ಹಿಂಸೆ ಇತ್ತೀಚಿಗೆ ಕಾರ್ಯಾಂಗ ಶಾಸಕಾಂಗ ನ್ಯಾಯಾಂಗದ ರೀತಿಯಲ್ಲಿ ಬಂಗಾಲದ ಮುಖ್ಯ ಅಂಗವೇ ಆಗಿ ಹೋಗಿದೆ.ಅದು ಚುನಾವಣಾ ನಂತರದ ರಾಷ್ಟ್ರೀಯವಾದಿಗಳ ಮೇಲೆ ನಡೆದ ದೌರ್ಜನ್ಯ ಇರಬಹುದು,ಅಥವಾ ನವರಾತ್ರಿ ಸಂದರ್ಭದಲ್ಲಿ ಹಿಂದೂಗಳ ಮೇಲೆ ನಡೆದ ದಬ್ಬಾಳಿಕೆಯಿರಬಹುದು ಅಥವಾ ಇತ್ತೀಚೆಗಿನ ಬಿರ್‌ಭೂಮಿ ಹತ್ಯಾಕಾಂಡವಿರಬಹುದು. ಬಂಗಾಲದಲ್ಲಿ ಹಿಂಸೆಯ ತಾಂಡವ ನೃತ್ಯ ನಡೆಯುತ್ತಿದೆ.

ಹಿಂಸೆ ಒಂದೆಡೆಯಾದರೆ ಇಡೀ ಆಡಳಿತ ವ್ಯವಸ್ಥೆ ಲಡ್ಡು ಹಿಡಿದು ಕೂತಿದೆ‌.ಸ್ವತಃ ಮಮತಾ ಬ್ಯಾನರ್ಜಿ ಘನತೆವೆತ್ತ ರಾಜ್ಯಪಾಲರ ವಿರುದ್ಧ ದಿನಬೆಳಗಾದರೆ ಬೈದುಕೊಂಡು ಟ್ವಿಟರ್‌ನಲ್ಲಿ ಬ್ಲಾಕ್ ಮಾಡಿಕೊಂಡು ಕೂರುವ ಚಿಲ್ಲರೆ ಕೆಲಸಗಳ ಹಿಂದೆ ಹೋಗಿ ಆಡಳಿತ ಹಳ್ಳ ಹಿಡಿದಿದೆ‌.ಅತ್ತ ಟಿಎಂಸಿ ಕಾರ್ಯಕರ್ತರು ದಿನನಿತ್ಯ ಬರಿ ಹಿಂಸಾಚಾರ ದೌರ್ಜನ್ಯ ದಬ್ಬಾಳಿಕೆಯಲ್ಲಿ ತೊಡಗಿದ್ದಾರೆ. ಅದೆಷ್ಟರ ಮಟ್ಟಿಗೆ ಆಗಿ ಹೋಗಿದೆಯೆಂದರೆ ಅದೇನೋ ದಿನಂಪ್ರತಿ ನಡೆಯುವ ಆಚರಣೆಯೋ ಎಂಬಷ್ಟು ಸತತವಾಗಿ ನಡೆಯುತ್ತಿದೆ.

ಅಪರಾಧ ಪ್ರಕರಣಗಳು ಮತ್ತು ಭ್ರಷ್ಟಾಚಾರ ಇವರೆಡೂ ಸರಕಾರದ ಎರಡು ಗಾಲಿಗಳಾಗಿ ಹೋಗಿದೆ.ಹಿಂಸಾಚಾರ ಅದೆಷ್ಟರಮಟ್ಟಿಗೆ ಮುಟ್ಟಿದೆಯೆಂದರೆ ತಮ್ಮತಮ್ಮಲ್ಲೇ ಹೊಡೆದಾಡಿಕೊಳ್ಳುವ ಮಟ್ಟಿಗೆ.ಟಿ.ಎಂ.ಸಿ ಈಗ ಆಧುನಿಕ ಭಸ್ಮಾಸುರನ ಸ್ಥಾನ ತುಂಬುತ್ತಿದೆ.

