ಇಂದು ವಿಶ್ವ ಗುಬ್ಬಿ ದಿನ

ಲೇಖನ: ಜಿ.ಪಿ.ಅನನ್ಯ, ತೃತೀಯ ಬಿಎ, ಇತಿಹಾಸ ಮತ್ತು ಸಮಾಜಶಾಸ್ತ್ರ ವಿಭಾಗ, ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ, ಶಿವಮೊಗ್ಗ ಜಿಲ್ಲೆ‌

ಗುಬ್ಬಿ ಗುಬ್ಬಿ ಚಿಂವ್ ಚಿಂವ್ ಎಂದು ಕರೆಯುವ ಯಾರನ್ನು? ಆಚೆ ಈಚೆ ಹೊರಳಿಸಿ ಕಣ್ಣು ನೋಡುವೆ ಏನನ್ನು? ಮೇಲೆ ಕೆಳಗೆ ಕೊಂಕಿಸಿ ಕೊರಳನು ಹುಡುಕುವೆ ಏನನ್ನು?

ಪ್ರತಿ ವರ್ಷ ಒಂದೊಂದು ಧ್ಯೇಯದೊಂದಿಗೆ ಗುಬ್ಬಚ್ಚಿ ದಿನವನ್ನು ಆಚರಣೆ ಮಾಡಲಾಗುತ್ತದೆ. “ಸಣ್ಣ ಪಕ್ಷಿಗಳನ್ನು ಉಳಿಸಿ, ನಮ್ಮ ಭವಿಷ್ಯವನ್ನು ಉಳಿಸಿ” (Saving Small Birds, Saving Our Future) ಈ ವರ್ಷದ ಧ್ಯೇಯವಾಗಿದೆ.

ಈ ದಿನವನ್ನು ಪ್ರಪ್ರಥಮವಾಗಿ ಮಾರ್ಚ್ 20, 2010 ರಂದು ಭಾರತದಲ್ಲಿ ಮೊಹಮ್ಮದ್ ದಿಲಾವರ್ ಸ್ಥಾಪಿತ ನೇಚರ್ ಫಾರೇವರ್ ಸೊಸೈಟಿ ಆಫ್ ಇಂಡಿಯಾ ಸಂಸ್ಥೆಯು ಆಚರಿಸಲಾರಂಭಿಸಿತು. ಇದು ಗುಬ್ಬಚ್ಚಿಯನ್ನು ಮಾತ್ರ ಉಳಿಸುವ ಸಂಚಲನವಾಗಿರದೆ ಆ ಮೂಲಕ ನಶಿಸುತ್ತಿರುವ ಎಲ್ಲ ಪ್ರಕೃತಿ-ಜೀವವೈವಿಧ್ಯಗಳ ಬಗ್ಗೆ ಮತ್ತು ಅವುಗಳ ಸಹಜ ಪರಿಸರವನ್ನು ಕಾಪಾಡುವ ಅಗತ್ಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವನ್ನು ಮೂಡಿಸುವುದು ಈ ದಿನಾಚರಣೆ ಉದ್ದೇಶವಾಗಿದೆ.

ಪ್ಯಾಸರಿಡೆ ಕುಟುಂಬಕ್ಕೆ ಸೇರಿದ ಗುಬ್ಬಚ್ಚಿ(House Sparrow) ಇದರ ವೈಜ್ಞಾನಿಕ ಹೆಸರು ‘Passer domesticus’. ಗುಬ್ಬಚ್ಚಿಯ ಉದ್ದವು ಸುಮಾರು 14 ರಿಂದ 16 ಸೆಂ.ಮೀ ಇರುತ್ತದೆ ಮತ್ತು ತೂಕವು 25 ರಿಂದ 40 ಗ್ರಾಂಗಳ ನಡುವೆ ಇರುತ್ತದೆ. ಇದರ ದೇಹವು ಕಂದು ಮತ್ತು ಬೂದು ಬಣ್ಣಗಳ ಮಿಶ್ರಣವಾಗಿರುತ್ತದೆ. ಇದರ ಆಯಸ್ಸು 3-5 ವರ್ಷ.

