2017-18ರ ಅವಧಿಯಲ್ಲಿ 5 ಪ್ರದೇಶಗಳು, 29 ರಾಜ್ಯಗಳು, ಐದು ಕೇಂದ್ರಾಡಳಿತ ಪ್ರದೇಶಗಳು ಮತ್ತು 465 ಜಿಲ್ಲೆಗಳಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತಂತೆ ಅಧ್ಯಯನವನ್ನು ನಡೆಸಲಾಯಿತು. ಭಾರತದಲ್ಲಿ 17 ರಾಜ್ಯಗಳ ಅಂತಾರಾಷ್ಟ್ರೀಯ ಗಡಿಗಳಲ್ಲಿನ ಒಟ್ಟು ಜಿಲ್ಲೆಗಳು 106 ಆಗಿದ್ದು, ಅದರಲ್ಲಿ 70 ಜಿಲ್ಲೆಗಳು (ಶೇ. 66.06 ರಷ್ಟು) ಅಧ್ಯಯನಕ್ಕೊಳಪಟ್ಟಿವೆ. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ವಿಶ್ಲೇಷಣೆಯ ಘಟಕವಾಗಿದ್ದರು ಮತ್ತು ಒಟ್ಟು 43,255 ಮಹಿಳೆಯರನ್ನು ಸಂದರ್ಶಿಸಲಾಯಿತು.

 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಇದೇ ವಿಚಾರವಾಗಿ ಪ್ರತ್ಯೇಕ ಅಧ್ಯಯನವನ್ನು ನಡೆಸಲಾಯಿತು. 5 ಪ್ರದೇಶಗಳು, 25 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳು ಮತ್ತು 283 ಜಲ್ಲೆಗಳಲ್ಲಿ 7675 ಬಾಲಕಿಯರನ್ನು ಸಂದರ್ಶಿಸಲಾಯಿತು. ಬಹುತೇಕರು ವಿವಾಹಿತರು. ಅವಿವಾಹಿತ ಮಹಿಳೆಯರಲ್ಲಿ (ಶೇ. 21.96 ರಷ್ಟು) ಹೆಚ್ಚಿನವರು 18-25 ವರ್ಷ ವಯಸ್ಸಿನವರು. ಹಿಂದು, ಮುಸ್ಲಿಂ, ಬೌದ್ಧ, ಕ್ರಿಶ್ಚಿಯನ್, ಜೈನ ಮತ್ತು ಸಿಕ್ಖ ಹೀಗೆ ಎಲ್ಲರೂ ಈ ಅಧ್ಯಯನದಲ್ಲಿ ಒಳಗೊಳ್ಳಲಾಗಿದೆ.

 ಶಿಕ್ಷಣ

 2011ರ ಜನಗಣತಿಯ ಪ್ರಕಾರ, ಸ್ತ್ರೀಯರ ಸಾಕ್ಷರತೆಯ ಪ್ರಮಾಣವು ಶೇ.64.63 ರಷ್ಟಿತ್ತು. ಪ್ರಸ್ತುತ ಅಧ್ಯಯನದಲ್ಲಿ ಸ್ತ್ರೀ ಸಾಕ್ಷರತೆಯ ಪ್ರಮಾಣವು ಶೇ.79.63 ರಷ್ಟು ಎಂದು ಕಂಡುಬಂದಿದೆ. ಸಾಕ್ಷರತೆಯ ಪ್ರಮಾಣ ಹೆಚ್ಚಳವಾಗಿದ್ದರೂ, ಅವರಲ್ಲಿ ಕೆಲವರು ಮಾತ್ರ ಪದವಿಗಿಂತ ಹೆಚ್ಚಿನ ಶಿಕ್ಷಣದ ಮಟ್ಟವನ್ನು ಸಾಧಿಸುವಲ್ಲಿ ಯಶಸ್ವಿಯಾದವರು.

