ಬೆಂಗಳೂರು.ಜೂ.30: ಮೂರ್ತಿಯವರ ಸಾಧನೆ ಅಮೂರ್ತವಾದದ್ದು. ಬುದ್ಧ ತನ್ನ ರಾಜ್ಯವನ್ನು ಬಿಟ್ಟು ಧನಾತ್ಮಕ ನೆಲೆಯಲ್ಲಿ ನಡೆದಂತೆ, ಬಿ.ಎನ್ ಮೂರ್ತಿಯವರು ವ್ಯವಸ್ಥಿತವಾಗಿದ್ದ ಉದ್ಯೋಗವನ್ನು ಬಿಟ್ಟು ಸಮಾಜ ಸೇವೆಯಲ್ಲಿ ನಿರತರಾದವರು ಎಂದು ಶ್ರೀ ಬೇಲಿಮಠ ಮಹಾಸಂಸ್ಥಾನದ ಪೂಜ್ಯ ಶ್ರೀ ಚರಮೂರ್ತಿ ಶಿವರುದ್ರಸ್ವಾಮಿಗಳು ನುಡಿದರು.

ವಿಶ್ವ ಹಿಂದೂ ಪರಿಷತ್ ವತಿಯಿಂದ ಬೆಂಗಳೂರಿನ ಬಸವನಗುಡಿಯಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ನಡೆದ ಹಿರಿಯ ಸ್ವಯಂಸೇವಕ ಬಿ.ಎನ್ ಮೂರ್ತಿಯವರ ಕುರಿತ ಸ್ಮರಣ ಸಂಚಿಕೆ ‘ಧ್ಯೇಯಮೂರ್ತಿ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರಳವಾಗಿ ಹೇಳುವುದಾದರೆ ಬಸವಣ್ಣನವರ ”ನುಡಿದಂತೆ ನಡೆವೆ, ನಡೆಯಲ್ಲಿ ನುಡಿಯ ಪೂರೈಸುವೆ” ಮಾತಿನಂತೆ ಮೂರ್ತಿಯವರು ಬದುಕಿದರು. ಕಾಗಿನೆಲೆಯಲ್ಲಿ ಕನಕದಾಸರ ಕುರಿತಾದ ಕಾರ್ಯಕ್ರಮ ಆರಂಭವಾಗಲು ಪ್ರಧಾನವಾಗಿ ಕಾರಣರು ಮೂರ್ತಿಯವರು. ಯಾವುದಾದರೂ ಕಾರ್ಯವನ್ನು ಆರಂಭಿಸಿ ಅದು ಜನಮನದಲ್ಲಿ ಸಹಜವಾಗಿ ಮಿಡಿಯುವಂತೆ, ಮುನ್ನಡೆಯುವಂತೆ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದರು.

ರಾಮ ಯಜ್ಞ ಸಮಿತಿಯ ಕಾರ್ಯವನ್ನು ಕರ್ನಾಟಕದಲ್ಲಿ ಮಾಡಿದವರಲ್ಲಿ ಬಿಎನ್ ಮೂರ್ತಿಯವರೂ ಪ್ರಮುಖರು. ದೇಶಸೇವೆಯ ಕಾರ್ಯದಲ್ಲಿ ಅವರ ತನ್ಮಯತೆ ಮಹತ್ತರವಾದುದು. ಎಲ್ಲೂ ಕುಗ್ಗದ ಉತ್ಸಾಹ ಅವರದು. 1984ರಲ್ಲಿ ಇಂದಿರಾಗಾಂಧಿ ಹತ್ಯೆಯಾದ ನಂತರ ವಿಶ್ವ ಹಿಂದು ಪರಿಷತ್ ವತಿಯಿಂದ ನಡೆದ ಸದ್ಭಾವನಾ ಯಾತ್ರೆಯಲ್ಲಿ ಭಾರತದ ದಕ್ಷಿಣ ಭಾಗದ ಶಕ್ತಿಯಾಗಿ ನಿಂತವರು ಇದೇ ಮೂರ್ತಿಯವರು ಎಂದರು.

