ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ನೆಹರು, ಗಾಂಧಿ, ಪಟೇಲ್ ಎಂದು ಉರು ಹೊಡೆಯುವ ನಮ್ಮ ಶಾಲಾ ಮಕ್ಕಳಿಗೆ ಭಗತ್‌ಸಿಂಗ್ ಎಂಬ ಶ್ರೇಷ್ಠ ದೇಶಭಕ್ತನ ಪರಿಚಯವನ್ನೇ ಮಾಡಿಸದೆ ನಾವೆಂತಹ ದ್ರೋಹ ಮಾಡಿದ್ದೇವೆ ! ಹುತಾತ್ಮ ಭಗತ್‌ಸಿಂಗ್‌ನ ತಮ್ಮ ಕುಲ್‌ತಾರ್ ಸಿಂಹರ ಪುತ್ರಿ ಡಾ.ವೀರೇಂದ್ರ ಸಿಂಧು ಬರೆದಿರುವ ‘ಯುಗದ್ರಷ್ಟಾ ಭಗತ್‌ಸಿಂಗ್’ ಹೃದಯ ಮಿಡಿಯುವ ಸತ್ಯನಿಷ್ಠ ಕೃತಿ. ಇದೀಗ ಕನ್ನಡಕ್ಕೆ ಈ ಕೃತಿಯನ್ನು ಅನುವಾದಿಸಿರುವ ಬಾಬುಕೃಷ್ಣಮೂರ್ತಿಯವರ ಪ್ರಯತ್ನ ಶ್ಲಾಘನೀಯ

ನಮ್ಮೆಲ್ಲರ ನೆಮ್ಮದಿಯ ‘ನಾಳೆ’ಗಳಿಗಾಗಿ ಆತ ಹುತಾತ್ಮನಾದ

Bhagath Singh

ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರಾರು? ಈ ಪ್ರಶ್ನೆಯನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕೇಳಿದರೆ ತಕ್ಷಣ ಅವರ ಉತ್ತರ – ನೆಹರು, ಗಾಂಧಿ, ಪಟೇಲ್ ಎಂದಾಗಿರುತ್ತದೆ. ಆದರೆ ಅದು ನಿಜವೆ? ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇನ್ನೂ ಅದೆಷ್ಟೋ ಅಗಣಿತ ಮಂದಿಯನ್ನು ನಾವು ಮರೆತೇ ಬಿಟ್ಟಿದ್ದೇವೆಯೆ? ಮಕ್ಕಳಿಗೆ ಕಲಿಸುವ ಭಾರತದ ಇತಿಹಾಸದ ಪಠ್ಯದಲ್ಲಿ ನೆಹರು, ಗಾಂಧಿ, ಪಟೇಲ್ ಮುಂತಾದ ಬೆರಳೆಣಿಕೆಯ ನಾಯಕರ ಹೆಸರು ಪ್ರಸ್ತಾಪವಾಗುತ್ತದೆಯೇ ಹೊರತು, ಸಾವರ್ಕರ್, ಭಗತ್‌ಸಿಂಗ್, ಚಂದ್ರಶೇಖರ ಆಜಾದ್, ರಾಜ್‌ಗುರು, ಸುಖದೇವ್, ಭಾಯಿ ಪರಮಾನಂದ ಮೊದಲಾದ ಮಹನೀಯರ ಹೆಸರು ಅಪ್ಪಿತಪ್ಪಿಯೂ ಸುಳಿಯುವುದಿಲ್ಲ. ಸ್ವಾತಂತ್ರ್ಯ ಪ್ರಾಪ್ತಿಗಾಗಿ ಇವರೆಲ್ಲರೂ ತಮ್ಮ ಪ್ರಾಣವನ್ನೇ ಪಣವಾಗಿಟ್ಟರು. ನೇಣಿನ ಉರುಳಿಗೆ ತಮ್ಮ ಕೊರಳನ್ನೊಡ್ಡಿದರು. ಮುಂದಿನ ಪೀಳಿಗೆ ಸ್ವಾತಂತ್ರ್ಯದ ಬೆಲೆಯನ್ನು ಹೀಗಾದರೂ ಅರಿಯಲಿ ಎಂದು ದೇಶಕ್ಕಾಗಿ ಹುತಾತ್ಮರಾದರು. ಆದರೆ ಅಂತಹ ಪ್ರಾತಃಸ್ಮರಣೀಯರ ನೆನಪನ್ನು ಶಾಶ್ವತವಾಗಿ ಯುವಪೀಳಿಗೆಯಲ್ಲಿ ಬೇರೂರಿಸಲು ಸರ್ಕಾರ ಕಿಂಚಿತ್ತೂ ಮನಸ್ಸು ಮಾಡಿಲ್ಲ. ಅಕ್ಬರ್, ಔರಂಗಜೇಬ್, ಟಿಪ್ಪು ಮೊದಲಾದ ಇತಿಹಾಸದ ಹೀನ ವ್ಯಕ್ತಿಗಳಿಗೆ ನೀಡಿದಷ್ಟು ಮಹತ್ವವನ್ನು ಭಗತ್‌ಸಿಂಗ್ ಮೊದಲಾದವರಿಗೆ ನೀಡಿಲ್ಲದಿರುವುದು ಎಂತಹ ದುರಂತ!

