– ವಿಶ್ವನಾಥ ಸುಂಕಸಾಳ, ಲೇಖಕರು,ಸಂಸ್ಕೃತ ವಿದ್ವಾಂಸರು, ಶೃಂಗೇರಿ

ಇದಮಂಧತಮಃ ಕೃತ್ಸ್ನಂ ಜಾಯೇತ ಭುವನತ್ರಯಮ್ |
ಯದಿ ಶಬ್ದಾಹ್ವಯಜ್ಯೋತಿರಾಸಂಸಾರಂ ನ ದೀಪಯೇತ್ ||


ಇದು ಸಂಸ್ಕೃತದ ಪ್ರಸಿದ್ಧ ಕವಿಯಾದ ದಂಡಿಯ ಮಾತು. ಶಬ್ದವೆಂಬ ಜ್ಯೋತಿಯು ಬೆಳಗದೇ ಇದ್ದಲ್ಲಿ ಇಡೀ ಜಗತ್ತು ಕತ್ತಲಿನ ಗೂಡಾಗಿಬಿಡುತ್ತಿತ್ತು ಎಂದು ದಂಡಿಯು ಹೇಳುತ್ತಾನೆ. ಶಬ್ದಗಳು ಅರ್ಥಕ್ಕನುಸಾರವಾಗಿ ಕೂಡಿಕೊಂಡು ವಾಕ್ಯಗಳಾಗುತ್ತವೆ. ವಾಕ್ಯಗಳು ಭಾವಾಭಿವ್ಯಕ್ತಿಯನ್ನು ಮಾಡುವ ಮೂಲಕ ಭಾಷೆ ಎನಿಸುತ್ತವೆ. ಭಾಷೆಗಳು ನಮ್ಮ ಚಿತ್ತವೃತ್ತಿಗಳಿಗೆ ಒಂದು ರೂಪವನ್ನು ಕೊಡುತ್ತವೆ. ಹಾಗಾಗಿ ಭಾಷೆ ಎಂಬುದು ಅಂತಃಕರಣವು ಪ್ರಕಟಗೊಳ್ಳುವ ಒಂದು ಮಾಧ್ಯಮ. ನಮ್ಮೆಲ್ಲ ಆಲೋಚನೆಗಳು ಮನೋವೃತ್ತಿಯ ರೂಪದಲ್ಲಿರುತ್ತವೆ. ನಮ್ಮ ಇಚ್ಛೆ, ಸಂಕಲ್ಪ, ಸಂಶಯ, ಶ್ರದ್ಧೆ, ಅಶ್ರದ್ಧೆ, ಧೃತಿ, ಅಧೃತಿ, ಜ್ಞಾನ, ಭಯ, ನಾಚಿಕೆ ಮೊದಲಾದ ಎಲ್ಲ ಭಾವಗಳೂ ಅಂತಃಕರಣದ ವೃತ್ತಿಗಳೇ ಆಗಿವೆ ಎಂದು ಉಪನಿಷತ್ತು ತಿಳಿಸುತ್ತದೆ. ಇವುಗಳಲ್ಲಿ ಕೆಲವಷ್ಟು ಕೆಲವೊಮ್ಮೆ ದೇಹಭಾಷೆಯ ಮೂಲಕವೂ, ಕೆಲವೊಮ್ಮೆ ಶಬ್ದರೂಪದ ಭಾಷೆಯ ಮೂಲಕವೂ ಪ್ರಕಟವಾಗುತ್ತಿರುತ್ತವೆ. ಹೀಗೆ ನಮ್ಮ ಮನಸ್ಸಿನ ಭಾವವನ್ನು ವ್ಯಕ್ತಪಡಿಸುವುದಕ್ಕಾಗಿ ಹಾಗೂ ಮತ್ತೊಬ್ಬ ವ್ಯಕ್ತಿಯ ಆಲೋಚನೆಗಳನ್ನು ಅರಿಯುವುದಕ್ಕಾಗಿ ನಮಗೆ ಭಾಷೆ ಬೇಕೇ ಬೇಕು.


ಭಾಷೆಯ ಪ್ರಯೋಜನ: ವ್ಯವಹಾರವೆಂಬುದು ಭಾಷೆಯ ಅನೇಕ ಪ್ರಯೋಜನಗಳಲ್ಲಿ ಒಂದು. ವಸ್ತುತಃ ಭಾರತೀಯ ದೃಷ್ಟಿಯಲ್ಲಿ ಭಾಷೆಯೆಂಬುದು ಪರಮ ಪುರುಷಾರ್ಥದ ಪ್ರಾಪ್ತಿಗೆ ಸಾಧನವೂ ಹೌದು. ಹಾಗಾಗಿ ಭಾಷೆಯನ್ನು ಲೌಕಿಕ ಹಾಗೂ ಅಲೌಕಿಕ ಪ್ರಯೋಜನಗಳೆರಡರ ಸಾಧನವನ್ನಾಗಿ ಕಾಣಲಾಗಿದೆ. ‘ಏಕಃ ಶಬ್ದಃ ಸಮ್ಯಗ್ಜ್ಞಾತಃ ಸುಪ್ರಯುಕ್ತಃ ಸ್ವರ್ಗೇ ಲೋಕೇ ಕಾಮಧುಕ್ ಭವತಿ’ ಅಂದರೆ ಯಾವುದೇ ಒಂದು ಶಬ್ದವನ್ನು ಅದರ ವ್ಯುತ್ಪತ್ತಿಯ ಸಹಿತವಾಗಿ ಸರಿಯಾಗಿ ತಿಳಿದುಕೊಂಡು, ಸರಿಯಾಗಿ ಪ್ರಯೋಗಿಸಿದರೆ ಅದು ಇಹದಲ್ಲೂ ಪರದಲ್ಲೂ ಕಾಮಧೇನುವಾಗುತ್ತದೆ ಎಂದು ವ್ಯಾಕರಣ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಅಷ್ಟೇ ಅಲ್ಲ, ವಾಙ್ಮಯ ತಪಸ್ಸು ಎಂಬ ಕಲ್ಪನೆಯೂ ನಮ್ಮಲ್ಲಿದೆ.