ಅಜ್ಜಿ-ತಾತ ಹೇಳಿದ ಕತೆಗಳಲ್ಲಿ ನಾಯಕಿಯೇ ಈ ಗುಬ್ಬಕ್ಕ. ಕಾಗಕ್ಕ ಗುಬ್ಬಕ್ಕನ ಕತೆಯಲ್ಲಂತು ಗುಬ್ಬಕ್ಕನೇ ಪ್ರಧಾನ ನಾಯಕಿ. ಇಂದಿನ ಯಾವುದೇ 70 ಎಂ. ಎಂ. ಚಿತ್ರಗಳು ಇದಕ್ಕೆ ಸರಿಸಾಟಿಯಾಗಲ್ಲ. ಹಿರಿಯರ ಕಾಲದಿಂದಲೂ ಮನುಷ್ಯರ ಜೊತೆಗಿರುವ ಗುಬ್ಬಚ್ಚಿಗಳಿಗೂ ನಮ್ಮ ಬಾಲ್ಯಕ್ಕೂ ಬಿಡದ ನಂಟು. ಚಿಂವ್… ಚಿಂವ್… ಎನ್ನುತ್ತ, ಪುರ‍್ರನೆ ಹಾರುವ ಅದರ ಸಡಗರವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಮನುಷ್ಯನೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿರುವ ಈ ಚಿಟಗುಬ್ಬಿ ಮನೆಯ ಮುಂದೆ ಚೆಲ್ಲಿರುತ್ತಿದ್ದ ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ಕೊಕ್ಕಿನಲ್ಲಿ ಚುಚ್ಚಿ ತಿನ್ನುತ್ತಾ ಚಿಂವ್ ಚಿಂವ್ ಎನ್ನುತ್ತಾ ಶಬ್ದ ಮಾಡುತ್ತಿದ್ದದ್ದು ನಮಗೆಲ್ಲಾ ಹಿತವಾಗಿರುತ್ತಿತ್ತು. ಸಾಧಾರಣವಾಗಿ ಮನೆಗಳ ಛಾವಣಿಯ ಜಂತುವಿನಲ್ಲೋ ಇಲ್ಲವೇ ಯಾರೂ ಮುಟ್ಟದಂತಹ ಜಾಗಗಳಲ್ಲಿ ಗೂಡನ್ನು ಕಟ್ಟಿಕೊಂಡು ಅವುಗಳ ಸುಖಃ ಸಂಸಾರ ಫಲವಾಗಿ ಇಡುತ್ತಿದ್ದ ಮೊಟ್ಟೆಗಳನ್ನು ನೋಡುವುದೇ ನಮಗೆ ಆನಂದವಾಗುತ್ತಿತ್ತು. ಆ ಮೊಟ್ಟೆಯೊಡೆದು ಮರಿಗಳಾಗಿ ಅವುಗಳಿಗೆ ಅಮ್ಮ ಆಹಾರವನ್ನು ತಿನ್ನಿಸುವುದನ್ನು ವರ್ಣಿಸುವುದಕ್ಕಿಂತಲು ನೋಡಿ ಅನುಭವಿಸಿದವರಿಗೇ ಗೊತ್ತು ಅದರ ಗಮ್ಮತ್ತು.

ಅಷ್ಟೇ ಅಲ್ಲದೇ ಈ ಗುಬ್ಬಿಗಳು ರೈತರು ಬೆಳೆಯುವ ಬೆಳೆಗಳಿಗೆ ಕಂಟಕಪ್ರಾಯವಾಗಿರುವ ಕೀಟ ಹುಳು-ಹುಪ್ಪಡಿಗಳನ್ನು ತನ್ನ ಆಹಾರವನ್ನಾಗಿಸಿಕೊಂಡು ರೈತ ಮಿತ್ರ ಎಂಬಂತೆ ಜೈವಿಕ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಇವುಗಳ ಪಾತ್ರ ಅತಿ ಮಹತ್ವದ್ದು.

ಮನುಷ್ಯರ ಜೀವನಶೈಲಿ ಬದಲಾದ ಕಾರಣದಿಂದಾಗಿಯೇ ಈ ಗುಬ್ಬಚ್ಚಿಗಳು ಅವಸಾನಕ್ಕೆ ತಲುಪಿವೆ ಎಂದರೆ ಅಚ್ಚರಿಯಾದರೂ ಅದು ನಂಬಲೇ ಬೇಕಾದ ವಿಷಯವಾಗಿದೆ. ಆಧುನಿಕ ತಂತ್ರಜ್ಞಾನದಿಂದಾಗಿ ಹಳೆಯ ವಿಶಾಲವಾದ ಹೆಂಚಿನ ಕಟ್ಟಡಗಳ ಜಾಗದಲ್ಲಿ ಎತ್ತಎತ್ತರದ ಸಿಮೆಂಟ್ ಕಟ್ಟಡಗಳು ಎದ್ದ ಕಾರಣ, ಗುಬ್ಬಚ್ಚಿಗಳು ತಮ್ಮ ಆವಾಸಸ್ಥಾನವನ್ನು ಕಂಡುಕೊಳ್ಳದ ಆಕಾರಕ್ಕೆ ಬದಲಾಗಿವೆ.

