ನ ಕೃಷ್ಣಪ್ಪನವರು ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ನೀಡಿ ಬೆಳೆಸಿದವರು : ಸು ರಾಮಣ್ಣ

ಮಂಥನ, ಮೈಸೂರು ಆಶ್ರಯದಲ್ಲಿ ಜರುಗಿದ ಹಿರಿಯ ಪ್ರಚಾರಕ ಶ್ರೀ ಚಂದ್ರಶೇಖರ ಭಂಡಾರಿ ಬರೆದಿರುವ “ನಿರ್ಮಾಲ್ಯ” ಕೃತಿಯ ಬಿಡುಗಡೆ ಕಾರ್ಯಕ್ರಮದ ವರದಿ.

ಮೈಸೂರು 28 ಆಗಸ್ಟ್ ೨೦೧೮: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ನ ಕೃಷ್ಣಪ್ಪವರ ಜೀವನ ಆಧಾರಿತ ಪುಸ್ತಕ “ನಿರ್ಮಾಲ್ಯ” ದ ಲೋಕಾರ್ಪಣೆ ಕಾರ್ಯಕ್ರಮ ಮೈಸೂರಿನ ಮಾಧವ ಕೃಪಾ, ರಾಷ್ಟೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯದಲ್ಲಿ ಜರುಗಿತು.

ಸಂಸ್ಕೃತ ಭಾರತಿಯ ಕರ್ಣಾಟಕ ಪ್ರಾಂತ ಅಧ್ಯಕ್ಷರಾದ ಪ್ರೊ. ಟಿ ಎನ್ ಪ್ರಭಾಕರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರಂಥದ ಪರಿಚಯವನ್ನು ರಾ ಸ್ವ ಸಂಘದ ಹಿರಿಯ  ಪ್ರಚಾರಕರಾದ ಮಾನ್ಯ ಶ್ರೀ ಸು.ರಾಮಣ್ಣನವರು ಮಾಡಿದರು. ರಾ ಸ್ವ ಸಂಘದ ದಕ್ಷಿಣ ಪ್ರಾಂತದ ಸಂಘಚಾಲಕ ಮಾನ್ಯ ಶ್ರೀ ಮ. ವೆಂಕಟರಾಮು, ರಾ ಸ್ವ ಸಂಘದ ವಿಭಾಗ ಸಂಘಚಾಲಕರಾದ ಶ್ರೀ ವಾಮನರಾವ್ ಬಾಪಟ್, ಹಾಗೂ ರಾ. ಸ್ವ. ಸಂಘದ ಮೈಸೂರು ಮಹಾನಗರದ ಸಂಘಚಾಲಕ ಶ್ರೀ ವಾಸುದೇವ್ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸು ರಾಮಣ್ಣನವರು ಗ್ರಂಥ ಪರಿಚಯದಲ್ಲಿ ಸಂಘದ ಶಾಖೆಯನ್ನು ದೇಶದ ಮೂಲೆ-ಮೂಲೆಗೆ ತಲುಪಿಸಲು ಅಸಂಖ್ಯ ನಂದಾದೀಪಗಳು ಶ್ರಮಿಸಿದ್ದಾರೆ. ಸಂಘದ ಕಾರ್ಯಕರ್ತ ತನ್ನ ಕಾರ್ಯವನ್ನು ಧನ್ಯತಾ ಭಾವದಿಂದ ಮಾಡುತ್ತಾನೆಯೇ ಹೊರತು, ಸಣ್ಣ ಹೊಗಳಿಕೆಯನ್ನೂ ಸಹ ಬಯಸುವುದಿಲ್ಲ. ಅಂತಹ ಕಾರ್ಯ ಪದ್ದತಿಗೆ ಮೆಲ್ಪಂಕ್ತಿ ಹಾಕಿದ ಮೇರು ವ್ಯಕ್ತಿತ್ವದ ಸಾಲಿನಲ್ಲಿ ನ ಕೃಷ್ಣಪ್ಪನವರು ಒಬ್ಬರು ಎಂದು ತಿಳಿಸಿದರು.
ನಿರ್ಮಾಲ್ಯ ಪುಸ್ತಕದ ರಚನೆ ಕುರಿತು ಮಾತನಾಡುತ್ತಾ ಸಂಘದ ಸಂಸ್ಥಾಪಕರಾದ ಡಾಕ್ಟರ್ ಜಿ ಮತ್ತು ಎರಡನೆಯ ಸರಸಂಘಚಾಲಕರಾದ ಗುರೂಜಿ ಹಾಕಿ ಕೊಟ್ಟ ಮೆಲ್ಪಂಕ್ತಿಯಂತೆ ಕೃತಿ ಮೂಡಿ ಬಂದಿದೆ. ಈ ಕೃತಿ ಒಬ್ಬ ವ್ಯಕ್ತಿಯ ಪರಿಚಯವಾಗದೇ, ಶ್ರೇಷ್ಟ ವ್ಯಕ್ತಿತ್ವದ ಅನಾವರಣ. ಇಲ್ಲಿ ಸ್ವಲ್ಪವೂ ವ್ಯಕ್ತಿಯ ವೈಭವೀಕರಣ ಇಲ್ಲ ಎಂದು ತಿಳಿಸಿದರು.