ಮಾತನಾಡುವುದೆಂದರೆ ಅದೊಂದು ಯಜ್ಞವೇ ಎಂಬುದನ್ನು ಗೀತೆಯು ತಿಳಿಸುತ್ತದೆ. ಹೀಗಿರುವಾಗ ನಾವಾಡುವ ಭಾಷೆಯನ್ನು ಕೇವಲ ವ್ಯವಹಾರ ಮಾಧ್ಯಮವನ್ನಾಗಿ ಮಾತ್ರ ಪರಿಭಾವಿಸಿದರೆ ಅದರಿಂದ ನಮಗೆ ಮಹತೀ ಹಾನಿಯಷ್ಟೆ.


ತ್ರಿಗುಣಗಳ ಆಧಾರದಲ್ಲಿ ಲಿಂಗ ನಿರ್ಧಾರಣೆ: ನಮ್ಮ ದೇಶಭಾಷೆಗಳಲ್ಲೇ ಅತ್ಯಂತ ಪ್ರಾಚೀನವೂ, ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಮಾತೃಸ್ವರೂಪದಲ್ಲಿರುವಂಥದ್ದೂ ಆಗಿರುವ ಭಾಷೆಯೆಂದರೆ ಅದು ಸಂಸ್ಕೃತ. ಸಂಸ್ಕೃತದಲ್ಲಿ ಲಿಂಗ ನಿರ್ಧಾರಣೆಯು ಉಳಿದ ಭಾಷೆಗಳಂತೆ ಅಲ್ಲ. ಅಲ್ಲಿ ತ್ರಿಗುಣಗಳ ಆಧಾರದಲ್ಲಿ ಋಷಿ-ಮುನಿಗಳಿಂದ ಇಂಥ ಶಬ್ದದ ಲಿಂಗವು ಇದು ಎಂದು ವಿಭಾಗ ಮಾಡಲ್ಪಟ್ಟಿದೆ. ಇಡೀ ಜಗತ್ತು ನಿಂತಿರುವುದೇ ತ್ರಿಗುಣಗಳ ಆಧಾರದಲ್ಲಿ. ತ್ರಿಗುಣಗಳ ವಿಷಯದಲ್ಲಿ ಭಗವದ್ಗೀತೆ, ಪುರಾಣ, ಸಾಂಖ್ಯಶಾಸ್ತ್ರಗಳಲ್ಲಿ ಬಹಳ ವಿಸ್ತೃತವಾದ ವಿವರಣೆಗಳು ಸಿಗುತ್ತವೆ. ಈ ತ್ರಿಗುಣಗಳಿರದ ಪ್ರಾಪಂಚಿಕ ವಸ್ತುವೇ ಈ ಜಗತೀತಲದಲ್ಲಿ ಇಲ್ಲವೆಂಬುದು ಶಾಸ್ತ್ರಗಳ ಆಘೋಷ. ಅದಕ್ಕೆ ಕಾರಣವೆಂದರೆ, ಇಡೀ ಜಗತ್ತು ಸಚ್ಚಿದಾನಂದಾತ್ಮಕವಾದ ಬ್ರಹ್ಮವೆಂಬ ಆಶ್ರಯದಲ್ಲಿ ಮಾಯೆಯಿಂದ ಕಲ್ಪಿತವಾಗಿರುವುದು. ಆ ಮಾಯೆಯು ಸ್ವತಃ ಸತ್ತ್ವರಜಸ್ತಮೋಗುಣಾತ್ಮಕವಾಗಿದೆ. ಹಾಗಾಗಿ ಅದರಿಂದ ಉಂಟಾದ ವಸ್ತುಗಳಲ್ಲೂ ಈ ತ್ರಿಗುಣಗಳು ವ್ಯಾಪ್ತವಾಗಿವೆ.