 ಬುಡಕಟ್ಟು ಮಹಿಳೆಯರಲ್ಲಿ ಹೆಚ್ಚಿನ ಅನಕ್ಷರತೆಯನ್ನು ಗಮನಿಸಲಾಯಿತು. ಇದರ ನಂತರದ ಸ್ಥಾನ ಪರಿಶಿಷ್ಟ ಜಾತಿ ಮತ್ತು ವಿಶೇಷ ಹಿಂದುಳಿದ ವರ್ಗದ್ದು . ಆಧ್ಯಾತ್ಮಿಕ ಕ್ಷೇತ್ರದ ಮಹಿಳೆಯರಲ್ಲಿ ಅನಕ್ಷರತೆ ಕಡಿಮೆಯಿದೆ. ಅಧ್ಯಯನದಲ್ಲಿ ಮಹಿಳೆಯರಲ್ಲಿ ಶಿಕ್ಷಣವನ್ನು ಸ್ಥಗಿತಗೊಳಿಸಲು ಪ್ರಮುಖ ಕಾರಣಗಳಾಗಿ ಮದುವೆ ಮತ್ತು ಆರ್ಥಿಕ ತೊಂದರೆ ಎಂದು ಗಮನಿಸಲಾಗಿದೆ.

ಮೀಸಲಾತಿ ನೀತಿ ಮತ್ತು ಶೈಕ್ಷಣಿಕ  ಬೆಂಬಲದ ಕ್ರಮಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಶೇಷ ಹಿಂದುಳಿದ ವರ್ಗ ಮತ್ತು ಇತರ ಹಿಂದುಳಿದ ವರ್ಗದ ಮಹಿಳೆಯರಿಗೆ ಉನ್ನತಮಟ್ಟದ ಶಿಕ್ಷಣವನ್ನು ಪಡೆಯಲು ಸಹಾಯಮಾಡುತ್ತವೆ ಎಂದು ಗಮನಿಸಲಾಗಿದೆ.

ಸಂದರ್ಶಿಸಲ್ಪಟ್ಟವರಲ್ಲಿ  ಮೂರನೇ ಎರಡು ಭಾಗದಷ್ಟು ಮಹಿಳೆಯರು ತಮ್ಮ ಆಸಕ್ತಿಯ ವಿಷಯವನ್ನು ಹೇಳಲು ಸಾಧ್ಯವಾಗಲಿಲ್ಲ. ಇದು ಮನೆಯ ಕೆಲಸಗಳ ಒತ್ತಡ ಮತ್ತು ಸಾಂಪ್ರದಾಯಿಕ ಮನಸ್ಥಿತಿಯೊಂದಿಗೆ ಅನೇಕ ಜವಾಬ್ದಾರಿಗಳ ನಿರ್ವಹಣೆಯು ಮಹಿಳೆಯರು ತಮ್ಮ ಆಸಕ್ತಿಯ ವಿಷಯದ ಬಗ್ಗೆ ಯೋಚಿಸಲು ನಿರ್ಬಂಧಿಸುತ್ತದೆ ಎಂಬುದನ್ನು ಸೂಚಿಸುತ್ತದೆ. ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು ತಮ್ಮ ಆಸಕ್ತಿಯ ಕ್ಷೇತ್ರದ ಬಗ್ಗೆ ಯೋಚನೆಯನ್ನೇ ಮಾಡಿರಲಿಲ್ಲ ಎಂದು ತಿಳಿಸಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ವಿರಾಮ ಸಮಯವನ್ನು ಪಡೆಯಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ.

 ಉದ್ಯೋಗ

ಪರಿಶಿಷ್ಟ ಪಂಗಡ ವಿಭಾಗದಲ್ಲಿ ಸ್ತ್ರೀ ಉದ್ಯೋಗ ಪ್ರಮಾಣ  ಅತಿ ಹೆಚ್ಚು ಮತ್ತು ಸಾಮಾನ್ಯ ವರ್ಗದಲ್ಲಿ ಮಹಿಳೆಯರ ನಿರುದ್ಯೋಗ ಪ್ರಮಾಣ ಹೆಚ್ಚು. ಉದ್ಯೋಗಸ್ಥ ಮಹಿಳೆಯರಲ್ಲಿ ಬಹುತೇಕರು ತಮ್ಮ ಕೆಲಸದ ಸ್ಥಳದಲ್ಲಿ ಕ್ಯಾಂಟೀನ್, ಸಾರಿಗೆ ಮತ್ತು ವಿಶ್ರಾಂತಿ ಕೊಠಡಿ ಮುಂತಾದ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಅವರಲ್ಲಿ ಶೇ. 60 ಕ್ಕಿಂತ ಹೆಚ್ಚಿನವರು ಸಾಲ ಸೌಲಭ್ಯವನ್ನು ಹೊಂದಿಲ್ಲ.