ಇಂದು ಅನೇಕರ ಮನೆಯಲ್ಲಿಯೂ ಅಕ್ಕಿ, ಗೋಧಿ, ಇತರೇ ಆಹಾರ ಧಾನ್ಯಗಳನ್ನು ತಂದು ಕೇರುವುದಾಗಲೀ, ಬೀಸುವುದಾಗಲೀ ಮಾಡದೇ ಎಲ್ಲರೂ ಯಂತ್ರೀಕೃತ ಶುದ್ಧೀಕರಿಸಿದ ಪ್ಯಾಕೆಟ್‌ಗಳಲ್ಲಿ ಸಿಗುವ ವಸ್ತುಗಳನ್ನೇ ಖರೀದಿಸುವ ಕಾರಣ ಮನೆಯಲ್ಲೂ ಮತ್ತು ಹಳೆಯ ಕಿರಾಣಿ ಅಂಗಡಿಗಳಲ್ಲಿ ಸಿಗುತ್ತಿದ್ದ ಆಹಾರ ಧಾನ್ಯಗಳು ಗುಬ್ಬಚ್ಚಿಗಳಿಗೆ ಸಿಗುತ್ತಿಲ್ಲದ ಕಾರಣ ಆಹಾರ ಅರಸುತ್ತ ನಗರಗಳಿಂದ ಕಾಣೆಯಾಗಿವೆ.
ಇದಲ್ಲದೇ ಎಗ್ಗಿಲ್ಲದೇ ಎಲ್ಲೆಂದರಲ್ಲಿ ಮುಗಿಲೆತ್ತರದ ಮೊಬೈಲ್ ಟವರ್ಗಳನ್ನು(4G, 5G)ಅಳವಡಿಸಿರುವ ಕಾರಣ ಅವುಗಳು ಹೊರಸೂಸುವ ಎಲೆಕ್ಟ್ರೋ ಮ್ಯಾಗ್ನೆಟಿಕ್ ವಿಕಿರಣಗಳು ಹಾಗೂ ಕಂಪ್ಯೂಟರ್, ಲ್ಯಾಪ್ಟಾಪ್ ಗಳ ಬಳಕೆಯು ಸಹ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣವಾಗಿದೆ.

ಅಷ್ಟೆ ಅಲ್ಲದೇ ರೈತರೂ ಸಹಾ ಕೀಟಗಳನ್ನು ಕೊಲ್ಲುವುದಕ್ಕಾಗಿ ಶಕ್ತಿಯುತ ಕೀಟನಾಶಕಗಳನ್ನು ಬಳಸುವ ಕಾರಣ, ಆ ಕೀಟನಾಶಕ ಸಿಂಪಡಿಸಿದ ಕೀಟಗಳನ್ನೇ ಗುಬ್ಬಚ್ಚಿಗಳು ತಿನ್ನುವ ಮೂಲಕ ಅವುಗಳ ಅವಸಾನದ ಹಾದಿ ಹಿಡಿದಿವೆ.