ಲೋಕ ಸಂಗ್ರಹ, ಲೋಕ ಸಂಪರ್ಕ, ಲೋಕ ಸಂಸ್ಕಾರದಿಂದ ಸಂಘ ಕಾರ್ಯದ ನಡೆಸಿದವರು ಕೃಷ್ಣಪ್ಪನವರು. ಪ್ರಚಾರಕರಾದವರು ಸಮಾಜದ ಉನ್ನತಿಯ ಕಾರ್ಯಕ್ಕೆ ವೇಗವರ್ಧಕ(ಕೆಟಲಿಸ್ಟ್)ನಂತೆ ಕೆಲಸ ಮಾಡುವವರು ಆದರೆ ಪ್ರಚಾರವನ್ನು ಎಂದು ಬಯಸುವವರಲ್ಲ. ಮಹಾಭಾರತದಲ್ಲಿ ಕೃಷ್ಣ ಅರ್ಜುನನಿಂದ ಧರ್ಮ ರಕ್ಷಣೆ ಮಾಡಿಸಿದಂತೆ ಮಾನ್ಯ ಕೃಷ್ಣಪ್ಪನವರೂ ಸಹ ಶ್ರೀ ಕೃಷ್ಣನಂತೆ ಸಾವಿರಾರು ಕಾರ್ಯಕರ್ತರಿಗೆ ಪ್ರೇರಣೆ ನೀಡಿ ಬೆಳೆಸಿದರು ಎಂದು ಸು ರಾಮಣ್ಣವರು ತಿಳಿಸಿದರು.

ಪ್ರೊ ಟಿ ಎನ್ ಪ್ರಭಾಕರ್ ಮಾತನಾಡುತ್ತಾ ಕೃಷ್ಣಪ್ಪನವರು ಸಂಘದ ಕಾರ್ಯಕರ್ತ ನಡೆಸಬೇಕಾದಂತಹ ಶ್ರೇಷ್ಠ ಜೀವನ ನಡೆಸಿದರು. ಅವರ ಮೇಲಿನ ಕೃತಿ ಭಾಗವತಕ್ಕೇ ಸಮಾನ ಎನ್ನಬಹುದು. ಕೃಷ್ಣಪ್ಪನವರ ತಂದೆ ನೀಡಿದ ಸಂಸ್ಕಾರ ಅವರ ಶ್ರೇಷ್ಠ ಜೀವನಕ್ಕೆ ಕಾರಣ. ಆ ಕಾರಣಕ್ಕಾಗಿ ಕುಟುಂಬ ಪ್ರಭೋಧನ ಕಲ್ಪನೆಯನ್ನು ಮೂಡಿರಬಹುದು ಎಂದು ತಿಳಿಸಿದರು. ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವುದೇ ಕೃಷ್ಣಪ್ಪನವರಿಗೆ ನೀಡುವ ಗೌರವ, ಕೃತಿಯ ಒಂದೊಂದು ಅಧ್ಯಾಯವು ನಮ್ಮ ಜೀವನಕ್ಕೆ ಆದರ್ಶವಾಗಬಲ್ಲದು ಎಂದು ತಿಳಿಸಿದರು. ಸಂಸ್ಕಾರ ಭಾರತಿಯ ಬೆಳವಣಿಗೆ, ಸಂಭಾಷಣಾ ಶಿಬಿರದ ಕಲ್ಪನೆಗೆ ಕೃಷ್ಣಪ್ಪನವರೇ ಕಾರಣ ಎಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.
ಶ್ರೀ ಪ್ರದ್ಯುಮ್ನ ಕಾರ್ಯಕ್ರಮ ನಿರ್ವಹಿಸಿದರು ಶ್ರೀ ಮಲ್ಲರಾಜ ಅರಸ್, ಮಂಥನ, ಮೈಸೂರು ಸಂಚಾಲಕರು ಸ್ವಾಗತ ಮಾಡಿದರು. ಶ್ರೀ ರಂಗನಾಥ ಅವರು ವಂದನಾರ್ಪಣೆ ಮಾಡಿದರು.

 

 

ವರದಿ ಹಾಗೂ ಚಿತ್ರಗಳು : ಶ್ರೀ ಕೃಷ್ಣಮೂರ್ತಿ ಭಟ್

 

Leave a Reply

Your email address will not be published.

This site uses Akismet to reduce spam. Learn how your comment data is processed.