ಈ ಕೃತಿಗೆ ಉತ್ತಮ ಹೆಸರನ್ನೇ ಇಡಲಾಗಿದೆ. ಧ್ಯೇಯ ಮತ್ತು ನಿಷ್ಠೆ ಯಾವಾಗಲೂ ಒಂದಕ್ಕೊಂದು ಪೂರಕ. ಅದು ಯಾವತ್ತೂ ವಿಚಲಿತವಾಗಬಾರದು ಎನ್ನುವ ನೆಲೆಯಲ್ಲಿ ತಮ್ಮ ಬದುಕಿನುದ್ದಕ್ಕೂ ಬದುಕಿ ತೋರಿದವರು ಮೂರ್ತಿಯವರು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹ ಬೌದ್ಧಿಕ್ ಪ್ರಮುಖ್ ಸುಧೀರ್ ಮಾತನಾಡಿ, ಹಲವಾರು ಪ್ರಚಾರಕರ ಬಗೆಗಿನ ಪುಸ್ತಕಗಳನ್ನು ನೋಡುತ್ತೇವೆ. ಆದರೆ ಗೃಹಸ್ಥ ಕಾರ್ಯಕರ್ತನಾಗಿ ಸಂಘ ಸಮರ್ಪಿತ ಜೀವನವನ್ನು ನಡೆಸಿದವರ ಪುಸ್ತಕ ಬಂದಿರುವುದು ತೀರ ಕಡಿಮೆ. ಅಂತಹವರ ಸಾಲಿನಲ್ಲಿ ಬಿ.ಎನ್ ಮೂರ್ತಿಯವರೂ ಸೇರುತ್ತಾರೆ ಎಂದರು.

ಮೂರ್ತಿಯವರು ಒಬ್ಬ ಧ್ಯೇಯನಿಷ್ಠ ಕಾರ್ಯಕರ್ತ. ತನ್ನ ನಡೆ – ನುಡಿ, ಸಂಘಟನಾ ಕೌಶಲ್ಯ, ಕಾರ್ಯ ಕುಶಲತೆಯಿಂದ ಅನೇಕರಿಗೆ ಮೇಲ್ಪಂಕ್ತಿಯಾದವರು. ಅವರ ಜೀವನ ‘ಒಂದು ಜೀವನ- ಒಂದು ಧ್ಯೇಯ’ ಎಂಬಂತಿತ್ತು. ಸುತ್ತಲಿನ ಚಟುವಟಿಕೆಗಳಿಂದ ವಿಚಲಿತರಾಗದೆ, ಸಫಲತೆ ಸಿಗದಾಗ ನಿಷ್ಕ್ರಿಯರಾಗದೆ, ಉಳಿದವರಿಗೆ ಮಾರ್ಗದರ್ಶಕರಾಗಿ ಬದುಕಿದವರು. ಸ್ವಂತಕ್ಕೇನನ್ನೂ ಬಯಸದೆ, ನಿಸ್ವಾರ್ಥಭಾವದಿಂದ ಕಾರ್ಯಮಾಡಿದ ಸಮರ್ಪಿತ ಕಾರ್ಯಕರ್ತ ಅವರಾಗಿದ್ದರು ಎಂದರು.

ಕರ್ತೃತ್ವಶಾಲಿಗಳು ಕನಸುಗಳನ್ನು ನನಸಾಗಿಸಲು, ಬಿಡದೆ ಪರಿಶ್ರಮ ಪಡುತ್ತಾರೆ. ಹಾಗೆಯೇ ವಿರಾಮವರಿಯದ ಮೆದುಳು, ದಣಿವರಿಯದ ಶರೀರದಂತೆ ಮೂರ್ತಿಯವರು ಬದುಕಿದ್ದರು ಎಂದರು.

ಕೃತಿಯ ಸಂಪಾದಕ ಹಿರಿಯ ಪತ್ರಕರ್ತ ದು.ಗು. ಲಕ್ಷ್ಮಣ ಅವರು ಮಾತನಾಡಿ, ಬಿ.ಎನ್. ಮೂರ್ತಿಯವರು ಚತುರಮತಿ ಮತ್ತು ಅವಸರದ ಅವಧೂತನಂತೆ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬುದನ್ನು ನಿಜ ಮಾಡಿದ ಸ್ವಯಂಸೇವಕ ಎಂದರು.

ಈ ಕೃತಿಯಲ್ಲಿ ಒಟ್ಟು 55 ಜನರ ಲೇಖನಗಳಿವೆ. ಈ ಪುಸ್ತಕ ರೂಪಗೊಳ್ಳಲು ಮೂಲ ಪ್ರೇರಣೆ ಟಿ.ಎ.ಪಿ ಶೆಣೈ ಅವರು. ಕೆಲವು ಕಡೆಗಳಲ್ಲಿ ಘಟನೆಗಳು ಪುನರುಕ್ತಿ ಅನಿಸಬಹುದು. ಕಥೆಯ ಸಹಜತೆ ನಷ್ಟವಾಗದಿರಲೆಂದು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ದೀಪಕ್ ರಾಜ್ ಗೋಪಾಲ್, ಬಿ.ಎನ್. ಮೂರ್ತಿಯವರ ಸಹೋದರಿ ಹಾಗೂ ರಾಷ್ಟ್ರೀಯ ಸೇವಿಕಾ ಸಮಿತಿಯ ಪ್ರಾಂತ ಕಾರ್ಯವಾಹಿಕಾ ವಸಂತಸ್ವಾಮಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಸು. ರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.