ಇದರ ಮುಂದುವರಿದ ಅಧ್ಯಯನದಲ್ಲಿ ಉದ್ಯೋಗಸ್ಥರಲ್ಲಿ ಕ್ರಿಶ್ಚಿಯನ್ ಮಹಿಳೆಯರು ಮೊದಲ ಸ್ಥಾನದಲ್ಲಿದ್ದರೆ ನಂತರದಲ್ಲಿರುವವರು ಕ್ರಮವಾಗಿ ಹಿಂದೂ, ಬೌದ್ಧ, ಮುಸ್ಲಿಂ, ಜೈನ, ಸಿಕ್ಖ್ ಮಹಿಳೆಯರು.

 ಆರೋಗ್ಯ ಮತ್ತು ಪೋಷಣೆ

 ಸರಿಯಾಗಿ ಅರ್ಧದಷ್ಟು ಮಹಿಳೆಯರು ದಿನದಲ್ಲಿ ಎರಡು ಹೊತ್ತಿನ ಆಹಾರವನ್ನು ಸ್ವೀಕರಿಸುತ್ತಾರೆ.  ಆದರೆ ಶೇ. 3.73ರಷ್ಟು ಮಹಿಳೆಯರು ದಿನದಲ್ಲಿ ಒಮ್ಮೆ ಮಾತ್ರ ಆಹಾರವನ್ನು ಸೇವಿಸುತ್ತಾರೆ. ಆಧ್ಯಾತ್ಮಿಕ ಕ್ಷೇತ್ರದ ಮಹಿಳೆಯರಲ್ಲಿ ಇದರ ಪ್ರಮಾಣವು ಸುಮಾರು ಹತ್ತನೇ ಒಂದರಷ್ಟು.

 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರಲ್ಲಿ ಮುಟ್ಟಿನ ಸಮಸ್ಯೆ ಪ್ರಮುಖ ಸಮಸ್ಯೆಯಾಗಿದೆ ಮತ್ತು ಇವರಲ್ಲಿ ಶೇ. 64 ರಷ್ಟು ಇದರಿಂದ ಬಳಲುತ್ತಿದ್ದಾರೆ. ಸಂಧಿವಾತವು ಎರಡನೇ ಸಂಖ್ಯೆಯಲ್ಲಿದ್ದು ಅದರ ಪ್ರಮಾಣ ಶೇ. 15 ರಷ್ಟು ಆಗಿದೆ. ಆಶ್ಚರ್ಯವೆಂದರೆ  ಕೆಲವರು ರಕ್ತದೊತ್ತಡ ( ಶೇ. 5.28 ರಷ್ಟು ), ಹೃದಯ ಸಮಸ್ಯೆ (ಶೇ. 3.07 ರಷ್ಟು), ಮಧುಮೇಹ ( ಶೇ. 1.62 ರಷ್ಟು) ಮತ್ತು ಕ್ಯಾನ್ಸರ್ (ಶೇ. 0.51ರಷ್ಟು) ನಿಂದ ಬಳಲುತ್ತಿದ್ದಾರೆ.

 ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ. 40 ರಷ್ಟು ಮಹಿಳೆಯರು ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಆಧ್ಯಾತ್ಮಿಕ ಕ್ಷೇತ್ರದ ಮಹಿಳೆಯರ ಶೇಕಡಾವಾರು ಪ್ರಮಾಣ ಇನ್ನೂ ಹೆಚ್ಚಾಗಿದೆ. 18 ರಿಂದ 20 ವರ್ಷದ ವಯಸ್ಸಿನವರು ಪದೇಪದೇ ಆಸ್ಪತ್ರೆಗೆ ದಾಖಲಾಗಿರುವುದು ಕಂಡುಬಂದಿದೆ. ತಿಳಿದುಬಂದಿರುವ ಇನ್ನೊಂದು ಸಂಗತಿಯೆಂದರೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಮಹಿಳೆಯರಲ್ಲಿ ಹೆಚ್ಚಿನವರು ಬುಡಕಟ್ಟು ಸಮಾಜದವರು.

