ಎಂಬಿಎ ಪದವೀಧರೆ ಹಿಂದು ಹುಡುಗಿ, ಅಟೋ ಚಾಲಕ ಮುಸ್ಲಿಂ ಹುಡುಗ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಸುಖಿ ಸಂಸಾರಕ್ಕೆ ಸಾಕ್ಷಿಯಾಗಿ ಒಂದು ಮಗು ಕೂಡಾ ಜನಿಸಿದೆ. ಆದರೆ, ಮಹಿಳೆಗೆ ತಾನು ಎರಡನೇ ಪತ್ನಿ ಎಂದು ಗೊತ್ತಾದ ಮೇಲೆ ವಿರಸ ಉಂಟಾಗಿ ವಿಚ್ಛೇದನಕ್ಕೆ ಬಂದು ನಿಂತಿದೆ. ಪತ್ನಿ ತನ್ನಿಂದ ದೂರವಾಗಲು ನಿರ್ಧರಿಸಿದ್ದಾಳೆ. ಎಂದು ತಿಳಿದ ಪತಿ, ಪತ್ನಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತೀವ್ರವಾಗಿ ನಗರದ ಮುಂಡರಗಿ ರಸ್ತೆಯಲ್ಲಿರುವ ಲಯನ್ಸ್ ಶಾಲಾ ಮೈದಾನದಲ್ಲಿ ಗುರುವಾರ ನಡೆದಿದೆ.

ಮೂಲತಃ ಗದಗ ನಗರದ ಹುಡೋ ಕಾಲನಿ ನಿವಾಸಿ ಅನಂತ ಪುರಾಣಿಕ ಹಾಗೂ ಅಶ್ವಿನಿ ಅವರ ಏಕೈಕ ಪುತ್ರಿ ಅಪೂರ್ವಾ ಹುಬ್ಬಳ್ಳಿಯಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಹುಬ್ಬಳ್ಳಿಯ ಕೇಶ್ವಾಪುರದ ಆಟೋ ಚಾಲಕ ಇಜಾಜ್ ಶಿರೂರ ಪರಿಚಯವಾಗಿದ್ದಾನೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದಕ್ಕೆ ಅಪೂರ್ವಾ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ.

ಇದನ್ನು ಲೆಕ್ಕಿಸದೇ 2018ರಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತರ ಅಪೂರ್ವಾ ಅವರ ಹೆಸರು ಅರ್ಫಾ ಬಾನು ಎಂದು ಇಟ್ಟುಕೊಂಡರು. ದಿನ ಕಳೆದಂತೆ ಪತಿಯ ಅಸಲಿ ಮುಖ ಗೊತ್ತಾಗಿದೆ. ಪತಿಗೆ ಘಟನೆ ಈಗಾಗಲೆ ಮದುವೆಯಾಗಿದ್ದು, ಮೂವರು ಮಕ್ಕಳಿದ್ದಾರೆ ಎಂಬ ಸಂಗತಿ ಬಯಲಾಗಿದೆ. ಇದರಿಂದ ಬೇಸತ್ತು ಪತಿಗೆ ವಿಚ್ಛೇದನ ನೀಡಬೇಕೆಂದು ನಿರ್ಧರಿಸಿ ನಾಲ್ಕು ತಿಂಗಳ ಹಿಂದೆ ಗದಗ ಹುಡ್ಕೋದಲ್ಲಿರುವ ತವರು ಮನೆಗೆ ಬಂದಿದ್ದರು.

ಪತ್ನಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ ಎಂದು ಗೊತ್ತಾದ ಮೇಲೆ ಇಜಾಜ್ ಕೋಪಗೊಂಡಿದ್ದಾನೆ. ಗುರುವಾರ ಬೆಳಗ್ಗೆ ನಗರದ ಮುಂಡರಗಿ ರಸ್ತೆಯಲ್ಲಿರುವ ಲಯನ್ಸ್ ಶಾಲೆ ಮೈದಾನದಲ್ಲಿ ಸ್ಕೂಟಿ ಕಲಿಯಲು ಬಂದಿದ್ದ ಅಪೂರ್ವಾ ಮೇಲೆ ಇಜಾಜ್ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

“ಗದಗ ನಗರದ ಲಯನ್ಸ್ ಮೈದಾನದಲ್ಲಿ ಅಪೂರ್ವಾ ಮೇಲೆ ಪತಿ ಇಜಾಜ್ ಮಚ್ಚಿನಿಂದ ದಾಳಿ ನಡೆಸಿದ್ದಾನೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅಪೂರ್ವಾ ಆರು ತಿಂಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗುವುದು.” ಎಂದು ಗದಗ ಎಸ್ಪಿ ಶಿವಪ್ರಕಾಶ ದೇವರಾಜ್ ಅವರು ತಿಳಿಸಿದ್ದಾರೆ.

Leave a Reply

Your email address will not be published.

This site uses Akismet to reduce spam. Learn how your comment data is processed.