ಮಹಾಭಾರತದಲ್ಲಿ ಬರುವ ವಿದುರನೀತಿಯ ಮಾತೊಂದು ಹೀಗಿದೆ:

ಕುಲಸ್ಯಾರ್ಥೇ ತ್ಯಜೇದೇಕಂ ಗ್ರಾಮಸ್ಯಾರ್ಥೇ ಕುಲಂ ತ್ಯಜೇತ್ ।
ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್ ।।

ಕುಲಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬ ಆ ಕುಲಕ್ಕೇ ಕಂಟಕನೆನಿಸಿದಲ್ಲಿ ಆತನನ್ನು ತ್ಯಜಿಸಬೇಕು. ಕುಲದ ಹಿತಕ್ಕಾಗಿ ಅದು ಅತ್ಯವಶ್ಯ. ಹಾಗೇ ಅಂಥ ಸಂದರ್ಭ ಒದಗಿದರೆ ಒಂದು ಗ್ರಾಮದ ಹಿತಕ್ಕಾಗಿ ಕುಲವನ್ನೇ ತ್ಯಜಿಸಬೇಕು. ಒಂದು ಜಿಲ್ಲೆ ಅಥವಾ ಅದಕ್ಕಿಂತ ದೊಡ್ಡ ಜನಪ್ರದೇಶದ ಇಲ್ಲವೇ ದೇಶದ ಹಿತಕ್ಕಾಗಿ ಅನಿವಾರ್ಯವಾದರೆ ಒಂದು ಗ್ರಾಮವನ್ನೇ ತ್ಯಜಿಸಬೇಕು. ಒಂದರ ಹಿತಕ್ಕಾಗಿ ಮತ್ತೊಂದನ್ನು ತ್ಯಜಿಸುವ ಈ ಸರಣಿಯು ಆತ್ಮವನ್ನು ಕಂಡುಕೊಳ್ಳುವ ತನಕ ಮುಂದುವರಿಯುತ್ತದೆ. ಆತ್ಮಸಾಕ್ಷಾತ್ಕಾಕ್ಕಾಗಿ ಒಂದೊಮ್ಮೆ ಈ ಭೂಮಿಯ ಹಿತವನ್ನೇ ಬಿಡಬೇಕಾಗಿಬಂದಲ್ಲಿ ಯಾವುದೇ ಚಿಂತೆ ಮಾಡದೆ ಬಿಡಬೇಕು.

ಮೊದಲ ಮೂರು ಪಾದಗಳಲ್ಲಿ ಮೂಡದ ಪ್ರಶ್ನೆ ಈ ಕೊನೆಯ ಪಾದದಲ್ಲಿ ಮೂಡುವುದು ಸಹಜ. ಅಂದರೆ, ಆತ್ಮಕ್ಕಾಗಿ ಭೂಮಿಯ ಹಿತವನ್ನು ಬಲಿಗೊಡಬೇಕೇ ಎಂಬ ಪ್ರಶ್ನೆ.

ಈ ಪ್ರಶ್ನೆ ಹುಟ್ಟಿದ್ದು ನಾಲ್ಕನೆಯ ಪಾದದಲ್ಲಿ. ಮೊದಲ ಮೂರು ಪಾದಗಳ ವಿವರವನ್ನು ಬಿಟ್ಟುಬಿಟ್ಟ ಕಾರಣ ಈ ಪ್ರಶ್ನೆ ಹುಟ್ಟಿಕೊಂಡಿದೆ.

ಮೊದಲ ಮೂರು ಪಾದಗಳನ್ನು ಒಮ್ಮೆ ನೋಡಿದರೆ ಕಾಣುವುದೇನು? ಕುಲದ ಹಿತಕ್ಕಿಂತ ಅದೇ ಕುಲದ ಒಬ್ಬ ಸದಸ್ಯನ ಹಿತ ದೊಡ್ಡದಿರಲು ಅಸಾಧ್ಯ. ಹಾಗೆಯೇ ಒಂದು ಗ್ರಾಮದ ಹಿತಕ್ಕಿಂತ ಅದೇ ಗ್ರಾಮದ ಒಂದು ಅವಿಭಾಜ್ಯ ಅಂಗವಾಗಿರುವ ಕುಲದ ಹಿತ ಸುತರಾಂ ದೊಡ್ಡದೆನಿಸದು. ಒಂದು ದೇಶದ ಒಳಗಿರುವ ಒಂದು ಪುಟ್ಟ ಗ್ರಾಮವು ತನ್ನ ಹಿತವನ್ನು ಕಾಯ್ದುಕೊಳ್ಳಲು ತನ್ನದೇ ವಿಸ್ತೃತ ಸ್ವರೂಪವಾಗಿರುವ ದೇಶಕ್ಕೇ ಸೆಡ್ಡುಹೊಡೆದು ನಿಂತರೆ ಅಂಥ ಗ್ರಾಮವನ್ನು ಏನೆಂದುಕೊಳ್ಳಬೇಕು?

ಸಣ್ಣ ಸ್ವ-ಗುರುತು

ಒಂದು ನಿರ್ದಿಷ್ಟ ಕೆಲಸದ ಸನ್ನಿವೇಶದಲ್ಲಿ ಬೆರಳೊಂದು ತನ್ನ ತುದಿ ಕತ್ತರಿಸಿಹೋಗುವ ಸಂದರ್ಭ ಎದುರಾದಾಗ ತನ್ನನ್ನುಳಿಸಿಕೊಳ್ಳಲು ತನ್ನ ತಲೆಯನ್ನೇ ಗರಗಸಕ್ಕೆ ಒಡ್ಡಿಕೊಂಡರೆ ಹೇಗಿರಬಹುದು? ಅಂಥ ಬೆರಳು ಬೇಕೇ? ಇರಗೊಡಬೇಕೇ? ತಲೆಯೇ ಹೋದ ನಂತರ ಬೆರಳು ಇದ್ದೀತೇ? ಹೆಣದಲ್ಲಿ ಬೆರಳು ಇದ್ದರೆಷ್ಟು, ಬಿಟ್ಟರೆಷ್ಟು?

