– ವಾದಿರಾಜ್, ಸಾಮರಸ್ಯ

ಮಂಗಳೂರು ಸಮೀಪದ ತೆಂಕಎಕ್ಕಾರು ಗ್ರಾಮದ ಕೆ ಭಾಸ್ಕರದಾಸ್ ಜನ ಸಂಘಟನೆಗಾಗಿ ನಿರಂತರ ಓಡಾಡುತ್ತಲೇ ಇದ್ದ ಅಪ್ಪಟ ಅಲೆಮಾರಿ . ಚೆನ್ನದಾಸರ ಎಂಬ ಪರಿಶಿಷ್ಟ ಜಾತಿಯ ಸಣ್ಣ ಅಲೆಮಾರಿ ಸಮುದಾಯದಲ್ಲಿ ಹುಟ್ಟಿ ತಮ್ಮ ಕಾಳಜಿ , ಪರಿಶ್ರಮ , ನಿರಂತರ ಓಡಾಟದಿಂದ ಸಾವಿರಾರು ಜನರ ನಿಷ್ಕಳಂಕ ಪ್ರೀತಿ ಸಂಪಾದಿಸಿದವರು ಭಾಸ್ಕರದಾಸ್ .

ಐದು ಪೀಳಿಗೆಗಳ ಹಿಂದೆ ಉತ್ತರ ಕರ್ನಾಟಕದ ಯಾವುದೋ ಮೂಲೆಯಿಂದ ಅಪ್ಪಯ್ಯ ದಾಸ ಎಂಬ ಯಜಮಾನರೊಂದಿಗೆ ಚೆನ್ನದಾಸರ ಸಮುದಾಯದ ಒಂದಿಷ್ಟು ಕುಟುಂಬಗಳು ಬಿಕ್ಷಾಟನೆಯನ್ನೇ ಕಾಯಕವಾಗಿಸಿಕೊಂಡು ಗುಳೆ ಹೊರಟವು . ತಿರುಗಿ , ತಿರುಗಿ ಈ ಕುಟುಂಬಗಳು ಮಂಗಳೂರು ಸಮೀಪದ ತೆಂಕ ಎಕ್ಕಾರು ಎಂಬ ಗ್ರಾಮದಲ್ಲಿನ ಸಣ್ಣ ಹೊಳೆಯೊಂದರ ಸಮೀಪ ನೆಲೆನಿಂತವು . ಅದೇ ಕುಟುಂಬಗಳ ಕುಡಿ ಸಂಜೀವದಾಸ್ , ಅವರ ಹೆಂಡತಿ ಯಮುನಾದಾಸ್ . ಈ ದಂಪತಿಗಳಿಗೆ ಐವರು ಗಂಡು ಮಕ್ಕಳು , ಓರ್ವ ಹೆಣ್ಣುಮಗಳು . ಈ ಕುಟುಂಬದ ಎರಡನೇಯ ಕುಡಿಯೇ ಭಾಸ್ಕರದಾಸ್ . ಕಿತ್ತು ತಿನ್ನುವ ಬಡತನದ ದಿನಗಳು . ಎರಡೊ , ಮೂರೋ ದಿನಕೊಮ್ಮೆ ಒಲೆ ಹಚ್ಚುವ ಸನ್ನೀವೇಶ . ಹಿರಿಯ ಅಣ್ಣನೊಬ್ಬ ಊರು ಬಿಟ್ಟು ಮುಂಬೈ ಸೇರಿದ್ದ . ತಾನು ಉಳಿಸಿದ್ದ ಪುಡಿಗಾಸನ್ನು ಕೊಟ್ಟು ಅಜ್ಜಿಯೇ ಮುಂಬೈಗೆ ಹೋಗ್ತೀಯಾದ್ರೆ ಹೋಗು ಎಂಬಂತೆ ಭಾಸ್ಕರದಾಸ್ ಗೆ ಹೇಳಿದ್ದರು . 7ನೇ ಕ್ಲಾಸು ಮುಗಿಸಿದ್ದ ಭಾಸ್ಕರದಾಸ್ ಉಟ್ಟಬಟ್ಟೆಯ ಜೊತೆಗೆ ಒಂದು ಜೊತೆ ಬಟ್ಟೆ ಹಿಡಿದು ಮುಂಬೈ ಸೇರಿದರು .