ತನ್ನ 23ನೇ ವಯಸ್ಸಿಗೇ ಗಲ್ಲಿಗೇರಿದ ಕ್ರಾಂತಿಕಾರಿ ಭಗತ್‌ಸಿಂಗ್ ಕುರಿತು ಅವರ ತಮ್ಮ ಕುಲ್‌ತಾರ್ ಸಿಂಹರ ಪುತ್ರಿ ಡಾ.ವೀರೇಂದ್ರ ಸಿಂಧು ಅವರು ‘ಯುಗದ್ರಷ್ಟಾ ಭಗತ್‌ಸಿಂಗ್ ಔರ್ ಉನ್‌ಕೇ ಮೃತ್ಯುಂಜಯ್ ಪುರ್‌ಖೆ’ ಎಂಬ ಉದ್ಗ್ರಂಥವನ್ನು ಹಿಂದಿಯಲ್ಲಿ ರಚಿಸಿದ್ದಾರೆ. ಅದೀಗ ಕನ್ನಡಕ್ಕೆ ಅನುವಾದಗೊಂಡಿದೆ. ಅನುವಾದಿಸಿರುವವರು ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಡಾ.ಬಾಬು ಕೃಷ್ಣಮೂರ್ತಿ. ಕ್ರಾಂತಿಕಾರಿಗಳ ಕುರಿತು ಹಿಂದಿನಿಂದಲೂ ಉತ್ಕೃಷ್ಟವಾದ ಕೃತಿಗಳನ್ನು ರಚಿಸಿ ಹೊರತರುತ್ತಿರುವ ಬಾಬು ಅವರು, ಭಗತ್‌ಸಿಂಗ್ ಕುರಿತ ಈ ಕೃತಿಯನ್ನೂ ತುಂಬಾ ಸುಂದರವಾಗಿ ಹೊರತಂದಿದ್ದಾರೆ. (ಯುಗದ್ರಷ್ಟಾ ಭಗತ್‌ಸಿಂಗ್, ಪ್ರ : ಶ್ರೀ ಸಮುದ್ಯತಾ ಸಾಹಿತ್ಯ, ಬೆಂಗಳೂರು – 76, ಪುಟಗಳು : 482, ಬೆಲೆ : 300 ರೂ., ವಿತರಕರು : ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು – 19). ಈ ಪುಸ್ತಕಕ್ಕೆ ವಿಮರ್ಶಕ, ಚಿಂತಕ ಡಾ.ಜಿ.ಬಿ.ಹರೀಶ್ ವೌಲಿಕ ಮುನ್ನುಡಿ ಬರೆದಿದ್ದಾರೆ. ಕೃತಿಯನ್ನು ಓದುತ್ತಾ ಹೋದಂತೆ ಭಗತ್‌ಸಿಂಗ್ ಬದುಕಿನ ರೋಮಾಂಚಕಾರಿ ಅಧ್ಯಾಯಗಳು ತೆರೆದುಕೊಳ್ಳುತ್ತವೆ. ಭಾರತದ ಸ್ವಾತಂತ್ರ್ಯಕ್ಕಾಗಿ ಅಂದಿನ ಯುವಪೀಳಿಗೆಯನ್ನು ಉತ್ತೇಜಿಸುವಲ್ಲಿ ಭಗತ್‌ಸಿಂಗ್, ರಾಜ್‌ಗುರು ಮೊದಲಾದ ಕ್ರಾಂತಿಕಾರಿಗಳ ಮಹತ್ವದ ಅರಿವುಂಟಾಗುತ್ತದೆ. ಭಗತ್‌ಸಿಂಗ್‌ನ ಅಜ್ಜ, ತಂದೆ, ತಮ್ಮ… ಹೀಗೆ ಇಡೀ ವಂಶವೇ ಹೇಗೆ ಭಾರತದ ಸ್ವಾತಂತ್ರ್ಯ ಪ್ರಾಪ್ತಿಗಾಗಿ ಕನಸು ಮನಸಿನಲ್ಲೂ ಈಗ ಎಣಿಸಲಾಗದ ಅತೀವ ಕಷ್ಟ ಸಂಕಟಗಳನ್ನು ಸಹಿಸಿತು ಎಂಬುದು ಮನಸ್ಸಿಗೆ ನಾಟಿ ತೀವ್ರ ವೇದನೆಯಾಗುತ್ತದೆ. ಭಗತ್‌ಸಿಂಗ್‌ನನ್ನು ‘ದಾರಿ ತಪ್ಪಿದ ದೇಶಭಕ್ತ’ ಎಂದೋ, ಅವನೊಬ್ಬ ಉಗ್ರವಾದಿ ಎಂದೋ ಹಿಂದು ಮುಂದೆ ಗೊತ್ತಿಲ್ಲದೆ ಟೀಕಿಸುವವರು ಈ ಪುಸ್ತಕವನ್ನು ಒಮ್ಮೆಯಾದರೂ ಓದಬಾರದೆ ಎಂಬ ಭಾವ ಸ್ಫುರಿಸುತ್ತದೆ.