ಶಬ್ದಗಳು ಅರ್ಥವನ್ನು ಜ್ಞಾಪಿಸುತ್ತವೆ. ಅರ್ಥವೆಂದರೆ ಶಬ್ದದಿಂದ ಜ್ಞಾತವಾಗುವ ಯಾವುದೇ ವಸ್ತು. ಈ ಶಬ್ದದಿಂದ ಇಂಥ ವಸ್ತು ದ್ಯೋತಿಸಲ್ಪಡಲಿ ಎಂಬುದು ಪರಮೇಶ್ವರನ ಇಚ್ಛೆಯೆಂದೇ ನೈಯ್ಯಾಯಿಕರು ನಂಬುತ್ತಾರೆ. ಹೀಗೆ ಶಬ್ದಾರ್ಥಗಳ ಸಂಬಂಧವೆಂಬುದು ಅನಾದಿಯಾದುದು. ಹಾಗಾಗಿಯೇ ಮಾಯಾ-ಬ್ರಹ್ಮರ ಸಗುಣರೂಪವಾದ  ಪಾರ್ವತೀ-ಪರಮೇಶ್ವರರ ಅವಿನಾಭಾವವನ್ನು ಶಬ್ದಾರ್ಥಗಳಿಗೆ ಮಹಾಕವಿ ಕಾಳಿದಾಸ ಹೋಲಿಸಿದ್ದಾನೆ. ಶಬ್ದಾರ್ಥಸಂಬಂಧವು ನಿತ್ಯವೆಂದು ಶಾಸ್ತ್ರಜ್ಞರು ನಿರ್ಣಯಿಸಿದ್ದಾರೆ. ಹೀಗೆ ಆಯಾ ಶಬ್ದವು ಪ್ರತಿನಿಧಿಸುವ ಆಯಾ ವಸ್ತುವು ತ್ರಿಗುಣಗಳಿಂದ ಕೂಡಿರುವಂತೆಯೇ ಆಯಾ ಶಬ್ದಗಳೂ ತ್ರಿಗುಣಗಳಿಂದ ಕೂಡಿರುತ್ತವೆ. ಇದನ್ನು ಅರ್ಥೈಸಿಕೊಳ್ಳಲು ನಮಗೆ ಕಷ್ಟ. ತಪಸ್ಸಿನ ಮೂಲಕ ಎಲ್ಲವನ್ನೂ ಅರಿಯುವ ಸಾಮರ್ಥ್ಯವನ್ನು ಪಡೆದ ಋಷಿಗಳು ಇದನ್ನು ಕಂಡುಕೊಂಡು ಇಂಥ ಶಬ್ದವು ಇಂಥ ಗುಣಪ್ರಧಾನವಾಗಿರುವುದರಿಂದ ಇಂಥ ಲಿಂಗದ್ದು ಎಂದು ನಿಶ್ಚಯಿಸಿರುತ್ತಾರೆ. ಯಾವ ಶಬ್ದವು ಸತ್ತ್ವಪ್ರಧಾನವಾಗಿದೆಯೋ ಅದು ಪುಲ್ಲಿಂಗವೆಂದೂ, ರಜೋಗುಣಪ್ರಧಾನವಾಗಿದ್ದರೆ ಸ್ತ್ರೀಲಿಂಗವೆಂದೂ, ತಮೋಗುಣಪ್ರಧಾನವಾಗಿದ್ದರೆ ನಪುಂಸಕಲಿಂಗವೆಂದೂ ಸಂಸ್ಕೃತದಲ್ಲಿ ವಿಭಾಗ ಮಾಡಲಾಗಿದೆ. ಈ ಎಲ್ಲ ದೃಷ್ಟಿಯಲ್ಲಿ ಹೇಳುವುದಾದರೆ, ಸಂಸ್ಕೃತವೊಂದು ಅತ್ಯಂತ ವ್ಯವಸ್ಥಿತವಾಗಿ ಬೆಳೆದುಬಂದಿರುವ ಒಂದು ಭಾಷೆಯಾಗಿದೆ.

ಸಂಪರ್ಕ ಭಾಷೆ ಯಾವುದಾಗಬೇಕು?: ಒಂದು ದೇಶವೆಂದರೆ ಅಲ್ಲಿ ನಾನಾ ಭಾಷೆಯಲ್ಲಿ ವ್ಯವಹರಿಸುವವರು ಇರುತ್ತಾರೆ. ಹತ್ತಾರು ಕಿ.ಮೀ.ಗೆ ಆಡುಭಾಷೆಯು ತನ್ನ ಸ್ವರೂಪವನ್ನು ಬದಲಿಸುತ್ತದೆ ಎಂಬುದು ನಮಗೆಲ್ಲ ಗೊತ್ತು. ಹೀಗಿರುವಾಗ ಭಾರತದಂಥ ದೇಶದಲ್ಲಿ ಏಳುನೂರಕ್ಕೂ ಹೆಚ್ಚಿನ ಆಡುಭಾಷೆಗಳು ಇದ್ದರೆ ಅದು ವಿಸ್ಮಯವಲ್ಲ. ಭಾರತದ ಭೌಗೋಳಿಕ ಹಾಗೂ ಸಾಮಾಜಿಕ ವೈವಿಧ್ಯವು ಭಾಷೆಗಳ ವೈವಿಧ್ಯಕ್ಕೂ ಕಾರಣವಾಗಿವೆ. ಹೀಗಿರುವಾಗ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಎಲ್ಲರನ್ನೂ ತಲುಪುವ ಸಲುವಾಗಿ ಹಾಗೂ ಆಡಳಿತವನ್ನು ಸುಗಮಗೊಳಿಸುವ ಸಲುವಾಗಿ ಒಂದು ಆಡಳಿತ ಭಾಷೆಯನ್ನು ಹೊಂದುವ ಕುರಿತು ಜಿಜ್ಞಾಸೆ ಆರಂಭವಾಯಿತು. ಆದರೆ ಒಂದೊಂದು ರಾಜ್ಯದಲ್ಲೂ ಒಂದೊಂದು ಭಾಷೆಯಲ್ಲಿ ವ್ಯವಹರಿಸುವ ಸ್ಥಿತಿಯಿರುವಾಗ ಯಾವುದೇ ಒಂದು ಭಾಷೆ ರಾಷ್ಟ್ರಭಾಷೆ ಎಂದು ಘೋಷಿಸುವುದು ರಾಜಕೀಯ ಕಾರಣಗಳಿಗಾಗಿ ಹಾಗೂ ಮತ್ತಿತರ ಕಾರಣಗಳಿಗಾಗಿ ಕಷ್ಟವೆಂದರಿತು ಅದನ್ನು ಕೈಬಿಡಲಾಯಿತು. ಹಾಗಾಗಿ ಭಾರತಕ್ಕೆ ತನ್ನದೇ ಆದ ಒಂದು ರಾಷ್ಟ್ರಭಾಷೆ ಎಂಬುದಿಲ್ಲ. ಆದರೂ ಇಡೀ ಭಾರತವನ್ನು ಒಂದುಗೂಡಿಸುವ ಭಾಷೆಯೊಂದನ್ನು ಬೆಳೆಸಬೇಕೆಂಬುದು ಸರ್ಕಾರದ ಇಚ್ಛೆಯೂ ಹೌದು.


