ಬೆಂಗಳೂರು: ಸುದ್ದಿಗಳಲ್ಲಿ ನಾವು ಕಾಣುವ ನಕಾರಾತ್ಮಕತೆಗಿಂತಲೂ ಹೆಚ್ಚು ಸಕಾರಾತ್ಮವಾಗಿ ಭಾರತ ಬೆಳೆಯುತ್ತಿದೆ. ಅನಾವಶ್ಯಕವಾಗಿ ನಮ್ಮ ನಾಡು, ನುಡಿಯ ಕುರಿತು ಹಬ್ಬಿಸಲಾಗುತ್ತಿರುವ ಸುಳ್ಳು ಸುದ್ದಿಗಳಿಗೆ ನಮ್ಮ ಅಧ್ಯಯನಾಧಾರಿತ ಧನಾತ್ಮಕ ಉತ್ತರಗಳನ್ನು ನೀಡುವ ಮೂಲಕ ಸಾಮಾಜಿಕ ಜಾಲತಾಣದ ವಾತಾವರಣವನ್ನು ಸಾತ್ವಿಕಗೊಳಿಸುವ ಪ್ರಯತ್ನ ನಮ್ಮಿಂದಾಗಬೇಕು. ಭಾರತದ ಭವಿಷ್ಯವನ್ನು ಕಣ್ಣ ಮುಂದಿರಿಸಿಕೊಂಡು ಭರವಸೆಯ ನಾಳೆಗಳನ್ನು ನಿರ್ಮಿಸುವುದಕ್ಕೆ ಸಾಮಾಜಿಕ ಜಾಲತಾಣವನ್ನು ಸಮರ್ಥ ವೇದಿಕೆಯನ್ನಾಗಿಸಿಕೊಳ್ಳಬೇಕು ಎಂದು ಬೆಂಗಳೂರಿನ ಸಾಮಾಜಿಕ ಜಾಲತಾಣ ವಿಶ್ಲೇಷಕ ಕಿರಣ್ ಕೆ ಎಸ್ ಹೇಳಿದರು.

ದಿಶಾಭಾರತದ ‘ನನ್ನ ಭಾರತ’ ಯುವ ಅಭಿಯಾನದ ಅಂಗವಾಗಿ ಆಯೋಜಿಸಲಾಗಿರುವ ಆನ್‌ಲೈನ್ ಉಪನ್ಯಾಸ ಸರಣಿಯ ಮೂರನೇ ದಿನ ‘Social Media and Indian Youth’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣವನ್ನು ನಾವು ಯಾಕಾಗಿ ಬಳಸುತ್ತಿದ್ದೇವೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು. ಜಾಲತಾಣದ ಬಳಕೆ ಸಮಯವನ್ನು ವ್ಯರ್ಥಗೊಳಿಸುವುದಕ್ಕಾಗಿಯಲ್ಲ, ಬದಲಾಗಿ ಸಮಯದ ಸದುಪಯೋಗಕ್ಕಾಗಿ ಎನ್ನುವ ಮನೋಭಾವ ನಮ್ಮೆಲ್ಲರಲ್ಲೂ ಮೂಡಬೇಕು. ನಮ್ಮ ಸಾಮಾಜಿಕ ಜಾಲತಾಣಗಳು ನಮ್ಮ ನಿಯಂತ್ರಣದಲ್ಲಿರಬೇಕೇ ಹೊರತು, ಅವುಗಳು ನಮ್ಮನ್ನು ನಿಯಂತ್ರಿಸುವ ವಿಪರೀತಕ್ಕೆ ನಾವು ಎಡೆಮಾಡಿಕೊಡಬಾರದು ಎಂದು ನುಡಿದರು.

ಸಾಮಾಜಿಕ ಜಾಲತಾಣ ಜಗತ್ತಿನ ಜನರನ್ನು ಒಳಗೊಂಡಿರುವುದರಿಂದ ಜಾಗತಿಕವಾಗಿ ಉತ್ತಮ ಸ್ನೇಹಿತರನ್ನು ಪಡೆಯುವುದಕ್ಕೆ, ಸಾತ್ವಿಕ ವಿಚಾರಗಳನ್ನು, ಆಲೋಚನೆಗಳನ್ನು ತಿಳಿಯುವುದಕ್ಕೆ ಸಹಕಾರಿಯಾಗುತ್ತದೆ. ಹಾಗೆಯೇ ನಿಮ್ಮ ಸುತ್ತಲಿನ ಜನ ಎಂತವರಿರಬೇಕು ಎನ್ನುವುದನ್ನು ಜಾಗ್ರತೆಯಿಂದ ಆಯ್ಕೆ ಮಾಡುವ ಮೂಲಕ ನಕಾರಾತ್ಮಕ ಸಂಗತಿಗಳನ್ನು ಹರಡುವವರಿಂದ ದೂರವಿರಬೇಕಾಗುತ್ತದೆ. ನಮ್ಮ ಪ್ರವೃತ್ತಿಯ ಆಧಾರಿತವಾದ ವಿಚಾರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತುತಪಡಿಸುವಾಗ ಮೌಲ್ಯಗಳನ್ನು ಜೊತೆಗಿರಿಸಿಕೊಂಡಾಗ ಅದು ಸಾತ್ವಿಕ ವಾತಾವರಣವನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published.

This site uses Akismet to reduce spam. Learn how your comment data is processed.