರ ಮೊದಲ ಕವನ ಸಂಕಲನ ‘ಹಣತೆ’ (1933) ಮಾಸ್ತಿಯವರ ಮುನ್ನುಡಿಯೊಂದಿಗೆ ಪ್ರಕಟವಾದಾಗ ಕನ್ನಡ ಸಾಹಿತ್ಯದಲ್ಲಿ ಹೊಸ ಬೆಳಕೊಂದರ ಉದಯವಾಯಿತು. ಅಲ್ಲಿಂದ ಶುರುವಾದ ಇವರ ಕಾವ್ಯ ಪಯಣ ‘ವಿಕಟಕವಿವಿಜಯ’, ‘ಶಾರದಾಯಾಮಿನಿ’, ‘ಗಣೇಶ ದರ್ಶನ’, ‘ರಸಸರಸ್ವತಿ ‘ ಮುಂತಾದ ಸಂಕಲನಗಳ ಮೂಲಕ ಝರಿಯಾಗಿ ಹರಿಯಿತು.

ಆದರೆ ಪುತಿನ ಅವರ ಹೆಸರು ಸುವರ್ಣಾಕ್ಷರಗಳಲ್ಲಿ ಅಚ್ಚಾದದ್ದು ಅವರ ಗೀತ ರೂಪಕಗಳಿಂದ. ಶಾಸ್ತ್ರೀಯ ಸಂಗೀತದ ರಾಗಗಳನ್ನು ಕಾಲಘಟ್ಟದ ಸಾಹಿತ್ಯದ ಭಾವದೊಂದಿಗೆ ಬೆಸೆದ ಅವರು ಕನ್ನಡಕ್ಕೆ ನೀಡಿದ ಕೊಡುಗೆ ಅಪೂರ್ವ. ಅವರ ‘ಗೋಕುಲ ನಿರ್ಗಮನ’ ಕೃತಿಯಲ್ಲಿ ಕೃಷ್ಣನು ಬೃಂದಾವನವನ್ನು ಬಿಟ್ಟು ಮಥುರೆಯ ಕಡೆಗೆ ಹೊರಡುವ ಕ್ಷಣ, ಆ ವೇಣುವಿಸರ್ಜನದ ಸನ್ನಿವೇಶ ಕೇವಲ ಪೌರಾಣಿಕ ಕಥೆಯಾಗಿ ಉಳಿಯದೆ, ಪ್ರತಿಯೊಬ್ಬ ಮನುಷ್ಯನ ಜೀವನದ ಜವಾಬ್ದಾರಿಗಳ ಕಡೆಗಿನ ಪಯಣವಾಗಿ ಗೋಚರಿಸುತ್ತದೆ. ಬಿ.ವಿ. ಕಾರಂತರಂತಹ ದಿಗ್ಗಜರು ಈ ನಾಟಕವನ್ನು ರಂಗಭೂಮಿಯ ಮೇಲೆ ತಂದಾಗ ಅದು ಜನಸಾಮಾನ್ಯರ ಮನಸೂರೆಗೊಂಡಿದ್ದೂ ಅಲ್ಲದೇ ಅದೆಷ್ಟೋ ಹೃದಯದ ಕದವನ್ನೂ ತಟ್ಟಿತ್ತು.

ಅಂತೆಯೇ ‘ಅಹಲ್ಯೆ’ ಗೀತರೂಪಕದಲ್ಲಿ, ಕಲ್ಲಾಗಿದ್ದ ಅಹಲ್ಯೆಯ ಮೇಲೆ ರಾಮನ ಪಾದದ ಧೂಳು ಬಿದ್ದಾಗ ಅವಳು ಹೆಣ್ಣಾಗುವ ಪ್ರಸಂಗದಲ್ಲಿ ರಾಮ ಕೇವಲ ಒಬ್ಬ ದೇವನಲ್ಲ, ಅವನು ಸಕಲ ಚರಾಚರಗಳಲ್ಲಿ ಹರಿಯುವ ‘ಚೇತನ’ವಾಗಿ ಕಾಣಿಸಿಕೊಳ್ಳುತ್ತಾನೆ. ಆ ದಿವ್ಯಚೇತನದ ಸ್ಪರ್ಶವಾದಾಗ ಎಂಥ ಜಡತ್ವವೂ ಭಾವ ಪಡೆದು ಜೀವಂತಿಕೆಯಾಗಿ ಬದಲಾಗುತ್ತದೆ ಎಂಬ ದರ್ಶನವನ್ನು ಪುತಿನ ನಮಗೆ ನೀಡುತ್ತಾರೆ.