ಉಪವಾಸ – ವನವಾಸ ಅನುಭವಿಸುತ್ತಲೇ ಭಾಸ್ಕರದಾಸ್ ಮುಂಬೈನ ಸಣ್ಣ ವ್ಯಾಪಾರಿ ಸಂಸ್ಥೆಯಲ್ಲಿ ಚಾಕರಿಗೆ ಸೇರಿಕೊಂಡರು . ಮಂಗಳೂರು ಮೂಲದ ಎಲ್ಲಪ್ಪ ಸುವರ್ಣರ ಪರಿಚಯವಾಗಿ ಕ್ಯಾಂಟೀನ್ ನಲ್ಲಿ ನೌಕರಿ . ಅಲ್ಲಿಂದ ಕೇಟರಿಂಗ್ ಸಂಸ್ಥೆಯಲ್ಲಿ ಕೆಲಸ . ಹೇಗೋ ಮಾಡಿ ಸ್ವಂತದ್ದೇ ಒಂದು ಚಿಕ್ಕ ಹೋಟೇಲ್ ಆರಂಭ . ಅಷ್ಟರಲ್ಲಾಗಲೇ ಮುಂಬೈನಲ್ಲಿ ಆರೆಸ್ಸೆಸ್ ಸಂಪರ್ಕ . ತುರ್ತುಪರಿಸ್ಥಿತಿ ಮುಗಿದು ಚುನಾವಣೆ ಸಮಯ .ಜನತಾಪಕ್ಷದ ಅಭ್ಯರ್ಥಿಯಾದ ರಾಮ್ ಜೇಠ್ಮಲಾನಿ ಪರ ಪ್ರಚಾರ . ಪೋಸ್ಟರ್ ಅಂಟಿಸಿ , ಬ್ಯಾನರ್ ಕಟ್ಟಿ ಗಲ್ಲಿ , ಗಲ್ಲಿ ತಿರುಗಿ ಚುನಾವಣಾ ಪ್ರಚಾರ . ಅಷ್ಟು – ಇಷ್ಟು ಕಲಿತ ಹಿಂದಿ – ಮರಾಠಿ ಪ್ರಯೋಜನಕ್ಕೆ .

ಇರಾಕಿನಲ್ಲಿ ವ್ಯಾಪಾರ ಮಾಡಿಕೊಂಡಿದ್ದು , ಮುಂಬೈಗೆ ವಾಪಸ್ ಬಂದಿದ್ದ ನಿಖಿಲ್ ಮೋರೆ ಪರಿಚಯ . ಮೋರೆ ಮಾಡಿಸಿಕೊಟ್ಟ ವೀಸಾ – ಪಾಸ್ ಪೋರ್ಟ್ ಹಿಡಿದು ದುಬೈನ ಕತಾರ್ ಗೆ ಪ್ರಯಾಣ . ಎಳೆಂಟು ವರ್ಷ ಭರಪೂರ ದುಡಿಮೆ . ಕೈಯಲ್ಲೊಂದಿಷ್ಟು ಕಾಸು . ಪರದೇಶ ಸಾಕೆನಿಸಿ ಮತ್ತೆ ಭಾರತಕ್ಕೆ . ನ್ಯಾಷನಲ್ ಪರ್ಮಿಟ್ ಇದ್ದ ಲಾರಿ ಖರೀದಿ . ಕರ್ನಾಟಕ , ಮಹಾರಾಷ್ಟ್ರ , ಗುಜರಾತ್ , ರಾಜಾಸ್ಥಾನ – ಸ್ವಂತ ಲಾರಿ ಚಲಾಯಿಸುತ್ತ ತಿರುಗಾಟ . ಮತ್ತೊಂದು ಲಾರಿ ಖರೀದಿ , ವಹಿವಾಟು ವೃದ್ಧಿ . 1987 ರಲ್ಲಿ ಬೆಂಗಳೂರಿನಲ್ಲಿದ್ದ ಸುಧಾದಾಸ್ ಜೊತೆ ಮದುವೆ . ಸುಧಾ ಕರಾವಳಿಯಿಂದ ಹೋಟೆಲ್ ಉದ್ಯಮಕ್ಕಾಗಿ ಬೆಂಗಳೂರಿಗೆ ವಲಸೆ ಬಂದಿದ್ದ ಕುಟುಂಬದ ಮಗಳು . ಶಂಕರ , ಶಂಭು ಸಹೋದರರು ‘ ದಾಸ್ ‘ ಬಚ್ಚಿಟ್ಟು ‘ ರಾವ್ ‘ ಎಂದೇ ತಮ್ಮನ್ನು ಕರೆದುಕೊಂಡು ಹೋಟೇಲ್ ಉದ್ಯಮ ಪ್ರವೇಶಿಸಿ ಹಿಡಿತ ಸಾಧಿಸಿದವರು . ಇದೇ ಕುಟುಂಬದ ಕುಡಿ ಸುಧಾ . ಮದುವೆಯ ನಂತರ ಭಾಸ್ಕರದಾಸರಲ್ಲಿ ಕಾಲೇಜು ವಿದ್ಯಾಭ್ಯಾಸ ಮುಂದುವರಿಸುವ ಆಸೆ ವ್ಯಕ್ತಪಡಿಸಿದ ಸುಧಾ . ಹೆಂಡತಿ MSc – Biology ಮುಗಿಸಲು ಹೆಗಲೆಣೆಯಾಗಿ ನಿಂತ ಭಾಸ್ಕರದಾಸ್ . ಸುಧಾದಾಸ್ ಗೆ ಬೆಂಗಳೂರಿನ ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಉದ್ಯೋಗ .

