– ನಾರಾಯಣ ಶೇವಿರೆ
“ಗ್ರೀಸಿನಲ್ಲಿ, ಈಜಿಪ್ಟಿನಲ್ಲಿ, ಏಷ್ಯಾ ಮೈನಾರಿನಲ್ಲಿ ಹಾಗೂ ರೋಮನ್ ಆಧಿಪತ್ಯದ ಇತರ ಸ್ಥಾನಗಳಲ್ಲಿ ಮತ್ತು ಸ್ವತಃ ರೋಮಿನಲ್ಲಿ ರೋಮ್ ವಿಶಾಲ ಸಾಮ್ರಾಜ್ಯವೊಂದರ ಕಾಸ್ಮೋಪಾಲಿಟನ್ ಕೇಂದ್ರವಾಗಿದ್ದ ಕಾಲದಲ್ಲಿ ರಾಷ್ಟ್ರವಾದವು ಬಾಳಲು ಸಾಧ್ಯವಾಗುತ್ತಿದ್ದರೆ ಗಾಢವೂ ಪ್ರಾಮಾಣಿಕವೂ ಪ್ರೀತಿಭರಿತವೂ ಆದ ರಾಷ್ಟ್ರೀಯತೆಯು ಪ್ರಾಚೀನ ಜಗತ್ತನ್ನು ಮತ್ತದರ ಸಂಸ್ಕೃತಿಯನ್ನು ಸಂಪೂರ್ಣವಾಗಿ ರಕ್ಷಿಸಲು ಸಾಧ್ಯವಾಗುತ್ತಿತ್ತು.”
“ಭಾರತದಲ್ಲಿ ರಾಷ್ಟ್ರೀಯತೆಯು ಜೀವಂತವಾಗಿದೆ. ಅದರ ಧ್ಯೇಯಕ್ಕೆ ನಿಷ್ಠರಾಗಿ ಬಾಳುವವರು ಕೆಲವೇ ಮಂದಿ ಇರಬಹುದು. ಅದು ವ್ಯಾಪಕ ಪ್ರಮಾಣದಲ್ಲಿ ಹರಡಿದರೆ ಮಾತ್ರ ಹಿಂದುತ್ವವನ್ನು ಕಾಪಾಡಬಲ್ಲದು ಮತ್ತು ಅದನ್ನು ಮತ್ತೊಮ್ಮೆ ಶಕ್ತಿಶಾಲಿಯಾಗಿ ಮಾಡಬಲ್ಲುದು. ಆದರೆ ಹಿಂದುಗಳು ಭಾರತವನ್ನು ಮತ್ತು ಹಿಂದುತ್ವವನ್ನು ಪಾವಿತ್ರ್ಯದ ಮೂರ್ತರೂಪವೆಂದು, ಪರಮಪ್ರಿಯ ದೇವತೆಯೆಂದು, ಮಹಾನ್ ಅಜ್ಞಾತದ ಪ್ರತಿಮೂರ್ತಿಯೆಂದು ಮತ್ತು ಆ ಅಜ್ಞಾತದ ಅಭಿವ್ಯಕ್ತಿಯೆಂದು ಗುರುತಿಸಲು ಕಲಿಯದಿದ್ದರೆ ಮುಂದೆ ಅಸ್ತಿತ್ವಕ್ಕೆ ಬರಬಹುದಾದ ಸ್ವತಂತ್ರ ‘ಭಾರತೀಯ’ ಸರಕಾರವೂ ಕೂಡಾ ಹಿಂದುತ್ವವು ದುರ್ಬಲವಾಗಿರುವೆಡೆಗಳಲ್ಲಿ ಅದನ್ನು ಕಾಪಾಡಲು ಶಕ್ತವಾಗದು.”
ಇದು ‘ಎ ವಾರ್ನಿಂಗ್ ಟು ದಿ ಹಿಂದೂಸ್’ ಗ್ರಂಥದ ಎರಡು ಪುಟ್ಟ ಸಾಲುಗಳು. ಗ್ರೀಕ್ ಪ್ರಜೆಯಾದ ಫ್ರಾನ್ಸ್ ಸಂಜಾತೆ ಶ್ರೀಮತಿ ಮ್ಯಾಕ್ಸಿಮಿಯಾನಿ ಅವರು ಈ ಗ್ರಂಥದ ಲೇಖಕಿ. 1905ರಲ್ಲಿ ಹುಟ್ಟಿದ ಆಕೆ 1932ರಲ್ಲಿ ಭಾರತಕ್ಕೆ ಬಂದು ಹಿಂದೂಧರ್ಮವನ್ನು ಸ್ವೀಕರಿಸಿ ಸಾವಿತ್ರೀ ದೇವಿಯಾಗಿ ನಾಮಾಂತರಗೊಂಡರು. ಬಂಗಾಳದ ಅಸಿತ್ ಕೃಷ್ಣ ಮುಖರ್ಜಿಯವರನ್ನು ವಿವಾಹವಾಗಿ ಶಿಕ್ಷಕಿ ಸಂಘಟಕಿ ಲೇಖಕಿಯಾಗಿ ಬದುಕನ್ನು ಸಾರ್ಥಕಗೊಳಿಸಿದರು. ಭಾರತವನ್ನು ಸುತ್ತಾಡಿ ಇಲ್ಲಿಯ ಧಾರ್ಮಿಕ ಸಾಮಾಜಿಕ ರಾಜಕೀಯ ಸ್ಥಿತಿಗತಿಯನ್ನು ಹತ್ತಿರದಿಂದ ಅವಲೋಕಿಸಿ, ಜತೆಗೆ ತತ್ಸಂಬಂಧಿತ ಸಾಹಿತ್ಯವನ್ನೂ ಅಧ್ಯಯಿಸಿ ಹಲವಾರು ಗ್ರಂಥಗಳನ್ನು ಲೇಖಿಸಿದರು.