ಸಾಹಿತ್ಯದ ವಿವಿಧ ಆಯಾಮಗಳು
ಕವಿತೆ ಮತ್ತು ನಾಟಕಗಳ ಜೊತೆಗೆ ಪುತಿನ ಅವರು ಲಲಿತ ಪ್ರಬಂಧಗಳಲ್ಲಿಯೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ‘ರಾಮಾಚಾರಿಯ ನೆನಪು’, ‘ಈಚಲು ಮರದ ಕೆಳಗೆ’, ‘ಧ್ವಜರಕ್ಷಣೆ’ ಮುಂತಾದ ಕೃತಿಗಳಲ್ಲಿ ಅವರ ವಿಚಾರಗಳು ಸೃಜನಶೀಲವಾಗಿ ಮಂಡಿತವಾಗಿವೆ. ‘ಕಾವ್ಯ ಕುತೂಹಲ’ ಮತ್ತು ‘ರಸಪ್ರಜ್ಞೆ’ ಅವರ ಸಾಹಿತ್ಯ ಮೀಮಾಂಸೆಯ ಕೃತಿಗಳು. ಅವರ ‘ಶ್ರೀಹರಿಚರಿತೆ’ ಮಹಾಕಾವ್ಯದಲ್ಲಿ ಅವರು ಕೃಷ್ಣನನ್ನು ಹೊಸತೊಂದು ದೃಷ್ಟಿಕೋನದಲ್ಲಿ ಚಿತ್ರಿಸುತ್ತಾರೆ – ಇಲ್ಲಿ ಕೃಷ್ಣ ಏಕಕಾಲಕ್ಕೆ ಮಹಾಪುರುಷನಾಗಿಯೂ ಜನಸಾಮಾನ್ಯರ ಮುಗ್ಧತೆಯ ಪ್ರತಿರೂಪವಾಗಿಯೂ ಕಲ್ಪಿತವಾಗುತ್ತಾನೆ.

ಪ್ರಶಸ್ತಿಗಳು ಮತ್ತು ಸಾರ್ವಕಾಲಿಕ ಮೌಲ್ಯ
ಪುತಿನ ಅವರಿಗೆ ಸಂದ ಗೌರವಗಳಿಗೇನು ಕಡಿಮೆಯಿಲ್ಲ. ಪದ್ಮಶ್ರೀ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಗೌರವ ಡಿ.ಲಿಟ್ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ – ಇವೆಲ್ಲವೂ ಅವರನ್ನು ತಾನಾಗೇ ಹುಡುಕಿಕೊಂಡು ಬಂದವು. ಆದರೆ 1998ರಲ್ಲಿ ಅವರು ಇಹಲೋಕ ತ್ಯಜಿಸುವವರೆಗೂ ಅವರಿಗೆ ಇದಾವುದರ ಗರ್ವವೂ ಇರಲಿಲ್ಲ.

ಪುತಿನ ಅವರ ಸಾಹಿತ್ಯ ನಮಗೆ ಇವತ್ತಿಗೂ ಸ್ಥಾಯೀಯಾಗಿ ನಿಲ್ಲುವುದೇಕೆಂದರೆ ಅದು ಕೇವಲ ಹಳೆಯ ಕಥೆಗಳನ್ನು ಹೇಳುತ್ತದೆಂದಲ್ಲ, ಬದಲಾಗಿ ಮನುಷ್ಯನ ಅಂತರಂಗದ ತಲ್ಲಣಗಳನ್ನು ಮತ್ತು ಅದಕ್ಕಿರುವ ತಾತ್ವಿಕ ಪರಿಹಾರಗಳನ್ನು ನೀಡುತ್ತದೆಯೆಂದು. ಅವರದ್ದೇ ಮಾತುಗಳಲ್ಲಿ ಹೇಳಬೇಕೆಂದರೆ “ಬದುಕು ಹಸಿರಾಗಿರಬೇಕು, ಅಂತರಂಗ ಬೆಳಕಾಗಿರಬೇಕು.” ಆ ಬೆಳಕು ಇಂದಿಗೂ ಅವರ ಪದದ ನಡುವಿನ ಅಂತರದಲ್ಲಿ ಉಸಿರಾಡುತ್ತಿದೆ. ಆ ಮೂಲಕ ಸಾಂಸ್ಕೃತಿಕ ಕಿಂಕರರೆಲ್ಲರ ಮನದಾಳದಲ್ಲಿ ಹರಿಯುತ್ತಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.