– ಡಾ.‌ ಗೀತಾ ಕುಮಾರಿ ಟಿ. ಪುತ್ತೂರು

ಶಶಿಧರ ಹಾಲಾಡಿಯವರ ‘ಅಬ್ಬೆ’ ಕಾದಂಬರಿಯನ್ನು ಓದಿ ಮುಗಿಸಿದಾಗ ಒಂದು ಕ್ಷಣ ಸಮ್ಮಿಶ್ರ ಭಾವ ಹುಟ್ಟಿಕೊಳ್ಳುವುದು ಸಹಜ. ವಿಷಾದದ ನೋವಿನಲ್ಲೂ ಜೀವನೋತ್ಸಾಹ, ವಿನಾಶದಲ್ಲೂ ಉಳಿವು ಉಳಿವ ಪರಿ, ದುರಂತದಲ್ಲೂ ಹೊಸತನದ ಸೃಷ್ಟಿ ಇರುವ ಕುರುಹು, ಭ್ರಷ್ಟಾಚಾರದ ವಿರುದ್ಧದ ಸಾತ್ವಿಕ ಹೋರಾಟ, ಭರವಸೆಯ ಭವಿಷ್ಯ ಇವೆಲ್ಲವನ್ನೂ ಈ ಕಾದಂಬರಿ ಒಳಗೊಂಡಿದೆ. ‘ಅಬ್ಬೆ’ ಎಂಬ ಹೆಸರಿನ ಜೇಡದ ಬಗ್ಗೆ ಕೇಳಿಯೇ ಇಲ್ಲವಲ್ಲ ಎಂಬ ಪ್ರಶ್ನೆಯೊಂದಿಗೆ ಮುಂದುವರಿಯುವ ಓದಿನ ಕೊನೆಗೂ ಅದರ ಅಸ್ತಿತ್ವದ ಕುರಿತ ನಿಗೂಢತೆ ಹಾಗೆಯೇ ಉಳಿಯುತ್ತದೆ. ಭಾಸ್ಕರನ ತಂದೆಯ ಕೆಲವು ಟಿಪ್ಪಣಿಗಳ ಮೂಲಕ ಇದರ ಕುರಿತ ಊಹಾತ್ಮಕ ಉತ್ತರವೊಂದು ದೊರೆತರೂ ಇದರ ಹಿಂದೆ ಇರಬಹುದಾದ ಸಾಂಕೇತಿಕ ಅರ್ಥವನ್ನು ಗ್ರಹಿಸಿದಾಗ ಪ್ರಕೃತಿಯ ರಹಸ್ಯದ ಬಗ್ಗೆಯೇ ಬೆರಗಾಗುತ್ತದೆ.

ನಿಸರ್ಗ ಮತ್ತು ಮಾನವನ ಸಂಬಂಧ ಅವಿನಾಭಾವವಾದುದು. ಮೊಗೆದಷ್ಟೂ ಹೊಸತನವನ್ನು ಕೊಡುವ ಕಾಡು ಮನುಷ್ಯನನ್ನು ಸದಾ ಕಾಡುವ, ಎಂಥವರನ್ನೂ ತನ್ನೊಳಗೆ ಸೆಳೆದು ಒಡನಾಡುವಂತೆ ಮಾಡುವ ಸಂಗತಿ. ಕಾಡು ಒಂದು ನಿಗೂಢ ಪ್ರಪಂಚವೇ ಸರಿ. ಅದರೊಳಗಿನ ಅಸಂಖ್ಯ ಜೀವಜಗತ್ತು ವಿಸ್ಮಯದ ತವರು. ಹೆಸರೂ ಕೇಳರಿಯದ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳ ಆಗರ. ಅವುಗಳ ಸುತ್ತ ಹೆಣೆದ ನಂಬಿಕೆಗಳಿಗೂ ಕೊರತೆಯಿಲ್ಲ.

