ಬೆಂಗಳೂರು: ಮನುಷ್ಯ ಸಂಘ ಜೀವಿ. ಆತನ ತೊಡಗಿಸಿಕೊಳ್ಳುವಿಕೆಗಾಗಿ ಇರುವ ಮಾರ್ಗಗಳಲ್ಲಿ ಉತ್ಸವವೂ ಒಂದು. ಆದರೆ ಉತ್ಸವವೇ ಧರ್ಮವಲ್ಲ. ಅದು ಧರ್ಮದ ರಕ್ಷಾ ಕವಚ. ಅಂತಹ ಉತ್ಸವಗಳಲ್ಲಿ ಯುಗಾದಿ ಉತ್ಸವ ಅತ್ಯಂತ ಪ್ರಮುಖವಾದದ್ದು. ಹಿಂದುವಿನ ಹೊಸ ವರ್ಷದ ಆರಂಭದ ದಿನ. ವಸಂತನ ದಿಸೆಯಿಂದ ಸೃಷ್ಟಿಯಲ್ಲಿ ಹೊಸತು ಮೂಡಲಿದೆ ಎಂಬುದರ ಸಂಕೇತ‌ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣಪ್ರಸಾದ್ ಬದಿ ಹೇಳಿದರು

ಬೆಂಗಳೂರಿನ  ಬಸವನಗುಡಿಯ ಮರಾಠಾ ಹಾಸ್ಟೆಲ್ ಮೈದಾನದಲ್ಲಿ ನಡೆದ ಬೆಂಗಳೂರು ದಕ್ಷಿಣ ವಿಭಾಗದ ಯುಗಾದಿ ಉತ್ಸವದಲ್ಲಿ ಅವರು ಮಾತನಾಡಿದರು.

ಕಾಲ ಬೇರೆಯವರಿಗೆ ಒಂದೇ ಆದರೆ ಭಾರತೀಯರಿಗೆ ಭಿನ್ನ. ಕಾಲವನ್ನು  ಸೌರಮಾನ, ಚಂದ್ರಮಾನ, ನಕ್ಷತ್ರಮಾನಗಳ ರೂಪದಲ್ಲಿ ನಮ್ಮ ಪೂರ್ವಜರು ಬಳಸುತ್ತಿದ್ದರು. ಹೀಗಾಗಿ ಪ್ರಭು ಶ್ರೀರಾಮಚಂದ್ರನ ಆಳ್ವಿಕೆಯ ಕುರಿತು ಒಂದೊಂದು ಗ್ರಂಥದಲ್ಲಿ ಒಂದೊಂದು ರೀತಿಯಾಗಿ ಉಲ್ಲೇಖಿಸಲಾಗಿದೆ ಎಂದು ನುಡಿದರು.

ಸಂಘದ ಸ್ವಯಂಸೇವಕರಿಗೆ ಯುಗಾದಿ ಮತ್ತೊಂದು ಕಾರಣಕ್ಕೆ ಮುಖ್ಯ. ಯುಗಾದಿ ದಿನದಂದು ಸಂಘದ ಆದ್ಯ ಸರಸಂಘಚಾಲಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಅವರ ಜನ್ಮದಿನವೂ ಹೌದು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿ ಕಾಂಗ್ರೆಸ್ಸಿನ ಪ್ರಮುಖ ಕಟ್ಟಾಳುವಾಗಿದ್ದ ಡಾಕ್ಟರ್ ಜೀ ನಾಗಪುರದಲ್ಲಿ ನಡೆದ ಅಖಿಲ ಭಾರತೀಯ ಕಾಂಗ್ರೆಸ್ ಅಧಿವೇಶನದ ಜವಾಬ್ದಾರಿ ವಹಿಸಿಕೊಂಡಿದ್ದರು. ಅಂದಿನ ಸವಾಲುಗಳ ನಡುವೆ ಸಾವಿರದ ಐದು ನೂರು ಕಾರ್ಯಕರ್ತರನ್ನು ಸೇರಿಸಿ ಪ್ರಬಂಧಕ ವ್ಯವಸ್ಥೆ ಮಾಡಿದ್ದು ಅವರ ಸಂಘಟನಾ ಶಕ್ತಿಗೆ ಹಿಡಿದ ಕೈಗನ್ನಡಿ ಎಂದು ಅಭಿಪ್ರಾಯಪಟ್ಟರು.

ಇನ್ನು ಸಂಘ ಸ್ಥಾಪನೆಯಾದ ನಂತರ ಮಾಡಿದ ಪ್ರಮುಖ ಕಾರ್ಯ  ಆತ್ಮವಿಸ್ಮೃತಿಗೆ ಒಳಗಾಗಿದ್ದ ಸಮಾಜವನ್ನು ಎಚ್ಚರಿಸುವ ಕಾರ್ಯ! ಹಾವಾಡಿಗರ ದೇಶ ಎಂದು ಕರೆಸಿಕೊಳ್ಳುತ್ತಿದ್ದ ಭಾರತ ತನ್ನತನ ಅರಿಯುವಂತೆ ಮಾಡಿದ್ದು ಸಂಘದ ಸಾಧನೆ. ಇಂದಿಗೂ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಹೇಳುವಾಗ ನೀವು ಸಂಘದವರಾ ಎಂದು ಪ್ರಶ್ನಿಸುವುದು ಸಂಘದಲ್ಲಿನ ರಾಷ್ಟ್ರೀಯತೆಯ ಕಾರಣ ಎಂದರು.

ಸಂಘ ಪ್ರಸ್ತುತ ಬೆಳೆದು ನಿಂತಿದೆ. ಈ ಕ್ಷಣ ನಾವು ಮೈ ಮರೆಯಬಾರದು‌. ಸೋಲಿನ ಭೀತಿಗಿಂತ, ಗೆಲುವಿನ ಅಮಲು ಭೀಕರ. ಹೀಗಾಗಿ ಗೆಲುವಿನ ಉನ್ಮಾದದಲ್ಲಿ ಮೈ ಮರೆಯದೇ, ಸಂಘಕಾರ್ಯದಲ್ಲಿ ತೊಡಗೋಣ. ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸ್ವದೇಶಿ ಜಾಗೃತಿ, ನಾಗರಿಕ ಕರ್ತವ್ಯಗಳು, ಸಾಮಾಜಿಕ ಸಮರಸತೆ ಪಾಲಿಸಬೇಕಾದ ಈ ಕಾಲದ ಕರ್ತವ್ಯಗಳು ಹಾಗೂ ಮುಂದಿರುವ ಗುರಿಗಳಾಗಿವೆ. ಕ್ರೋಧಿ ನಾಮ ಸಂವತ್ಸರ ಒಳಿತು ಮಾಡಲಿ ಎಂದು ನುಡಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಂಘಚಾಲಕ ಜಿ.ಎಸ್. ಉಮಾಪತಿ, ವಿಭಾಗ ಸಂಘಚಾಲಕ ಹರೀಶ್ ಬಾಬು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದ ಸಿ ಆರ್, ಕ್ಷೇತ್ರೀಯ ಕಾರ್ಯವಾಹ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಆದ್ಯ ಸರಸಂಘಚಾಲಕ ಪ್ರಣಾಮ್ ನೆರವೇರಿತು.

Leave a Reply

Your email address will not be published.

This site uses Akismet to reduce spam. Learn how your comment data is processed.