ತೃಣಮೂಲ ಕಾಂಗ್ರೆಸ್ ನಾಯಕನ ಕೊಲೆಗೆ ಪ್ರತೀಕಾರವಾಗಿ ಪಶ್ಚಿಮ ಬಂಗಾಳದ ಬಿರ್ಭೂಮಿ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ 8 ಜನರನ್ನು ಸಜೀವ ದಹನ ಮಾಡಲಾಗಿದೆ. ಕಳೆದ ಮಂಗಳವಾರ ಮುಂಜಾನೆ ಅಪರಿಚಿತರು ಮನೆಗೆ ಬೆಂಕಿ ಹಚ್ಚಿದ್ದರು. ಪರಿಣಾಮ ಸುಟ್ಟು ಕರಕಲಾದ ಶವಗಳ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ ವಿಧಿವಿಜ್ಞಾನ ತಜ್ಞರ ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಮೃತಪಟ್ಟವರನ್ನು ಮೊದಲು ಕೆಟ್ಟದಾಗಿ ಥಳಿಸಿ ನಂತರ ಜೀವಂತವಾಗಿ ಸುಡಲಾಗಿದೆ.

ಈ ಆಘಾತಕಾರಿ ಮಾಹಿತಿಯನ್ನು ರಾಮಪುರಹತ್ ಆಸ್ಪತ್ರೆಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಈವರೆಗೆ 20 ಜನರನ್ನು ಬಂಧಿಸಲಾಗಿದೆ. ಸೋಮವಾರ ಸಂಜೆ ನಡೆದಿದ್ದ ಸ್ಥಳೀಯ ಟಿಎಂಸಿ ನಾಯಕನ ಹತ್ಯೆಯಿಂದಾಗಿ ಈ ಪ್ರತೀಕಾರ ಕೈಗೊಳ್ಳಲಾಗಿದೆ ಎಂದು ಶಂಕಿಸಲಾಗಿದ್ದು ಧೃಡ ಪಟ್ಟಿದೆ. ನಿರ್ಲಕ್ಷ್ಯದ ಆಧಾರದ ಮೇಲೆ ಕೆಲ ಪೊಲೀಸ್ ಸಿಬ್ಬಂದಿ ಮತ್ತು ನಾಗರಿಕ ಸ್ವಯಂಸೇವಕರನ್ನು ಕೆಲಸದಿಂದ ತೆಗೆದುಹಾಕಲಾಗಿದೆ.

ದಹನವಾದ ವ್ಯಕ್ತಿಗಳು ಮತ್ತು ಹಿಂದಿನ ದಿನ ಹತ್ಯೆಯಾದ ಟಿಎಂಸಿ ನಾಯಕ ಭಾದು ಶೇಖ್‌ನ ಕೊಲೆಗೂ ಸಂಬಂಧವಿದೆ. ಸ್ಥಳೀಯ ಟಿಎಮಸಿಯಲ್ಲಿ ನಡೆದ ಕೆಲವು ಭಿನ್ನಾಭಿಪ್ರಾಯಗಳ ದೆಸೆಯಿಂದ ಈ ಜಗಳ ನಡೆದಿದ್ದು ತಾರಕಕ್ಕೇರಿದೆ.ನಂತರ ಟಿಎಂಸಿಯ ಒಂದು ಬಣದ ಕಾರ್ಯಕರ್ತ ಕೊಲೆಯಾಗಿದ್ದು ಆ ಕೊಲೆಗೆ ಕಾರಣರಾದರೆಂದ ಇನ್ನೊಂದು ಬಣದ ವ್ಯಕ್ತಿಗಳನ್ನು ಸಜೀವವಾಗಿ ದಹಿಸಿದ್ದಾರೆ ಎನ್ನಲಾಗುತ್ತಿದೆ‌.

ಈ ಘಟನೆ ನಡೆದ ಮೂರು ದಿನಗಳ ಬಳಿಕ ಬಂಗಾಲದಾದ್ಯಂತ 40ಕ್ಕೂ ಅಧಿಕ ದೇಶಿ ಬಾಂಬುಗಳು ದೊರೆತಿರುವುದು ಬೆಚ್ಚಿ ಬೀಳಿಸಿದೆ.ಈ ವೇಳೆ ಬಿರ್ಭೂಮ್​ ಜಿಲ್ಲೆಯ ರಾಮ್​ಪುರಹತ್​ ಗ್ರಾಮದಲ್ಲಿ ನಿರ್ಮಾಣ ಹಂತದ ಕಟ್ಟಡದ ಹಿಂಭಾಗ 40ಕ್ಕೂ ಅಧಿಕ ಕಚ್ಚಾ ಬಾಂಬ್​ಗಳು ಪತ್ತೆಯಾಗಿವೆ. ಇವುಗಳನ್ನು ಬಕೆಟ್​ಗಳಲ್ಲಿ ಅಡಗಿಸಿಡಲಾಗಿತ್ತು.