ಮಾನವ ಪ್ರಪಂಚದಲ್ಲಿ ಇರಬಹುದಾದ ಖಿನ್ನತೆ, ವ್ಯಾಕುಲಗಳಿಗೆ ಔಷಧವಾಗಬಲ್ಲ ಶಕ್ತಿ ಪರಿಸರಕ್ಕಿದೆ. ಕಾದಂಬರಿಕಾರರು ಶಿವರಾಂ ಪಾತ್ರದ ಮೂಲಕ ಪ್ರಕೃತಿಯ ವಿಸ್ಮಯಗಳಿಗೆ ಓದುಗರು ತೆರೆದುಕೊಳ್ಳುವಂತೆ ಮಾಡುತ್ತಾರೆ. ಓದುತ್ತಾ ಹೋದಂತೆ ಬಾಲ್ಯದಲ್ಲಿ ಪ್ರಕೃತಿಯ ಮಡಿಲಲ್ಲಿ ಬೆಳೆದವರಿಗೆ ಇದು ದೂರದಲ್ಲೆಲ್ಲೋ ಇರುವ ಕಾಡಲ್ಲ, ನಮ್ಮದೇ ಮನೆಸಮೀಪದ ಹಾಡಿಯನ್ನು ಇನ್ನಷ್ಟು ಹತ್ತಿರದಿಂದ ಆಳವಾಗಿ ಗ್ರಹಿಸುತ್ತಿದ್ದೇವೆ ಎನ್ನುವಂತೆ ಮಾಡಿದರೆ, ನಗರ ಮಧ್ಯದಲ್ಲಿ ಬೆಳೆಯುತ್ತಿರುವ ಯುವ ತಲೆಮಾರು ಕಾಡೆಂದರೆ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕಿ ಕಾಡನ್ನು ಪ್ರವೇಶಿಸಲು ತುಡಿಯುವಂತೆ ಮಾಡುತ್ತದೆ. ದಟ್ಟವಾಗಿದ್ದ ಮಲೆಯ ಕಾಡುಗಳು ನಾಶವಾಗಿ ಕಾಡುಪ್ರಾಣಿಗಳ ಸಂತತಿ ನಾಶವಾಗುತ್ತಿರುವ, ಅಭಯಾರಣ್ಯಗಳು ಇವೆಯಾದರೂ ಕಾಡುಪ್ರಾಣಿಗಳು ಜೀವಭಯದಿಂದ ಜೀವಿಸುವ ಅಂಶವನ್ನು ಸೂಚ್ಯವಾಗಿ ಹೇಳುವುದರ ಜೊತೆಗೆ ರಕ್ಷಿತಾರಣ್ಯಗಳನ್ನು, ಪ್ರಾಣಿಗಳ ಜೀವವನ್ನು, ಕಾಡುಗಳ್ಳರಿಂದ ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಯ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಪ್ರಪಂಚ ಉಳಿಯಬೇಕಾದರೆ ಪರಿಸರ ಉಳಿಯಬೇಕು ಎಂಬ ಜಾಗೃತ ಭಾವವನ್ನು ಬೆಳೆಸುವಲ್ಲಿ ಸಫಲರಾಗಿದ್ದಾರೆ. ಒಂದು ದೃಷ್ಟಿಯಿಂದ ಇದು ಪರಿಸರಕಥನ, ಜೀವಕುಲದ ಉಳಿವಿನ ಹೋರಾಟ, ಜೀವ ಜಗತ್ತಿಗೆ ಅರಿವಿನ ಪಾಠವಾಗುತ್ತದೆ.

ಕಾದಂಬರಿಯ ಇನ್ನೊಂದು ಮಗ್ಗುಲಲ್ಲಿ ಮನುಷ್ಯ ಸಮಾಜದ ವ್ಯವಸ್ಥೆಯ ವಿವಿಧ ಮಜಲುಗಳ ಪರಿಚಯವಾಗುತ್ತದೆ. ಬ್ಯಾಂಕಿಂಗ್ ಕ್ಷೇತ್ರ ಎಂಬುದು ಭಾವರಹಿತ ಚಟುವಟಿಕೆಯ ಕೇಂದ್ರ. ಸಾಮಾನ್ಯ ವರ್ಗದ ಉದ್ಯೋಗಿಯೊಬ್ಬ ದಿನನಿತ್ಯವೂ ತನ್ನದಲ್ಲದ ಲಕ್ಷಾಂತರ ಹಣವನ್ನು ಎಣಿಸುತ್ತಾನೆ. ಬಡವನೊಬ್ಬ ಸಾಲ ಕೇಳಲು ಬಂದರೆ ಆತ ತೀರಿಸುವ ಖಾತ್ರಿ ಇಲ್ಲವಾದರೆ ಸಾಲ ಹುಟ್ಟುವುದಿಲ್ಲ. ಒಂದರ್ಥದಲ್ಲಿ ಮಾನವೀಯತೆಗೆ ಆಸ್ಪದವಿಲ್ಲದ ಸ್ಥಳವದು. ಆದರೂ ಅಪವಾದಗಳೂ ಇವೆ ಎಂಬುದನ್ನು ಮರೆಯುವಂತಿಲ್ಲ.

ಇದರ ನಡುವೆ ಮೇಲಧಿಕಾರಿಯೊಬ್ಬ ಕೆಳಗಿನ ನೌಕರನ ಮೇಲೆ ಸರ್ವಾಧಿಕಾರ ನಡೆಸುವುದು ವ್ಯವಸ್ಥೆಯ ಕ್ರೌರ್ಯಕ್ಕೆ ಸಾಕ್ಷಿಯಾಗುತ್ತದೆ. ಕಾಡು ಪ್ರಾಣಿಗಳಿಗಿಂತ ಕ್ರೂರ ಪ್ರಾಣಿ ಮಾನವ ಜಗತ್ತಿನಲ್ಲಿ ಮಾತ್ರವೇ ಇರಲು ಸಾಧ್ಯ ಎಂಬ ಸತ್ಯವನ್ನೂ ನಾವಿಲ್ಲಿಯೇ ನೋಡುವುದು.