ಈ ನಡುವೆ ಗುಜರಾತ್ ನಲ್ಲಿ ಭೀಕರ ಲಾರಿ ಅಪಘಾತ . ಲಾರಿ ನಜ್ಜುಗೊಜ್ಜಾಗಿದ್ದರು ಡ್ರೈವರ್ ಭಾಸ್ಕರದಾಸ್ ಏನು ಆಗದೇ ಪಾರು . ಕೈ ಹಿಡಿದಿದ್ದ ಅದೃಷ್ಟ . ಸುಧಾರ ತಂದೆಯಿಂದ ಅಳಿಯನಿಗೆ ಟ್ರಕ್ ಡ್ರೈವರ್ ಕೆಲಸಬಿಟ್ಟು ಅವರದೇ ಹೋಟೆಲ್ ನೋಡಿಕೊಳ್ಳುವಂತೆ ಒತ್ತಾಯ . ಈ ನಡುವೆ ಸಿಂಡಿಕೇಟ್ ಬ್ಯಾಂಕಿನಲ್ಲಿದ್ದ ಚೆನ್ನದಾಸರ ಸಮುದಾಯದ ಯುವಕನಿಗೆ ಜಾತಿ ಪ್ರಮಾಣಪತ್ರದ ವಿಷಯದಲ್ಲಿ ಕಿರುಕುಳ . ಆ ಯುವಕನ ಪರವಾಗಿ ಹೋರಾಟಕ್ಕೆ ಇಳಿದ ಭಾಸ್ಕರದಾಸ್ . ಹೋರಾಟದ ಅಲ್ಪ ಯಶಸ್ಸಿನಿಂದ ಭಾಸ್ಕರದಾಸ್ ಗೆ ಚೆನ್ನದಾಸರ ಜಾತಿ ಸಂಘದ ಅಧ್ಯಕ್ಷ ಹುದ್ದೆ . ಮಾವನ ಒತ್ತಾಯಕ್ಕೆ ಮಣಿದು ಟ್ರಕ್ ನಿಲ್ಲಿಸಿ ಹೋಟೇಲ್ ಉದ್ಯಮಕ್ಕೆ ಹೊರಳಿದ ಭಾಸ್ಕರದಾಸ್ . ಬೆಂಗಳೂರಿನ ಆನಂದರಾವ್ ವೃತ್ತದ ಸಮೀಪದ ರಾಜಪ್ರಕಾಶ್ ಹೋಟೆಲ್ ನ ಗಲ್ಲಾದಲ್ಲಿ ಕುಳಿತ ಭಾಸ್ಕರದಾಸ್ .