ಇಂಗ್ಲೀಷನ್ನು ಸಂಪರ್ಕ ಭಾಷೆಯಾಗಿ ಬೆಳೆಸುವುದು ಪ್ರಾಯೋಗಿಕವಾಗಿ ಫಲದಾಯಕವಲ್ಲ. ಯಾಕೆಂದರೆ ಈ ದೇಶದ ಜನರನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಸಾಮರ್ಥ್ಯವು ಇಂಗ್ಲೀಷ್ ಗಿಲ್ಲ. ಅದಿದ್ದರೆ ಈ ನೆಲದ ಭಾಷೆಗೇ ಇರಲು ಸಾಧ್ಯ. ಮೋದಿಯವರು ಪ್ರಧಾನಿಯಾದ ಮೇಲೆ ಹಿಂದಿಯನ್ನೇ ಜಗತ್ತಿನ ಎಲ್ಲ ವೇದಿಕೆಗಳಲ್ಲೂ ಅಭಿಮಾನ ಪೂರ್ವಕವಾಗಿ, ಆತ್ಮವಿಶ್ವಾಸದಿಂದ ಬಳಸಲು ತೊಡಗಿದ ಮೇಲೆ ಇಂಗ್ಲೀಷ್ ಭಾಷೆಯ ಬಗೆಗಿನ ಭ್ರಮೆಯು ದೇಶದ ಜನರಲ್ಲಿ ಕುಗ್ಗುತ್ತಿದೆ. ಇಂಗ್ಲೀಷ್ ಇಲ್ಲದೆಯೂ ನಾವು ನಮ್ಮ ನಮ್ಮ ಕ್ಷೇತ್ರದಲ್ಲಿ ಯಶಸ್ಸು ಹೊಂದಲು ಸಾಧ್ಯವೆಂಬ ಸತ್ಯ ಅರ್ಥವಾಗುತ್ತಿದೆ. ಜೊತೆಗೆ ಇಂಗ್ಲೀಷನ್ನು ಸಂಪರ್ಕ ಭಾಷೆಯಾಗಿ ಆಯ್ದುಕೊಳ್ಳುವುದರಿಂದ ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಅವಸಾನಕ್ಕೇ ಅದು ಕಾರಣವಾಗುವುದರಿಂದ ದೊಡ್ದ ಹಾನಿಯೇ ಸರಿ. ಹಾಗಾಗಿ ಗುಲಾಮಿತನದ ದ್ಯೋತಕವಾಗಿರುವ ಆಂಗ್ಲಭಾಷೆಯು ಈ ಸ್ಥಾನಕ್ಕೆ ಸರ್ವಥಾ ಯೋಗ್ಯವಾದುದಲ್ಲ.


ಭಾರತದಲ್ಲಿ ಭಾಷೆಗಳಿಗೆ ಕೊರತೆಯಿಲ್ಲ. ಇಲ್ಲಿನ ಕನ್ನಡ, ತಮಿಳು ಸೇರಿದಂತೆ ಅನೇಕ ಪ್ರಾದೇಶಿಕ  ಭಾಷೆಗಳಿಗೂ ಸಾವಿರಾರು ವರ್ಷಗಳ ಇತಿಹಾಸವಿದೆ. ಸಮೃದ್ಧ ಸಾಹಿತ್ಯದ ಸಂಪತ್ತಿದೆ. ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಪ್ರಾದೇಶಿಕ ಭಾಷೆಗಳ ಬಳಕೆ ಇನ್ನಷ್ಟು ಹೆಚ್ಚಿದೆ. ಎಲ್ಲ ರೀತಿಯಿಂದಲೂ ಶ್ರೀಮಂತವಾಗಿರುವ ಭಾರತೀಯ ಭಾಷೆಯೇ ಸಂಪರ್ಕ ಭಾಷೆಯಾಗುವುದು ಉಚಿತವಾದುದು. ರಾಷ್ಟ್ರೀಯ ಶಿಕ್ಷಣ ನೀತಿ – ೨೦೨೦ ರಲ್ಲಂತೂ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಉನ್ನತ ಶಿಕ್ಷಣವನ್ನು ಕೊಡಬೇಕೆಂದು ತಿಳಿಸಲಾಗಿದೆ. ಹಾಗಾಗಿ ಭಾರತೀಯ ಭಾಷೆಗಳಿಗೆ ಈಗ ನಿಜವಾಗಿ ಸುಗ್ಗಿಯ ಕಾಲ. ಆದರೆ ಈ ಭಾರತೀಯ ಭಾಷೆಗಳಲ್ಲಿ ಸಂಪರ್ಕ ಭಾಷೆ ಯಾವುದು ಆಗಬಹುದು ಎಂಬ ವಿಚಾರ ಮಾತ್ರ ಅಷ್ಟು ಸುಲಭಕ್ಕೆ ನಿರ್ಣಯಿಸಬಹುದಾದ ವಿಚಾರವಲ್ಲ.
ಹೆಚ್ಚು ಜನ ಮಾತನಾಡುವ ಭಾಷೆಯೆಂಬ ಕಾರಣಕ್ಕೆ ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಆಯ್ದುಕೊಳ್ಳಬೇಕೆಂಬುದು ಸುಲಭವಾಗಿ ಹಾಕಬಹುದಾದ ಲೆಕ್ಕಾಚಾರವಾದರೂ ದಕ್ಷಿಣ ಭಾರತದಲ್ಲಿ ಹಿಂದಿಯ ಬಗೆಗೆ ನಾನಾ ಬಗೆಯ ವಿರೋಧವನ್ನು ವ್ಯಕ್ತಪಡಿಸಲಾಗುತ್ತಿದೆ. ಜೊತೆಗೆ ಹಿಂದಿಯನ್ನೇ ಅರಿಯದ ಜನಸಂಖ್ಯೆಯೂ ಬೇಕಾದಷ್ಟಿದೆ. ಈಶಾನ್ಯ ರಾಜ್ಯಗಳಲ್ಲೂ ಅಷ್ಟೇ. ಹಾಗಾಗಿ ಇದೊಂದು ‘ಹೇರಿಕೆ’ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಪ್ರಾದೇಶಿಕತೆ ಹಾಗೂ ರಾಷ್ಟ್ರೀಯತೆಯ ತಿಕ್ಕಾಟವನ್ನಾಗಿಯೂ ಇದನ್ನು ಬಿಂಬಿಸಲಾಗುತ್ತಿದೆ. ತಮಿಳನ್ನೋ, ಕನ್ನಡವನ್ನೋ ರಾಷ್ಟ್ರದ ಸಂಪರ್ಕ ಭಾಷೆಯಾಗಿಸುವುದೂ ಕೂಡ ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ಮಾತು. ಹಾಗಾಗಿ ನಮಗಿರುವ ಇನ್ನೊಂದು ಆಯ್ಕೆಯೆಂದರೆ ಅದು ಸಂಸ್ಕೃತವನ್ನು ಸಂಪರ್ಕ ಭಾಷೆಯನ್ನಾಗಿಸುವುದು. ಇದು ಅನೇಕ ಆಯಾಮಗಳಿಂದ ಸಾಧುವಾದ ನಿರ್ಣಯವೆನಿಸುತ್ತದೆ. ಪ್ರಾಯೋಗಿಕವಾಗಿ ಇದರ ಸಾಧ್ಯತೆಯ ಬಗ್ಗೆ ಆಮೇಲೆ ವಿಚಾರಿಸೋಣ. ಮೊದಲು ಸೈದ್ಧಾಂತಿಕವಾಗಿ ಇದರ ಆವಶ್ಯಕತೆ ಹಾಗೂ ಸಾಧ್ಯತೆಯ ಬಗ್ಗೆ ಚರ್ಚಿಸೋಣ.