‘ಎ ವಾರ್ನಿಂಗ್ ಟು ದಿ ಹಿಂದೂಸ್’ ಗ್ರಂಥ ಪ್ರಕಾಶಿತಗೊಂಡುದು 1938ರಲ್ಲಿ. ‘ಸಮೃದ್ಧ ಪ್ರಕಾಶನ’ದ ಮೂಲಕ ಕನ್ನಡಕ್ಕದು ಬಂದುದು 2023ರಲ್ಲಿ! ಹಿಂದುತ್ವವು ಎದುರಿಸುತ್ತಿರುವ ಗಂಭೀರ ಸನ್ನಿವೇಶವನ್ನು ವಿವರಿಸುವ ಈ ಗ್ರಂಥವು ಎಂದಿನಂತೆ ಅಂದೂ ಇಂದೂ ಕನಿಷ್ಠ ಪ್ರಚಾರವನ್ನೂ ಪಡೆಯದೆ, ಗಮನಿಸಬೇಕಾದವರ ಗಮನಕ್ಕೆ ಬಾರದೆ ಉಳಿದುಬಿಟ್ಟಿದೆ.
ಹೊರಗೆಷ್ಟಿದ್ದರೇನು?
ಅವರು ಇಲ್ಲಿ ಗ್ರೀಕ್, ರೋಮ್, ಈಜಿಪ್ಟ್ ಇತ್ಯಾದಿ ದೇಶಗಳ ಬಗ್ಗೆ ಉದ್ದಿಶ್ಯಪೂರ್ವಕವಾಗಿ ಉಲ್ಲೇಖಿಸುತ್ತಾರೆ. ಒಂದು ಕಾಲದ ಅತಿ ಶ್ರೀಮಂತ ಸಾಂಸ್ಕೃತಿಕ ಅಸ್ತಿತ್ವಕ್ಕೆ ಜೀವಂತ ದೃಷ್ಟಾಂತಗಳಾದ ದೇಶಗಳಿವು. ಈಗವು ಜಡ ದೃಷ್ಟಾಂತಗಳಾಗಿಯೂ ಉಳಿದಿಲ್ಲ. ಅದಕ್ಕೆ ಮುಖ್ಯ ಕಾರಣವೇ ಅವು ತಮ್ಮ ರಾಷ್ಟ್ರೀಯತೆಯನ್ನು ಬಲವಾಗಿ ಆತುಕೊಳ್ಳದೇ ಇದ್ದುದು.
ಅವರು ಹೇಳುತ್ತಿರುವ ‘..ರೋಮ್ ವಿಶಾಲ ಸಾಮ್ರಾಜ್ಯವೊಂದರ ಕಾಸ್ಮೋಪಾಲಿಟನ್ ಕೇಂದ್ರವಾಗಿದ್ದ ಕಾಲದಲ್ಲಿ ರಾಷ್ಟ್ರವಾದವು ಬಾಳಲು ಸಾಧ್ಯವಾಗುತ್ತಿದ್ದರೆ..’ ಎಂಬ ವಾಕ್ಯವನ್ನು ಇನ್ನೊಮ್ಮೆ ಗಮನಿಸಿರಂತೆ! ರೋಮ್ ನಾಗರಿಕತೆಯ ದೃಷ್ಟಿಯಿಂದ ಅಸಾಮಾನ್ಯವಾದುದನ್ನು ಸಾಧಿಸಿತ್ತು. ಆದರೆ ರಾಷ್ಟ್ರೀಯತೆಯ ಆಧಾರವಾಗಿರುವ ಸಂಸ್ಕೃತಿಯ ದೃಷ್ಟಿಯಿಂದ ಟೊಳ್ಳಾಗಿತ್ತು ಅಥವಾ ಒಂದು ರಾಷ್ಟ್ರೀಯ ಘಟಕವಾಗಿ ಬಾಳುವ ಹೊಣೆಗಾರಿಕೆಯಿಂದ ದೂರಸರಿದಿತ್ತು ಎಂಬ ಧ್ವನಿ ಇಲ್ಲಿದೆ.