ಮಂಗಳೂರಿನ ಕಟೀಲನ ದುರ್ಗಾ ಪರಮೇಶ್ವರಿ ದೇವಾಲಯದ ಪರಿಸರದಲ್ಲಿ ಚೆನ್ನದಾಸರ ಸಮುದಾಯದ ರಾಜ್ಯ ಸಮಾವೇಶ ಮಾಡಲು ನಿರ್ಧಾರ . ಅದಕ್ಕಾಗಿ ರಾಜ್ಯಪ್ರವಾಸ . ಮಂಗಳೂರು ವಿವಿಯಲ್ಲಿ ಪ್ರಾಧ್ಯಪಕರಾಗಿದ್ದ ಡಾ ಜೋಗನ್ ಶಂಕರ್ , ಡಾ ಗುರುಲಿಂಗಯ್ಯ ಜೊತೆ ಸಮಾಲೋಚನೆ . ಆ ಮೂಲಕ ಹಂಪಿ ಕನ್ನಡ ವಿವಿಯಲ್ಲಿದ್ದ ಡಾ ಕೆ ಎಮ್ ಮೇತ್ರಿ ಪರಿಚಯ . ಚೆನ್ನದಾಸರ ಸಮುದಾಯದ ಸಮಾವೇಶ ಮಾಡುವ ಬದಲು ಎಲ್ಲ ಅಲೆಮಾರಿ , ಅರೆ ಅಲೆಮಾರಿ ಸಮುದಾಯಗಳ ರಾಜ್ಯ ಸಮಾವೇಶ ಮಾಡಲು ನಿರ್ಧಾರ . ಮೊದಲ ಬಾರಿಗೆ ಅಲೆಮಾರಿ ಸಮುದಾಯವರೆಲ್ಲ ಒಟ್ಟಾಗಿ ಸೇರುವ ಸಂಭ್ರಮ . ಕಟೀಲು ದೇಗುಲದ ಸನ್ನಿಧಿಯಲ್ಲಿ ಭರ್ಜರಿ ಸಮಾವೇಶ . ಭಾಸ್ಕರದಾಸ್ ಅಲೆಮಾರಿ , ಅರೆ ಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆ .

ಹೀಗೆ ಭಾಸ್ಕರದಾಸ್ ಎಂಬ ಮನೆಬಿಟ್ಟು ಓಡಿಹೋಗಿದ್ದ ಬಾಲಕ , ರಾಜಪ್ರಕಾಶ್ ಹೋಟೇಲಿನ ಮಾಲಿಕನಾಗಿ , ಅಲೆಮಾರಿ ಸಮುದಾಯಗಳ ಹಕ್ಕಿನ ಹೋರಾಟಗಾರರಾಗಿ ರೂಪಗೊಂಡರು . ಒಂದಿಷ್ಟು ಆರೆಸ್ಸೆಸ್ ನಲ್ಲಿ ಪಳಗಿದ್ದು ಭಾಸ್ಕರದಾಸ್ ಒಳ್ಳೆಯ ಸಂಘಟಕರಾಗಲು ಸಹಾಯ ಮಾಡಿತು . ಆರೆಸ್ಸೆಸನ ಗ ರಾ ಸುರೇಶ್ , ಮುನಿಯಪ್ಪ , ಸಂತೋಷ್ ರವರ ಒಡನಾಟವೂ ಹೆಚ್ಚಾಯಿತು . ಹಂಪಿಯಲ್ಲಿ ಮತ್ತೊಂದು ಅಲೆಮಾರಿ ಸಮುದಾಯಗಳ ರಾಜ್ಯ ಸಮಾವೇಶವನ್ನು ಸಂಘಟಿಸಿದ್ದರು . 2008 – 09 ರಲ್ಲಿ ಅಂದಿನ ಬಿಜೆಪಿ ಸರ್ಕಾರದಿಂದ ಅನುದಾನ ತಂದು ಪ್ರತಿಯೊಂದು ಅಲೆಮಾರಿ ಸಮುದಾಯದ ಬಗ್ಗೆ ಡಾ ಕೆ ಎಮ್ ಮೇತ್ರಿ ಸಂಪಾದಕತ್ವದಲ್ಲಿ ಅಧ್ಯಯನ ಪೂರ್ಣ ಕೃತಿಗಳು ಬರಲು ಕಾರಣರಾದರು . ಇಂತಹದೊಂದು ವಿಶಿಷ್ಟ ಪ್ರಯತ್ನ ಇಡೀ ದೇಶದಲ್ಲಿ ಕನ್ನಡದಲ್ಲಿ ಬಿಟ್ಟರೆ ಮತ್ತೆಲ್ಲೂ ಆಗಿಲ್ಲ ಎಂದು ಅನೇಕ ಹೊರರಾಜ್ಯಗಳ ವಿದ್ವಾಂಸರು ಪ್ರಶಂಸಿದ್ದಾರೆ .