ಬೆರಳಿನ ಅಸ್ತಿತ್ವಕ್ಕಿಂತ ದೇಹದ ಅಸ್ತಿತ್ವ ಮುಖ್ಯ ಎನ್ನುವುದು ಎಂಥ ಮೂಢನಿಗೂ ತಿಳಿಯುತ್ತದೆ. ತನ್ನೊಬ್ಬ ಸದಸ್ಯನ ಅಸ್ತಿತ್ವಕ್ಕಿಂತ ಕುಲದ ಅಸ್ತಿತ್ವ ಮುಖ್ಯ ಎಂದು ಕುಲಬಂಧುಗಳು ಒಟ್ಟು ಸೇರಿ ಸ್ವಲ್ಪ ಕಷ್ಟವೆನಿಸಿದರೂ ಒಂದು ನಿರ್ಧಾರಕ್ಕೆ ಬಂದಾರು. ಆದರೆ ಒಂದು ಗ್ರಾಮಕ್ಕಾಗಿ ಕುಲವನ್ನು ಬಲಿಪಡೆಯಬೇಕೆಂಬ ನಿಃಸ್ವಾರ್ಥ ನಿರ್ಧಾರವನ್ನು ತಳೆಯಲು ಗ್ರಾಮಸ್ಥರಿಗೆ ಸಾಧ್ಯವಾಗುವುದು ತುಸು ಕಷ್ಟ. ಯಾಕೆಂದರೆ ಪ್ರತಿಯೊಬ್ಬ ಗ್ರಾಮಸ್ಥನೂ ತನ್ನನ್ನು ಗ್ರಾಮಸ್ಥ ಎಂದು ತಿಳಿಯುವ ಬದಲು ಒಬ್ಬ ವ್ಯಕ್ತಿ ಎಂದೇ ತಿಳಿದಿರುತ್ತಾನೆ. ತನಗೆ ಯಾವುದೇ ಸಮಸ್ಯೆ ಆಗದಿದ್ದರೆ ಸಾಕು, ಅಬ್ಬಬ್ಬಾ ಅಂದರೆ ತನ್ನ ಮನೆಮಂದಿಗೆ ಯಾವ ಸಂಕಟವೂ ಒದಗಿದಿದ್ದರೆ ಸಾಕು ಎಂಬ ಸ್ವ-ರಕ್ಷಿತ ಕೋನದಲ್ಲಿ ಯೋಚಿಸುತ್ತಾನೆ.

ಈ ಯೋಚನೆಯಲ್ಲಿ ಸಮಸ್ಯೆಯಿದೆ ಮತ್ತದು ಎಲ್ಲಿದೆ ಎಂದು ಯಾರು ಬೇಕಾದರೂ ಹೇಳಿಯಾರು. ಸಮಸ್ಯೆಯ ಪರಿಹಾರವನ್ನೂ ಸೂಕ್ತವಾಗಿ ಸೂಚಿಸಿಯಾರು. ತಾವೇ ಆ ಸಮಸ್ಯೆಯ ಭಾಗವಾದಾಗ ಸರಿಯಾದ ಹೆಜ್ಜೆಯಿಡುವುದು ಕಷ್ಟ ಅಷ್ಟೆ.

ಒಂದು ಗ್ರಾಮದ ಹಂತಕ್ಕೇ ಈ ಸವಾಲು! ಇನ್ನು ಒಂದು ದೇಶದ ಅಥವಾ ರಾಷ್ಟ್ರದ ಹಂತಕ್ಕೆ?

ತಮ್ಮ ವ್ಯಕ್ತಿಗತ ಗುರುತು, ಕುಲದ ಜತೆಗಿನ ಬಾಂಧವ್ಯ, ತಾನು ಬೆಳೆದ ವಾತಾವರಣದ ಜತೆಗಿನ ನಂಟು ಇತ್ಯಾದಿಗಳನ್ನು ಬಿಡದೆ ಒಬ್ಬಾತ ತನ್ನನ್ನು ರಾಷ್ಟ್ರೀಯ ಎಂದು ಗುರುತಿಸಿಕೊಳ್ಳಲು ಕಷ್ಟವಾಗದೇನೋ! ಇದಕ್ಕೂ ಕಷ್ಟವಾಗುವವರು ಇದ್ದಾರೆನ್ನಿ. ನಮ್ಮಲ್ಲಿಯ ಭಾಷಾಭಿಮಾನ, ಪ್ರದೇಶಾಭಿಮಾನದ ತೀವ್ರತೆಯನ್ನು ನೋಡಿದರೆ ಸಾಕು, ಇದು ಮನದಟ್ಟಾಗುತ್ತದೆ. ಅಂಥಲ್ಲಿ ತನ್ನದಾದ ಎಲ್ಲ ಗುರುತುಗಳನ್ನು ರಾಷ್ಟ್ರದ ಗುರುತಿಗಾಗಿ ಬಲಿಗೊಡಬೇಕಾಗಿ ಬಂದರೆ?

ಹಾಗೆ ಬಲಿಗೊಡುವುದು ದೊಡ್ಡದೆಂದು ವಿವರಿಸಬಹುದು. ಹಾಗೆ ಬಲಿಗೊಟ್ಟವರನ್ನು ಮಹಾಪುರುಷರೆಂದು ಕೊಂಡಾಡಲೂಬಹುದು. ಸ್ವತಃ ತೊಡಗಬೇಕಾಗಿ ಬಂದಾಗ ತನ್ನ ಸತ್ತ್ವ ಏನೆಂದು ಎಷ್ಟೆಂದು ಗೊತ್ತಾಗುತ್ತದೆ.

ರಾಷ್ಟ್ರಕ್ಕಾಗಿ ಅದರ ಹಿಂದಿನ ಸ್ತರದ ತನಕದ ಎಲ್ಲ ವ್ಯಾಪ್ತಿಯಿಂದ ವ್ಯಕ್ತಿಯೊಬ್ಬ ಹೊರತಾದಾಗ ಆತ ನಿಜ ರಾಷ್ಟ್ರೀಯನಾಗುತ್ತಾನೆ. ರಾಷ್ಟ್ರಕ್ಕಾಗಿ ಬದುಕನ್ನು ಮುಡಿಪಾಗಿಟ್ಟಾಗ ಆತ ರಾಷ್ಟ್ರಪುರುಷನಾಗುತ್ತಾನೆ.

ಈ ನಿಟ್ಟಿನಲ್ಲಿ ಇಲ್ಲಿಯ ಅನುಕೂಲಕ್ಕಾಗಿ ಪ್ರಾತಿನಿಧಿಕವಾಗಿ ಕೆಲವರನ್ನು ಸ್ವೀಕರಿಸಿ ಸ್ವಲ್ಪ ಲೋಕಿಸುವುದಾದರೆ;
ಶಿವಾಜಿ, ಭಗತ್, ಸುಭಾಷ್ ಚಂದ್ರ ಬೋಸ್..