 ಸುಮಾರು ಶೇ. 80 ರಷ್ಟು ಮಹಿಳೆಯರ ಸೌಖ್ಯದ ಮಟ್ಟ  ಅತ್ಯುನ್ನತವಾಗಿದೆ ಯೋಗಕ್ಷೇಮ ಉನ್ನತವಾಗಿದೆ. ಆಧ್ಯಾತ್ಮದ ಕ್ಷೇತ್ರದ ಮಹಿಳೆಯರಲ್ಲಿ ಇದು ಇನ್ನೂ ಆಧಿಕವಾಗಿದೆ. ಉನ್ನತಮಟ್ಟದ ಸೌಖ್ಯದ ಮಟ್ಟ ವಿವಾಹಿತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಆದರೆ ’ ಲಿವ್ ಇನ್ ರಿಲೇಷನ್‌ಶಿಪ್’ ನಲ್ಲಿ ಇರುವ ಮಳೆಯರಲ್ಲಿ ಈ ಪ್ರಮಾಣ ಅತಿ ಕಡಿಮೆ.

 ಕುಟುಂಬವನ್ನು ಹೊಂದಿರದ ಮತ್ತು ಯಾವುದೇ ಆದಾಯವಿಲ್ಲದ ಶೇ. 90 ರಷ್ಟು ಮಹಿಳೆಯರು ಹೆಚ್ಚಿನ ಸಂತೋಷದ ಮಟ್ಟವನ್ನು ಮತ್ತು ಯೋಗಕ್ಷೇಮವನ್ನು ಹೊಂದಿದ್ದಾರೆ. ಕುಟುಂಬದ ಆದಾಯ 10,000/- ಕ್ಕಿಂತಲೂ ಕಡಿಮೆ ಹೊಂದಿರುವ ಮಹಿಳೆಯರಲ್ಲಿ ಸಂತೋಷದ ಮಟ್ಟ ಅತ್ಯಂತ ಕಡಿಮೆ. ಕುಟುಂಬದ ಆದಾಯವು ಸಂತೋಷ ಮತ್ತು ಯೋಗಕ್ಷೇಮದ ಮೇಲೆ ಯಾವುದೇ ಪ್ರಭಾವವನ್ನು ಹೊಂದಿಲ್ಲವೆಂಬುದು ತಿಳಿದುಬರುತ್ತದೆ.