ಲೇಖಕಿ ವೀರೇಂದ್ರ ಸಿಂಧು ತನ್ನ ಪುಸ್ತಕಕ್ಕೆ ಬರೆದಿರುವ ಹಿನ್ನೋಟದಲ್ಲಿ ಭಗತ್‌ಸಿಂಗ್ ವಂಶದ ಅಜಿತ್‌ಸಿಂಗ್ ಹೇಳಿದ ಮಾತೊಂದನ್ನು ಉಲ್ಲೇಖಿಸಿದ್ದಾರೆ. ‘Some one must weep, so that others may laugh. Some one must suffer, so that others may save. Some one must die, so that others may live.’ (ಯಾರಾದರೂ ಒಬ್ಬರು ಅಳುವುದರಿಂದ ಇತರರನೇಕರು ನಗುವಂತಾಗಲಿ. ಒಬ್ಬರು ಯಾತನೆಯನ್ನು ಅನುಭವಿಸಿ, ಮಿಕ್ಕವರೆಲ್ಲರೂ ಸುರಕ್ಷಿತವಾಗಿರಲಿ. ಯಾರೋ ಒಬ್ಬರು ಸತ್ತು, ಮಿಕ್ಕವರೆಲ್ಲರೂ ಬದುಕಿರಲಿ). ದೇಶದ ಹೊಸಪೀಳಿಗೆಯ ಯುವಕ ಯುವತಿಯರು ದೇಶಭಕ್ತಿಯ ಪವಿತ್ರ ಗಂಗೆಯಲ್ಲಿ ಮೀಯಲು ಮತ್ತು ದೇಶದ ನವನಿರ್ಮಾಣದಲ್ಲಿ ತಮ್ಮ ಪಾತ್ರವನ್ನು ಅರ್ಥಪೂರ್ಣವಾಗಿ ನಿರ್ವಹಿಸಲು ಅಜಿತ್‌ಸಿಂಹ ಅವರ ಈ ಶಬ್ದಗಳು ಪ್ರೇರಣಾದಾಯಿಯಾಗಲಿ ಎಂಬ ಹಾರೈಕೆ ವೀರೇಂದ್ರ ಸಿಂಧು ಅವರದು. ವೀರೇಂದ್ರ ಸಿಂಧು ಅಷ್ಟಕ್ಕೇ ತಮ್ಮ ಹಿನ್ನೋಟವನ್ನು ಮುಗಿಸಿಲ್ಲ. ಮುಂದುವರಿಯುತ್ತಾ, ‘ಆ ಒಬ್ಬರು ನಾವೇ ಆಗೋಣ. ಆ ಅನೇಕರು ನಮ್ಮ ದೇಶವಾಸಿಗಳಾಗಿರಲಿ. ಇದರಲ್ಲಿಯೇ ನಮ್ಮ ಯೌವನದ ಶೋಭೆ ಇದೆ. ಇದರಲ್ಲಿಯೇ ಭಾರತದ ಉಜ್ವಲ ಭವಿಷ್ಯವಿದೆ’ ಎಂದು ನೀಡಿರುವ ಸಂದೇಶವಂತೂ ಅತ್ಯಂತ ಮಾರ್ಮಿಕ. ಭಾರತದ ಸಮಸ್ತ ಜನಕೋಟಿ ಭವಿಷ್ಯದಲ್ಲಿ ಸುರಕ್ಷಿತವಾಗಿರಲೆಂದು ಭಗತ್‌ಸಿಂಗ್‌ನಂತಹ ಕ್ರಾಂತಿಕಾರಿಗಳು ಯಮಯಾತನೆಯನ್ನು ಅನುಭವಿಸಿದರು. ಭಾರತದ ಸಮಸ್ತ ಜನಕೋಟಿ ನೆಮ್ಮದಿಯಿಂದ ಬದುಕಲೆಂದು ಭಗತ್‌ಸಿಂಗ್ ಮತ್ತಿತರ ಹೋರಾಟಗಾರರು ಗಲ್ಲಿಗೇರಿ ಹುತಾತ್ಮರಾದರು.

ಕ್ರಾಂತಿಕಾರಿಗಳ ಬಗ್ಗೆ ಹೇಳಲಾಗುವ ಇಂತಹ ಮಾತುಗಳನ್ನು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡುವ ವೀರ ಸೈನಿಕರ ಬಗ್ಗೆಯೂ ಹೇಳಲಾಗುತ್ತದೆ. ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆಯಿದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೊಂದು ವಾಕ್ಯವಿದೆ : ‘‘ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ – ನಿಮ್ಮ ‘ನಾಳೆ’ಗಳಿಗಾಗಿ ನಾವು ನಮ್ಮ ‘ಈ ದಿನ’ಗಳನ್ನು ತ್ಯಾಗ ಮಾಡಿದ್ದೇವೆ’’. ಈ ಕೆತ್ತನೆ ಈಗ ಮಳೆಗೆ ತೋಯ್ದು ಚಳಿಗಾಳಿಗೆ ತುಯ್ದು ಮಸುಕಾಗಿದೆ. ಬರಹ ಮಸುಕಾದರೇನು? ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ವೀರಗಾಥೆ ಇಂದಿಗೂ ಅಕ್ಷರಶಃ ಈ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅತೀ ಚಿಕ್ಕ ವಯಸ್ಸಿನಲ್ಲೇ ತನ್ನ ಪ್ರಾಣದ ಹವಿಸ್ಸನ್ನರ್ಪಿಸಿದ ಭಗತ್‌ಸಿಂಗ್ ಎಂಬ ಶ್ರೇಷ್ಠ ದೇಶಭಕ್ತನನ್ನು ನೆನಪಿಸಿಕೊಂಡಾಗ ಆತ ತಾಯ್ನಾಡಿಗಾಗಿ ಹೋರಾಡಿದ, ಹೋರಾಡುತ್ತಿರುವ ಯಾವ ಸೈನಿಕನಿಗಿಂತಲೂ ಕಡಿಮೆ ದೇಶಭಕ್ತನಲ್ಲ ಎಂದೆನಿಸುವುದು ಸಹಜ. ಸ್ವತಃ ಭಗತ್‌ಸಿಂಗ್‌ನೇ ಆಗಾಗ ಹೇಳುತ್ತಿದ್ದ ಮಾತೊಂದಿತ್ತು : ‘‘ಪಿಸ್ತೂಲ್ ಔರ್ ಬಮ್ ಕಭೀ ಇನ್‌ಕಲಾಬ್ ನಹೀಂ ಲಾತೇ, ಬಲ್ಕಿ ಇನ್‌ಕಲಾಬ್ ಕೀ ತಲವಾರ್ ವಿಚಾರೋಂ ಕೀ ಸಾನ್ ಪರ್ ತೇಜ್ ಹೋತೀ ಹೈ’’ (ಪಿಸ್ತೂಲು ಮತ್ತು ಬಾಂಬು ಎಂದಿಗೂ ಕ್ರಾಂತಿ ತರುವುದಿಲ್ಲ. ಬದಲಿಗೆ ಕ್ರಾಂತಿಯ ಕತ್ತಿಯು ವಿಚಾರಗಳ ಸಾಣೆ ಕಲ್ಲಿನ ಮೇಲೆ ಹರಿತಗೊಳ್ಳುತ್ತದೆ). ಭಗತ್‌ಸಿಂಗ್ ಹೋರಾಟಕ್ಕೆ ವೈಚಾರಿಕ ಹಿನ್ನೆಲೆಯಿತ್ತು ಎಂಬುದಕ್ಕೆ ಈ ಮಾತಿಗಿಂತ ಬೇರೆ ಸಾಕ್ಷಿ ಬೇಕೆ?