ಶಿವರಾಂ ಕಲ್ಕೆರೆಯಲ್ಲಿ ಕೆಲಸ ಮಾಡಿರುವುದು ಕೆಲವೇ ತಿಂಗಳುಗಳು ಮಾತ್ರವೇ ಆದರೂ ವ್ಯವಸ್ಥೆಯ ಬದಲಾವಣೆಗೆ ನಾಂದಿ ಹಾಡುತ್ತಾನೆ ಎಂಬುದೇ ಬಹಳ ಮುಖ್ಯವಾದ ಸಂಗತಿ. ಒಂದು, ಮನುಷ್ಯನ ಅತಿಯಾದ ಹಸ್ತಕ್ಷೇಪದಿಂದ ಬರಿದಾಗುತ್ತಿರುವ ಕಾಡನ್ನು ಉಳಿಸುವ ಪ್ರಯತ್ನ ನಡೆಸಿರುವುದು. ಅದು ಬದಲಾವಣೆ ಆಗಬೇಕಾದ ಅನಿವಾರ್ಯತೆಯೂ ಹೌದು. ಇನ್ನೊಂದು ಉದ್ಯೋಗ ಕ್ಷೇತ್ರದಲ್ಲಿ ಆಗುತ್ತಿರುವ ಅವ್ಯವಹಾರವನ್ನು ತಡೆಗಟ್ಟುವ ಪ್ರಯತ್ನ ಮಾಡಿದ್ದು. ಇದು ಬಹಳ ದೊಡ್ಡ ಸಾತ್ವಿಕ ಹೋರಾಟ. ಕೊನೆಗೂ ಆತನಿಗೆ ಅಂಡಮಾನ್ ನಂತಹ ದೂರದ ದ್ವೀಪಕ್ಕೆ ವರ್ಗವಾದರೂ ಆತ ಸೋತು ಪಲಾಯನ ಮಾಡುತ್ತಿರುವುದಲ್ಲ, ಗೆಲುವಿನ ತೃಪ್ತಿಯೊಂದಿಗೆ ಸಾಗುತ್ತಿದ್ದಾನೆ. ಇಷ್ಟು ಕಡಿಮೆ ಅವಧಿಯಲ್ಲಿ ಕಿಂಚಿತ್ ಬದಲಾವಣೆ ಆಗಿದೆ ಎಂದರೆ ಶಿವರಾಂ ನ ಸಾಧನೆ ಕಡಿಮೆಯದಲ್ಲ.

ಶಶಿಧರ ಹಾಲಾಡಿಯವರು ಹಳ್ಳಿಯ ಪರಿಸರದಿಂದ ಬಂದವರಾಗಿದ್ದು ತನ್ನ ಮತ್ತು ಪ್ರಕೃತಿಯ ನಡುವಿನ ಒಡನಾಟವನ್ನು, ಪ್ರಕೃತಿ ಸಂರಕ್ಷಣೆಯ ತುರ್ತನ್ನು ಶಿವರಾಮನ ಪಾತ್ರದ ಮೂಲಕ ಸಮರ್ಥವಾಗಿ ನಿರೂಪಿಸಿದ್ದಾರೆ. ಯುವತಲೆಮಾರು ಮತ್ತೆ‌ ಪ್ರಕೃತಿಯ ಕಡೆ ಗಮನ ಕೊಡಬೇಕಾಗಿದೆ. ಇಂದಿನ ಮಕ್ಕಳು ಮೊಬೈಲ್ ಎಂಬ ಮಾಯಾಜಾಲದಿಂದ ದೂರವುಳಿದು ಕಳೆದುಹೋಗಲು ಕಾಡು ಬೇಕು. ಅಭಯಾರಣ್ಯಗಳು, ರಕ್ಷಿತಾರಣ್ಯಗಳ ಬದಲು ತಾನೇತಾನಾಗಿ ಬೆಳೆಯುವ ನಾನಾ ನಮೂನೆಯ ವೃಕ್ಷ ಪರಂಪರೆಯನ್ನು ಹೊಂದಿರುವ ಸಹಜ ಕಾಡುಗಳು ಹೆಚ್ಚಬೇಕು. ಜೀವಪ್ರಪಂಚದ ಕುರಿತ ಆಸಕ್ತಿ, ಅಧ್ಯಯನ ಹೆಚ್ಚಬೇಕು. ಮಾನವ ಸಮುದಾಯವು ಪರಸ್ಪರ ದ್ವೇಷಭಾವವನ್ನು ಮರೆತು ಬಾಳುವಂತಾದರೆ ಕಾದಂಬರಿಕಾರರ ಶ್ರಮ ಸಾರ್ಥಕವಾಗುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.