ಬೆಂಗಳೂರು: ಆಯುರ್ವೇದ ಎಂಬುದು ವೈದ್ಯ ವಿಜ್ಞಾನ ಮಾತ್ರವಲ್ಲ, ಅದೊಂದು ಜೀವನಕ್ರಮವೂ ಹೌದು. ಆದ್ದರಿಂದಲೇ ನಮ್ಮ ಪೂರ್ವಿಕರ ಆರೋಗ್ಯ, ಆಯುಷ್ಯ ಎರಡೂ ನಮಗಿಂತ ಉತ್ತಮವಾಗಿತ್ತು ಎಂದು ಖ್ಯಾತ ಆಯುರ್ವೇದ ತಜ್ಞೆ ಶುಭಂಕರಿ ರಾವ್ ಅವರು ಹೇಳಿದರು.

ಸ್ವದೇಶಿ ಜಾಗರಣ ಮಂಚ್ ವತಿಯಿಂದ ಬೆಂಗಳೂರಿನ ಜಯನಗರದ ಚಂದ್ರಗುಪ್ತ ಮೌರ್ಯ ಮೈದಾನದಲ್ಲಿ (ಶಾಲಿನಿ ಗ್ರೌಂಡ್) ನಡೆಯುತ್ತಿರುವ ಬೃಹತ್ ಸ್ವದೇಶಿ ಮೇಳದ ಆಯುರ್ವೇದ ಶಿಬಿರದಲ್ಲಿ ಮಾತನಾಡಿದರು.

ಶೀಘ್ರವಾಗಿ ಆರೋಗ್ಯ ಸರಿಯಾಗಬೇಕೆಂಬ ಕಾರಣ ಸಮಾಜವಿಂದು ಆಧುನಿಕ ವೈದ್ಯ ಪದ್ಧತಿಯ ಮೊರೆ ಹೋಗಿದೆ. ಆದರೆ ಈ ಔಷಧಿಗಳಲ್ಲಿ ಬಹು ಪ್ರಮಾಣದ ಅನವಶ್ಯಕ ರಾಸಾಯನಿಕಗಳಿದ್ದು ಅಡ್ಡ ಪರಿಣಾಮಗಳನ್ನೂ ತಂದಿಡುತ್ತಿದೆ. ಇದರಿಂದಾಗಿಯೇ ಕಾಲಕ್ರಮೇಣ ಖಾಯಿಲೆಗಳೇ ಹೆಚ್ಚಾಗುತ್ತಿದ್ದು ಆರೋಗ್ಯವಂತರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಆಯುರ್ವೇದವು ಪರ್ಯಾಯ ಮಾರ್ಗವಾಗಿದೆ ಎಂದರು.


ಆಹಾರ ಸೇವನೆಯಿಂದ ಹಿಡಿದು ವೃತ್ತಿಯವರೆಗೂ ನಮ್ಮ ಆಲಸಿ ಜೀವನಶೈಲಿ ನಮಗರಿಯದಂತೆ ನಮ್ಮ ಮನೋದೈಹಿಕ ಆರೋಗ್ಯದ ಮೇಲೆ ಗುರುತರವಾದ ಪರಿಣಾಮ ಬೀರುತ್ತದೆ. ‌ಪ್ರಶಾಂತವಾದ ಒಂದು ಜಾಗದಲ್ಲಿ ನಿರಾಳವಾಗಿ ಕುಳಿತು ಆಹಾರ ಸೇವಿಸಬೇಕು. ಇದರಿಂದಾಗಿ ಮನಸ್ಸು ಶಾಂತವಾಗಿರುತ್ತದೆ. ನಮ್ಮ ಕುಟುಂಬದ ಜೊತೆ ಕುಳಿತು ಆಹಾರ ಸೇವನೆ ಬಹಳ ಶ್ರೇಷ್ಠವಾದುದು ಎಂದು ವಿವರಿಸಿದರು.

ನಮ್ಮ ಭಾರತೀಯ ಪರಂಪರೆಯಲ್ಲಿ ಗೋವು ಮತ್ತು ಗೋವಿನ ಉತ್ಪನ್ನಗಳಿಗೆ ವಿಶೇಷವಾದ ಸ್ಥಾನವಿದೆ. ಗೋವು ದೇವತೆಗಳ ಆವಾಸ ಸ್ಥಾನವಾಗಿದ್ದು ಆಕಳ ಹಾಲು ಸೇವಿಸಿ ಬೆಳೆಯುವ ನಾವು ಗೋವುಗಳನ್ನು ಮಾತೃ ಸಮಾನವೆಂದು ಪರಿಗಣಿಸಿ ದೇವರ ಸಮಾನವೆಂದು ಪೂಜಿಸುತ್ತೇವೆ. ಗೋಮೂತ್ರ, ಗೋಮಯಗಳು ಪೂಜೆ, ದೇವತಾರಾಧನೆಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದರೆ, ನಮ್ಮದೇ ಪ್ರಾಚೀನ ಆರೋಗ್ಯವೇದ ಆಯುರ್ವೇದದಲ್ಲಿ ಔಷಧಿಯ ರೂಪದಲ್ಲಿ ಬಳಕೆಯಾಗುತ್ತವೆ. ಬೆರಣಿ, ಗಂಜಲಗಳು ಮನೆ ಮುಂದೆ ನಳನಳಿಸುವ ಹೂಗಿಡಗಳಿಗೆ ಗೊಬ್ಬರವಾಗಿ, ಕ್ರಿಮಿನಾಶಕವಾದರೆ ಸೆಗಣಿ ಬೆರಣಿಯಾಗಿ ಇಂಧನವಾಗುತ್ತದೆ ಎಂದು ಗೋ ಉತ್ಪನ್ನ ತಯಾರಿಕಾ ತಜ್ಞರಾದ ಸ್ವಪ್ನ ಆನಂದ್ ಅವರು ತಿಳಿಸಿದರು.


ಸ್ವದೇಶಿ ಮೇಳದಲ್ಲಿ ಗೋ ಉತ್ಪನ್ನಗಳ ತಯಾರಿಕೆಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು ‘ಗೋಸೇವಾ ಗತಿವಿಧಿ’ ಉತ್ತರ ಪ್ರಾಂತದ ಸಂಯೋಜಕರಾದ ವಿ.ಸಿ. ರೆಡ್ಡಿಯವರು ಮಾತನಾಡಿ ಗೋಮಯದ ಔಷಧೀಯ ಗುಣಗಳ ಬಗ್ಗೆ ತಿಳಿಸಿದರು. ಮೊಬೈಲ್ ಫೋನ್ ಬಳಕೆ ಅತಿಯಾಗಿರುವ ಈ ಕಾಲಘಟ್ಟದಲ್ಲಿ ವಿಕಿರಣ (ರೇಡಿಯೇಷನ್) ಹೀರಿಕೊಳ್ಳುವ ಮೂಲಕ ನಮ್ಮ ಆರೋಗ್ಯ ನಿರ್ವಹಣೆಯಲ್ಲಿ ಮಹತ್ತರ ಪಾತ್ರ ವಹಿಸುವ ಬಗ್ಗೆ ವಿವರಿಸಿದರು. ಪ್ರಶಿಕ್ಷಣ ಪ್ರಮುಖರಾದ ಶ್ರೀ ಆನಂದ್ ರವರು ಉಪಸ್ಥಿತರಿದ್ದು ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.