ಮೂರು ವರ್ಷಗಳ ಹಿಂದೆ ಕೇಂದ್ರಸರಕಾರದ ಸಾಮಾಜಿಕ ನ್ಯಾಯ – ಸಬಲೀಕರಣ ಸಚಿವಾಲಯದ DNT , SNT , NT ಅಭಿವೃದ್ಧಿ ನಿಗಮದ ಸದಸ್ಯರಾಗಿ ಭಾಸ್ಕರದಾಸ್ ನಿಯುಕ್ತರಾದರು . ಮಹಾರಾಷ್ಟ್ರದ ಭಿಕೂಜಿ ರಾಮಜಿ ಇದಾತೆ ನೇತೃತ್ವದ ಈ ನಿಗಮದ ಸದಸ್ಯರಾಗಿ ಭಾಸ್ಕರದಾಸ್ ಕರ್ನಾಟಕದ ಆಚೆ ಆಂಧ್ರ , ತೆಲಂಗಾಣ , ಕೇರಳ , ತಮಿಳುನಾಡು , ಪಾಂಡಿಚೆರಿಗಳಿಗೂ ಓಡಾಟ ವಿಸ್ತರಿಸಿದ್ದರು . ಅಲೆಮಾರಿ ಸಮುದಾಯಗಳ ನಡುವಿನ ಮತಾಂತರದ ಪ್ರಕರಣಗಳು ಭಾಸ್ಕರದಾಸರವರನ್ನು ಭಾದಿಸುತ್ತಿತ್ತು . ಮತಾಂತರಿತರನ್ನು ವಾಪಸ್ ತರುವ ಯೋಜನೆಯಲ್ಲಿಯೂ ಅವರು ಸಕ್ರಿಯರಾಗಿದ್ದರು .

ಎಷ್ಟೋ ವರ್ಷಗಳ ಕಾಲ ಮೆಜೆಸ್ಟಿಕ್ ಸಮೀಪದ ಅವರ ರಾಜಪ್ರಕಾಶ್ ಹೋಟೇಲ್ ಅಲೆಮಾರಿಗಳೆಲ್ಲರ ನೆಚ್ಚಿನ ತಾಣ . ಅಲ್ಲಿ ಹೋದರಾಯಿತು . ‘ ಸ್ಪೆಶಲ್ ದೋಸೆ ‘ ಯ ರಸದೌತಣ ಸವಿಯಲೇ ಬೇಕಿತ್ತು . ಕಾರ್ಯಭಾರದಿಂದ ಭಾಸ್ಕರದಾಸ್ ಕೆಲವರ್ಷಗಳ ಹಿಂದೆ ಹೋಟೆಲ್ ವ್ಯವಹಾರ ನಿಲ್ಲಿಸಿದ್ದರು .