ಪ್ರಾದೇಶಿಕತೆ ರಾಷ್ಟ್ರಿಯತೆಗಳ ನಡುವೆ ವಿರೋಧವಿಲ್ಲ:  ಇತ್ತೀಚೆಗೆ ರಾಷ್ಟ್ರಿಯತೆಗೆ ವಿರೋಧಿಯಾದ ಪ್ರಾದೇಶಿಕತೆಯನ್ನು ಪ್ರಚಾರ ಮಾಡಲಾಗುತ್ತಿದೆ. ವಾಸ್ತವಿಕವಾಗಿ ಪ್ರಾದೇಶಿಕತೆಯು ರಾಷ್ಟ್ರಿಯತೆಗೆ ವಿರುದ್ಧವಲ್ಲ. ಬದಲಿಗೆ ಪೂರಕ. ಪ್ರಾದೇಶಿಕತೆ ಎಂದರೆ ತನ್ನ ನೆಲ-ಜಲ-ನುಡಿಯನ್ನು ಪ್ರೀತಿಸುವುದು. ಅದೇ ಸಮಯಕ್ಕೆ ಒಂದು ರಾಷ್ಟ್ರವಾಗಿ ಭಾರದತವು ಹೊಂದಿರುವ ಇಲ್ಲಿನ ಎಲ್ಲ ನುಡಿಗಳನ್ನೂ, ಎಲ್ಲ ಆಚರಣೆಗಳನ್ನೂ, ಎಲ್ಲ ವೈವಿಧ್ಯಗಳನ್ನೂ ಪ್ರೀತಿಸುವುದು ನಿಜವಾದ ಆದರ್ಶ. ರಾಷ್ಟ್ರಿಯತೆ ಹಾಗೂ ಪ್ರಾದೇಶಿಕತೆಗಳು ಯಾವ ಅಂಚಿನಲ್ಲಿ ತಿಕ್ಕಾಟಕ್ಕಿಳಿಯುತ್ತವೆಯೋ ಅಲ್ಲಿ ರಾಷ್ಟ್ರಿಯತೆ ಮುಖ್ಯವಾಗಬೇಕು. ಯಾಕೆಂದರೆ ವ್ಯಷ್ಟಿಗಿಂತ ಸಮಷ್ಟಿಯ ಸ್ಥಿತಿಯು ಮುಖ್ಯವಾದುದು. ಆ ಸಮಷ್ಟಿ ಕೂಡ ವ್ಯಷ್ಟಿಯನ್ನು ನಾಶಗೊಳಿಸುವಂತಿರಬಾರದು. ಹೀಗೆ ಪರಸ್ಪರ ಪೂರಕವಾದ ರಾಷ್ಟ್ರಿಯತೆ ಹಾಗೂ ಪ್ರಾದೇಶಿಕತೆಗಳನ್ನು ನಾವು ಬೆಳೆಸಿಕೊಳ್ಳಬೇಕಾಗುತ್ತದೆ. ಅನ್ಯಥಾ ಪ್ರಾದೇಶಿಕತೆಯ ಅಮಲಿಗೆ ಸಿಕ್ಕು ವಿಭಾಜಕ ಶಕ್ತಿಗಳ ಆಕ್ರಮಣಕ್ಕೆ ಒಳಗಾಗುವುದನ್ನು ತಪ್ಪಿಸುವುದಕ್ಕಾಗುವುದಿಲ್ಲ. ಈ ಹಿಂದೆಯೂ ಖಂಡಶಃ ಬದುಕುವುದರ ಹಾನಿಯನ್ನು ಸ್ವತಃ ಅನುಭವಿಸಿದ್ದೇವೆ. ಬಾಹ್ಯರ ಎಲ್ಲ ಆಕ್ರಮಣಗಳಿಗೂ ಕಾರಣ ಈ ಖಂಡಶಃ ಬದುಕುವ ಪ್ರವೃತ್ತಿಯೇ ಕಾರಣವಾಗಿದೆ. ಅಖಂಡತೆ ಇರುವಲ್ಲಿ ಬಾಹ್ಯ ಶತ್ರುಗಳ ವಿರುದ್ಧ ಸಂಘಟಿತವಾಗಿ ಹೋರಾಡುವುದು ಸಾಧ್ಯ.
ಈ ನಿಟ್ಟಿನಲ್ಲಿ ಯೋಚಿಸಿದಾಗ ಸಂಸ್ಕೃತವನ್ನು ಸಂಪರ್ಕ ಬಾಷೆಯನ್ನಾಗಿ ಪುನಃ ಸ್ಥಾಪಿಸುವುದು ರಾಷ್ಟ್ರಿಯ ಹಿತಾಸಕ್ತಿಗೆ ಪೂರಕವಾದುದು ಮತ್ತು ಅಂಧ ಪ್ರಾದೇಶಿಕತೆಗೂ ಔಷಧವಾಗಬಲ್ಲುದು. ಸಂಸ್ಕೃತವೆಂದರೆ ಒಂದು ವರ್ಗದ ಭಾಷೆ, ಮೃತಭಾಷೆ ಇತ್ಯಾದಿಯಾಗಿ ಕೆಲವು ಅಜೆಂಡಾವಾದಿಗಳು ಕೂಗಿಕೊಳ್ಳುತ್ತಾರೆ. ಆದರೆ ಆ ಎಲ್ಲ ವಾದಗಳೂ ಇವತ್ತು ಮೂಲೆಗುಂಪಾಗಿವೆ. ಸಂಸ್ಕೃತವು ಎಲ್ಲರಿಗೂ ಸೇರಿದ ಭಾಷೆಯಾಗಿತ್ತು ಮತ್ತು ಈಗಲೂ ಅದು ಎಲ್ಲರ ಭಾಷೆಯೇ ಆಗಿದೆ. ಸಂಸ್ಕೃತವು ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳ ಮೇಲೆ ಪ್ರಭಾವ ಬೀರಿದೆ. ಸಂಸ್ಕೃತದ ಶಬ್ದಗಳು ಹೆಚ್ಚಿನ ಎಲ್ಲ ಭಾಷೆಗಳಲ್ಲೂ ಹೇರಳವಾಗಿ ಇದ್ದೇ ಇವೆ. ಉದಾಹರಣೆಗೆ ಉಲ್ಲಖಿಸುವುದಾದರೆ ತಮಿಳಿನಲ್ಲಿ ೭೧%, ಮಲಯಾಳಮ್ ೮೪%, ತೆಲುಗಿನಲ್ಲಿ ೮೨%, ಬೆಂಗಾಲಿಯಲ್ಲಿ ೮೬%, ಕನ್ನಡವು ೬೫% ಪ್ರಮಾಣದಷ್ಟು ಸಂಸ್ಕೃತ ಶಬ್ದಗಳನ್ನು ಒಳಗೊಂಡಿದೆ. ಹೀಗಿರುವಾಗ ಸಂಸ್ಕೃತವು ಭಾರತದ ಎಲ್ಲ ಪ್ರಾಂತಗಳಿಗೂ ಒಗ್ಗುವ ಭಾಷೆಯಾಗುವ ಎಲ್ಲ ಗುಣ-ಲಕ್ಷಣಗಳನ್ನೂ ಹೊಂದಿದೆ ಎನ್ನಬಹುದು.