ಬಾಹ್ಯದ ಬೃಹತ್ ನಿರ್ಮಾಣಗಳನ್ನು ಮಾಡಿ ಬೆನ್ನುತಟ್ಟಿಕೊಂಡರೆ ಸಾಕಾಗದು. ಇಂಥ ನಿರ್ಮಾಣಗಳೇ ಆಂತರಿಕ ಟೊಳ್ಳುತನಕ್ಕೆ ಇಂಬಾಗಲೂ ದಾರಿಯಾದೀತು. ಜತೆಗೆ ಅಸಂಘಟಿತ ಸಮಾಜವು ಎಷ್ಟೇ ತಾತ್ತ್ವಿಕ ಗಟ್ಟಿತನವನ್ನು ಹೊಂದಿದ್ದರೂ ಒಂದು ರಾಷ್ಟ್ರವಾಗಿ ಬಲಯುತವಾಗಿರದಿದ್ದಲ್ಲಿ ದುರುಳಶಕ್ತಿಗಳ ಆಘಾತವನ್ನೆದುರಿಸಲು ಶಕ್ತವಾಗದೆ ನಷ್ಟಗೊಳ್ಳುವುದೇ ಸೈ.
ಸ್ವರಾಜ್ಯದ ಸ್ವರೂಪ
ಈ ಹಿನ್ನೆಲೆಯಲ್ಲಿ ಅವರು ಹಿಂದೂ ಸಮಾಜದ ಮನಃಸ್ಥಿತಿಯನ್ನು ಅವಲೋಕಿಸುತ್ತ, ಹಿಂದೂಗಳು ಸಾಕಷ್ಟು ಧಾರ್ಮಿಕಮನಸ್ಕರಾಗಿದ್ದಾರೆ, ಹಾಗೆಯೇ ತಾತ್ತ್ವಿಕಮನಸ್ಕರೂ ಆಗಿದ್ದಾರೆ, ಆದರೆ ರಾಜಕೀಯಮನಸ್ಕರಾಗಿಲ್ಲ ಎನ್ನುತ್ತಾರೆ. ಇದನ್ನು ಅವರು ಹೇಳುತ್ತಿರುವುದು ಕಳೆದ ಶತಮಾನದ ಮೂವತ್ತನೆಯ ದಶಕದಲ್ಲಿ! ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಹತ್ತುವರ್ಷಗಳ ಮುನ್ನ. ಆ ಸಂದರ್ಭದ ‘ರಾಜಕೀಯ’ ಪದಕ್ಕೆ ಇದ್ದ ಧ್ವನಿ ಇಂದಿಗಿಂತ ತೀರಾ ಭಿನ್ನವಾದುದು ಎಂಬುದನ್ನು ಇಲ್ಲಿ ಗ್ರಹಿಸಬೇಕು. ಅದಕ್ಕಾಗ ದೇಶದ ಸ್ವಾತಂತ್ರ್ಯಕ್ಕಾಗಿ ತೊಡಗುವ ರಾಷ್ಟ್ರಭಕ್ತಿಯ ಧ್ವನಿಯಿತ್ತು.
ಹಿಂದೂಗಳು ರಾಜಕೀಯಮನಸ್ಕರಾದರೆ ಪರಿಣಾಮವನ್ನು ಹೇಗೆ ಕಾಣಬಹುದು ಅಥವಾ ಕಾಣಬೇಕು ಎನ್ನುವುದಕ್ಕೆ ಅವರು ಉಲ್ಲೇಖಿಸುವ ಈ ಮಾತನ್ನು ಗಮನಿಸಿ: “ದೇವಾಲಯಗಳ, ಮಠಗಳ ಹಾಗೂ ಗೋಶಾಲೆಗಳ ಉಪಯುಕ್ತತೆಯನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ ಎಲ್ಲ ಹಿಂದೂಗಳನ್ನು ಒಂದು ಸಶಕ್ತ ಘಟಕವಾಗಿ ಒಂದುಗೂಡಿಸಲು ಹಾಗೂ ಅವರನ್ನು ಅಜೇಯರನ್ನಾಗಿ ಮಾಡಲು ಅವು ಸಾಲದು.. ಕೇವಲ ಒಂದು ಮುಸಲ್ಮಾನ ಕುಟುಂಬವನ್ನು ಹಿಂದೂಧರ್ಮಕ್ಕೆ ಪುನಃ ಕರೆತಂದರೆ ಈಗ ಮತ್ತು ಮುಂದಿನ ತಲೆಮಾರುಗಳಲ್ಲೂ ಗೋವುಗಳಿಗೆ ಗೋಶಾಲೆಗಳು ರಕ್ಷಣೆ ನೀಡುವುದಕ್ಕಿಂತ ಹೆಚ್ಚು ರಕ್ಷಣೆ ಲಭಿಸುವುದು. (ಹಿಂದುತ್ವನಿಷ್ಠ) ಹಿಂದೂಗಳು ದೇಶವಾಳುವಷ್ಟು ಪ್ರಬಲರಾದರೆ ಮಾತ್ರ ಇಡಿಯ ಭಾರತದಲ್ಲಿ ಗೋಹತ್ಯೆಯನ್ನು ನಿಲ್ಲಿಸಲು ಸಾಧ್ಯವಾದೀತು.”