ಕಾಡುಗಳನ್ನು ನಾಶಪಡಿಸಿ ಆಧುನಿಕ ಕಟ್ಟಡಗಳು, ಮಾಲ್‌ಗಳು, ಕೈಗಾರಿಕೆಗಳು ಇತ್ಯಾದಿಗಳನ್ನು ನಿರ್ಮಿಸುವ ಮೂಲಕ ಅರಣ್ಯದ ನಾಶವೂ ಗುಬ್ಬಚ್ಚಿಗಳ ಸಂಖ್ಯೆ ಕಡಿಮೆಯಾಗಲು ಮತ್ತೊಂದು ಪ್ರಮುಖ ಕಾರಣ. ಒಂದು ಕಾಲದಲ್ಲಿ ಪಟ್ಟಣಗಳಲ್ಲಿ ಮಾತ್ರ ಕಾಂಕ್ರೀಟ್ ಕಟ್ಟಡಗಳ ನಿರ್ಮಾಣ ಸಾಮಾನ್ಯವಾಗಿತ್ತು. ಆದರೆ, ಇತ್ತೀಚೆಗೆ ಹಳ್ಳಿಗಳಲ್ಲಿಯೂ ಇದೇ ಆಧುನಿಕತೆ ಮನೆ ಮಾಡಿ, ಹಳ್ಳಿಯಲ್ಲಾಗಲೀ ದಿಲ್ಲಿಯಲ್ಲಾಗಲೀ, ಹಂಚಿನ ಮತ್ತು ಸಾಂಪ್ರದಾಯಿಕ ಮನೆಗಳು ಮಾಯವಾಗಿ ಅವುಗಳ ಪ್ರಾಂಗಣಗಳಲ್ಲಿ ಗುಬ್ಬಿಗಳು ಗೂಡುಕಟ್ಟಿ ಸಂಸಾರ ನಡೆಸುವುದಕ್ಕಾಗದೇ ಇರುವುದೂ ಸಹಾ ಗುಬ್ಬಚ್ಚಿಯ ಸಂತತಿ ಕ್ಷೀಣಿಸಲು ಮತ್ತೊಂದು ಕಾರಣವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ಅಳಿವಿನಂಚಿನಲ್ಲಿರುವ ಗುಬ್ಬಚ್ಚಿಗಳ ಜೊತೆ ಅಳಿವಿನಂಚಿಗೆ ಸಾಗುತ್ತಿರುವ ಇನ್ನೂ ಅನೇಕ ಪಕ್ಷಿಗಳ ಬಗ್ಗೆ ನಾವು ಚಿಂತಿಸಬೇಕು. ಹಳ್ಳಿಗಳ ಕಡೆ ಹೋದರೆ ಬಹುಪಾಲು ಈಚಲು ಮರಗಳಲ್ಲಿ ಮತ್ತು ಕೊಳಗಳ ಮೇಲೆ ಚಾಚಿದ ಜಾಲಿಮರದ ಕೊಂಬೆಗಳಿಗೆ ನೇತುಬಿದ್ದಿರುವ ಗೀಜಗನ ಗೂಡು ಕಂಡು ಬರುತ್ತಿತ್ತು. ಇತ್ತೀಚೆಗೆ ಈ ಗೀಜಗನ ಗೂಡುಗಳು ಇಲ್ಲವೇ ಇಲ್ಲ.

ಗುಬ್ಬಿ, ಹೆಸರೇ ಸೂಚಿಸುವಂತೆ ಈ ಹಕ್ಕಿಯು ಪ್ರಪಂಚದಲ್ಲೇ ಅತೀ ಸಣ್ಣ ಹಕ್ಕಿಗಳಲ್ಲೊಂದು. ಅದನ್ನು ಚಿಟಗುಬ್ಬಿ, ಗುಬ್ಬಚ್ಚಿ ಎಂದು ಪ್ರೀತಿಯಿಂದ ಕರೆಯುವುದಕ್ಕೆ ಕಾರಣ, ಮನುಷ್ಯನಿಗೆ ಹೆದರದೇ ಸಮೀಪ ಸುಳಿಯುವ, ಗೂಡು ಕಟ್ಟುವ, ಮನೆಯೊಳಗೆ ಬಂದು ಸಂಸಾರ ಮಾಡುವ ಅದರ ನಿರುಪದ್ರವಿ ಗುಣ. ನೋಡಲು ಚೆಂದ, ಹಿಡಿದರೆ ಮುಷ್ಠಿಯೊಳಗೆ ಮುಚ್ಚಬಹುದಾದ ಗುಬ್ಬಿ ಇಂದು ನೋಡಲು ಸಹ ಮರೀಚಿಕೆಯಾಗಿದೆ.

ಗುಬ್ಬಿಗಳ ಉಳಿವಿಗೆ ನಾವೇನು ಮಾಡಬಹುದು?