ಸಂಸ್ಕೃತವು ವಿಶ್ವಭಾಷೆಯಾಗಿತ್ತು ಎಂಬುದಕ್ಕೆ ಪ್ರಮಾಣ: ಸಂಸ್ಕೃತವು ಕೇವಲ ವೇದ-ಮಂತ್ರಗಳಿಗೆ ಮಾತ್ರ ಸೀಮಿತವಾದ ಭಾಷೆಯೆಂಬ ಮೌಢ್ಯವನ್ನು ಹೊಂದಿರುವವರೂ ಇದ್ದಾರೆ. ಜೊತೆಗೆ ಒಂದು ಕಾಲದಲ್ಲಿ ಸಂಸ್ಕೃತವೇ ಸಂಪರ್ಕ ಭಾಷೆಯಾಗಿತ್ತು ಎಂದರೆ ಅವರು ವಿಸ್ಮಯ ಪಡುತ್ತಾರೆ. ಅಂಥವರಿಗಾಗಿಯೇ ಸಂಸ್ಕೃತವು ಒಂದು ಕಾಲಕ್ಕೆ ವಿಶ್ವಭಾಷೆಯಾಗಿತ್ತು ಎಂಬುದನ್ನು ಸಾಧಿಸಲು ಬೇಕಾದ ಪ್ರಮಾಣಗಳನ್ನು ಕೊಡುತ್ತೇನೆ. ವ್ಯಾಕರಣ ಮಹಾಭಾಷ್ಯದ ಪ್ರಥಮಾಹ್ನಿಕದಲ್ಲಿ ಪತಂಜಲಿಯು ಸಂಸ್ಕೃತವು ಎಲ್ಲ ಪ್ರದೇಶಗಳಲ್ಲೂ ವ್ಯವಹಾರದ ಭಾಷೆಯಾಗಿತ್ತು ಎನ್ನುತ್ತಾ ಕೆಲವು ಶಬ್ದಗಳು ಆಯಾ ಪ್ರದೇಶಗಳಲ್ಲಿ ಮಾತ್ರ ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದ್ದವು ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ‘ಏತಸ್ಮಿಂಶ್ಚಾತಿಮಹತಿ ಶಬ್ದಪ್ರಯೋಗವಿಷಯೇ ತೇ ತೇ ಶಬ್ದಾಃ ತತ್ರ ತತ್ರ ನಿಯತವಿಷಯಾಃ ದೃಶ್ಯಂತೇ | ತದ್ಯಥಾ – ಶವತಿರ್ಗತಿಕರ್ಮಾ ಕಂಬೋಜೇಷ್ವೇವ ಭಾಷಿತೋ ಭವತಿ, ವಿಕಾರ ಏನಮಾರ್ಯಾ ಭಾಷಂತೇ ಶವ ಇತಿ | ಹಮ್ಮತಿಃ ಸುರಾಷ್ಟ್ರೇಷು ರಂಹತಿಃ ಪ್ರಾಚ್ಯಮಧ್ಯೇಷು, ಗಮಿಮೇವ ತು ಆರ್ಯಾಃ ಪ್ರಯುಞ್ಜತೇ | ದಾತಿರ್ಲವನಾರ್ಥೇ ಪ್ರಾಚ್ಯೇಷು, ದಾತ್ರಮ್ ಉದೀಚ್ಯೇಷು |’ ಎಂಬುದಾಗಿ. ಅಂದರೆ ಹೋಗುತ್ತಾನೆ ಎಂಬರ್ಥದಲ್ಲಿ ‘ಗಚ್ಛತಿ’ ಎಂದು ಹೇಳಲು ಕಂಬೋಜರು ‘ಶವತಿ’ ಎಂದೂ, ಸೌರಾಷ್ಟ್ರದವರು ‘ಹಮ್ಮತಿ’ ಎಂದೂ, ಮಧ್ಯಪ್ರಾಚ್ಯದಲ್ಲಿ ‘ರಂಹತಿ’ ಎಂದೂ ಪ್ರಯೋಗಿಸುತ್ತಿದ್ದರು ಎಂದರ್ಥ.
ಇಂಥ ಪರ್ಯಾಯಶಬ್ದ ಪ್ರಯೋಗಗಳೆಲ್ಲ ಆಡುಭಾಷೆಯಲ್ಲಿ ಮಾತ್ರವೇ ಆಯಾ ಪ್ರದೇಶದಲ್ಲಿ ರೂಢವಾಗಿರಲು ಸಾಧ್ಯವೇ ಹೊರತೂ ಕೇವಲ ಗ್ರಾಂಥಿಕ ಭಾಷೆಯಲ್ಲಲ್ಲ. ‘ಕಂಬೋಜೇಷ್ವೇವ ಭಾಷಿತೋ ಭವತಿ’ ಎಂಬಲ್ಲಿ ಪತಂಜಲಿಯು ಕಂಬೋಜದಲ್ಲಿ ಮಾತ್ರ ಈ ಶಬ್ದಗಳನ್ನು ಬಳಸಿ ಮಾತನಾಡಲಾಗುತ್ತಿತ್ತು ಎಂದಿದ್ದಾನೆಯೇ ಹೊರತೂ ಬರೆಯಲ್ಪಡುತ್ತಿತ್ತು ಎಂದಿಲ್ಲ. ಅದೇ ಗ್ರಂಥಸಂದರ್ಭದಲ್ಲಿಯೇ ‘ವ್ಯಾಕರಣ’ ಎಂಬ ಶಬ್ದವನ್ನು ಪ್ರಯುಕ್ತಾನಾಮ್ ಇದಮ್ ಅನ್ವಾಖ್ಯಾನಮ್’ ಎಂದು ವ್ಯಾಖ್ಯಾನಿಸಲಾಗಿದೆ. ಇಲ್ಲಿ ಪ್ರಯುಕ್ತಾನಾಮ್ ಎಂದರೆ ವ್ಯವಹಾರದ ನುಡಿಗಳ ರೂಪದಲ್ಲಿ ಪ್ರಯೋಗಿಸುವಿಕೆ. ಹಾಗಾಗಿ ಮೊದಲು ವ್ಯವಹಾರವೂ, ಅನಂತರ ವ್ಯಾಕರಣದ ನಿಯಮವೂ ಬಂದಿರುವುದನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಇಷ್ಟೇ ಅಲ್ಲದೇ ಒಬ್ಬ ತೀರಾ ಸಾಮಾನ್ಯ ಕೂಡ ಈ ವ್ಯಾಕರಣಗಳ ನಿಯಮಗಳನ್ನು ಚೆನ್ನಾಗಿ ಅರಿತು ಶಬ್ದಗಳನ್ನು ಪ್ರಯೋಗಿಸುತ್ತಿದ್ದ ಎಂಬುದಕ್ಕೆ ಮಹಾಭಾಷ್ಯದಲ್ಲಿ ಎತ್ತಿನ ಗಾಡಿಯ ಚಾಲಕನ ಸಂಭಾಷಣೆಯ ದೃಷ್ಟಾಂತವನ್ನು ಕೊಡಲಾಗಿದೆ.