ಭಗತ್‌ಸಿಂಗ್‌ನ ಹಿರಿಯರು ದೇಶಭಕ್ತಿಯ ಸಂಸ್ಕಾರವನ್ನು ತಮ್ಮ ಪೀಳಿಗೆಗೆ ಅತ್ಯುತ್ತಮ ರೀತಿಯಲ್ಲಿ ನೀಡಿದ್ದರು. ಬ್ರಿಟಿಷರನ್ನು ಈ ದೇಶದಿಂದ ಓಡಿಸುವುದಷ್ಟೇ ದೇಶಭಕ್ತಿಯ ಕಾರ್ಯವೆಂದು ಅವರಾರೂ ಭಾವಿಸಿರಲಿಲ್ಲ. ಬ್ರಿಟಿಷರ ಖಜಾನೆ ಲೂಟಿ, ಬ್ರಿಟಿಷ್ ಅಧಿಕಾರಿಗಳ ಹತ್ಯೆ… ಮೊದಲಾದ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಕ್ರಾಂತಿಕಾರರು ನಿರತರಾಗಿದ್ದರೂ ಅವುಗಳ ಹಿಂದಿದ್ದ ಉದ್ದೇಶ ಸ್ವಾರ್ಥದ್ದಾಗಿರಲಿಲ್ಲ ಅಥವಾ ಕೇವಲ ಬ್ರಿಟಿಷರ ರಕ್ತ ಹರಿಸಿ, ಅವರ ಹಣವನ್ನು ಲೂಟಿ ಮಾಡುವುದಾಗಿರಲಿಲ್ಲ. ಭಾರತದ ಸಶಸ್ತ್ರ ಹೋರಾಟವನ್ನು ಅರ್ಥ ಮಾಡಿಕೊಳ್ಳುವಾಗ ಬಹುತೇಕ ಮಂದಿ ಎಡವುತ್ತಿರುವುದೇ ಇಲ್ಲಿ. ಕ್ರಾಂತಿಕಾರಿಗಳು, ನಕ್ಸಲ್‌ವಾದಿಗಳು, ಎಲ್‌ಟಿಟಿಇ ಭಯೋತ್ಪಾದಕರು, ಮುಸ್ಲಿಂ ಉಗ್ರರು… ಹೀಗೆ ಎಲ್ಲರೂ ಒಂದೇ ಎಂದು ತಪ್ಪಾಗಿ ಸಮೀಕರಿಸುವ ಪ್ರಮಾದವೆಸಗುತ್ತಾರೆ. ವಾಸುದೇವ ಬಲವಂತ ಫಡಕೆಯಿಂದ ಹಿಡಿದು ಸುಭಾಷ್‌ಚಂದ್ರ ಬೋಸರವರೆಗಿನ ಕ್ರಾಂತಿಯ ಹೋರಾಟಕ್ಕೆ ವಿಶಾಲವಾದ ಮಾನವಪರ ಕಾಳಜಿ ಇದೆ. ಹಿಂಸೆ ಅಲ್ಲಿದ್ದರೂ ಅದು ತೀರಾ ನಿರ್ದಿಷ್ಟ ಹಾಗೂ ಸೀಮಿತವಾದದ್ದು. ಎಲ್‌ಟಿಟಿಇ, ನಕ್ಸಲ್‌ವಾದಿ, ಜಿಹಾದ್ ಉಗ್ರರ ಹಿಂಸೆಗೆ ಸ್ಪಷ್ಟ ರೂಪವೇ ಇಲ್ಲ. ಅದು ನಿರಂತರ ತೀರದ ರಕ್ತದಾಹದ ಕತೆ. ಅದಕ್ಕೊಂದು ಅಂತ್ಯವೂ ಇಲ್ಲ. ರಕ್ತದಾಹ ಹೆಚ್ಚಾಗುವ ವಿದ್ಯಮಾನವೇ ಅಲ್ಲಿ ಎದ್ದು ಕಾಣುತ್ತದೆ.