ಶಿವಾಜಿಯ ಹಿರಿಗುರುತು

ನೋಡಿ, ಶಿವಾಜಿ ತನ್ನನ್ನು ಈ ರಾಷ್ಟ್ರದೊಂದಿಗೆ ಗುರುತಿಸಿಕೊಂಡೇ ವ್ಯವಹರಿಸಿದ. ಅದರಲ್ಲಿ ತನ್ನ ಭಾಷೆ, ಪ್ರಾದೇಶಿಕತೆಗೆ ಮಹತ್ತ್ವ ನೀಡಿದ್ದು ಅತಿ ಕನಿಷ್ಠ. ಬಗಲಲ್ಲಿದ್ದ ಅಂದರೆ ತನ್ನ ರಾಜ್ಯದ ಗಡಿಯಲ್ಲಿದ್ದ ಬಿಜಾಪುರದ ಸುಲ್ತಾನನನ್ನೂ ಯವನನೆಂದೇ ತಿಳಿದ, ದೂರದ ದಿಲ್ಲಿ ಸುಲ್ತಾನನ್ನೂ ಯಾವುದೇ ವ್ಯತ್ಯಾಸವಿಲ್ಲದೆ ಯವನನೆಂದೇ ತಿಳಿದ. ಪಕ್ಕದ ಪಾಳುಬಿದ್ದಿದ್ದ ವಿಜಯನಗರದ ಗತವೈಭವವನ್ನು ತನ್ನ ಪರಂಪರೆಯ ಅವಿಭಾಜ್ಯ ಅಂಗವಾಗಿ ಕಂಡು ಪ್ರೇರಣೆಗೊಂಡ. ಔರಂಗಜೇಬನ ಸೇವೆಯಲ್ಲಿ ಕೃತಾರ್ಥನಾಗಿದ್ದು ತನ್ನ ಮೇಲೇರಿಬಂದ ದೂರದ ಮಿರ್ಜಾ ರಾಜ ಜಯಸಿಂಹನಿಗೆ ಸ್ವತಂತ್ರ ಹಿಂದೂ ರಾಜನಾಗಿ ಮೆರೆಯಲು ಪ್ರೇರಣೆನೀಡಿದ. ಜಯಸಿಂಹನ ಗುಲಾಮೀಮಾನಸಿಕತೆಯನ್ನು ಕಿತ್ತೊಗೆಯಲಾಗಲಿಲ್ಲ ಬಿಡಿ. ಛತ್ರಸಾಲನ ಸಂದರ್ಭದಲ್ಲಿ ಹಾಗಾಗದೆ ಆತ ಸ್ವತಂತ್ರ ಹಿಂದೂ ರಾಜನಾಗಿ ಮೆರೆಯಲು ಸಾಧ್ಯವಾಯಿತು. ಇದಕ್ಕೆ ಪ್ರೇರಣೆ ಮತ್ತದೇ ಶಿವಾಜಿ. ಪ್ರಾದೇಶಿಕ ಸಂಕುಚಿತತೆಯನ್ನಾಗಲೀ ವಿಸ್ತರಣೆಯ ಮಹತ್ತ್ವಾಕಾಂಕ್ಷೆಯನ್ನಾಗಲೀ ಹೊಂದುತ್ತಿದ್ದರೆ ಶಿವಾಜಿಗೆ ಹೀಗೆ ಪ್ರೇರಣೆ ಹೊಂದಲಾಗಲೀ ನೀಡಲಾಗಲೀ ಸಾಧ್ಯವಾಗುತ್ತಿರಲಿಲ್ಲ.

ಶಿವಾಜಿ ಸ್ವರಾಜ್ಯವನ್ನು ಸ್ಥಾಪಿಸಿ ಅದಕ್ಕಿಟ್ಟ ಹೆಸರು ಹಿಂದವೀ ಸ್ವರಾಜ್ಯ. ಮರಾಠಾ ಸಾಮ್ರಾಜ್ಯ ಅಲ್ಲ. ಇಂದಿಗೂ ಬುದ್ಧಿಜೀವಿಗಳು ಆತ ಸ್ಥಾಪಿಸಿದ್ದು ಮರಾಠಾ ಸಾಮ್ರಾಜ್ಯ ಎಂದು ಕಥಿಸುವುದಿದೆ. ಹಸಿಹಸಿ ಸುಳ್ಳಿನ ಕಥನವಿದು. ಬುದ್ಧಿಗೇಡಿ ಕಥನವಿದು. ಶಿವಾಜಿಯ ಸೈನಿಕರೂ ಸ್ವರಾಜ್ಯದ ಸೈನಿಕರೇ. ಆದರೆ ಅವರು ಇತಿಹಾಸದ ಪುಟಗಳಲ್ಲಿ ಬಿಂಬಿತರಾದುದು ಮರಾಠಾ ಸೈನಿಕರೆಂದು. ಇಲ್ಲಿಯೂ ಮತ್ತದೇ ಬುದ್ಧಿಗೇಡಿ ಕಥನ ಕೆಲಸಮಾಡಿದೆ. ಅದು ಪಾಠ್ಯಪುಸ್ತಕದಲ್ಲಿಯೂ ಕೆಲಸಮಾಡಿದೆ.

ಪಾಠ್ಯಪುಸ್ತಕದಲ್ಲಾಗಲೀ ಮಾಧ್ಯಮಗಳಲ್ಲಾಗಲೀ ತುಸುವೂ ಕೆಲಸಗೈಯದ ಸತ್ಯಕಥನ ಯಾವುದೆಂದರೆ; ಸ್ವರಾಜ್ಯಸ್ಥಾಪಿಸಿದ ತಕ್ಷಣವೇ ಶಿವಾಜಿ ಆಡಳಿತಸಂಬಂಧೀ ಭಾಷೆಯಲ್ಲಿ ನುಸುಳಿದ್ದ ಫಾರ್ಸಿ, ಅರಬ್ಬೀ ಮತ್ತಿತರ ಪರಕೀಯ ಪದಗಳನ್ನು ತೆಗೆದು ಆ ಸ್ಥಾನದಲ್ಲಿ ಸಂಸ್ಕೃತ ಪದಗಳನ್ನು ಬಳಸಿದ್ದು. ಅನಿವಾರ್ಯವಿದ್ದೆಡೆ ಮರಾಠಿ ಪದಗಳ ಬಳಕೆಯನ್ನೂ ತಂದ. ಆಡಳಿತದಲ್ಲಿ ಒಟ್ಟಾರೆಯಾಗಿ ಅನುಷ್ಠಿಸಿದ್ದು ಸ್ವದೇಶೀ ಪದಗಳನ್ನು. ಅಂದರೆ ಆತ ಕೇವಲ ಮರಾಠಿ ಪದಗಳನ್ನಷ್ಟೆ ತುಂಬಲಿಲ್ಲ, ಸಂಸ್ಕೃತಕ್ಕೆ ಒತ್ತು ನೀಡಿ ಉಳಿದ ಸ್ವದೇಶೀ ಭಾಷೆಗಳ ಪದಗಳಿಗೂ ಸ್ಥಾನ ಕಲ್ಪಿಸಿದ. ಮರಾಠಿಗೆ ತನ್ನ ಭಾಷೆಯೆಂದಲ್ಲ, ಸ್ವದೇಶೀ ಭಾಷೆಯೆಂದು ಸ್ಥಾನನೀಡಿದ.

ಶಿವಾಜಿ ತನ್ನನ್ನು ಮರಾಠಿಗನೆಂದು ಗುರುತಿಸಿಕೊಳ್ಳಲು ಯಾವ ಅಡ್ಡಿಯೂ ಇರಲಿಲ್ಲ. ಮರಾಠಿ ಭಾಷೆಯನ್ನಷ್ಟೆ ಆಡಳಿತದ ಭಾಷೆಯಾಗಿ ಜಾರಿಗೆ ತರಲು ಯಾವ ವಿರೋಧವೂ ಇರಲಿಲ್ಲ. ಆದರೆ ಆತ ತನ್ನದೆಂದು ಇತರರು ಗುರುತಿಸಬಹುದಾದ ಈ ಯಾವ ಸಂಗತಿಗಳ ಹಿಂದೆಯೂ ಹೋಗದೆ ವಿಶಾಲದೃಷ್ಟಿಯಿಂದ ತನ್ನನ್ನು ಹಿಂದವೀ ಸ್ವರಾಜ್ಯದ ಮುಖ್ಯನೆಂದು ಗುರುತಿಸಿಕೊಂಡ. ಶಿವಾಜಿಯನ್ನು ಹಾಗೆ ಯಥಾವತ್ತಾಗಿ ಗುರುತಿಸುವ ಯೋಗ್ಯತೆ ಇಂದಿನ ಬುದ್ಧಿಜೀವಿ ವಲಯಕ್ಕೆ ಇಲ್ಲದೇ ಹೋದುದು ದುರಂತ. ಇರಲಿ.