 ಶಿಪಾರಸ್ಸುಗಳು

  1. ಮಹಿಳೆಯರಲ್ಲಿ ಮತದಾನದ ಕಾರ್ಡಿನ ಬಗ್ಗೆ ಜಾಗೃತಿ ಮೂಡಿಸಬೇಕು.
  2. ಈಶಾನ್ಯದ ಮಹಿಳೆಯರಿಗೆ ಆಧಾರ್ ಕಾರ್ಡ್ ಪಡೆಯಲು ಪ್ರೇರೇಪಿಸಬೇಕು.
  3. ಉತ್ತರಭಾಗದಲ್ಲಿ ಮಹಿಳೆಯರು ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಹೊಂದಲು ವಿಶೇಷ ಪ್ರಯತ್ನಗಳನ್ನು ಮಾಡಬೇಕಾಗಿದೆ. ನಗರದ ಸ್ಲಂಗಳಲ್ಲಿರುವ ಮಹಿಳೆಯರ ಮತ್ತು ಬುಡಕಟ್ಟು ಮಹಿಳೆಯರ ಕುರಿತು ಸಹ ಇದೇ ಪ್ರಯತ್ನ ಮಾಡಬೇಕಾಗಿದೆ. ಇದರಿಂದ ಸರ್ಕಾರದ ವಿವಿಧ ಯೋಜನೆಗಳ ಲಾಭ ಅವರು ಪಡೆಯಲು ಸಹಕಾರಿಯಾಗುತ್ತದೆ.
  4. ಬುಡಕಟ್ಟು ಮಹಿಳೆಯರಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಅಗತ್ಯ ಸಹಕಾರ ಮತ್ತು ಕಾರ್ಯತಂತ್ರದ ಅವಶ್ಯಕತೆಯಿದೆ.
  5. ಪಠ್ಯಕ್ರಮವನ್ನು ಮರುವಿನ್ಯಾಸಗೊಳಿಸಬೇಕು ಮತ್ತು ಅದು ಅವರ ದಿನನಿತ್ಯದ ಜೀವನಕ್ಕೆ ಸಂಬಂಧಿಸಿರಬೇಕು.
  6. ಜೀವನದ ಕೌಶಲ್ಯ, ದೈಹಿಕ ಸಾಮರ್ಥ್ಯ, ಮೌಲ್ಯವರ್ಧನೆ, ಕೌಶಲ್ಯ ತರಬೇತಿಗೆ ಸಂಬಂಧಿಸಿದ ಪಠ್ಯಕ್ರಮವನ್ನು ಶಿಕ್ಷಣದ ಎಲ್ಲಾ ಹಂತಗಳಲ್ಲೂ ಜೋಡಿಸಬೇಕು.
  7. ಸರ್ಕಾರಿ ( ಕೇಂದ್ರ/ರಾಜ್ಯ ) ಮತ್ತು ಎನ್‌ಜಿಒ ಗಳು ಪ್ರೌಢಶಾಲಾ ಹಂತದಲ್ಲಿ ಹೆಣ್ಣು ಮಕ್ಕಳು ಶಾಲೆ ಬಿಡುವ ಪ್ರಮಾಣವನ್ನು ಕಡಿಮೆ ಮಾಡುವುರ ಕಡೆಗೆ ಗಮನವನ್ನು ಕೇಂದ್ರೀಕರಿಸಬೇಕು. ಎಸ್‌ಟಿ (ಪ್ರಾಥಮಿಕ ಹಂತ) ಮತ್ತು ಎಸ್‌ಸಿ (ಹಿರಿಯ ಪ್ರಾಥಮಿಕ ಹಂತ) ಹೆಣ್ಣುಮಕ್ಕಳು ಶಾಲೆ ಬಿಡುವ ಪ್ರಮಾಣದ ಬಗ್ಗೆ ವಿಶೇಷ ಗಮನ ನೀಡಬೇಕು.
  8. ಸಮಾಜದಲ್ಲಿ ಮತ್ತು ಪ್ರತಿ ಕುಟುಂಬದಲ್ಲಿ ಲಿಂಗ ಸಮಾನತೆಯ ಕುರಿತಾಗಿ ಜಾಗೃತಿಯ ಕಾರ್ಯಗಳನ್ನು ಎನ್‌ಜಿಒಗಳು ಆಯೋಜಿಸಬೇಕಾಗಿದೆ.
  9. ಮಹಿಳೆಯರಿಗೆ ಕಂಪ್ಯೂಟರ್ ಶಿಕ್ಷಣದ ಕೊರತೆಯಿದೆ ಮತ್ತು ಪಿಎಮ್‌ಕೆವೈ ಯೋಜನೆಗಳ ಕುರಿತು ಯಾವುದೇ ಅರಿವಿಲ್ಲ. ಈ ಯೋಜನೆಗಳ ನೋಂದಣಿ ಆನ್‌ಲೈನ್ ಇರುವುದರಿಂದ ಇವುಗಳಿಂದಾಗುವ ಲಾಭದ ಬಗ್ಗೆ ತಿಳುವಳಿಕೆಯಿಲ್ಲ. ತರಬೇತಿ ಕೇಂದ್ರಕ್ಕೆ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಮತ್ತು ಆಫ್‌ಲೈನ್ ಕೋರ್ಸಗಳನ್ನು ನಡೆಸಲು ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ/ ವಿಭಾಗಗಳನ್ನು ಸ್ಥಾಪಿಸುವ ಅವಶ್ಯಕತೆಯಿದೆ.
  10. ಬೇರೆಬೇರೆ ವಿಷಯಗಳಲ್ಲಿ ಕೌಶಲ್ಯ ಸಾಧಿಸಲು ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಇದು ಉದ್ಯೋಗಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ವೇಗಗೊಳಿಸುತ್ತದೆ.