ಆದರೆ ಸ್ವಾತಂತ್ರ್ಯ ಹೋರಾಟ ಕಾಲದ ಹಿಂಸೆಗೆ ಭಾರತದ ಪರಂಪರೆ, ಧಾರ್ಮಿಕತೆ, ಚರಿತ್ರೆ ಇವುಗಳ ಬಗ್ಗೆ ಗುಣಾತ್ಮಕ ಕಾಳಜಿ ಇದೆ. ಭಗತ್‌ಸಿಂಗ್ ಉಗ್ರ ಕ್ರಾಂತಿಕಾರಿಯಾಗಿದ್ದರೂ ಆತ ಗುಣಾತ್ಮಕ ಅಂಶವುಳ್ಳ ಕ್ರಾಂತಿಕಾರಿ ಅಧ್ಯಯನಕ್ಕೆ ವಿಶೇಷ ಗಮನ ಹರಿಸಿದ್ದಾನೆ. ವೀರ ಸಾವರ್ಕರರ ‘1857’ ಗ್ರಂಥವನ್ನು ಆತ ಮರುಮುದ್ರಿಸಿದ್ದು ಅದೇ ಕಾರಣಕ್ಕಾಗಿ. ಮುಂದೆ ಸುಭಾಷ್‌ಚಂದ್ರ ಬೋಸರ ಆಜಾದ್ ಹಿಂದ್ ಸೈನ್ಯ ಕೂಡ ಈ ಗ್ರಂಥವನ್ನು ಮತ್ತೆ ಮರುಮುದ್ರಿಸುತ್ತದೆ. ಭಾರತೀಯ ಕ್ರಾಂತಿಕಾರಿಗಳ ಹೋರಾಟದ ಹಿಂದೆ ಭಾರತದ ಸಂಸ್ಕೃತಿ, ಪರಂಪರೆ, ಅಸ್ಮಿತೆಗಳ ಬಗೆಗಿನ ಶ್ರದ್ಧೆ ಎದ್ದು ಕಾಣುತ್ತದೆ. ಅದೇ ನಕ್ಸಲ್ ಆಂದೋಲನ ಚೀನಾ ಮೂಲದ ವೈಚಾರಿಕತೆ, ಮಾವೋ ವಿಚಾರವಾದವನ್ನು ನೆಚ್ಚಿಕೊಂಡಿದ್ದು. ಕ್ರಾಂತಿಕಾರಿ ಆಂದೋಲನವು ಫಡಕೆ, ಚಾಪೇಕರ ಬಂಧುಗಳು, ಸಾವರ್ಕರ್ ಬಂಧುಗಳು, ಅಜಿತ್‌ಸಿಂಹ, ನಾನಿ ಬಾಲಾದೇವಿ, ರಾಂಪ್ರಸಾದ ಬಿಸ್ಮಿಲ್, ಜತೀಂದ್ರನಾಥ ಮುಖರ್ಜಿ, ಚಂದ್ರಶೇಖರ ಆಜಾದ್, ಭಗತ್‌ಸಿಂಗ್ ಮುಂತಾದವರನ್ನು ಸೃಷ್ಟಿಸಿತು. ಆದರೆ ನಕ್ಸಲ್, ಎಲ್‌ಟಿಟಿಇ, ಜಿಹಾದ್ ಆಂದೋಳನ ಇಂತಹ ಎಲ್ಲರಿಗೂ ಒಪ್ಪಿತವಾಗುವ ಕ್ರಾಂತಿಕಾರಿಗಳನ್ನು ಸೃಷ್ಟಿಸಲಿಲ್ಲ. ವಸಾಹತುಶಾಹಿಗಳ ಕೈಗೊಂಬೆಗಳಾಗಿ, ಅಮಾಯಕರ ಕೊಲೆ, ಆಸ್ತಿಪಾಸ್ತಿ ಲೂಟಿ, ಅನೈತಿಕ ಹಾದರಗಳನ್ನೇ ತಮ್ಮ ಬಹುದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುವ ಉಗ್ರರು ತಯಾರಾದರು. ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿಗಳೇ ಬೇರೆ. ಈಗಿನ ನಕ್ಸಲ್, ಎಲ್‌ಟಿಟಿಇ, ಜಿಹಾದಿ ಉಗ್ರರೇ ಬೇರೆ. ಅದಕ್ಕೂ ಇದಕ್ಕೂ ತಾಳೆ ಹಾಕುವುದು ಖಂಡಿತ ಸಲ್ಲದು. ಹಾಗೆ ಹಠಕ್ಕೆ ಬಿದ್ದು ತಾಳೆ ಹಾಕಲು ಹೊರಟಿರುವವರಿಗೆ ಇತಿಹಾಸದ ಪರಿಜ್ಞಾನ ಇಲ್ಲವೆಂದೇ ಹೇಳಬೇಕಾಗುತ್ತದೆ.