ಇಲ್ಲಿ ರಾಜಕೀಯಮನಸ್ಕತೆ ಮತ್ತು ಧಾರ್ಮಿಕಮನಸ್ಕತೆ ಹೇಗಿರಬೇಕೆಂಬ ಹೊಳಹು ಕೂಡ ನಮಗೆ ಲಭಿಸುತ್ತದೆ. ಪೂಜೆಪುನಸ್ಕಾರಾದಿ ಕ್ರಿಯೆಗಳಲ್ಲಿ ತೊಡಗುವ ಮಾನಸಿಕತೆಯಲ್ಲ ಧಾರ್ಮಿಕಮನಸ್ಕತೆ. ಮತಾಂತರವಾಗಿ ಅಹಿಂದುಗಳಾದವರನ್ನು ಪುನಃ ಹಿಂದೂಗಳನ್ನಾಗಿಸುವ ಆವಶ್ಯಕತೆಯಿದೆ. ಧಾರ್ಮಿಕತೆಯು ತೊಡಗಬೇಕಾದುದು ಈ ನಿಟ್ಟಿನಲ್ಲಿ. ಸ್ವಾತಂತ್ರ್ಯ ಹೋರಾಟವನ್ನು ಮಾಡಬೇಕಾದುದೂ ಸ್ವಕೀಯರ ಶಾಸನವನ್ನು ತರಬೇಕೆಂಬ ನೆಲೆಯಲ್ಲಿ ತಾನೇ! ಹಿಂದುತ್ವನಿಷ್ಠರಲ್ಲದವರು ಆಡಳಿತದ ಸ್ಥಾನದಲ್ಲಿ ಕುಳಿತರೆ ಅದು ಪರಕೀಯ ಆಡಳಿತಕ್ಕಿಂತ ತೀರಾ ಭಿನ್ನವೇನೂ ಆಗಿರುವುದಿಲ್ಲ. ಹಾಗಾಗಿ ಸ್ವರಾಜ್ಯ ಅಂದರೆ ಸ್ವಕೀಯರ ರಾಜ್ಯ, ಅಂದರೆ ಹಿಂದುತ್ವನಿಷ್ಠರ ರಾಜ್ಯ.
ಸಂಖ್ಯಾಭೀತಿ
ಮತಾಂತರದ ಸವಾಲುಗಳನ್ನು ಎದುರಿಸುವ ಸಮಾಜದಲ್ಲಿ ಮತಾಂತರಗೊಂಡವರನ್ನು ವಾಪಸ್ ಕರೆಸಿಕೊಳ್ಳುವ ಪರಾವರ್ತನಕಾರ್ಯದಲ್ಲಿ ತೊಡಗುವುದೇ ಆದ್ಯ ಧಾರ್ಮಿಕಕರ್ತವ್ಯವಾಗುತ್ತದೆ. ಯಾವುದೇ ಧಾರ್ಮಿಕಕಾರ್ಯ ನಡೆಯುವುದು ಪ್ರಶಾಂತ ವಾತಾವರಣದಲ್ಲಿ. ಮತಾಂತರಿತರಿಂದ ಅಸ್ತಿತ್ವದ ಪ್ರಶ್ನೆಯನ್ನೆದುರಿಸುತ್ತಿರುವ ಸಮಾಜವು ಒಂದೊಮ್ಮೆ ನಿಶ್ಚಿಂತವಾಗಿ ನೆಮ್ಮದಿಯನ್ನು ಅನುಭವಿಸುತ್ತಿದೆಯೆಂದಾದರೆ ಅದು ಪೊಳ್ಳು ನೆಮ್ಮದಿಯಷ್ಟೆ ಆಗುತ್ತದೆ.