ವೈರಿಗಳನ್ನು ಮೋಸಗೊಳಿಸಲು ವೈರಿಗಳದೇ ವೇಷ ಎಂಬಂತೆ ತಲೆಗೆ ಆಂಗ್ಲಟೋಪಿಯೇರಿಸಿಕೊಂಡು, ಸಿಖ್‌ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ಗಡ್ಡಬೋಳಿಸಿಕೊಂಡು ಭಾರತಮಾತೆಗಾಗಿ ನನ್ನೀ ಬದುಕು ಎನ್ನುತ್ತ ಗಲ್ಲಿಗೇರುವ ಸಂದರ್ಭದಲ್ಲಿಯೂ ಭಾರತಮಾತಾಕೀ ಜೈ ಎಂದು ತನ್ನ ಬದುಕಿನ ಧ್ಯೇಯದ ಘೋಷಣೆಕೂಗಿದ ಭಗತ್ ಸಿಂಗ್ ಆಗಲೀ ಭಾರತದ ವೈರಿಗಳನ್ನು ಬಾರತದಿಂದ ಹಿಮ್ಮೆಟ್ಟಲು ಅವರದೇ ವೈರಿಗಳ ಸಹಕಾರದಿಂದ ಅವರದೇ ದಾರಿಯಲ್ಲಿ ಸಾಗಬೇಕೆಂದು ನಿಶ್ಚಯಿಸಿ ತೊಡಗಿದ ಸುಭಾಷ್ಚಂದ್ರ ಬೋಸರಾಗಲೀ ಈ ಸಾಲಿನಲ್ಲಿ ಬರುವ ಸಾಲುಸಾಲು ಮಹಾಪುರುಷರಾಗಲೀ ಎಲ್ಲರೂ ಎಲ್ಲ ರೀತಿಯಲ್ಲೂ ಶಿವಾಜಿಯ ಉತ್ತರಾಧಿಕಾರಿಗಳೇ ಸೈ.

ತಪ್ಪು ಗುರುತಿನ ಪಾಡು

ಇಲ್ಲಿರುವುದು ಗುರುತಿನ ಸವಾಲು. ತನ್ನ ಗುರುತು ಯಾವುದೆಂಬ ಗೊಂದಲ.

ತನ್ನನ್ನು ದೇಹವೆಂದು, ದೇಹಕ್ಕೆ ಸಂಬಂಧಿಸಿದ ಮನಸ್ಸು ಬುದ್ಧಿ ಇತ್ಯಾದಿಗಳೆಂದು ಗುರುತಿಸುವುದು ತೀರಾ ಸಂಕುಚಿತವಾದುದು‌. ಆದರೆ ಹಾಗೆ ಗುರುತಿಸಿಕೊಳ್ಳುವುದು ತುಂಬಾ ಸುಲಭದ ದಾರಿ. ಅದು ಅಜ್ಞಾನದ ದಾರಿ ಕೂಡ. ಈ ದಾರಿಯಲ್ಲಿ ಗೊಂದಲ ಇಲ್ಲ. ಇದು ಒಂದು ಅತಿ.

ತನ್ನನ್ನು ಮಹತ್ತಿನ ಜತೆ ಗುರುತಿಸಿಕೊಳ್ಳುವುದು ಇನ್ನೊಂದು ದಾರಿ. ಮಹತ್ ಎಂದರೆ ದೊಡ್ಡದು. ಯಾವುದಕ್ಕಿಂತ ಇನ್ನಾವುದೂ ದೊಡ್ಡದಿಲ್ಲವೋ ಅದನ್ನು ನಮ್ಮ ಪರಂಪರೆ ಕೆಲವು ನಿರ್ದಿಷ್ಟ ಪದಗಳಿಂದ ಗುರುತಿಸಿದೆ; ಆತ್ಮ, ಸತ್, ಚಿತ್, ಜ್ಞಾನ, ಅನಂತ.‌. ಇವೆಲ್ಲವೂ ಅಮೂರ್ತವೇ. ಎಲ್ಲವಕ್ಕಿಂತ ದೊಡ್ಡದನ್ನು ಪೂರ್ತಿ ಕಾಣಲು ಅಸಾಧ್ಯ, ಒಂದೊಮ್ಮೆ ಅದು ಕಣ್ಣಿಗೆ ಕಾಣುವಂತೆ ಇದ್ದರೂ. ಅದೊಂದು ಭೌತಿಕ ಅಸ್ತಿತ್ವ ಅಲ್ಲವಾಗಿ ಕಣ್ಣಿಗೆ ಕಾಣದ ಅಮೂರ್ತ ಅಸ್ತಿತ್ವ ಎಂದಾದಾಗಂತೂ ಕಾಣುವುದು ಅಶಕ್ಯವೇ ಸರಿ.

ಮಹತ್ತಿನ ಜತೆ ಗುರುತಿಸಿಕೊಳ್ಳುವುದು ಜ್ಞಾನದ ದಾರಿಯೇ ಹೌದು. ಆದರೆ ಹಾಗೆ ಅದನ್ನರಿತುಕೊಂಡೇ ಗುರುತಿಸುವುದಾಗುತ್ತಿದೆ ಎಂದಾಗ ಅದು ಬಹುತೇಕ ಅಜ್ಞಾನದ ಮಾತಾಗುವ ಸಾಧ್ಯತೆ ಇದೆ. ಹಾಗಾಗಿ ಮಹತ್ತಿನ ಜತೆಗಷ್ಟೆ ಗುರುತಿಸಿಕೊಳ್ಳುವುದು ಎನ್ನುವುದು ಇನ್ನೊಂದು ಅತಿಯೇ ಸೈಯಷ್ಟೆ.

ನಮ್ಮೆಲ್ಲರ ಗುರುತಾಗಿರುವ ಈ ಮಹತ್ ಭೌತಿಕ ಸ್ವರೂಪಕ್ಕಿಂತ ಭಿನ್ನವಾದುದು ಎಂದೇ ಶ್ರದ್ಧೆ. ಭೌತಿಕವಸ್ತುವಿಗಿಂತ ಭಿನ್ನ ಇದರ ಗುಣಲಕ್ಷಣಗಳು. ಹಾಗಾಗಿ ಅದು ಎಷ್ಟು ಸಣ್ಣದೋ ಅಷ್ಟೇ ದೊಡ್ಡದು ಅನ್ನುವುದು ಅದರ ಒಂದು ಲಕ್ಷಣವಿವರ. ಹಾಗೆಯೇ ಎಷ್ಟು ಹತ್ತಿರದಲ್ಲಿದೆಯೋ ಅಷ್ಟೇ ದೂರದಲ್ಲಿದೆ, ಎಷ್ಟು ನಿಧಾನವಾಗಿ ಚಲಿಸುವುದೋ ಅಷ್ಟೇ ವೇಗವಾಗಿ ಚಲಿಸುತ್ತದೆ.‌. ಇವೆಲ್ಲ ಭೌತಿಕವಸ್ತುವಿನ ಮೇಲೆ ಆರೋಪಿಸಲಾಗದ ಗುಣಲಕ್ಷಣಗಳು.