ಭಗತ್‌ಸಿಂಗ್‌ನನ್ನು ಕಮ್ಯುನಿಸ್ಟರು ಆತ ಎಡಪಂಥೀಯನಾಗಿದ್ದನೆಂದು ಸಾಬೀತುಪಡಿಸಲು ಇನ್ನಿಲ್ಲದಂತೆ ಪ್ರಯತ್ನಿಸಿದರೆ ಆತನನ್ನು ಕೇಸರೀಕರಣಗೊಳಿಸಲು ಬಲಪಂಥೀಯರು ಮುಂದಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ ಸಂಗತಿ. ಯೌವನವೆಂಬುದು ಹೊಸಹೊಸ ವಿಚಾರಗಳಿಗೆ ಮನಸ್ಸನ್ನು ತೆರೆದಿಡುವ ಕಾಲ. ಆಗ ದೊರೆಯುವ ಹೊಸ ವಿಚಾರಗಳಿಂದ ಪ್ರಭಾವಿತರಾಗುವವರೆಷ್ಟೋ. ಭಗತ್‌ಸಿಂಗ್ ಹಾಗೂ ಆಗಿನ ಕಾಲದ ಅವನ ಸಮವಯಸ್ಕರು ಸಮಾಜವಾದ ಹಾಗೂ ಸಾಮ್ಯವಾದಗಳ ಕಡೆಗೆ ಆಕರ್ಷಿತರಾಗಿದ್ದು ಸಹಜವೆ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ನ್ಯಾಯದ ಸಂದೇಶ ಯಾವ ಚಿಂತನಶೀಲ ಯುವಕನಿಗೆ ತಾನೆ ರುಚಿಸುವುದಿಲ್ಲ? ಭಾರತ ಸ್ವಾತಂತ್ರ್ಯ ಹೋರಾಟದ ಬಿಸಿ ಹಾಗೂ ರಷ್ಯಾದ ಅಕ್ಟೋಬರ್ ಕ್ರಾಂತಿಯ ಹೊಸ ಗಾಳಿಯಿಂದಾಗಿ ಭಗತ್‌ಸಿಂಗ್‌ನಂತಹ ಸಾಮಾಜಿಕ ಕಳಕಳಿಯ ಬುದ್ಧಿವಂತ ತರುಣ ಪ್ರಭಾವಿತನಾಗಿದ್ದರಲ್ಲಿ ಏನೂ ವಿಶೇಷವಿಲ್ಲ. ಲೆನಿನ್, ಕಾರ್ಲ್ ಮಾರ್ಕ್ಸ್‌ರನ್ನು ಅಧ್ಯಯನ ಮಾಡಿದಷ್ಟೇ ಗಂಭೀರವಾಗಿ ಆತ ಸ್ವಾಮಿ ದಯಾನಂದ ಸರಸ್ವತಿ, ಸಾವರ್ಕರ್, ಶಿವಾಜಿ, ಲಾಲಾ ಹರದಯಾಳ್, ಶ್ಯಾಮಜೀ ಕೃಷ್ಣ ವರ್ಮರಂತಹ ಹಿಂದುತ್ವ ಆಧಾರಿತ ನಾಯಕರನ್ನೂ ಗೌರವದಿಂದ ಕಾಣುತ್ತಿದ್ದ ಎಂಬುದನ್ನು ನಾವು ಗಮನಿಸಬೇಕು. ಆತ ಗಲ್ಲಿಗೆ ಹೋಗಬೇಕಾದ ಕೊನೆಯ ಕ್ಷಣದವರೆಗೂ ಲೆನಿನ್ನನ ಜೀವನ ಚರಿತ್ರೆಯ ಹೊಸ ಪುಸ್ತಕವನ್ನು ಓದುತ್ತಿದ್ದುದು ಎಷ್ಟು ನಿಜವೋ, ಸಾವರ್ಕರರ ‘ದಿ ಫಸ್ಟ್ ವಾರ್ ಆಫ್ ಇಂಡಿಯನ್ ಇಂಡಿಪೆಂಡೆನ್ಸ್’ ಎಂಬ ಗ್ರಂಥವನ್ನು ಮುದ್ರಿಸಿ, ಪ್ರಕಟಿಸಿದ್ದೂ ಕೂಡ ಅಷ್ಟೇ ನಿಜ. ಅವನು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಆಗಿರಲಿಲ್ಲ. ಆದರೆ ಅವನೊಬ್ಬ ಶ್ರೇಷ್ಠ, ಪರಿಶುದ್ಧ ದೇಶಭಕ್ತ. ದೇಶಭಕ್ತಿಯ ಪ್ರದರ್ಶನಕ್ಕೆ ಎಡ, ಬಲದ ಹಂಗೇಕೆ? ದೇಶಭಕ್ತಿ ಎಂಬುದು ಎಲ್ಲ ಇಸಂಗಳಿಗಿಂತಲೂ ಮೀರಿದ ಶ್ರೇಷ್ಠ ಅನುಭೂತಿ. ತಾನು ಹುಟ್ಟಿದ ತಾಯ್ನಿಡಿಗೆ ಬದ್ಧನಾಗಿರುವುದು ಒಬ್ಬ ಪ್ರಜೆಯಿಂದ ದೇಶ ನಿರೀಕ್ಷಿಸುವ ಕನಿಷ್ಠ ಋಣ. ಭಗತ್‌ಸಿಂಗ್ ಆ ಋಣವನ್ನು ಚಕ್ರಬಡ್ಡಿ ಸಹಿತ ತೀರಿಸಿದ ಮಹನೀಯ! ಭಗತ್‌ಸಿಂಗ್ ಆರ್ಯ ಸಮಾಜದ ನಿಷ್ಠಾವಂತ ಅನುಯಾಯಿ ಆಗಿದ್ದಂತೆಯೇ ಜೈಲಿನಲ್ಲಿ ಕೊನೆಯ ದಿನಗಳಲ್ಲಿ ಶ್ರದ್ಧಾವಂತ ಸಿಖ್‌ನಂತೆ ಮತದ ಸಂಪ್ರದಾಯಕ್ಕೆ ಅನುಗುಣವಾಗಿ ಕೇಶವನ್ನೂ ಬಿಟ್ಟಿದ್ದ. ವಿವೇಕಾನಂದರು ಎಲ್ಲ ದೇವರುಗಳನ್ನು ಸ್ವಲ್ಪ ಕಾಲ ಮೂಟೆ ಕಟ್ಟಿ ಆಚೆಗೆಸೆದು, ಭಾರತ ಮಾತೆಯನ್ನು ದೇವರಾಗಿ ಪೂಜಿಸಿ ಎಂದಂತೆ, ಭಗತ್‌ಸಿಂಗ್ ಕೂಡ ಕೆಲವು ಕಾಲ ನಾಸ್ತಿಕನಾಗಿ, ಆದರೆ ಭಾರತ ಮಾತೆಯ ಪರಮಭಕ್ತನಾಗಿದ್ದುದು ಅವನ ಈ ಜೀವನ ಚರಿತ್ರೆ ಓದಿದಾಗ ವೇದ್ಯವಾಗುತ್ತದೆ. ಹಾಗಾಗಿ ಭಗತ್‌ಸಿಂಗ್‌ನನ್ನು ಯಾವುದೋ ಒಂದು ಇಸಂಗೋ, ಪಂಥಕ್ಕೋ ಬಿಗಿಯದೆ ಅವನೊಬ್ಬ ಭಾರತ ಮಾತೆಯ ಅನರ್ಘ್ಯ ಪುತ್ರರತ್ನ, ಸ್ವಾತಂತ್ರ್ಯ ಯಜ್ಞದಲ್ಲಿ ಹವಿಸ್ಸಿನಂತೆ ತನ್ನನ್ನು ಅರ್ಪಿಸಿಕೊಂಡ ವೀರ ಹುತಾತ್ಮ, ಭಾರತ ಮಾತೆಯನ್ನು ತನ್ನ ಹೃದಯಪುಷ್ಟದಿಂದ ಅರ್ಚಿಸಿದ ಮಹಾನ್‌ಚೇತನ ಎಂದಷ್ಟೇ ಗುರುತಿಸುವುದು ಅವನಿಗೆ ನಾವು ಸಲ್ಲಿಸಬಹುದಾದ ನೈಜ ಗೌರವಾರ್ಪಣೆ ಹಾಗೂ ನ್ಯಾಯವೆನಿಸುತ್ತದೆ.

