ಪ್ರಯಾಗರಾಜ್, 19 ಅಕ್ಟೋಬರ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಮಾತನಾಡಿ, “ದೇಶದಲ್ಲಿ ಜನಸಂಖ್ಯಾ ಸ್ಫೋಟ ಆತಂಕಕಾರಿಯಾಗಿದೆ. ಆದ್ದರಿಂದ, ಈ ಸಮಸ್ಯೆಯನ್ನು ಸಮಗ್ರವಾಗಿ ಮತ್ತು ಏಕಾತ್ಮತೆಯಿಂದ ವಿಚಾರ ಮಾಡಿ, ಎಲ್ಲರಿಗೂ ಅನ್ವಯವಾಗುವ ಜನಸಂಖ್ಯಾ ನೀತಿ ಜಾರಿಯಾಗಬೇಕಿದೆ. ಮತಾಂತರದಿಂದ ಹಿಂದೂಗಳ ಸಂಖ್ಯೆ ದಿನೇದಿನೇ ಕಡಿಮೆಯಾಗುತ್ತಿದೆ. ದೇಶದ ಹಲವೆಡೆ ಮತಾಂತರದ ಷಡ್ಯಂತ್ರ ನಡೆಯುತ್ತಿದೆ ಅಲ್ಲದೆ ದೇಶದ ಕೆಲವು ಗಡಿ ಪ್ರದೇಶಗಳಲ್ಲಿ ಒಳನುಸುಳುವಿಕೆಯೂ ನಡೆಯುತ್ತಿದೆ. ಜನಸಂಖ್ಯೆಯ ಅಸಮತೋಲನದಿಂದಾಗಿ ಹಲವು ದೇಶಗಳು ಇಬ್ಭಾಗವಾಗಿವೆ, ಭಾರತದ ವಿಭಜನೆಯೂ ಜನಸಂಖ್ಯೆಯಲ್ಲಿನ ಅಸಮತೋಲನದ ಕಾರಣದಿಂದಾಗಿತ್ತು” ಎಂದು ಅವರು ಹೇಳಿದರು.

ಅವರು ಪ್ರಯಾಗರಾಜ್‌ನಲ್ಲಿ ಗೌಹಾನಿಯಾದಲ್ಲಿರುವ ಜೈಪುರಿಯಾ ಶಾಲೆಯ ವಾತ್ಸಲ್ಯ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತೀಯ ಪ್ರಚಾರ ಪ್ರಮುಖರಾದ ಶ್ರೀ ಸುನಿಲ್ ಅಂಬೇಕರ್ ಅವರು ಉಪಸ್ಥಿತರಿದ್ದರು.

“ಸ್ವಾಭಿಮಾನದ ಜಾಗೃತಿಯಿಂದ ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯದ ಜನರಲ್ಲಿಯೂ ಕೂಡ ನಾನೂ ಹಿಂದೂ ಎಂಬ ಭಾವನೆ ಬೆಳೆಯುತ್ತಿದೆ.ಸ್ವಾಭಿಮಾನದ ಜಾಗರಣದಿಂದಾಗಿ ಈಶಾನ್ಯ ರಾಜ್ಯಗಳ ಬುಡಕಟ್ಟು ಸಮುದಾಯದ ಜನರು ಈಗ ಸಂಘಕ್ಕೆ ಸೇರಲು ಬಯಸುತ್ತಿದ್ದಾರೆ. ಮೇಘಾಲಯ ಮತ್ತು ತ್ರಿಪುರಾ ರಾಜ್ಯದ ಬುಡಕಟ್ಟು ಸಮುದಾಯದ ಜನರು ಸಹ ಸಂಘದ ಸರಸಂಘಚಾಲಕರನ್ನು ಆಹ್ವಾನಿಸಲು ಪ್ರಾರಂಭಿಸಿದ್ದಾರೆ” ಎಂದರು.

2024ರ ವೇಳೆಗೆ, ದೇಶದ ಎಲ್ಲಾ ಭಾಗಗಳೂ ಶಾಖಾಯುಕ್ತವಾಗಲಿದೆ.

“2024 ರ ಅಂತ್ಯದ ವೇಳೆಗೆ, ಭಾರತದ ಎಲ್ಲಾ ಭಾಗಗಳಲ್ಲಿ ಶಾಖೆಯನ್ನು ತಲುಪಲು ಯೋಜನೆಯನ್ನು ಮಾಡಲಾಗಿದೆ. ಕೆಲವು ಪ್ರಾಂತ್ಯಗಳಲ್ಲಿ, ಆಯ್ದ ಮಂಡಲಗಳಲ್ಲಿ ಈ ಕೆಲಸವು 99 ಪ್ರತಿಶತದವರೆಗೆ ಪೂರ್ಣಗೊಂಡಿದೆ. ಚಿತ್ತೋರ್, ಬ್ರಜ್ ಮತ್ತು ಕೇರಳ ಪ್ರಾಂತ್ಯಗಳಲ್ಲಿ ಮಂಡಲ ಮಟ್ಟದವರೆಗೆ ಶಾಖೆಗಳನ್ನು ತೆರೆಯಲಾಗಿದೆ. ಈ ಹಿಂದೆ ದೇಶದಲ್ಲಿ 54,382 ಸಂಘದ ಶಾಖೆಗಳಿದ್ದು, ಈಗ ದೇಶದಲ್ಲಿ 61,045 ಶಾಖೆಗಳನ್ನು ಮಾಡಲಾಗಿದೆ. ಕಳೆದ ಒಂದು ವರ್ಷದಲ್ಲಿ ಸಾಪ್ತಾಹಿಕ ಮಿಲನ್‌ಗಳಲ್ಲಿ 4000 ಮತ್ತು ಮಾಸಿಕ ಮಿಲನ್‌ನಲ್ಲಿ 1,800 ಶಾಖೆಗಳು ಹೆಚ್ಚಳವಾಗಿದೆ” ಎಂದು ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆಯವರು ಹೇಳಿದರು.

