“ರಾಷ್ಟ್ರೀಯ ಸ್ವಯಂಸೇವಕ ಸಂಘದ ‘ಅಖಿಲ ಭಾರತ ಪ್ರತಿನಿಧಿ ಸಭಾ’ ಮೂರು ದಿನಗಳ ಕಾಲ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ರೀತಿಯ ಸಭೆಗಳಲ್ಲಿ ಸಂಖ್ಯೆಯ ದೃಷ್ಟಿಯಿಂದ ಮತ್ತು ನಿರ್ಣಯ ಪ್ರಕ್ರಿಯೆಯ ದೃಷ್ಟಿಯಿಂದಲೂ ಬಹಳ ಮಹತ್ವಪೂರ್ಣವಾಗಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಶ್ರೀ ಸುನೀಲ್ ಅಂಬೇಕರ್ ಅವರು ಮಾರ್ಚ್ 11ರಿಂದ ಆರಂಭವಾಗಲಿರುವ ಅಖಿಲ ಭಾರತ ಪ್ರತಿನಿಧಿ ಸಭಾಕ್ಕೆ ಸಂಬಂಧಿಸಿದಂತೆ ಗುಜರಾತ್ನಲ್ಲಿ ಪತ್ರಿಕಾ ಗೋಷ್ಠಿಯನ್ನು ನಡೆಸಿದರು.
ಆರಂಭದ ವರ್ಷಗಳಲ್ಲಿ ಈ ಸಭೆಯು ನಾಗಪುರದಲ್ಲಿ ನಡೆಯುತ್ತಿತ್ತು,ಆದರೆ ನಂತರದಲ್ಲಿ ಅನ್ಯ ಪ್ರಾಂತಗಳಲ್ಲಿ ಆರಂಭಿಸಲಾಯಿತು.ಹೀಗೆ ಬೇರೆ ಪ್ರಾಂತದಲ್ಲಿ ಮೊದಲ ಬಾರಿ ಈ ಸಭೆ ಆರಂಭವಾದಾಗ,ಗುಜರಾತಿನ ರಾಜ್ಕೋಟ್ನಲ್ಲಿಯೇ 1988ರಲ್ಲಿ ನಡೆಯಿತು.ಹೀಗೆ ಗುಜರಾತಿನ ಸಭೆಯ ನಂತರ ಅನೇಕ ವರ್ಷಗಳು ಬೇರೆ ಬೇರೆ ಪ್ರಾಂತದಲ್ಲಿ ನಡೆದು,ಅನೇಕ ವರ್ಷಗಳ ನಂತರ ಮತ್ತೆ ಗುಜರಾತಿನ ಕರ್ಣಾವತಿಯಲ್ಲಿ ನಡೆಯುತ್ತಿದೆ.
ಕಳೆದ ಎರಡು ವರ್ಷಗಳಲ್ಲಿ ಕೊರೋನಾದ ಕೆಲವು ಪರಿಸ್ಥಿತಿಯ ಕಾರಣದಿಂದ ಅನೇಕ ಪ್ರತಿಬಂಧಗಳಿದ್ದುದರಿಂದ 2020ರಲ್ಲಿ ಬೈಠಕ್ ನಡೆಸಲು ಸಾಧ್ಯವಾಗಲಿಲ್ಲ,ಬೆಂಗಳೂರಿನಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು. ನಂತರ 2021ರಲ್ಲಿ ಹಲವರು ಆನ್ಲೈನ್ ಮತ್ತೆ ಹಲವರು ಮುಖತಃ ಭಾಗವಹಿಸಿ,ಮಿಶ್ರ ರೀತಿಯ ಬೈಠಕ್ ನಡೆಸಲಾಗಿತ್ತು.
ಈ ಬಾರಿ ಪರಿಸ್ಥಿತಿ ಸುಧಾರಿಸಿದೆ, ಆದರೂ ಸಹ ನಮ್ಮ ಕರ್ತವ್ಯವೆಂಬಂತೆ ಇಲ್ಲಿನ ಸರಕಾರದ ಕೊರೋನಾ ಪ್ರತಿಬಂಧವನ್ನು ಪಾಲಿಸುತ್ತಾ ನಮ್ಮ ಸದಸ್ಯರ ಅಪೇಕ್ಷಿತರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.ಅಂದರೆ ಪ್ರತಿಬಾರಿ 4,000 ಇರುತ್ತಿದ್ದ ಸಂಖ್ಯೆ ಈ ಬಾರಿ ಕೇವಲ 1,248ರಷ್ಟು ಮಾತ್ರವೇ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್ರವರ ಮಾರ್ಗದರ್ಶನದಲ್ಲಿ ಈ ಸಭೆ ನಡೆಯಲಿದ್ದು, ಸಭೆಯ ಸಂಚಾಲನೆಯನ್ನು ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಬಾಳೆಯವರು ಮಾಡಲಿದ್ದಾರೆ.ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎಲ್ಲ ಸಹಸರಕಾರ್ಯವಾಹರು,ಪ್ರಾಂತ ಸ್ಥರದ ಅಧಿಕಾರಿಗಳು,ಸಂಘದ ವಿವಿಧ ಕ್ಷೇತ್ರದ ಪ್ರಮುಖ ಅಧಿಕಾರಿಗಳು,ಕಾರ್ಯಕಾರಿಣಿಯ ಸದಸ್ಯರು ಉಪಸ್ಥಿತರಿರಲಿದ್ದಾರೆ. ಭಾರತೀಯ ಮಜ್ದೂರ್ ಸಂಘ,ಎಬಿವಿಪಿ,ರಾಷ್ಟ್ರ ಸೇವಿಕಾ ಸಮಿತಿ,ಹೀಗೆ ಅನೇಕ ಸಂಘಟನೆಯ ಪ್ರಮುಖರು ಭಾಗವಹಿಸಲಿದ್ದಾರೆ.