ಇನ್ನು ಸಿಬಿಐ ಎಫ್‌ಐಆರ್ ಕಾಪಿಯಲ್ಲಿ 22ಮಂದಿಯ ಹೆಸರನ್ನು ಬರೆದಿದ್ದು ಅಲ್ಲಿನ ಬ್ಲಾಕ್ ಟಿಎಂಸಿ ಅಧ್ಯಕ್ಷ ಅನಾರುಲ್ ಹೊಸೈನ್‌ರನ್ನು ಮತ್ತು ಇನ್ನು 10ಜನ ಟಿಎಂಸಿ ಕಾರ್ಯಕರ್ತರನ್ನು ಸಿಬಿಐ ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ 70-80ಜನರ ಗುಂಪು ಈ ಕೃತ್ಯ ಎಸಗಿದೆ ಎಂದು ಹೇಳಿದೆ.

ಇನ್ನು ಈ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಬಂಗಾಲದ ವಿಧಾನ ಪರಿಷತ್ತಿನಲ್ಲಿ ಪ್ರತಿಭಟನೆ ನಡೆಸಿದಾಗ ಚೀಫ್ ವಿಪ್ ಮನೋಜ್ ಟಿಗ್ಗಾರನ್ನೂ ಸೇರಿದಂತೆ ಶಾಸಕರನ್ನು ಎಳೆದಾಡಿ ದೈಹಿಕ ಹಲ್ಲೆ ನಡೆಸಲು ಮುಂದಾಗಿದ್ದಾರೆ.

ಸಾಂವಿಧಾನಿಕವಾಗಿ ನಡೆಯಬೇಕಿದ್ದ ಕಾರ್ಯಕಲಾಪಗಳು ಒತ್ತಟ್ಟಿಗಿರಲಿ ಶಾಸಕರು, ಸಂಸದರಿಗೇ ಭದ್ರತೆಯಿಲ್ಲದಿರುವ ಬಂಗಾಲದಲ್ಲಿ ಸಾಮಾನ್ಯ ಜನ ಸುರಕ್ಷತೆಯಿಂದ ಬದುಕುವುದು ಸಾಧ್ಯವಿದೆಯೆ? ಅದರಲ್ಲಿಯೂ ರಾಜ್ಯಪಾಲರನ್ನು ಅಗೌರವದಿಂದ ಕಾಣುವ,ಆಡಳಿತವನ್ನು ಲೆಕ್ಕಕ್ಕೇ ಇಡದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರು ಹೊತ್ತೂ ಅಸಂಬದ್ಧವಾಗಿ ಕೇಂದ್ರ ಸರಕಾರವನ್ನು ಗುರಿಯಾಗಿಸಿಕೊಂಡು ಕಲ್ಲು ಹೊಡೆಯುತ್ತಾರೆ.

ಅಷ್ಟಕ್ಕೂ ಟಿಎಂಸಿಯ ಈ ಗೂಂಡಾರಾಜ್ಯ ಅದರ ಮಿದಲ ಅವಧಿಯ ಅಧಿಕಾರದಲ್ಲಿಯೂ ಮುಂದುವರೆದಿತ್ತು.ಈಗ ಹಾರುವ ರೆಕ್ಕೆಗೆ ಬಲಬಂದಂತೆ ಮತ್ತೂ ಬಲಹೆಚ್ಚಿಸಿಕೊಳ್ಳುತ್ತಾ ದೌರ್ಜನ್ಯ ಹೆಚ್ಚು ಮಾಡಲಾಗುತ್ತಿದೆ‌.

ಹಿಂದಿನ ಕಾಲದಲ್ಲಿ ಭಸ್ಮಾಸುರ ತನ್ನ ತಲೆಯ ಮೇಲೆ ಕೈಇಟ್ಟುಕೊಂಡು ತಾನೇ ನಾಶವಾಗುವ ರೀತಿಯಲ್ಲಿ ಟಿಎಂಸಿಯೂ ತನ್ನ ತಲೆಯ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳುತ್ತಿದೆ.ಬಂಗಾಲದಲ್ಲಿ ಕಾನೂನು ಸುವ್ಯವಸ್ಥೆ ಬೀದಿಗೆ ಬಂದು ನಿಂತಿದೆ.ಹಿಂಸಾಚಾರ ಮುಗಿಲು ಮುಟ್ಟಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.