ಸಾವಿತ್ರೀದೇವಿಯವರು ಉತ್ತರ ಮತ್ತು ಪೂರ್ವ ಬಂಗಾಳದ ಸನ್ನಿವೇಶವನ್ನು ಈ ನಿಟ್ಟಿನಲ್ಲಿ ತುಂಬಾ ಸೊಗಸಾಗಿ ಅವಲೋಕಿಸಿದ್ದಾರೆ. ಅಲ್ಲಿಯ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಮುಸಲ್ಮಾನರಾಗಿ ಮತಾಂತರಗೊಂಡ ಹಿಂದುಗಳ ಸಂಖ್ಯೆ ಮತಾಂತರಗೊಳ್ಳದ ಹಿಂದುಗಳ ಸಂಖ್ಯೆಗಿಂತ ಐದಾರು ಪಟ್ಟು ಅಧಿಕವಿದೆ. ಕೆಲವು ಗಲ್ಲಿಗಳಲ್ಲಿ ಹಿಂದುಗಳೇ ಇಲ್ಲ. ಅಂಥಲ್ಲಿ ಯಾರೂ ಪ್ರವೇಶಿಸುವ ಧೈರ್ಯತೋರುವುದಿಲ್ಲ. ಕೆಲವು ಊರುಗಳಲ್ಲಿಯ ಅಗ್ರಹಾರಗಳಲ್ಲಿ ಧರ್ಮದ ಕುರಿತು ‘ಘನತರ’ ಚರ್ಚೆಗಳು ನಡೆಯುತ್ತವೆ. ಜನರ ಸಂಖ್ಯಾಪ್ರಮಾಣಕ್ಕಿಂತ ಗುಣಮಟ್ಟವೇ ಮುಖ್ಯ ಎಂದು ತರ್ಕಬದ್ಧವಾಗಿ ವಾದಿಸಲಾಗುತ್ತದೆ. ಅದೇ ಊರಲ್ಲಿ ಸಾಮಾಜಿಕವಾಗಿ ಹಿಂದುಳಿದ ಮಂದಿ ಮತಾಂತರಗೊಂಡ ಸುದ್ದಿ ಈ ವಾದದಿಂದಾಗಿ ಗೌಣವಾಗುತ್ತದೆ. ಅವರು ಹೇಳುತ್ತಾರೆ: ಇಂಥ ಸನ್ನಿವೇಶದ ಪೂರ್ವಬಂಗಾಳವು ಭವಿಷ್ಯದಲ್ಲಿ ಭಾರತದ ಜತೆಗೆ ಉಳಿಯುವುದು ಕಷ್ಟವಿದೆ. ಪಶ್ಚಿಮಪಂಜಾಬಿನ ಸ್ಥಿತಿಯು ಇದಕ್ಕಿಂತ ಘೋರವಾಗಿದೆ.
ದೇಶವಿಭಜನೆಯ ಸಾಧ್ಯತೆಯನ್ನು ಹತ್ತನ್ನೆರಡು ವರ್ಷಗಳ ಪೂರ್ವದಲ್ಲೇ ಊಹಿಸಿದ್ದ ಸಾವಿತ್ರೀದೇವಿಯವರು, ಹಿಂದೂಸಮಾಜವು ಎದುರಿಸಬೇಕಾದ ಕ್ರೂರಚಿತ್ರಹಿಂಸೆಯ ಬಗೆಗೂ ವಿವರಿಸಿದ್ದಾರೆ. ಭವಿಷ್ಯದ ಇಂಥ ಭೀಕರ ಸನ್ನಿವೇಶದ ಕುರಿತು ಹೇಳಿದರೆ ಅದು ಪೂರ್ವಬಂಗಾಳದ ಹಿಂದೂಗಳಿಗೆ ಅರ್ಥವಾದಂತೆ ಮದ್ರಾಸಿನ ಇಲ್ಲವೇ ಹಿಂದುಗಳು ಬಹುಸಂಖ್ಯೆಯಲ್ಲಿರುವ ಪ್ರದೇಶಗಳ ಹಿಂದೂಗಳಿಗೆ ಅರ್ಥವಾಗುವುದಿಲ್ಲ ಎಂದೂ ಹೇಳುತ್ತಾರೆ. ಅವರ ಈ ಮಾತು ಇಂದಿಗೂ ವಾಸ್ತವವೇ ಆಗಿದೆ ನೋಡಿ!
ವಂಚನೆಯ ಸನ್ನಿವೇಶ
” ಹಿಂದೂ ಸಮಾಜದಲ್ಲಿರುವ ನಿಷ್ಕ್ರಿಯತೆಯನ್ನು ತೆಗೆದುಹಾಕಲು ಪ್ರಚಂಡಶಕ್ತಿಯ ಆವಶ್ಯಕತೆಯಿದೆ.. ಕೆಲವು ಅಪಾಯಕಾರಿ ಭಯಗ್ರಸ್ತ ಪ್ರದೇಶಗಳಲ್ಲಿ ಹಿಂದೂಗಳು ಶಾಶ್ವತವಾಗಿ ನಿರ್ಮೂಲವಾಗುವ ಸಾಧ್ಯತೆಯಿದೆ. (ಇದನ್ನವರು ಹೇಳುತ್ತಿರುವುದು ಪೂರ್ವಬಂಗಾಲಕ್ಕೆ ಅಂದರೆ ಇಂದಿನ ಬಾಂಗ್ಲಾದೇಶದ ಪ್ರದೇಶಕ್ಕೆ ಸಂಬಂಧಿಸಿ. ಅವರ ಊಹೆ ಈಗ ನಿಜವಾದುದನ್ನು ಗಮನಿಸಬೇಕು.) ಮತ್ತಿದು ಘಟಿಸುವುದು ನಿಧಾನವಾಗಿ ಅಲ್ಲ, ಒಮ್ಮಿಂದೊಮ್ಮೆಲೇ! ಏಕೆಂದರೆ ಸುತ್ತಲೂ ಇರುವ ವಿರೋಧಿಶಕ್ತಿಗಳು ಈ ಸನ್ನಿವೇಶದ ದುರ್ಲಾಭವನ್ನು ಪಡೆದು ಹಿಂದುತ್ವವನ್ನು ಬಗ್ಗುಬಡಿಯಲು ದಿನನಿತ್ಯವೂ ತಲೆಯೆತ್ತುತ್ತಲೇ ಇವೆ. ಮತ್ತು ಚರಿತ್ರೆಯು ಎಂದಿಗೂ ಯಾರಿಗೂ ಕಾಯುವುದಿಲ್ಲ.”