ದೇಶದಾದ್ಯಂತ ಮೂರು ಸಾವಿರ ಶತಮಾನೋತ್ಸವ ವಿಸ್ತಾರಕ್

ಅವರು ಮುಂದುವರೆದು ಮಾತನಾಡುತ್ತಾ “2025 ರಲ್ಲಿ ಸಂಘವನ್ನು ಸ್ಥಾಪಿಸಿ 100 ವರ್ಷಗಳು ಪೂರ್ಣಗೊಳ್ಳುತ್ತಿವೆ. ಈ ಉದ್ದೇಶಕ್ಕಾಗಿ ಮೂರು ಸಾವಿರ ಯುವಕರು ಶತದಿನೋತ್ಸವ ವಿಸ್ತಾರಕರಾಗಿ ದೇಶಾದ್ಯಂತ ಸಂಘ ಕಾರ್ಯಕ್ಕೆ ಸಮಯ ನೀಡುತ್ತಿದ್ದಾರೆ. ಇನ್ನೂ ಒಂದು ಸಾವಿರ ಮಂದಿ ಯುವಕರು ವಿಸ್ತಾರಕರಾಗಿ ಸಮಯ ನೀಡಲಿದ್ದಾರೆ.”

” ಕಾರ್ಯಕಾರಿ ಮಂಡಳಿಯ ಸಭೆಯಲ್ಲಿ ಸಾಮಾಜಿಕ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಸಂಗಮ ನಗರ ಪ್ರಯಾಗರಾಜ್‌ನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಳಿ ಬೈಠಕ್‌ನಲ್ಲಿ ಜನಸಂಖ್ಯೆಯ ಅಸಮತೋಲನ, ಮಹಿಳೆಯರ ಸಹಭಾಗಿತ್ವ, ಮತಾಂತರ, ಆರ್ಥಿಕ ಸ್ವಾವಲಂಬನೆಯಂತಹ ಪ್ರಮುಖ ಸಾಮಾಜಿಕ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಿ,ಆ ನಿಟ್ಟಿನಲ್ಲಿ ಕಾರ್ಯ ವಿಸ್ತರಣೆಗೆ ವಿಸ್ತೃತವಾದ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ” ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರು.

ಜನಸಂಖ್ಯೆಯ ಅಸಮತೋಲನಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಕಳೆದ 40-50 ವರ್ಷಗಳಿಂದ ಜನಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಿದ್ದರಿಂದ ಪ್ರತಿ ಕುಟುಂಬದ ಸರಾಸರಿ ಜನಸಂಖ್ಯೆಯು 3.4 ರಿಂದ 1.9 ಕ್ಕೆ ಇಳಿದಿದೆ. ಇದರಿಂದಾಗಿ ಭಾರತದಲ್ಲಿ ಯುವಜನರ ಸಂಖ್ಯೆ ಕಡಿಮೆಯಾಗಿ ವೃದ್ಧರ ಸಂಖ್ಯೆ ಹೆಚ್ಚಾಗುವ ಕಾಲ ಬರಲಿದೆ ಎಂಬುದು ಆತಂಕಕಾರಿ ಸಂಗತಿ. ದೇಶವನ್ನು ಯುವ ದೇಶವಾನ್ನಾಗಿಡಲು, ಜನಸಂಖ್ಯೆಯನ್ನು ಸಮತೋಲನದಲ್ಲಿಡಲು ಒತ್ತು ನೀಡಬೇಕಿದೆ, ಅಲ್ಲದೆ ಅದರ ಜೊತೆಗೆ ಮತಾಂತರ ಮತ್ತು ಗಡಿಯ ಮೂಲಕ ಒಳನುಸುಳುವಿಕೆಯಿಂದ ದುಷ್ಚಕ್ರದಿಂದ ಉಂಟಾಗುವ ಜನಸಂಖ್ಯೆಯ ಅಸಮತೋಲನವು ಕಳವಳಕಾರಿ” ಎಂದರು.

ಪ್ರಯಾಗರಾಜ್‌ನ ಜಿಲ್ಲಾ ಕೇಂದ್ರದಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಗೌಹಾನಿಯಾ, ಯಮುನಾಪಾರ್‌ನಲ್ಲಿರುವ ವಾತ್ಸಲ್ಯ ವಿದ್ಯಾಲಯದ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕಾರ್ಯಕಾರಿ ಮಂಡಳಿ ಸಭೆ ನಡೆಯಿತು. ಸರಸಂಘಚಾಲಕರಾದ ಡಾ. ಮೋಹನ್‌ ಭಾಗವತ್‌, ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಅವರು ಭಾನುವಾರ ಭಾರತ ಮಾತೆಯ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಿದ್ದರು. ಅಕ್ಟೋಬರ್ 19ರ ಬುಧವಾರದಂದು ಈ ಬೈಠಕ್ ಮುಕ್ತಾಯಗೊಂಡಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.