ಈ ಗುಣಲಕ್ಷಣಗಳಲ್ಲಿ ದೊಡ್ಡದು, ದೂರದಲ್ಲಿದೆ ಇತ್ಯಾದಿ ಸಹಜವಾಗಿ ನಮಗೆಟುಕದ ಒಂದು ಅತಿಯನ್ನು ಕೈಬಿಟ್ಟು ಅತಿಸಣ್ಣದು ಅತಿಹತ್ತಿರದಲ್ಲಿದೆ ಇತ್ಯಾದಿ ನಾವು ಗ್ರಹಿಸಬಹುದಾದ ಗುಣಲಕ್ಷಣಗಳನ್ನು ಸ್ವೀಕರಿಸಿ ಅದರೊಂದಿಗೆ ನಮ್ಮನ್ನು ಗುರುತಿಸಿಕೊಳ್ಳುವ ಯತ್ನಸಾಹಸ ನಡೆಸಿದ್ದೇವೆ. ಹಾಗಾಗಿ; ‘ಆತ್ಮಾರ್ಥೇ ಪೃಥಿವೀಂ ತ್ಯಜೇತ್’ ಸಾಲನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದಂತಾಗಿದೆ.

ಅಪರೂಪದ ದಾರಿ

ಈ ಸಂದರ್ಭದಲ್ಲಿ ನಮಗೊದಗುವುದು ಮಧ್ಯಮ ದಾರಿ. ಅದು ವ್ಯಾವಹಾರಿಕವೂ ಹೌದು. ಮತ್ತು ಅದುವೋ ಇದುವೋ ಎಂಬ ಗೊಂದಲದ ಹೆಚ್ಚಿನ ಸಂದರ್ಭಗಳಲ್ಲಿ ನಮಗೆ ಸರಿಯಾದ ಉತ್ತರವಾಗಿ ಒದಗುವುದು ಮಧ್ಯಮ ದಾರಿಯಿಂದಲೇ ಹೌದಷ್ಟೆ.

ಇಲ್ಲಿ ಮಧ್ಯಮ ದಾರಿ ಯಾವುದೆಂದರೆ; ಅತ್ತ ಸಂಕುಚಿತವಾದ ದೇಹದೊಂದಿಗೆ ಗುರುತಿಸುವ ದಾರಿಯೂ ಅಲ್ಲದ, ಇತ್ತ ಅಮೂರ್ತವೆನಿಸಿದ ಮಹತ್ತಿನ ಜತೆಗೆ ಗುರುತಿಸುವ ದಾರಿಯೂ ಅಲ್ಲದ ರಾಷ್ಟ್ರದೊಂದಿಗೆ ಗುರುತಿಸುವ ದಾರಿ.
ಇದು ದೇಹಸಂಬಂಧಿತ ಗುರುತಿನಷ್ಟು ಸಂಕುಚಿತವೂ ಅಲ್ಲ, ಆತ್ಮಸಂಬಂಧಿತ ಗುರುತಿನಷ್ಟು ಅಮೂರ್ತವೂ ಅಲ್ಲ. ದೇಹಸಂಬಂಧಿತ ಅಜ್ಞಾನದ ದಾರಿಗಿಂತ ಎಷ್ಟೋ ಪಟ್ಟು ಮೇಲಿರುವ ಈ ಮಧ್ಯಮ ದಾರಿಯು ಆತ್ಮಸಂಬಂಧಿತ ಜ್ಞಾನದ ದಾರಿಗೆ ಹತ್ತಿರವಿದೆ. ಲೌಕಿಕದ ಜತೆಗಿದ್ದುಕೊಂಡು ಅಲೌಕಿಕವನ್ನು ಗೊತ್ತೇ ಆಗದಂತೆ ಹೊಂದಬಹುದಾದ ಅಪರೂಪದ ದಾರಿಯಿದು.

ಹಾಗಾಗಿ ಇದು – ಮಧ್ಯಮ ದಾರಿಯಾದರೂ – ಎರಡೂ ದಾರಿಗಳಿಂದ ಭಿನ್ನವಾಗಿದ್ದೂ ಗಣಿತ ಲೆಕ್ಕಾಚಾರದಂತೆ ಎರಡೂ ದಾರಿಗಳ ಸರಿ ನಡುವಿನಲ್ಲಿಲ್ಲ. ತಾತ್ತ್ವಿಕವಾಗಿ ಮಾತ್ರ ಇದನ್ನು ಮಧ್ಯಮ ದಾರಿ ಎನ್ನಬೇಕಾದುದು.

ರಾಷ್ಟ್ರೀಯ ಅನ್ನುವುದು ಒಂದು ಗುರುತು. ಕರಾರುವಾಕ್ಕಾದ ಗುರುತು. ಲೌಕಿಕ ಜಗತ್ತಿನ ದೊಡ್ಡ ಗುರುತು ಕೂಡಾ. ಅಲೌಕಿಕವಲ್ಲದ ಆದರೆ ಅದನ್ನು ಹೊಂದಲು ಸಹಕಾರಿಯಾದ ಗುರುತು.

ಪಶ್ಚಿಮದ ನೇಷನ್ ಕಲ್ಪನೆಗಿಂತ ಭಿನ್ನವಾದುದು ನಮ್ಮ ರಾಷ್ಟ್ರಕಲ್ಪನೆ. ಸರಳವಾಗಿ ಅದನ್ನು ಹೇಳುವುದಾದರೆ; ಭೌಗೋಳಿಕ ಅಸ್ತಿತ್ವವಿದ್ದೂ ಆಡಳಿತದಂಥ ವ್ಯವಸ್ಥೆಗಳಿದ್ದೂ, ಅವುಗಳ ಜತೆಗೆ, ಅವುಗಳಿಗಿಂತ ಮುಖ್ಯವಾಗಿ, ಸಾಂಸ್ಕೃತಿಕ ಗುರುತುಳ್ಳ ದೇಶವು ರಾಷ್ಟ್ರವೆನಿಸಿಕೊಳ್ಳುತ್ತದೆ. ಪ್ರಾಚೀನದಿಂದ ಅಂದರೆ ವೇದಗಳ ಸಂದರ್ಭದಲ್ಲಿ ನಾವು ಕಂಡುಕೊಂಡ ರಾಷ್ಟ್ರದ ಪರಿಕಲ್ಪನೆ ಇದು. ನಮಗೆ ಇಂದೂ ಪ್ರಸ್ತುತವಾದ ಪರಿಕಲ್ಪನೆ.

ಜ್ಞಾನಮುಖಿ

ನಮ್ಮೀ ರಾಷ್ಟ್ರಕ್ಕೆ ಹಲವು ಹೆಸರುಗಳು! ಭಾರತ, ಹಿಂದೂಸ್ಥಾನ, ಸನಾತನ ಇತ್ಯಾದಿ.