ನಿಷ್ಕ್ರಿಯ ಸಮಾಜ ತನ್ನನ್ನಾವರಿಸುತ್ತಿರುವ ದುರುಳಶಕ್ತಿಯ ವಿರುದ್ಧ ಸಕಾಲದಲ್ಲಿ ಸಕ್ರಿಯಗೊಳ್ಳದೇ ಹೋದರೆ ಮುಂದೆ ಸಕ್ರಿಯಗೊಳ್ಳುವ ಅವಕಾಶದಿಂದಲೇ ವಂಚಿತವಾಗುತ್ತದೆ. ಹೀಗೆ ವಂಚಿತವಾಗಲು ಮಾನಸಿಕ ಸನ್ನಿವೇಶ ಅನುಕೂಲವೇ ಇದೆ; ವಂಚನೆಮಾಡುವ ದುರುಳತನವು ಒಂದೆಡೆ ಮತಾವೇಶವಾಗಿ ಮೈದಾಳಿದೆ. ವಂಚನೆಗೊಳಗಾಗುವ ಮುಗ್ಧತೆಯು ಮತ್ತೊಂದೆಡೆ ಸಮಾಜಸ್ವಭಾವವಾಗಿ ಬೇರೂರಿದೆ. ಅದನ್ನವರು ಈ ರೀತಿ ಹೇಳುತ್ತಾರೆ;
“ಬಂಗಾಲದಲ್ಲಿ ಮುಸಲ್ಮಾನರು ಭಾರತೀಯರಾಗಿ ಅಲ್ಲ, ಮುಸಲ್ಮಾನರಾಗಿ ಬಲಿಷ್ಠರಾಗಿದ್ದಾರೆ. ಅವರು ಹಿಂದೂಗಳೊಂದಿಗೆ ವಿದೇಶೀ (ಆಂಗ್ಲ) ಆಧಿಪತ್ಯದ ಪ್ರಯೋಜನವನ್ನು ಹಂಚಿಕೊಂಡಿದ್ದಾರೆ. ಅವುಗಳು ತಾತ್ಕಾಲಿಕವಾಗಿವೆ.. ಅವರು ಆಕ್ರಮಣಗೈಯಲು ಬಯಸಿದಾಗ ಏಕಪುರುಷನಂತೆ ಎದ್ದುನಿಲ್ಲುತ್ತಾರೆ.. ಅವರಿಗೆ ಈ ಶಕ್ತಿ ಬರುವುದು ಅವರ ಮತದಿಂದ. ಅದು ತೀವ್ರವಾಗಿ ವಿಶ್ವಾಸಾವಲಂಬಿಯಾಗಿದೆ. ಅದಕ್ಕೆ ಪ್ರತಿಯಾಗಿ ಹಿಂದೂಧರ್ಮವು ಅದರ ವಿರುದ್ಧ ದಿಶೆಯಲ್ಲಿ ಸಾಗುತ್ತದೆ..”