ಕಳೆದವಾರ ಮಹಾರಾಷ್ಟ್ರದ ಜಲಗಾಂವ್ ಗೆ ಎರಡು ದಿನದ ಸಭೆಗೆ ಹೋಗಿ ಬಂದಿದ್ದ ಭಾಸ್ಕರದಾಸ್ ನವೆಂಬರ್ 3 ,4 ಬೆಂಗಳೂರಿನಲ್ಲಿಯೇ ಇದ್ದರು . ಭಾಸ್ಕರದಾಸ್ ಬೆಂಗಳೂರಿಗೆ ಬಂದರೆಂದರೆ ಭೇಟಿಯಾಗದೇ ಹೋದವರಲ್ಲ , ನವೆಂಬರ್ 3 ರಂದು ಸಂಜೆ ಸಮಾಜಕಲ್ಯಾಣ ಸಚಿವ ಶ್ರೀನಿವಾಸ ಪುಜಾರಿಯವರನ್ನು ಭೇಟಿಯಾಗಿ ಒಂದು ತಾಸು ಚರ್ಚೆ . ವಸತಿ ಯೋಜನೆ , ನಿಗಮ ರಚನೆ , ಮೂಲಭೂತ ಸೌಕರ್ಯಗಳು , ಜಾತಿ ಪ್ರಮಾಣ ಪತ್ರ ವಿತರಣೆ ಹೀಗೆ ಎಷ್ಟೋ ವಿಷಯಗಳು . ಮರುದಿನ ನ 4 ರಂದು ಬೆಳಗ್ಗೆ ಭಾಸ್ಕರದಾಸ್ ಮಾಗಡಿ ರಸ್ತೆಯ ಅಲೆಮಾರಿಗಳ ಕಾಲೋನಿ , ನಾಗಮಂಗಲದ ಹಕ್ಕಿಪಿಕ್ಕಿ ಸಮುದಾಯದ ಕಾಲೋನಿಗೆ ಹೋಗಿ ಬಂದು ಸಂಜೆ ಮತ್ತೆ ಸಿಕ್ಕಿದ್ದರು . ಮರುದಿನ ನ 5 ರಂದು ಮಂಗಳೂರಿಗೆ ವಾಪಸ್ ಹೊರಟ ಭಾಸ್ಕರದಾಸ್ ಕುಣಿಗಲ್ ನ ಬಿಂಡಿಗನವಿಲೆ ಹತ್ತಿರ ಅಪಘಾತದಲ್ಲಿ ಅಸ್ವಸ್ಥರಾದರು . ದೇಹದೊಳಗಿನ ಮೂಳೆ ಮುರಿದು ಅಂತರಿಕ ರಕ್ತಸ್ರಾವ . ಜೈನ್ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ . ನೂರಾರು ಮಂದಿಯ ಮೂಕ ಪ್ರಾರ್ಥನೆ . ಯಾವುದೂ ಫಲಿಸಲಿಲ್ಲ . ನ 6 ರ ಸಂಜೆ 7.30 ಕ್ಕೆ ವೈದ್ಯರು ಕೈ ಚೆಲ್ಲಿದರು . 65 ವರ್ಷದ , ಆಜಾನುಬಾಹು ಶರೀರದ , ಅಲೆಮಾರಿತನವೇ ಮೈವೆತ್ತಂತಿದ್ದ ಭಾಸ್ಕರದಾಸ್ ಕೊನೆಯೂಸಿರೆಳೆದಿದ್ದರು . ತೆಂಕ ಎಕ್ಕಾರಿನ ಅವರದೇ ಕೃಷಿ ಭೂಮಿಯಲ್ಲಿ ಅಗ್ನಿಸ್ಪರ್ಶ . ದೂರ ದೂರದಿಂದ ಬಂದಿದ್ದ ನೂರಾರು ಅಲೆಮಾರಿಗಳು . ಯಾವುದೋ ಜಾತಿ , ಯಾವುದೋ ಊರು . ಆದರೂ ತೀರದ ಬಂಧುತ್ವ .

ಹಿರಿಯ ಜೀವ ತಾಯಿ ಯಮುನಾದಾಸ್ , ಹೆಂಡತಿ ಸುಧಾದಾಸ್ , ಮಕ್ಕಳಾದ ಡಾ ಭರತ್ , ಡಾ ರಜತ್ ಮತ್ತು ರಕ್ಷಿತ್ ಸೇರಿದಂತೆ ನೂರಾರು ಬಂಧು – ಮಿತ್ರರನ್ನು ಭಾಸ್ಕರದಾಸ್ ಅಗಲಿದ್ದಾರೆ .

Leave a Reply

Your email address will not be published.

This site uses Akismet to reduce spam. Learn how your comment data is processed.