  • ಮನೆಯ ಹೊರಗೆ ಒಂದು ಗುಬ್ಬಿಗೂಡು ನೇತು ಹಾಕಿ. ಇದನ್ನು ಯಾವುದೇ ಪುಟ್ಟ ಮರದ ಅಥವಾ ರಟ್ಟಿನ ಪೆಟ್ಟಿಗೆಯಿಂದ ನಾವೇ ರಚಿಸಬಹುದು.
  • ಬೇಸಿಗೆ ಗುಬ್ಬಿಗಳ ವಂಶಾಭಿವೃದ್ಧಿಯ ಸಮಯ. ಆಹಾರ, ನೀರು ಮತ್ತು ಗೂಡು ಅವಕ್ಕೆ ಬೇಕೇಬೇಕು. ಅದಕ್ಕಾಗಿ, ನೆರಳಲ್ಲಿ ಪುಟ್ಟ ಪಾತ್ರೆಯಲ್ಲಿ ನೀರು ಹಾಕಿಡಿ.
  • ಮನೆಯ ಮುಂದೆ ಪಕ್ಷಿಗಳಿಗಾಗಿ ಒಂದಷ್ಟು ಕಾಳುಗಳನ್ನು ಇರಿಸಿ.
  • ⁠ಗಿಡಗಳನ್ನು ನೆಡಿ, ಅನಂತರ, ದಿನದಿನವೂ ನಿಮ್ಮ ಆಸುಪಾಸಿನಲ್ಲೇ ಗುಬ್ಬಿಗಳ ಆಟ ನೋಡುತ್ತಾ, ಚಿಂವ್ ಚಿಂವ್ ಕೇಳುತ್ತಾ ಆನಂದಿಸಿ.
  • ಗುಬ್ಬಿಗಳನ್ನು ಸೇರಿದಂತೆ ಎಲ್ಲಾ ಪಕ್ಷಿ ಉಳಿವಿಗೆ ಸಹಕಾರಿಯಾಗುವ ಕೈಂಕರ್ಯ ಮಾಡುವ ಮೂಲಕ ಮನುಷ್ಯ ತನ್ನ ಮಾನವೀಯತೆಯನ್ನು ಮೆರೆಯಬೇಕಿದೆ.
  • ತಿಂದ ಹಣ್ಣಿನ ಬೀಜಗಳನ್ನು ಮಣ್ಣಿಗೆ ಎಸೆಯಿರಿ .
  • ನಿಮ್ಮಲ್ಲಿ ಪಕ್ಷಿಪ್ರೀತಿ ಮೊಳೆಯಲಿ.

ಇಂದಿನ ಮಕ್ಕಳ ಬಾಲ್ಯದ ಜೊತೆಗೆ ಗುಬ್ಬಚ್ಚಿಗಳ ಜೊತೆಯಿಲ್ಲ. ಚಿಂವ್ ಚಿಂವ್ ಸದ್ದು ಈಗಿನ ಮಕ್ಕಳಿಗೆ ಅಷ್ಟೇನು ಪರಿಚಿತವಾಗಿಲ್ಲ. ಅಜ್ಜಿ ಹೇಳುತ್ತಿದ್ದ ಗುಬ್ಬಚ್ಚಿಯ ಕತೆಗಳು ಎಲ್ಲಿ ಹೋದವು ಎಂದು ಚಿಂತಿಸುವಾಗಲೇ, ಮಕ್ಕಳು ಹೆತ್ತವರಿಂದ ದೂರವಾಗುವ ಈ ಕಾಲದಲ್ಲಿ ಅಜ್ಜಿ ಎಲ್ಲಿ ಬರಬೇಕು, ಅಜ್ಜಿ ಕತೆ, ಕತೆಯಲ್ಲಿ ಬರುವ ಗುಬ್ಬಿಗಳೆಲ್ಲಿ ಬರಬೇಕು, ಪ್ರಾಣಿಪಕ್ಷಿ ಪ್ರೀತಿ ಎಲ್ಲಿ ಬೆಳೆಯಬೇಕು? ಎಂಬ ಪ್ರಶ್ನೆಯೂ ಮೂಡುತ್ತದೆ.

ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿವಾಣಿಯಂತೆ ಪ್ರಕೃತಿಯ ಸಹಭಾಗಿತ್ವದೊಂದಿಗೆ ಜೀವನ ನಡೆಸೋಣ, ಪ್ರಕೃತಿಯ ಪ್ರೀತಿಯನ್ನು ಎಲ್ಲರಿಗೂ ಹಂಚೋಣ , ಜೊತೆಗೂಡಿ ಬೆಳೆಯೋಣ ಬೆಳೆಸೋಣ, ಗುಬ್ಬಚ್ಚಿಗಳ ಉಳಿವಿಗಾಗಿ ಕಂಕಣಬದ್ಧರಾಗೋಣ. ಇಲ್ಲದಿದ್ದರೆ ತೇಜಸ್ವಿ ಅವರು ಹೇಳುವಂತೆ ‘ಅವು ನಮ್ಮತ್ತ ನಿಸ್ಸಹಾಯಕ ಮುಗ್ಧ ನೋಟ ಬೀರಿ ನಿರ್ಗಮಿಸುತ್ತವೆ. ಕೆಲವೊಮ್ಮೆ ಶಾಶ್ವತವಾಗಿ.’ ಎನ್ನುವುದು ನಿಜವಾಗುತ್ತದೆ‌!

Leave a Reply

Your email address will not be published.

This site uses Akismet to reduce spam. Learn how your comment data is processed.