ರಾಷ್ಟ್ರದಸ್ತಿತ್ವಕ್ಕೆ ಧಕ್ಕೆ
ದೇಶದ ಜನರೆಲ್ಲರೂ ಒಂದು ಅಖಂಡ ಘಟಕವಾಗಿ ರೂಪುಗೊಂಡಾಗ ರಾಷ್ಟ್ರೀಯತೆಯ ಅಸ್ತಿತ್ವವನ್ನು ಕಾಣಬಹುದಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ರಾಷ್ಟ್ರೀಯತೆಯ ಕೊರತೆಯು ಬಹುವಾಗಿ ಕಾಡುತ್ತಿದೆ. ಹೀಗೆ ಕಾಡಲು ಇಲ್ಲಿಯ ಮತಾಂತರಿತರ ಮಾನಸಿಕತೆಯು ಒಂದು ರೀತಿಯ ಕಾರಣವಾದರೆ ಹಿಂದೂಸಮಾಜದ ಜಾತೀಯ ಮಾನಸಿಕತೆಯು ಮತ್ತೊಂದು ರೀತಿಯಲ್ಲಿ ಕಾರಣವಾಗಿದೆ. ಇದನ್ನು ಅವರು ಸ್ಪಷ್ಟ ಮಾತುಗಳಲ್ಲಿ ಕಟ್ಟಿಕೊಡುತ್ತಾರೆ:
” ಭಾರತದ ಜನಸಂಖ್ಯೆಯ ಐದನೇ ಒಂದಕ್ಕಿಂತಲೂ ಅಧಿಕವಿರುವ ಮುಸಲ್ಮಾನರಿಗೆ ತಾವು ಭಾರತೀಯರು ಎಂಬುದಕ್ಕಿಂತ ಮುಸಲ್ಮಾನರು ಎಂಬ ಭಾವನೆಯೇ ಅಧಿಕವಿದೆ. ಕೆಲವರಿಗಷ್ಟೆ ತಾವು ಮೊದಲು ಭಾರತೀಯರು, ನಂತರ ಮುಸಲ್ಮಾನರು ಎಂಬ ಭಾವನೆ ಇರಬಹುದು.. ಇದಕ್ಕೆ ಪ್ರತಿಯಾಗಿ ಹೆಚ್ಚಿನ ಹಿಂದುಗಳಿಗೆ ರೂಢಮೂಲವಾದ ಜಾತಿಪ್ರಜ್ಞೆಯಿದೆ. ಅದರೊಂದಿಗೆ ಅಸ್ಪಷ್ಟವಾದ ಹಿಂದುತ್ವದ ಪ್ರಜ್ಞೆಯಿದೆ. ಭಾರತೀಯ ಪ್ರಜ್ಞೆ ಇಲ್ಲವೇ ಇಲ್ಲ. ಅನಕ್ಷರಸ್ಥ ಹಿಂದುವಿಗೆ ಭಾರತದ ಭೂಪಟವು ಹೇಗೆ ಕಾಣಿಸುತ್ತದೆ ಎಂದೇ ಗೊತ್ತಿಲ್ಲ! ಅವನ ಮಟ್ಟಿಗೆ ಹಿಂದುವಾಗಿರುವುದೆಂದರೆ ಕೆಲವು ನಿರ್ದಿಷ್ಟ ಸಾಮಾಜಿಕ ಕಟ್ಟುಪಾಡುಗಳನ್ನು ಪಾಲಿಸುವುದು. (ಕೆಲವರೊಂದಿಗೆ ಊಟಮಾಡದಿರುವುದು ಇತ್ಯಾದಿ).. ಒಂದೇ ದೇವರನ್ನು ಪೂಜಿಸುವ, ಒಂದೇ ಹಬ್ಬವನ್ನು ಆಚರಿಸುವ ಹಿಂದೂಗಳ ನಡುವೆ ಅಸಂಖ್ಯ ನಿರ್ಬಂಧಗಳಿವೆ ಮತ್ತು ತಡೆಗೋಡೆಗಳಿವೆ..”
ಯಾವುದೇ ವೃತ್ತಿಭೇದವಿಲ್ಲದೆ ಕಾಯಕಸಂಸ್ಕೃತಿಯನ್ನು ಬೆಳೆಸುವುದಕ್ಕೆ, ಕೌಶಲವರ್ಧನೆಯನ್ನು ಸಾಧಿಸುವುದಕ್ಕೆ ಜಾತಿಯು ಇಂಬಾಗಬೇಕಿತ್ತು. ಈ ಮೂಲಲಕ್ಷ್ಯವನ್ನು ಬಿಟ್ಟು ಅದು ಮಾಡಬಾರದ ದುಷ್ಪರಿಣಾಮವನ್ನು ಸಮಾಜದಲ್ಲಿ ಆಗುಮಾಡುತ್ತಿದೆ. ಅದರಿಂದ ಸಾಮಾಜಿಕ ಸಾಮರಸ್ಯಕ್ಕೆ ಕುಂದುಂಟಾದುದು ಮಾತ್ರವಲ್ಲ, ರಾಷ್ಟ್ರೀಯ ಅಸ್ತಿತ್ವಕ್ಕೇ ಧಕ್ಕೆಯೊದಗಿದಂತಾಯಿತು.
ಹಿಂದುತ್ವವಿಲ್ಲದೆ ರಾಷ್ಟ್ರವಿಲ್ಲ
ಸ್ವಾತಂತ್ರ್ಯಪೂರ್ವದಲ್ಲಿ ಜಾತಿ-ಮತಗಳ ಹಿನ್ನೆಲೆಯಲ್ಲಿ ಹಿಂದುತ್ವವನ್ನು ಇಷ್ಟು ನಿಷ್ಕೃಷ್ಟವಾಗಿ ಅವಲೋಕಿಸಿದ ಮತ್ತೊಂದು ಪ್ರಯತ್ನ ನಡೆದುದು ದುರ್ಲಭವೇ ಇರಬೇಕು.