ಈ ಸಭೆಯಲ್ಲಿ ಪ್ರಮುಖವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಂದಿನ ಕಾರ್ಯವಿಧಿ,ಕಾರ್ಯವಿಸ್ತಾರ ಹಾಗು ಸರಕಾರ್ಯವಾಹರ ವಿವೇಚನೆಯಂತೆ ಉಳಿದ ವಿಚಾರಗಳು ಚರ್ಚೆಯಾಗುತ್ತದೆ. ಅಲ್ಲದೆ ಮುಂದಿನ ವರ್ಷಗಳ ಯೋಜನೆಯನ್ನು ಆಯಾ ಪ್ರಾಂತದಿಂದ ಮಾಡಲಾಗಿದ್ದು ಅದನ್ನು ಈ ಸಭೆಯಲ್ಲಿ ನಿಶ್ಚಯ ಮಾಡಲಾಗುತ್ತದೆ.
ಅದರಲ್ಲಿಯೂ ವಿಶೇಷವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ನೂರು ವರ್ಷಗಳು ಪೂರೈಸುತ್ತಿದ್ದು,ಕಳೆದ ವರ್ಷದಿಂದಲೇ ವಿಶೇಷ ಕಾರ್ಯ ವಿಸ್ತಾರ ಯೋಜನೆ ಮಾಡಲಾಗಿದೆ.ಅದರ ಪ್ರಗತಿ ಹಾಗೂ ಆಯಾ ಪ್ರಾಂತದ ಯೋಜನೆಗಳನ್ನೂ ಅಂತಿಮಗೊಳಿಸಲಾಗುತ್ತದೆ.
ಸಂಘದ ಶತಾಬ್ಧಿ ಯೋಜನೆಯಲ್ಲಿ ಈಗಾಗಲೇ ಇರುವ 55,000ಶಾಖೆಗಳನ್ನು 1ಲಕ್ಷ ಶಾಖೆಗಳನ್ನಾಗಿಸುವ ಗುರಿ ಹೊಂದಿದೆ.ಇದರ ವಿವರಣೆಯೂ ಸಹ ABPS ಸಮಾಪ್ತವಾದ ಬಳಿಕ ನೀಡಲಾಗುತ್ತದೆ.
ಸ್ವಾತಂತ್ರ್ಯ ಮಹೋತ್ಸವದ 75ನೆಯ ವರ್ಷದ ಆಚರಣೆಗಳಿಗೂ ವಿವಿಧ ಯೋಜನೆಗಳನ್ನು ಹಾಕಿಕೊಂಡಿದ್ದು,’ ಅನ್ಸಂಗ್ ಹೀರೋ’ಗಳನ್ನು ಪರಿಚಯಿಸುವ ವಿಶಿಷ್ಟವಾದ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಅಲ್ಲದೆ ವರ್ತಮಾನದಲ್ಲಿನ ವಿಶೇಷವಾದ ಘಟನೆಗಳ ಕುರಿತಾಗಿ ಆಯಾ ಪ್ರಾಂತದ ಪ್ರತಿನಿಧಿಗಳಿಂದ ವಾಸ್ತವಿಕ ವರದಿಯನ್ನು ತೆಗೆದುಕೊಳ್ಳುವುದು ಹಾಗೂ ಜನರ ಮನಸ್ಸಿಗೆ ಹತ್ತಿರವಿರುವ ವಿಚಾರಗಳನ್ನು ತಿಳಿದುಕೊಳ್ಳುವುದು, ಹಾಗು ಅದರ ವಿಚಾರ ವಿಮರ್ಶೆಗಳನ್ನು ನಡೆಸುವುದು ಈ ಸಭೆಯ ವಿಶಿಷ್ಟತೆ.”ಎಂದಿದ್ದಾರೆ.