ಪಾಣಿನಿಯ ಅಷ್ಟಾಧ್ಯಾಯೀ ಎಂಬ ವ್ಯಾಕರಣ ಸೂತ್ರಗ್ರಂಥದಲ್ಲಿ ‘ಛಂದಸಿ ಭಾಷಾಯಾಞ್ಚ’ ಎಂಬುದಾಗಿ ಎರಡು ವಿಭಾಗಗಳನ್ನಾಗಿ ವಿಭಾಗಿಸಿ ಶಬ್ದಗಳ ಅನ್ವಾಖ್ಯಾನವನ್ನು ಮಾಡಿದ್ದಾನೆ. ಅವುಗಳಲ್ಲಿ ಭಾಷಾ ಎಂಬ ಶಬ್ದವು ಲೌಕಿಕ ವ್ಯವಹಾರದ ಭಾಷೆಯನ್ನು ಪ್ರತಿನಿಧಿಸುತ್ತದೆ. ಛಂದಸ್ ಶಬ್ದವು ವೇದವೆಂಬ ಅರ್ಥವನ್ನು ಹೊಂದಿದೆ. ಇಲ್ಲಿ ಲೌಕಿಕತ್ವ ಎಂಬುದಕ್ಕೆ ಲೋಕವಿದಿತತ್ವಮ್ ಎಂದು ಕೈಯ್ಯಟನು ವ್ಯಾಖ್ಯಾನಿಸಿದ್ದಾನೆ. ಈ ಎಲ್ಲ ಅಂಶಗಳು ಸಂಸ್ಕೃತ ಹೇಗೆ ವಿಶ್ವಭಾಷೆಯಾಗಿ ಪ್ರಚಲಿತದಲ್ಲಿತ್ತು ಎಂಬುದಕ್ಕೆ ಪ್ರಮಾಣವಾಗಿವೆ. ಇಂಥ ಹತ್ತಾರು ಪ್ರಮಾಣಗಳನ್ನು ಕೊಡಬಹುದು. ಆದರೆ ಲೇಖನವು ದೀರ್ಘವಾಗುವ ಭಯದಿಂದ ಇಷ್ಟಕ್ಕೇ ವಿವರಣೆಯನ್ನು ನಿಲ್ಲಿಸುತ್ತಿದ್ದೇನೆ. ಒಟ್ಟಿನಲ್ಲಿ ಸಂಸ್ಕೃತವು ಈ ಹಿಂದೆ ನಿಸ್ಸಂದಿಗ್ಧವಾಗಿಯೂ ವ್ಯವಹಾರದ ಭಾಷೆಯಾಗಿತ್ತು.
ಇಂಥ ಸಂಸ್ಕೃತವನ್ನು ಈಗಲೂ ಸಂಸ್ಕೃತ ಭಾರತೀಯಂಥ ಸಂಸ್ಥೆಗಳು, ಸಂಸ್ಕೃತ ಪ್ರೇಮಿ ಸಂಸ್ಥೆಗಳು, ಸಂಸ್ಕೃತ ವಿಶ್ವವಿದ್ಯಾಲಯಗಳು ಜನಭಾಷೆಯನ್ನಾಗಿಸುವಲ್ಲಿ ಮತ್ತೆ ಪ್ರಯತ್ನಿಸುತ್ತಿವೆ. ಸಂಸ್ಕೃತವನ್ನು ಹತ್ತು ದಿನಗಳಲ್ಲಿ ಸರಳವಾಗಿ ಹಾಗೂ ಸುಲಲಿತವಾಗಿ ಮಾತನಾಡುವಷ್ಟು ಸಂಸ್ಕೃತ ಸಂಭಾಷಣಾ ಶಿಬಿರಗಳಲ್ಲಿ ಕಲಿಸಲಾಗುತ್ತದೆ. ಲಕ್ಷಾಂತರ ಜನರು ಈಗಾಗಲೇ ಇಂಥ ಶಿಬಿರಗಳಲ್ಲಿ ಭಾಗವಹಿಸಿ ಸಂಸ್ಕೃತದಲ್ಲೇ ವ್ಯವಹಾರವನ್ನು ಮಾಡುತ್ತಿದ್ದಾರೆ. ಸಂಸ್ಕೃತವನ್ನು ಸಂಪರ್ಕ ಭಾಷೆಯಾಗಿಸಿದರೆ ದೇಶದ ಎಲ್ಲ ಜನತೆಗೂ ಅದು ಒಪ್ಪಿಗೆಯಾಗುವುದರಲ್ಲಿ ಸಂಶಯವಿಲ್ಲ. ಯಾಕೆಂದರೆ ಸಂಸ್ಕೃತವು ಎಲ್ಲ ಪ್ರಾದೇಶಿಕ ಭಾಷೆಗಳಿಗೆ ಪೋಷಕವೇ ಆಗಿದೆ. ಜೊತೆಗೆ ಸ್ಥಳೀಯ ಆಚರಣೆ, ಚಿಂತನೆ, ಜೀವನ ಪದ್ಧತಿ, ಸಂಸ್ಕೃತಿ-ಸಂಸ್ಕಾರಗಳ ಪೋಷಕವೂ ಆಗಿದೆ. ಸಂಸ್ಕೃತವು ಜೀವಂತವಾಗಿದ್ದಷ್ಟೂ ನಮ್ಮ ಸಂಸ್ಕೃತಿ ಜೀವಂತವಾಗಿರುತ್ತದೆ. ಹಾಗಾಗಿ ಹೀಬ್ರೂ ಭಾಷೆಯನ್ನು ಮತ್ತೆ ಬಳಕೆಗೆ ತಂದಂತೆ ಭಾರತದಲ್ಲೂ ಸಂಸ್ಕೃತವನ್ನು ಸಂಪರ್ಕ ಭಾಷೆಯನ್ನಾಗಿ ಜನರೇ ಸ್ವೀಕರಿಸಬೇಕು ಮತ್ತು ಆ ಮೂಲಕ ಸರ್ಕಾರಕ್ಕೆ ಒತ್ತಡದ ಸ್ಥಿತಿಯನ್ನು ಸೃಷ್ಟಿಸಬೇಕು. ಇದೊಂದು ಆಂದೋಲನವೇ ಆಗಿಬಿಡಬೇಕು.