ಇದನ್ನು ಪರಕೀಯ ಮೊಗಲರಿಂದ ಉಳಿಸಿಕೊಳ್ಳುವ ಸಂದರ್ಭದಲ್ಲಿ ವಿಜಯನಗರದ ಅರಸರು, ನಂತರ ಶಿವಾಜಿ ಮಹಾರಾಜರು ಗುರುತಿಸಿದ್ದು ಹಿಂದೂ ಎಂಬ ಹೆಸರಿನಿಂದ. ನಂತರ ಬಂದ ಐರೋಪ್ಯ ದಾಳಿಕೋರರಿಂದ, ಮುಖ್ಯವಾಗಿ ಆಂಗ್ಲರಿಂದ ಇದನ್ನು ರಕ್ಷಿಸಿಕೊಳ್ಳಬೇಕೆಂಬ ಹೋರಾಟ ನಡೆದಾಗ ಆಗಿನ ಸ್ವಾತಂತ್ರ್ಯಸೇನಾನಿಗಳು ಇದನ್ನು ಗುರುತಿಸಿದ್ದು ಭಾರತ ಎಂಬ ಹೆಸರಿನಿಂದ.

ಈಗ ಭಾರತದಿಂದಲೇ ತೊಡಗೋಣವಂತೆ.

ಪ್ರಾಚೀನ ಪದವಿದು. ಬಲು ಹಿಂದೆ ಈ ದೇಶವನ್ನು ಆಳುತ್ತಿದ್ದ ಪ್ರಸಿದ್ಧ ರಾಜನೊಬ್ಬನ ಹೆಸರು ಭರತ ಎಂದಾಗಿತ್ತು. ಆತನಿಂದಲೇ ಈ ಹೆಸರು ಬಂತೆಂಬ ಒಂದು ಅಭಿಮತವೂ ಇದೆ. ಇರಲಿ.

ಭಾ ಎಂದರೆ ಬೆಳಕು. ಅದು ಜ್ಞಾನವನ್ನು ಸಂಕೇತಿಸುತ್ತದೆ. ರತ ಎಂದರೆ ರಮಿಸುವುದು. ಜ್ಞಾನದಲ್ಲಿ ರಮಿಸುವ ರಾಷ್ಟ್ರವೆಂಬ ಅರ್ಥದಲ್ಲಿ ಇದನ್ನು ಪ್ರಾಚೀನರು ಭಾರತ ಎಂಬ ಪದದಿಂದ ಗುರುತಿಸಿದರು ಎಂಬ ಮಾತು ವಾಸ್ತವಕ್ಕೆ ಹೆಚ್ಚು ಹತ್ತಿರ.

ಇದಕ್ಕೆ ಪೂರಕವಾಗಿ ಭಾರತ ಜ್ಞಾನಕ್ಕೆ ಒತ್ತು ನೀಡಿದ್ದೂ ಹೌದು. ಜ್ಞಾನವನ್ನು ಮಾಹಿತಿ, ವಿವೇಕ, ಅವಲೋಕನ, ಪ್ರತಿಭೆ ಇತ್ಯಾದಿ ಸಂಗತಿಗಳಿಂದ ಬೇರ್ಪಡಿಸಿಕೊಂಡು ಒಂದು ನಿಷ್ಕೃಷ್ಟ ನಿರ್ಣಯವನ್ನು ತಲಪಿದ್ದೂ ಹೌದು.

ಜ್ಞಾನಕ್ಕೆ ಭಾರತ ನೀಡಿದ ಕೊಡುಗೆ ದೊಡ್ಡದೇ. ಆದರೆ ಜ್ಞಾನವೆಂದರೇನೆಂಬ ನೋಟವನ್ನು ಜಗತ್ತಿಗೆ ಕಾಣ್ಕೆಯಾಗಿ ನೀಡಿತೆಂಬ ವಿವರ ಇಲ್ಲಿ ಮುಖ್ಯ.

ಜ್ಞಾನವ್ಯಾಖ್ಯೆ

ಹಿಂದೆ, ತನ್ನಲ್ಲಿದ್ದ ಜ್ಞಾನಿಗಳಿಗೆ ಭಾರತವು ಪ್ರಸಿದ್ಧವಿತ್ತು. ಹೊರದೇಶಗಳಲ್ಲಿ ಭಾರತಕ್ಕೆ ಹೋಗಿಬಂದವರನ್ನು ಅಲ್ಲಿಯ ಜ್ಞಾನಿಗಳ ಬಗೆಗೆ ವಿಚಾರಿಸಿಕೊಳ್ಳುವ ಪದ್ಧತಿ ಇತ್ತು.

ಜ್ಞಾನಿ ಎಂದರೆ ತನ್ನನ್ನು ತಿಳಿದವ. ಇದು ಜ್ಞಾನಿಯ ಕುರಿತ ಅತಿಸರಳ ವಿವರ. ತಾನೆಂದರೆ ದೇಹವೇ, ಬುದ್ಧಿಯೇ ಮತ್ತಿನ್ನೇನು ಇತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಅನುಭವದ ಮೂಲಕ ಕಂಡುಕೊಂಡವ.

ತನ್ನಲ್ಲಿ ಆತ್ಮವಸ್ತುವನ್ನು ಅನುಭವಿಸಿದವ ಜ್ಞಾನಿ. ಜ್ಞಾನವೆಂದರೇನೆಂಬ ವಿವರವನ್ನು ಆತ ಕೊಡುವುದು ಮುಖ್ಮವಲ್ಲ, ಮುಖ್ಯ ಅದನ್ನಾತ ತನ್ನೊಳಗೆ ಅನುಭವಿಸುವುದು.

ಈ ನೆಲೆಯಲ್ಲಿ ಜ್ಞಾನವೆಂದರೆ ಆತ್ಮವಸ್ತುವಿನ ಜತೆಗಿನ ಅನುಸಂಧಾನ. ಆತ್ಮದರಿವು.

ತನ್ನರಿವು ಆತ್ಮದರಿವು ಬೇರೆ ಬೇರೆ ಅಲ್ಲ ಎಂಬ ಅನುಭವಾಧಾರಿತ ಅರಿವು.

ಜ್ಞಾನಕ್ಕೂ ತನ್ನ ಕುರಿತಾದ ಅರಿವಿಗೂ ಅನುಭವಕ್ಕೂ ಬಿಡಿಸಲಾಗದ ನಂಟು. ಅದಕ್ಕಾಗಿಯೇ ಇರಬೇಕು ಜ್ಞಾನಿಯನ್ನು ಅನುಭಾವಿ ಎಂದು ಗುರುತಿಸುವುದು. ತನ್ನರಿವನ್ನು ಹೊಂದಿದಾತನನ್ನು ಜ್ಞಾನಿಯೆನ್ನುವುದು.