***

ಭಗತ್‌ಸಿಂಗ್ ಲಾಹೋರಿನ ನ್ಯಾಶನಲ್ ಕಾಲೇಜ್‌ನಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ನಡೆದ ಘಟನೆ. ಆತನಿಗೆ ಮದುವೆ ಮಾಡಿಸಬೇಕೆಂಬ ಹಂಬಲ ಕುಟುಂಬದವರದ್ದು. ಒಂದು ದಿನ ಭಾರೀ ಸಾಹುಕಾರನೊಬ್ಬ ತನ್ನ ತಂಗಿಗಾಗಿ ಭಗತ್‌ಸಿಂಗ್‌ನನ್ನು ನೋಡಲು ಬಂದ. ನಿಶ್ಚಿತಾರ್ಥ ದಿನವೂ ನಿರ್ಧಾರವಾಯಿತು. ಆದರೆ ಭಗತ್‌ಸಿಂಗ್ ಮನದಲ್ಲಿ ತಳಮಳ. ಮದುವೆಯ ಸಂಕೋಲೆಗೆ ಸಿಕ್ಕಿಬಿದ್ದರೆ ತನ್ನ ಕ್ರಾಂತಿಕಾರಿ ಚಟುವಟಿಕೆಗಳ ಪಾಡೇನು? ಆ ಕ್ಷಣದಲ್ಲಿ ಆತ ತನ್ನ ಮುಂದಿನ ಭವಿಷ್ಯವನ್ನು ನಿರ್ಧರಿಸಿಬಿಟ್ಟಿದ್ದ. ಮನೆ ಬಿಟ್ಟು ಲಾಹೋರಿಗೆ ಹೋದ. ಅಲ್ಲಿಂದ ಎಲ್ಲಿಗೆ ಹೋದನೋ ಯಾರಿಗೂ ಗೊತ್ತಾಗಲಿಲ್ಲ. ಆದರೆ ತಂದೆಗೆ ಆತ ಮೇಜಿನ ಮೇಲೆ ಬರೆದಿಟ್ಟಿದ್ದ ಕಾಗದ ಸಿಕ್ಕಿತು. ಅದರಲ್ಲಿದ್ದ ಒಕ್ಕಣೆ ಹೀಗಿತ್ತು : ‘‘… ನನ್ನ ಜೀವನವನ್ನು ಭಾರತ ಸ್ವಾತಂತ್ರ್ಯ ಸಾಧನೆಯ ಕಾರ್ಯಕ್ಕಾಗಿ ಮುಡುಪಿಡಲು ಪಣತೊಟ್ಟಿದ್ದೇನೆ. ಆದ್ದರಿಂದ ನನ್ನ ಜೀವನದಲ್ಲಿ ವಿಶ್ರಾಂತಿಯಾಗಲಿ, ಸಾಮಾನ್ಯ ಲೌಕಿಕ ರೀತಿಯ ಸುಖ-ಸಂತೋಷಗಳಾಗಲಿ ಇರುವುದಿಲ್ಲ. ಅಂತಹ ಮುಳ್ಳಿನ ಹಾದಿ ಆಯ್ದುಕೊಂಡಿದ್ದೇನೆ. ನಾನು ಚಿಕ್ಕವನಾಗಿದ್ದಾಗ ಉಪನಯನ ಸಂಸ್ಕಾರದ ಸಮಯದಲ್ಲಿ ನೀವು ನನ್ನನ್ನು ದೇಶಸೇವಾ ಕಾರ್ಯಕ್ಕಾಗಿ ಸಮರ್ಪಿಸಿರುವುದಾಗಿ ಹೇಳಿದ್ದಿರಿ. ಈಗ ನಿಮ್ಮ ಆ ಪ್ರತಿಜ್ಞೆಯನ್ನು ಈಡೇರಿಸಲು ಹೊರಡುತ್ತಿರುವೆ…’’ ಭಗತ್‌ಸಿಂಗ್ ಅಕಸ್ಮಾತ್ ಮದುವೆಯಾಗಿದ್ದರೆ, ಎಲ್ಲರಂತೆ ಬದುಕಿದ್ದರೆ ಆತನನ್ನು ಯಾರೂ ಸ್ಮರಿಸುವ ಪ್ರಮೇಯವೇ ಬರುತ್ತಿರಲಿಲ್ಲ.

***

1931 ಮಾರ್ಚ್ 23. ಭಗತ್‌ಸಿಂಗ್‌ಗೆ ಆಗ ಕೇವಲ 23 ವರ್ಷ, 5 ತಿಂಗಳು ಮತ್ತು 26 ದಿನಗಳು. ಆ ದಿನ ಲಾಹೋರಿನ ಸೆಂಟ್ರಲ್ ಜೈಲಿನಲ್ಲಿ ಆತನಿಗೆ ಸುಖದೇವ್ ಮತ್ತು ರಾಜ್‌ಗುರು ಜೊತೆಗೆ ಗಲ್ಲಿನ ಶಿಕ್ಷೆ. ಶಿಕ್ಷೆಗೆ ಸಿದ್ಧರಾಗುವಂತೆ ಜೈಲಿನ ಅಧಿಕಾರಿಯ ಅಪ್ಪಣೆ. ಭಗತ್‌ಸಿಂಗ್ ಮುಖದಲ್ಲಿ ಸಂತೋಷ ವಿಜೃಂಭಿಸುತ್ತಿತ್ತು. ಆತ ತನ್ನ ಎಡಗೈಯನ್ನು ರಾಜ್‌ಗುರು ಹಾಗೂ ಬಲಗೈಯನ್ನು ಸುಖದೇವನ ಭುಜದ ಮೇಲೆ ಹಾಕಿದ. ಒಂದು ಕ್ಷಣ ಮೂವರೂ ನಿಂತು ಹೇಳಿದ್ದು ಈ ಹಾಡನ್ನು : ‘‘ದಿಲ್ ಸೆ ನಿಕಲೇಗೀ ನ ಮರ್‌ಕರ್ ಭೀ ವತನ್ ಕೀ ಉಲ್‌ಫತ್  ಮೇರೀ ಮಿಟ್ಟೀಸೇ ಭೀ ಖುಷ್‌ಬೂ-ಏ-ವತನ್ ಆಯೆಗೀ (ನನ್ನ ಸಾವಿನ ನಂತರವೂ ನನ್ನ ಹೃದಯವು ನನ್ನ ತಾಯ್ನಡಿನ ಪರಿಮಳವನ್ನೇ ಹೊರಸೂಸುತ್ತದೆ. ನನ್ನ ಮಣ್ಣಿನಿಂದ ಈ ತಾಯ್ನಿಡಿನ ಸುವಾಸನೆಯೇ ಹೊರಹೊಮ್ಮುವುದು). ಇಷ್ಟೊಂದು ಧೈರ್ಯದಿಂದ ನೇಣಿನ ಕುಣಿಕೆಯತ್ತ ಸಾಗುತ್ತಿದ್ದ ಈ ಮೂವರು ಧೀರರನ್ನು ನೋಡಿ ಲಾಹೋರಿನ ಬ್ರಿಟಿಷ್ ಡೆಪ್ಯುಟಿ ಕಮಿಷನರ್ ವಿಚಲಿತಗೊಂಡಿದ್ದನಂತೆ. ಅವನಿಗೆ ಭಗತ್‌ಸಿಂಗ್ ‘ವೆಲ್ ಮಿಸ್ಟರ್ ಮ್ಯಾಜಿಸ್ಟ್ರೇಟ್. ಯು ಆರ್ ಫಾರ್ಚುನೇಟ್ ಟು ಬಿ ಹಿಯರ್ ಟುಡೇ ಟು ಸೀ ಹೌ ಇಂಡಿಯನ್ ರೆವೊಲ್ಯೂಷನರೀಸ್ ಕ್ಯಾನ್ ಎಂಬ್ರೇಸ್ ಡೆತ್ ವಿತ್ ಪ್ಲೆಶರ್ ಫಾರ್ ದಿ ಸೇಕ್ ಆಫ್ ದೇರ್ ಸುಪ್ರೀಂ ಐಡಿಯಲ್’ ಎಂದು ಭರವಸೆ ತುಂಬಿದ್ದ ! ಆ ಡೆಪ್ಯುಟಿ ಕಮಿಷನರ್ ಭಗತ್‌ಸಿಂಗ್‌ನ ಸ್ವರ, ಶಬ್ದ, ಆ ಸ್ವರೂಪಗಳನ್ನು ನೋಡಿ ಕರಗಿ ಕುಗ್ಗಿ ಹೋಗಿದ್ದ.