ಸಂಸ್ಕೃತವು ಸಂಪರ್ಕ ಭಾಷೆಯಾದರೆ ಈಗಿನ ಅದೆಷ್ಟೋ ದೇಶವಿಭಜಕ ಶಕ್ತಿಗಳು ಕುಂದುವುದು ಖಂಡಿತ. ಡಾ. ಬಿ. ಆರ್. ಅಂಬೇಡ್ಕರ್ ಕೂಡ ಸಂಸ್ಕೃತವನ್ನು ರಾಷ್ಟ್ರಭಾಷೆಯಾಗಿಸುವ ಇಚ್ಛೆ ಉಳ್ಳವರಾಗಿದ್ದರು. ಅವರ ಇಚ್ಛೆಯನ್ನು ನಾವು ಈ ರೀತಿಯಲ್ಲಿ ಈಡೇರಿಸಬೇಕಾಗಿದೆ. 
 

(ವಿಶ್ವನಾಥ ಸುಂಕಸಾಳ ಅವರು ವೇದಾಂತದ ಪ್ರಾಧ್ಯಾಪಕರು, ಕನ್ನಡ ಮತ್ತು ಸಂಸ್ಕೃತದಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದು,ಪದಪದರ- ಪದಸಂಚಲನ ಅಂಕಣಗಳ ಮೂಲಕ ನಾಡಿನಾದ್ಯಂತ ಪರಿಚಿತರು.ಇವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವಾಗ್ದೇವಿ ಪ್ರಶಸ್ತಿ ಪುರಸ್ಕೃತರು)

Leave a Reply

Your email address will not be published.

This site uses Akismet to reduce spam. Learn how your comment data is processed.