ಈ ಗ್ರಂಥದಲ್ಲಿ ಅವರು ಹಿಂದುತ್ವದ ಕುರಿತು ತಾತ್ತ್ವಿಕ ವಿವರಣೆಯನ್ನು ನೀಡುತ್ತ ಅದನ್ನು ಹಿಂದೂರಾಷ್ಟ್ರವಾಗಿ ಗ್ರಹಿಸುತ್ತಾರೆ. ಈ ರಾಷ್ಟ್ರಭಾವವು ಸಂಕುಚಿತ ತಡೆಗೋಡೆಗಳಿಂದಾಗಿ ಹಿಂದುಗಳಲ್ಲಿಲ್ಲದಿರುವುದನ್ನು ಕಂಡು ಖೇದಪಡುತ್ತಾರೆ. ಅದೇ ವೇಳೆಗೆ ಅದು ಮುಸಲ್ಮಾನರಲ್ಲಿಯೂ ಇರಬೇಕಾದ ತತ್ತ್ವವೇ ಆಗಿದೆ ಎಂದು ಆಗ್ರಹಿಸುತ್ತ ಅದಕ್ಕೆ ಮತವಿಶ್ವಾಸವು ಅಡ್ಡಿಯಾಗಿರುವುದನ್ನು ಸೂಚಿಸುತ್ತಾರೆ .
ಅಂದರೆ; ಹಿಂದುತ್ವವು ಭಾರತದ ರಾಷ್ಟ್ರೀಯತೆಗಿಂತ ಇನಿತೂ ಭಿನ್ನವಲ್ಲ. ಭಾರತದ ರಾಷ್ಟ್ರೀಯತೆಯನ್ನು ಹಿಂದುತ್ವದ ಹೊರತಾಗಿ ಕಲ್ಪಿಸುವುದು ಸಾಧುವೂ ಅಲ್ಲ. ಇಂಥ ರಾಷ್ಟ್ರೀಯತೆಯು ವಿಶ್ವಶಾಂತಿಗೆ ಅವಶ್ಯ ಉಳಿಯಬೇಕಾದ ಅನಿವಾರ್ಯತೆಯಿದೆ. ಅದನ್ನು ಉಳಿಸುವಲ್ಲಿ ಎಲ್ಲರ ಪಾತ್ರವಿದೆ. ಅಂದರೆ ಅದರ ಸಹಜ ವಾರಸುದಾರರಾಗಿರುವ ಹಿಂದೂಗಳಷ್ಟೆ ಅಲ್ಲದೆ ಇಲ್ಲಿಯ ಮುಸಲ್ಮಾನರು ಕೂಡಾ ಹಿಂದುಗಳಷ್ಟೆ ಆಗ್ರಹದಿಂದ ತೊಡಗಬೇಕಾಗಿದೆ. ಹಿಂದುಗಳು ತಮ್ಮ ಸಂಕುಚಿತ ಸಾಮಾಜಿಕ ತಡೆಗೋಡೆಗಳಿಂದ ಹೊರಬಂದು ಒಂದು ಅಖಂಡ ಘಟಕವಾಗಿ ರೂಪುಗೊಡು ಸಂಸ್ಕೃತಿಸಂಪನ್ನರಾಗುತ್ತ ಈ ರಾಷ್ಟ್ರೀಯತೆಯನ್ನು ಉಳಿಸಬಲ್ಲರು. ಬಲಾತ್ಕಾರ ಮತ್ತಿತರ ಕಾರಣಕ್ಕಾಗಿ ಈಗಿನ ಮತೀಯಸ್ಥಿತಿಯನ್ನು ಹೊಂದಿರುವ ಮುಸಲ್ಮಾನರು ತಮ್ಮ ಪ್ರಾಚೀನ ಹಿಂದೂ ವಾರಸಿಕೆಯನ್ನು ನೆನಪಿಸಿಕೊಂಡು ಅದನ್ನೇ ಮುಂದುವರಿಸಬೇಕಾದ ಗುರುತರ ಹೊಣೆಯುಳ್ಳವರಾಗಿ ಇಲ್ಲಿಯ ರಾಷ್ಟ್ರೀಯತೆಯನ್ನು ತಮ್ಮದನ್ನಾಗಿಸಿಕೊಳ್ಳಬೇಕು. ಆಗ ವಿಶ್ವಬಂಧುತ್ವದ ಹೊಣೆಯನ್ನು ನಿಭಾಯಿಸಲು ನಮ್ಮೀ ರಾಷ್ಟ್ರವು ಸಶಕ್ತವಾಗುತ್ತದೆ. ಹಾಗಾಗುವುದನ್ನು ಕಾಣುವ ದಿನಗಳನ್ನು ಭಾರತೀಯರಷ್ಟೆ ಅಲ್ಲ, ಇಡಿಯ ವಿಶ್ವವೇ ಕಾತರದಿಂದ ನಿರೀಕ್ಷಿಸುತ್ತಿದೆ.