ಈ ಹಿನ್ನೆಲೆಯಲ್ಲಿ; ಪ್ರಪಂಚವನ್ನೆಲ್ಲ ಸುತ್ತಾಡಿದರೂ ಪ್ರಪಂಚದಲ್ಲಿಯ ಎಲ್ಲದರ ಬಗೆಗೂ ಅರೆದುಕುಡಿವಷ್ಟು ಮಾಹಿತಿಯನ್ನು ಹೊಂದಿದ್ದರೂ ಆತನನ್ನು ಜ್ಞಾನಿ ಎಂದು ನಮ್ಮೀ ಪರಂಪರೆ ಗಣಿಸದು.

ಯಾವುದನ್ನು ಅರಿತರೆ ಎಲ್ಲವನ್ನೂ ಅರಿತಂತಾಗುವುದೋ ಅದನ್ನಲ್ಲವೆ ಅರಿಯಬೇಕಾದುದು. ಅದನ್ನೇ ಆತ್ಮದರಿವು ತನ್ನರಿವು ಎಂದಿತು ಭಾರತ.

ಹೀಗೆ ಭಾರತವು ಜ್ಞಾನಕ್ಕೆ ಪರ್ಯಾಯಪದವಾಗಿ ರೂಪುಗೊಂಡ ವಿವರವು ವಿಶಿಷ್ಟವಿದೆ.

ಜ್ಞಾನದ ಶಾಖೆಗಳು

ಭಾರತ ಎಂದರೆ ಸಂಸ್ಕೃತಿ, ಭಾರತ ಎಂದರೆ ಧರ್ಮ, ಭಾರತ ಎಂದರೆ ಮಾನವೀಯತೆ ಇತ್ಯಾದಿ ವಾದವಿವರಗಳಿವೆ.

ತಪ್ಪಿಲ್ಲ ಇವುಗಳಲ್ಲಿ. ಇವೆಲ್ಲವೂ ಇಲ್ಲಿವೆ. ಇವುಗಳಿಂದಾಗಿ ಭಾರತವು ವಿಶಿಷ್ಟವೆನಿಸಿಯೂ ಇದೆ.

ಆದರೆ ಅದು ಧರ್ಮವಿರಬಹುದು, ಸಂಸ್ಕೃತಿಯಿರಬಹುದು ಇವೆಲ್ಲವಕ್ಕೂ ಮೂಲ ಜ್ಞಾನವೇ ಸರಿ.

ಪ್ರತಿಯೊಬ್ಬನಲ್ಲಿಯೂ ಇರುವ ಆತ್ಮತತ್ತ್ವ ಒಂದೇ ಎನ್ನುವ ಜ್ಞಾನದ ಮಾತು ಪರರನ್ನು ತನ್ನಂತೆ ನೋಡು ಎಂಬ ಸಂಸ್ಕೃತಿಯ ಮಾತನ್ನು ಹುಟ್ಟುಹಾಕುತ್ತದೆ. ಜ್ಞಾನದ ಇದೇ ಮಾತು ಯಾರಿಗೂ ಕೇಡು ಬಗೆಯದೆ ಪರಸ್ಪರ ಬೆರೆತು ಸಹಜೀವನ ನಡೆಸಬೇಕು ಎಂಬ ಧರ್ಮದ ಸೂಚನೆಗೆ ಕಾರಣವಾಗುತ್ತದೆ.

ಸಮಗ್ರವಾಗಿ ನೋಡಿದಾಗ ಸಂಸ್ಕೃತಿ, ಪರಂಪರೆ, ಧರ್ಮ ಇತ್ಯಾದಿ ಸಂಗತಿಗಳ ನಡುವೆ ಒಂದು ಜ್ಞಾನದ ತಂತು ಇರುವುದು ಗೋಚರಕ್ಕೆ ಬಂದೀತು. ಜ್ಞಾನಕೇಂದ್ರಿತವಾಗಿ ಇವು ಪರಸ್ಪರ ಸಂಬಂಧಿತ ಅನ್ನುವುದು ಎಲ್ಲರ ಅನುಭವಕ್ಕೆ ಬರುವಂಥವೇ ಆಗಿದೆ.

ಭಾರತ, ಹೆಸರೇ ಹೇಳುವಂತೆ ಜ್ಞಾನನಿಷ್ಠ ರಾಷ್ಟ್ರ. ಜ್ಞಾನದ ಆಧಾರದಲ್ಲಿ ಅದು ಧರ್ಮನಿಷ್ಠವೂ ಹೌದು, ಸಂಸ್ಕೃತಿನಿಷ್ಠವೂ ಹೌದು. ಈ ಬಗೆಯ ಯಾವ ಯಾವ ದೈವೀಗುಣಗಳಿಗೆ ಅದನ್ನು ಸಂಬಂಧಿಸಿ ಪರಿಚಯಿಸಲಾಗುತ್ತದೋ ಅವೆಲ್ಲವೂ ಹೌದು. ಯಾಕೆಂದರೆ ಜ್ಞಾನದ ನೆಲೆಯಲ್ಲಿ ಆಯೆಲ್ಲ ದೈವೀಗುಣಗಳು ಸಿದ್ಧಿಸಲಿಕ್ಕೇ ಬೇಕು.

ಭೂಮಿಗಿಂತ ದೊಡ್ಡದು

ಭಾರತವು ಜ್ಞಾನಪ್ರಧಾನ ರಾಷ್ಟ್ರ.

ಜ್ಞಾನವು ಆತ್ಮತತ್ತ್ವದ ಕುರಿತಾದುದು. ಪ್ರತಿಯೊಂದು ಜೀವಿಯ ಅಸ್ತಿತ್ವದ ಮೂಲವನ್ನು ಕುರಿತಾದುದು. ಜಗತ್ತಿನೆಲ್ಲ ಸಂಗತಿಗಳ ಒಳಗೂ ಇರಬಲ್ಲ ಶಾಶ್ವತ ವಸ್ತುವಿನ ಕುರಿತಾದುದು.

ಜಗತ್ತಿನ ಎಲ್ಲರ ಕುರಿತಾದುದು. ಎಲ್ಲದರ ಕುರಿತಾದುದು.

ಈಗ ಮತ್ತೆ ವಿದುರನೀತಿಯತ್ತ ಹೊರಳುವುದಾದರೆ;
ಆತ್ಮಕ್ಕಾಗಿ ಭೂಮಿಯನ್ನೇ ತ್ಯಜಿಸಬೇಕೆಂಬ ಊಹಿಸಲು ಅಸಾಧ್ಯವಾದ, ಪಾಲಿಸಲು ಕಷ್ಟಸಾಧ್ಯವಾದ ಮಾತು ಆತ್ಮದರಿವನ್ನು ಹೊಂದುವ ಕಷ್ಟ ಎಷ್ಟರದಿರಬಹುದೆಂಬ ಒಂದು ಅಂದಾಜನ್ನು ನಮ್ಮ ಮುಂದಿಟ್ಟಿದೆ.