  11. ಕೌಶಲ್ಯ ತರಬೇತಿಯು ಉದ್ಯೋಗ ಆಧಾರಿತ ಮತ್ತು ಉದ್ಯೋಗ ಸೃಷ್ಟಿಸುವಂತಹದ್ದಾಗಬೇಕು. ಕೌಶಲ್ಯ ತರಬೇತಿ ಕೇಂದ್ರಗಳನ್ನು ಉದ್ಯೋಗ ನೀಡಬಲ್ಲ ಸಂಸ್ಥೆಗಳೊಂದಿಗೆ ಸಂಯೋಜಿಸಬೇಕು.
  12. ಉದ್ಯೋಗ ಸೃಷ್ಟಿಗೆ ಸಂಬಂಧಿಸಿದ ಎಲ್ಲಾ ಯೋಜನೆಗಳನ್ನು ತಳಮಟ್ಟದಲ್ಲಿ ವಿಸ್ತರಿಸುವ ಅವಶ್ಯಕತೆಯಿದೆ ಮತ್ತು ಅದರ ಬಗ್ಗೆ ಅರಿವನ್ನು ಮಹಿಳೆಯರಲ್ಲಿ  ಮೂಡಿಸಬೇಕಾಗಿದೆ.
  13. ಮಹಿಳೆಯರಿಗಾಗಿ ಆಫ್‌ಲೈನ್ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಬೇಕು.
  14. ಜಾತಿ ಮತ್ತು ವೈವಿವಾಹಿಕ ಸ್ಥಿತಿಯನ್ನು ಲೆಕ್ಕಿಸದೆ, ಸೇವಾ ವಲಯದ ಎಲ್ಲಾ ರೀತಿಯ ಮಹಿಳೆಯರಿಗೆ ನೇಮಕಾತಿ ಮಟ್ಟದಲ್ಲಿ ವಯಸ್ಸಿನ ಮಾನದಂಡಗಳನ್ನು ಸಡಿಲಿಸಬೇಕು. ಹೆಚ್ಚಿನ ಮಹಿಳೆಯರ ನಿರುದ್ಯೋಗಕ್ಕೆ ವಿವಾಹ ಮತ್ತು ಅದರಿಂದಾಗಿ ವಲಸೆ, ವೈವಾಹಿಕ ಜೀವನದ ಜವಾಬ್ದಾರಿಗಳೇ ಕಾರಣವಾಗಿವೆ.
  15. ಅಸಂಘಟಿತ ವಲಯದ ಮಹಿಳೆಯರ ಸ್ಥಿತಿಯನ್ನು ನೋಡಿಕೊಳ್ಳಲು ಒಂದು ಮೇಲ್ವಿಚಾರಕ ಸಂಸ್ಥೆಯಿರಬೇಕು. ಅಸಂಘಟಿತ ವಲಯದ ಮಹಿಳೆಯರು ಮತ್ತು ಕೌಶಲ್ಯರಹಿತ ಕಾರ್ಮಿಕರು ಪ್ರತಿಯೊಂದು ರೀತಿಯಲ್ಲೂ ಶೋಷಣೆಗೆ ಒಳಗಾಗುತ್ತಾರೆ.
  16. ಪ್ರತಿ ಹಂತದಲ್ಲೂ ಆಂತರಿಕ ದೂರು ಸಮಿತಿಗಳ ಪರಿಣಾಮಕಾರಿ ಅನುಷ್ಠಾನದ ಅಗತ್ಯವಿದೆ.
  17. ಶಾಲಾಮಟ್ಟದಲ್ಲಿ ಉದ್ಯೋಗ ಕೌಶಲ್ಯ ತರಬೇತಿ ನೀಡಬೇಕು. ಅನಕ್ಷರಸ್ಥ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಇಂತಹ ತರಬೇತಿ ನೀಡಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು.
  18. ಪರಿಪೂರ್ಣ ಆಹಾರದ ಬಗ್ಗೆ ಜಾಗೃತಿ ಮತ್ತು ದಿನದಲ್ಲಿ ಸೇವಿಸಬೇಕಾದ ಆಹಾರದ ಪ್ರಮಾಣದ ಕುರಿತು ಎಲ್ಲಾ ವರ್ಗದ ಮಹಿಳೆಯರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
  19. ಹದಿಹರೆಯದ ಬಾಲಕಿಯರ ಜಾಗೃತಿ ಮತ್ತು ಆಪ್ತಸಲಹೆಯ ಕಾರ್ಯಕ್ರಮಗಳನ್ನು ಉತ್ತೇಜಿಸುವ ಅಗತ್ಯವಿದೆ. ಶೇ. 60 ಕ್ಕಿಂತ ಹೆಚ್ಚು ಹದಿಹರೆಯದ ಹುಡುಗಿಯರು ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ.
  20. ಸಂಧಿವಾತವನ್ನು ತಡೆಗಟ್ಟುವ ಮತ್ತು ಗುಣಪಡಿಸುವ, ರಕ್ತದೊತ್ತಡವನ್ನು ಸರಿಗೊಳಿಸುವ ಆರೋಗ್ಯ ಕಾರ್ಯಕ್ರಮಗಳ ಅಗತ್ಯವಿದೆ.
  21. ಬುಡಕಟ್ಟು ಮಹಿಳೆಯರ ಆರೋಗ್ಯ ಸ್ಥಿತಿ ಉತ್ತಮಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ವಿಶೇಷ ಪ್ರಯತ್ನಗಳನ್ನು ಕೈಗೊಳ್ಳಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.