ಭಗತ್‌ಸಿಂಗ್, ರಾಜ್‌ಗುರು ಹಾಗೂ ಸುಖದೇವ್ ಅವರ ಪಾರ್ಥಿವ ಶರೀರಗಳನ್ನು ರಹಸ್ಯ ಜಾಗವೊಂದರಲ್ಲಿ ಸುಟ್ಟು, ಅದು ಜನರಿಗೆ ಗೊತ್ತಾಗುತ್ತಿದ್ದಂತೆ ಅರೆಸುಟ್ಟ ಆ ದೇಹಗಳನ್ನು ಹತ್ತಿರದ ಶತದ್ರು ನದಿಗೆ ಬ್ರಿಟಿಷರು ಎಸೆದಿದ್ದು ಭಗತ್‌ಸಿಂಗ್ ಬಗ್ಗೆ ಅವರಿಗಿದ್ದ ವಿಪರೀತ ಭಯಕ್ಕೆ ನಿದರ್ಶನ. ಆ ನದಿಯನ್ನು ನೋಡಿದಾಗಲೆಲ್ಲ ನನಗೆ ಅದು ಮಲಿನವಾಗಿಯೇ ಇದೆ ಎನಿಸುತ್ತದೆ ಎಂದು ಲೇಖಕಿ ವೀರೇಂದ್ರ ಸಿಂಧು ಯಾತನೆಯಿಂದ ಹೇಳಿದ್ದಾರೆ. ದೇಶಕ್ಕಾಗಿ ಹುತಾತ್ಮನಾದ ದೊಡ್ಡಪ್ಪನ ಬಗ್ಗೆ ಬರೆಯುವಾಗ ಆಕೆ ಅದೆಷ್ಟು ಬಾರಿ ಅತ್ತಿದ್ದಳೋ, ಭಾವೋತ್ಕಟತೆಯಿಂದ ಬರೆಯಲಾಗದೆ ಪೆನ್ನು ಕೆಳಗಿಟ್ಟಿದ್ದಳೋ ಯಾರಿಗೆ ಗೊತ್ತು! ಆದರೂ ಬೇರೆ ಯಾರಿಗೂ ಸಾಧ್ಯವಾಗದಂತಹ, ಅಮೂಲ್ಯ ಮಾಹಿತಿಗಳನ್ನು ಕಲೆಹಾಕಿ ವೀರೇಂದ್ರ ಸಿಂಧು ಬರೆದಿರುವ ‘ಯುಗದ್ರಷ್ಟಾ ಭಗತ್ ಸಿಂಗ್’ ಗ್ರಂಥ ನಿಜಕ್ಕೂ ರೋಮಾಂಚಕಾರಿ. ಅಷ್ಟೇ ಸಮರ್ಥವಾಗಿ ಕನ್ನಡದಲ್ಲಿ ಪ್ರಕಟವಾಗಿರುವ ಈ ಕೃತಿಯನ್ನು ತಪ್ಪದೇ ಓದ ಬೇಕಾಗಿರುವುದು ಯುವಪೀಳಿಗೆಯ ಕರ್ತವ್ಯ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ನೆಹರು, ಗಾಂಧಿ, ಪಟೇಲ್ ಎಂದು ಉರು ಹೊಡೆಯುವ ನಮ್ಮ ಶಾಲಾ ಮಕ್ಕಳಿಗೆ ಭಗತ್‌ಸಿಂಗ್ ಎಂಬ ಶ್ರೇಷ್ಠ ದೇಶಭಕ್ತನ ಪರಿಚಯವನ್ನೇ ಮಾಡಿಸದೆ ನಾವೆಂತಹ ದ್ರೋಹ ಮಾಡಿದ್ದೇವೆ ! ಹುತಾತ್ಮ ಭಗತ್‌ಸಿಂಗ್‌ನ ತಮ್ಮ ಕುಲ್‌ತಾರ್ ಸಿಂಹರ ಪುತ್ರಿ ಡಾ.ವೀರೇಂದ್ರ ಸಿಂಧು ಬರೆದಿರುವ ‘ಯುಗದ್ರಷ್ಟಾ ಭಗತ್‌ಸಿಂಗ್…’ ಹೃದಯ ಮಿಡಿಯುವ ಸತ್ಯನಿಷ್ಠ ಕೃತಿ. ಇದೀಗ ಕನ್ನಡಕ್ಕೆ ಈ ಕೃತಿಯನ್ನು ಅನುವಾದಿಸಿರುವ ಬಾಬುಕೃಷ್ಣಮೂರ್ತಿಯವರ ಪ್ರಯತ್ನ ಶ್ಲಾಘನೀಯ.

Leave a Reply

Your email address will not be published.

This site uses Akismet to reduce spam. Learn how your comment data is processed.