ಜತೆಗೆ ಭುವಿಯು ಆತ್ಮತತ್ತ್ವಕ್ಕಿಂತ ಕಡಮೆಯದಾದ ಒಂದು ಅಸ್ತಿತ್ವ ಎಂಬುದನ್ನು ಸೂಚಿಸಿದೆ. ವ್ಯಕ್ತಿಗಿಂತ ಕುಲ ದೊಡ್ಡದೆಂಬ, ಕುಲಕ್ಕಿಂತ ಗ್ರಾಮ ದೊಡ್ಡದೆಂಬ ಈ ವರ್ಧಿಷ್ಣು ಏಣಿಯಲ್ಲಿ ತುದಿಯಲ್ಲಿದೆ ಆತ್ಮತತ್ತ್ವ. ಆದರೆ ಆತ್ಮವನ್ನು ಸ್ವಾರ್ಥದ ಸ್ತರಕ್ಕಿಳಿಸಿ ಆ ಕುರಿತು ಯೋಚಿಸುವುದೇ ಒಂದು ಅಪರಾಧ ಎಂಬ ಭಾವಸಂದರ್ಭವನ್ನು ಹುಟ್ಟುಹಾಕಿದ್ದೇವೆ.

ಆತ್ಮಕ್ಕಾಗಿ ಭುವಿಯನ್ನು ತ್ಯಜಿಸಬೇಕೆಂಬ ವಿದುರನ ಮಾತಲ್ಲಿ ಅದು ಭುವಿಗಿಂತ ದೊಡ್ಡದು ಎಂಬ ನಿರ್ಣಯವಿದೆ.

ಭೂಮಿಗಿಂತ ದೊಡ್ಡದಾದುದನ್ನು, ಎಲ್ಲದಕ್ಕಿಂತ ದೊಡ್ಡದಾದುದನ್ನು ಕಂಡುಕೊಂಡ ಜ್ಞಾನಿಗಳ ರಾಷ್ಟ್ರ ಭಾರತ.

ತ್ಯಾಗವಿಲ್ಲದೆ ಜ್ಞಾನವಿಲ್ಲ

ಭೂಮಿಗಿಂತ ದೊಡ್ಡದು ಆತ್ಮ.

ಅಂದರೆ ಭೂಮಿಗಿಂತ ದೊಡ್ಡದು ಜ್ಞಾನ. ಭೂಮಿಗಿಂತ ದೊಡ್ಡದು ಸತ್ಯ.

ಇವೆಲ್ಲವೂ ಶಾಶ್ವತವಾದ ಸಂಗತಿಯೊಂದನ್ನು ಸೂಚಿಸುತ್ತಿವೆ.

ಜತೆಗೆ ಭೂಮಿ ಶಾಶ್ವತವಲ್ಲವೆಂಬ ವಾಸ್ತವವನ್ನೂ ಅರುಹುತ್ತಿವೆ. ಆಧುನಿಕ ವಿಜ್ಞಾನದ ಕಥನವೂ ಇದಕ್ಕೆ ಪೂರಕವೇ ಇದೆಯಷ್ಟೆ. ಮಹಾಸ್ಫೋಟ ಸಿದ್ಧಾಂತದ ಮೂಲಕ ಅದು ಭೂಮಿಯ ಹುಟ್ಟಿನ ಕುರಿತು ಒಂದು ಕಥನವನ್ನು ಕಟ್ಟಿಕೊಟ್ಟಿದೆ. ಅಂದರೆ ಭೂಮಿಗೊಂದು ಆರಂಭದಿಂದ ತೊಡಗಿದ ಭೂತಕಾಲವಿದೆ. ಈಗ ನಾವು ಅಂತ್ಯವನ್ನು ಊಹಿಸುವುದು ಬೇಡ ಬಿಡಿ. ಆರಂಭ ಇದೆ ಎನ್ನುವುದೇ ಶಾಶ್ವತತೆಗೊಂದು ಅಡ್ಡಿಯಾದಂತಾಯಿತು. ಆದಿ-ಅಂತ್ಯಗಳೆರಡೂ ಇಲ್ಲದ್ದನ್ನಲ್ಲವೆ ಶಾಶ್ವತವೆಂದು ಊಹಿಸುವುದು.

ಶಾಶ್ವತತೆಯ ಹಿಂದೆ ಬಿದ್ದವರು ಭಾರತೀಯರು. ಅವರನ್ನು ವೇದ ಗುರುತಿಸುವುದು ಅಮೃತಪುತ್ರರೆಂದು.

ಆತ್ಮತತ್ತ್ವದ ನೆಲೆಯಲ್ಲಿ ದೇಶಕಾಲಭೇದವಿಲ್ಲದೆ ಎಲ್ಲರೂ ಅಮೃತಪುತ್ರರೇ ಸರಿ. ಅದನ್ನು ಕಂಡುಕೊಂಡ ರಾಷ್ಟ್ರವಾಗಿ ‘ಅಮೃತಪುತ್ರರು’ ಎಂಬ ಮಾತು. ಹುಟ್ಟೂ ಇಲ್ಲದ, ಸಾವೂ ಇಲ್ಲದ ತತ್ತ್ವವೊಂದರ ಜತೆಗೆ ತಮ್ಮ ಗುರುತನ್ನು ಕಂಡುಕೊಂಡ ರಾಷ್ಟ್ರ.

ಅದರ ಕಂಡುಕೊಳ್ಳುವಿಕೆಗೆ, ಅಂದರೆ ಅದು ಅನುಭವಕ್ಕೆ ಬರವಂತಾಗಲು ಬೇಕಾದುದು ತ್ಯಾಗ, ದೊಡ್ಡದಕ್ಕಾಗಿ ಚಿಕ್ಕದರ ತ್ಯಾಗ. ಅತ್ಯಂತ ಚಿಕ್ಕದು ದೇಹಸಂಬಂಧಿತ ವ್ಯಕ್ತಿಯ ಅಸ್ತಿತ್ವ. ಅತ್ಯಂತ ದೊಡ್ಡದು ಆತ್ಮಸಂಬಂಧಿತ ಅಸ್ತಿತ್ವ.

ಜ್ಞಾನಕ್ಕಾಗಿ ತ್ಯಾಗ. ಓದಿನಿಂದಲ್ಲ, ಬುದ್ಧಿಯಿಂದಲ್ಲ.. ತ್ಯಾಗದಿಂದ ಮಾತ್ರ ಅಮೃತತ್ವಸಿದ್ಧಿ. ಜ್ಞಾನಸಿದ್ಧಿ. ಇದು ಉಪನಿಷತ್ತಿನ ಮಾತು.

ಭಾರತ ಒಂದು ನಿಟ್ಟಿನಲ್ಲಿ ಜ್ಞಾನಭೂಮಿ. ಇನ್ನೊಂದು ನಿಟ್ಟಿನಲ್ಲಿ ತ್ಯಾಗಭೂಮಿ.

ಜ್ಞಾನಭೂಮಿಯಾಗಿರುವುದು ಅನಿವಾರ್ಯವಾಗಿ ಅಥವಾ ಅತಿಸಹಜವಾಗಿ ತ್ಯಾಗಭೂಮಿಯೂ ಆಗಿರಲಿಕ್ಕೇ ಬೇಕು ಎಂಬುದು ಇಲ್ಲಿ ಹುಟ್ಟುವ ನಿರ್ಣಯ. ("ವಿಕ್ರಮ" ಯುಗಾದಿ ವಿಶೇಷಾಂಕ)

Leave a Reply

Your email address will not be published.

This site uses Akismet to reduce spam. Learn how your comment data is processed.